ಮಿಂಚಿನ ಓಟಗಾರ ಉಸೇನ್ ಬೋಲ್ಟ್  

ಮಿಂಚಿನ ಓಟಗಾರ ಉಸೇನ್ ಬೋಲ್ಟ್  

ವಿಶ್ವ ದಾಖಲೆಗಳ ಸರಮಾಲೆಯೇ ಉಸೇನ್ ಬೋಲ್ಟ್ ಹೆಸರಲ್ಲಿವೆ. ಗಳಿಸಿದ ಪದಕಗಳ ಅರ್ಧದಷ್ಟನ್ನು ಕೊರಳಲ್ಲಿ ಧರಿಸಿದರೂ ಯಾವುದೇ ಸುವರ್ಣಾಲಂಕೃತ ರಾಜಕುಮಾರಿಯೂ ಪೇಲವವಾಗಿ ಕಾಣುತ್ತಾಳೇನೋ! 

ಯದ್ವಾ ತದ್ವಾ ತಿನ್ನೋರನ್ನ ಅಥವಾ ಸಾಮಾನ್ಯ ಜನರು ಸಾಧಿಸಲಿಕ್ಕಾಗದ್ದನ್ನು ಅನಾಯಾಸವಾಗಿ ಸಾಧಿಸುವವರನ್ನು ಕಂಡಾಗ "ಅವನು ಮನುಷ್ಯ ಅಲ್ಲ ಬಿಡಿ" ಅಂತ ಉದ್ಗರಿಸ್ತೀವಿ. ಅಪ್ರತಿಮ ಕ್ರೀಡಾಪಟುವಾದ ಉಸೇನ್ ಬೋಲ್ಟ್ ಓಡುವಾಗ ನನಗೂ ಆ ವ್ಯಕ್ತಿಯ ಬಗ್ಗೆ ಹಾಗೆ ಅನಿಸುತ್ತದೆ. ಆಗಸ್ಟ್ 21ರಂದು 34 ಕ್ಕೆ ಕಾಲಿಡುವ  ಉಸೇನ್ 2008 ರ ಬೀಜಿಂಗ್ ಒಲಿಂಪಿಕ್ಸ್ ಕ್ರೀಡೆಯಲ್ಲಿ 100 ಮೀಟರ್, 200 ಮೀಟರ್, ಮತ್ತು 4 x 100 ರಿಲೇ ಸ್ಪರ್ಧೆಗಳಲ್ಲಿ ಚಿನ್ನವನ್ನು ಗೆದ್ದಾಗಿನಿಂದ ಒಮ್ಮೆ ತಪ್ಪಾಗಿ ಆರಂಭಿಸಿದ್ದಕ್ಕಾಗಿ ಬಿಟ್ಟರೆ ೨೦೧೭ ರಲ್ಲಿ ನಿವೃತ್ತನಾಗುವ ತನಕ ಒಂದು ಸ್ಪರ್ಧೆಯಲ್ಲೂ ಸೋತದ್ದೇ ಇಲ್ಲ. 

ಕ್ರೀಡಾಲೋಕದಲ್ಲಿ ಒಂದು ಮಾತಿದೆ: "ಚಾಂಪಿಯನ್ ಆಗಬಹುದು, ಆದರೆ (ಹೆಚ್ಚು ಕಾಲ) ಚಾಂಪಿಯನ್ ಆಗಿ ಉಳಿಯುವುದು ಕಷ್ಟ." ಇದನ್ನು ಎಲ್ಲಾ ಕ್ರೀಡೆಗಳ ಸಾಧಕರು ಒಪ್ಪುತ್ತಾರೆ. ಉತ್ತುಂಗದ ಆ ಸ್ತರದಲ್ಲಿ ಸ್ಪರ್ಧೆ ಹೆಚ್ಚು ಮತ್ತು ತೀವ್ರ ಸ್ವರೂಪದ್ದು. ಅದರಲ್ಲೂ ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್ ಜಗತ್ತಿನಲ್ಲಿ ಆ ಉಛ್ರಾಯ ಸ್ಥಿತಿಯಲ್ಲಿ ಉಳಿದುಕೊಳ್ಳುವುದಕ್ಕೆ ಬೇಕಾದ ಪರಿಶ್ರಮ ಮತ್ತು ಫಿಟ್ ನೆಸ್ ಬೇರೆ ಕ್ರೀಡೆಗಳಿಗಿಂತ ಹೆಚ್ಛೇ. ಅದೇ ಕಾರಣಕ್ಕೆ, ಇಲ್ಲಿ ಮೇಲೇರಿದವರೆಲ್ಲ ಒಂದು ವಯೋಮಿತಿಯೊಳಗಿನವರೇ. ಒಲಿಂಪಿಕ್ಸ್ ನಲ್ಲಿ ಒಂಭತ್ತು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು, ವಿಶ್ವದ ಅತಿ ವೇಗದ ಓಟಗಾರನೆಂಬ ಬಿರುದನ್ನು ತನ್ನದಾಗಿಸಿಕೊಂಡ ಜಮೈಕಾದ ಉಸೇನ್ ಈ ನಿಯಮಕ್ಕೆ ಅಪವಾದ. ಆಗಸ್ಟ್ 21 ಕ್ಕೆ ಉಸೇನ್ 34 ಕ್ಕೆ ಕಾಲಿಡುತ್ತಾರೆ. 

ಉಸೇನ್ ಮತ್ತು ಆತನ ಸಹೋದರ ಸಿದ್ದಿಕಿ ಇಬ್ಬರದೂ ಮುಸ್ಲಿಂ ಹೆಸರಾದರೂ, ಅವರು ಹುಟ್ಟಿದ್ದು ಕ್ರಿಶ್ಚಿಯನ್ ಮನೆತನದಲ್ಲಿ. ಧಾರ್ಮಿಕತೆಗೆ ಹೆಚ್ಚು ಒತ್ತುಕೊಡದ ಅವರ ಪೋಷಕರು ಮಕ್ಕಳಿಗೆ ಮುಸ್ಲಿಂ ಹೆಸರನ್ನೇ ಆಯ್ಕೆಮಾಡಿದರು.ತನ್ನ ಹದಿನಾರನೇ ವಯಸ್ಸಿನಲ್ಲೇ ಬಹುರಾಷ್ಟ್ರೀಯ ಕಂಪೆನಿಯಾದ ಪ್ಯೂಮಾದಿಂದ ಪ್ರಾಯೋಜಿಸಲ್ಪಟ್ಟಿದ್ದ. ಮಿಕ್ಕೆಲ್ಲ ಶ್ರೇಷ್ಠ ಆಟಗಾರರಂತೆ ಎಂಡಾರ್ಸಮೆಂಟ್ ನಿಂದಲೇ ಉಸೇನ್ ಗೆ ಹಣದ ಹೊಳೆ ಹರಿದುಬರುತ್ತದೆ. 

100 ಮೀ ಓಟದಲ್ಲಿ  ಉಸೇನ್ ನಿರ್ಮಿಸಿರುವ 9.58 ಸೆಕೆಂಡ್ಗಳ ದಾಖಲೆಯನ್ನು ಸರಿಗಟ್ಟುವುದಿರಲಿ ಅವರದ್ದೇ ಆದ 9.63 ಸೆಕೆಂಡ್ ಗಳ ದಾಖಲೆಯನ್ನು ಮೀರಿಸುವವ ಕಂಡುಬಂದಿಲ್ಲ. ವಾಸ್ತವವಾಗಿ ೨೦೦೯ರ 150 ಮೀ ಓಟವೊಂದರಲ್ಲಿ 100 ಮೀ ಕ್ರಮಿಸಿದ್ದು ನೋಡುವವರ ಉಸಿರುಗಟ್ಟಿಸುವ 8.70 ಸೆಕೆಂಡ್ ಗಳಲ್ಲಿ. ಚಿನ್ನದ ಪದಕವಿರುವುದೇ ಉಸೇನ್ ಗೆಲ್ಲಲಿಕ್ಕಾಗಿ ಎನ್ನುವಂತಹ ಸಾಧನೆ ಆತನದು. ವಿಶ್ವ ದಾಖಲೆಗಳ ಸರಮಾಲೆಯೇ ಆತನ ಹೆಸರಲ್ಲಿವೆ. ಗಳಿಸಿದ ಪದಕಗಳ ಅರ್ಧದಷ್ಟನ್ನು  ಕೊರಳಲ್ಲಿ ಧರಿಸಿದರೂ ಯಾವುದೇ ಸುವರ್ಣಾಲಂಕೃತ ರಾಜಕುಮಾರಿಯೂ ಪೇಲವವಾಗಿ ಕಾಣುತ್ತಾಳೇನೋ! 

ಸುಮಾರು 95 ಕಿಲೊ ತೂಕದ ಉಸೇನ್ ನ ಎತ್ತರ ಆರು ಅಡಿ, ನಾಲ್ಕೂವರೆ ಇಂಚು. 34 ಇಂಚಿನ ನಡು, 16 ಇಂಚು ದಪ್ಪದ ರಟ್ಟೆಗಳು, 46 ಇಂಚು ಸುತ್ತಳತೆಯ ಎದೆ. ಅಥ್ಲೆಟಿಕ್ ಬಾಡಿಯ ಅಂಕಿ ಅಂಶಗಳು ಇವಕ್ಕಿಂತ ನಿಖರವಾಗಿರಬಲ್ಲವೇ? ಉಸೇನ್ ರ ಬಂಡವಾಳವೇ ಅವರ ಎತ್ತರ. ನೂರು ಮೀಟರ್ ಓಟದಲ್ಲಿ ಆತ ಅದರ ಶೇಕಡಾ 60 ರಷ್ಟು ದೂರ ಗಾಳಿಯಲ್ಲಿ ಕ್ರಮಿಸುತ್ತಾರೆ. ಅವರ ವಾಯುವೇಗಕ್ಕೆ ಇದೂ ಮುಖ್ಯ ಕಾರಣ. ಅಮೆಚೂರ್ ಓಟಗಾರರು ನೂರು ಮೀಟರ್ ಓಡುವಾಗ ತೆಗೆದುಕೊಳ್ಳುವ ಹೆಜ್ಜೆ (stride) 50 ರಿಂದ 55 ಇದ್ದರೆ ವೃತ್ತಿಪರರು 45 ಹೆಜ್ಜೆ ತೆಗೆದುಕೊಳ್ಳುತ್ತಾರೆ. ಉಸೇನ್ ರ ದಾಪುಗಾಲಿಗೆ ಕೇವಲ 41 ಹೆಜ್ಜೆ ಸಾಕು! ಒಂದು ಹೆಜ್ಜೆಯಲ್ಲಿ, ತ್ರಿವಿಕ್ರಮೋಪದಿಯಲ್ಲಿ ಉಸೇನ್ ಕ್ರಮಿಸುವ ದೂರ 2.44 ಮೀಟರ್ ಅಂದರೆ ಆತನ ನಿತ್ಯ ಜಯಭೇರಿಯ ನಿಜವಾದ ಕಾರಣ ತಿಳಿಯುತ್ತದೆ. 10 ಸೆಕೆಂಡ್ಗಳಿಗಿಂತ ಕಡಿಮೆ ಅವಧಿಯಲ್ಲಿ 100 ಮೀಟರ್ ಕ್ರಮಿಸುವವರ ನಡುವೆ ಇರುವ ಅಂತರಕ್ಕಿರುವ ಪ್ರಮುಖ ಕಾರಣವೇ ಅವರ ಪ್ರತಿ ಹೆಜ್ಜೆಯ ಉದ್ದ. ಉಸೇನ್ ರ ಅಸಲಿಯತ್ತು ಇರುವುದೇ ಅಲ್ಲಿ.

2009 ರಲ್ಲಿ ಉಸೇನ್ 100 ಮೀಟರ್ ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿದಾಗ ಆತ ಮೊದಲ 40 ಮೀಟರನ್ನು 4.64 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ಇಂಗ್ಲೆಂಡ್ನ ವಿಖ್ಯಾತ ಫುಟ್ಬಾಲ್ ಕ್ಲಬ್ ಆದ ಆರ್ಸೆನಲ್ ತಂಡದ ಆಟಗಾರ ಹೆಕ್ಟರ್ ಬೆಲೆರಿನ್ ಅದೇ ದೂರವನ್ನು 4.41 ಸೆಕೆಂಡ್ಗಳಲ್ಲಿ ಓಡಿದ ದಾಖಲೆಯಿದೆ. ಅಂದರೆ,  100 ಮೀಟರ್ ಸ್ಪರ್ಧೆಯಲ್ಲಿ ಹೆಕ್ಟರ್ ಉಸೇನ್ರನ್ನು ಹಿಮ್ಮೆಟ್ಟಬಲ್ಲರೇ ಎಂಬ ಪ್ರಶ್ನೆ ಕ್ರೀಡಾಸಕ್ತರನ್ನು ಕಾಡುತ್ತದೆ. ಈ ಕುರಿತು ಹೆಕ್ಟರನ್ನು ಉಸೇನ್ ಜತೆ ಸ್ಪರ್ಧಿಸಲು ಸಿದ್ಧವೇ ಎಂದು ಕೇಳಲಾಗಿ "ಉಸೇನ್ ಅತಿ ವೇಗದ ಓಟಗಾರ. ಆತ ಸ್ಪ್ರಿಂಟರ್. ಆತನ ವಿರುದ್ಧ ಓದಲಿಕ್ಕೆ ಇಷ್ಟ, ಆದರೆ ಆತನನ್ನು ಸೋಲಿಸಲಿಕ್ಕಾಗುವುದಿಲ್ಲ" ಎಂಬ ವಿನಯಪೂರ್ವಕ ಉತ್ತರ ಕೊಟ್ಟರು. 

ಆದರೆ, ಗಣನೆಗೆ ತೆಗೆದುಕೊಳ್ಳಬೇಕಾದ ಅಂಶವೆಂದರೆ, ಫುಟ್ಬಾಲ್ ಆಟಗಾರರ ವೇಗದ ಮಾಪನ ಮಾಡುವುದಕ್ಕೆ ಬೇರೆಯದೇ ವಿಧಾನವನ್ನು ಅನುಸರಿಸಲಾಗುತ್ತದೆ. ಅವರು 40 ಮೀಟರ್ ಅಂತರದ ಯಾವ ಎರಡು ಗೇಟ್ ಮೂಲಕ ಹಾದುಹೋಗುತ್ತಾರೋ ಅವುಗಳಿಗೆ ಮಾಪಕಗಳನ್ನು ಅಳವಡಿಸಲಾಗಿರುತ್ತದೆ. ಹಾಗೂ ಅವರು ಮೊದಲ ಗೇಟ್ ಮೂಲಕ ಹಾದುಹೋಗುವುದಕ್ಕೆ ಮುಂಚೆ ಸುಮ್ಮನೆ ನಿಂತಿದ್ದರೋ ಅಥವಾ ಓಡುತ್ತಿದ್ದರೋ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸ್ಪರ್ಧೆಯಲ್ಲಿ ಓಡುವ ಮುನ್ನ ಸ್ಪರ್ಧಿಗಳು ಚಲಿಸುತ್ತಿರುವುದಿಲ್ಲ. ಹಸಿರು ನಿಶಾನೆಯ ಬದಲು ಬಳಸುವ ಗನ್ ಶಬ್ದಕ್ಕೂ ಸ್ಪರ್ಧಿಗಳು ಆರಂಭದ ಗೆರೆಯಿಂದ ಓಡುವುದಕ್ಕೂ ಕಾಲು (0.15) ಸೆಕೆಂಡ್ ಅಷ್ಟು ವಿಳಂಬವಾಗುತ್ತದೆ. 

ಓಟಗಾರರು ಗುರಿಮುಟ್ಟಿದಾಗ ಅವರ ಎದೆ ಟೇಪ್ಗೆ ತಗಲುತ್ತಿದ್ದಂತೆ ಗಡಿಯಾರದ ಮುಳ್ಳು ನಿಲ್ಲುತ್ತದೆ. ಆದರೆ, ಫುಟ್ಬಾಲ್ ಆಟಗಾರರ ವೇಗವನ್ನು ಅಳೆಯುವಾಗ ಬಳಸಲ್ಪಡುವ ಲೇಸರ್ ಅವರ ದೇಹದ ಯಾವುದೇ ಅಂಗ ಗೇಟನ್ನು ಮೊದಲು ಮುಟ್ಟುತ್ತದೋ ಆ ಸಮಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆಟಗಾರನ ಕೈಗೂ, ಎದೆಗೂ ಅರ್ಧ ಮೀಟರ್ ಅಷ್ಟಾದರೂ ಅಂತರವಿರುತ್ತಾದ್ದರಿಂದ ಆ ಮಟ್ಟಿಗೆ ಅದು ಫುಟ್ಬಾಲ್ ಆಟಗಾರನ ವೇಗವನ್ನು ನಿರ್ಧರಿಸುವುದರಲ್ಲಿ ಅವನಿಗಾದ ಲಾಭವೇ. 

ವಿಶ್ವ ದಾಖಲೆ ನಿರ್ಮಿಸಿದಾಗ ಉಸೇನ್ರ ವೇಗ ಗಂಟೆಗೆ 44.72 ಕಿಮೀ. ಪ್ರತಿಷ್ಠಿತ  ಫುಟ್ಬಾಲ್ ತಂಡಗಳಿಗೆ ಆಟಗಾರರ ವೇಗದ ಬಗ್ಗೆ ಮಾಹಿತಿ ಒದಗಿಸುವ ಸಂಸ್ಥೆಯ ಪರಿಣತರೊಬ್ಬರ ಪ್ರಕಾರ ಯಾವುದೇ (ಫುಟ್ಬಾಲ್) ಆಟಗಾರ ಇದುವರೆವಿಗೂ 34 ಕಿಮೀ ವೇಗವನ್ನು ಮೀರಿಲ್ಲ. ಬೆಲೆರಿನ್ ವೇಗ 35 ಕಿಮೀಗಿಂತ ತುಸು ಕಡಿಮೇನೆ. ಲೀಸ್ಟರ್ ಸಿಟಿ ತಂಡದ ಜೆಮಿ ವಾರ್ಡಿಯೊಬ್ಬರೇ ಅದಕ್ಕಿಂತ ತುಸುವೇ ಹೆಚ್ಚು ವೇಗವಾಗಿ (35.44 ಕಿಮೀ) ಓಡಿದ ದಾಖಲೆ ಇದೆ.

ಬ್ರಿಟನ್ ನಿನ ಚಾಂಪಿಯನ್ ಓಟಗಾರ ಕ್ರೇಗ್ ಪಿಕರಿಂಗ್ ವಂಶವಾಹಿನಿಯಲ್ಲುಂಟಾದ ಏರುಪೇರಿನಿಂದ ಉಸೇನ್ ಜನ್ಮ ತಾಳಿದ್ದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

2017 ರಲ್ಲಿ ನಿವೃತ್ತಿ ಘೋಷಿಸಿದ ಉಸೇನ್ ರಿಗೆ ಫುಟ್ಬಾಲ್ ಮತ್ತು ಕ್ರಿಕೆಟ್ ನಲ್ಲೂ ಪರಿಣತಿಯಿದೆ. ನಿಮಗಿದು ತಿಳಿದಿರಲಿ, ಸ್ಥಳೀಯ ಪಂದ್ಯವೊಂದರಲ್ಲಿ ಉಸೇನ್ ವಿಂಡೀಸ್ ನ ಕ್ರಿಕೆಟ್ ದೈತ್ಯ ಕ್ರೈಸ್ ಗೇಯ್ಲ್ ರ ವಿಕೆಟ್ ಉರುಳಿಸಿರುವುದರ ಜತೆಗೆ ಗೇಯ್ಲ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸಿದ್ದಾರೆ. ವಿಂಡೀಸ್ ನ ಮತ್ತೊಬ್ಬ ಕ್ರಿಕೆಟ್ ಶ್ರೇಷ್ಠ ಕರ್ಟ್ಲಿ ಆಂಬ್ರೋಸ್ ಉಸೇನ್ ರ ಕ್ರಿಕೆಟ್ ಪ್ರತಿಭೆಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ. 

ಸಾಮಾನ್ಯ ಜನರಿಗೆ ಸುಲಭದಲ್ಲಿ ಎಟಕುವ ಪರಿಸರ-ಪ್ರೇಮಿ ಸ್ಕೂಟರ್ ನಿರ್ಮಾಣದಲ್ಲಿ ತೊಡಗಿಸ್ಕೊಂಡಿರುವ ಉಸೇನ್ ರ ಕಂಪನಿಯ ಹೆಸರು ಬೋಲ್ಟ್ ಮೊಬಿಲಿಟಿ. ವಾಯುಮಾಲಿನ್ಯದಿಂದ ಅವನತಿಯತ್ತ ಸಾಗಿರುವ ಪರಿಸರವನ್ನು ಉಳಿಸುವುದು ಉಸೇನ್ ರ ಇಂದಿನ ಕಾಳಜಿ. 

ಬಾಲಂಗೋಚಿ: ಬೀಜಿಂಗ್ ಒಲಿಂಪಿಕ್ಸ್ ಅವಧಿಯಲ್ಲಿ ಓಡಲು ತಾಕತ್ತು ಗಳಿಸಲು ಉಸೇನ್ ತಿಂದದ್ದು ನಮ್ಮ ದೊಡ್ಡ ಮಸಾಲೊಡೆ ಗಾತ್ರದ ಚಿಕನ್ ನಗೆಟ್ಸ್. ಕೋಳಿ ಮಾಂಸಕ್ಕೆ, ಅದರದ್ದೇ ಮೂಳೆ ಮತ್ತು ಕೊಬ್ಬಿನಂಶವನ್ನು ಹಾಕಿ ರುಬ್ಬಿ, ನುಣ್ಣಗೆ ಮಾಡಿ, ತಯಾರಿಸುವ ಒಂದು ತಿನಿಸು. ಅದು ಅವರು ಸೇವಿಸಿದ ವಿವಿಧ ಆಹಾರಗಳ ಒಂದಂಶ ಅಷ್ಟೆ. ಮಾಯಾ ಬಜಾರ್ ಚಿತ್ರದ "ವಿವಾಹ ಭೋಜನವಿದು" ಹಾಡನ್ನು ಕೇಳಿರುತ್ತೀರಿ. ಆ ಊಟ ಶಾಖಾಹಾರವಾಗಿರದೆ ಮಾಂಸಾಹಾರವಾಗಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳಿ. ಅಂತಹದೇ ಭೋಜನ ದಿನನಿತ್ಯವೂ ಸೇವಿಸಬೇಕಾದ ಅನಿವಾರ್ಯ ಮಿಂಚಿನ ಓಟಗಾರ  ಉಸೇನ್ ಬೋಲ್ಟ್ ನ್ ದ್ದು. ಪ್ರೊಟೀನ್ ಮತ್ತು ಪಿಷ್ಟ ಗಳನ್ನು ಪೂರೈಸುವ ಮೊಟ್ಟೆಯ ಸ್ಯಾಂಡ್ವಿಚ್ ನಿಂದ ಆರಂಭವಾಗುವ ಆತನ ಬ್ರೇಕ್ಫಸ್ಟ್ ಗೆ ಮೊಸರು, ಆಯ್ದ ಹಣ್ಣುಗಳು, ದಾಲ್ಚಿನ್ನಿ ಮತ್ತು ಚಿಯಾ ಬೀಜಗಳು ಮುಕ್ತಾಯ ಹಾಡುವುವು. ಪಾಸ್ತಾ ಜತೆ ಕೋಳಿಯ ಎದೆಭಾಗದ ಮಾಂಸ ಮತ್ತು ದನದ ಮಾಂಸ ಮಧ್ಯಾಹ್ನದ ಊಟಕ್ಕೆ. ಜತೆಗೆ ಆಲಿವ್ ಎಣ್ಣೆಯಲ್ಲಿ ಅಭ್ಯಂಜನ ಮಾಡಿ, ಅರಿಶಿನ ಲೇಪಿಸಿಕೊಂಡ ಬಣ್ಣಬಣ್ಣದ ತರಕಾರಿಗಳ ಸಾಲಡ್....

ಉಸೇನ್ ರ ಊಟದ ಕ್ರಮವನ್ನೋ, ಆತ ಫಿಟ್ ಆಗಿರಲು ಮಾಡುವ ವ್ಯಾಯಾಮದ ಕ್ರಮವನ್ನೂ ಸವಿವರವಾಗಿ ಬರೆಯಬೇಕೆಂದರೆ ನಾನೂ ಆತನ ಆಹಾರಕ್ರಮವನ್ನೇ ಅನುಸರಿಸಬೇಕೇನೋ.