ಪ್ರವಾಹದಲ್ಲಿ ಕಂಡ ‘ಪಡೋಸಿಪನ್!’

ಪ್ರವಾಹದಲ್ಲಿ ಕಂಡ ‘ಪಡೋಸಿಪನ್!’

ವರ್ತಮಾನದ ಬಗ್ಗೆ ಮಾತಾಡಿದರೆ ಭವಿಷ್ಯದಲ್ಲಿ ಹೆಜ್ಜೆ ಇಡಬಹುದು. ಆದರೆ, ನಾವು ವರ್ತಮಾನದಲ್ಲಿ ಮಾತಾಡುವುದಕ್ಕೇ ಹೆದರುತ್ತಿದ್ದೇವೆ. ಈ ಹೆದರಿಕೆ ಯಾವ ಮಟ್ಟದಲ್ಲಿ ನಮ್ಮೊಳಗೆ ತುಂಬಿಕೊಳ್ಳುತ್ತಿದೆ ಎಂದರೆ ಪ್ರವಾಹವೊಂದು ಸರಳ ಹೊಳೆಗೆ ನುಗ್ಗಿದಂತೆ! ನಾವು ನಮ್ಮ ನಾಲಿಗೆಯನ್ನು ಕಟ್ಟಿ ಹಾಕಿಕೊಂಡು ಮಾತಾಡಬೇಕಾದುದನ್ನೇ ಮಾತಾಡದಿದ್ದರೆ ಅಲ್ಲಿ ಸೃಷ್ಟಿಯಾಗುವ ಮೌನಕ್ಕಾದರೂ ಏನರ್ಥವಿರುತ್ತದೆ? ಹಾಗಾಗಿ, ಅನಿವಾರ್ಯವಾದುದನ್ನು ಆ ಸಂದರ್ಭದ ಹೊತ್ತಲ್ಲಿಯೇ ಮಾತಾಡುವುದು ಮುಖ್ಯ. ಆ ಮೂಲಕ `ಬದುಕು’ವುದು ಮುಖ್ಯ.

ಅವನನ್ನು ನಾನು ಭೇಟಿಯಾಗಿದ್ದು ಆಕಸ್ಮಿಕವಾಗಿ; ಶಿವಮೊಗ್ಗದ ಅನಿರೀಕ್ಷಿತ ಪ್ರವಾಹದಿಂದಾಗಿ. ಅದೇ ಮಳೆ ನೀರನ್ನು ಕುಡಿದು, ಅದೇ ಮಳೆ ನೀರಲ್ಲಿ ನೆಂದು ಕುಸಿದು ಬಿದ್ದ ಮನೆಯೊಂದನ್ನು ದಿಟ್ಟಿಸಿ ನೋಡುತ್ತಾ ನಿಂತಿದ್ದ ಅವನು. ಸೊಂಟದವರೆಗೆ ನೀರು ನಿಂತಿತ್ತು. ಆ ಪ್ರವಾಹದ ನೀರಿಗೆ ಎಲ್ಲಿ ಹರಿಯಬೇಕೆಂದು ಗೊತ್ತಾಗದೇ, ನಿಂತಲ್ಲೇ ಅಲುಗಾಡುತ್ತಾ, ಅಲೆಯಾಗುತ್ತಾ ಇತ್ತು. ಅವನು ಅದೇ ನೀರೊಳಗೆ ಅರ್ಧ ಮುಳುಗಿಕೊಂಡು ಧೊಪ್ಪ ಧೊಪ್ಪನೆ ಕುಸಿದು ಬಿದ್ದ ಮನೆಯ ಛತ್ತನ್ನು, ಗೋಡೆಗಳನ್ನು ಕಣ್ಣು ಮಿಟುಕಿಸದೇ, ಆ ಕಣ್ಣುಗಳ ತುಂಬಾ ನೀರನ್ನು ತುಂಬಿಕೊಂಡೇ ನೋಡುತ್ತಿದ್ದ; ಅವನ ಆ ನೋಟದಲ್ಲಿ ಗೆಹರಾಯಿ ಇತ್ತು. ಅಂತರಾಳ ಹೊಕ್ಕಂತಿದ್ದ ಅವನ ನೋಟವನ್ನು ನಾನು ತೊಂದರೆಗೊಳಪಡಿಸಲು ಹೋಗಲಿಲ್ಲ- ಜೊತೆಗೇ ಇದ್ದ ರಿಯಾಜ್ಗೆ ಹೇಳಿದೆ;

"ಮನೆಗಿಂತ ಹೆಚ್ಚಾದ್ದೇನೋ ಈ ಮನುಷ್ಯ ಕಳೆದುಕೊಂಡಿದ್ದಾನೆ’’.

ಬಾಪೂಜಿ ನಗರದ ಐದನೇ ಕ್ರಾಸಿನ ನೋಟ ಭೀಕರವಾಗಿತ್ತು. ಎಂಥ ಗಟ್ಟಿ ಗುಂಡಿಗೆಯವರು ಸಹ ಇಲ್ಲಿ ಬಂದು ಮರುಗುತ್ತಿದ್ದರು, ಕಣ್ಣಹನಿ ಉದುರಿಸಿ ಪ್ರವಾಹದ ನೀರನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದರು. ನೆಲಕ್ಕೆ ಸಮವಾಗಿ ಬಿದ್ದದ್ದೆಲ್ಲ ಮಣ್ಣಿನ ಮನೆಗಳೇ ಹೆಚ್ಚು. ಈ ಮಣ್ಣಿನ ಮನೆಗಳನ್ನು ಕಳೆದುಕೊಂಡವರು ಮತ್ಯಾರು? ಅದೇ ಮಣ್ಣಿನ ಸಹವಾಸಿಗಳು- ಕೂಲಿಕಾರ್ಮಿಕರು, ದಿನನಿತ್ಯ ದುಡಿದರಷ್ಟೇ ಉಣ್ಣಬಲ್ಲ ದಿನೋದ್ಯೋಗಿಗಳು! ಅವನು ಅದೆಷ್ಟು ಹೊತ್ತು ಹಾಗೆ ನಿಂತಿರಲು ಸಾಧ್ಯವಿತ್ತು? ಅನ್ನವಿದ್ದ ತಟ್ಟೆ ಅವನ ಕೈಗಿಟ್ಟು ಕೇಳಿದೆ- 

"ಅದು ನಿನ್ನ ಮನೇನಾ? ಏನಿಟ್ಟಿದ್ದೆ ಒಳಗೆ? ಹೀಗೆ ಕಣ್ಣೀರು ಹಾಕ್ತಿದ್ದೀಯಲ್ಲ, ಏನಿತ್ತು ಅಂಥದ್ದು ಅಲ್ಲಿ?’’

ಅನ್ನದ ತಟ್ಟೆಯತ್ತ ನೋಡಿದ ಅವನು ತುಂಬಿದ ಕಣ್ಣುಗಳನ್ನು ಒರೆಸಿಕೊಂಡ. ಮತ್ತೆ ಆ ಎದುರಿನ ಮನೆ ನೋಡಿದ. ಅಲ್ಲಿಂದ ನೋಟ ಸರಿಸಿ ನನ್ನತ್ತ ನೆಟ್ಟು ಹೇಳಲು ಪ್ರಯತ್ನಿಸಿದ. ಏನು ಹೇಳುತ್ತಾನೆಂಬ ಕುತೂಹಲ ನನ್ನದು- ಒಂದು ಕಡೆ ನನ್ನ ಕಣ್ಣುಗಳು ಕಾಯುತ್ತಿದ್ದವು, ಇನ್ನೊಂದು ಕಡೆ ನನ್ನ ಕಿವಿಗಳು ಕಾತರಗೊಂಡಿದ್ದವು. ಅವನು ಹೇಳಲು ಪ್ರಯತ್ನಿಸುತ್ತಿದ್ದ. ಆದರೆ, ನಾಲಿಗೆಯಿಂದ ಮಾತು ಮೂಡುತ್ತಿಲ್ಲ. ಮೌನದ ಹೆಬ್ಬಾವು ಅವನ ಮಾತಿನ ಶರೀರವನ್ನು ನುಂಗಿ ಕುಳಿತಿದೆಯಾ?

"ಏನಾದ್ರೂ ಹೇಳಪ್ಪಾ? ಅದೇನಂತ ಹೇಳು...’’- ಹುರಿದುಂಬಿಸಿದೆ. ಪ್ರವಾಹದ ಆತಂಕದ ನಡುವೆಯೇ ಅಲುಗಾಡಿ ಹೋಗಿದ್ದ ಅವನನ್ನು ಎಚ್ಚರದ, ವಾಸ್ತವದ ಸ್ಥಿತಿಗೆ ತಂದು ನಿಲ್ಲಿಸಿ ಮಾತಾಡಬೇಕಿತ್ತು, ಅವನೂ ಸಹ ವಾಸ್ತವ ಅರಿತುಕೊಳ್ಳಬೇಕಿತ್ತು. ಅದಾಗಲೇ, ಸೊಂಟದವರೆಗೆ ನಿಂತಿದ್ದ ಪ್ರವಾಹದ ಕಡು ನೀರು ವಾಸ್ತವಾಂಶವನ್ನು ಅವನಿಗೆ ಅರ್ಥೈಸಬೇಕಿತ್ತು. ಆದರೆ, ಅವನೊಳಗೆ ಮಾತಾಡಲೂ ಬಿಡದಷ್ಟು ದುಃಖ ತುಂಬಿಕೊಂಡ ಮತ್ತೊಂದು ವಾಸ್ತವವಿತ್ತೇನೋ!

"ಬೂವಮ್ಮನ ಗುಡಿ ಬಿದ್ದೋಯ್ತು... ಬಿದ್ದೋಯ್ತು ಕಣ್ರೋ... ಗುಡಿ... ಬೂವಮ್ಮಂದು...’’

"ಒಂದು ಕೈಯಲ್ಲಿ ಅನ್ನದ ತಟ್ಟೆ ಹಿಡ್ಕೊಂಡು, ಇನ್ನೊಂದು ಕೈ ಉದ್ದಕ್ಕೆ ದಿಕ್ಸೂಚಿಯಂತೆ ಚಾಚಿ ಈಗವನು ಅಕ್ಷರಶಃ ಅಳತೊಡಗಿದ್ದ. ಆ ಪ್ರವಾಹದ ನೀರಲ್ಲಿ ಸಮಾಧಾನಿಸುವುದು ಹೇಗೆ? ಇದೆಲ್ಲ ಜೊತೆಗಿದ್ದುಕೊಂಡೇ ನೋಡುತ್ತಿದ್ದ ರಿಯಾಜ್ಗೂ ಅಚ್ಚರಿ. ಮತ್ತೊಬ್ಬ ಇದ್ದನಲ್ಲ ಖಾದ್ರಿ, ಅವನ ಪಡೋಸಿ. ವಿವರಿಸಿದ್ದ. 

ಗೊಳೋ ಎಂದು ಅಳುತ್ತಿದ್ದವನ ಹೆಸರು ರಾಚು ಅಲಿಯಾಸ್ ರಾಚಯ್ಯ. ಬೂವಮ್ಮನ ಗುಡಿ ಅಂತ ಅಳುತ್ತಿದ್ದನಲ್ಲ ದಿಕ್ಸೂಚಿಯಂತೆ ಕೈ ತೋರಿಸಿ ಆ ಮನೆ ಅಮೀರಾ ಬೀ ಅಲಿಯಾಸ್ ಬೂವಮ್ಮಂದು. ಇದೇ ರಾಚು ಮತ್ತು ಬೂವಮ್ಮಂದು ಒಂಥರಾ ಜಾತ್ಯತೀತ ಸ್ಟೋರಿ. ರಾಚು ಸಣ್ಣವನಿದ್ದಾಗಲೇ ತಂದೆ- ತಾಯಿಯನ್ನು ಕಳೆದುಕೊಂಡಿದ್ದ. ಗಾರೆ ಕೆಲಸಕ್ಕೆ ಹೋಗುತ್ತಿದ್ದ ರಾಚುನ ಅಪ್ಪ-ಅಮ್ಮ ರಾಜಕಾಲುವೆಯ ಮೇಲೆಯೇ ಮೊದಲಿಗೆ ಝೋಪಡಿ, ಆಮೇಲೆ ಕರಿಹೆಂಚು ಛತ್ತಿಗೆ ಹಾಸಿ ತಟಗರದ ಮಣ್ಣಿನ ಗೋಡೆ ಮನೆ ಕಟ್ಟಿಕೊಂಡಿದ್ದರು. ಆ ಮನೆಯ ಎದುರಿನದ್ದು ಬೂವಮ್ಮನ ಮನೆ. ಎದುರಾ ಬದುರಾ ಅಡೋಸ್ ಪಡೋಸ್ ಎಂದ ಮೇಲೆ ಅಲ್ಯಾವ ಜಾತಿ? ಅಲ್ಯಾವ ಧರ್ಮ? ರಾಚು ಸಣ್ಣವನಿದ್ದಾಗಿನಿಂದಲೂ ಬೂವಮ್ಮನ ಮನೇದೇ ಊಟ, ಅಲ್ಲೇ ಹೆಚ್ಚೂ ಕಡಿಮೆ ಬದುಕುತ್ತಿದ್ದ. ಮನೆಗೆ ಹೋಗಬೇಕಲ್ಲ ಅಂತ ಹೋಗ್ತಿದ್ದ ತನ್ನ ಮನೆಗೆ ಅಷ್ಟೇ. ಯಾವುದೋ ರೋಗಕ್ಕೆ ಈಡಾಗಿದ್ದ ರಾಚು ತಾಯಿ ಪ್ರಾಣ ಬಿಟ್ಟಾಗ ತಿಳಿಯದ ವಯಸ್ಸು. ಅಪ್ಪನಾದವನು ಕುಡಿಕುಡಿದೇ ಸತ್ತಾಗ ತಿಳಿಯುವ ವಯಸ್ಸು. ಬೂವಮ್ಮಳನ್ನೇ ದೇವತೆ ಮಾಡಿಕೊಂಡಿದ್ದ ಆಮೇಲೆಲ್ಲ. ಹಾಗಾಗಿ, ಬೂವಮ್ಮಳ ಮನೆ ಅವನಿಗೆ ಗುಡಿಯಾಗಿ ಹೋಗಿತ್ತು. ತನ್ನ ಜೀವನದುದ್ದಕ್ಕೂ ಕಷ್ಟಸುಖದ ಸಾಥಿಯಾಗಿದ್ದ ಬೂವಮ್ಮ ಅದೆಲ್ಲಿ ಹೋಗಿದ್ದಳೋ? ಅದ್ಯಾವ ಗಂಜಿಕೇಂದ್ರ ಸೇರಿಕೊಂಡಿದ್ದಳೋ? ಯಾವುದೇ ಸಂಬಂಧವಿರದಿದ್ದ, ಮಾನವೀಯ ಭಾವನೆಗಳಲ್ಲಿಯೇ ಅರಳಿಕೊಂಡಿದ್ದ ರಾಚು ಹಾಕುತ್ತಿದ್ದ ಕಣ್ಣೀರಲ್ಲಿ ಜಾತಿ ಹುಡುಕಲು ಸಾಧ್ಯವೇ? ಧರ್ಮದ ಬಣ್ಣ ಕಂಡು ಹಿಡಿಯಲು ಸಾಧ್ಯವೇ?ಯೋಚಿಸಿದೆ.ಯೋಚಿಸಿದಷ್ಟು ಸಣ್ಣವನಾಗುತ್ತಲೇ ಹೋದೆ.

ರಾಚುವಿನ ಮನೆ ಸಹ ನೀರಲ್ಲಿ ತೊಯ್ದು ನೆಲಕಚ್ಚಿತ್ತು. ಅವನಿಗೆ ತನ್ನ ಮನೆಯ ನಿರ್ನಾಮದ ದುಃಖಕ್ಕಿಂತ ಬೂವಮ್ಮನ ಮನೆಯ ವಿನಾಶ ತತ್ತರಿಸಿ ಹೋಗುವಂತೆ ಮಾಡಿತ್ತು! 

ಶಿವಮೊಗ್ಗದ ಪ್ರವಾಹ ಇಂತಹ ಸಾವಿರದೆಂಟು ಮಾನವೀಯ ಸಂಬಂಧಗಳ ವಾಸ್ತವವನ್ನು ಹೊರಚೆಲ್ಲಿತ್ತು. ನಮ್ಮ ಜೊತೆಯೇ ಇರುವ ಪತ್ರಕರ್ತ ಮಿತ್ರ ಜೋಸೆಫ್ ಮನೆ ಶಿವಮೊಗ್ಗದ ಶಾಂತಮ್ಮ ಬಡಾವಣೆಯಲ್ಲಿದೆ. ತುಂಗೆ ಉಕ್ಕಿ ಹರಿದಿದ್ದರಿಂದ ಶಾಂತವಾಗಿಯೇ ಇದ್ದ ಶಾಂತಮ್ಮ ಬಡಾವಣೆಗೂ ನೀರು ನುಗ್ಗಿಬಂತು. ಮಧ್ಯರಾತ್ರಿ ಎರಡು ಗಂಟೆ ಹೊತ್ತಲ್ಲಿ ನೀರು ನುಗ್ಗಿದರೆ ಮನೆಯೊಳಗಿದ್ದವರ ಪರಿಸ್ಥಿತಿ ಏನಾಗಬೇಡ! ನಿದ್ದೆಯ ಕಣ್ಣುಗಳಲ್ಲೇ ಜೋಸೆಫ್, ಅವರ ಪತ್ನಿ ತಮ್ಮಿಬ್ಬರು ಹೆಣ್ಣುಮಕ್ಕಳ ಜೊತೆ ಹೊರಕ್ಕಿಣುಕಿದ್ದಾರೆ. ಎತ್ತರದ್ದಲ್ಲಿದ್ದ ಮಾರಿಯಮ್ಮನ ದೇವಸ್ಥಾನದತ್ತ ಏರುತ್ತಿದ್ದ ನೀರೊಳಗೇ ಹೆಜ್ಜೆ ಹಾಕುತ್ತಾ ಹುಷಾರಾಗಿ ಸಾಗಿದ್ದಾರೆ. ದೇವಸ್ಥಾನದ ಆವರಣಕ್ಕೆ ತಲುಪಿ ಜೀವವೇನೋ ಉಳಿಸಿಕೊಂಡರು. ಆ ನಡುರಾತ್ರಿಯ ಛಳಿ ಬೀಡಬೇಕಲ್ಲ; ದೊಡ್ಡವರಿಗಿಂತ ಮಕ್ಕಳನ್ನು ನಡುಗಿಸಿ ಹಾಕುತ್ತಿದೆ. ಅದೇ ಏರಿಯಾದ ಹಸೀನಾರವರ ಮನೆ ತುಸು ಎತ್ತರವಿದ್ದಿದ್ದರಿಂದ ಅಲ್ಲಿ ನೆರೆ ನೀರು ಏರುವುದು ಕಷ್ಟವಿತ್ತು. ನೆರೆ ತೊಂದರೆ ಇರದ ಹಸೀನಾ ಆಗ ಸಹಾಯಹಸ್ತ ಚಾಚಿದ್ದಾರೆ. ತಾಯಿಪ್ರೀತಿ ತೋರಿಸಿ ಜೋಸೆಫ್ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ. ಬಿಸಿಬಿಸಿ ಚಹಾ ಕೊಟ್ಟು, `ನಾನಿದ್ದೇನೆ, ಡೊಂಟ್ವರಿ... ಹೆದರಬೇಡಿ’ ಎಂದಿದ್ದಾರೆ. ಬಟ್ಟೆಕೊಟ್ಟು, ವಿಶ್ರಾಂತಿಗೆ ಜಾಗ ಕೊಟ್ಟಿದ್ದಾರೆ. ಜೀವಭಯದ ಆ ಇಪ್ಪತ್ತನಾಲ್ಕು ಗಂಟೆಗಳು ಈಗ ಜೋಸೆಫ್ ಪಾಲಿನ ದರ್ದನಾಕ್ ಹಾಗೂ ಸುವರ್ಣ ಕ್ಷಣಗಳು. ಎಲ್ಲಿಯ ಕ್ರಿಶ್ಚಿಯನ್? ಎಲ್ಲಿಯ ಮುಸ್ಲಿಂ? ಹಸೀನಾರ ಹಸೀನ್ ಮಮತೆ ಜಗತ್ತಿನ ಬೆಳಕಲ್ಲವೇ? ರಾಚುವಿನ ಪ್ರೀತಿ ಇದೇ ಜಗತ್ತಿನ ನೀತಿಯಲ್ಲವೇ?

ಗೋಡೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿರುವ ನಮ್ಮನ್ನು ಭಗೋಡೆ(ಓಡುವವರಂತೆ) ಮಾಡುವ ಪ್ರಕೃತಿಗೆ, ಪ್ರಕೃತಿಯ ಪ್ರವಾಹಕ್ಕೆ, ಪ್ರವಾಹದ ಪ್ರಹಾರಕ್ಕೆ ನಾವು ತಲ್ಲಣಿಸುವ ಬದಲು ನಮ್ಮೊಳಗಿನ ಮನುಷ್ಯತ್ವವನ್ನು ಹಿಂಡಿ ಹೊರತೆಗೆಯಬೇಕಿದೆ.

ತೆಲುಗು ಭಾಷೆಯಲ್ಲಿ ಮಾತೊಂದಿದೆ- ಈ ಲೋಕ ಬುದ್ಧಿವಂತರಿಂದ ನಡೆಯುತ್ತಿಲ್ಲ, ನಡೆಯುವುದೂ ಇಲ್ಲ. ಹೃದಯವಂತರಿಂದಲೇ ಲೋಕ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. 
                                
-