'ಮೌಲ್ವಿ' ಹಶೀಮ್ ಬಿಟ್ಟು ಹೋದ ನಿರ್ವಾತ 

'ಮೌಲ್ವಿ' ಹಶೀಮ್ ಬಿಟ್ಟು ಹೋದ ನಿರ್ವಾತ 

ಕಳೆದ ವಾರ ನಮ್ಮ ಎದುರು ಬದಿಯ ಮನೆ ಖಾಲಿಯಾಯಿತು. ಮನೆ ಖಾಲಿ ಮಾಡುವುದನ್ನು ನೋಡುವುದೇ ಬೇಸರ. ಮನೆಯ ಜತೆ ಮನಸ್ಸೂ ಖಾಲಿಯಾಗುತ್ತದೆ. ನಾಳೆಯಿಂದ ಅವರು ಕಾಣಸಿಗುವುದಿಲ್ಲವಲ್ಲಾ ಅಂತ. ಖಾಲಿಮಾಡುವವರು ಪರಿಚಯ ಇರಬೇಕು ಅಂತೇನಿಲ್ಲ. ಅಷ್ಟೇ ಖೇದ ಮೂಡಿಸುವುದು ಮನೆ ಬರಿದು ಮಾಡಿ ಸಾಮಾನುಗಳನ್ನೆಲ್ಲಾ ಒಂದು ಪುಟ್ಟ ಟ್ರಕ್ ನಲ್ಲೋ, ಲಾರಿಯಲ್ಲೋ ತುಂಬುವ ಪ್ರಕ್ರಿಯೆ. ಮೂರು ರೂಮ್ ಗಳ ಮನೆಯೇ ಆದರೂ, ಸೋಫಾ ಸೆಟ್ಟು, ಮೇಜು, ಕುರ್ಚಿ, ಡೈನಿಂಗ್ ಟೇಬಲ್ಲು, ಬೀರು, ಫ್ರಿಡ್ಜು, ವಾಷಿಂಗ್ ಮೆಷೀನು, ಮಂಚ, ಹೂಕುಂಡ, ಬಕೆಟ್ಟುಗಳು, ಪಾತ್ರೆ ಪಡಗ, ದೇವರಪಟಗಳು ಅಷ್ಟನ್ನೂ ನಾಲ್ಕುಚಕ್ರದ ಗಾಡಿಯೊಂದು ಅಡಕಮಾಡಿಕೊಂಡು ಹೊರಡುವಾಗ ಮನತುಂಬಿ ಬರುತ್ತದೆ. ಹತ್ತುವರ್ಷ ಆ ಮನೆಯಲ್ಲಿದ್ದ ಅವರ ಸರಂಜಾಮೆಲ್ಲಾ ಒಂದು ವಾಹನದಲ್ಲಿ ತುಂಬುವಷ್ಟು ಎಷ್ಟೋ ಅಷ್ಟೆ. ಅಷ್ಟು ವರ್ಷಗಳ ಅವರ ನೆನಪು ಅವರು ತೆರಳುವ ಆ ದಿನದ ಆ ದೃಶ್ಯದಿಂದ ಮರೆಮಾಚಲ್ಪಡುತ್ತದೆ. 

ಅಪಾರ ಸಾಧನೆ ಮಾಡಿ, ಹತ್ತಾರು ವರ್ಷ ಕ್ರಿಕೆಟ್ ಮೈದಾನದಲ್ಲಿ ಮಿಂಚಿ ತನ್ನ ಸೇವೆಗೆ ಇತಿಶ್ರೀ ಹಾಡುವ ಕ್ರಿಕೆಟಿಗ ಅದೇಕೋ ಅಂಥದೇ ಭಾವನೆಯನ್ನು ಮೂಡಿಸುತ್ತಾನೆ. ಅವನು ಅನುಭವಿಸಿದ ಅನೇಕ ರಸಕ್ಷಣಗಳು - ಅವುಗಳಲ್ಲಿ ಬಹುತೇಕ ಪ್ರೇಕ್ಷಕ/ವೀಕ್ಷಕರಾದ ನಮ್ಮ ರಸಕ್ಷಣಗಳೂ ಹೌದು - ರೋಮಾಂಚನ ಹುಟ್ಟಿಸಿದ ಘಟನೆಗಳು, ಅವನ ಆಟದ ವೈಖರಿ, ಅವನ ವ್ಯಕ್ತಿವೈಶಿಷ್ಠ್ಯ, ಅವನ ಕೊಡುಗೆ, ಅವನ ಕೆಲವು ವೈಫಲ್ಯ, ಇವೆಲ್ಲವೂ ಕ್ರೋಡೀಕರಿಸಲ್ಪಟ್ಟು ಅವನು ಪೇರಿಸಿದ ರನ್, ಗಳಿಸಿದ ವಿಕೆಟ್, ಹಿಡಿದ ಕ್ಯಾಚ್ ಇಷ್ಟಕ್ಕೆ ಮಾತ್ರ ಸೀಮಿತವಾಗಿ ವಿದ್ಯುನ್ಮಾನ ಪತ್ರಾಗಾರದಲ್ಲಿ ದಾಖಲಾಗುತ್ತದೆ. ಅವನ ಅಭಿಮಾನಿಗಳ ಮನೋಸಾಗರದಲ್ಲಿ ಸಣ್ಣ ಮೀನುಗಳಂತೆ ಸ್ವಲ್ಪ ಅವಧಿ ಈಜಾಡಿಕೊಂಡಿರುತ್ತದೆ. ಮೈದಾನದಲ್ಲಿ ಆತ ಕಾಣಸಿಗುವುದಿಲ್ಲವೆಂಬ ನಿರ್ವಾತ ಸ್ವಲ್ಪ ಕಾಲ ಕಾಡುತ್ತದೆ. 

ದಕ್ಷಿಣ ಆಫ್ರಿಕಾ ತಂಡದ ಮೂರು ಅಪ್ರತಿಮ ಪ್ರತಿಭೆಗಳು ಏಕಕಾಲಕ್ಕೆ ಕಾಣಸಿಗದಾಗಿವೆ. ಆ ದೇಶವನ್ನು 15 ವರ್ಷಗಳ ಕಾಲ ಪ್ರತಿನಿಧಿಸಿದ ಅವರ ಕ್ರಮಸಂಖ್ಯೆ 295 (ಹಶೀಮ್ ಮೊಹಮ್ಮದ್ ಆಮ್ಲ), 296 (ಡಿ ವಿಲಿಯರ್ಸ್), ಮತ್ತು (297) ಡೇಲ್ ಸ್ಟೇಯ್ನ್. ಆ ಸಂಖ್ಯೆಗಳೇ ಸೂಚಿಸುವಂತೆ ಆ ಮೂರ್ವರೂ ಅಂತರ ರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದ್ದು ಹೆಚ್ಚೂ ಕಡಿಮೆ ಒಟ್ಟಾಗಿ. ಅವರ ದೇಶಕ್ಕೆ ಅವರ ಕೊಡುಗೆ ಅಪಾರ. ಅವರು ವಿದಾಯ ಹೇಳಿರುವುದೂ ಹೆಚ್ಚೂ ಕಡಿಮೆ ಒಟ್ಟಾಗಿ. ಅದರಲ್ಲೂ ಸ್ಟೇಯ್ನ್ ಮತ್ತು ಹಶೀಮ್ ಒಂದೇ ವಾರದಲ್ಲಿ ನಿರ್ಗಮಿಸಿದ್ದಾರೆ. (ಸಮಾಧಾನವೆಂದರೆ, ಸ್ಟೇಯ್ನ್ ಟೆಸ್ಟ್ ಕ್ರಿಕೆಟಿನಿಂದಷ್ಟೇ ನಿವೃತ್ತಿ ಘೋಷಿಸಿದ್ದಾರೆ.) ಅಂದ ಹಾಗೆ, ಹಶೀಮ್ ಮತ್ತು ಸ್ಟೇಯ್ನ್ ಆಟದ ಬಯಲಲ್ಲೂ, ಡ್ರೆಸ್ಸಿಂಗ್ ರೂಮ್ನಲ್ಲೂ ಕಟ್ಟಾ ಸ್ನೇಹಿತರು. ದಕ್ಷಿಣ ಆಫ್ರಿಕಾ ಕ್ರಿಕೆಟನ್ನು  ಹತ್ತಿರದಿಂದ ಬಲ್ಲ ಕ್ರಿಕೆಟ್ ಲೇಖಕ ಟೆಲ್ಫರ್ಡ್ ವೈಸ್ ಹೇಳುವಂತೆ ಕಳೆದ ಕೆಲವು ವರ್ಷಗಳಲ್ಲಿ ನಿವೃತ್ತಿಯಾದ ಯಾವುದೇ ಕ್ರಿಕೆಟ್ ತಾರೆ ತನ್ನ ನಿರ್ಗಮನದಿಂದ ಹಶೀಮ್ ನಿವೃತ್ತಿಯಿಂದುಂಟಾದ ಮಟ್ಟದ ನಿರ್ವಾತ ಸೃಷ್ಟಿಸಿರಲಿಲ್ಲ. ಹಶೀಮ್ ರ ಕೊಡುಗೆ ಕೇವಲ ರನ್ ಗಳಿಂದ ಅಳೆಯಲಿಕ್ಕಾಗದು. 

ಒಣ ಅಂಕಿ ಅಂಶಗಳ ಬಗ್ಗೆ ಪ್ರಸ್ತಾಪಿಸಿದೆ. ಅಂತಹ ಒಂದು ಸಂಖ್ಯೆ ಹಶೀಮ್ ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ ಶೇಖರಿಸಿದ ಅಜೇಯ 311. ಆ ಅಂಕಿ ತಿಳಿಸದ ಅಂಶವೆಂದರೆ ಅದನ್ನು ಗಳಿಸಲು ಹಶೀಮ್ ತೆಗೆದುಕೊಂಡಿದ್ದು 13 ಗಂಟೆಗೂ ಹೆಚ್ಚು ಕಾಲ. ಹಶೀಮ್ ರ ಶ್ರೇಷ್ಠತೆಯನ್ನು ಸಾರಲು ಅದು ಸಾಕು, ಆದರೆ ಆ ಎರಡು ಸಂಖ್ಯೆಗಳೂ ತಿಳಿಸದ ಅಂಶವೆಂದರೆ ಹಶೀಮ್ ಆ ಅಮೋಘ ಸಾಧನೆಯನ್ನು ಮಾಡಿದಾಗ ರಂಜಾನ್ ಕಾರಣ ಉಪವಾಸದಲ್ಲಿದ್ದುದು! 

ಬೌಲಿಂಗ್ ಆಕ್ರಮಣಕ್ಕೆ ಗೋಡೆ ನಿರ್ಮಿಸಿ ಪ್ರತಿರೋಧ ಒಡ್ಡುತ್ತಿದ್ದ ನಮ್ಮ ಬ್ಯಾಟಿಂಗ್ ಋಷಿ ರಾಹುಲ್ ದ್ರಾವಿಡ್ ರನ್ನು ಹೋಲುವ ಹಶೀಮ್ (ಟೆಸ್ಟ್ ನಲ್ಲಿ) ಆಡುತ್ತಿದ್ದುದೂ ಮೂರನೇ ಕ್ರಮಾಂಕದಲ್ಲಿ. ನೀಳ ದಾಡಿಯ ಹಶೀಮ್ ಗೆ ಧ್ಯಾನಾಸಕ್ತನಾಗಿ ಬ್ಯಾಟ್ ಮಾಡುವ ಕಲೆ ಒಲಿದಿದ್ದು ಆತನ ಧಾರ್ಮಿಕ ಶ್ರದ್ಧೆಯಿಂದಲೇ ಇರಬೇಕು. 

ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಮತ್ತು ನಾಯಕತ್ವ ಗುಣಗಳ ಬಗ್ಗೆ ವ್ಯಾಸಂಗ ಮಾಡುವ ಹಶೀಮ್ ನಾಯಕತ್ವಕ್ಕೆ ಹೇಳಿಮಾಡಿಸಿದ ವ್ಯಕ್ತಿತ್ವವಲ್ಲ. ವಿನಯವನ್ನು ಮೈಗೂಡಿಸಿಕೊಂಡಿರುವ ಹಶೀಮ್ ಗೆ ಗಡಸುತನ ಒಗ್ಗದು. 

ಅವರ ವಿನಯವಂತಿಕೆಯಷ್ಟೇ ಎದ್ದುಕಾಣುವುದು ಹಷೀಮ್ ರ ಆಂತರಿಕ ಹಾಗೂ ಬಾಹ್ಯ ಸಮತೋಲನ. ಆ ಸಮತೋಲನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಥಾಯಿದಾಯಕವಾಗಿತ್ತು. ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಯಾವುದೇ ತಂಡದಲ್ಲಿ ಪ್ರಾಮುಖ್ಯತೆಯನ್ನು ಪಡೆಯುವುದೇ ಆ ಕಾರಣಕ್ಕಾಗಿ ಅಲ್ಲವೇ?

ಅತ್ಯಲ್ಪ (348) ಇನ್ನಿಂಗ್ಸ್ ನಲ್ಲಿ  50 ಶತಕಗಳನ್ನು ಗಳಿಸಿದ ಹೆಗ್ಗಳಿಕೆ ಹಶೀಮ್ರದ್ದು. ಅಷ್ಟೇ ಶತಕಗಳನ್ನು ಅಷ್ಟೇ ಇನ್ನಿಂಗ್ಸ್ ನಲ್ಲಿ ಬಾರಿಸಿರುವ ಕೀರ್ತಿ ವಿರಾಟ್ ಕೊಹ್ಲಿಯದ್ದಾಗಿದ್ದು ಅವರಿಬ್ಬರ ಹಿಂದೆ ಸಚಿನ್ ತೆಂಡೂಲ್ಕರ್ (376), ರಿಕಿ ಪಾಂಟಿಂಗ್ (418) ಮತ್ತು ಬ್ರಿಯಾನ್ ಲಾರಾ (465)ರ ಸಾರ್ವಕಾಲಿಕ ಶ್ರೇಷ್ಠರ ಹೆಸರುಗಳಿವೆ ಅಂದರೆ ಹಶೀಮ್ ರ ಪ್ರತಿಭೆಯ ಅರಿವಾಗುತ್ತದೆ. 

ಟೆಸ್ಟ್ ಮತ್ತು ಏಕದಿವಸೀಯ ಕ್ರಿಕೆಟ್ ಗಳೆರಡರಲ್ಲೂ ಐಸಿಸಿಯ ಅಗ್ರಾಂಕ ಗಳಿಸಿದ ಕೀರ್ತಿ ಹೊತ್ತ ಭಾರತೀಯ ಮೂಲದ ಹಶೀಮ್ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾದದ್ದೇ ಅತಿದೊಡ್ಡ ಸಾಧನೆ. ನೇಟಲ್ ಪ್ರಾಂತ್ಯ ಘಟಾನುಘಟಿ ಕ್ರಿಕೆಟಿಗರನ್ನು ಕ್ರಿಕೆಟ್ ಜಗತ್ತಿಗೆ ಕೊಟ್ಟಿದೆ. ಬ್ಯಾರಿ ರಿಚರ್ಡ್ಸ್, ಮೈಕ್ ಪ್ರಾಕ್ಟರ್, ರಾಬಿನ್ ಸ್ಮಿತ್, ಡಡ್ಲಿ ನರ್ಸ್ ಮುಂತಾದ ವಿಸ್ಮಯಗಳನ್ನು ಹುಟ್ಟಿಹಾಕಿದ ನೇಟಲ್ ಪ್ರಾಂತ್ಯದ ಇತ್ತೀಚಿನ ಕೊಡುಗೆ ಹಶೀಮ್ ಆಮ್ಲ. ನೇಟಲ್ ನ ಕ್ವಾಝುಲುವಿನ ಕಬ್ಬಿಣ ಜಲ್ಲೆಯಷ್ಟೆ ಸಿಹಿ ಹಶೀಮ್ ರ ಕವರ್-ಡ್ರೈವ್ ಅಥವಾ ಆನ್-ಡ್ರೈವ್. 

ಅವರ ಬ್ಯಾಕ್-ಲಿಫ್ಟ್ ನೋಡಿದ ಕ್ರಿಕೆಟ್ ಪರಿಣತರು ಹಶೀಮ್ ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡಿರಲಿಲ್ಲ. ಶಾಶ್ರೀಯ ರೀತಿಯಲ್ಲಿ ಕ್ರಿಕೆಟ್ ಕಲಿತವರು, ಶಾಟ್ ಹೊಡೆಯುವ ಮುನ್ನ ಬ್ಯಾಟ್ ತರುವಾಗ ಬ್ಯಾಟ್ ನ ತುದಿ ಮೊದಲ ಸ್ಲಿಪ್ ಅಥವಾ ಎರಡನೇ ಸ್ಲಿಪ್ಪನ್ನು ಎದುರಿಸುತ್ತಿರುತ್ತದೆ. ಆದರೆ ಹಶೀಮ್ ರ ಬ್ಯಾಟ್ ತುದಿ ಗಲ್ಲಿ ಕಡೆ ನೋಡುವುದರಿಂದ ಅವರು ಹೆಚ್ಚು ದಿನ ಉನ್ನತ ಮಟ್ಟದಲ್ಲಿ ಉಳಿದುಕೊಳ್ಳಲಾರರೆಂದೇ ಜ್ಯೋತಿಷ್ಯ ನುಡಿದ್ದರು. ಅಂತಹ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದು ಹಶೀಮ್. 

ಅಂಕಿ-ಅಂಶದಿಂದಲೇ ಹಶೀಮ್ ರನ್ನು ಅಳೆಯುವ ಜನರಿಗೆ ಇದೊಂದು ತುಣುಕು. ಏಕದಿವಸೀಯ ಪಂದ್ಯಗಳಲ್ಲಿ ಅತಿ ವೇಗದಲ್ಲಿ 2000, 3000, 4000, 5000, 6000, ಹಾಗೂ 7000 ರನ್ ಗಳಿಸಿದ ಹಶೀಮ್ 8000 ರನ್ ಗಳನ್ನು ಅತ್ಯಂತ ವೇಗವಾಗಿ ಗಳಿಸಿದ ಆಟಗಾರನೆಂಬ ದಾಖಲೆಯನ್ನು ಕೂದಲಿನಂತರದಿಂದ ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟರು. 

ಅಂದ ಹಾಗೆ,  ಸರಣಿಯೋಪಾದಿಯಲ್ಲಿ ದಾಖಲೆ ನಿರ್ಮಿಸಿದ ಹಶೀಮ್ ತಮ್ಮ ಎರಡು ಮಕ್ಕಳಿಗೆ ಜನ್ಮ ನೀಡಿದ್ದೂ ಸರಣಿಯಲ್ಲೇ - ಮೊದಲನೇ ಮಗು ಪಡೆದದ್ದು 2012 ರಲ್ಲಿ, ಎರಡನೇ ಮಗು ಪಡೆದದ್ದು ಮರುವರ್ಷವೇ!