ರಾಷ್ಟ್ರೀಯ ವಿಪತ್ತು ಘೋಷಿಸಿ,  5 ಸಾವಿರ ಕೋಟಿ ಬಿಡುಗಡೆಗೆ ದೇವೇಗೌಡ ಆಗ್ರಹ

ರಾಷ್ಟ್ರೀಯ ವಿಪತ್ತು ಘೋಷಿಸಿ,  5 ಸಾವಿರ ಕೋಟಿ ಬಿಡುಗಡೆಗೆ ದೇವೇಗೌಡ ಆಗ್ರಹ

 ಬೆಂಗಳೂರು: ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು  ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ, ಶೀಘ್ರವೇ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಸಂತ್ರಸ್ತರಿಗೆ ನೆರವಾಗುವಂತೆ ಕೋರಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ನೆರೆಯಿಂದ ರಾಜ್ಯದಲ್ಲಿ ಬೃಹತ್ ಪ್ರಮಾಣ  ಜೀವ-ಆಸ್ತಿ ನಷ್ಟಉಂಟಾಗಿದೆ. ಪಕ್ಷಭೇದರಹಿತವಾಗಿ ನೆರವಿಗೆ ಬರುವುದು ಎಲ್ಲರ ಕರ್ತವ್ಯ. ಸಂತ್ರಸ್ತರಿಗೆ ಸುರಕ್ಷಿತ ಸ್ಥಳಕ್ಕೆ ಕಳುಹಿಸುವುದು ಹಾಗೂ ಪರಿಹಾರ ನೀಡುವುದು ಅದ್ಯ ಕರ್ತವ್ಯ. ಭೂಕುಸಿತ ಉಂಟಾದಲ್ಲಿ ಜೀವ-ಆಸ್ತಿಯ ನಷ್ಟ ಇನ್ನಷ್ಟು ಹೆಚ್ಚಿದೆ. ಆದ್ದರಿಂದ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಅಡಿ ಘೋಷಿಸಬೇಕು ಹಾಗೂ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಇದೇ ಪತ್ರವನ್ನು ಲಗತ್ತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದು, ನೆರೆ ಸಂತ್ರಸ್ತರಿಗೆ ನೆರವು ನೀಡಲು ತಾವೊಬ್ಬರೇ ಏಕಾಂಗಿಯಾಗಿ ಭೇಟಿ ಕೊಡುತ್ತಿದ್ದೀರಿ. ಇಷ್ಟೊಂದು ಬೃಹತ್ ಪ್ರಮಾಣದ ಪರಿಹಾರ ಕಾರ್ಯವನ್ನು ರಾಜ್ಯ ಸರ್ಕಾರ ನಿರ್ವಹಿಸುವುದು ಕಷ್ಟ. ಈ ಕುರಿತಂತೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, 5 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿದ್ದೇನೆ ಎಂದು ವಿವರಿಸಿದ್ದಾರೆ.

ನೊಂದ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ, ಸಾಂತ್ವನ ನೀಡುವಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೊಂದ ಕುಟುಂಬಗಳು ಮತ್ತೊಮ್ಮೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ನನ್ನ ಹಾಗೂ ನಮ್ಮ ಪಕ್ಷದ ಪೂರ್ಣ ಸಹಕಾರ ಹಾಗೂ ಬೆಂಬಲವಿರುತ್ತದೆ. ಈ ನಿಟ್ಟಿನಲ್ಲಿ, ನಿಮ್ಮ ಸರ್ಕಾರ ಕೈಗೊಳ್ಳುವ ಯೋಜನೆಗಳು ಯಶಸ್ವಿಯಾಗಲೆಂದು ಹಾರೈಸುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.