ಮಳೆಯೇ ಬರದಂತಾದರೆ ನೀರೆಲ್ಲಿ ?

ಮಳೆಯೇ ಬರದಂತಾದರೆ ನೀರೆಲ್ಲಿ ?

ಅಣೆಕಟ್ಟುಗಳು ಬೇಡ.ಹೀಗೆಂದಾಕ್ಷಣ ಆಣೆಕಟ್ಟಿನಲ್ಲಿ ತರುಬಿದ ನೀರಿನಿಂದ ಭತ್ತ, ತೆಂಗು,ಅಡಕೆ ಬೆಳೆಯುತ್ತಿರುವ ಲಕ್ಷಾಂತರ ಕೃಷಿಕರು ಹಾಗೂ ಆಣೆಕಟ್ಟುಗಳ ನೀರನ್ನವಲಂಬಿಸಿಯೇ ಕಾರ್ಖಾನೆ ನಡೆಸುತ್ತಿರುವ ಉದ್ಯಮಿಗಳೂ ಕೆರಳಿಬಿಡಬಹುದು.ಕೆರಳಿಸುವ ಉದ್ದೇಶದಿಂದ ಹೀಗೆ ಹೇಳಲಿಲ್ಲ. ಆಣೆಕಟ್ಟುಗಳೇ ಸ್ವತಃ ಜಲ ಸ್ಫುರಿಸುವುದಾಗಿದ್ದರೆ ಅವುಗಳನ್ನು ನಿರಾಕರಿಸುವ ಮಾತಾಡುವುದು ಹುಚ್ಚೇ ಆಗಬಹುದಿತ್ತು.ಆದರೆ ನೆಲಕ್ಕೆ ನೀರು ಬರುವುದು ಮಳೆಯಿಂದ. ಮಳೆ ಬರಬೇಕೆಂದರೆ ಮೋಡ ತಡೆಯುವ ದಟ್ಟ ಕಾಡು, ಎತ್ತರದ ಪರ್ವತ ಶ್ರೇಣಿಗಳು ಇರಲೇಬೇಕು.

ಆಧುನಿಕ ಯಂತ್ರ ನಾಗರಿಕತೆ ಅಡಿಯಿಟ್ಟು ಆಣೆಕಟ್ಟು ನಿರ್ಮಿಸಿದಾಗ ಬಹು ದೊಡ್ಡ ವಿಸ್ತೀರ್ಣದ ಕಾಡು ಮುಳುಗಡೆಯಾಗಿದ್ದು ಗೊತ್ತಿಲ್ಲದ ಸಂಗತಿಯೇನಲ್ಲ.ಅದೇ ಆಧುನಿಕತೆಯ ಬಳುವಳಿಯಾಗಿ ಸ್ಥಾಪಿತವಾದ ಕೈಗಾರಿಕೆಗಳು ಸಹಜ ಜೀವನಕ್ರಮವನ್ನೇ ಪಲ್ಲಟಗೊಳಿಸಿ 'ಹಣ'ವನ್ನೇ ಬದುಕಿನ ಕೇಂದ್ರ ನೆಲೆಗೆ ತಂದವು. ಅದರ ಒತ್ತಡದ ಪರಿಣಾಮ ಒಟ್ಟೂ ಪರಿಸರದೊಂದಿಗೆ ಧನದಾಹಿಗಳ ಅನೈತಿಕ ಚಟುವಟಿಕೆಗಳು ಶುರುವಾದವು.ಕಾಡು ನಾಶವಾದವು.ಪರ್ವತಗಳು ಬೋಳಾದವು.ಕೆರೆ, ಕಟ್ಟೆ,ಬಾವಿ ಮುಂತಾದ ಚಿಕ್ಕ ಚಿಕ್ಕ ಜಲಮೂಲಗಳು ಬತ್ತಿ ಹೋದವು.ಇದೆಲ್ಲದರ ಫಲ ನಿಯಮಿತವಾಗಿ ಪುನರಾವರ್ತನೆಗೊಳ್ಳುತ್ತಿರುವ ಬರಗಾಲ. ಸದ್ಯಕ್ಕಂತೂ ಒಂದು ವರ್ಗ ತನ್ನ ಬಳಿಯಿರುವ ಅನೈತಿಕ ಸಂಪತ್ತಿನ ಸಮೃದ್ಧತೆಯಿಂದಾಗಿ ಬರಗಾಲ,ಜಲಕ್ಷಾಮ ಮುಂತಾದ ಸಂಕಷ್ಟಗಳಿಗೆ ಬಾಯುಪಚಾರದ ಅಸೂಕ್ಷ್ಮ ಸ್ಪಂದನೆ ಹೊರತುಪಡಿಸಿದರೆ ಹೆಚ್ಚು ತಲೆ ಕೆಡಿಸಿಕೊಂಡತೇನೂ ಕಾಣುತ್ತಿಲ್ಲ. ಬದಲಾಗಿ ತನ್ನ ಕೈಯಲ್ಲಿರುವ ಯಂತ್ರ ಜ್ಞಾನವನ್ನು ಬಳಸಿಕೊಂಡು, ಒಟ್ಟೂ ಜನತೆಯನ್ನು ಅಡವಿಟ್ಟು ನೂರಾರು ಸಾವಿರಾರು ಕಿಲೋಮೀಟರ್ ದೂರದಿಂದ ನೀರು ಗೆಬರಿಕೊಂಡು ಬರುವ ಯೋಜನೆ ರೂಪಿಸುವ ಚಿಂತನೆಯಲ್ಲಿದೆ. ನಿಜ ಇದ್ದರೆ ಯಂತ್ರ ಯುಗದಲ್ಲಿ ಎಲ್ಲಿಂದಲಾದರೂ ನೀರು ತರಬಹುದೇನೋ! ಆದರೆ ಅದಕ್ಕೆ ತಗಲುವ ವೆಚ್ಚ ಭರಿಸುವವರಾರು? ಮಳೆಯೇ ಬರದಂತಾದರೆ ನೀರೆಲ್ಲಿ

ನಶಿಸುತ್ತಿರುವ ಕಾಡಿನ ಬಗ್ಗೆ ಕಿಂಚಿತ್ತೂ ಜವಾಬ್ದಾರಿ ತಾಳದೆ ಹೋದರೆ ಆಣೆಕಟ್ಟುಗಳ ಬಲದಿಂದ ಬೆಳೆದು ನಿಂತ ಸಬಲರೂ ದುರ್ಬಲರೂ ಭವಿಷ್ಯದಲ್ಲಿ ನೀರಿಗಾಗಿಯೇ ಬಡಿದಾಡಿ ವಿನಾಶ ಹೊಂದಲಾರೆವೆಂಬ ಖಾತ್ರಿ ಯಾರಿಗಾದರೂ ಇದೆಯೇ?

ಹಾಗಾಗಿ ಸುರಿದ ಮಳೆನೀರನ್ನು ಜತನದಿಂದ ಕಾಪಾಡಿಕೊಳ್ಳದಿದ್ದರೆ, ಅಲ್ಲಲ್ಲಿ ಇಂಗಿಸದಿದ್ದರೆ, ಕಿಂಚಿತ್ತೂ ಮುನ್ನೋಟವಿಲ್ಲದ ಇಂದಿನ ಆಧುನಿಕ ಜಂಜಡದಲ್ಲಿ ಇಂದಿನ ನಿದ್ರೆಯೇ ನಾಳಿನ ಸಾವಾಗಬಹುದಲ್ಲವೇ?

ಇದೀಗ ಲಿಂಗನಮಕ್ಕಿಯಿಂದ ಹತ್ತಾರು ಸಾವಿರ ಕೋಟಿ ಸುರಿದು ಬೆಂಗಳೂರಿಗೆ ನೀರೊಯ್ಯಬೇಕೆಂಬ ವಿಷಯ ಸುದ್ದಿಯಲ್ಲಿದೆ.ತುಂಗಭದ್ರೆಯಿಂದಲೂ ನೀರೊಯ್ಯುವ ಮಾತು ಕೇಳಿ ಬರುತ್ತಿದೆ. ತನ್ನೊಡಲಲ್ಲೇ ಇದ್ದ ಅನೇಕ ಕೆರೆಗಳ ನುಂಗಿ ಬೃಹತ್ತಾಗಿ ಬೆಳೆದ ಬೆಂಗಳೂರು ಅಭಿವೃದ್ಧಿ ಎಂಬ ಖಡ್ಗದಿಂದ ತನ್ನನ್ನೇ ತಾನು ನಿತ್ಯ ಇರಿದುಕೊಂಡು ಗಾಯ ಮಾಡಿಕೊಳ್ಳುತ್ತಾ ಮುಲಾಮಿಗಾಗಿ ಮಲೆನಾಡನ್ನೋ ಬಯಲು ಸೀಮೆಯನ್ನೋ ಗಾಯಗೊಳಿಸಲು ಯೋಚಿಸುತ್ತಿದೆ. ಅಭಿವೃದ್ಧಿಯ ತರ್ಕಗಳೇ ಹೀಗಲ್ಲವೇ?

ಮಾಯದ ಗಾಯಗಳು ವಿರಾಡ್ರೂಪ ಅನೇಕ ಬಗೆಯದು.ಅನ್ನ ಬೆಳೆಯುವ ಫಲವತ್ತಾದ ನೆಲವನ್ನು ಕೈಗಾರಿಕೆಗಳು ನುಂಗುವುದು; ಜೀವಸಂಕುಲ ಪೊರೆವ ಮಲೆ ಕಾಡುಗಳನ್ನು ಗಣಿಗಾರಿಕೆ ಹತ್ಯೆಗೈಯುವುದು;‌ ಚಿಕ್ಕ ಪಟ್ಟಣಗಳು,ದೊಡ್ಡ ಹಳ್ಳಿಗಳು ಕೆರೆ ಕಟ್ಟೆ ಗೋಮಾಳ ಸಾಲದು ಬಿದ್ದರೆ ಸ್ಮಶಾನಗಳನ್ನೂ ಕಬಳಿಸುವುದು....ಹೀಗೆ ಏಕಸ್ವರದ ವಿನಾಶದ ಮಂತ್ರಾದರ್ಶ ದಿಕ್ಕು ದಿಕ್ಕಿಗೂ ಮೊಳಗಿ ಹಿಡಿ ಕೂಳಿಗೆ,ಗುಟುಕು ನೀರಿಗೆ,ಒಂದುಸಿರಿಗೆ ಪೈಪೋಟಿಗಿಳಿಸಿ ಹಿಂಸೆಯ ನಿರ್ಮಿಸಬಲ್ಲ ನಿರ್ಮಾತೃವಾಗಬಲ್ಲದು.ಅಂತಹ ಕಾಲದ ಪಲ್ಲವಿ ಮುಗಿಸಿ ಚರಣಗಳ ಬರೆಯುತ್ತ ಈಗಾಗಲೇ ಬಹುದೂರ ಸಾಗಿರುವ ನಾವು ನಮ್ಮ ಮಕ್ಕಳು ಮರಿಯ ಕಿರುಬೆರಳ ಹಿಡಿದು ಮಸಣಕ್ಕೆ ಸಾಗುತ್ತಿರುವುದು ನಿಜವಲ್ಲವೇ?

ಎಂದೋ ಬರೆದಿದ್ದ ನನ್ನದೇ ಕವಿತೆಯ "ಆ ಊರಿನಲ್ಲಿ ಜನಗಳು ಬದುಕುತ್ತಿಲ್ಲ.ಸಂತೆಯಲ್ಲಿ ಸಾವ ಮಾರಿ ಸಾವ ಗಳಿಸುತ್ತಾರೆ" ಸಾಲುಗಳು ಈಗ ನಿತ್ಯವೂ ಅನುರಣಿಸುತ್ತಿವೆ.ದೆಹಲಿಯಿಂದ ದೌಲತಾಬಾದ್ ಗೆ ಅಂದು ರಾಜಧಾನಿ ಸ್ಥಳಾಂತರಗೊಂಡಂತೆ ಬೆಂಗಳೂರು ಕೂಡ ಮುಂದೊಂದು ಕಾಲದಲ್ಲಿ ಯಾವುದಾದರೂ ನದಿ ದಂಡೆಗೆ ಬಂದು ಕೂತರೆ ಆಶ್ಚರ್ಯಪಡಬೇಕಿಲ್ಲ. ಕಾರ್ಪೊರೇಟೀಕರಣದ ಒಳಸಂಚನ್ನು ಬೇಧಿಸುವ ಮಾರ್ಗ ಮತ್ತೊಮ್ಮೆ ನಾವೆಲ್ಲರೂ 'ಗಾಂಧಿ'ಯಾಗುವುದರಲ್ಲಿದೆಯೇ?