ಗಿರೀಶ್ ಕಾರ್ನಾಡರೇ ಹೋಗಿಬನ್ನಿ, ನಿಮಗೊಂದು ಅಂತಿಮ ನಮನ

ಗಿರೀಶ್ ಕಾರ್ನಾಡರೇ ಹೋಗಿಬನ್ನಿ, ನಿಮಗೊಂದು ಅಂತಿಮ ನಮನ

ಪ್ರತಿಭಾವಂತ ನಾಟಕಕಾರ, ಸಾಹಿತಿ, ಕಲಾವಿದ, ಚಿಂತಕ ಹೀಗೆ ಬಹುಮುಖಿಯಾಗಿ ಈ ನೆಲದ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದ ಗಿರೀಶ್ ಕಾರ್ನಾಡ್ ರ ಕೊಡುಗೆಯನ್ನು ಜಿ.ಆರ್.ಸತ್ಯಲಿಂಗರಾಜು ಸ್ಮರಿಸಿದ್ದಾರೆ.  

ಗಿರೀಶ್ ಕಾರ್ನಾಡ್ ಎಂಬ ಹೆಸರೇ ಬಹುಮುಖ ಪ್ರತಿಭೆಗೆ ಪ್ರತಿರೂಪವಾದುದು. ಹುಟ್ಟಿದ್ದು ಮಹಾರಾಷ್ಟ್ರದ ಮಾಥೇರಾದಲ್ಲಾದರೂ, ಉತ್ತರ ಕನ್ನಡದ ಸಿರಸಿ, ಧಾರವಾಡ, ಆಕ್ಸ್ ಫರ್ಡ್‍ನಲ್ಲೆಲ್ಲ ಓದು ಮುಗಿಸಿ ಅನೇಕ ಕಡೆ ಉಪನ್ಯಾಸ ವೃತ್ತಿಯನ್ನ ಮಾಡುತ್ತಲೇ, ನಾಟಕಕಾರರಾಗಿ, ಸಿನಿಮಾ ನಿರ್ದೇಶಕರಾಗಿ, ನಟನಾಗಿ, ಪ್ರಗತಿಪರ ವಿಚಾರಧಾರೆ ಹೊತ್ತು ಜ್ಞಾನಪೀಠಿಯಾಗುವರೆಗಿನ ಎಂಬತ್ತೊಂದು ವರ್ಷಗಳ `ಆಡಾಡತ ಆಯುಷ್ಯ' ಕಳೆಯುವಷ್ಟರಲ್ಲಿ ತನ್ನದೇ ಅಭಿಮಾನಿಗಳ ವರ್ಗಕ್ಕೆ `ಅಂಜುಮಲ್ಲಿಗೆ' ಯಾಗಿ,  ಟೀಕಾಕಾರರ ಬಳಗಕ್ಕೆ `ಒಡಕಲು ಬಿಂಬ'ವಾಗಿ, ಖಾಸಗಿ  ಜೀವನವೆಂಬ 'ನಾಗಮಂಡಲ'ದಲ್ಲಿ ಏಳುಬೀಳುಗಳನ್ನ `ತುಘಲಕ್' `ಟಿಪ್ಪುವಿನ ಕನಸುಗಳು' ರೀತಿಯಲ್ಲಿಯೇ ಕಂಡುಂಡು, ಕೆಲ ವೇಳೆ `ತಲೆದಂಡ'ಕ್ಕೂ ಪಕ್ಕಾಗಿ,  'ಮಾನಿಷಾದ'ದಂತೆಯೇ ತನ್ನ ಬದುಕನ್ನ  ಕಳೆದ `ಯಯಾತಿ' ಯೂ ಹೌದು.


ಹುಟ್ಟಿದ ಐದು ವರ್ಷಕ್ಕೆ ತಾಯಿ ಕಳೆದುಕೊಂಡು, ತಂದೆಯ ಆರೈಕೆಯಲ್ಲೇ ಬೆಳೆದ ಕಾರ್ನಾಡ್, ನಾಟಕ ರಚನೆಯಲ್ಲಿ ಎಷ್ಟು ಹೆಸರುಗಳಿಸಿ, ಹೊಸಾ ಗಾಳಿಯನ್ನ ಕನ್ನಡ ಲೋಕಕ್ಕೆ ತಂದುಕೊಟ್ಟರೋ, ಸಿನಿಮಾ ರಂಗದಲ್ಲೂ ಇವರ ನಿರ್ದೇಶನ, ನಟನೆ ಸೀಮೆಯಾಚೆಗೂ ಹೆಸರಾದುದು.


ಕನ್ನಡಕ್ಕೆ ಮೊಟ್ಟಮೊದಲ ಸ್ವರ್ಣಕಮಲ ತಂದುಕೊಟ್ಟ `ಸಂಸ್ಕಾರ' ಚಿತ್ರದ ನಟನೆಯಿಂದ, ಕಳೆದ ವರ್ಷ ತೆರೆಕಂಡ `ಟೈಗರ್ ಜಿಂದಾ ಹೈ' ವರೆಗೂ ನಿಭಾಯಿಸಿರುವ ಪಾತ್ರಗಳು ಅನನ್ಯವಾದವು. ಉಸಿರಾಟದ ಸಮಸ್ಯೆಯಿಂದ ಮೂಗಿಗೆ ಟ್ಯೂಬ್ ಸಿಕ್ಕಿಸಿಕೊಂಡೇ, ಕೃತಕ ಉಸಿರಾಟ ಮಾಡುತ್ತಿದ್ದ ಕಾರ್ನಾಡರಿಗೆ ಟೈಗರ್ ಜಿಂದಾ ಹೈ ಸಿನಿಮಾದಲ್ಲೂ, ಇದೇ ವಾಸ್ತವ ರೂಪದಲ್ಲೇ ಕಾಣಿಸಿಕೊಂಡಿದ್ದರು. ಅಷ್ಟರ ಮಟ್ಟಿಗೆ ಈ ಪಾತ್ರಕ್ಕೆ ಇವರೇ ಬೇಕು ಎಂಬ ಅನಿವಾರ್ಯತೆಯನ್ನ ಅವರು ಸೃಷ್ಟಿಸಿಕೊಂಡಿದ್ದು ಸಣ್ಣ ಸಾಧನೆಯೇನಲ್ಲ.


ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಉತ್ಸವ್, ಕಾನೂರು ಹೆಗ್ಗಡತಿ ಹೀಗೆ ಕಾರ್ನಾಡರ ಒಂದೊಂದು ಸಿನಿಮಾವೂ ವಿಶಿಷ್ಟರೀತಿಯಲ್ಲಿ ನಿಂತಿರುವ ಕಲಾಕೃತಿಗಳು. ಭಾರತದ ಇತಿಹಾಸ ತಿಳಿಸಿಕೊಡುವ ದೂರದರ್ಶನ ಕಾರ್ಯಕ್ರಮ, ಕನಕ ಪುರಂದರ, ದ.ರಾ.ಬೇಂದ್ರೆಯವರ ಸಾಕ್ಷ್ಯ ಚಿತ್ರ ಹೀಗೇ ಹಲವಾರು ವಿಭಾಗಗಳಲ್ಲಿ ತನ್ನ ಛಾಪು ಮೂಡಿಸಿದ ಕಾರ್ನಾಡರು ಕನ್ನಡಕ್ಕೆ ಜ್ಞಾನಪೀಠವನ್ನ ತಂದುಕೊಟ್ಟವರು. ವಿವಿಧ ಭಾಷೆಯ ಚಿತ್ರರಂಗದಲ್ಲಿ ಹೆಸರಾಗಿದ್ದ ನಟ. ಪ್ರಗತಿಪರ ವಿಚಾರಧಾರೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಅವರು, ಗೋಮಾಂಸ ಭಕ್ಷಣೆಗೆ ಸಂಬಂಧಿಸಿದಂತೆ, ಬೆಂಗಳೂರು ಪುರಭವನದೆದುರು ಸಾರ್ವಜನಿಕವಾಗಿ ಗೋಮಾಂಸ ತಿನ್ನುವ ಕಾರ್ಯಕ್ರಮದಲ್ಲೂ ಭಾಗವಹಿಸಿ, ತನ್ನ ಗಟ್ಟಿ ನಿಲುವನ್ನ ತೋರ್ಪಡಿಸಿದ್ದರು.


ಸಿನಿಮಾ-ಸಾಹಿತ್ಯ-ಹೋರಾಟ-ಸಂಘಟನೆ-ನಟನೆ ಜತೆಯಲ್ಲೇ ಉತ್ತಮ ಉಪನ್ಯಾಸಕರಾಗಿ,ಹಲವು ಸರ್ಕಾರೀ ಸಂಘಟನೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಗಿರೀಶ್ ಕಾರ್ನಾಡ್ ಬಹುಮುಖ ಪ್ರತಿಭೆ.  ಟೀಕೆಗಳಿಗೆ ಕಾರಣಗಳೇನೇ ಇದ್ದರೂ ಸಮಾಜಮುಖಿಯಾಗಿ  ಜೀವಪರವಾಗಿ ತಮ್ಮ ಜೀವನವನ್ನ ಸಾಗಿಸಿದ್ದಾರೆ ಎಂಬುದು ಅತಿಶಯವಲ್ಲ. ಮಾನವಪರ ಧೋರಣೆಗಳು, ಪ್ರಗತಿಪರ ಚಿಂತನೆಗಳನ್ನ ಹೊದ್ದಿಕೊಂಡಿದ್ದ ಗಿರೀಶ್ ಕಾರ್ನಾಡರೇ ಹೋಗಿಬನ್ನಿ, ನಿಮಗೊಂದು  ಅಂತಿಮ ನಮನ,