ಇನ್ನು ಅಯೋಧ್ಯೆಯಲ್ಲಿ ಹೇಗಿರಬಲ್ಲ ನಿಮ್ಮ ರಾಮ !  

ಇನ್ನು ಅಯೋಧ್ಯೆಯಲ್ಲಿ ಹೇಗಿರಬಲ್ಲ ನಿಮ್ಮ ರಾಮ !  

ದಿನಾ ಬೆಳಿಗ್ಗೆ ಕಚೇರಿ ತಲುಪುತ್ತಲೂ ಪರಸ್ಪರ ಗುಡ್ ಮಾರ್ನಿಂಗುಗಳ ವಿನಿಮಯವಾಗುತ್ತಿದ್ದರೆ, ನಮ್ಮ ಅಕೌಂಟ್ಸ ಆಫೀಸರ್ ಚೋಪ್ರಾ ಮಾತ್ರ ಎಲ್ಲರಿಗೂ ರಾಗವಾಗಿ ’ಜೈ ಶ್ರಿ ರಾಮ್ ಹೇಳುತ್ತಿದ್ದರು. ಇಡೀ ಕೋಣೆಯಲ್ಲಿ  ಮರು ಉತ್ತರದ ಅನೇಕ ಜೈ ಶ್ರಿ ರಾಮ್ ಧ್ವನಿಗಳನ್ನು ಕೇಳಬಹುದಿತ್ತು.

ಉತ್ತರಭಾರತದ ಪರಂಪರೆಯಲ್ಲಿ ನಮಸ್ಕಾರದ ಬದಲಿಗೆ ಕೆಲವರು  ’ರಾಮ್ ರಾಮ್’ ಹೇಳಿದರೆ ಕೆಲವರು ’ರಾಧೆ ರಾಧೆ’ ಅನ್ನುತ್ತಾರೆ. ಅವರವರ ನಂಬಿಕೆ ಅವರವರ ಭಕುತಿಗೆ ಅನುಗುಣವಾಗಿ ಅಭಿವಾದಿಸುವ ರೂಢಿಯಿದೆ.   ಮೊನ್ನೆ ಮೆಟ್ಟಲಿನ ಮೇಲೆ ಸಿಕ್ಕ ರಮಜಾನಿ ;ರಾಮ್ ರಾಮ್ ಮೇಡಂ ಜಿ ’ ಹೇಳಿದಾಗ ನಾನೂ ರಾಮ ರಾಮ್ ರಮ್ಜಾನಿ, ಹೇಗಿದ್ದಿ ಎಂದು ಕುಶಲ ಸಮಾಚಾರವನ್ನು ಕೇಳುತ್ತಲೇ ಮೆಟ್ಟಲೇರತೊಡಗಿದೆ. ಆದರೆ  ರಾಮ ತಲೆ ಕೊರೆಯತೊಡಗಿದ್ದ.

ಸುಮಾರು ಎರಡು ದಶಕಗಳಿಂದಲೂ ನಾ ನೋಡುತ್ತಿರುವ ರಮಜಾನಿ ನಮ್ಮ ಕಂಪನಿಯ ಖಾಯಂ ಫೆಬ್ರಿಕೇಟರ್.  ಬಿಳಿ ಕುರ್ತಾ  ದೊಗಲೆ ಪೈಜಾಮ ಅವನ ಖಾಯಂ ದಿರಿಸು.  ಇತ್ತೀಚಿನ ವರ್ಷಗಳಲ್ಲಿ ರಮಜಾನಿ ಹೆಸರಿನ ಬಿಲ್ಲುಗಳು ಅವನ ಮಗ ಅಶ್ರಫ್ನ ಹೆಸರಲ್ಲಿ ಬಂದಾಗಲೆ  ನನಗೆ ಅವನು ಮುಸ್ಲಿಂ ಎಂದು  ಗೊತ್ತಾದದ್ದು.  

ಅವನಂತೆಯೇ ನಮ್ಮ ಕಂಪನಿಯ ಡ್ರೈವರ್ ಮುನ್ನಾ ಖಾನನನ್ನು ನಾವು ಪರ್ಚೇಸ್ ಆಫೀಸರ್ ಅಂತ ಚೇಷ್ಟೆ ಮಾಡುತ್ತೇವೆ. ಕಂಪನಿಯ ಎಲ್ಲ ಲೋಕಲ್ ಖರೀದಾರಿಯೂ ಅವನದೇ. ವಿಶ್ವಕರ್ಮ ದಿನದಂದು ಆಯುಧ ಪೂಜೆ ಮಾಡುತ್ತಾರೆ  ಇಲ್ಲಿ. ಅಂದು ಕಾರ್ಖಾನೆಗಳ ದುಡಿವ ಯಂತ್ರಗಳಿಗೆ ವಿರಾಮ. ಪ್ರತಿ ವರ್ಷ ಹೋಮ ಹವನ ಮಾಡಿ ಪ್ರಸಾದ ಹಂಚುತ್ತಾರೆ.  ಮುನ್ನಾಖಾನ್ ಹವನದ ಸಾಮಗ್ರಿ, ನೈವೇದ್ಯಕ್ಕೆ ( ಭೋಗ್ ಅನ್ನುತ್ತಾರೆ) ಹಣ್ಣು ಹಂಪಲು , ಬೂಂದಿಲಾಡು ತಂದರೆ ಪೂಜೆ ನೆರವೇರೀತು. ಬೇಕಾದರೆ ಪೂಜಾರಿಯ ವ್ಯವಸ್ಥೆಯನ್ನೂ ಅವನೇ  ವಹಿಸಬಲ್ಲ.

ಹಾಗೆಯೇ ಮೇ ಜೂನ್ ತಿಂಗಳ ಉರಿಬಿಸಿಲಲ್ಲಿ ಸಿಖ್ಕರ ಗುರು ಅರ್ಜುನ ದೇವ್  ಹುತಾತ್ಮರ ದಿನದಂದು ಹಂಚುವ ಸಿಹಿ ಪಾನಕ – ಛಬೀಲ್ ಗೆ  ( ರೂಹಾಬ್ಜಾ ಮತ್ತು  ಹಾಲು ಬೆರೆಸಿದ ನೀರು ) ಹಾಲು, ರೂಹಾಬ್ಜಾ,  ಕಿಲೋಗಟ್ಟಲೆ ಐಸ್ ಸ್ಲ್ಯಾಬ್ ತರುವುದಲ್ಲದೇ ದೊಡ್ದ ದೊಡ್ದ ಡ್ರಮ್ಮಿನಲ್ಲಿ  ಆ ಪದಾರ್ಥಗಳನ್ನೆಲ್ಲ ಹಾಕಿ ಕಲೆಸುವುದಕ್ಕೂ ಮುನ್ನಾ ಖಾನ್ ನೆರವಾಗುತ್ತಾನೆ. ಇಷ್ಟು ವರ್ಷಗಳಲ್ಲಿ ನಮಗೆ ಮುನ್ನಾಖಾನ್, ರಾಜೂ ಖಾನ್ ನಡುವೆ ಧರ್ಮದ ನೆನಪು ಬಂದಿದ್ದೇ ಇಲ್ಲ. 

ಮುನ್ನಾ ತನ್ನ ಹೆಂಡತಿ ಆಯೇಷಾ ಮಾಡುವ ಮೂಲಂಗಿ ಪರೋಟಾವನ್ನು ಹೊಗಳುವಾಗ, ತಗೊಂಡು ಬಾ ಮುನ್ನಾ ಅಂತ ದುಂಬಾಲು ಬೀಳುತ್ತೇವೆ. ಅವನ ರಾಮ್ ರಾಮ್, ರಾಧೆ ರಾಧೆ ಹೇಳುವುದನ್ನು ಯಾರೂ ಯಾವತ್ತೂ ಆಕ್ಷೇಪಿಸಿದ್ದೂ ಇಲ್ಲ.  ನಮಗಿಲ್ಲಿ ಅಸ್ಸಲಾಂ ವಾಲೆಕುಂ ಅನ್ನುವುದು, ಸಿಖ್ ಸ್ನೇಹಿತರಿಗೆ ’ಸತ್ ಶ್ರೀ ಅಕಾಲ್’ ಅನ್ನುವುದು ಎಲ್ಲವೂ – ನಮಸ್ಕಾರದಷ್ಟೇ  ಸಿಹಿಯಾದ ಪದಗಳು.  

ಇದೇ ರೀತಿ ನಮ್ಮ ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ಕರ್ನಾಟಕ ಫುಡ್ ಸೆಂಟರ್ ಇದೆ.  ಅದಕ್ಕೂ ನಾಲ್ಕೋ ಐದೋ  ದಶಕಗಳ ಇತಿಹಾಸವಿರಬೇಕು. ಅದರ ಮಾಲೀಕರು ಶೇಖರ್ ಬಂಗೇರಾ. ಅಲ್ಲಿ  ನಮ್ಮೆಲ್ಲರ ಅಚ್ಚುಮೆಚ್ಚಿನ ಶರೀಫ್ ಇದ್ದಾರೆ. ಚೌತಿ ಗಣಪನ ಪೂಜೆ ನೈವೇದ್ಯಕ್ಕೆ ರುಚಿರುಚಿಯಾದ  ಕಜ್ಜಾಯ, ಪಾಯಸಗಳ ಉಸ್ತುವಾರಿಯೆಲ್ಲ  ಶರೀಫ್ ನದೇ.  ಶುಕ್ರವಾರ ಮಧ್ಯಾಹ್ನ ಮಾತ್ರ ಶರೀಫ್ ಸಿಗುವುದಿಲ್ಲ. ತಪ್ಪದೇ ನಮಾಜಿಗೆ ಹೋಗಿರುತ್ತಾನೆ.   ಅವನ ಕುಟುಂಬವೆಲ್ಲ ಊರಲ್ಲಿದೆ.    

ಹೀಗೆ ಸಾಮಾನ್ಯ ಜನರ ಜೀವನ ಸೌಹಾರ್ದಯುತವಾಗಿಯೇ ಇದೆ. ಅದಕ್ಕೆ ಧರ್ಮದ ಬಣ್ಣ ಬಳಿದು ಅಶಾಂತಿಯನ್ನು ಹರಡುತ್ತಿರುವವರು ಆಡಳಿತದಲ್ಲಿರುವವರು ಮತ್ತು ತಮ್ಮ ಸ್ವಾರ್ಥಸಾಧನೆಗಾಗಿ ಅವರನ್ನು ಓಲೈಸುವ ಪೋಲಿ ಪುಂಡರ ಗುಂಪುಗಳು. 

ಬಾಲ್ಯದಲ್ಲಿ  ವಾರಕ್ಕೊಮ್ಮೆಯಾದರೂ ಪೂಜೆ ಮಾಡುವ ಕೆಲಸವನ್ನು ಅವ್ವ ನನಗೆ ವಹಿಸುತ್ತಿದ್ದಳು.  ಆಗ ರಾಮ ಲಕ್ಷ್ಮಣ ಸೀತಾ ಹನುಮಪ್ಪನ ಸಹಿತ ಗೋಡೆಯ ತುಂಬ ಆಸೀನರಾಗಿದ್ದ ಎಲ್ಲ ದೇವರುಗಳ ಪಟಕ್ಕೆ ಗಂಧ ಹಚ್ಚಿ ಹೂ ಏರಿಸಿ , ನೀಲಾಂಜನ ಬೆಳಗಿ ಪೂಜೆ ಮಾಡುವಾಗಲೂ ಗಮನ ಸೆಳೆಯದ ಈ ರಾಮ ಈಗೀಗ ಆತಂಕ ಹುಟ್ಟಿಸಿದ್ದಾನೆ.  

ಶಾಲೆಯ ಪಠ್ಯ ಕಥಾರೂಪ ಇತಿಹಾಸದಲ್ಲಿ ರಕ್ಕಸರನ್ನು ಸಂಹರಿಸಿದ ರಾಮ ಇಷ್ಟವಾಗುತ್ತಿದ್ದ.  ಕ್ಲಾಸಿನಲ್ಲಿ ’ಕಾದಿರುವಳು ಶಬರೀ ರಾಮ ಬರುವನೆಂದು’ ರಾಗವಾಗಿ ಹಾಡುವಾಗೆಲ್ಲ  ಭಕ್ತಿರಸದಲ್ಲಿ  ಮಿಂದು ಶಬರಿಯ ಎಂಜಲ ಹಣ್ಣನ್ನು ತಿಂದ ರಾಮನ ಮೇಲೆ ಅಕ್ಕರೆ ಉಕ್ಕಿದರೆ,  ಮುಂದೆ ತಿಳುವಳಿಕೆ ಬಂದಾಗ ’ಶರಪಂಜರ’ ಚಿತ್ರದ ಕಲ್ಪನಾ ’ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’ ಎಂದು ಎದೆ ಬಿರಿಯುವಂತೆ ಹಾಡುವಾಗ ನಮಗೆ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಹರಿಯುತ್ತಿತ್ತು.  ಆಗ ಸೀತೆಯನ್ನು ಕಾಡಿಗಟ್ಟಿದ ಈ ರಾಮ ಎಂಥಾ ಕೆಟ್ಟ ರಾಮ ಅನಿಸುತ್ತಿತ್ತು. ಆದರೂ ರಾಮ ಸೀತೆ ಲಕ್ಷ್ಮಣ ಹನುಮಂತರು ನಮ್ಮವರಾಗಿದ್ದರು. 

ಇಲ್ಲಿ ಉತ್ತರಭಾರತದ ವಾಸ್ತವ್ಯದಲ್ಲಿ  ದಸರೆಯ ಹೊತ್ತಿಗೆ ಆಯಾ ಕಾಲೋನಿಗಳ ಹುಡುಗರು  ವೇಷಹಾಕಿ ಒಂಬತ್ತು ದಿನಗಳ ಕಾಲ ’ರಾಮಲೀಲಾ’ ಎಂಬ ರಾಮಾಯಣದ ಪ್ರಸಂಗಗಳನ್ನು ರಾತ್ರಿಯಿಡೀ ನಟಿಸಿ ಹಾಡಿ ಪ್ರದರ್ಶಿಸುವುದನ್ನು ನಾನೂ ಮೊದಮೊದಲಿನ ದಿನಗಳಲ್ಲಿ ಹೋಗಿ ನೋಡಿದ್ದೇನೆ.  ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿವರ್ಷ ನಡೆಯುವ ರಾಮಲೀಲಾ ಪ್ರದರ್ಶನದ ಜನಪ್ರಿಯತೆ ಈಗಲೂ ಇದೆ. ರಾಜಕೀಯ ಪ್ರಮುಖರೂ ಅದರಲ್ಲಿ ಮಿಂಚುತ್ತಾರೆ. ಇದೊಂದು ಪ್ರಮುಖ ಸಾಂಸ್ಕೃತಿಕ ಆಚರಣೆ.  

ರಾಮನ ಪಕ್ಕದಲ್ಲಿನ ಸೀತೆ,ಲಕ್ಷ್ಮಣರನ್ನು ನೇಪಥ್ಯಕ್ಕೆ ಸರಿಸಿ ಬಿಲ್ಲುಧಾರಿ ರಾಮನ ಪ್ರತಿಮೆಯನ್ನು ಕಟ್ಟಹೊರಟಿದೆ ಯೋಗಿ ರಾಜ್ಯ. ಸೀತೆಯಿರದ ರಾಮನಿಗೆ ಯಾವ ಸ್ಥಾನವೂ ಇಲ್ಲ ಸಂಪ್ರದಾಯಿಗಳಿಗೆ. ಮರ್ಯಾದಾ ಪುರುಷೋತ್ತಮ, ರಘುಕುಲ ತಿಲಕ, ದಶರಥ ನಂದನ, ಅಕಳಂಕ ಸೀತಾರಮಣನನ್ನು ಆರೆಸ್ಸೆಸ್, ವಿಹೆಚ್ಪಿ , ಎಬಿವಿಪಿ ಮತ್ತು ಭಜರಂಗ್ ದಳಗಳು ಹೈಜಾಕ್ ಮಾಡಿ ತಮ್ಮ ದುಷ್ಕರ್ಮಗಳಿಗೆ ರಾಮನೆಂಬ ಲೈಸೆನ್ಸ್ ಸಿಕ್ಕಿದೆಯೆಂದುಕೊಂಡಿದ್ದಾರೆ.    ’ಸಿಯಾವರ ರಾಮಚಂದ್ರ ಕೀ ಜೈ’  ಈಗ ಬರೀ ’ಜೈ ಶ್ರೀ ರಾಮ್’ ಆಗಿ ಥಳಿಸುವ ಹತ್ಯಾರಾಗಿದೆ. ಬಿಹಾರ್ ,ಉತ್ತರಪ್ರದೇಶದ ಅನೇಕ ಅನಕ್ಷರಸ್ಥರ ಬಾಯಲ್ಲಿ ತುಳಸಿ ರಾಮಾಯಣ,  ಸುಂದರಕಾಂಡ ಪಠಣ, ಕಬೀರನ ದೋಹೆಗಳನ್ನು ನಿರ್ಗಳವಾಗಿ ಬಾಯಿಪಾಠದಲ್ಲಿ ಕೇಳಬಹುದು.  ಎಲ್ಲಿದ್ದಾನೆ ಈ ಜನಮಾನಸದ ರಾಮ ಇಂದು ! 

1989ರಲ್ಲಿ ನಡೆದ ಮಹಾಕುಂಭ ಮೇಳ ಒಂದು ಪ್ರಮುಖ ಐತಿಹಾಸಿಕ ತಿರುವು. ಸಂಘ್ ಪರಿವಾರ ರಾಮನ ಹೆಸರನ್ನು ಬಳಸಿಕೊಂಡು ಜನರನ್ನು ಸಂಘಟಿಸಿತು. ’ಜೈ ಶ್ರೀ ರಾಮ್ ’ ಘೋಷಣೆಯೇ  ಸಂಘ ಪರಿವಾರದ ಮೂಲಮಂತ್ರವಾಗಿತ್ತು.  

ಮುಂದೆ  ರಾಮ ಜನ್ಮಭೂಮಿ ಆಂದೋಲನದಲ್ಲಿ ರಾಮನ ರಥವನ್ನು ಅಯೋಧ್ಯೆಯವರೆಗೂ ಕೊಂಡೊಯ್ದು,  ಬಾಬ್ರಿ ಮಸ್ಜಿದ್ ದ್ವಂಸಗೊಂಡು ಹಿಂಸಾಚಾರ ಭುಗಿಲೆದ್ದಿತು. ಆ ಕಾಲದಲ್ಲಿ ಮಕ್ಕಳಾಗಿದ್ದ ಕೆಲವರು ಈಗಲೂ ಅಂದಿನ ದೀರ್ಘ ಕರ್ಫ್ಯೂ, ಶಾಲೆಗಳಿಲ್ಲದೇ, ದಿನನಿತ್ಯದ ಹಾಲು ಹಣ್ಣು ತರಕಾರಿ ರೇಷನ್ ಸಿಗದೇ ಭಯಾನಕವಾಗಿದ್ದ ಸಾಮಾಜಿಕ ಜನಜೀವನವನ್ನು ನೆನೆಪಿಸಿಕೊಳ್ಳುತ್ತಾರೆ.  ಓಣಿ ಕೇರಿಗಳಲ್ಲಿ ಜನ ಸರತಿಯಂತೆ  ’ಜಾಗತೇ ರಹೋ’ ಎಂದು ತಟ್ಟೆ ಬಾರಿಸುತ್ತ ಕಾವಲು ಕಾಯುತ್ತಿದ್ದರಂತೆ.   

ಭಾರತೀಯ ಜನಮಾನಸದ ರಾಮನ ಕತೆಗಳು ನೂರಾರು. ಜಪಾನ, ಮಲೇಶಿಯಾ, ಇಂಡೋನೇಶಿಯಾ, ಜೈನ, ಬೌದ್ಧ, ಕ್ರೈಸ್ತ, ಆದಿವಾಸಿ, ಬುಡಕಟ್ಟು ಹೀಗೆ ಸಾವಿರಾರು ರಾಮ ಪುರಾಣಗಳಿವೆ. ರಾಮ ರಾಜ್ಯದ ಕನಸನ್ನು ಬಿತ್ತಿ ಸ್ವಾತಂತ್ರ್ಯದ ಚಳವಳಿಗೆ ಜನರನ್ನು ಬಡಿದೆಬ್ಬಿಸಿದ ಗಾಂಧೀಜಿಯ ರಾಮ ಭಾರತೀಯರ ಐಕ್ಯತೆಯ ಅಸ್ಮಿತೆಯ ಸಂಕೇತ. ಅಂಥ ಗಾಂಧೀಜಿಯ ಪ್ರತಿಮೆಗೆ  ಗುಂಡಿಟ್ಟು ಸಂಭ್ರಮಿಸಿ  ನಾಥೂರಾಮನನ್ನು ಪೂಜಿಸುವವರ ನಾಲಿಗೆಯಲ್ಲಿ  ರಾಮನಾಮವೂ ಬರಬಾರದಿತ್ತು  !   

ಉತ್ತರಭಾರತೀಯರ ಬದುಕಿನಲ್ಲಿ ದೇಶದ ವಿಭಜನೆ ಒಂದು ಆರಲಾರದ ಗಾಯ. ಅದರಲ್ಲೂ ಮುಸ್ಲಿಮರ ಪಾಲಿಗೆ ಮಗ್ಗಲಮುಳ್ಳು. ಸ್ವಾತಂತ್ರ್ಯದ ಎಪ್ಪತ್ತು ವರುಷಗಳ  ನಂತರವೂ ಅವರನ್ನು ಅನ್ಯರೆಂದೂ , ಅವರಿರಬೇಕಾದ ಸ್ಥಾನ ಪಾಕಿಸ್ತಾನ, ಇದು ಹಿಂದೂ ರಾಷ್ಟ್ರ ಹಿಂದೂಗಳಿಗೆ ಮಾತ್ರ ಎಂಬ ಪೂರ್ವಾಗ್ರಹ ಪೀಡಿತ ಮನಸುಗಳು ಕತ್ತಿಮಸೆಯುತ್ತಿರುವುದು ಇದೇ ರಾಮನ ಹೆಸರಿನಲ್ಲಿ. ಮುಸ್ಲಿಂ ಲೀಗಿನ ಪ್ರತಿಪಾದನೆಗಳು ವಿಭಜನೆಗೆ ಕಾರಣವಾದುವೋ ಇಲ್ಲ ಮುಹಮ್ಮದ ಅಲಿ ಜಿನ್ಹಾರ ಜಿದ್ದು, ನೆಹರೂರ ಸೋಲುವಿಕೆ ಅಥವಾ ಬ್ರಿಟಿಷರ ಒಡೆದು ಆಳುವ ನೀತಿಯೋ ಏನೇ ಆಗಿರಲಿ. ಆದರೆ ವಿಭಜನೆಯ ನಂಜಿನ ಹೊರೆಯನ್ನು ನಿರ್ಧಿಷ್ಟ ಸಮುದಾಯದ  ತಲೆಗೆ ಹೊರಿಸಿ ಅವರು ನರಳುವಂತೆ ಆಗಿದ್ದು ನಮ್ಮ ಮುಂದೆ ಘಟಿಸುತ್ತಿರುವ ಚರಿತ್ರೆ.   

ಬ್ರಿಟಿಷರು ಅಲ್ಪಸಂಖ್ಯಾತ ಸಮುದಾಯಕ್ಕೆ ತೋರುತ್ತಿದ್ದ ತಾರತಮ್ಯವನ್ನು ಗಮನಿಸಿದ್ದ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಮುಸ್ಲಿಂ  ಸಮಾಜ ಸುಧಾರಕ ಮತ್ತು ರಾಜನೀತಿಜ್ಞರಾಗಿದ್ದ ಸರ್ ಸೈಯ್ಯದ ಅಹಮದ್ ಖಾನ್ರು  - ಮುಸ್ಲಿಂರನ್ನು ಅನಾವಶ್ಯಕವಾಗಿ ರಾಜಕೀಯದಲ್ಲಿ ಧುಮುಕಬೇಡಿ, ಮೊದಲು ಶಿಕ್ಷಿತರಾಗಿ.  ನಿಮ್ಮ ಸಮುದಾಯಕ್ಕೆ ಶಿಕ್ಷಣದ ಮೂಲಕ ಅರಿವು ಮೂಡಿಸಿ ಎಂಬ ಕಿವಿಮಾತು ಹೇಳಿದ್ದರು. 

ಕಳೆದ ಒಂದು ತಿಂಗಳಲ್ಲಿ ರಾಮನ ಹೆಸರಿನಲ್ಲಿ ಜೈ ಶ್ರೀ ರಾಮ್ ಹೇಳಲು ಒತ್ತಾಯಿಸಿ ಜೀವ ಹೋಗುವಂತೆ  ಹೊಡೆದು ಕೊಂದ ಘಟನೆಗಳಲ್ಲಿ ಝಾರಖಂಡದ ತಬ್ರೆಜ್ ಅಂಸಾರಿ,  ಮುಂಬಾಯಿಯ ಡ್ರೈವರ್  ಉಸ್ಮಾನ್ ಖಾನ್,   ಪಶ್ಚಿಮ ಬಂಗಾಳದ ಶಾರುಖ ಹಲ್ದರ್ ಎನ್ನುವ ಮದರಸಾ ಶಿಕ್ಷಕನಿಗೆ ’ಜೈ ಶ್ರೀ ರಾಮ್ ’ಎನ್ನುವಂತೆ ಪೀಡಿಸಿ ಅವನು ಒಪ್ಪದಿದ್ದಾಗ ಓಡುವ ರೈಲಿನಿಂದ ಶಾರುಖನನ್ನು ತಳ್ಳಿ ಕೊಂದಿತ್ತು,  ಗುರುಗಾಂವ್, ದೆಹಲಿಯ ರೋಹಿಣಿ, ಬಂಗಾಲದಲ್ಲಿ ಜೈ ಶ್ರೀರಾಮ್ ಜೈಕಾರ ಹೇಳಲು ಒತ್ತಾಯಿಸಿದ  ಭಗವಾ ಗುಂಪುಗಳು ಅಮಾಯಕರನ್ನು ಬಲಿ ತೆಗೆದುಕೊಂಡಿವೆ.     

ನಮ್ಮ ಪ್ರಧಾನಿಗಳು ಜಾರ್ಖಂಡನ್ನು ಗುಂಪು ಥಳಿತದ ತಾಣ ಎಂದು ಬಿಂಬಿಸುವುದನ್ನು ಖಂಡಿಸುತ್ತ 'ಒಂದು ರಾಜ್ಯವನ್ನು ಅವಮಾನಿಸುವ ಅಧಿಕಾರ ನಮಗಾರಿಗೂ ಇಲ್ಲ' ಎಂದು ಅವರು ಹೇಳಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸಮನಾಗಿ ನೋಡಬೇಕು ಎನ್ನುವ ಮತ್ತೊಂದು ಸಲಹೆಯನ್ನೂ ನೀಡಿ ಗುಂಪುದಾಳಿಗಳ ದಿಕ್ಕನ್ನೇ ಬದಲಿಸಲು ಯತ್ನಿಸಿದ್ದು ವಿಷಾದನೀಯ.  

ಕಾನೂನಿಯ ಭಯವಿಲ್ಲದೇ ರಾಮನ ಹೆಸರಿನಲ್ಲಿ ಮತ್ತು ಗೋವಿನ ಹೆಸರಲ್ಲಿ ನಡೆಯುತ್ತಿರುವ ಹಲ್ಲೆಗಳು ಹೆಚ್ಚುತ್ತಿರುವ ಕಾಲದಲ್ಲಿ 2017ರಲ್ಲಿ ಒಂದು ಭೋಜಪುರಿ ಚಲನಚಿತ್ರ ಬಿಡುಗಡೆಯಾಗಿದೆ. ಚಿತ್ರದ ಹೆಸರು “ಪಾಕಿಸ್ತಾನ ಮೇ ಜೈ ಶ್ರೀ ರಾಮ್ “ ಅಂತೆ.  ರಾಮನ ಭಕ್ತನೊಬ್ಬ ಪಾಕಿಸ್ತಾನದಲ್ಲಿ ನುಸುಳಿ ಭಯೋತ್ಪಾದಕರನ್ನು “ಜೈ ಶ್ರೀ ರಾಮ್ ’ಎನ್ನುತ್ತ ವೀರಾವೇಶದಿಂದ ಕೊಲ್ಲುವ ಕಥೆ. ಕೊನೆಯಲ್ಲಿ ನಾಟಕೀಯವಾಗಿ ಶ್ರೀ ರಾಮನೇ ಪ್ರತ್ಯಕ್ಷನಾಗಿ ಭಯೋತ್ಪಾದಕ ಮುಖಂಡರುಗಳನ್ನು ಸಂಹರಿಸುತ್ತಾನಂತೆ.  ಇದಕ್ಕೆ ಮೊದಲು ಮುಸ್ಲಿಮರ ಬಹುಪತ್ನಿತ್ವ, ತ್ರಿವಳಿ ತಲಾಖಿನ ಬಗ್ಗೆಯೂ ಡೈಲಾಗುಗಳಿವೆಯಂತೆ ( ಯೂಟ್ಯೂಬಿನಲ್ಲಿ ಚಿತ್ರ ಲಭ್ಯವಿದೆ).  ಅದಕ್ಕೆ ತಕ್ಕಂತೆ  ಖತರ್ನಾಕ್ ಹಾಡುಗಳೂ ಇವೆ. ಇಲ್ಲಿ ಉಲ್ಲೇಖಿಸುತ್ತಿಲ್ಲ. 
ಹಿಂಸೆಯನ್ನು ಪ್ರಚೋದಿಸುವ ಚಿತ್ರಕ್ಕೆ ಅನುಮತಿ ಸಿಕ್ಕಿದ್ದು ಹೇಗೆ? ಕರಣಿ ಸೇನೆ, ರಾಮ ಸೇನೆಯಂಥ ಸೇನೆ”ಯವರು ಬಾಯಿಮುಚ್ಚಿಕೊಂಡಿದ್ದು ಏಕೆ ? ಚಿತ್ರವನ್ನು ನಿಷೇಧಿಸಿದ್ದರೋ ಇಲ್ಲವೋ ಇತ್ಯಾದಿ ಪ್ರಶ್ನೆಗಳನ್ನು ಯಾರಾದರೂ ಕೆಳಿದ್ದರೇ?  ಈ ಕುರಿತು ಯಾವ ವಿವರಣೆಯೂ ಇಲ್ಲ.    

ತಬ್ರೆಜ್ ಅನ್ಸಾರಿಯನ್ನು ಸತತ 18 ಗಂಟೆಗಳ ಕಾಲ ಹೊಡೆಯುವವರ ಎದೆಯಲ್ಲಿ ಮನುಷತ್ವ ಸತ್ತಿತ್ತು. ಅಷ್ಟು ಕಾಲ ಹೊಡೆಯುವಾಗಲೂ ಊರಿನ ಜನ ಹೇಗೆ  ನಿಂತು ನೋಡಿದರು? ಹದಿನೆಂಟು ತಾಸುಗಳ ತನಕ ಪೋಲಿಸ್ ಪಡೆ ಸತ್ತು ಹೋಗಿತ್ತೆ? ಪೋಲೀಸರಂತೂ ಬಿಕರಿಯಾಗಿದ್ಡಾರೆ ಆದರೆ ಊರ ಜನರಲ್ಲಿ ಒಬ್ಬನ ಕೈ, ಒಬ್ಬನ ಕಾಲಾದರೂ ಮುಂದೆ ಬರಲಿಲ್ಲವಲ್ಲ ಥಳಿಸುವಿಕೆಯನ್ನು ತಡೆಯಲು ? 

ಜಾರ್ಖಂಡದ ಮುಖ್ಯಮಂತ್ರಿ ಸಿಪಿ ಸಿಂಗ್ ಅವರ  ಉಡಾಫೆಯ ಮಾತುಗಳಂತೂ ಫ್ಯಾಸಿಸ್ಟರ ಕ್ರೌಯದ ಪ್ರತಿಲಿಪಿಯಂತಿವೆ.   ಹಿಂಸಾಚಾರಗಳನ್ನು ಬಿಜೆಪಿ, ಅರೆಸ್ಸೆಸ್ಸ್, ವಿಹೆಚ್ಪಿ ಮತ್ತು ಬಜರಂಗ ದಳಗಳಿಗೆ ತಳಕು ಹಾಕಿ ರಾಜಕೀಯ ಬಣ್ನಬಳಿಯುವ ಪಧ್ದತಿ ಖಂಡನೀಯ ಎಂದು ಮಾಧ್ಯಮ ಹೇಳಿಕೆ ನೀಡಿದ್ದರು.   ಅಷ್ಟು ಸಾಲದೇ ಅನ್ಸಾರಿಯನ್ನು ಥಳಿಸುತ್ತಿರುವ ವಿಡಿಯೋ ನಿಜವಾದದ್ದೋ ಅಥವಾ ಸೃಷ್ಟಿಸಿದ್ದೋ ಎಂಬ ಸತ್ಯಾಸತ್ಯತೆಯ ತನಿಖೆಯಾಗದೇ ಏನೂ ಹೇಳಲಿಕ್ಕಾಗದು ಎಂದು ಕೈತೊಳೆದುಕೊಂಡಿದ್ದರು. ಆಳುವವರ ಅ ಉಡಾಫೆಯನ್ನು ನೋಡಿದರೆ ಈ ದೇಶದ ಮನುಷ್ಯತ್ವಕ್ಕೆ ಹುಳ ಹಿಡಿದಿದೆ ಎನಿಸದೇ ಇರಲಾಗದು.  

ಮನುಷ್ಯತ್ವವಿರದ ಹೃದಯದಲ್ಲಿ ಯಾವ ದೇವರೂ ನಿಲ್ಲಲಾರ, ಇನ್ನು ಅಯೋಧ್ಯೆಯಲ್ಲಿ ರಾಮ ಹೇಗಿರಬಲ್ಲ !!