ಸರ್ಕಾರ ಪತನದ ಅಂಚಿನಲ್ಲಿದ್ದರೂ ವರ್ಗಾವಣೆ ಧಂದೆಗಿಲ್ಲ ಕಡಿವಾಣ : ಹುಂಡಿಗೆ ಬಿದ್ದ ಹಣ ಇನ್ನೆಷ್ಟು ವೆಂಕಟರಮಣ ?

ಸರ್ಕಾರ ಪತನದ ಅಂಚಿನಲ್ಲಿದ್ದರೂ ವರ್ಗಾವಣೆ ಧಂದೆಗಿಲ್ಲ ಕಡಿವಾಣ : ಹುಂಡಿಗೆ ಬಿದ್ದ ಹಣ ಇನ್ನೆಷ್ಟು ವೆಂಕಟರಮಣ ?

ಪತನದ ಭೀತಿಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರ ಕೊನೆ ತಿರುವಿಗೆ ಬಂದು ನಿಂತಿದ್ದರೂ ಸಚಿವರ ಕಚೇರಿಗಳಲ್ಲಿ ನಡೆಯುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಭರಾಟೆ ಇನ್ನೂ ನಿಂತಿಲ್ಲ. ವಿಶ್ವಾಸಮತದ ಮೇಲೆ ಸದನದಲ್ಲಿ ಆರಂಭವಾಗಿರುವ ಚರ್ಚೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರಿ, ನೌಕರರ ವರ್ಗಾವಣೆಗಳ ಬಗ್ಗೆಯೂ ಚರ್ಚಿಸಲಿ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಆಹ್ವಾನ ಒಡ್ಡಿರುವ ಬೆನ್ನಲ್ಲೇ ವಿಧಾನಸೌಧದಲ್ಲಿರುವ ಸಚಿವರ ಕಚೇರಿಗಳಲ್ಲೇ ವರ್ಗಾವಣೆ ಧಂದೆ ನಡೆಸುತ್ತಿರುವ ಜಾಲವನ್ನು ಎಸಿಬಿ ಭೇದಿಸಿದೆ. ಬಂಧಿತ ಆರೋಪಿಗಳಿಂದ ವಶಕ್ಕೆ ಪಡೆದಿರುವ ದಾಖಲೆಗಳು ಮೈತ್ರಿ ಸರ್ಕಾರದ ಸಚಿವ ವೆಂಕಟರಮಣಪ್ಪ ಅವರತ್ತ ನೇರವಾಗಿ ಬೊಟ್ಟು ಮಾಡಿವೆ. ಈ ಕುರಿತು ಜಿ.ಮಹಂತೇಶ್ ವರದಿ.

ಮೈತ್ರಿ ಸರ್ಕಾರ ಬುಡಮೇಲಾಗುವಂತಹ ರಾಜಕೀಯ ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ಬೆನ್ನಲ್ಲೇ ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ನೌಕರರ ವರ್ಗಾವಣೆ ಆದೇಶಗಳು ಈಗಲೂ ಬೇಕಾಬಿಟ್ಟಿಯಾಗಿ ಹೊರಬೀಳುತ್ತಿವೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿರುವ ಸಚಿವರ ಕಚೇರಿಗಳೇ 'ವರ್ಗಾವಣೆ ವ್ಯವಹಾರ' ಪ್ರಮುಖ ಕೇಂದ್ರಗಳು ಎಂಬುದನ್ನು ಪುಷ್ಟೀಕರಿಸುವಂತಹ ಪ್ರಕರಣಗಳು ಬಹಿರಂಗಗೊಳ್ಳುತ್ತಿವೆ.

ಸಚಿವರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಸಚಿವರೊಬ್ಬರ ಹೆಸರನ್ನು ಮುಂದಿರಿಸಿಕೊಂಡು ಸಂಘಟಿತವಾಗಿ ನಡೆಸುತ್ತಿದ್ದ ವರ್ಗಾವಣೆ ಧಂದೆಯೊಂದನ್ನು ಹೊರಗೆಳೆದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವರ್ಗಾವಣೆ ದಂಧೆಯ ಅಸಲಿ ರೂಪವನ್ನು ಅನಾವರಣಗೊಳಿಸಿದೆ. ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿರುವ ಹಲವು ದಾಖಲೆಗಳು, ಲೆಟರ್ ಹೆಡ್ ಗಳೆಲ್ಲವೂ ಮೈತ್ರಿ ಸರ್ಕಾರದ ಸಂಪುಟ ದರ್ಜೆ ಸಚಿವ ವೆಂಕಟರಮಣಪ್ಪ ಅವರತ್ತ ಬೊಟ್ಟು ಮಾಡಿ ತೋರಿಸಿವೆ. 

ಕೌಶಲ್ಯ ಭವನದಲ್ಲಿ ತಡರಾತ್ರಿಯಲ್ಲಿಯೂ ವರ್ಗಾವಣೆ ಧಂದೆ ನಡೆಸುತ್ತಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿ, ನೌಕರರು ಭ್ರಷ್ಟಾಚಾರ ನಿಗ್ರಹ ದಳದ ತನಿಖಾಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವುದು ವರ್ಗಾವಣೆ ಭರಾಟೆ ಹೇಗೆ ನಡೆಯುತ್ತಿದೆ ಎಂಬುದನ್ನು ಈ ಪ್ರಕರಣ ಹೆಚ್ಚು ಪುಷ್ಠೀಕರಿಸಿದೆ. 

"ಕಾರ್ಮಿಕ ಸಚಿವರ ಹೆಸರಿನಲ್ಲಿ ಸುಮಾರು 15 ದಿನಗಳಿಂದ ವಸೂಲು ಮಾಡುತ್ತಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆಗೆ ದರವನ್ನೂ ನಿಗದಿ ಮಾಡಿರುವ ಆರೋಪಿತರು,  ಸಚಿವರ ಹೆಸರಿನಲ್ಲಿ ಇಲ್ಲಿಯವರೆಗೆ 16 ಕೋಟಿ ರು.ಗಳಿಗೂ ಹೆಚ್ಚಿನ ಹಣವನ್ನು ವಸೂಲು ಮಾಡಿದ್ದಾರೆ," ಎಂದು ಡಿ ಸಿ ಪಾಪಣ್ಣ ಎಂಬುವರು ನೀಡಿದ್ದ ದೂರಿನ ಜಾಡನ್ನು ಹಿಡಿದು ಎಸಿಬಿ ಅಧಿಕಾರಿಗಳು ವರ್ಗಾವಣೆಯಲ್ಲಿ ನಡೆಯುತ್ತಿರುವ ಲಂಚಗುಳಿತನವನ್ನು ಬಯಲು ಮಾಡಿದ್ದಾರೆ. 

2019ರ ಜುಲೈ 12 ರ ರಾತ್ರಿ 9 ಗಂಟೆಗೆ ಎಸಿಬಿ ತನಿಖಾಧಿಕಾರಿಗಳಿಂದ ದಸ್ತಗಿರಿಗೆ ಒಳಗಾಗಿರುವ ಹಿರಿಯ ಕಾರ್ಮಿಕ ನಿರೀಕ್ಷಕ ಎನ್ ವಿ ಗೋವಿಂದರಾಜಲು, ವೆಂಕಟೇಶ, ಶಿವಾನಂದ, ಚೌವಾಣ್ ಸೇರಿದಂತೆ ಒಟ್ಟು ಮೂವರು ಅರೋಪಿಗಳಿಂದ ವಶಪಡಿಸಿಕೊಂಡಿರುವ ಥೈಲಿ ಮತ್ತು ಥೈಲಿಯೊಳಗಿರುವ ಪೆನ್ ಡ್ರೈವ್, ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿ, ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರತ್ತ ಬೊಟ್ಟು ಮಾಡಿದೆ. 

ಜಫ್ತಿಯಾಗಿರುವ ಥೈಲಿಯಲ್ಲೇನಿತ್ತು?

ಒಟ್ಟು 12 ಕವರ್ಗಳಲ್ಲಿ 100, 200, 500 2,000 ರು.ಮುಖಬೆಲೆ ಹೊಂದಿರುವ 13,09,500 ರು.ಗಳಿದ್ದ ಬಿಳಿ ಬಣ್ಣದ ಚೀಲದಲ್ಲಿಯೇ ಸಚಿವ ವೆಂಕಟರಮಣಪ್ಪ ಅವರ ಹೆಸರಿನಲ್ಲಿದ್ದ 6 ಟಿಪ್ಪಣಿಗಳನ್ನು ಎಸಿಬಿ ತನಿಖಾಧಿಕಾರಿಗಳು ಜಫ್ತಿ ಮಾಡಿದ್ದಾರೆ.  ಅಲ್ಲದೆ,  ಸಚಿವ ವೆಂಕಟರಮಣಪ್ಪ ಅವರು ತಮ್ಮ ಲೆಟರ್ ಹೆಡ್ನಲ್ಲಿ ಅಧಿಕಾರಿಗಳ ವರ್ಗಾವಣೆ ಕುರಿತಂತೆ 2019ರ ಜೂನ್ 28, 29, ಜುಲೈ 6,7 ಮತ್ತು 8ರಂದು ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಹಾಕಿರುವ ಎಲ್ಲಾ ಟಿಪ್ಪಣಿಗಳು ಅಸಲು ಎಂಬುದು ತನಿಖಾಧಿಕಾರಿಗಳ ಪರಿಶೀಲನೆಯಿಂದ ತಿಳಿದು ಬಂದಿದೆ. ವಶಕ್ಕೆ ಪಡೆದಿರುವ ದಾಖಲೆಗಳು, ಲೆಟರ್ಹೆಡ್ಗಳು ಸಚಿವರ ಕಚೇರಿಗಳಲ್ಲಿ ವರ್ಗಾವಣೆ ಧಂದೆ ಹೇಗೆ ನಡೆಯುತ್ತಿದೆ ಎಂಬುದನ್ನು ಸಾಕ್ಷಿಕರೀಸಿದೆ.

ಇನ್ನು, ಸಚಿವ ವೆಂಕಟರಮಣಪ್ಪ ಅವರ ಕಚೇರಿ(ಪತ್ರ ಸಂಖ್ಯೆ ಕಾಸ/226/2019-20)ಯಿಂದ ಹೊರಟ ಪತ್ರಗಳು, ಸರ್ಕಾರದ ಕಾರ್ಯದರ್ಶಿಗಳು ಕಾರ್ಮಿಕ ಇಲಾಖೆಯ ಆಯುಕ್ತರಿಗೆ ನೀಡಿರುವ ಒಟ್ಟು 36 ಅಧಿಕಾರಿ, ಸಿಬ್ಬಂದಿಗಳಿಗೆ ಸೇರಿದ ವರ್ಗಾವಣೆ ಆದೇಶಗಳೂ ಥೈಲಿಯೊಳಗಿದ್ದವು ಎಂಬುದು ತನಿಖಾಧಿಕಾರಿ ವರದಿಯಿಂದ ಗೊತ್ತಾಗಿದೆ.

ಕೆ ಎಲ್ ರವಿಕುಮಾರ್ ಮತ್ತು ಧರಣೇಶ್ ಎಂಬುವರನ್ನು ವರ್ಗಾವಣೆ ಮಾಡುವಂತೆ(ಪತ್ರ ಸಂಖ್ಯೆ ಕಾಸ/228/2019-20 ದಿನಾಂಕ 28-06-2019) ಖುದ್ದು ಸಚಿವ ವೆಂಕಟರಮಣಪ್ಪ ಅವರು ಸರ್ಕಾರದ ಕಾರ್ಯದರ್ಶಿಗೆ ಬರೆದಿದ್ದ ಪತ್ರವನ್ನು ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. 

ಹಾಗೆಯೇ ಪ್ರಕರಣದ 2ನೇ ಆರೋಪಿಯಾಗಿರುವ ಗೋವಿಂದರಾಜು ಅವರ  ಶರ್ಟ್ ನಲ್ಲಿ 3 ಪೆನ್ ಡ್ರೈವ್ ಗಳು ದೊರೆತಿವೆ. ಇವುಗಳಲ್ಲಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿಗಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಎಸಿಬಿ ತನಿಖಾಧಿಕಾರಿಗಳು,  ಈ ಪ್ರಕರಣದಲ್ಲಿ ಇನ್ನೂ ಕೆಲ ಸಾಕ್ಷಿದಾರರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

ಅಮಾನತುಪಡಿಸಿಕೊಂಡಿರುವ ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳು, ಮೊಬೈಲ್ ಫೋನ್ ಗಳನ್ನು ಹೆಚ್ಚಿನ ಪರಿಶೀಲನೆಗಾಗಿ ತಜ್ಞರಿಗೆ ಕಳಿಸಲು ಎಸಿಬಿ ತನಿಖಾಧಿಕಾರಿಗಳು ಚಿಂತಿಸಿದ್ದಾರೆ ಎಂದು ಗೊತ್ತಾಗಿದೆ. 

ಹಾಗೆಯೇ 2 ಮತ್ತು 3ನೇ ಆರೋಪಿಯನ್ನು ಬಿಡುಗಡೆಗೊಳಿಸಿದಲ್ಲಿ ತನಿಖೆ ಮೇಲೆ ಪ್ರಭಾವ ಬೀರುವ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ, ಸಾಕ್ಷಿಗಳನ್ನು ಹೆದರಿಸಿ ತನಿಖೆ ಹಾದಿಯನ್ನು ತಿರುಚುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿರುವ ಎಸಿಬಿ ತನಿಖಾಧಿಕಾರಿಗಳು, ಆರೋಪಿಗಳನ್ನು 2019ರ ಜುಲೈ 26ವರೆಗೆ 14 ದಿನಗಳ ಕಾಲ  ನ್ಯಾಯಾಂಗ ಬಂಧನದಲ್ಲಿ ಮುಂದುವರೆಸಲು 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.