ಒಳ ಮೀಸಲಾತಿಯ ಒಳ ಸಂಕಟ

ಈ ಸ್ಪರ್ಧಾ ಯುಗದಲ್ಲಿ ಪರಿಶಿಷ್ಟರು ತಮ್ಮ ಮಕ್ಕಳನ್ನು  ಸ್ಪರ್ಧೆಗೆ ಸಿದ್ಧಗೊಳಿಸಬೇಕು.

ಒಳ ಮೀಸಲಾತಿಯ ಒಳ ಸಂಕಟ

ಹೊಸದಾಗಿ ಮೀಸಲಾತಿಗೆ ಹೋರಾಡುತ್ತಿಲ್ಲ. ಈಗಲೂ ಮೀಸಲಾತಿ ಇದೆ. ಆದರೆ ತನಗೆ ಸಿಗಬೇಕಾದ ಪಾಲು ಸಿಕ್ಕಿಲ್ಲ ಎನ್ನುವ ಅಳಲು, ಆಕ್ರೋಶ. ತನಗೆ ಸಿಗಬೇಕಾದ ಪಾಲನ್ನು ತನ್ನ ಸಹೋದರರೇ “ಕಬಳಿಸುತ್ತಿದ್ದಾರೆ,ನುಂಗಿದ್ದಾರೆ”ಎನ್ನುವ ಸಿಟ್ಟು. ದ್ವೇಷ. ಇದು ಕಳೆದ ಎರಡು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಎಡಗೈ (ಮಾದಿಗ ಸಂಬಂಧಿತ ಜಾತಿಗಳು) ಯುವಜನರು ನಡೆಸುತ್ತಿರುವ ಹೋರಾಟ. ಇವರ ಹೋರಾಟಕ್ಕೆ ಮಣಿದ 2004ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾಯಮೂರ್ತಿ ಎನ್. ವೈ. ಹನುಮಂತಪ್ಪ ನೇತೃತ್ವದ ಆಯೋಗ ರಚಿಸುತ್ತಾರೆ. ಆದರೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.

ಇವರ ಜಾಗಕ್ಕೆ ನ್ಯಾಯಮೂತಿ ಎಸ್.ಜೆ. ಬಾಲಕೃಷ್ಣ ಅವರ ನೇಮಕವಾಗುತ್ತದೆ. ಆದರೆ ಅವರು ಆಯೋಗಕ್ಕೆ ನೇಮಕವಾಗಿ ಕೆಲಸ ಶುರು ಮಾಡಬೇಕೆನ್ನುವಷ್ಟರಲ್ಲಿ ಕಾಲವಶರಾಗುತ್ತಾರೆ. ಯಾಕೊ ಏನೋ ಈ ಸಮಸ್ಯೆಗೆ ಪರಿಹಾರ ನೀಡುವ ಆಯೋಗಕ್ಕೆ ಬಾಲಗ್ರಹ ಬಡಿಯುತ್ತದೆ. ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ನೇತೃತ್ವದ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚಿಸುತ್ತದೆ.

ಆಯೋಗ ರಚನೆಯಾದರೂ ಮೊದಲ ಮೂರ್ನಾಲ್ಕು ವರ್ಷ ಸರ್ಕಾರ ಅವಶ್ಯವಾದ ಸಿಬ್ಬಂದಿ ಮತ್ತು ಹಣವನ್ನು. ಅಂತು ಕೊನೆಗೂ ನ್ಯಾಯಮೂರ್ತಿ ಸದಾಶಿವ ಆಯೋಗ 2012ರ ಜೂನ್ 15ರಂದು ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ವರದಿಯನ್ನು ಸಲ್ಲಿಸುತ್ತಾರೆ.

ಈ ವರದಿ ಸರ್ಕಾರದ ಕೈ ಸೇರಿ ಏಳು ವರ್ಷಗಳಾಯಿತು. ಈ ವರದಿಯನ್ನು ಸರ್ಕಾರ ಬಹಿರಂಗಪಡಿಸುವುದಾಗಲಿ, ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಕೆಲಸಕ್ಕೆ ಕೈ ಹಾಕಿಲ್ಲ.

ಮೀಸಲಾತಿ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಗೆ ಬಂದು ನೂರು ವರ್ಷ ಆಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳಿಗೆ ಜಾರಿಗೆ ತಂದ ಮೀಸಲಾತಿಯ ನೂರು ವರ್ಷಗಳ ನೆನಪಿಗೆ ಮೈಸೂರು ವಿಶ್ವ ವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಕಳೆದ ವಾರ ಎರಡು ದಿನಗಳ ವಿಚಾರ ಸಂಕಿರಣ ನಡೆಸಿತು.

ಕಳೆದ ಶುಕ್ರವಾರ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಚಾಮರಾಜನಗರ ಕ್ಷೇತ್ರದ ಲೋಕಸಭೆ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, “ ಒಳಮೀಸಲಾತಿಗೆ ಸದ್ಯ ಸಂವಿಧಾನದಲ್ಲಿ ಅವಕಾಶವಿಲ್ಲ” ಎಂದು ನುಡಿದದ್ದೇ ಈಗ ಮತ್ತೆ ಒಳ ಮೀಸಲಾತಿಗೆ ಹೋರಾಡುತ್ತಿರುವವರ ಹೊಟ್ಟೆಗೆ ಕಿಚ್ಚು ಹಚ್ಚಿದಂತಾಗಿದೆ.

ಮರುದಿನ ನಡೆದ “ಒಳ ಮೀಸಲಾತಿ” ಗೋಷ್ಠಿಯಲ್ಲಿ ನ್ಯಾಯಮೂರ್ತಿ ಸದಾಶಿವ ಆವರೇ ಆಗಮಿಸಿದ್ದರು. “ ತಾವು ಕಷ್ಟಪಟ್ಟು ಬರೆದು ಸಲ್ಲಿಸಿದ ವರದಿಯನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಬಹಿರಂಗಪಡಿಸಿ. ವರದಿಯನ್ನು ಒಪ್ಪಿಕೊಳ್ಳಿ. ಇಲ್ಲ ತಿರಸ್ಕರಿಸಿ. ನಿಮಗೆ ಒಪ್ಪಿಗೆ ಆಗದಿದ್ದಲ್ಲಿ ಅದನ್ನು ಸುಟ್ಟು ಬಿಡಿ ಎಂದು ಸರ್ಕಾರಕ್ಕೆ ನೇರವಾಗಿಯೇ ಎಚ್ಚರಿಕೆ ನೀಡಿದರು. ಒಳಮೀಸಲಾತಿಗೆ ಹೋರಾಡುತ್ತಿರುವವರು ಒಗ್ಗಟ್ಟಾಗಿ ಪ್ರತಿಭಟನೆ ಮಾಡದಿದ್ದರೆ ವರದಿಯನ್ನು ಸರ್ಕಾರ ಒಪ್ಪುವುದಿಲ್ಲ” ಎಂದು ನೊಂದು ನುಡಿದರು.

ಈ ಸಮ್ಮೇಳನದಲ್ಲಿ ಸುಮಾರು ಇಪ್ಪತ್ತು ಮಂದಿ ಮಾತನಾಡಿದರು. ಅದರಲ್ಲಿ ಲಂಬಾಣಿಗೆ ಸೇರಿದವರೊಬ್ಬರು “ ಈ ವರದಿ ಸಂವಿಧಾನ ವಿರೋಧಿ. ಇಂತಹ ವರದಿಗೆ ಈಗಿನ ಕಾಯ್ದೆಯಲ್ಲಿ ಅವಕಾಶವೇ ಇಲ್ಲ” ಎಂದರು. ಈ ಒಂದು ಭಿನ್ನಾಭಿಪ್ರಾಯ ವ್ಯಕ್ತವಾದದ್ದನ್ನು ಬಿಟ್ಟರೆ ಬೇರೆಯವರಾರೂ ವರದಿಯನ್ನು ವಿರೋಧ ಮಾಡಲಿಲ್ಲ.

ಆದರೆ ಒಳಮೀಸಲಾತಿಯನ್ನು ಬಲವಾಗಿ ಸಮರ್ಥಿಸಿದ ಕೆ.ಬಿ. ಸಿದ್ದಯ್ಯ, ಕರಡಿ ಮತ್ತು ನರಿ ಕಥೆ ಹೇಳಿ ಪರೋಕ್ಷವಾಗಿ” ಬಲಗೈ ಪಂಗಡವು ಮೀಸಲಾತಿಯ ಪೂರ್ಣ ಫಲ ಪಡೆಯುತ್ತಿದೆ ಎಂದರು. ಒಂದು ವೇಳೆ ಒಳಮೀಸಲಾತಿ ಜಾರಿಗೆ ಬರದಿದ್ದರೆ ಸಂವಿಧಾನವೇ ಬದಲಾಗಲಿ” ಎಂದು. ಸಂವಿಧಾನ ಬದಲಾವಣೆಯ ಈ ಮಾತನ್ನು ಆಡಿದ್ದು ಸಭಾಂಗಣದಲ್ಲಿ ತುಂಬಿ ತುಳುಕಿದ್ದ ಯುವಕರನ್ನು ಸಿಟ್ಟಿಗೆಬ್ಬಿಸಿತು. ಈ ಯುವಕರ ದಂಡು ಸಿದ್ದಯ್ಯ ತಮ್ಮ ಈ ಮಾತಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿತು. ತಮ್ಮ ಈ ಮಾತು ಅನಂತಕುಮಾರ್ ಹೆಗ್ಡೆಯವರ ದನಿಯದಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದರು. ಪಟ್ಟು ಬಿಡದ ಯುವಕರ ಮಾತಿಗೆ ಅವರು ಕೊನೆಗೆ ಕ್ಷಮೆಯಾಚಿಸಿ ಸಂವಿಧಾನಕ್ಕೆ ತಿದ್ದುಪಡಿ ಆಗಲಿ ಎಂದಾಗ ಸಭೆ ತಣ್ಣಗಾಯಿತು.

ಈ ಸಭೆಯಲ್ಲಿ ನ್ಯಾಯಮೂರ್ತಿಗಳನ್ನು ಆಗ್ರಹಪಡಿಸಿದ ವಿಷಯ ಎಂದರೆ “ ವರದಿ ತಯಾರಿಕೆಗಾಗಿ ಮನೆ ಮನೆ ಮತ್ತು ತಲೆ ಎಣಿಕೆ ಸಮೀಕ್ಷೆ ನಡೆದಿದೆಯಾ” ಎಂಬ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ಸದಾಶಿವ ಅವರು ತಮ್ಮ ಆಯೋಗ ಮನೆ ಮನೆ ಸಮೀಕ್ಷೆ ನಡೆಸಿಲ್ಲ. ಅಂಕಿ ಅಂಶ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ಶೇಕಡಾವಾರು ಒಳ ಮೀಸಲಾತಿಯನ್ನು ಗೊತ್ತುಪಡಿಸಲಾಗಿದೆ ಎಂದು ಉತ್ತರಿಸಿದರು.

ಆಗ ಹಲವು ಯುವಕರು ನಿಮ್ಮ ವರದಿ “ಅವೈಜ್ಞಾನಿಕ” ಎಂದು ಕೂಗಾಡಿದರು. ಈ ಗದ್ದಲದಿಂದ ನ್ಯಾಯಮೂರ್ತಿಗಳು ಸಿಟ್ಟಾದರು. ಮತ್ತೆ ಮನೆ ಮನೆ ಸಮೀಕ್ಷೆ ನಡೆಸಿ ನ್ಯಾಯಬದ್ಧವಾಗಿ ವರ್ಗೀಕರಣವಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿತು.

ದಲಿತ ಸಂಘರ್ಷ ಸಮಿತಿಯ ಇಬ್ಬರು ನಾಯಕರು ವರ್ಗೀಕರಣಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಎಡಗೈ ಮತ್ತು ಬಲಗೈ ಇಬ್ಬರಿಗೂ ತಲಾ ಶೇ. 5. 5 ಹಂಚಿಕೆಗೆ ನಮ್ಮಲ್ಲಿ ಈಗಾಗಲೇ ಒಪ್ಪಿಗೆ ಆಗಿದೆ. ಆ ಸೂತ್ರ ಜಾರಿಯಾಗಬೇಕು ಎಂದರು. ಹಲವರು ಬೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಿಂದ ಹೊರಗೆ ಇಡಬೇಕು. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಒತ್ತಾಯವೂ ಬಂದಿತು.

ಸಭೆಯಲ್ಲಿದ್ದ ಬಹುತೇಕರೆಲ್ಲ “ ಅತ್ಯಂತ ವಂಚಿತರನ್ನು ಬಿಟ್ಟು ನಾವು ಮುಂದೆ ಸಾಗಲು ಸಾಧ್ಯವಿಲ್ಲ” ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾದದ್ದು ಸಮಾಧಾನದ ಸಂಗತಿ ಎಂದು ಹಲವರು ನಿಟ್ಟಿಸಿರು ಬಿಟ್ಟರು.

ಪರಿಶಿಷ್ಟ ಜಾತಿಯ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದು ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಅವರೇ ಸಂವಿಧಾನ ಕರಡು ಸಭೆಯಲ್ಲಿ ಬಲವಾಗಿ ವಾದಿಸಿದ್ದರು. ಆಂಧ್ರ ಪ್ರದೇಶದ ಸರ್ಕಾರ 1994ರಲ್ಲಿ ರೂಪಿಸಿದ ಮೀಸಲಾತಿ ವರ್ಗೀಕರಣದ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಕೋರ್ಟ್ ತೀರ್ಪು ನೀಡುವಾಗ ಅಂಬೇಡ್ಕರ್ ಅವರ ಅಭಿಪ್ರಾಯವನ್ನು ಆ ಪ್ರಕರಣದಲ್ಲಿ ಉಲ್ಲೇಖಿಸಿತು. ಅದರ ವಿವರ ಹೀಗಿದೆ:

ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿದ್ದ ಪರಿಶಿಷ್ಟ ಜಾತಿಗಳ (ಮೀಸಲಾತಿಯ ಸಮೀಕರಣ/ ಪುನರ್ರಚನೆ) 2000ರ ಕಾಯ್ದೆಯು ಸಂವಿಧಾನದ ಕಲಂ 341, 14, 15, 16 ಮತ್ತು ಪರಿಶಿಷ್ಟ ಜಾತಿಯ ಪಟ್ಟಿಗೆ ಹೊಸದಾಗಿ ಸೇರಿಸುವ ಸಂಬಂಧದ 41, 3 ಮತ್ತು 25ನೇ ಕಲಂ ಪ್ರಕಾರ ಅಸಿಂಧು ಆಯಿತು. ಅಷ್ಟು ಮಾತ್ರವಲ್ಲದೆ ಸಂವಿಧಾನದ ಕಲಂ 341ರ ಪ್ರಕಾರ ಪರಿಶಿಷ್ಟ ಜಾತಿಯ ಪಟ್ಟಿಗೆ ನೀಡಿರುವ ರಕ್ಷಣೆಯನ್ನು ‘ಅಭದ್ರಗೊಳಿಸುವ’, , (The Constituent Assembly Debate coupled  with the fact that Article  341 makes it clear that the State Legislature or its Executive has no power of “disturbing” (term  used by Dr. Ambedkar)the Presidential List of Scheduled Castes for the State.) This is quoted in the judgement of EV Chinnaiah V State of Andhra Pradesh 2005 SC –AIR page 169.)ಅಧಿಕಾರ ರಾಜ್ಯ ಶಾಸಕಾಂಗ ಅಥವಾ ಕಾರ್ಯಾಂಗ ಮಾಡುವ ಯಾವುದೇ ಕಾಯ್ದೆ ಅಥವಾ ಆಜ್ಞೆಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತು.

ಇದೇ ಮಾತನ್ನು ಬಲಗೈ ಸಮುದಾಯದ ನಾಯಕರು ಈ ವಿಷಯ ಚರ್ಚೆಗೆ ಬಂದಾಗಲೆಲ್ಲ ಉಲ್ಲೇಖಿಸುತ್ತಾರೆ. ಆದರೆ ಈ ಅಭಿಪ್ರಾಯ ಅಂಬೇಡ್ಕರ್ ಅವರದಲ್ಲ, ಇಲ್ಲಿಯ ಬಲಗೈ ನಾಯಕರದ್ದೇ ಎನ್ನುವ ತಪ್ಪು ಅಭಿಪ್ರಾಯವೇ ಎಡಗೈ ಯುವಕರು ಬಲಗೈ ರಾಜಕೀಯ ನಾಯಕರ ವಿರುದ್ಧ ಮೈಮೇಲೆ ಬೀಳುವಂತೆ ಮಾತನಾಡುತ್ತಿರುವುದು ವಿಚಿತ್ರ ಸಂಗತಿ. ನಿಜ. ಸಂವಿಧಾನದ ಆಶಯ ‘ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು’ ಆದರೆ ಸಂವಿಧಾನದಲ್ಲಿ ಅದಕ್ಕೆ ಅಡೆತಡೆ ಇರುವುದು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ.

ತೊಂಬತ್ತರ ದಶಕದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಖಾಸಗೀ ವ್ಯವಸ್ಥೆ ಬಲಗೊಳ್ಳುತ್ತಾ ಅಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಹೆಚ್ಚಾಗಿ ತೆರೆದುಕೊಳ್ಳಲು ಶುರುವಾಯಿತು. ಹಾಗೆಯೇ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಮುಚ್ಚಿ ಕೆಲವನ್ನು ಸರ್ಕಾರಿ ಮತ್ತು ಖಾಸಗಿ ಒಡೆತನಕ್ಕೆ ಪರಿವರ್ತಿಸಿದ್ದರಿಂದ ಸರ್ಕಾರದಲ್ಲಿನ ಉದ್ಯೋಗಗಳು ಕಡಿಮೆ ಆಗುತ್ತಾ ಬಂದವು. ಇತ್ತ ಸರ್ಕಾರದಲ್ಲಿ ಖಾಲಿ ಆಗುತ್ತಾ ಬಂದ ಲಕ್ಷಾಂತರ ಸಂಖ್ಯೆಯ ಉದ್ಯೋಗಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಲ್ಲಲ್ಲಿ ಒಮ್ಮೊಮ್ಮೆ ನೇಮಕ ಆಗುವುದನ್ನು ಬಿಟ್ಟರೆ ಸರ್ಕಾರಕ್ಕೆ ಬೇಕಾದ ಸಂಖ್ಯೆಯಲ್ಲಿ ನೇಮಕವಾಗುತ್ತಿಲ್ಲ. ಹಾಗಾಗಿ ನಿರುದ್ಯೋಗದ ಜೊತೆಗೆ ಮೀಸಲಾತಿ ವ್ಯವಸ್ಥೆಯೂ ಅರ್ಥ ಕಳೆದುಕೊಳ್ಳುತ್ತಿದೆ.

ಈ ಹಿಂದೆಯೆಲ್ಲ ತಾತ್ಕಾಲಿಕ ನೇಮಕ ಹಾಗು ಹಲವು ಸಂದರ್ಭಗಳಲ್ಲಿ ಮನಸೋ ಇಚ್ಚೇ ಮಾಡಿಕೊಂಡ ನೇರ ನೇಮಕಾತಿ, ಗುತ್ತಿಗೆ ಪದ್ಧತಿ ಹೀಗೆ ಮೀಸಲಾತಿಯನ್ನು ವ್ಯವಸ್ಥಿತಿವಾಗಿ ಕಡೆಗಣಿಸಲಾಗುತ್ತಾ ಬರಲಾಯಿತು. ಆದರೆ ಮೀಸಲಾತಿ ನೀತಿಗೆ ಅನುಗುಣವಾಗಿ ನಡೆಯದ ಈ ನೇಮಕಗಳಿಗೆ ನಂತರದ ದಿನಗಳಲ್ಲಿ ತಡೆ ಬಿದ್ದಿತು. ಈಗ ಅದೇ ಮಾದರಿಯ ಮತ್ತೊಂದು ಹಾದಿಯೇ ಹೊರಗುತ್ತಿಗೆ ಪದ್ಧತಿ. ಈ ಹೊರಗುತ್ತಿಗೆಯ ಮೂಲಕ ಮತ್ತೆ ಮೀಸಲಾತಿ ನೀತಿಯನ್ನು ಸರ್ಕಾರವೇ ಕಡೆಗಣಿಸುತ್ತಾ ಬಂದಿದೆ. ಅನ್ಯಾಯ ಮತ್ತು ಅಕ್ರಮಗಳನ್ನು ನಿರ್ಬಂಧಿಸಲು ಯಾವುದೇ ಒಂದು ಹೊಸ ಕಾನೂನು ಬಂದ ತಕ್ಷಣ ನಮ್ಮ ಅಧಿಕಾರಿ ವರ್ಗ ಮತ್ತೊಂದು ಪರ್ಯಾಯ ಹಾದಿ ಅರ್ಥಾತ್ ಅಡ್ಡದಾರಿ ಹಿಡಿಯುವ ಈ ಬಗೆಯ ಹೊಸ ದಾರಿಗಳನ್ನು ಹುಡುಕುತ್ತಲೇ ಬಂದಿದೆ.

ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಉದ್ಯೋಗಗಳು ಬರಿದಾಗುತ್ತಿವೆ. ಈ ಸ್ಪರ್ಧಾ ಯುಗದಲ್ಲಿ ಶಕ್ತಿ ಇದ್ದವನು ಬದಕುತ್ತಾನೆ ಎನ್ನುವ ಸಿದ್ಧಾಂತಕ್ಕೆ ಮರುಜೀವ ಬಂದಿದೆ. ಈ ಸತ್ಯವನ್ನು ಅರ್ಥ ಮಾಡಿಕೊಂಡು ಪರಿಶಿಷ್ಟರು ತಮ್ಮ ಮಕ್ಕಳನ್ನು  ಸ್ಪರ್ಧೆಗೆ ಸಿದ್ಧಗೊಳಿಸಬೇಕು. ಕೇವಲ ಬಿಸಲ್ಗುದುರೆಯಾಗಿರುವ ಸಿಗದ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಇಡೀ ವ್ಯವಸ್ಥೆಗೆ ಶಾಪ ಹಾಕುತ್ತಾ ಕಾಲಕಳೆಯಬೇಕಾಗುತ್ತದೆ.

ಇದೆಲ್ಲವೂ ನಿಜ. ಆದರೆ ಎಡಗೈ ಜನರು ನಡೆಸಿಕೊಂಡು ಬಂದ ಈ ಒಳಮೀಸಲಾತಿಗೆ ಬೇರೆ ಜಾತಿಗಳವರೇಕೆ ಬೆಂಬಲ ನೀಡಿಲ್ಲ ಎನ್ನುವ ಅಂಶವನ್ನೂ ಗಮನಿಸಲೇ ಬೇಕು. ಆಂಧ್ರದಿಂದ ಪ್ರೇರೇಪಣೆಗೊಂಡು ಆರಂಭಿಸಿದ ಚಳುವಳಿ ಕೇವಲ ಒಂದು ಜಾತಿಯದ್ದಾಗಿದ್ದೇ ತಪ್ಪು ನಡೆ. ಮಾದಿಗ ಮೀಸಲಾತಿ ಹೋರಾಟ ಸಮಿತಿ ಎನ್ನುವ ಹೆಸರಿನಲ್ಲಿ ಆರಂಭವಾದ ಹೋರಾಟ ಬಲಗೈ ಜನರ ವಿರುದ್ಧ ಎನ್ನುವ ರೀತಿಯಲ್ಲೇ ನಡೆದು ಬಂದದ್ದು.

ಇದಕ್ಕೆ ಪ್ರತಿಯಾಗಿ ಬಲಗೈನ ಕೆಲವು ಜನರ ದನಿಯಾಗಿ ಛಲವಾದಿ ಮಹಾಸಭಾ ಹುಟ್ಟಿಕೊಂಡಿತು. ಈ ಎರಡು ಜಾತಿ ಸಂಘಟನೆಗಳಿಗೆ ದಲಿತ ಸಂಘರ್ಷ ಸಮಿತಿಯು ಬೆಂಬಲಿಸಿದ ಉದಾಹರಣೆ ಇಲ್ಲ.

ನ್ಯಾಯಮೂರ್ತಿ ಸದಾಶಿವ ಆಯೋಗ ತನ್ನ ವರದಿ ನೀಡಿದ ಬಳಿಕ ಬೋವಿಗಳು ಮತ್ತು ಲಂಬಾಣಿ ಜನರ ಪ್ರತಿಭಟನೆ ಕೂಗು ಎದ್ದದ್ದರಿಂದ ಎಡಗೈ ಹೋರಾಟಗಾರರು ಬಲಗೈ ಜನರ ಬೆಂಬಲ ಪಡೆಯಲು ಮುಂದಾದರು. ಅದಕ್ಕೂ ಮೊದಲು ಬಲಗೈನವರೇ ತಮ್ಮ ವಿರೋಧಿಗಳು ಎಂದು ಹೇಳುತ್ತಲೇ ಬಂದದ್ದರಿಂದ  ಆ ಹೋರಾಟ ಇನ್ನೂ ಯಶಸ್ವಿಯಾಗದಿರಲು ಕಾರಣ ಎನ್ನಲಾಗಿದೆ.

ಈ ವರ್ಗೀಕರಣ ಹೋರಾಟವನ್ನು “ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಹೋರಾಟ ಸಮಿತಿ” ಎಂಬ ಹೆಸರಿನಲ್ಲಿ ಬಲಗೈನವರನ್ನೂ ಸೇರಿಸಿಕೊಂಡು ನಡೆಸಿದ್ದಿದ್ದರೆ ಪರಿಸ್ಥಿತಿಯೇ ಬದಲಾಗುತ್ತಿತ್ತು !!!