ಗ್ರಾಂಸಿ ಕಂಡ ಫಾಸಿಸಂ

ಗ್ರಾಂಸಿ ಕಂಡ ಫಾಸಿಸಂ

(ಕಳೆದ ಭಾನುವಾರದಿಂದ...)

ಗ್ರಾಂಸಿಯು ಹೇಳುವಂತೆ ಇಟಲಿಯ ಫಾಸಿಸಂ, ಕಾರ್ಮಿಕ ವರ್ಗದ ವಿರೋಧಿ ರಾಜಕೀಯ ಸಿದ್ಧಾಂತವಾಗಿದ್ದು ಸಹಸ್ರಾರು ಕ್ರೂರ ಹಾಗೂ ಭ್ರಷ್ಟ ಮನಸ್ಸುಗಳ ತಲೆ, ಬಾಲ, ಆಕಾರವಿಲ್ಲದ ಜನಸಮೂಹವಾಗಿ ಬೆಳೆಯುತ್ತಿತ್ತು. ಈ ಪಕ್ಷವು ತನ್ನ ಸದಸ್ಯತ್ವವನ್ನು ಹೆಚ್ಚಿಸಲು ಎಲ್ಲ ಸಮಾಜ ವಿರೋಧಿ, ವಿಚ್ಫಿದ್ರಕಾರಿ ಜನರನ್ನು ಸದಸ್ಯತ್ವಕ್ಕಾಗಿ ತೆಗೆದುಕೊಳ್ಳಲು ಆಹ್ವಾನಿಸುತ್ತಿತ್ತು. ಈ ದಿಸೆಯಲ್ಲಿ ಫಾಸಿಸಂ ವ್ಯವಸ್ಥೆಯು ಇಟಲಿಯಲ್ಲಿ ಒಂದು ದುರಂತ ಸಮಾಜವಾಗಿ ಬೆಳೆದು ನಿಂತಿತ್ತು. ಫಾಸಿಸಂ ಉಗಮವೆಂದರೆ ಅನಾಗರಿಕ ಮತ್ತು ಬರ್ಬರಗೊಂಡಿರುವ ವಿಕೃತ ಸಮಾಜದ ಮನಸ್ಥಿತಿ. ಫಾಸಿಸಂ ಬಹುಮುಖ್ಯ ಅಂಗವೆಂದರೆ ಇಟಲಿಯ ಪ್ರಸಿದ್ಧ ಕೊಲೆಗಡುಕ, ವೃತ್ತಿಪರ, ರಕ್ತಪಾತ ಮಾಡುವ ಮಾಫಿಯಾ ಜನರ ಕೂಟ ಹಾಗೂ ಯುದ್ಧಗಳಲ್ಲಿ ಭಾಗವಹಿಸಿದ್ದ ಭ್ರಷ್ಟ ಯೋಧರನ್ನು ಕೂಡಿಸಿ ಮಾಡಿದ ಅಧಿಕಾರ ವರ್ಗದ ನಾಯಕತ್ವವಾಗಿತ್ತು. ಈ ರಕ್ತ ಪಿಪಾಸುಗಳಿಂದ ಆಳಲ್ಪಡುವ ಯಾವುದೇ ಸಮಾಜ ಮತ್ತು ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡ ಕ್ರೂರ ಮನಸ್ಸಿನ ಸಮಾಜವಾಗಿ ಬದಲಾವಣೆ ಹೊಂದುತ್ತದೆ. ಇಟಲಿಯಲ್ಲಿ ಅಂದಿನ ಪರಿಸ್ಥಿತಿಯು ಬಹಳ ಗಂಭೀರವಾಗಿದ್ದು ಕೊಲೆ, ಸುಲಿಗೆ, ಲೂಟಿ ಮತ್ತು ದೌರ್ಜನ್ಯಗಳು ಸಾಮಾನ್ಯವಾಗಿದ್ದವು. ಅಪರಾಧಿಗಳನ್ನು ಯಾವುದೇ ರೀತಿಯಲ್ಲಿ ಶಿಕ್ಷೆಗೆ ಗುರಿ ಮಾಡಲು ಸಾಧ್ಯವಾಗದೆ ಅಧಿಕಾರ ವರ್ಗವೇ ಅಂತಹ ಅಪರಾಧಿಗಳಿಗೆ ಬೆಂಬಲ ಕೊಡುತ್ತಿತ್ತು.

ಗ್ರಾಂಸಿಯ ಅಧ್ಯಯನದಂತೆ ಫಾಸಿಸ್ಟರ ಬೆಳವಣಿಗೆಯು ಚಿಕ್ಕಪುಟ್ಟ ಪುಂಡರ ತಂಡ (ಲುಂಫೆನ್), ಗುಂಪುಗಳೊಂದಿಗೆ ಪ್ರಾರಂಭವಾಗಿ ಶಿಸ್ತಿನಿಂದ ಕೂಡಿದ ಅರೆಸೈನ್ಯ ಪೊಲೀಸ್‍ನ ರೂಪ ಪಡೆಯುತ್ತ ಹಂತಹಂತವಾಗಿ ಸಾವಿರಾರು ಜನರ ಚಿಕ್ಕಪುಟ್ಟ ತುಕಡಿ ಮತ್ತು ಘಟಕಗಳು ನಗರ ಪ್ರದೇಶಗಳಲ್ಲಿ ಹುಟ್ಟಿಕೊಳ್ಳುತ್ತವೆ. ಸಾವಿರಾರು ಜನರು ಜಮಾಯಿಸುವ ಕವಾಯಿತು ಪ್ರದರ್ಶನಗಳು ಪ್ರಾರಂಭವಾಗುತ್ತವೆ. ಇಟಲಿಯಲ್ಲಿ ಈ ರೀತಿಯ ಸಭೆಗಳು ಸೀನಾ ಎಂಬಲ್ಲಿ ನಡೆಸಲಾಯಿತು. ಇಟಲಿಯಲ್ಲಿನ ಸಮಾಜವಾದಿಗಳು ಇಂತಹ ಬೆಳವಣಿಗೆಯನ್ನು ನೋಡಿಯೂ ಅಂತಹ ಬೆಳವಣಿಗೆಯ ಬಗ್ಗೆ ಯೋಚಿಸದೆ ಕಾರ್ಯ ಮಗ್ನರಾಗದೆ ಇದ್ದದ್ದು ಕಾರ್ಮಿಕ ಹೋರಾಟದ ಅಂತ್ಯಕ್ಕೆ ಕಾರಣವಾಯಿತು.

ಗ್ರಾಂಸಿಯ ಅಭಿಪ್ರಾಯದಂತೆ ಇಟಲಿಯಲ್ಲಿ ಫಾಸಿಸಂ ಮೊದಲನೆಯ ಮಹಾಯುದ್ಧದ ನಂತರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಕಾರಣವಾಗಿ ಬೂಜ್ರ್ವಾ ಹಾಗೂ ಮಧ್ಯಮ ವರ್ಗಗಳ ನಡುವೆ ಬೆಳೆಯಿತು. ಯುದ್ಧದ ನಂತರ ಮಧ್ಯಮ ವರ್ಗದ ಬೂಜ್ರ್ವಾ ಗುಣಗಳನ್ನು ಹೊಂದಿದ್ದ ಯೋಧರು, ಸೈನಿಕರು, ಗ್ರಾಮೀಣ ಮಧ್ಯಮ ವರ್ಗದ ಭೂಮಾಲೀಕ, ಬಂಡವಾಳ ವರ್ಗವು ಕಾರ್ಮಿಕರನ್ನು ಹಾಗೂ ಸೋಷಿಯಲಿಸ್ಟ್‌ರನ್ನು ಸದೆಬಡಿದು ದೊಡ್ಡ ಬಂಡವಾಳ ವರ್ಗ ಹಾಗೂ ಆಳುವ ವರ್ಗ ಎರಡೂ ಒಂದಾಗಿ ಸಹಕಾರದಿಂದ ಸರಕಾರದ ಅಧಿಕಾರವನ್ನು ಪಡೆಯಲು ಶ್ವೇತ ಯೋಧರ ಪಕ್ಷವನ್ನು ಕಾರ್ಮಿಕರ ವಿರುದ್ಧ ರಚಿಸಲಾಯಿತು.

ಗ್ರಾಂಸಿಯ ಪ್ರಕಾರ ಫಾಸಿಸಂ ಸಿದ್ಧಾಂತವು ಉತ್ಪಾದನೆ ಹಾಗೂ ಕಾರ್ಮಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಬಂದೂಕು ಹಾಗೂ ಇತರ ಮಾರಕ ಆಯುಧಗಳನ್ನು ಬಳಸುವ ಮಂತ್ರವಾಗಿರುತ್ತದೆ. ಗ್ರಾಂಸಿಯು ತನ್ನ ಕಾಲದಲ್ಲಿಯೇ ಮುಸಲೋನಿಯ ನಾಯಕತ್ವದ ಫಾಸಿಸಂ ಹಾಗೂ ಸ್ಪೇನ್‍ನ ಫಾಸಿಸಂ ಬೆಳವಣಿಗೆಗಳು ಜರ್ಮನಿಯ ನಾಸಿಜಂನ ಜೊತೆಗೆ ಬೆಳೆಯುತ್ತಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ವಿರೋಧಿ ಶಕ್ತಿಗಳಾಗುತ್ತಿದ್ದವು ಎಂಬುದನ್ನು ಕಂಡುಕೊಂಡನು. ಕೈಗಾರಿಕಾ ಕಾರ್ಮಿಕರ ಸಂಬಂಧಗಳನ್ನು ಒಡೆಯುವುದು, ರಾಷ್ಟ್ರೀಯ ಬಂಡವಾಳವನ್ನು ದೋಚುವುದು ಮತ್ತು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿ ಚಿಕ್ಕಪುಟ್ಟ ಬೂಜ್ರ್ವಾ ಶಕ್ತಿಗಳನ್ನು ಕ್ರೋಡೀಕರಿಸಿ ಬಂಡವಾಳಿಗರನ್ನು ಹೆಚ್ಚು ಪ್ರೋತ್ಸಾಹಿಸುತ್ತ ಕೊಳ್ಳೆ ಹೊಡೆಯುವ ಆರ್ಥಿಕ ಸಂಸ್ಕೃತಿಯನ್ನು ನಿರ್ಮಿಸುವುದು ಫಾಸಿಸ್ಟರ ಪ್ರಮುಖವಾದ ಕಾರ್ಯಕ್ರಮಗಳಾಗಿದ್ದವು.

ಇದನ್ನೂ ಓದಿ: ಮುಸಲೋನಿಯ ಆಡಳಿತಾವಧಿ

ಫಾಸಿಸ್ಟರು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ದೇಶವನ್ನೆಲ್ಲ ಲೂಟಿ ಹೊಡೆದು ಉತ್ಪಾದನೆಯಲ್ಲಿ ಬಿಕ್ಕಟ್ಟನ್ನು ತಂದೊಡ್ಡಿದ್ದರು. ಕಾರ್ಮಿಕರ ಹಾಗೂ ನಾಯಕರ ಕೊಲೆಗಳು, ಲಾಕ್‍ಔಟ್‍ಗಳು, ತುರ್ತು ಪರಿಸ್ಥಿತಿ, ರೈತರ, ಕಾರ್ಮಿಕರ ಸಂಘಗಳ ರದ್ಧತಿ, ಕಾರ್ಮಿಕರ ಬಂಧನಗಳು ಪ್ರತಿದಿನದ ಸುದ್ದಿಗಳಾಗಿದ್ದವು. ಈ ಫಾಸಿಸ್ಟ್ ದೇಶಗಳಲ್ಲಿ ಬೋಲ್ಶೆವಿಕ್ ಪಕ್ಷದ ವಿರೋಧಿ ಗುಂಪುಗಳು, ದಳಗಳು ನೇಮಕಗೊಂಡು ಸೇನೆಯು ಜುಂಟಾ ಮಾದರಿಯಲ್ಲಿ ಕಾರ್ಯಗತ ಮಾಡುತ್ತಿದ್ದವು. ಇಟಲಿಯ ಫಾಸಿಸ್ಟ್‍ ದಳಗಳಲ್ಲಿ 40,000ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸಜ್ಜುಗೊಳಿಸಿ ಕಾರ್ಮಿಕ ಸಂಘಗಳ ವಿರುದ್ಧ ವ್ಯವಸ್ಥಿತವಾದ ದೌರ್ಜನ್ಯಗಳನ್ನು ನಡೆಸಲು ನೇಮಿಸಲಾಗಿತ್ತು. ಇಟಲಿ, ಸ್ಪೇನ್ ಮತ್ತು ಜರ್ಮನಿಯಲ್ಲಿ ಸಾರ್ವಜನಿಕ ಸ್ವಾತಂತ್ರ್ಯವು ನಾಶಗೊಂಡು ಮಾನವ ಹಕ್ಕುಗಳು ಸಂಪೂರ್ಣ ಪತನಗೊಂಡವು. ಇಟಲಿಯ ಮಧ್ಯಮ ವರ್ಗವು ದೇಶದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬಡತನ ಹಾಗೂ ಜನರ ಹಾಹಾಕಾರವನ್ನು ಬಗೆಹರಿಸಲು ಬಂದೂಕು, ಗುಂಡುಗಳನ್ನು ಬಳಸುವುದು ಅಗತ್ಯವೆಂದು ಯೋಚಿಸುತ್ತಿತ್ತು. ಈ ರೀತಿಯ ನಾಯಕತ್ವದ ಅಡಿಯಲ್ಲಿ ಪುಂಡರ ಗುಂಪುಗಳನ್ನು ಸಂಘಟಿಸುವುದು, ಶಸ್ತ್ರಾಸ್ತ್ರಗಳ ಸಂಗ್ರಹಣೆ, ತರಬೇತಿ ಚಟುವಟಿಕೆಗಳನ್ನು ಗುಪ್ತವಾಗಿ ಹಾಗೂ ಬಹಿರಂಗವಾಗಿ ನಡೆಸುವುದು ಮತ್ತು ಸಂಚಲನ ಚಟುವಟಿಕೆ ಹಾಗೂ ಸಂಘಟನೆಯನ್ನು ಶ್ರೇಣೀಕೃತವಾದ ನಾಯಕತ್ವದೊಂದಿಗೆ ಸಂಘಟಿಸುವುದು ಫಾಸಿಸ್ಟರ ಮುಖ್ಯ ಕಾರ್ಯವಾಗಿತ್ತು.

(ಮುಂದಿನ ಭಾನುವಾರಕ್ಕೆ...)