ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಕುಸಿತ, 100 ತಾಲೂಕುಗಳಲ್ಲಿ ನೀರಿನ ತೀವ್ರ ಅಭಾವ: ಕಾಡಲಿದೆ ಭೀಕರ ಜಲಕ್ಷಾಮ

ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಕುಸಿತ, 100 ತಾಲೂಕುಗಳಲ್ಲಿ ನೀರಿನ ತೀವ್ರ ಅಭಾವ: ಕಾಡಲಿದೆ ಭೀಕರ ಜಲಕ್ಷಾಮ

ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಕರ್ನಾಟಕದಲ್ಲೀಗ ಕಳೆದ ಹಲವು ವರ್ಷಗಳಿಂದ ಅಂತರ್ಜಲ ಕುಸಿಯಲಾರಂಭಿಸಿರುವುದು ಆತಂಕ ಹುಟ್ಟಿಸಿದೆ. ತೀವ್ರ ಸ್ವರೂಪದಲ್ಲಿ ಅಂತರ್ಜಲ ಇಳಿಕೆಯಾಗುತ್ತಿರುವ 100 ತಾಲೂಕುಗಳನ್ನು ಮುಂದಿನ ದಿನಗಳಲ್ಲಿ ನೀರಿನ ಅಭಾವವಿರುವ ಪ್ರದೇಶ ಎಂದು ಘೋಷಿಸಬಹುದು ಅಥವಾ ಅಂತರ್ಜಲ ಬಳಕೆಯನ್ನು ನಿಷೇಧಿಸಲೂಬಹುದು ಎನ್ನುತ್ತಾರೆ ಜಿ.ಮಹಂತೇಶ್.

ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಎದುರಾಗುತ್ತಿರುವ ಬರಗಾಲದ ಮಧ್ಯೆಯೇ ಅಂತರ್ಜಲದ ಮಟ್ಟ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.

ಯಥೇಚ್ಛವಾಗಿದ್ದ ಶುದ್ಧ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದು ಅಥವಾ ಕಣ್ಮರೆಯಾಗುತ್ತಿರುವುದೇ ಇದಕ್ಕೆ ಮೂಲ ಕಾರಣ.  ರಾಜ್ಯದಲ್ಲಿ ಅಂತರ್ಜಲ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದು ಮುಂದಿನ ದಿನಗಳಲ್ಲಿ  ತೀವ್ರ ಸ್ವರೂಪದಲ್ಲಿ ಜಲ ಕ್ಷಾಮ ಎದುರಾಗಲಿದೆ ಎಂಬುದನ್ನೂ ಪ್ರತಿಧ್ವನಿಸುತ್ತಿದೆ.

ಅಂತರ್ಜಲ ಮಟ್ಟದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳದ ಕಾರಣ 176 ತಾಲೂಕುಗಳ ಪೈಕಿ 100 ತಾಲೂಕುಗಳಲ್ಲಿ ಅಂತರ್ಜಲದ ಪ್ರಮಾಣ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆಯೇ ಹೊರತು, ಏರಿಕೆ ಆಗುತ್ತಿಲ್ಲ. ಅಂರ್ತಜಲದ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆಯಲ್ಲದೆ, ಈ ಸ್ಥಿತಿ ಹೀಗೆಯೇ  ಮುಂದುವರೆದರೆ ಜಲ ಬಿಕ್ಕಟ್ಟು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಅಲ್ಲದೆ, ತೀವ್ರವಾಗಿ ಅಂತರ್ಜಲ ಕುಸಿಯುತ್ತಿರುವ ತಾಲೂಕುಗಳನ್ನು ನೀರಿನ ಅಭಾವವಿರುವ ಪ್ರದೇಶ ಅಥವಾ ಅತಿ ಶೋಷಣೆಗೆ ಒಳಗಾಗಿರುವ ಪ್ರದೇಶ ಎಂದು ಘೋಷಿಸುವ ದಿನಗಳು ಬಹಳ ದೂರವಿಲ್ಲ. ಇನ್ನು, ಇಂತಹ ಪ್ರದೇಶಗಳಲ್ಲಿ ಅಂತರ್ಜಲ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದರೂ ಯಾವುದೇ ಅಚ್ಚರಿಯಿಲ್ಲ.

ಕೇಂದ್ರ ಅಂತರ್ಜಲ ಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲೂ ಕರ್ನಾಟಕದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಂಡಿರುವುದು ವರದಿಯಾಗಿತ್ತು. ಇದರ ಬೆನ್ನಲ್ಲೇ 'ಡೆಕ್ಕನ್' ನ್ಯೂಸ್‌ಗೆ ದೊರೆತಿರುವ ರಾಜ್ಯದ 100 ತಾಲೂಕುಗಳಲ್ಲಿನ ಅಂತರ್ಜಲದ ಸ್ಥಿತಿಗತಿ ಕುರಿತು ದೊರೆತಿರುವ ಅಂಕಿ ಅಂಶಗಳು ಮತ್ತಷ್ಟು ಗಾಬರಿ ಹುಟ್ಟಿಸಿವೆ.

ರಾಜ್ಯದ 176 ತಾಲೂಕುಗಳ ಪೈಕಿ ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂತರ್ಜಲದ ಮಟ್ಟ ಇಳಿಕೆಯಾಗಿದೆ. ವಾರ್ಷಿಕ ಸರಾಸರಿ ಇಳಿಕೆಯ ಪ್ರಮಾಣವು 20.95ಮೀ.ನಷ್ಟು ಕಂಡು ಬಂದಿದೆ.

ಅದೇ ರೀತಿ ಕಳೆದ 5 ವರ್ಷಗಳಲ್ಲಿ ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ 19.30, ಮಾಲೂರು ತಾಲೂಕಿನಲ್ಲಿ 18.98 ಬಂಗಾರಪೇಟೆ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 12.78 ಮೀ.ನಷ್ಟು ಇಳಿಕೆ ಕಂಡಿದೆ.

2018ರಲ್ಲಿಯೂ ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 83.49ಮೀ.ನಷ್ಟು ಕುಸಿದಿದೆ. ಮಾಲೂರು ತಾಲೂಕಿನಲ್ಲಿ 85.81, ಮುಳಬಾಗಿಲನಲ್ಲಿ 64.12, ಶ್ರೀನಿವಾಸಪುರ ತಾಲೂಕಿನಲ್ಲಿ 71.50, ಬಂಗಾರಪೇಟೆ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 68.91ರಷ್ಟು ಕುಸಿತ ಕಂಡಿರುವುದು ಈ ಭಾಗದಲ್ಲಿ ಆತಂಕ ಹುಟ್ಟಿಸಿದೆ.

ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ18.80, ಚಿಂತಾಮಣಿ ತಾಲೂಕಿನಲ್ಲಿ18.02, ಶಿಡ್ಲಘಟ್ಟ ತಾಲೂಕಿನಲ್ಲಿ12.65, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ12.39ರಷ್ಟು ಕುಸಿತವಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿರುವ ರಾಮನಗರ ತಾಲೂಕಿನಲ್ಲಿ ಕಳೆದ 5 ವರ್ಷಗಳಲ್ಲಿ ವಾರ್ಷಿಕ ಸರಾಸರಿ 38.86 ಮೀ.ನಷ್ಟು ಕುಸಿದಿದೆಯಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ಬಾಗಲಕೋಟೆಯ ಬದಾಮಿ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 12.78ಮೀ., ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರತಿನಿಧಿಸಿರುವ ಕನಕಕಪುರ ತಾಲೂಕಿನಲ್ಲಿ 12.80ಮೀ.ನಷ್ಟು ಇಳಿಕೆಯಾಗಿದೆ.

ಅತಿಯಾದ ನಗರೀಕರಣ ಮತ್ತು ನಗರ, ಪಟ್ಟಣ ಕೇಂದ್ರಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳು, ಏರುತ್ತಿರುವ ಜನಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಅವೈಜ್ಞಾನಿಕ ಕೃಷಿ ಪದ್ಧತಿಯೂ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ.

ಆಹಾರ ಮತ್ತು ವಾಣಿಜ್ಯ ಬೆಳೆಗಳಿಗೆ ನೀರಿನ ಮೂಲಗಳನ್ನು ಬಳಸಿಕೊಳ್ಳುವ ಬದಲಿಗೆ ಮಿತಿ ಮೀರಿ ಕೊಳವೆ ಬಾವಿಗಳನ್ನು ರೈತರು ಕೊರೆಯಿಸುತ್ತಿದ್ದಾರೆ. ಅಲ್ಲದೆ, ಅತಿ ಹೆಚ್ಚು ನೀರು ಬೇಡುವ ಭತ್ತ ಬೆಳೆಯೂ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಸಾಕಷ್ಟು ನೀರು ಬೇಕಿರುವ ಕಾರಣ ದಿನ ನಿತ್ಯವೂ ಸಾವಿರಾರು ಲೀಟರ್ ಪ್ರಮಾಣದಲ್ಲಿ ನೀರನ್ನು ಎಳೆದುಕೊಳ್ಳುತ್ತಿದ್ದಾರೆ.

ಪರಿಣಾಮಕಾರಿಯಾಗಿ ಜಾರಿಯಾಗದ ಕಾಯ್ದೆ

ಅಂತರ್ಜಲ ಬಳಕೆಗೆ ಸಂಬಂಧಪಟ್ಟಂತೆ ಕರ್ನಾಟದಲ್ಲಿಯೂ ಕಾನೂನನ್ನು ರೂಪಿಸಲಾಗಿದೆ. 1999 ರಲ್ಲಿಯೇ ಕುಡಿಯುವ ನೀರಿನ ಮೂಲವನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಬಳಕೆಯನ್ನು ನಿಯಂತ್ರಿಸಲು ನಿಯಮವನ್ನೂ ಅಳವಡಿಸಿಕೊಳ್ಳಲಾಗಿದೆ. ಅದರಂತೆ ಸಾರ್ವಜನಿಕ ಕುಡಿಯುವ ನೀರಿನ ಮೂಲದಿಂದ 500 ಮೀಟರ್ ಒಳಗಿನ ವ್ಯಾಪ್ತಿಯಲ್ಲಿರುವ ಅಂತರ್ಜಲವನ್ನು ತೆಗೆಯುವ ಉದ್ದೇಶಕ್ಕಾಗಿ ಅನುಮತಿ, ಸರ್ಕಾರ ಯಾವುದೇ ಪ್ರದೇಶವನ್ನು 'ನೀರಿನ ಅಭಾವವಿರುವ ಪ್ರದೇಶ' ಎಂದು ಅಥವಾ 'ಅತಿ ಶೋಷಣೆಗೆ ಒಳಗಾಗಿರುವ ಪ್ರದೇಶಗಳೆಂದು" ಘೋಷಿಸಬಹುದು. ಹಾಗೆಯೇ ಅಂತಹ ಪ್ರದೇಶಗಳಲ್ಲಿ ಅಂತರ್ಜಲ ಬಳಕೆಯನ್ನು ನಿಷೇಧಿಸಬಹುದು.

ಇನ್ನು 2011ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಅಂತರ್ಜಲ ನಿಯಂತ್ರಣ ಮತ್ತು ಅಭಿವೃದ್ಧಿ ನಿರ್ವಹಣೆ ಕಾಯಿದೆ ಜಾರಿಗೊಳಿಸಿದೆ. ಆದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎನ್ನುತ್ತಾರೆ ಜಲ ತಜ್ಞರು.