ಗ್ರಾಂಸಿಯ ಜೈಲು ದಿನಗಳು

ಗ್ರಾಂಸಿಯ ಜೈಲು ದಿನಗಳು

(ಕಳೆದ ಭಾನುವಾರದಿಂದ)

ಫಾಸಿಸ್ಟ್ ಸರ್ಕಾರವು ಗ್ರಾಂಸಿಯನ್ನು ಅಸ್ಟಿಕಾ ಎಂಬ ದ್ವೀಪಕ್ಕೆ ಬಂಧಿಯಾಗಿ ವರ್ಗಾಯಿಸಿತು. ಇಟಲಿಯ ಉತ್ತರದಲ್ಲಿದ್ದ ಈ ದ್ವೀಪದಿಂದ ಕೆಲವು ವಾರಗಳ ನಂತರ ಜನವರಿ 1927ರಲ್ಲಿ ಮಿಲಾನ್ ನಗರಕ್ಕೆ ನ್ಯಾಯಾಲಯದ ವಿಚಾರಣೆಗೆ ಕರೆತರಲಾಯಿತು. ಆದರೆ ಯಾವುದೇ ತನಿಖೆ ನಡೆಯದೆ ಗ್ರಾಂಸಿ ಬೀಕರ ಪರಿಸ್ಥಿತಿಯಲ್ಲಿ ಬಂಧನದಲ್ಲಿರಬೇಕಾಯಿತು. ನಿಜವಾದ ತನಿಖೆಗಾಗಿ ಗ್ರಾಂಸಿಯು 1928ರ ಮೇ ತಿಂಗಳವರೆಗೆ ಕಾಯಬೇಕಾಯಿತು. ಆಮೇಲೆ ಪಕ್ಷದ ಸಂಗಾತಿಗಳೊಂದಿಗೆ ಸ್ಥಳಾಂತರಿಸಲ್ಪಟ್ಟ ಗ್ರಾಂಸಿಯನ್ನು ರೋಮ್‍ಗೆ ತರಲಾಯಿತು.

ಈ ಸಮಯದಲ್ಲಿ ಫಾಸಿಸ್ಟ್ ಸರ್ಕಾರವು ಸುಳ್ಳುಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಮಂಡಿಸಿ ಏಕಪಕ್ಷೀಯವಾಗಿ ಹಾಗೂ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಗ್ರಾಂಸಿಯು ರಾಷ್ಟ್ರವಿರೋಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದನೆಂಬ, ಕಾರ್ಮಿಕವರ್ಗದ ತೀವ್ರಗಾಮಿ ಕಾರ್ಯಾಚರಣೆಯನ್ನು ಹುಟ್ಟುಹಾಕಿದನೆಂಬ ಆರೋಪದ ಮೇಲೆ 20 ವರ್ಷಗಳ ಕಾಲ ಸೆರೆಯನ್ನು ಘೋಷಿಸಿತು. ಈ ಸಂದರ್ಭದಲ್ಲಿ ತೀರ್ಪು ಕೊಟ್ಟ ಫಾಸಿಸ್ಟ್ ಅಧಿಕಾರಿಯು ಗ್ರಾಂಸಿಯ ‘ಕ್ರಿಯಾತ್ಮಕ ಮೆದುಳನ್ನು ನಿಲ್ಲಿಸಬೇಕು’ಎಂದು ಘೋಷಿಸಿದನು.

 1926-28ರವರೆಗೆ ಗ್ರಾಂಸಿಯನ್ನು ಅವನ ಇತರ ಸಂಗಾತಿಗಳ ಜೊತೆ ಒಂದೇ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿಯೇ ಅವನು ಒಂದು ವಿವರವಾದ ಪಠ್ಯಕ್ರಮವನ್ನು ತಯಾರಿಸಿ ಸಹ ಕೈದಿಗಳಿಗೆ ಅಧ್ಯಯನ ತರಗತಿಗಳನ್ನು ಪ್ರಾರಂಭಿಸಿದ. ಅದು ‘ಸೆರೆಮನೆಯ ವಿಶ್ವವಿದ್ಯಾಲಯ’ ಎಂದೇ ಖ್ಯಾತವಾಯಿತು. 1928ರಲ್ಲಿ ಗ್ರಾಂಸಿಯನ್ನು ಅವನ ಸಂಗಾತಿಗಳಿಂದ ಬೇರೆ ಮಾಡಿ ಟ್ಯೂರಿನ್‍ನ ಜೈಲಿಗೆ ಸ್ಥಳಾಂತರಿಸಲಾಯಿತು. 

ಇಟಲಿಯ ಕ್ರೂರ ಬೇಸಿಗೆಯಲ್ಲಿ ಗ್ರಾಂಸಿಯ ಪ್ರಯಾಣವು ರೋಂನಿಂದ ಪ್ರಾರಂಭವಾಗಿ ಟುರ್ಡಿ ಬಾರಿಯಲ್ಲಿನ ಸೆರೆಮನೆಯಲ್ಲಿ ಕೊನೆಯಾಯಿತು. ದನಗಳನ್ನು ಸಾಗಿಸುವ ರೈಲು ವ್ಯಾಗನ್‍ಗಳಲ್ಲಿ ಗ್ರಾಂಸಿಯನ್ನು ಸರಪಳಿಗಳಿಂದ ಬಂಧಿಸಿ, ಕೈಕಾಲುಗಳನ್ನು ಬಿಗಿದು ಕುಳಿತುಕೊಳ್ಳಲೂ ಆಗದೆ, ನಿಲ್ಲಲೂ ಆಗದೆ ಅನೇಕ ದಿನಗಳ ಪ್ರಯಾಣ ಮಾಡಿಸಿದರು. ರೋಂನಿಂದ ಪ್ರಾರಂಭವಾದ ಈ ಪ್ರಯಾಣದ ಸಮಯದಲ್ಲೇ ಅಸ್ವಸ್ಥನಾಗಿದ್ದ ಗ್ರಾಂಸಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಸೆರೆಮನೆ ಸೇರಿದ ನಂತರ ಕನಿಷ್ಟ ಆರೋಗ್ಯ ಸೌಲಭ್ಯದಿಂದಲೂ ಗ್ರಾಂಸಿಯು ವಂಚಿತನಾದನು. ಬೇಸಿಗೆಯ ದಗೆ ಮತ್ತು ಪ್ರಯಾಣದಿಂದಾಗಿ ಅವನ ಶರೀರದಲ್ಲಿ ಹುಣ್ಣು ಕುರುಗಳ ವ್ರಣವು ಹೆಚ್ಚಾಗಿ ಟ್ಯೂರಿನ್ನನ್ನು ತಲುಪುತ್ತಿದ್ದಂತೆಯೇ ಸಂಪೂರ್ಣವಾಗಿ ಅನಾರೋಗ್ಯದಿಂದ ತತ್ತರಿಸಿ ಹೋದನು.

ಟ್ಯೂರಿನ್‍ನಲ್ಲಿನ ಸೆರೆವಾಸವು ಹಿಂದೆ ಹದಗೆಟ್ಟಿದ್ದ ಗ್ರಾಂಸಿಯ ಆರೋಗ್ಯವನ್ನು ಮತ್ತಷ್ಟು ಕೆಡಿಸಿ ಸಾವಿನ ದವಡೆಗೆ ತಳ್ಳಿತು. ಕನಿಷ್ಟ ಆರೋಗ್ಯ ಸೌಲಭ್ಯವಿಲ್ಲದ ಸೆರೆಮನೆಯ ಕ್ಷೀಣಿಸುವ ಊಟದ ವ್ಯವಸ್ಥೆ ಗ್ರಾಂಸಿಯನ್ನು ದೈಹಿಕವಾಗಿ ಕರಗಿಸಿತು. ಈ ವರ್ಣಿಸಲಸಾಧ್ಯವಾದ ಸೆರೆಮನೆಯ ಕ್ರೌರ್ಯ ಹರಯದಲ್ಲಿದ್ದ ಗ್ರಾಂಸಿಗೆ ಮುಪ್ಪಿನ ಸ್ಥಿತಿಯನ್ನು ತಂದಿತಲ್ಲದೆ ಸಾವನ್ನು ಎದುರುನೋಡುವ ಸಂದರ್ಭಗಳು ಬರತೊಡಗಿದವು.

ಈ ನಶಿಸುವ ಸಮಯದಲ್ಲಿ ಗ್ರಾಂಸಿಯು ತನ್ನ ಇಡೀ ಜೀವನದ ಎಲ್ಲ ಧೈರ್ಯ, ಸ್ಥೈರ್ಯ, ತನ್ನಲ್ಲಿದ್ದ  ಪಾಂಡಿತ್ಯವನ್ನು ಮತ್ತು ಅಧ್ಯಯನದ ಪ್ರತಿಭೆಯನ್ನು ಕ್ರೋಡಿಕರಿಸಿ ಮುಸಲೋನಿಯ ಫಾಸಿಸಂನ ಉತ್ತುಂಗ ಕಾರ್ಯದ ಅತಿರೇಕಗಳ ಸಂದರ್ಭಗಳನ್ನು ಪುಟಪುಟದಲ್ಲಿ ಬರೆಯುವ ನಿರ್ಧಾರ ಮಾಡಿದನು. ಅಲ್ಪಕಾಲಕ್ಕಾದರೂ ಜೀವಿಸುವ ಅಪ್ರತಿಮ ಧೈರ್ಯದೊಂದಿಗೆ ಜೈಲು ಬರಹಗಳನ್ನು ಪ್ರಾರಂಭಿಸಿ ಕಮ್ಯುನಿಸ್ಟ್ ಕಾರ್ಯಕರ್ತನ ಜವಾಬ್ದಾರಿಯನ್ನು ಪೂರೈಸಲು ಗ್ರಾಂಸಿಯು ಸಿದ್ಧನಾದನು. ಈತನ ಜೈಲು ಬರಹಗಳು(ಪ್ರಿಸನ್ ನೋಟ್ಸ್) ಕಮ್ಯುನಿಸ್ಟ್ ಪ್ರಪಂಚದಲ್ಲಿ ಅತ್ಯಂತ ಪ್ರಮುಖವಾದ ಬರಹವಾಗಿದ್ದು ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ಹೋರಾಟದ ಮೂಲ ಬರಹಗಳಲ್ಲೊಂದಾಗಿದೆ.

ಜೀವಿಸಲು ಅಸಹ್ಯ ಹುಟ್ಟಿಸುವ ಜೈಲು ಜೀವನದ ಆ ದಿನಗಳಲ್ಲಿ ಒಂದೆರಡು ಚಮಚದಷ್ಟು ಅನ್ನವನ್ನೂ ಊಟ ಮಾಡದಷ್ಟು ನಿಷ್ಕ್ರಿಯೆಗೊಂಡ ಗ್ರಾಂಸಿ ಒಂದೆರಡು ವರ್ಷಗಳಲ್ಲಿ ತನ್ನ ಎಲ್ಲ ಹಲ್ಲುಗಳನ್ನು ಕಳೆದುಕೊಂಡನು. ಈ ಕಾರಣದಿಂದಾಗಿ ಜೈಲಿನಲ್ಲಿ ಕೇವಲ ಬದುಕಲು ಮಾತ್ರ ಸ್ವೀಕರಿಸುತ್ತಿದ್ದ ಅನಾರೋಗ್ಯಕರ, ಹಳಸಿದ ಆಹಾರವು ಜೀರ್ಣವಾಗದೆ ಗ್ರಾಂಸಿಯು ಹೊಟ್ಟೆಹುಣ್ಣು ಮತ್ತು ನೋವುಗಳಿಂದಲೂ ನರಳತೊಡಗಿದನು. ಈ ಸಂಕಟದ ದಿನಗಳನ್ನು ಕಳೆದ ಮೊದಲ ವರ್ಷಗಳಲ್ಲಿ ಗ್ರಾಂಸಿಯು ಪ್ರತಿ ರಾತ್ರಿ ಮೂರು ಬಾರಿ ಫಾಸಿಸ್ಟರ ತನಿಖೆಗೆ ಒಳಪಡಬೇಕಾಗುತ್ತಿತ್ತು.

ಗ್ರಾಂಸಿಯನ್ನು ಕಾವಲು ಕಾಯುತ್ತಿದ್ದ ಕಾವಲುಗಾರರ ಕೋಣೆಯು ಅವನಿದ್ದ ಕೋಣೆಯ ಪಕ್ಕದಲ್ಲಿದ್ದರಿಂದ, ಕಟಕಟೆಯನ್ನು ಬಡಿಯುವ ಹಾಗೂ ಬೂಟಿನ ಶಬ್ದಗಳು ಹಗಲು ರಾತ್ರಿ ಕೇಳಿಸುತ್ತಿದ್ದರಿಂದ ಪ್ರತಿ ರಾತ್ರಿಯೂ ಗ್ರಾಂಸಿಯು ನಿದ್ರೆಯಿಂದ ವಂಚಿತನಾದನು. ಕಾರಣವಿಲ್ಲದೆ ನಿದ್ರೆಯಿಂದ ದೂರವಿಡಲು ನಡೆಸುತ್ತಿದ್ದ ತನಿಖೆಗಳು ಗ್ರಾಂಸಿಯನ್ನು ಮಾನಸಿಕವಾಗಿ ಅಸ್ವಸ್ಥನನ್ನಾಗಿಸುವ ಕುತಂತ್ರವಾಗಿತ್ತು. 1930ರ ನವೆಂಬರ್ 3ರಂದು ಗ್ರಾಂಸಿಯು ದಿನಕ್ಕೆ ಕೇವಲ 5 ಗಂಟೆ ಹಾಗೂ ಕೇವಲ ವಾರದಲ್ಲಿ ಎರಡು ದಿನ ಮಾತ್ರ ನಿದ್ರಿಸಿದನೆಂದು ಬರೆಯುತ್ತ ತನ್ನಲ್ಲಿದ್ದ ಅಪ್ರತಿಮ ಮನಸ್ಥೈರ್ಯವನ್ನು ವಿವರಿಸಿದ್ದಾನೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ತನ್ನ ಸಂಗಾತಿಗಳೊಂದಿಗೆ ಮಾಡುತ್ತಿದ್ದ ಸಂಘಟನಾ ಕಾರ್ಯಶೀಲತೆಯಿಂದ, ಭಾವನಾತ್ಮಕವಾಗಿ ಹಾಗೂ ಕ್ರಿಯಾತ್ಮಕವಾಗಿ ಗೆಳೆಯರೊಂದಿಗೆ ಸದಾ ಸ್ಫೂರ್ತಿಯಿಂದ ಬದುಕಿದ ಗ್ರಾಂಸಿಗೆ ಜೈಲಿನ ಒಂಟಿತನದ ಕಠಿಣ ಬದುಕು ಅವನ ವ್ಯಕ್ತಿತ್ವವನ್ನು ನಾಶಮಾಡಿತು. ಇದಕ್ಕಿಂತ ದೊಡ್ಡ ಆಘಾತವೆಂದರೆ ಗ್ರಾಂಸಿಯು ಸೆರೆಯಾದ ದಿನದಿಂದ ಸಾವಿನ ದಿನದವರೆಗೆ ತನ್ನ ಪ್ರೀತಿಯ ಮಡದಿ ಹಾಗೂ ಇಬ್ಬರು ಮುದ್ದುಮಕ್ಕಳನ್ನು ನೋಡುವುದರಿಂದಲೂ ವಂಚಿತನಾದನು. ಅವನ ಜೀವನ ಸಂಗಾತಿ, ಮಡದಿ ಗೂಯಲಿಯಾಸುಟ್ಜಳನ್ನು 1923ರಲ್ಲಿ ಮಾಸ್ಕೋದಲ್ಲಿ ಮದುವೆಯಾಗಿದ್ದನು. ಅವಳು ತನ್ನ ಪತಿ ಗ್ರಾಂಸಿಯು ಸೆರೆಯಾದ ಘಟನೆಯ ಆಘಾತದಿಂದಾಗಿ ತೀವ್ರ ಮಾನಸಿಕ ವೇದನೆಗೆ ಒಳಗಾಗಿ ಮುಂದೆಂದೂ ಚೇತರಿಸಿಕೊಳ್ಳದಾದಳು.

ಸೆರೆಯಲ್ಲಿದ್ದ ಸಂದರ್ಭದಲ್ಲಿ ಗ್ರಾಂಸಿಯು ತನ್ನ ಸಹೋದರಿಗೆ ಬರೆದ ಪತ್ರದಲ್ಲಿ ತನ್ನ ಸೆರೆವಾಸವನ್ನು ಪ್ರಪಂಚದ ಹೋರಾಟದ ಚರಿತ್ರೆಯಲ್ಲಿ ವರ್ಣಿಸಲು ಅಸಾಧ್ಯವಾದ ಘಟನೆಯೆಂದು ಹಾಗೂ ತನ್ನ ಸೆರೆವಾಸ ಕೊನೆಯಿಲ್ಲದ ದುರ್ಘಟನೆಯೆಂದು ವಿವರಿಸಿದ್ದಾನೆ. ಈ ಪತ್ರದಲ್ಲಿ ಗ್ರಾಂಸಿಯು ಫಾಸಿಸ್ಟ್ ಸೆರೆಯ ದುರಂತ ಅನುಭವಗಳನ್ನು ವಿವರಿಸುತ್ತ ತನ್ನ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಗಳನ್ನು ವಿವರಿಸಿದ್ದಾನೆ. ಸೆರೆಮನೆಯ ಬೀಕರ ಸ್ಥಿತಿಗಳನ್ನು ಅನುಭವಿಸಿ ಜೀವಿಸಲು ಹಾಗೂ ತನ್ನ ಬರಹದ ಕಾರ್ಯವನ್ನು ಮಾಡಲು ಅಡ್ಡ ಬರುವ ಪ್ರತಿಕೂಲ ಸಂದರ್ಭಗಳನ್ನು ಎದುರಿಸಲು ಸಿದ್ಧವಾಗುವ ಸ್ಥೈರ್ಯವನ್ನು ವಿವರಿಸಿದ್ದಾನೆ.

ಜೀವಿಸಲಾಗದ ಪರಿಸ್ಥಿತಿಯಲ್ಲಿ ಗ್ರಾಂಸಿಯು ಜೀವಿಸುತ್ತಿದ್ದರೂ ತನ್ನ ಬಗ್ಗೆ ಯಾವುದೇ ಅನುಕಂಪವನ್ನು ತೋರಿಸಿ ಬರೆಯದೆ ಹಾಗೂ ತಾನೆಂದೂ ಅಮರವೀರನಾದೆನೆಂದು ಹೇಳದೆ ಗ್ರಾಂಸಿಯು ಕಮ್ಯುನಿಸ್ಟ್ ಬರವಣಿಗೆಗೆ ಅಧ್ಯಯನದ ನಿಷ್ಟೆಯನ್ನು ತೋರಿದ್ದಾನೆ. ಎಲ್ಲರಿಗಿಂತ ಹೆಚ್ಚಾಗಿ ಅತಿ ಕ್ರೂರ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿಯೂ ಕಮ್ಯುನಿಸ್ಟ್ ಕಾರ್ಯಕರ್ತನಾಗಿ ಕರ್ತವ್ಯನಿಷ್ಟೆಯನ್ನು ತೋರಿದ್ದಾನೆ. ಜೈಲು ಜೀವನದಲ್ಲಿಯೂ ಸದಾ ಕ್ರಿಯಾತ್ಮಕವಾಗಿ ಜೀವಿಸುವ ಗ್ರಾಂಸಿಯು ತನ್ನ ನಾದಿನಿಗೆ ಬರೆದ ಪತ್ರದಲ್ಲಿ “ಗೋಡೆಗೆ ತಲೆಯನ್ನು ಚಚ್ಚಿಕೊಳ್ಳುವ ಮೊದಲು ತಲೆ ನನ್ನದು ಎಂದು ತಿಳಿಯಬೇಕು. ಇದೇ ನನ್ನ ಶಕ್ತಿ” ಎಂದು ತಾನು ಜೀವಿಸುವ ಬೃಹದುದ್ದೇಶವನ್ನು ತಿಳಿಸುತ್ತಾನೆ.

ಜೈಲಿನಲ್ಲಿ ಗ್ರಾಂಸಿಯನ್ನು ಕೊಲೆ, ಸುಲಿಗೆ ಮಾಡಿದ ಅಪರಾಧಿಗಳ ಜೊತೆ ಒಂದೇ ಕೋಣೆಯಲ್ಲಿ ಹಾಕಿದರು. ಅವನ ಓದು, ಬರಹಗಳನ್ನು ನಿಷೇಧಿಸಲಾಯಿತು. ಪದೇಪದೇ ಪ್ರತಿಭಟಿಸಿದ ನಂತರ ಪ್ರತ್ಯೇಕ ಕೋಣೆಯೊಂದನ್ನು ನೀಡಿ, ಅವನ ಓದು, ಬರಹದ ಮೇಲಿದ್ದ ನಿಷೇಧವನ್ನು ತೆಗೆದುಹಾಕಿದರು. ಆದರೆ ಅವನು ಓದುವ ಪ್ರತಿ ಪುಸ್ತಕ, ಪತ್ರಿಕೆಗಳು, ಸ್ನೇಹಿತರಿಗೆ ಬರೆದ ಪತ್ರಗಳು ಸೇರಿದಂತೆ ಎಲ್ಲ ಬರಹಗಳನ್ನೂ ಸೆನ್ಸಾರ್ ಮಾಡಲಾಯಿತು. ಸೆರೆವಾಸ ಕಾಲದಲ್ಲಿ, ಅವನನ್ನು ಜೀವನಪೂರ್ತಿ ಸತಾಯಿಸಿದ ರೋಗಗಳು ಉಲ್ಬಣ ಗೊಂಡವು. ಈ ಸ್ಥಿತಿಯಲ್ಲಿಯೇ ಗ್ರಾಂಸಿ 34 ನೋಟ್ ಪುಸ್ತಕಗಳಲ್ಲಿ ತನ್ನ ವಿಚಾರಗಳನ್ನು ಬರೆದಿಟ್ಟ. ಈ ಬರಹಗಳೇ ನಂತರ ‘ಪ್ರಿಸನ್ ನೋಟ್‍ಬುಕ್ಸ್’ ಎಂದು ಖ್ಯಾತವಾಗಿವೆ. 1936ರಲ್ಲಿ ಅವನ ಆರೋಗ್ಯ ಚಿಂತಾಜನಕವಾಯಿತು. ತನ್ನ ಮೇಲೆ ಕರುಣೆ ತೋರಬೇಕು ಎಂದು ಫಾಸಿಸ್ಟ್ ಸರ್ಕಾರಕ್ಕೆ ಬೇಡಿಕೊಂಡರೆ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತು. ಗ್ರಾಂಸಿ ಈ ರೀತಿ ಬೇಡಿಕೊಳ್ಳಲು ನಿರಾಕರಿಸಿದ.

 ಫಾಸಿಸಂ ಗ್ರಾಂಸಿಯನ್ನು ದೈಹಿಕವಾಗಿ ಬಂಧಿಸಿದರೂ ಅವನು ಸೈದ್ಧಾಂತಿಕವಾಗಿ ಕಮ್ಯುನಿಸ್ಟರೊಂದಿಗೆ ಜೀವಿಸುತ್ತಿದ್ದನು. ಕ್ರೂರ ಸೆರೆಯ ವೈಪರೀತ್ಯ, ಸಂದಿಗ್ಧ ಸಂದರ್ಭಗಳಲ್ಲಿಯೂ ಮನಸ್ಥೈರ್ಯ ಕಳೆದುಕೊಳ್ಳದೆ ಜೀವಿಸಿ ಸಿದ್ಧಾಂತಕ್ಕೆ ಬದ್ಧನಾಗಿ ಸೆರೆಮನೆಯಲ್ಲಿ ಗ್ರಾಂಸಿ ಬರೆದ ಪುಟಗಳ ಸಂಖ್ಯೆ 2848. ಈ ಪುಟಗಳು 34 ನೋಟ್ ಪುಸ್ತಕಗಳಾಗಿವೆ. ಈ ಜೈಲು ಬರಹಗಳು ಒಬ್ಬ ಕ್ರಾಂತಿಕಾರಿಯು ಸೆರೆಯಲ್ಲಿಯೂ ತನ್ನ ಬೌದ್ಧಿಕ ಸ್ವಾತಂತ್ರ್ಯದಿಂದ ವಂಚಿತನಾಗಲು ಸಾಧ್ಯವಿಲ್ಲವೆಂಬುದನ್ನೂ ಗ್ರಾಂಸಿಯು ನಿರೂಪಿಸಿದ. ಬಹುಮುಖ್ಯ ವಿಷಯವೆಂದರೆ ಗ್ರಾಂಸಿಯು ಇಟಲಿಯ ಪ್ರಾಚೀನ ಚರಿತ್ರೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ತನ್ನ ರಾಜಕೀಯ ಬರಹದಲ್ಲಿ ವಿಮರ್ಶಿಸಿದ್ದಾನೆ. 19ನೆಯ ಶತಮಾನದ ಕ್ರೈಸ್ತಸಭೆ, ಜನಪದ, ಶಿಕ್ಷಣದ ಬೆಳವಣಿಗೆ, ಆಧುನಿಕ ಪತ್ರಿಕೋದ್ಯಮ, ಕೈಗಾರಿಕೆ, ಪೆರೆಂಡೆಲೂ ಹಾಗೂ ಮೆಕೆವೆಲ್ಲಿಯ ಕ್ರಾಂತಿಕಾರಿ ಬರಹದ ಹೊಣೆಗಾರಿಕೆಯು ಗ್ರಾಂಸಿಯ ಬರಹದಲ್ಲಿ ಹೊಸ ಕ್ರಾಂತಿಕಾರಕ ರೂಪ ತಳೆಯಿತು.

ಗ್ರಾಂಸಿಯು ಫಾಸಿಸ್ಟರ ಆಳ್ವಿಕೆಯಲ್ಲಿ ಒಬ್ಬ ಜವಾಬ್ದಾರಿಯುತವಾದ ಸಾಮಾಜಿಕ ಚಿಂತಕನಾಗಿ ಸಾವಿನಂಚಿನಲ್ಲಿಯೂ ಕಬ್ಬಿಣದ ಸೆರೆಯಲ್ಲಿ ತನ್ನ ಬರಹವನ್ನು ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ಕಾಗದದ ಮೇಲೆ ಇಳಿಸುತ್ತಿದ್ದನು. ಈ ಕಾರಣದಿಂದಾಗಿ ಕ್ರಿಯಾತ್ಮಕ ಬರಹಗಾರನಾದ ಗ್ರಾಂಸಿಗೆ ಮತ್ತೆ ಬರೆಯುವುದಾಗಲಿ, ತಿದ್ದುವುದಾಗಲಿ ಅಥವಾ ಹೆಚ್ಚು ವಿವರಿಸುವುದಾಗಲಿ ಹಾಗೂ ಮತ್ತೆ ಸೇರಿಸುವುದಾಗಲಿ ಸಾಧ್ಯವಾಗುತ್ತಿರಲಿಲ್ಲ.

ಗ್ರಾಂಸಿಯ ಬರಹಗಳನ್ನು ಓದುವಾಗ ಪ್ರತಿಯೊಂದು ಪದ, ವಾಕ್ಯಗಳು ಕ್ರಾಂತಿಕಾರಿ ವಿಷಯಗಳ ತೀವ್ರತೆಯಿಂದ ಕೂಡಿದ್ದು ವಿಚಾರದ ಪ್ರವಾಹವೇ ಉಕ್ಕುವಂತೆ ಅನುಭವವಾಗುತ್ತದೆ. ಬರೆಯುವ ವಿಷಯದ ನಡುವೆ ಜೈಲಿನಲ್ಲಿ ಅಡೆತಡೆಯಾದರೆ ತನ್ನ ಮನಸ್ಸಿನಲ್ಲಿರುವ ಎಲ್ಲ ವಿಷಯಗಳನ್ನು ಆದಷ್ಟು ಸಂಕ್ಷಿಪ್ತವಾಗಿ ಬರೆದು ಮುಗಿಸುವ ಪ್ರಯತ್ನ ಮಾಡುತ್ತಿದ್ದನು. ವಿಷಯವು ಅಲ್ಲಿಗೇ ನಿಂತು ಪುನರಾವರ್ತನೆಯ ಸಾಧ್ಯತೆ ಇಲ್ಲದಿದ್ದರೆ ಮೊದಲು ತನಗಾಗಿ ಬರೆದುಕೊಂಡು ಓದುತ್ತಿದ್ದನು. ಗ್ರಾಂಸಿಯು ಈ ಬರವಣಿಗೆಯನ್ನು ಪ್ರಕಟಣೆ ಮಾಡುವ ಉದ್ದೇಶದಿಂದ ಯೋಚಿಸಿರಲಿಲ್ಲ. ಸೆರೆಮನೆಯ ಪರಿಸ್ಥಿತಿಯಲ್ಲಿ ಇದನ್ನು ಯೋಚಿಸಲೂ ಸಹ ಸಾಧ್ಯವಿರಲಿಲ್ಲ. ತಾನು ಬರೆಯುತ್ತಿದ್ದುದನ್ನು ನೋಟ್ ಪುಸ್ತಕದಲ್ಲಿ ಲೇಖನಗಳ ರೂಪದಲ್ಲಿ ಬರೆಯುತ್ತಿದ್ದು ಬರೆದ ವಿಷಯಗಳನ್ನು ಗ್ರಂಥಸೂಚಿಯೊಂದಿಗೆ ಸೂಚಿಸುತ್ತಿದ್ದನು. ಕೆಲವು ಸಮಯದಲ್ಲಿ ವಿಷಯಗಳು ಅನೇಕ ಬಾರಿ ಪುನರಾವರ್ತನೆ ಯಾಗುತ್ತಿದ್ದವು.

ಜೈಲು ಬರಹಗಳು ಈ ಎಲ್ಲ ಕಾರಣಗಳಿಂದಾಗಿ ಓದುಗರಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಠಿಣವಾಗಿವೆ. ಪರಿಣಾಮವಾಗಿ ಗ್ರಾಂಸಿಯ ಮನಸ್ಸನ್ನು ಮತ್ತು ಈ ಕ್ರಾಂತಿಕಾರಿ ಬರಹವನ್ನು ಬರೆದ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡು ಪದೇ ಪದೇ ಓದಬೇಕಾಗುತ್ತದೆ. ಪ್ರತಿ ಪದ, ವಾಕ್ಯಗಳು ಹೊಸ ವಿಷಯಗಳನ್ನು, ಅರ್ಥವನ್ನು ಮತ್ತು ದೃಷ್ಟಿಕೋನವನ್ನು ವಿವರಿಸುತ್ತವೆ. ಕೇವಲ ಪ್ರಕಟಣೆಗಾಗಿ ಸಾಹಿತ್ಯವನ್ನು ಬರೆಯದೆ ಸಾಂಪ್ರದಾಯಿಕ ಬರವಣಿಗೆಯ bsÁಪಿಲ್ಲದ, ವಿಷಯಗಳ ಬೃಹತ್ ರಚನೆಯಲ್ಲಿ ಲೇಖನದ ಎಲ್ಲ ನೀತಿ ನಿಯಮಗಳನ್ನು ಈ ಬರಹದಲ್ಲಿ ಗಮನಿಸಲು ಸಾಧ್ಯವಿಲ್ಲ. ಪ್ರತಿ ಕಂಡಿಕೆ (ಪ್ಯಾರ) ತನ್ನದೇ ಆದ ವಿಷಯ ಮತ್ತು ವಿಚಾರವನ್ನು ಒಳಗೊಂಡಿರುತ್ತದೆ.

ಸೆರೆಮನೆಯ ಭದ್ರ ಕಾವಲು ತನ್ನನ್ನು ಬರೆಯುವಾಗ ಅಡೆತಡೆ ಮಾಡಿದ ಕಾರಣದಿಂದಾಗಿ ಬರವಣಿಗೆಯು ದೀರ್ಘ ವಿಚಾರದಿಂದ ಬೇರ್ಪಡಿಸಿದಂತಾಗಿ ವಿಷಯಗಳು ತುಂಡಾಗಿ ಬರವಣಿಗೆ ಮುಂದುವರಿಯದೆ ಇರುವುದನ್ನು ಈತನ ಮೂಲ ಬರವಣಿಗೆಯಲ್ಲಿ ಕಾಣಬಹುದು. ಫಾಸಿಸ್ಟ್ ಭದ್ರಕಾವಲನ್ನು ಕಣ್ಣು ತಪ್ಪಿಸಲು ಹಾಗೂ ಒಂದು ವೇಳೆ ಈ ಬರಹಗಳು ಭದ್ರತಾ ಸಿಬ್ಬಂದಿಯವರಿಗೆ ಸಿಕ್ಕಿದರೂ ಅಂತಹ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸರಕಾರದ ಪ್ರತಿನಿಧಿಗಳಿಗೆ ಅರ್ಥವಾಗದ ರೀತಿಯಲ್ಲಿ ಗ್ರಾಂಸಿಯು ಭಾಷೆಯನ್ನು ಪ್ರಯೋಗ ಮಾಡಿದ್ದಾನೆ. ದುಡಿಯುವ ವರ್ಗದ ಕ್ರಾಂತಿಕಾರಿ ಪದಕೋಶಗಳ ಬದಲಾಗಿ ಸಾಂಕೇತಿಕ ಶಬ್ದಗಳನ್ನು ಬಳಸುವುದರೊಂದಿಗೆ ವಿವರಿಸಿದ್ದಾನೆ. ಮಾರ್ಕ್ಸ್ ವಾದ ಎಂಬ ಪದವನ್ನು ಭದ್ರತಾ ಸಿಬ್ಬಂದಿಗೆ ಅರ್ಥವಾಗದೆ ಇರಲು ಕ್ರಿಯೆಯ ತತ್ವಶಾಸ್ತ್ರವೆಂದು, ಮಾರ್ಕ್ಸ್ ಮತ್ತು ಏಂಗೆಲ್ಸ್‍ರನ್ನು ತತ್ವಶಾಸ್ತ್ರದ ಜನಕರೆಂದು ತನ್ನದೇ ಆದ ಭಿನ್ನ ಹಾಗೂ ಹೊಸ ನಾಮಕರಣದೊಂದಿಗೆ ಜೈಲು ಬರಹಗಳನ್ನು ಮಾಡಿ ಮಾರ್ಕ್ಸ್ ವಿಚಾರಗಳಿಗೆ ಹೊಸ ದೃಷ್ಟಿಕೋನ ನೀಡಿದ್ದಾನೆ.

ಆ ಹೊತ್ತಿಗಾಗಲೇ ಗ್ರಾಂಸಿಯು ಅನಾರೋಗ್ಯ, ಬರವಣಿಗೆಯ ಬಿರುಸು, ವಿಶ್ರಾಂತಿಯಿಲ್ಲದ ಮೆದುಳಿನ ಶ್ರಮದಿಂದ ಮೇ 1931ರಲ್ಲಿ ಮತ್ತು ಮಾರ್ಚ್ 1933ರಲ್ಲಿ ಎರಡು ಬಾರಿ ಗ್ರಾಂಸಿ ದೈಹಿಕ ಆಘಾತಕ್ಕೆ ಒಳಗಾಗುತ್ತಾನೆ. ಜನವರಿ 1936ರಲ್ಲಿ ಗ್ರಾಂಸಿಯ ಆರೋಗ್ಯವು ತೀರಾ ಹದಗೆಡಲು ಈತನನ್ನು ಟ್ಯೂರಿನ್‍ನಿಂದ ಪೇರಿಮಿಯ ಎಂಬಲ್ಲಿಗೆ ಚಿಕಿತ್ಸೆಗೆ ಒಯ್ಯಲಾಯಿತು. ನಂತರ ಕೊನೆ ಉಸಿರು ಎಳೆಯುವ ಪರಿಸ್ಥಿತಿಯಲ್ಲಿ ರೋಂನ ಕ್ಟೆನಿಸಾನ ಎಂಬ ಔಷಧಾಲಯಕ್ಕೆ ಸೇರಿಸಲಾಯಿತು. ಜೈಲು ಬಿಡುವ ಮುನ್ನ ಅವನ ಬರಹಗಳನ್ನು ವಶಪಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ ಗ್ರಾಂಸಿಯ ನಾದಿನಿಯು ಜೈಲಿನಿಂದ ಅವನನ್ನು ಕರೆದುಕೊಂಡು ಹೋಗುವ ಹೊತ್ತಿಗೆ ಬಹಳ ಚಾಕಚಕ್ಯತೆಯಿಂದ ನೋಟ್ ಪುಸ್ತಕಗಳನ್ನು ಅಡಗಿಸಿಟ್ಟುಕೊಂಡು ಪೋಲಿಸರಿಗೆ ಯಾಮಾರಿಸಿದಳು. ತಕ್ಷಣ ಲಂಡನ್ನಿನಲ್ಲಿದ್ದ ಗ್ರಾಂಸಿಯ ಗೆಳೆಯರೊಬ್ಬರಿಗೆ ಆ ನೋಟ್‍ಬುಕ್‍ಗಳನ್ನು ರಹಸ್ಯವಾಗಿ ರವಾನಿಸಿಬಿಟ್ಟಳು. ರೋಂ ನಗರದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ನೀಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪ್ರಾಣ ಬಿಡುವ ಗಳಿಗೆಯಲ್ಲಿ ಗ್ರಾಂಸಿಯ ಶಿಕ್ಷೆಯನ್ನು ಹತ್ತು ವರ್ಷ ಇಳಿಸಲಾಯಿತು. ಶಿಕ್ಷೆಯನ್ನು ಇಳಿಸಿದ ತೀರ್ಮಾನ ನೀಡಿದ ಒಂದು ವಾರದಲ್ಲಿ ಅಂದರೆ 1937ರ  ಏಪ್ರಿಲ್ 27 ರಂದು ಗ್ರಾಂಸಿಯು ಕೊನೆಯುಸಿರೆಳೆದನು.

(ಹಿಂದಿನ ಸಂಚಿಕೆ-ಗ್ರಾಂಸಿಯ ರಾಜಕೀಯ ಹಿನ್ನಡೆ ಮತ್ತು ಬಂಧನ)