ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ: ದೇವೇಗೌಡರ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ?

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ:  ದೇವೇಗೌಡರ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ?

ಅತಂತ್ರ ಲೋಕಸಭೆ ಸೃಷ್ಟಿಯಾದರೆ ಪ್ರಾದೇಶಿಕ ಪಕ್ಷಗಳೇ ಸರ್ಕಾರ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ. ಎಲ್ಲ ರಾಜಕೀಯ ಪಟ್ಟುಗಳನ್ನು ಸಕಾಲದಲ್ಲಿ ಬಳಸುವ ಅನುಭವ ಇರುವ ದೇವೇಗೌಡರು ಈ ಸಂದರ್ಭವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಿದ್ದಾರೆ. ರಾಜ್ಯದ ಮೈತ್ರಿ ಸರ್ಕಾರವನ್ನೂ ಉಳಿಸಿ ಕೇಂದ್ರದಲ್ಲೂ ತಮ್ಮ ಪ್ರಭಾವ ನಡೆಯುವಂಥ ಲೆಕ್ಕಾಚಾರದಲ್ಲಿ  ದೇವೇಗೌಡರು ತೊಡಗಿದ್ದಾರೆ ಎನ್ನುತ್ತಾರೆ ಜಿ.ಅರ್.ಸತ್ಯಲಿಂಗರಾಜು.  

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಏನಾದರೂ ಆಗಿಬಿಡಬಹುದು ಎಂಬುದಕ್ಕನುಗುಣವಾಗಿ ದೇವೇಗೌಡರು ಅಂತಿಮ ಕ್ಷಣದಲ್ಲಿ ತಮ್ಮ ಗೇಮ್ ಪ್ಲಾನ್ ಬದಲಾಯಿಸಿಕೊಂಡು ರಾಜ್ಯದಲ್ಲಿ ಮೈತ್ರಿಯನ್ನೂ ಉಳಿಸಿಕೊಂಡು, ಕೇಂದ್ರದಲ್ಲಿ ಅಧಿಕಾರದಲ್ಲಿ ಪಾಲನ್ನೂ ಪಡೆದುಬಿಡುವ ಮೂಲಕ ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿ ಹೊಡೆಯುವ ಮಹಾಸ್ತ್ರವನ್ನ ಪ್ರಯೋಗಿಸುತ್ತಾರೆಯೇ ಎಂಬ ಕದನ ಕುತೂಹಲಗಳು ಮೆರವಣಿಗೆ ಹೊರಟಿವೆ. ಇದು ಮೂರ್ತ ರೂಪ ಪಡೆದುಬಿಟ್ಟರಂತೂ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಿರದ ದೊಡ್ಡ  ಶಾಕ್ ಅಂತೂ ಕಾದಿದೆ.

 ಅತಂತ್ರ ಸಂಸತ್ ನಿರ್ಮಾಣವಾಗಿದ್ದೇ ಆದಲ್ಲಿ, ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದು ನಿರ್ವಿವಾದ. ಆದರೆ ಯಾರ ಪರ  ಯಾವ ಪ್ರಾದೇಶಿಕ ಪಕ್ಷ ಹೋಗುತ್ತವೆ ಎಂಬುದು ಕಡೇ ಕ್ಷಣದ ತಂತ್ರಗಳನ್ನಾಧರಿಸಿರುತ್ತೆ. ಸದ್ಯಕ್ಕೆ ರಾಹುಲ್ ಗಾಂಧಿ ಇರಲಿ ಎನ್ನುತ್ತಿರುವವರ ಪಟ್ಟಿಯಲ್ಲಿ ಆಂಧ್ರದ ಚಂದ್ರಬಾಬು ನಾಯ್ಡು, ತಮಿಳುನಾಡಿನ ಸ್ಟಾಲಿನ್ ಇದ್ದಾರೆ. ಆದರೆ ಇಷ್ಟೇ ಬೆಂಬಲ ಸಾಲದಿದ್ದಾಗ ಅನಿವಾರ್ಯವಾಗಿ ದೇವೇಗೌಡರು ರಂಗಪ್ರವೇಶಿಸಿ, ಪರಿಸ್ಥಿತಿಗೆ ಅನುಗುಣವಾಗಿ ಬಿಎಸ್‍ಪಿ, ತೃಣಮೂಲ ಕಾಂಗ್ರೆಸ್, ಮಹಾರಾಷ್ಟ್ರದ ಶರದ್ ಪವಾರ್, ಕೇರಳದ ಪಿಣರಾಯಿ ವಿಜಯನ್, ಒಡಿಶಾದ ಬಿಜು ಪಾಟ್ನಾಯಕ್, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್, ಎಡಪಕ್ಷಗಳನ್ನೆಲ್ಲ ಯುಪಿಎ ಪರವಾಗಿರುವಂತೆ ಮಾಡಲು ಮುಂದೆ ನಿಂತು, ಅದರಲ್ಲಿ ಯಶಸ್ವಿಯಾದರೆ ಅದರ ಫಲವಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದೂ ಆಗುತ್ತೆ, ಜತೆಗೆ ಮತ್ತೊಂದು ಕೊಡುಗೆಯನ್ನೂ ಪಡೆದುಕೊಳ್ಳುವ ಲೆಕ್ಕದಲ್ಲೂ ಇದ್ದಾರೆ ಎನ್ನುವುದೇ ಹೊಸ ದಿಕ್ಕೊಂದರ ಸೂಚನೆಯಾಗಿದೆ.

 ಮೈತ್ರಿ ಸರ್ಕಾರ ರಾಜ್ಯದಲ್ಲಿ ಪರಸ್ಪರ ಹೊಂದಾಣಿಕೆ ಕೊರತೆ ನಡುವೆಯೇ ಅಸ್ತಿತ್ವದಲ್ಲಿದ್ದರೂ ಭವಿಷ್ಯದಲ್ಲಿ ಲಾಭವಿರಲ್ಲ. ಬದಲಿಗೆ ಅತೃಪ್ತಿ ಹೋಗಲಾಡಿಸಲು ಮಲ್ಲಿಕಾರ್ಜುನ್ ಖರ್ಗೆಯನ್ನು ಮುಖ್ಯಮಂತ್ರಿ ಮಾಡಿ, ರೇವಣ್ಣಗೆ ಉಪಮುಖ್ಯಮಂತ್ರಿ ಮಾಡುವುದು; ಅದೇ ವೇಳೆಯಲ್ಲಿ ಯುಪಿಎ ಅಧಿಕಾರಕ್ಕೇರಲು ಶ್ರಮಿಸಿದ್ದರ ಫಲವಾಗಿ ಕುಮಾರ ಸ್ವಾಮಿಯನ್ನ ಕೇಂದ್ರದಲ್ಲಿ, ಅದರಲ್ಲೂ ಉಪ ಪ್ರಧಾನಿ ಸ್ಥಾನದಲ್ಲಿ ಕೂರಿಸಿಬಿಟ್ಟರೆ ಹೇಗೆ? ಕುಮಾರಸ್ವಾಮಿ ಬಗ್ಗೆ ಎಸ್ಪಿ, ಬಿಎಸ್ಪಿ, ಟಿಎಂಸಿ, ಎಡಪಕ್ಷಗಳವರ ಸಂಬಂಧ ಸೌಹಾರ್ದಯುತವಾಗಿಯೇ ಇದೆ. ಜತೆಗೆ ಮಾಯಾವತಿ, ಮಮತಾ ಬ್ಯಾನರ್ಜಿ ಪ್ರಧಾನಿ ಕುರ್ಚಿಯ ಮೇಲೆ ಕೂರಲು ಬಯಸುವವರೇ ಹೊರತು, ಉಪಪ್ರಧಾನಿ ಕುರ್ಚಿಯಲ್ಲ. ಇದಕ್ಕಿಂತ ರಾಜ್ಯದ ಮುಖ್ಯಮಂತ್ರಿಯಾಗಿ ಸ್ವತಂತ್ರವಾಗಿರುತ್ತೇವೆ ಎಂಬ ನಿಲುವು ಹೊಂದಿರುವವರು. ಇದೇ ಸಾಲಿಗೆ ಚಂದ್ರಬಾಬು ನಾಯ್ಡು ಕೂಡ ಸೇರುತ್ತಾರೆ.

 ಆಗ ಆಯಾಚಿತವಾಗಿ ಕುಮಾರಸ್ವಾಮಿಯನ್ನ ಉಪಪ್ರಧಾನಿಯನ್ನಾಗಿಸಿಕೊಳ್ಳುವುದು ರಾಹುಲ್ ಗಾಂಧಿಗೆ ಅನಿವಾರ್ಯ. ಇದಕ್ಕೆ ಪ್ರಾದೇಶಿಕ ಪಕ್ಷದ ಇತರ ನಾಯಕರು ತಗಾದೆ ಎತ್ತುವುದು ಕಡಿಮೆ. ತೆಲಂಗಾಣದ ಕೆ.ಸಿ.ಚಂದ್ರಶೇಖರರಾವ್ ಈ ಗಾದಿಗೆ ಕಣ್ಣಿಟ್ಟಿದ್ದರೂ, ಕೊನೆಗೆ ಇವರು ಜಿಜೆಪಿಗೆ ಬೆಂಬಲಿಸಿಬಿಡಬಹುದು ಎಂಬ ಅನುಮಾನಕ್ಕೆ ಒಳಗಾಗಿಯೇ ಇರುವಂಥವರು. ಜತೆಗೆ ನಾಯ್ಡು, ಸ್ಟಾಲಿನ್ ಇದಕ್ಕೆ ಒಪ್ಪದೇ ಹೋಗುತ್ತಾರೆ. ಕೇರಳ  ಸರ್ಕಾರದಲ್ಲಿ ಜನತಾದಳವೂ ಇರುವುದರಿಂದ ಪಿಣರಾಯಿ ವಿಜಯನ್ ಕೂಡ ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ಲುತ್ತಾರೆ. ಹೀಗಾಗಿ ಕೆಸಿಆರ್‍ಗಿಂತ ಇವರಿಗೇ ಬೆಂಬಲವೂ ದಕ್ಕುತ್ತೆ.

 ಫಲಿತಾಂಶವನ್ನಾಧರಿಸಿ ಹೀಗೇನಾದರೂ ಆಗಿಬಿಟ್ಟರೆ, ರಾಜ್ಯದಲ್ಲಿ ಮೈತ್ರಿಯೂ ಭದ್ರ, ಖರ್ಗೆಗೆ ಸಿಎಂ, ರೇವಣ್ಣಗೆ ಡಿಸಿಎಂ ಸ್ಥಾನವು ಸುಗಮ; ಕೇಂದ್ರದಲ್ಲಿ ಬಿಜೆಪಿಯನ್ನ ಅಧಿಕಾರದಿಂದ ದೂರವಿಡುವುದೂ ಆಯಿತು, ಕುಮಾರಸ್ವಾಮಿಗೆ ಬದಲಿ ಅಧಿಕಾರವೂ ಸಿಕ್ಕಿತು, ಆ ಮೂಲಕ ದಕ್ಷಿಣ ಭಾರತದವರಿಗೆ ಉಪ ಪ್ರಧಾನಿ ಎಂಬ ಕೂಗಿಗೂ ಬೆಲೆ ಕೊಟ್ಟಂತಾಯಿತು. ರಾಹುಲ್ ಪ್ರಧಾನಿಯಾಗಲು ಸಮಾನ ಮನಸ್ಕ ಪಕ್ಷಗಳವರನ್ನ ಒಗ್ಗೂಡಿಸಿದಂತಾಗಿ ಕಿಂಗ್ ಮೇಕರ್ ಪಾತ್ರಕ್ಕೂ ಎಚ್.ಡಿ.ದೇವೇಗೌಡರು ಪಾತ್ರವಾಗಿ ಬಿಡುವಂಥ ಇನ್ನೊಂದು ರಾಜಕೀಯ ಮಗ್ಗಲು ಕೂಡ ಇದೆ. ಆದರೆ ಇದಕ್ಕೆ ಪೂರ್ತಾ ಜೀವ ಬರುವುದು ಮಾತ್ರ ಫಲಿತಾಂಶವನ್ನಾಧರಿಸಿ ಮಾತ್ರ. ಅಲ್ಲಿವರೆಗೆ  ಇದೂ ಕೂಡ ಒಂದು ಸಾಧ್ಯಾಸಾಧ್ಯತೆಯ ಲೆಕ್ಕಾಚಾರದ ಪಟ್ಟಿಯಲ್ಲಿರುತ್ತೆ.