ದಾಸ ಸಾಹಿತ್ಯದ ಮೇಲೆ ಶರಣರ ಸ್ವರವಚನಗಳ ಪ್ರಭಾವ ಹಾಗೂ ಸಂಗೀತಕ್ಕೆ ಶರಣರ ಕೊಡುಗೆ

" ಶರಣರು ಭಾವನೆಗಳನ್ನು ಕಲಾತ್ಮಕಗೊಳಿಸಲು ಹೊರಟ ಕವಿಗಳಲ್ಲ; ಬದುಕನ್ನು ಕಲಾತ್ಮಕಗೊಳಿಸಲು ಹೋರಾಡಿದ ಸಂತರು. ಈ  ಉತ್ಕಟ ಹೋರಾಟದ  ಉಪನಿಷ್ಪತ್ತಿಯಾಗಿ ವಚನಸಾಹಿತ್ಯ ನಿರ್ಮಾಣವಾಯಿತು."

ದಾಸ ಸಾಹಿತ್ಯದ ಮೇಲೆ ಶರಣರ ಸ್ವರವಚನಗಳ ಪ್ರಭಾವ ಹಾಗೂ ಸಂಗೀತಕ್ಕೆ ಶರಣರ ಕೊಡುಗೆ

ವಚನ ಸಾಹಿತ್ಯವು ತನ್ನ ವಿಶಿಷ್ಟತೆಯಿಂದ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಪ್ರಮುಖ ಸಾಹಿತ್ಯ ಪ್ರಕಾರವಾಗಿ ಗುರುತಿಸಿಕೊಂಡಿದೆ. ಪದ್ಯ ಮತ್ತು ಗದ್ಯ ಉಭಯ ಪ್ರಕಾರದ ಸಾಹಿತ್ಯಗಳ ಸಂಕರದಿಂದ ರಚಿತವಾದ ವಚನಗಳು ಅವುಗಳೊಳಗಿನ ಆಳವಾದ ಅರ್ಥ ಮತ್ತು ಸಂಗೀತಕ್ಕೆ ಅಳವಡಿಸಿದಾಗ ಹೊರಸೂಸುವ ಗೇಯತೆಯಿಂದ ನಮ್ಮೆಲ್ಲರ ಮನ ಸೂರೆಗೊಳ್ಳುವಂತೆ ಮಾಡುತ್ತವೆ. ಶರಣರು ವಚನ ರಚಿಸಿದ ಕಾಲಘಟ್ಟದಲ್ಲಿ ಸಾಹಿತ್ಯವೆಂದರೆ ಸಂಸ್ಕ್ರತ ಭಾಷೆಯ ಪಾರುಪತ್ಯ. ಪೂರ್ಣಪ್ರಮಾಣದಲ್ಲಿ ಅತ್ಯಂತ ಸರಳವಾಗಿ ನೆಲಮೂಲದ ಭಾಷೆಯಲ್ಲಿ ರಚಿತವಾದ ಸಾಹಿತ್ಯವೆಂದರೆ ವಚನ ಸಾಹಿತ್ಯ. ಶರಣರು ವಚನ ಸಾಹಿತ್ಯ ಕೃಷಿ ಆರಂಭಿಸುವುದಕ್ಕೆ ಮೊದಲು ಸಾಹಿತ್ಯವೆಂದರೆ ಜನಸಾಮಾನ್ಯರಿಗೆ ನಿಲುಕದ ಪಂಡಿತರ ಪಾರುಪತ್ಯದಲ್ಲಿ ರಚಿತವಾಗುತ್ತಿದ್ದ ರಾಜನ ಆಸ್ಥಾನದ ಹಂಗಿಗೊಳಗಾಗಿರುತ್ತಿದ್ದ ಸಂಸ್ಕ್ರತ ಸಾಹಿತ್ಯ. ಆಸ್ಥಾನದ ಲವಲೇಶವು ಹಂಗಿಗೊಳಗಾಗದೆ ಸಂಸ್ಕ್ರತವನ್ನು ದಿಕ್ಕರಿಸಿ ಸರಳವಾಗಿ ಆಡುಮಾತಿನಲ್ಲಿ ರಚಿತವಾದ ವಚನ ಸಾಹಿತ್ಯ ಕನ್ನಡ ಮಣ್ಣಿನ ಮೊಟ್ಟಮೊದಲ ಸ್ಥಾನಿಯ ಭಾಷಾ ಸಾಹಿತ್ಯ. ಅಂದರೆ ವಚನ ಸಾಹಿತ್ಯ ಒಂದು ದೃಷ್ಟಿಯಲ್ಲಿ ನೋಡಿದರೆ ಅದೊಂದು ಜನಪದೀಯ ಸಮೂಹ ಸಂಸ್ಕ್ರತಿಯನ್ನು ಬಹು ಮುಖ್ಯವಾಗಿ ಬಿಂಬಿಸುವ ವಿಶಿಷ್ಟ  ಸಾಹಿತ್ಯ ಪ್ರಕಾರ.

ಛಂದಸ್ಸು ˌ ಷಟ್ಪದಿˌ ಲಘುˌ ಗುರು ಮುಂತಾದ ಯಾವುದೇ ವ್ಯಾಕರಣ ಪ್ರಕಾರದ ಜಟಿಲ ರಚನಾವಿಧಾನಗಳ ನಿಬಂಧನೆಗಳಿಗೊಳಗಾಗದೆ ಸರಳವಾಗಿˌ ಸುಲಲಿತವಾಗಿ ರಚಿಸಲ್ಪಟ್ಟಿರುವುದು ವಚನ ಸಾಹಿತ್ಯದ ವಿಶೇಷತೆ. ಇಲ್ಲಿ ಕೃತಿ ರಚನೆಕಾರ ವ್ಯಾಕರಣದ ವಿಶಿಷ್ಟ ಪ್ರಕಾರಗಳ ಹಂಗಿನೊಳಗೆ ತನ್ನನ್ನು ಬಂಧಿಸಿಕೊಳ್ಳದೆ ಸ್ವತಂತ್ರವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ವಚನ ರಚಿಸುವ ಸ್ವಾತಂತ್ರ ತನ್ನದಾಗಿಸಿಕೊಂಡಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಾಹಿತ್ಯಲೋಕದ ಪ್ರಾಜ್ಞರು ವಚನಗಳನ್ನು ನಿರ್ಧಿಷ್ಟವಾಗಿ ಕಾವ್ಯವೆಂತಾಗಲಿˌ ಅಥವಾ ಗದ್ಯವೆಂತಾಗಲಿ ವಿಂಗಡಿಸಲಾರದೆ ಅವುಗಳನ್ನು "ವಚನ " ಗಳೆಂತಲೇ ವಿಂಗಡಿಸಿದ್ದು ಸಾಹಿತ್ಯ ಕ್ಷೇತ್ರದ ಹಿರಿಮೆ ಎಂದೇ ಹೇಳಬೇಕು. ಕನ್ನಡ ಭಾಷೆಯು ತಮಿಳು ಭಾಷೆಯ ಜೊತೆಜೊತೆಗೆ ಭಾರತೀಯ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಪ್ರಮುಖವಾದದ್ದು. ಪ್ರಾಚೀನ ಕನ್ನಡ ಸಾಹಿತ್ಯ ಮೂಡಿಬಂದದ್ದು ಹಳಗನ್ನಡದಲ್ಲಿ. ಕನ್ನಡ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯಲೋಕದಲ್ಲಿ ವಿಶಿಷ್ಟ ಸ್ಥಾನಮಾನಗಳಿಗೆ. ಕನ್ನಡದಲ್ಲಿ ಹಳಗನ್ನಡದಲ್ಲಿ ಅನೇಕ ಸಾಹಿತ್ಯ ಪ್ರಕಾರಗಳು ರಚಿತವಾಗಿವೆ. ತದನಂತರದಲ್ಲಿ ಬಂದ ವಚನ ಮತ್ತು ದಾಸ ಸಾಹಿತ್ಯಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷತೆ ನೀಡಿವೆ. ಎರಡೂ ಸಾಹಿತ್ಯ ಪ್ರಕಾರಗಳನ್ನು ಬಹಳಷ್ಟು ಪ್ರಾಜ್ಞರು ಭಕ್ತಿ ಸಾಹಿತ್ಯ ಪ್ರಕಾರಗಳೆಂದು ಗುರುತಿದ್ದಾರೆ. ಆದರೆ ದಾಸ ಸಾಹಿತ್ಯವು ಭಕ್ತಿಸಾಹಿತ್ಯದ ನೆಲೆಯಲ್ಲಿ ಬಹುವಾಗಿ ಗುರುತಿಸಿಕೊಂಡರೆ ವಚನ ಸಾಹಿತ್ಯಕ್ಕೆ ಯಾವುದೇ ಒಂದು ನಿರ್ದಿಷ್ಟ ಬೇಲಿಯನ್ನು ಹಾಕಿಡುವಂತಿಲ್ಲ. 

ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಅಧುನಿಕ ಸಾಹಿತ್ಯ ಪ್ರಕಾರ ಪ್ರಗತಿಗೊಂಡಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ವಚನ ಸಾಹಿತ್ಯದ ಮೇಲೆ ನಡೆದಷ್ಟು ಸಂಶೋಧನೆ ಬಹುಶಃ ಕನ್ನಡದ ಬೇರಾವುದೇ ಸಾಹಿತ್ಯ ಪ್ರಕಾರಗಳ ಮೇಲೂ ನಡೆದಿರಲಿಕ್ಕಿಲ್ಲ. ಹಾಗೆಂತಲೇ ಇದನ್ನು ಒಂದು ಅಪರೂಪದ ವಿಶಿಷ್ಟ ಬಗೆಯ ಸಾಹಿತ್ಯ ಪ್ರಕಾರವೆಂದು ಪ್ರತಿಪಾದಿಸಲಾಗುತ್ತಿದೆ. ಪ್ರಾಚೀನ ಕಾಲದ ಬಹುತೇಕ ಸಾಹಿತ್ಯಗಳು ರಚನೆಗೊಂಡದ್ದು ರಾಜರ ಆಸ್ಥಾನದ ಪಂಡಿತರಿಂದ. ಅವುಗಳ ತಿರುಳು ರಾಜರುಗಳನ್ನು ವಿಜೃಂಭಿಸಿ ದೈವತ್ವಕ್ಕೇರಿಸುವುದೇ ಆಗಿರುತ್ತಿತ್ತು. ಇಲ್ಲವಾದರೆ ಪುರಾಣಗಳನ್ನು ವೈಭವೀಕರಿಸುವ ಸಾಹಿತ್ಯ ವಸ್ತು ವಿಷಯವಾಗಿರುತ್ತಿತ್ತು. ಮತ್ತು ದೇವರ ಸ್ತುತಿ, ಆರಾಧನೆˌ ಭಕ್ತಿಯ ಪರಾಕಾಷ್ಠೆಯನ್ನೊಳಗೊಂಡ ಸಾಹಿತ್ಯವಾಗಿರುತ್ತಿತ್ತು. ಆದರೆ ವಚನ ಸಾಹಿತ್ಯವು ಇವುಗಳೆಲ್ಲವುಗಳಿಗಿಂತ ಭಿನ್ನ ನೆಲೆಯಲ್ಲಿ ನಿಲ್ಲುವುದನ್ನು ನೋಡಬಹುದಾಗಿದೆ. ವಚನ ಸಾಹಿತ್ಯದ ಬಹುಮುಖ್ಯ ಮೊದಲ ಭಿನ್ನತೆ ಎಂದರೆ ಅದು ರಚನೆಗೊಂಡದ್ದು ಶತಮಾನಗಳಿಂದ ಅಕ್ಷರ ವಂಚಿತರಾಗಿದ್ದ ಅಸಂಖ್ಯಾತ ಶ್ರಮ ಸಂಸ್ಕ್ರತಿಯ ದಮನಿತ ತಳ ಸಮುದಾಯ ಪ್ರತಿನಿಧಿಸುವವರಿಂದ. ಎರಡನೇ ಭಿನ್ನತೆ ಎಂದರೆ ಸಂಸ್ಕ್ರತವೆಂದರೆ ಸಾಹಿತ್ಯವೆನ್ನುವ ಕಾಲಘಟ್ಟದಲ್ಲಿ ಸಂಸ್ಕ್ರತವನ್ನು ಧಿಕ್ಕರಿಸಿ ಸರಳವಾದ ಕನ್ನಡದಲ್ಲಿ ರಚನೆಗೊಂಡದ್ದು. ಮೂರನೆಯ ಭಿನ್ನತೆ ರಾಜಾಶ್ರಯದ ಹಂಗಿಲ್ಲದೆ ಜನಸಾಮನ್ಯರ ನಡುವೆ ರೂಪಗೊಂಡದ್ದು. ನಾಲ್ಕನೆ ಭಿನ್ನತೆ ಎಂದರೆ ಅದು ಭಕ್ತಿ ˌ ಅಧ್ಯಾತ್ಮ ˌ ಅನುಭಾವ ಸಾಧನೆˌ ಮುಂತಾದವುಗಳಿಗಿಂತ ಭಿನ್ನವಾಗಿ ಅಂದಿನ ದಿನಮಾನದಲ್ಲಿ ಜನಸಾಮಾನ್ಯರನ್ನು ಬಹುವಾಗಿ ಭಾಧಿಸುತ್ತಿದ್ದ ಅಸಮಾನತೆಯ ಸಾಮಾಜಿಕ ವ್ಯವಸ್ಥೆಗೆ ಪರ್ಯಾಯವಾಗಿ ಹೊಸದೊಂದು ವ್ಯವಸ್ಥೆಯನ್ನು ಪ್ರತಿಪಾದಿಸಿ ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಬಂಡಾಯದ ಧ್ವನಿಯನ್ನು ಸ್ಪೋಟಿಸಿದ್ದು. 

ಮೂಲದಲ್ಲಿ ವಚನಗಳು ಸಾಹಿತ್ಯ ರಚನೆಯ ತುಮುಲದಲ್ಲಿ ಉದ್ಭವಗೊಳ್ಳುವ ಕೃತಿಗಳಾಗಿರದೆ ಅಂದಿನ ಸಮಕಾಲಿಕ ಆಗುಹೋಗುಗಳಿಗೆ ತಕ್ಷಣ ಸ್ಪಂದಿಸುವ ಸಂಘರ್ಷದ ದನಿಯಾಗಿ ಹುಟ್ಟಿಕೊಂಡ ವಿನೂತನ ಸಾಹಿತ್ಯ ಚಳವಳಿಯ ಉತ್ಪನ್ನಗಳು. ಅದಕ್ಕಾಗಿಯೇ ಅದನ್ನು ವಚನ ಸಾಹಿತ್ಯ ಎಂದು ಗುರುತಿಸುವುದಕ್ಕಿಂತ ವಚನ ಚಳವಳಿ ಎಂತಲೇ ಗುರುತಿಸುತ್ತಾರೆ. ಅದಾಗ್ಯೂ ವಚನಗಳು ಭಕ್ತಿ ˌ ತತ್ವ ˌ ಸಮಾಜಮುಖಿ ಚಿಂತನೆˌ ಅನುಭಾವ ಸಾಧನೆಗಳಂಥ ಬಹುಮುಖಿ ಅಭಿವ್ಯಕ್ತಿಗಳ ಜೀವಂತ ಪ್ರತಿಮೆಗಳು. ಅವು ಜಗತ್ತಿನ ಒಂದು ಅತ್ಯಂತ ಮಹತ್ವದ ಸಮಾಜೋಧಾರ್ಮಿಕ ಚಳವಳಿಯ ಉಪ ಉತ್ಪನ್ನಗಳು. ವಚನಗಳು ರಚನೆ ಮಾಡಿದ ಅಸಂಖ್ಯಾತ ಶರಣರು ಸಾಹಿತ್ಯದ ಗೀಳಿಗೀಡಾದವರಾಗಿರಲಿಲ್ಲ. ಅವರು ರಾಜಾಶ್ರಯದಲ್ಲಿ ಬದುಕಿ ಪದವಿ ಪುರಸ್ಕಾರಗಳಿಗಾಗಿ ಸಾಹಿತ್ಯ ರಚಿಸಲಿಲ್ಲ. ಅದಕ್ಕೆಂದೇ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಲಿಂಗೈಕ್ಯ ಡಾ. ಎಂ. ಎಂ. ಕಲ್ಬುರ್ಗಿಯವರು ತಮ್ಮ ಬರವಣಿಗೆಯೊಂದರಲ್ಲಿ ಶರಣರನ್ನು ಹೀಗೆ ವ್ಯಾಖ್ಯಾನಿಸುತ್ತಾರೆ :

" ಶರಣರು ಭಾವನೆಗಳನ್ನು ಕಲಾತ್ಮಕಗೊಳಿಸಲು ಹೊರಟ ಕವಿಗಳಲ್ಲ; ಬದುಕನ್ನು ಕಲಾತ್ಮಕಗೊಳಿಸಲು ಹೋರಾಡಿದ ಸಂತರು. ಈ  ಉತ್ಕಟ ಹೋರಾಟದ  ಉಪನಿಷ್ಪತ್ತಿಯಾಗಿ ವಚನಸಾಹಿತ್ಯ ನಿರ್ಮಾಣವಾಯಿತು."

ಡಾ. ಕಲ್ಬುರ್ಗಿಯವರ ಮಾತಿನಂತೆ ವಚನಗಳು ಒಂದು ಜನಪರ ಹೋರಾಟದಿಂದ ಹೊರಹೊಮ್ಮಿದ ಉಪನಿಷ್ಪತ್ತಿಗಳು. ಅವು ಸಾಹಿತ್ಯ ಕ್ಷೇತ್ರವನ್ನು ಅಲಂಕಾರ ಅಥವ ಶ್ರೀಮಂತಗೊಳಿಸಲು ರಚಿಸಿದ ಭೌತಿಕ ಕೃತಿಗಳಾಗದೆ ಅಖಂಡ ಜೀವಜಗತ್ತಿನ ಒಳಿತನ್ನು ಪ್ರತಿಪಾದಿಸಿದ ಜೀವಂತ ಸಂಕೇತಗಳು. ಜನಪರ ಚಳವಳಿಯೊಂದರ ಹೃದಯಲ್ಲಿ ಸ್ಪೋಟಗೊಂಡು ಸಿಡಿದು ಚದುರಿದ ಬೆಂಕಿಯುಂಡೆಗಳು. ಜಗತ್ತಿನ ಗೊಡವೆಯೇ ಬೇಡವೆಂದು ಏಕಾಂತದಲ್ಲಿ ದೇವರನ್ನರಸುವ ಸಾಧಕನಿಗೆ ಒದಗುವ ಅನುಭಾವ ಸಾಧನೆಯ ಮಹತ್ವದ ಪರಿಕರಗಳು. ಲೌಕಿಕದೊಳಗಿದ್ದೇ ಪಾರಮಾರ್ಥ ಸಾಧಿಸುವ ಜನಸಾಮಾನ್ಯನಿಗೆ ಜ್ಞಾನದ ದೀವಿಗೆಗಳು. ಆಡಳಿತಗಾರನಿಗೆ ಕಾಯಕ ಮತ್ತು ದಾಸೋಹ ಪರಿಕಲ್ಪನೆ ಮೂಲಕ ಯಶಸ್ಸು ಕೊಡಬಲ್ಲ ಆಡಳಿತಾತ್ಮಕ ಸಾಧನಗಳು. ನೊಂದು ಬೆಂದವರಿಗೆ ಧೈರ್ಯ ಹಾಗೂ ಸಾಂತ್ವನ ನೀಡಬಲ್ಲ ಭರವಸೆಯ ನುಡಿಗಳು. 

ಬಸವಣ್ಣನವರು ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕರೆ ?

ಮೇಲಿನ ಪ್ರಶ್ನೆಗಳಿಗೆ ಹೌದೆನ್ನುವ ಉತ್ತರ ಹಲವು ಮೂಲಗಳಿಂದ ದೊರೆಯುತ್ತಿದೆ. ಈಗ ನಾವು ಕರ್ನಾಟಕ ಸಂಗೀತದ ಪಿತಾಮಹ ಎಂದು ಪುರಂದರದಾಸರು ಮತ್ತು ತ್ಯಾಗರಾಜರನ್ನು ಹೆಸರಿಸುತ್ತೇವೆ. ಆದರೆ ಅಸಲಿಗೆ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕರು ಬಸವಣ್ಣನವರು ಎನ್ನುತ್ತಾರೆ ಕೆಲವು ಸಂಗೀತ ವಿದ್ವಾಂಸರು.  ಖ್ಯಾತ ಸಂಗೀತ ವಿದ್ವಾನ್‌ ಬಿ. ಎಸ್‌. ವಿಜಯರಾಘವನ್‌ ಅವರು ಬಸವಣ್ಣನವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಘೋಷಿಸುವ ಬೇಡಿಕೆ ತಮ್ಮ ಸಭೆಯೊಂದರ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ. ಇವರು ಮಾಡಿದರೆನ್ನಲಾದ ಭಾಷಣದ ಸಾರಾಂಶ ಶಾಂತಿಕಿರಣ ಎಂಬ ದ್ವೈಮಾಸಿಕದ ಮೇ - ಜೂನ್ 2014ರ ಸಂಚಿಕೆಯಲ್ಲಿ ಪ್ರಕಟಿತವಾಗಿದೆ. ನಾನು ಮೇಲೆ ಉಲ್ಲೇಖಿಸಿದಂತೆ ಶರಣರ ವಚನಗಳು ಗೇಯತೆಯನ್ನು ಹೊಂದಿದ್ದು ಸುಶ್ರಾವ್ಯವಾಗಿ ಹಾಡಲು ಕೂಡ ಅನುಕೂಲವಾಗಬಲ್ಲ ರಚನೆಗಳು. ಬಸವಣ್ಣ ˌ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರ ವಚನಗಳು ವಿಶೇಷವಾಗಿ ಗಾಯನಕ್ಕೆ ಹೇಳಿಮಾಡಿಸಿದ ರಚನೆಗಳು ಎಂದು ನಾವು ಈಗಾಗಲೇ ಬಲ್ಲೆವು. ಬಸವಾದಿ ಶರಣರು ತಮ್ಮ ದೈನಂದಿನ ವಚನ ರಚನೆಯ ಜೊತೆಜೊತೆಯಾಗಿ ಕೆಲವು ಗಾಯನಯೋಗ್ಯ ವಿಶೇಷ ವಚನಗಳನ್ನೂ ರಚಿಸಿದ್ದು ಅನೇಕ ವಿದ್ವಾಂಸರು ತಮ್ಮ ಸಂಶೋಧನೆಗಳ ಮೂಲಕ ಅವಿಷ್ಕರಿಸಿ ಅವುಗಳನ್ನು 'ಸ್ವರವಚನ ' ಗಳೆಂದು ವರ್ಗೀಕರಿಸಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಪ್ರೊ. ತೀ. ನಂ. ಶ್ರೀಕಂಠಯ್ಯನವರು ಈ ಸಂಗತಿಯನ್ನು ಪ್ರಪಥಮವಾಗಿ ತಮ್ಮ ’ಸಮಾಲೋಕನ’ ಎಂಬ ಪುಸ್ತಕದಲ್ಲಿ ಅಕ್ಕಮಹಾದೇವಿಯ ಒಂದು ವಚನವನ್ನು ಮತ್ತು ಅದರ ಮೇಲೆ ಬರೆದಿದ್ದ ಕಾಂಬೋಧಿ ರಾಗದ ಹೆಸರನ್ನು ಗಮನಿಸಿ, ಇದು ವಚನಕ್ಕಿಂತ ತೀರ ಭಿನ್ನತೆ ಹೊಂದಿರುವುದರಿಂದ ಅದು ಗಾಯನಯೋಗ್ಯ ಸ್ವರವಚನವೆಂಬ ನಿರ್ಣಯಕ್ಕೆ ಬಂದರು. ತೀ. ನಂ. ಶ್ರೀಯವರ ಈ ಅವಿಷ್ಕಾರದ ಜಾಡನ್ನು ಹಿಡಿದು ಮುಂದೆ ಇನ್ನೊಬ್ಬ ಖ್ಯಾತ ಸಂಶೋಧಕರು ಮತ್ತು ಸಾಹಿತಿಗಳಾದ ಡಾ. ಎಲ್‌. ಬಸವರಾಜು ಅವರು ಸಂಶೋಧನೆಯನ್ನು ಮುಂದುವರೆಸಿ ಶರಣ ಸಾಹಿತ್ಯದ ಬಹುಮುಖ್ಯ ಆಕರ ಗ್ರಂಥಗಳನ್ನು ಅಭ್ಯಸಿಸಿ ’ಶಿವದಾಸ ಗೀತಾಂಜಲಿ’ ಎಂಬ ಮಹಾಗ್ರಂಥವನ್ನು ಬರೆದರು. 

ಈ ಕೃತಿಯಲ್ಲಿ ಅಂದಿನ ಸುತ್ತೂರು ಸಂಸ್ಥಾನ ಮಠದ ಪೀಠಾಧಿಪತಿ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ :
"ಈ ಗ್ರಂಥ ಸಂಪಾದಕರಾದ ಶ್ರೀ ಎಲ್. ಬಸವರಾಜು ನಮ್ಮ ಬಳಿಗೊಂದು ದಿನ ಬಂದು ಬಸವಾದಿ ಪ್ರಮಥರೂ ರಾಗತಾಳ ಸಹಿತವಾದ ಹಾಡುಗಳನ್ನು ಬರೆದಿರುವರೆಂದು ಹೇಳಿದರು. ಕೇಳಿ ನಮಗೆ ಅತ್ಯಾಶ್ಚರ್ಯವಾಯಿತು. ಆಮೇಲೆ ಅವರು ತಮ್ಮ ಹೇಳಿಕೆಯನ್ನು ಸೋದಾಹರಣೆವಾಗಿ ವಿವರಿಸಿದರು. ನಮಗೆ ಅತ್ಯಾನಂದವಾಯಿತು. ನಮ್ಮ ಸಂಸ್ಕೃತಿಗೆ. ಅಮೃತತೀರ್ಥ ಸ್ವರೂಪರಾದ ಪ್ರಮಥರ ಗೇಯಕೃತಿಗಳು ಇಡೀ ಮಾನವಲೋಕದ ಸಾರಸ್ವತ ಸ್ವತ್ತೆಂದು ಅವನ್ನು ಪ್ರಕಟಿಸಲು ಸಂಕಲ್ಪಿಸಿದೆವು. ಶ್ರೀ ಎಲ್‌. ಬಸವರಾಜು ಅವರು ತಮ್ಮ ಈ ಗ್ರಂಥದ ಪ್ರಥಮಾವೃತ್ತಿಯನ್ನು ನಮ್ಮ ಗ್ರಂಥಮಾಲೆಯಲ್ಲಿ ಪ್ರಕಟಿಸಲು ಅನುವು ಮಾಡಿ, ಅದರ ಅಚ್ಚಿನ ಕಾರ್ಯಭಾರವನ್ನೆಲ್ಲ ಹೊತ್ತುದಕ್ಕಾಗಿ ಅವರಿಗೆ ನಮ್ಮ ಆಶೀರ್ವಾದಗಳು. ಈ ಗ್ರಂಥ ಸಂಪಾದಕರ ಸಾಹಿತ್ಯ ಸಂಶೋಧನ ಜೀವನ ಉತ್ತರೋತ್ತರ ವಿಶಾಲವೂ ರಾಷ್ಟ್ರಹಿತಕಾರಿಯೂ ಆಗಲೆಂದು ಹಾರೈಸುವೆವು."

ಬಸವಾದಿ ಶರಣರು ರಚಿಸಿದ ವಿಶಿಷ್ಟವಾದ ಗಾಯನಯೋಗ್ಯ ಸ್ವರವಚನಗಳ ಸ್ಥೂಲಸ್ವರೂಪವನ್ನು ನಾವು ಹೀಗೆ ಗುರುತಿಸಬಹುದಾಗಿದೆ : 

1. ಮೊದಲಿಗೆ ಒಂದು ಅಥವ ಎರಡು ಸಾಲಿನ ಪಲ್ಲವಿ.

2. ಪಲ್ಲವಿಯ ಬಳಿಕ ಮೂರು ಅಥವಾ ಐದು ಸಾಲಿನ ಚರಣಗಳು. 

ಶರಣರು ತಮ್ಮ ಸ್ವರವಚನಗಳಿಗೆ ಬಳಸಿರಬಹುದಾದ ನಮ್ಮ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾಗಿರುವ ಎಲ್ಲ ಬಗೆಯ ರಾಗಗಳೆಂದರೆ ಆರಭಿˌ ಆಹಿರಿ, ಕೈಶಿಕಿಮಂಗಳˌ  ಕಾಂಬೋಧಿ, ಘೋರ್ಜರಿˌ  ದೇವಗಾಂಧಾರಿ, ಗೌಳˌ ಗುಂಡಕ್ರಿಯ, ನಾರಾಯಣಿˌ ಕನ್ನಡಗೌಳ, ಗಳಿಪಂತುˌ  ಮಾಳವಿ, ಪುನ್ನಾಗವವಾಳಿˌ ಜಂಝಾಟಿ, ಭೌಳಿˌ  ಫಲಮಂಜರಿ, ದೇಶಿˌ ದೇಶಾಕ್ಷಿ, ನಾಟಿˌ  ಧನ್ಯಾಸಿ, ಪಹಾಡಿˌ ನಾದನಾಮಕ್ರಿಯೆ, ಭೂಪಾಳಿˌ ಪಂತುವರಾಳಿ, ಸಾರಂಗˌ ಭೈರವಿ, ಮಾಧುಮಾದವಿˌ ಮಲಹರಿ, ಲಲಿತˌ  ರಾಮಕ್ರಿಯ, ವಸಂತˌ ವರಾಳಿ, ಹಿಂದೋಳˌ ಮಾಳವಗೌಳ, ಶ್ರೀರಾಗˌ  ಶಂಕರಾಭರಣ, ಸೌರಾಷ್ಟ್ರ. ಈಗ ರಾಗಗಳಿಗೆ ಆದಿತಾಳ, ರೂಪಕತಾಳ, ಆಟತಾಳ ಮತ್ತು ಝಂಪೆ ತಾಳಗಳನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ  ’ಬತ್ತೀಸ ರಾಗಗಳು’ ಎಂಬ ಮಾತನ್ನು ಪ್ರಸ್ಥಾಪಿಸಿರುವುದು ಶರಣರಿಗೆ ಸಂಗೀತದ ಬಗ್ಗೆ ಜ್ಞಾನವಿತ್ತು ಎನ್ನುವುದನ್ನು ಧ್ರಡೀಕರಿಸುತ್ತದೆ.

16ನೇ ಶತಮಾನ ದಾಸ ಸಾಹಿತ್ಯದ ಮೇಲೆ ಶರಣರ ವಚನಗಳ ಪ್ರಭಾವ.

ವಚನ ಚಳುವಳಿ ಘಟಿಸಿಹೋದ ಸುಮಾರು ನಾಲ್ಕು ಶತಮಾನಗಳ ತರುವಾಯ ಕರ್ನಾಟಕದಲ್ಲಿ ಹರಿಭಕ್ತಿ ಸಾರುವ ಮಹದುದ್ಯೇಶದಿಂದ ದಾಸಸಾಹಿತ್ಯ ಮುನ್ನಲೆಗೆ ಬಂದಿತು. ಪುರಂದರದಾಸರು ಈ ಪರಂಪರೆಯ ಮೂಲಿಗರು. ದಾಸ ಸಾಹಿತ್ಯ ಪರಂಪರೆ ಕೆಲವೊಂದು ಕಡೆ ತತ್ವ ಸಾರುವ ರಚನೆಗಳನ್ನು ಹೊಂದಿದ್ದರೂ ಬಹುತೇಕ ಹರಿಸ್ತುತಿಗೆ ಮೀಸಲಾದ ಸಾಹಿತ್ಯ. ಶ್ರೀಹರಿಯನ್ನು ವೈಭವೀಕರಿಸಲು ಮೀಸಲಾಗಿದ್ದ ಸಾಹಿತ್ಯವೇ ದಾಸಸಾಹಿತ್ಯವಾಗಿದ್ದರೂ ಅದು ಕರ್ನಾಟಕ ಸಂಗೀತದ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸಿತು. ಬಸವಾದಿ ಶರಣರು ಆರಂಭಿಸಿದ ಸಂಗೀತಯೋಗ್ಯ ಸಾಹಿತ್ಯವನ್ನು ಹರಿದಾಸರು ಬಹಳ ವಿಸ್ತ್ರತವಾಗಿ ಮುಂದುವರೆಸಿದರು. ಬಸವಣ್ಣನವರು ಹೆಸರಿಸಿದ   ’ಬತ್ತೀಸ’ ರಾಗ-ತಾಳಗಳನ್ನು ಬಳಸಿಕೊಂಡು ಹರಿದಾಸರು ಅನೇಕ ದೇವರನಾಮಗಳನ್ನು ರಚಿಸಿದರು. ನಾವು ಕಲ್ಯಾಣ ಕ್ರಾಂತಿಯ ಉಪನಿಷ್ಪತ್ತಿಗಳಾದ ವಚನ ಸಾಹಿತ್ಯದ ಪ್ರಭಾವ ತದನಂತರ ಬಂದ ದಾಸಸಾಹಿತ್ಯದ ಮೇಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಕೆಲವು ಕಡೆಗಳಲ್ಲಿ ಹರಿದಾಸರ ಪದ್ಯಗಳು ಶರಣರ ವಚನಗಳ ತದ್ರೂಪ ಪ್ರತಿಗಳಾಗಿರುವುದನ್ನು ನಾವು ನೋಡಬಹುದು. ಶರಣರ ಸ್ವರವಚನಗಳನ್ನು ಸ್ಥೂಲವಾಗಿ ಅನುಸರಿಸಿ ಹಾಗೂ ಅನುಕರಿಸಿ ಹರಿದಾಸರು ಉಗಾಭೋಗಗಳನ್ನು ರಚಿಸಿದ್ದಾರೆಂದು ಈ ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸಿ ನಿರ್ಧರಿಸಬಹುದು :

ವಚನ

" ನಾಳೆ ಬಪ್ಪುದು ನಮಗಿಂದೆ ಬರಲಿ, 
ಇಂದು ಬಪ್ಪುದು ನಮಗೀಗಲೆ ಬರಲಿ, 
ಇದಕಾರಂಜುವರು, ಇದಕಾರಳುಕುವರು 
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ 
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ."

ಪುರಂದರದಾಸರು ಬಸವಣ್ಣನವರ ಮೇಲಿನ ವಚನದ ತದ್ರೂಪ ಉಗಾಭೋಗವನ್ನು ಈ ರೀತಿ ರಚಿಸಿದ್ದಾರೆ :

" ಇದಕಾರಂಜುವರೋ ಗೋಪಾಲ?
ಇದಕಾರಂಜುವರೋ, ನಾಳೆ ಬಾಹೋದು
ಎಮಗಿಂದೆ ಬರಲಿ, ಇಂದೆ ಬಾಹೋದು
ನಾಳೆ ಬರಲಿ, ಆಗ ಬಾಹೋದು
ಎಮಗೀಕ್ಷಣ ಬರಲಿ ಯಾತರ ಭಯವು,
ಅಚಲಾನಂದವಿಠಲ." 

ಮೇಲಿನ ಬಸವಣ್ಣನವರ ವಚನ ಮತ್ತು ಪುರಂದರದಾಸರ ಉಗಾಭೋಗಗಳನ್ನು ಗಮನಿಸಿದಾಗ ಬಸವಾದಿ ಶರಣರ ವಚನಗಳ ಪರಿಚಯ ಹರಿದಾಸರಿಗೆ ಇರುವುದು ಸಾಬೀತಾಗುವುದಷ್ಟೇ ಅಲ್ಲದೆ ಆ ವಚನಗಳ ದಟ್ಟ ಪ್ರಭಾವ ದಾಸರ ಪದ್ಯಗಳ ಮೇಲಾಗಿರುವುದನ್ನು ಕಾಣಬಹುದು. ಅದಕ್ಕೆ ಸಾಕ್ಷಿಯಾಗಿ ಮತ್ತೊಂದು ಉದಾಹರಣೆಯನ್ನು ಗಮನಿಸಬಹುದು :

ವಚನ

" ಹರಿವ ಹಾವಿಂಗಂಜೆ, ಉರಿಯ ನಾಲಿಗೆಗಂಜೆ, 
ಸುರಗಿಯ ಮೊನೆಗಂಜೆ, 
ಒಂದಕ್ಕಂಜುವೆ, ಒಂದಕ್ಕಳುಕುವೆ 
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. 
ಮುನ್ನಂಜದ ರಾವಣನೇ ವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ."

ಮೇಲಿನ ಬಸವಣ್ಣನವರ ವಚನವನ್ನು ಹೋಲುವ ಪುರಂಧರದಾಸರ ಮತ್ತೊಂದು ಉಗಾಭೋಗ ಈ ಕೆಳಗಿನಂತಿದೆ :

" ಉರಿಗಂಜೆ, ಸಿರಿಗಂಜೆ
ಶರೀರದ ಭಯಕಂಜೆ
ಪರಧನ ಪರಸತಿ ಎರಡಕ್ಕಂಜುವೆನಯ್ಯ
ಹಿಂದೆ ಮಾಡಿದ ರಾವಣನೇನಾಗಿ ಪೋದನು
ಮುಂದೆನ್ನ ಸಲಹಯ್ಯ ಪುರಂದರವಿಠಲ.

ಮೇಲ್ಕಾಣಿಸಿದ ಬಸವಣ್ಣನವರ ಎರಡು ಪ್ರಮುಖ ವಚನಗಳ ತದ್ರೂಪದ ಪುರಂದರದಾಸರ ಉಗಾಭೋಗಗಳನ್ನು ಅವಲೋಕಿಸಿದಾಗ ಬಸವಾದಿ ಶರಣರ ವಚನಗಳ ಗಾಢವಾದ ಪ್ರಭಾವ ಹರಿದಾಸ ಸಾಹಿತ್ಯದ ಮೇಲಾಗಿತ್ತು ಎನ್ನುವುದು ಸರ್ವವಿಧಿತ. 

ಪುರಂದರದಾಸರು ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರೆಂದೇ ಖ್ಯಾತನಾಮರು. ಅವರ ಅನೇಕ ದೇವರನಾಮಗಳ ಮೇಲೆ ಶರಣರ ವಚನಗಳೊಳಗಿನ ತತ್ವಸಾರಗಳು ಶಬ್ಧಸಹಿತ ಬಿಂಬಿತವಾಗಿದ್ದನ್ನು ಕಾಣಬಹುದು. ಅಷ್ಟೇ ಅಲ್ಲವೆ ಪುರಂದರದಾಸರು ತಮ್ಮೊಂದು ದೇವರನಾಮದಲ್ಲಿ ತಮ್ಮನ್ನು ತಾವು 'ಜಂಗಮರು'ˌ ' ಲಿಂಗವಂತರು ', ' ವಿರಕ್ತರು', ' ಶೀಲವಂತರು', ಎಂದು ಮುಂತಾಗಿ ಶರಣ ಧರ್ಮದ ಬಹುಮುಖ್ಯ ಸಾಂಕೇತಿಕ ಶಬ್ಧಗಳಿಂದ ಕರೆದುಕೊಂಡ ಉದಾಹರಣೆ ನಮ್ಮ ಮುಂದಿದೆ. ಪುರಂದರದಾಸರ ಆ ದೇವರನಾಮ ಕೆಳಗಿನಂತಿದೆ :

" ಜಂಗಮರು ನಾವು ಜಗದೊಳು
ಜಂಗಮರು ನಾವು ˌ ಲಿಂಗಾಂಗಿಗಳು
ಮಂಗಳವಂತರು ಭವಿಗಳೆಂತೆಂಬಿರಿ
ಹರ ಗುರು ದೈವಕೇಶವ ನಮ್ಮ ಮನೆದೈವ
ವರದ ಮೋಹನ ಗುರುಶಾಂತೇಶ
ಹರಗುರು ದ್ರೋಹ ಮಾಡಿದ ಪರವಾದಿಯು
ರೌರವ ನರಕದಿ ಮುಳುಗುವುದೆ ˌ ಸಿದ್ಧ
ವಿಭೂತಿ ನಮಗುಂಟುˌ ವಿಶ್ವೇಶ ನಮಗುಂಟುˌ
ಶೋಭನನಾಮ ಮುದ್ರೆಗಳುಂಟುˌ
ಶ್ರೀಭಾಗೀರಥಿಯಗಣಿತ ಮಜ್ಜನವುಂಟುˌ
ಸೌಭಾಗ್ಯವೀವ ಮಹಂತನ ಮಠದವರು ನಾವು
ವಿರಕ್ತರು ನಾವು ಶೀಲವಂತರು ನಾವು
ವೀರಭದ್ರಪ್ರಿಯ ಭಕ್ತರು ನಾವು
ಕಾರಣಕರ್ತ ಶ್ರೀ ಪುರಂದರವಿಠಲನ
ಕಾರುಣ್ಯಕೆ ಮುಖ್ಯಪಾತ್ರರು ನಾವು."

ಈ ರೀತಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಹು ವ್ಯವಸ್ಥಿತವಾಗಿ ಘಟಿಸಿಹೋದ ಶರಣರ ವಚನ ಚಳುವಳಿ ನಮ್ಮ ಸಮಕಾಲೀನ ಸಮಾಜದ ಮೇಲೆ ತನ್ನ ನಿರಂತರ ಪ್ರಭಾವವನ್ನು ಬೀರುತ್ತಲೆ ಇದೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಶರಣರು ಬರೆದಿಟ್ಟ ವಚನಗಳು ನಮಗೆ ಸತ್ಯದರ್ಶನವನ್ನು ಮಾಡಿಸುವುದಲ್ಲದೆ ನಮಗಿರುವ ಅಸಂಖ್ಯಾತ ಪ್ರಶ್ನೆಗಳಿಗೆಲ್ಲ ಉತ್ತರಿಸುವುದು ವಿಶೇಷವಾಗಿದೆ. ಕಲ್ಯಾಣ ಕ್ರಾಂತಿಯ ತದನಂತರದ ದಿನಗಳಲ್ಲಿ ಸ್ಥಗಿತವಾಗಿದ್ದ ವಚನ ಚಳುವಳಿಯ ಚಟುವಟಿಕೆಗಳು ಯಡೆಯೂರ ಸಿದ್ಧಲಿಂಗ ಯತಿಗಳಿಂದ ಪುನರುತ್ಥಾನಗೊಂಡು ಅದು ದಾಸರ ಹರಿದಾಸ ಸಾಹಿತ್ಯ ಮೇಲೂ ತಮ್ಮ ಅಚ್ಛಳಿಯದ ಛಾಪನ್ನು ಮೂಡಿಸಿದ್ದು ನಾವು ಕಾಣಬಹುದಾಗಿದೆ. ಮುಂದೆ ಡಾ. ಫ ಗು ಹಳಕಟ್ಟಿಯವರ ಅವಿರತ ಶ್ರಮದಿಂದ ಸಂಗ್ರಹಗೊಂಡ ಶರಣರ ವಚನ ರಾಶಿ ಕನ್ನಡ ಸಾರಸ್ವತಲೋಕವನ್ನಷ್ಟೇ ಶ್ರೀಮಂತಗೊಳಿಸದೆ ನಾಡಿನಲ್ಲಿ ಮತ್ತೆ ಶರಣರು ಬಿತ್ತಿದ ಸಮತಾವಾದದ ಬೀಜಗಳು ಮೊಳಕೆಯೊಡೆಯಲು ಆರಂಭಿಸಿದವು. ಶರಣರ ವಚನ ಚಳುವಳಿಯ ಪ್ರಭಾವ ನಿತ್ಯನೂತನ ಮತ್ತು ಎಂದೆಂದಿಗೂ ಅನ್ವಯವಾಗುವ ಜೀವಸೆಲೆ. ಪ್ರಸ್ಥುತ ಮತೀಯವಾದಿಗಳ ಅಟ್ಟಹಾಸದ ಸಂಕೀರ್ಣ ಕಾಲಘಟ್ಟದಲ್ಲಿ ಮತ್ತೆ ಶರಣ ಚಳುವಳಿಯ ಮರುಸ್ಥಾಪನೆಗೆ ಕಾಲ ಪರಿಪಕ್ವವಾಗಿದೆ ಎನ್ನುವುದು ನನ್ನ ಅನಿಸಿಕೆ.