ಹಿಂದಿ ಹೇರಿಕೆ: 'ದ್ರಾವಿಡ ದೇಶ' ಬೇಡಿಕೆಗೆ ನಾಂದಿ..!?

ಉತ್ತರದ ಕೇಂದ್ರೀಕೃತ ತಾರತಮ್ಯಗಳನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯವನ್ನು ಗಮನಿಸಿ ದಕ್ಷಿಣಕ್ಕೇ ಒಂದು ರಾಜಧಾನಿಯನ್ನು ನೀಡಬೇಕೆಂದು ಕೂಡ ಅಂಬೇಡ್ಕರ್ ಅವರು ಪ್ರತಿಪಾದಿಸುತ್ತಾರೆ. ದಕ್ಷಿಣ ಭಾರತ ಎಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳವಷ್ಟೇ ಅಲ್ಲ. ಮಹಾರಾಷ್ಟ್ರ, ಗೋವಾ, ಒಡಿಶಾ, ಮತ್ತು ಅಂಡಮಾನ್ ನಿಕೋಬಾರ್ ನಂತಹ ಬಹುತೇಕ ಭಾಗ ದಕ್ಷಿಣದ ಜತೆಯೇ ಗುರುತಿಸಿಕೊಂಡು ಒಡನಾಟ ಇರಿಸಿಕೊಂಡಿವೆ.  

ಹಿಂದಿ ಹೇರಿಕೆ: 'ದ್ರಾವಿಡ ದೇಶ' ಬೇಡಿಕೆಗೆ ನಾಂದಿ..!?

ಕಾಶ್ಮೀರಕ್ಕೆ ಕೈಯಿಟ್ಟು 'ಯಶಸ್ವಿ' ಯಾದ ಷಾ - ಮೋದಿಗಳು ಈಗ ಭಾರತೀಯ ಪ್ರಾದೇಶಿಕ ಬಾಷೆಗಳ ಅಸ್ಮಿತೆಗೆ ಕೈ ಇಟ್ಟಿದ್ದಾರೆ! "ಒಂದು ದೇಶ ಒಂದು ಭಾಷೆ" ಎಂಬ ಸ್ಲೋಗನ್ ನಡಿ " ಹಿಂದಿ ಇಡೀ ದೇಶದ ಭಾಷೆ ಆಗಬೇಕು" ಎಂದು ಹಿಂದಿ ಹೇರಿಕೆಯನ್ನು ಕಡ್ಡಾಯಗೊಳಿಸುವ ಸ್ಪಷ್ಟ ಸೂಚನೆ ನೀಡಿರುವ ಕೇಂದ್ರ ಗೃಹಮಂತ್ರಿ ಅಮಿತ್ ಷಾ "..ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸಿಕೊಳ್ಳುವಂತೆ ಮಾಡಬಲ್ಲ ಒಂದು ಭಾಷೆಯ ಅಗತ್ಯವಿದೆ..." ಎಂದು ಆರಂಬಿಸಿ "ಜನ ಸ್ಥಳೀಯ ಬಾಷೆಯನ್ನು ಬೆಳೆಸುವುದರೊಂದಿಗೆ ಹಿಂದಿ ಭಾಷೆಯನ್ನು ಉಪಯೋಗಿಸುವ ಮೂಲಕ ಗಾಂಧೀಜಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕ ಭಾಷೆಯ ಕನಸನ್ನು ನನಸು ಮಾಡಬೇಕು.. ಹಿಂದಿ ಭಾಷೆಯು ಪ್ರತಿವ್ಯಕ್ತಿ, ಪ್ರತಿಮನೆಯನ್ನು ತಲುಪಬೇಕು. 2024 ರ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಈ ವಿಚಾರದಲ್ಲಿ ಮಹತ್ವದ ಪ್ರಗತಿ ಆಗಿರಬೇಕು" ಅಂದಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರಮೋದಿಯವರು "ಹಿಂದಿ ಭಾಷೆಯು ಸರಳ, ಸ್ವಾಭಾವಿಕ ಹಾಗೂ ತನ್ನ ಸೊಗಸಿನಿಂದ ಅರ್ಥಪೂರ್ಣ ಭಾಷೆ ಎನಿಸಿಕೊಂಡಿದೆ.." ಎಂದಿದ್ದಾರೆ. ಮಾಜಿ ಅಂಬೇಡ್ಕರ್ ವಾದಿ ಹಾಗೂ ಹಾಲಿ ಮನುವಾದಿಯಾದ ರಾಮವಿಲಾಸ್ ಪಾಸ್ವಾನ್ ತಮ್ಮ ನಾಯಕರನ್ನು ಪೊರೆಯುತ್ತಾ ಹಿಂದಿ ಭಾಷೆಯನ್ನು ದೇಶದ ಎಲ್ಲಾ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಕಡ್ಡಾಯಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕೆಂದು ಕರೆ ನೀಡಿದ್ದಾರೆ! ಇದು ನಾಗಪುರದ 'ಥಿಂಕ್ ಟ್ಯಾಂಕ್'ನಲ್ಲಿ ತೀರ್ಮಾನವಾಗದ ಹೊರತು ಈ ನಾಯಕರ ಬಾಯಲ್ಲಿ ವ್ಯಕ್ತವಾಗಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಹಿಂದಿ ಹೇರಿಕೆಯ ಆಲೋಚನೆಯ ಪ್ರಕ್ರಿಯೆಗೆ ಕರ್ನಾಟಕವನ್ನೂ ಸೇರಿಸಿದಂತೆ ಅನೇಕ ರಾಜ್ಯಗಳ ಪ್ರತಿರೋಧ ಈಗಾಗಲೇ ಪ್ರಕಟವಾಗಿದೆ. ಆದರೆ ತಮ್ಮ ಅಧಿಕಾರದ ಮಿಲಿಟರಿ, ಪೋಲೀಸ್ ಶಕ್ತಿಗಳಿಂದ ಕಾಶ್ಮೀರವನ್ನು ದಮನಿಸಿ, ನಿಭಾಯಿಸಿದ ಷಾ- ಮೋದಿಗಳು ಅಂದುಕೊಂಡಿದ್ದನ್ನು ಮಾಡುತ್ತಾರೆ ಎಂಬುದನ್ನು ಮರೆಯಬಾರದು. ನಾವಿಂದು ಮಾಡುತ್ತಿರುವ ಕೇವಲ ಸಾಂಕೇತಿಕ ಪ್ರತಿರೋಧದಿಂದ ಇವರು ಪ್ರತಿರೋಧಕ್ಕೆ ಸೊಪ್ಪು ಹಾಕುವವರಲ್ಲ, ಸುಮ್ಮನಿರುವಂತವರಲ್ಲ! ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಹಿಂದಿ ಹೇರಿಕೆಯ ಈ ಸಾಮ್ರಾಜ್ಯಶಾಹಿ ನಿಲುವನ್ನು ಇಡೀ ದೇಶದಲ್ಲೇ ಗಟ್ಟಿಯಾಗಿ ವಿರೋಧಿಸಿಕೊಂಡು ಬಂದ ಇತಿಹಾಸ ತಮಿಳುನಾಡಿಗಿದೆ. ಇಂದು ತಮಿಳಿನಾಡಿನ ಹಾದಿಯಲ್ಲಿ ಅನೇಕ ರಾಜ್ಯಗಳು ಜಾಗೃತವಾಗಿವೆ. ಆದರೆ ಈ ವಿಷಯದಲ್ಲಿ ತಮಿಳುನಾಡಿಗಿರುವ ಅರಿವು, ಬದ್ದತೆ, ಸ್ಪಷ್ಟತೆ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಕಂಡಾಗ ಈ ಹಿಂದಿ ವಿರೋಧಿ, ಹಾಗೂ ನಮ್ಮ ಭಾಷೆಗಳ ಸ್ವಾಭಿಮಾನಿ ಮತ್ತು ಆತ್ಮಗೌರವದ ದಕ್ಷಿಣ ರಾಜ್ಯಗಳ ಚಳವಳಿಯ ನಾಯಕತ್ವವನ್ನು ತಮಿಳುನಾಡೇ ತೆಗೆದುಕೊಂಡರೆ ಉತ್ತಮ ಎಂಬ ವೈಯಕ್ತಿಕ ಅಭಿಪ್ರಾಯ ನನ್ನದು!?

ಹಿಂದಿ ಹೇರಿಕೆಯ ವಿರುದ್ದ ತಮಿಳುನಾಡಿನಲ್ಲಿ ಆಂದೋಲನ ಆರಂಭವಾದದ್ದು 1937ರಲ್ಲಿ! ಶಾಲೆಗಳಲ್ಲಿ ಕಡ್ಡಾಯವಾಗಿ ಹಿಂದಿ ಕಲಿಸಬೇಕೆಂದಾಗ ಆಗಿನ ಸಿ.ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಜಸ್ಟೀಸ್ ಪಾರ್ಟಿ(ನಂತರ 'ದ್ರಾವಿಡ ಕಳಗಂ' ಆಯಿತು)ಯ ಪೆರಿಯಾರ್ ಇ.ವಿ.ರಾಮಸ್ವಾಮಿ ನಾಯ್ಕರ್ ನೇತೃತ್ವದಲ್ಲಿ. ಜಸ್ಟೀಸ್ ಪಾರ್ಟಿಯ ಮುಂಚೂಣಿಯಲ್ಲಿ ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಇದ್ದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ತಮಿಳುನಾಡಿನ ವಿರೋಧದಿಂದಾಗಿ ಸ್ವತಂತ್ರ ಭಾರತದ ಸಂವಿಧಾನದ ನಂತರ official language act 1963 ಜಾರಿಗೆ ತಂದು 1965ರವರೆಗೂ ರಾಷ್ಟ್ರದ ಆಗುಹೋಗುಗಳನ್ನು ಇಂಗ್ಲಿಷ್ ನಲ್ಲೇ  ಮುಂದುವರೆಸಿ ನಂತರ ಹಿಂದಿಯನ್ನು ಕಡ್ಡಾಯವಾಗಿ ತರುವುದೆಂದು ನೆಹರು ನೇತೃತ್ವದ ಸರ್ಕಾರ ನಿರ್ಣಯಿಸಿತು. 26 ಜನವರಿ 1965ರಂದು ಅಧಿಕೃತವಾಗಿ ಹಿಂದಿಯನ್ನು ತರಬೇಕೆಂದಾಗ ಮತ್ತೆ ತಮಿಳುನಾಡಿನ ಮಧುರೈಯಲ್ಲಿ ಚಳವಳಿ ಭುಗಿಲೆದ್ದಿತು! ಅನೇಕ ಸಾವುನೋವುಗಳಾದವು. 'ದಾಲ್ಮಿಯಾಪುರಂ' ಎಂಬ ಹಿಂದಿ ಹೆಸರನ್ನು ತೆಗೆದು 'ಕಲ್ಲಕುಡಿ' ಎಂಬ ಅಪ್ಪಟ ತಮಿಳು ಹೆಸರು ಇಡಬೇಕೆಂದು ಒತ್ತಾಯಿಸಲಾಯಿತು. ಆ ಹೋರಾಟದಲ್ಲಿ ಕರುಣಾನಿಧಿ ಮತ್ತು ಕಣ್ಣದಾಸನ್ ಜೈಲು ಸೇರಿದರು. ಹೋರಾಟ ಯಶಸ್ವಿಯಾಗಿ ದಾಲ್ಮಿಯಾಪುರಂ ಬದಲಾಗಿ 'ಕಲ್ಲಕುಡಿ' ಯಾಯಿತು!  ಆಗಿನ ಪ್ರಧಾನಿ ಮತ್ತೆ ಹಿಂದಿ ತರುವುದನ್ನು ತಡೆದು ಇಂಗ್ಲಿಷನ್ನೇ ಮುಂದುವರೆಸಿದರು. 1967ರಲ್ಲಿ ಹಿಂದಿಯನ್ನು ತರಬೇಕೆಂದಾಗಲೂ ತಮಿಳುನಾಡು ಬಿಡಲಿಲ್ಲ! 

ಗಡಿ ಜಿಲ್ಲೆಗಳಾದ ನಮಗೂ ಹಿಂದಿ ವಿರೋಧಿ ಆಂದೋಲನದ ಶಾಕ ತಟ್ಟಿತು.  ಇಂದಿನ ಕೋಲಾರದ ಶಾಸಕರಾದ ಶ್ರೀನಿವಾಸಗೌಡರು ಆಗಿನ ವಿದ್ಯಾರ್ಥಿ ನಾಯಕರಾಗಿದ್ದು, ಅವರ ಗೆಳೆಯರೊಂದಿಗೆ ಹಿಂದಿ ವಿರೋಧಿ ಆಂದೋಲನದ ನಾಯಕತ್ವ ವಹಿಸಿದ್ದರು. ನಮ್ಮ ಶಾಲೆಗಳನ್ನು ಮುಚ್ಚಿಸಿ ಶಾಲಾ ಹುಡುಗರಾದ ನಮ್ಮನ್ನು ಚಳುವಳಿಗೆ ಕರೆದೊಯ್ಯುತಿದ್ದರು. ಏನು ಅರ್ಥವಾಗದ ನಾವು ಶಾಲೆಯನ್ನು ಬಿಡಿಸಿದ ಖುಷಿಯಲ್ಲಿ "ಮಹಾತ್ಮ ಗಾಂಧೀ ಕಿ ಜೈ" ಎಂದು ಕೂಗುತ್ತಾ ಅವರ ಹಿಂದೆ ಹೋಗುತಿದ್ದೆವು. ನಂತರ ನಾವು ಹೈಸ್ಕೂಲಿಗೆ ಬಂದಾಗಲೂ ನಮ್ಮ ಊರುಗಳಲ್ಲಿ ಹಿಂದಿ ವಿರೋಧಿ ಚಳವಳಿ ಆಗಾಗ ಭುಗಿಲೇಳುತಿದ್ದು, ಆಗಿನ ಕಾಲೇಜು ಹುಡುಗರು ಕೂಗುತಿದ್ದ kill kill Hindi: kiss kiss english ಎಂಬ ಸ್ಲೋಗನ್ ಇನ್ನೂ ನೆನಪಿದೆ! ನಂತರವೂ ಹಿಂದಿ ವಿರೋಧಿ ಹೋರಾಟ 1968 ರಿಂದ 1986ರವರೆಗೂ ಸತತವಾಗಿ ನಡೆಯುತ್ತಲೇ ಇತ್ತು. ಅಷ್ಟರಲ್ಲಿ ಪೆರಿಯಾರ್ ವೊಂದಿಗೆ ಅಣ್ಣಾದುರೈ, ಕರುಣಾನಿಧಿಗಳಂತಹ ನಾಯಕರ ಆಗಮನವಾಯಿತು. ಹಿಂದಿ ವಿರೋಧಿ ಹಾಗೂ ತಮಿಳರ ಸ್ವಾಭಿಮಾನಿ ಚಳವಳಿಯ ರಾಜಕಾರಣ ಆರಂಭವಾಯಿತು. 'ದ್ರಾವಿಡ ಕಳಗಂ' 'ದ್ರಾವಿಡ ಮುನ್ನೇತ್ರ ಕಳಗಂ' ಆಯಿತು, ನಂತರ 'ಅಣ್ಣಾ ಡಿ.ಎಂ.ಕೆ.' ಆಯಿತು ಅವರದೇ ಸರಕಾರಗಳು ಬಂದವು ಆದರೆ ಹಿಂದಿ ವಿರೋಧಿ ನೀತಿಯನ್ನು ಸಡಿಲಿಸಲಿಲ್ಲ.! ಹಿಂದಿಯನ್ನು ಪ್ರತಿಪಾದಿಸುತಿದ್ದ ಕಾಂಗ್ರೆಸ್ ಅಂದು ಹೋದದ್ದು ಇಂದಿಗೂ ತಮಿಳುನಾಡಿಗೆ ವಾಪಸ್ಸು ಬರಲಿಲ್ಲ! 

ಇಂದಿಗೂ ತಮಿಳು ನಾಡಿನ ಡಿ.ಎಂ.ಕೆ. ನಾಯಕ ಸ್ಟಾಲಿನ್ ಹಿಂದಿ ವಿಷಯದಲ್ಲಿ ಅಂದು ಪೆರಿಯಾರ್, ಅಣ್ಣಾದುರೈ, ಕರುಣಾನಿಧಿ ಮಾತನಾಡಿದ ಸ್ಪಷ್ಟತೆಯಿಂದಲೇ, ಅದೇ ನಿಲುವಿನಿಂದಲೇ ಇಂದೂ ಮಾತನಾಡುತಿದ್ದಾರೆ! ಅವರು ಇಂದು ಮಾತನಾಡುತ್ತಾ "ಈ ದೇಶ ಹಿಂದಿಯಾ ಅಲ್ಲ ಇಂಡಿಯಾ" ಎಂದಿರುವುದು ಮಾರ್ಮಿಕವಾಗಿದೆ.

"ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಿಂದಿ ರಾಷ್ಟ್ರಭಾಷೆಯಾಗಬೇಕು" ಎನ್ನುವವರಿಗೆ "ಹಾಗಾದರೆ ನಿಮ್ಮ ರಾಷ್ಟ್ರಪಕ್ಷಿ ನವಿಲಿಗಿಂತಲೂ ಕಾಗೆಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆ.. ಆದ್ದರಿಂದ ಕಾಗೆಯನ್ನೇ ರಾಷ್ಟ್ರಪಕ್ಷಿಯನ್ನಾಗಿ ಘೋಷಿಸಿ" ಎಂದು ಅಂದು ಅಣ್ಣಾದುರೈ ಇಟ್ಟ ವಾದವನ್ನು ಇಂದಿಗೂ ಪಾರ್ಲಿಮೆಂಟಿನಲ್ಲೇ ಅವರ ಅನುಯಾಯಿಗಳು ಪ್ರತಿಪಾದಿಸುತಿದ್ದಾರೆ! ಹಿಂದಿ ಹೇರಿಕೆಯೊಂದಿಗೆ ಹಿಂದಿ ಬೆಲ್ಟಿನ 'ಆರ್ಯಾವತ' ರಾಜಕಾರಣದಿಂದ ದಕ್ಷಿಣ ರಾಜ್ಯಗಳ 'ದ್ರಾವಿಡ'ರಿಗೆ ಆಗುತ್ತಿರುವ ಅಪಾರ ಅನ್ಯಾಯ ಮತ್ತು ನಿರಂತರ ತಾರತಮ್ಯವನ್ನು ಗಮನಿಸಿ ಅಂದು ಪೆರಿಯಾರ್ ಎತ್ತಿದ ಪ್ರತ್ಯೇಕ 'ದ್ರಾವಿಡ ರಾಷ್ಟ್ರ'ದ ಕೂಗು ಇಂದು ಪ್ರತಿಧ್ವನಿಸುವ ಕಾಲಘಟ್ಟ ಎದುರಾಗಿದೆ!

ಹಿಂದಿ ಹೇರಿಕೆಯ ವಿಷಯವನ್ನು ಬೆಂಬಲಿಸಿ ಮಾತನಾಡುವವರು ಹಿಂದಿಯನ್ನು 'ರಾಷ್ಟ್ರಭಾಷೆ' ಎಂಬಂತೆ ಬಿಂಬಿಸುತಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಇಪ್ಪತ್ತೆರಡು ಭಾಷೆಗಳನ್ನು ರಾಷ್ಟ್ರೀಯ ಜನರಾಡುವ ಭಾಷೆಗಳೆಂದು ಗುರುತಿಸಲಾಗಿದೆಯೇ ಹೊರತು ಕೇವಲ ಹಿಂದಿ ಒಂದನ್ನೇ ಅಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ವಾದವನ್ನು ಮೋದಿ - ಅಮಿತ್ ಷಾಗಳ ರಾಜ್ಯವಾದ ಗುಜರಾತ್ ಹೈಕೋರ್ಟೇ ತಿರಸ್ಕರಿಸಿತ್ತು!! "ಹಿಂದಿ ಭಾಷೆಯನ್ನು ಭಾರತದಲ್ಲಿ ಹೆಚ್ಚಿನ ಜನರು ಮಾತನಾಡುತ್ತಾರೆ.. ಆದರೆ ಹಿಂದಿಯನ್ನು ರಾಷ್ಟ್ರಭಾಷೆ ಎನ್ನಲು ಯಾವುದೇ ಆಧಾರಗಳಿಲ್ಲ.." ಎಂದು ಆಗಿನ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಜೆ.ಮುಖ್ಯೋಪಾದ್ಯಾಯ ಮತ್ತು ನ್ಯಾಯಮೂರ್ತಿ ಅನಂತ್ ಎಸ್.ದವೆಯವರ ಪೀಠ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗೆ ನೋಡಿದರೆ ಎಲ್ಲಾ ದೃಷ್ಟಿಕೋನಗಳಿಂದಲೂ ನಮ್ಮ ದಕ್ಷಿಣದ ತಮಿಳು, ಕನ್ನಡ, ತೆಲಗು, ಮಳೆಯಾಳಿಗಳು ಹಿಂದಿಗಿಂತಲೂ ಸಮೃದ್ದವಾಗಿವೆ, ಹಿಂದಿಗಿಂತಲೂ ಪ್ರಾಚೀನವಾಗಿವೆ!

ಈ ವಿಷಯದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆಲೋಚನೆಗಳನ್ನು ಕೆದಕಿದಾಗ..  ಹಿಂದಿ ಹೇರಿಕೆ ಒಂದೇ ಅಲ್ಲ ಉತ್ತರದವರಿಂದ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡ ಇನ್ನಷ್ಟು ವಿಸ್ತೃತವಾಗಿ ಡಾ.ಅಂಬೇಡ್ಕರ್ ಅವರು ಅಂದೇ ಗ್ರಹಿಸಿ ಮಾತನಾಡಿದ್ದರು. (ಅವರ "ಸಮಗ್ರ ಬರಹಗಳು ಭಾಷಣಗಳ" ಸಂಪುಟ ಒಂದರ, ಅಧ್ಯಾಯ- 5, 'ಉತ್ತರ ಮತ್ತು ದಕ್ಷಿಣಗಳ ನಡುವೆ' ಎಂಬ ಲೇಖನ, ಪುಟ 170 ಮತ್ತು 171ವನ್ನು ಗಮನಿಸಿ,) ಹಿಂದಿ ರಾಷ್ಟ್ರಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಸಭೆಯೊಂದರಲ್ಲಿ ಕರಡು ಸಂವಿಧಾನದ ಪರಿಶೀಲನೆ ನಡೆಯುವಾಗ ನಡೆದ ನಡಾವಳಿಯೊಂದನ್ನು ಬಾಬಾಸಾಹೇಬರು ಬಹಿರಂಗಪಡಿಸಿದ್ದು ಕುತೂಹಲಕಾರಿಯಾಗಿದೆ! ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕೆ  ಎಂಬುದನ್ನು ಮತಕ್ಕೆ ಹಾಕಿದಾಗ ಹಿಂದಿ ಪರ ಮತ್ತು ವಿರುದ್ದವಾಗಿ 78 - 78 ಸಮಾನ ಮತಗಳು ಬರುತ್ತವೆ! ನಂತರ ಮತ್ತೆ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮತ್ತೆ ಮತಕ್ಕೆ ಹಾಕಿದಾಗ ಹಿಂದಿಯ ಪರವಾಗಿ 78 ಮತ ಬಂದು ವಿರುದ್ದವಾಗಿ 77 ಮತ ಬರುತ್ತದೆ! "ಕೇವಲ ಒಂದು ಮತದಿಂದ ಹಿಂದಿ ರಾಷ್ಟ್ರಭಾಷೆಯಾಗಬೇಕು ಎನ್ನಲಾಗುತ್ತದೆಯಷ್ಟೇ!" ಎನ್ನುವ ಬಾಬಾಸಾಹೇಬರು ಮುಂದುವರೆದು ಹೇಳುವ ಮಾತುಗಳು ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ.  "ಉತ್ತರ ಮತ್ತು ದಕ್ಷಿಣಗಳ ನಡುವೆ ವ್ಯಾಪಕ ವ್ಯತ್ಯಾಸವಿದೆ. ಉತ್ತರವು ಸಂಪ್ರದಾಯಬದ್ದವಾಗಿದೆ. ದಕ್ಷಿಣವು ಪ್ರಗತಿಶೀಲವಾಗಿದೆ. ಉತ್ತರವು ಮೂಢನಂಬಿಕೆಗಳಿಂದ ತುಂಬಿದೆ. ದಕ್ಷಿಣವು ವಿಚಾರಶೀಲವಾಗಿದೆ..."(ಇನ್ನೂ ಅನೇಕ ವ್ಯತ್ಯಾಸಗಳನ್ನು ಪಟ್ಟಿ ಮಾಡುತ್ತಾರೆ) ಎಂದು ಮುಂದುವರೆದು "ಭಾರತದ ಪ್ರಥಮ ಪ್ರಧಾನಿಯಾಗಿ ಬ್ರಾಹ್ಮಣರೊಬ್ಬರು ಆಯ್ಕೆಯಾದ ಘಟನೆಯನ್ನು ಮಹತ್ತರವಾಗಿ ಆಚರಿಸಲು ಕಾಶಿಯ ಬ್ರಾಹ್ಮಣರು 1947 ಆಗಸ್ಟ್ 15 ರಂದು ಯಜ್ಙ ಮಾಡಿದಾಗ ಪ್ರಧಾನಿ ನೆಹರು ಅವರು ಆ ಯಜ್ಙದಲ್ಲಿ ಉಪಸ್ಥಿತರಿರಲಿಲ್ಲವೆ? ಯಜ್ಙ ದಂಡ ಹಿಡಿಯಲಿಲ್ಲವೆ? ಅವರು ಕೊಟ್ಟ ಗಂಗಾಜಲವನ್ನು ಕುಡಿಯಲಿಲ್ಲವೆ? ರಾಷ್ಟ್ರಾಧ್ಯಕ್ಷರು ಕಾಶಿಗೆ ಹೋಗಿ ಬ್ರಾಹ್ಮಣರ ಪಾದ ತೊಳೆದು, ಆ ನೀರನ್ನು ಕುಡಿಯಲಿಲ್ಲವೆ..?" ಎಂದು ಹೇಳುತ್ತಾ.. ಸತಿಪದ್ದತಿಯಂತಹ ಅಮಾನುಷ ಪದ್ದತಿಗಳನ್ನು ಉತ್ತರದಲ್ಲಿ ಇಂದಿಗೂ ಪರಿಪಾಲಿಸುವ ಬಗ್ಗೆ ಮತ್ತು ಬೆತ್ತಲೆ ನಾಗಾ ಸಾದುಗಳ ಅಮಾನುಷ ಅನಾಹುತಗಳ ಬಗ್ಗೆ ಮಾತನಾಡುತ್ತಾ "ಇಂತಹ ಉತ್ತರದ ಆಳ್ವಿಕೆಯನ್ನು ದಕ್ಷಿಣ ಹೇಗೆ ಸಹಿಸಿಕೊಳ್ಳಬಲ್ಲದು? ಉತ್ತರದಿಂದ ಕಳಚಿಕೊಳ್ಳುವ ದಕ್ಷಿಣದ ಅಪೇಕ್ಷೆಯ ಕುರುಹುಗಳು ಈಗಾಗಲೇ ಕಂಡುಬರುತ್ತಿವೆ.." ಎಂಬ ಮನ್ಸೂಚನೆಯನ್ನು ಅಂಬೇಡ್ಕರ್ ಅವರು ಅಂದೇ ನೀಡುತ್ತಾರೆ!  ಅತ್ಯಂತ ವೈದಿಕತೆಯಿಂದ ಕೂಡಿದ ಉತ್ತರ ಮತ್ತು ವೈಚಾರಿಕತೆಯಿಂದ ಕೂಡಿದ ದಕ್ಷಿಣದ ನಡುವೆ ಇರುವ ವ್ಯತ್ಯಾಸಗಳನ್ನು ಸಮರ್ಪಕವಾಗಿ ಗುರುತಿಸುತ್ತಾರೆ!

ಉತ್ತರದ ಕೇಂದ್ರೀಕೃತ ತಾರತಮ್ಯಗಳನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯವನ್ನು ಗಮನಿಸಿ ದಕ್ಷಿಣಕ್ಕೇ ಒಂದು ರಾಜಧಾನಿಯನ್ನು ನೀಡಬೇಕೆಂದು ಕೂಡ ಅಂಬೇಡ್ಕರ್ ಅವರು ಪ್ರತಿಪಾದಿಸುತ್ತಾರೆ. ಈ ದೇಶಕ್ಕೆ ಎರಡು ರಾಜಧಾನಿಗಳ ಅವಶ್ಯಕತೆಯನ್ನು ಅಂದೇ ಪ್ರತಿಪಾದಿಸುತ್ತಾರೆ! "ಅಂಬೇಡ್ಕರ್ ನನ್ನ ನಾಯಕ" ಎಂದು ಅಭಿಮಾನಿಸುವ ಪೆರಿಯಾರ್ ಅವರ 'ದ್ರಾವಿಡ ದೇಶ'ದ ಚಿಂತನೆಗೆ ಅಂಬೇಡ್ಕರ್ ಅವರ ಈ ಮಾತುಗಳು ಪೂರಕವಾಗಿವೆ.

ಹಾಗೆ ನೋಡಿದರೆ ನಮ್ಮ ರಾಷ್ಟ್ರಕವಿ ಕುವೆಂಪುರವರು ಸಹ ಅಂಬೇಡ್ಕರ್, ಪೆರಿಯಾರರಂತೆ ನೇರವಾಗಿ ಅಲ್ಲದಿದ್ದರೂ ಸಾಂಕೇತಿಕ ಆಶಯವಾಗಿ ತಮ್ಮ ಬರಹಗಳಲ್ಲಿ ಕನ್ನಡದ ಅಸ್ಮಿತೆಯನ್ನು, ಕರ್ನಾಟಕದ ಪ್ರತ್ಯೇಕತೆಯನ್ನು  ಪ್ರತಿಪಾದಿಸಿದ್ದಾರೆ...

ಇಂದು ಹಿಂದಿ ಹೇರಿಕೆ ಅನಿವಾರ್ಯ ಎನ್ನುವುದಾದರೆ ನಮಗೆ ದ್ರಾವಿಡ ದೇಶದ ಅನಿವಾರ್ಯತೆಯೂ ಇದೆ ಎನ್ನುವುದರಲ್ಲಿ ಯಾವ ಗೊಂದಲವೂ ಕಾಣುತ್ತಿಲ್ಲ!?