ಕಂಡವರಿಗೆಲ್ಲ ಒಲಿಯದು ನಿರ್ದೇಶನ! ಅದು ಪ್ರತಿಭೆ, ಸಾಮರ್ಥ್ಯದ ಪ್ರತಿಫಲನ

ಇವತ್ತು ಯಾರು ಬೇಕಾದರೂ ನಿರ್ದೇಶಕರಾಗಬಹುದು ಎಂಬ ಪರಿಸ್ಥಿತಿ ಕನ್ನಡ ಚಿತ್ರರಂಗದಲ್ಲಿದೆ. ಇದರಿಂದಾಗಿ ಎಷ್ಟೇ ಅದ್ಧೂರಿಯಾಗಿ ನಿರ್ಮಿಸಿದರೂ ಪ್ರತಿಭಾವಂತ ನಿರ್ದೇಶಕನ ಮಾಂತ್ರಿಕ ಸ್ಪರ್ಶ ಇಲ್ಲದ ಚಲನಚಿತ್ರಗಳು ಸೋಲುತ್ತಲೇ ಇವೆ.

ಕಂಡವರಿಗೆಲ್ಲ ಒಲಿಯದು ನಿರ್ದೇಶನ!  ಅದು ಪ್ರತಿಭೆ, ಸಾಮರ್ಥ್ಯದ ಪ್ರತಿಫಲನ

 

ಇವತ್ತು ಯಾರು ಬೇಕಾದರೂ ನಿರ್ದೇಶಕರಾಗಬಹುದು ಎಂಬ ಪರಿಸ್ಥಿತಿ ಕನ್ನಡ ಚಿತ್ರರಂಗದಲ್ಲಿದೆ. ಇದರಿಂದಾಗಿ ಎಷ್ಟೇ ಅದ್ಧೂರಿಯಾಗಿ ನಿರ್ಮಿಸಿದರೂ ಪ್ರತಿಭಾವಂತ ನಿರ್ದೇಶಕನ ಮಾಂತ್ರಿಕ ಸ್ಪರ್ಶ ಇಲ್ಲದ ಚಲನಚಿತ್ರಗಳು ಸೋಲುತ್ತಲೇ ಇವೆ. ಇದರ ಪರಿಣಾಮಗಳ ಕುರಿತು ಚರ್ಚಿಸಿರುವ ಶ್ರೀನಾಥ್ ಬೆಳಚಿಕ್ಕನಹಳ್ಳಿ ಸಂತೆಗೆ ಬಂದವರೆಲ್ಲ ವ್ಯಾಪಾರ ಮಾಡಲೇಬೇಕೆಂದಿಲ್ಲ  ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಚಲನಚಿತ್ರವೊಂದು ಬಿಡುಗಡೆಯಾದಾಗ ಕೆಲವರು ಅದರ ನಾಯಕ, ನಾಯಕಿ, ಖಳನಾಯಕ ಮುಂತಾದ ಪಾತ್ರಧಾರಿಗಳ ನಟನೆ ಹೇಗಿದೆ ಎನ್ನುವುದರ ಬಗ್ಗೆ ಮೌಲ್ಯಮಾಪನ ಆರಂಭಿಸುತ್ತಾರೆ. ಮತ್ತೆ ಕೆಲವರು ಚಿತ್ರದ ತಾಂತ್ರಿಕ ವರ್ಗದ ಕೆಲಸವನ್ನು ಒರೆಗೆ ಹಚ್ಚತೊಡಗುತ್ತಾರೆ. ಅದರಲ್ಲೂ ಮುಖ್ಯವಾಗಿ ನಟ, ನಟಿ, ತಂತ್ರಜ್ಞರನ್ನು ದುಡಿಸಿಕೊಳ್ಳಬೇಕಾದ ನಿರ್ದೇಶಕನ ಕೆಲಸದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಇತ್ತೀಚೆಗೆ ಹಾಗೆ ಕನ್ನಡ ಪ್ರೇಕ್ಷಕರ ಮತ್ತು ಸಿನಿಪಂಡಿತರ ವಿಮರ್ಶೆಗೆ ಗುರಿಯಾದವರು ವಿ ಹರಿಕೃಷ್ಣ.

ವಿ ಹರಿಕೃಷ್ಣ ಮೂಲತಃ ಸಂಗೀತ ನಿರ್ದೇಶಕ. ಹಂಸಲೇಖಾ, ಗುರುಕಿರಣ್, ಸಾಧು ಕೋಕಿಲಾ ಮುಂತಾದವರ ಗರಡಿಯಲ್ಲಿ ಪಳಗಿದವರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಳಿ ಕೀಬೋರ್ಡ್ ಪ್ಲೇಯರ್ ಆಗಿದ್ದ ಹರಿಕೃಷ್ಣರನ್ನು ಸ್ವತಂತ್ರ ಸಂಗೀತ ನಿರ್ದೇಶಕರನ್ನಾಗಿ ಮಾಡಿದ್ದು ದರ್ಶನ್. ದರ್ಶನ್ ತಮ್ಮ ತೂಗುದೀಪ ದಿನಕರ ನಿರ್ದೇಶನದ ಮೊದಲ ಚಿತ್ರ `ಜೊತೆ ಜೊತೆಯಲಿ’. ಸಂಗೀತ ನಿರ್ದೇಶಕರಾಗಿ ಹರಿಕೃಷ್ಣ ಅವರಿಗೂ ಅದು ಮೊದಲ ಚಿತ್ರ. ಹರಿಕೃಷ್ಣರ ಹಾಡುಗಳಿಗೆ ಪ್ರೇಕ್ಷಕರು ತಲೆದೂಗಿದ್ದರು; ಚಿತ್ರ ಮ್ಯೂಸಿಕಲ್ ಹಿಟ್ ಆಗಿತ್ತು. ಅದರ ನಂತರ ಹರಿಕೃಷ್ಣ ಸ್ಟಾರ್‌ಗಳ ಚಿತ್ರಗಳಿಗೆ ಸಂಗೀತ ನೀಡುತ್ತ ತಾವೂ ಕೂಡ ಸ್ಟಾರ್ ಕಂಪೋಸರ್ ಆಗಿ ಬೆಳೆದರು. ದರ್ಶನ್ ಚಿತ್ರಗಳಿಗೆ ಕಾಯಂ ಸಂಗೀತ ನಿರ್ದೇಶಕರಾದರು. ಚಾಲೆಂಜಿಂಗ್ ಸ್ಟಾರ್‌ನ ಆಪ್ತ ಬಳಗದ ಸದಸ್ಯರೂ ಆದರು. ನಿರ್ದೇಶನದ ಹ್ಯಾಟ್ ಧರಿಸಲು ಹರಿಕೃಷ್ಣಗೆ ನೆರವಾಗಿದ್ದು ದರ್ಶನ್  ಜೊತೆಗಿನ ಇದೇ ಆಪ್ತ ಒಡನಾಟ.

ಹರಿಕೃಷ್ಣ ಸ್ವತಂತ್ರ ಸಂಯೋಜಕರಾಗಿದ್ದು ಕೊಂಚ ತಡವೇ ಆದರೂ ಸಂಗೀತ ನಿರ್ದೇಶಕರಾಗಿ ಅವರ ಬೆಳವಣಿಗೆ ಅಚ್ಚರಿ ಹುಟ್ಟಿಸುವಂಥದ್ದು. ಅವರ ಅನೇಕ ಟ್ಯೂನ್‌ಗಳು ಕದ್ದಿದ್ದೆಂಬ ಆರೋಪದ ನಡುವೆಯೂ ಅತ್ಯಂತ ಯಶಸ್ವೀ ಹಾಗೂ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದ ಹರಿಕೃಷ್ಣ ಈಗ ಮೊದಲ ಬಾರಿಗೆ ಸಿನಿಮಾ ನಿರ್ದೇಶಕರಾಗಿಯೂ ಅವತರಿಸಿ ಸಿನಿಪ್ರಿಯರನ್ನು ಅಚ್ಚರಿಗೆ ಕೆಡವಿದ್ದಾರೆ. ಅವರ ಈ ಸ್ಥಿತ್ಯಂತರಕ್ಕೂ ಕಾರಣಪುರುಷ ಅದೇ ದರ್ಶನ್.

`ಯಜಮಾನ’ ಹರಿಕೃಷ್ಣ ಪಿ ಕುಮಾರ್ ಜೊತೆ ಸೇರಿ ನಿರ್ದೇಶಿಸಿರುವ ಚಿತ್ರ. ಟೈಟಲ್ ಕಾರ್ಡ್‌ನಲ್ಲಿ ಹರಿಕೃಷ್ಣ ಹೆಸರೇ ಮೊದಲು ಬರುತ್ತದೆ. ವಾಸ್ತವವಾಗಿ ಚಿತ್ರ ಆರಂಭವಾದಾಗ ಕುಮಾರ್ ಒಬ್ಬರೇ ನಿರ್ದೇಶಕರಾಗಿದ್ದರು. ಆದರೆ ಚಿತ್ರದ ಕಥೆಯ ಡಿಸ್ಕಷನ್‌ ಹಂತದಿಂದಲೂ ಹರಿಕೃಷ್ಣ ಚಿತ್ರನಿರ್ಮಾಣ ಕಾರ್ಯದಲ್ಲಿ ವಿಪರೀತ ಇನ್‌ವಾಲ್ವ್ ಆಗುತ್ತಿದ್ದರಂತೆ. ಶೂಟಿಂಗ್ ಹಂತದಲ್ಲೂ ಮುಖ್ಯ ಪಾತ್ರ ನಿರ್ವಹಿಸಿದ್ದರಂತೆ. ಹಾಗಾಗಿ ಅವರಿಗೆ ನಿರ್ದೇಶನದ ಕ್ರೆಡಿಟ್ ಕೊಡಬೇಕಾಗಿರುವುದು ಸಹಜ ಹಾಗೂ ನ್ಯಾಯ ಸಮ್ಮತ ಎಂದು ನಿರ್ಮಾಪಕಿ ಶೈಲಜಾ ನಾಗ್ ಸಮರ್ಥಿಸಿಕೊಳ್ಳುತ್ತಾರೆ.

ಹರಿಕೃಷ್ಣ ದರ್ಶನ್ ಚಿತ್ರಗಳ ಕಾಯಂ ಸಂಗೀತ ನಿರ್ದೇಶಕರಾಗಿದ್ದ ಕಾರಣಕ್ಕೆ ಇಬ್ಬರ ನಡುವೆ ಒಂದು ಮಟ್ಟದ ಆತ್ಮೀಯತೆ ಬೆಳೆದಿತ್ತು. ಇದೇ ಕಾರಣಕ್ಕೆ ಅವರು ಚಿತ್ರ ನಿರ್ಮಾಣದ ವಿವಿಧ ಹಂತಗಳಲ್ಲಿ ಭಾಗಿಯಾಗಿ, ಸಲಹೆ ಸೂಚನೆ ನೀಡಿರಬಹುದು. ಒಂದಷ್ಟು ಕೆಲಸವನ್ನೂ ಮಾಡಿರಬಹುದು. ಅಷ್ಟು ಮಾತ್ರಕ್ಕೆ ಅವರು ನಿರ್ದೇಶಕರಾಗಬಹುದೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ವಿಶೇಷ ಅಂದರೆ, ಈ ಚಿತ್ರದ ನಿರ್ಮಾಪಕಿಯಾದ ಶೈಲಜಾ ನಾಗ್ ಅವರ ಗಂಡ ಬಿ ಸುರೇಶ್ ಅವರೂ ಕೂಡ ಒಬ್ಬ ನಿರ್ದೇಶಕರು. ರವಿಚಂದ್ರನ್ ಅವರಂಥ ಅಪ್ಪಟ ಕಮರ್ಷಿಯಲ್ ಡೈರೆಕ್ಟರ್‌ನಿಂದ ನಿರ್ದೇಶನದ ಕಸುಬು ಕಲಿತ ಬಿ ಸುರೇಶ್, ವ್ಯಾಪಾರಿ ಚಿತ್ರಗಳ ಹಾದಿಯನ್ನು ಬಿಟ್ಟು ಧಾರಾವಾಹಿ ಹಾಗೂ ಕಲಾತ್ಮಕ ಚಿತ್ರಗಳ ನಿರ್ದೇಶಕರಾದರು. ಅಂಥವರ ನಿರ್ಮಾಣದ ಚಿತ್ರವನ್ನು ನಿರ್ದೇಶಿಸಿರುವುದು, ಅದೂ ದರ್ಶನ್‌ರಂಥ ಸ್ಟಾರ್‌ ನಟಿಸಿದ ಚಿತ್ರವನ್ನು ನಿರ್ದೇಶನಕ್ಕೆ ಹೊಸಬರಾದ ಹರಿಕೃಷ್ಣ ನಿರ್ದೇಶನದ ಪಾಲುದಾರಿಕೆ ಪಡೆದಿರುವುದು ಅಚ್ಚರಿಯ ಸಂಗತಿಯಾಗಿದೆ.

ಹರಿಕೃಷ್ಣಒಬ್ಬರೇ ಅಲ್ಲ, ಕನ್ನಡದಲ್ಲಿ ಈ ಹಿಂದೆಯೂ ಅನೇಕ ತಂತ್ರಜ್ಞರು ನಿರ್ದೇಶನಕ್ಕಿಳಿದ ನಿದರ್ಶನಗಳಿವೆ. ತೀರಾ ಇತ್ತೀಚಿನ ಉದಾಹರಣೆಗಳೆಂದರೆ, ನೃತ್ಯ ಸಂಯೋಜಕ ಎ ಹರ್ಷ ಮತ್ತು ಫೈಟ್ ಮಾಸ್ಟರ್ ರವಿವರ್ಮ. ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗದವರ ಹುಬ್ಬೇರಿಸಿದ್ದವರು ಹರ್ಷ. ನಿರ್ಮಾಪಕರನ್ನು ಹಿಡಿಯುವುದರಲ್ಲಿ ಇವರು ಮಹಾ ನಿಸ್ಸೀಮರು ಎನ್ನುವ ಮಾತು ಗಾಂಧಿನಗರದಲ್ಲಿದೆ. ಇನ್ನು ರವಿವರ್ಮ ಶಿವರಾಜ್‌ಕುಮಾರ್ ಅಭಿನಯದ ರುಸ್ತುಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತಂತ್ರಜ್ಞರು ನಿರ್ದೇಶಕರಾಗಬಾರದು ಎಂದೇನೂ ಇಲ್ಲ. ಚಿತ್ರ ನಿರ್ದೇಶನದ ಬಗ್ಗೆ ಅವರಿಗೆ ಆಸಕ್ತಿಯಿದ್ದು, ಕಸುಬನ್ನು ಕಲಿತಿದ್ದರೆ, ಅದರ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡಿದ್ದರೆ ಯಾರು ಬೇಕಾದರೂ ಚಿತ್ರ ನಿರ್ದೇಶಕರಾಗಬಹುದು. ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯ್ ಹಾಗೂ ತ್ರೀ ಈಡಿಯಟ್ಸ್ ಚಿತ್ರಗಳನ್ನು ನಿರ್ದೇಶಿಸಿದ ರಾಜ್‌ಕುಮಾರ್ ಹೀರಾನಿ ಮೂಲತಃ ಒಬ್ಬ ಸಂಕಲನಕಾರ. ಭಾರತೀಯ ಬೆಳ್ಳಿತೆರೆಗೆ ಅನುಪಮ, ಆನಂದ್, ಗುಡ್ಡಿ, ಚುಪ್ಕೆ ಚುಪ್ಕೆ, ಗೋಲ್‌ಮಾಲ್, ಬಾವರ್ಚಿಯಂತಹ ಅನೇಕ ಹೃದ್ಯ ಚಿತ್ರಗಳನ್ನು ನೀಡಿದ ಹೃಷಿಕೇಶ್ ಮುಖರ್ಜಿ ಕೂಡ ಮೂಲತಃ ಸಂಕಲನಕಾರರಾಗಿದ್ದವರೇ. ಹೃಷಿ ದಾ ಎಂದೇ ಖ್ಯಾತರಾಗಿದ್ದ ಅವರು ಪಿ ಲಂಕೇಶರ ಹಲವು ಚಿತ್ರಗಳ ಸಂಕಲನ ಮಾಡಿದ್ದರು. ಇನ್ನು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಸಿದ್ದಲಿಂಗಯ್ಯ ತಮ್ಮ ವೃತ್ತಿಜೀವನ ಆರಂಭಿಸಿದ್ದು ಲೈಟ್ ಬಾಯ್ ಆಗಿ. ಆದರೆ, ಅವರು ಸದಾ ಕನಸಿದ್ದು ನಿರ್ದೇಶನದ ಕೆಲಸ. ಅದಕ್ಕಾಗಿ ಚಿತ್ರ ನಿರ್ಮಾಣದ ಹಲವು ವಿಭಾಗಗಲ್ಲಿ ದುಡಿದು ಅನುಭವ ಗಳಿಸಿದರು. ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿ ಹಂತ ಹಂತವಾಗಿ ಮೇಲೇರಿ ನಂತರ ಸ್ವತಂತ್ರ ನಿರ್ದೇಶಕರಾದರು. ಮೇಯರ್ ಮುತ್ತಣ್ಣ, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯದಂಥ ಕನ್ನಡಿಗರು ಯಾವತ್ತೂ ಮರೆಯಲಾಗದ ಚಿತ್ರಗಳನ್ನು ನೀಡಿದರು.

ಈಗ ನಿರ್ದೇಶಕರಾಗಬೇಕೆಂದರೆ, ಯಾರ ಬಳಿಯೋ ಅಸಿಸ್ಟೆಂಟ್ ಆಗಿ ಕೆಲಸ ಮಾಡಿರಲೇಬೇಕೆಂದಿಲ್ಲ. ಕಲಿಕೆಗೆ ಇಂಟರ್ನೆಟ್, ಸಿನಿಮಾ ಇನ್ಸ್ಟಿಟ್ಯೂಟ್ ಹೀಗೆ ಹಲವು ಮಾರ್ಗಗಳಿವೆ. ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಮಣಿರತ್ನಂ ಯಾರ ಬಳಿಯೂ ಅಸಿಸ್ಟೆಂಟ್ ಆಗಿ ಕಲಿತವರಲ್ಲ. ಸಿನಿಮಾ ಹಿನ್ನೆಲೆಯ ಕುಟುಂಬಕ್ಕೆ ಸೇರಿದ ಮಣಿ ಎಂಬಿಎ ಪದವಿ ಪಡೆದ ನಂತರ ನೇರವಾಗಿ ನಿರ್ದೇಶನಕ್ಕಿಳಿದರು. ಇದೇ ಕಾರಣಕ್ಕೆ ಅವರ ಮೊದಲ ಚಿತ್ರಕ್ಕೆ ಕ್ಯಾಮರಾಮನ್ ಆಗಲು ಬಾಲು ಮಹೇಂದ್ರ ಅವರನ್ನು ಕೇಳಿಕೊಂಡಾಗ, ಅನನುಭವಿಯ ಬಳಿ ಕೆಲಸ ಮಾಡಲ್ಲ ಎಂದು ಬಾಲು ಮಹೇಂದ್ರ ನಿರಾಕರಿಸಿದ್ದರಂತೆ! ನಂತರ ಮಣಿರತ್ನಂ ಹೇಗೋ ಬಾಲು ಮಹೇಂದ್ರ ಅವರನ್ನು ಒಪ್ಪಿಸಿ ತಮ್ಮ ಮೊದಲ ಚಿತ್ರ ನಿರ್ದೇಶಿಸಿದ್ದರು. ಅದೇ ಪಲ್ಲವಿ ಅನುಪಲ್ಲವಿ. ಆ ಚಿತ್ರವನ್ನು ನೋಡಿದವರ್ಯಾರೂ ಅದು ನಿರ್ದೇಶನ ಕಲಿಯದ ವ್ಯಕ್ತಿಯೊಬ್ಬ ಮಾಡಿರುವ ಸಿನಿಮಾ ಎನ್ನಲಿಕ್ಕಾಗುವುದಿಲ್ಲ. ಆ ಚಿತ್ರದ ಛಾಯಾಗ್ರಹಣ, ಸಂಗೀತ, ನಟನೆ ಎಲ್ಲವೂ ಇವತ್ತು ನೋಡಿದರೂ ಮೋಹಕ ಅನ್ನಿಸುತ್ತವೆ. ಚಿತ್ರದ ಹಾಡುಗಳು ಹಾಗೂ ದೃಶ್ಯಗಳು, ಸನ್ನಿವೇಶಗಳು ತಮ್ಮ ಸೂಕ್ಷತೆಯಿಂದ ಅತ್ಯಂತ ಹೃದ್ಯ ಅನ್ನಿಸುತ್ತವೆ. ಮಣಿರತ್ನಂರಂತೆ ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ ರಾಮ್‌ಗೋಪಾಲ್ ವರ್ಮಾ ಕೂಡ ಯಾರ ಬಳಿಯೂ ಅಸಿಸ್ಟೆಂಟ್ ಆಗಿ ಕೆಲಸ ಕಲಿತವರಲ್ಲ. ತನ್ನ ಮೊದಲ ಚಿತ್ರ ನಿರ್ದೇಶಿಸುವಾಗಲೂ ಕೂಡ ವರ್ಮಾಗೆ ಆಕ್ಷನ್ ಕಟ್ ಎನ್ನುವುದೂ ಕೂಡ ಬರುತ್ತಿರಲಿಲ್ಲ! ಆದರೆ ವರ್ಮಾ ನಿರ್ದೇಶಿಸಿದ ಆ ಮೊದಲ ಚಿತ್ರ-ಶಿವ-ಇವತ್ತಿಗೂ ಭಾರತದಾದ್ಯಂತ ಸಿನಿಪ್ರಿಯರ ನೆಚ್ಚಿನ ಚಿತ್ರವಾಗಿದೆ; ನಿರ್ದೇಶಕರಾಗಬೇಕು ಎಂದು ಬಯಸುವವರಿಗೆ ಒಂದು ಸಿಲಬಸ್‌ನಂತಿದೆ.

ಇದರ ಭಾವ ಇಷ್ಟೇ: ನಿರ್ದೇಶನ ಎನ್ನುವುದು ಒಂದು ಸೂಕ್ಷ್ಮ ವೃತ್ತಿ. ಅದನ್ನು ಕರಗತ ಮಾಡಿಕೊಳ್ಳುವುದಕ್ಕೆ ದಾರಿಗಳು ಹಲವು. ದಡ್ಡನೊಬ್ಬ ತನ್ನ ಜೀವಮಾನವಿಡೀ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರೂ ಆ ಕಸುಬು ಆತನಿಗೆ ಒಲಿಯದೇ ಇರಬಹುದು. ಸೂಕ್ಷ್ಮಗ್ರಾಹಿಯೊಬ್ಬ ಯಾರ ಬಳಿಯೂ ಕೆಲಸ ಮಾಡದೆ ಪರೋಕ್ಷವಾಗಿ ನಿರ್ದೇಶನದ ಪಟ್ಟುಗಳನ್ನು ಕಲಿಯಬಲ್ಲ. ನಿರ್ದೇಶನ ಎನ್ನುವ ಕಲೆಯ ಹತಾರಗಳನ್ನು ದಕ್ಕಿಸಿಕೊಳ್ಳುವ ಮನಸ್ಸಿನ ಹಿಂದಿನ ಸ್ಪಂದನೆ ಬಹಳ ಮುಖ್ಯ.

ಈಗ ಮತ್ತೆ ಯಜಮಾನ ಚಿತ್ರದತ್ತ ಬರೋಣ. ಯಜಮಾನ ಚಿತ್ರಕ್ಕೆ ಶೈಲಜಾ ನಾಗ್ ಕೋಟಿ ಕೋಟಿ ಹಣ ಚೆಲ್ಲಿದ್ದಾರೆ. ಚಿತ್ರದ ಪ್ರತಿ ದೃಶ್ಯದಲ್ಲೂ ಅದ್ಧೂರಿತನ ಕಾಣುತ್ತದೆ. ಆದರೆ, ಚಿತ್ರದ ಜೀವಾಳವಾದ ಕಥೆಯಲ್ಲೇ ಲೋಪವಿದೆ. ಚಿತ್ರದಲ್ಲಿ ವೈಭವಯುತ ಸೆಟ್‌ಗಳು, ಡಬಲ್ ಮೀನಿಂಗ್ ಡೈಲಾಗ್‌ಗಳು, ಗ್ಲಾಮರ್, ಹೀರೋಯಿಸಂ ಹೀಗೆ ಒಂದು ಕಮರ್ಷಿಯಲ್ ಚಿತ್ರದಲ್ಲಿರಬೇಕಾದ ಎಲ್ಲ ಮಸಾಲೆಗಳೂ ಇವೆ. ಆದರೆ ಸುಸಂಬದ್ಧವಾದ, ನೋಡುಗರನ್ನು ಕನಿಷ್ಠ ಮಟ್ಟದಲ್ಲಿ ರಂಜಿಸಬಲ್ಲ ಕಥೆಯೇ ಇಲ್ಲ.

ಚಿತ್ರವೊಂದರ ಮುಖ್ಯ ಆಸರೆ ಅದರ ಕಥೆ. ಅಂಥ ಕಥೆ ಮಾಡುವುದು ಇಲ್ಲವೇ ಉತ್ತಮ ಕಥೆ ಯಾವುದು ಎಂದು ನಿರ್ಧರಿಸುವುದು ನಿರ್ದೇಶನಿಗಿರಬೇಕಾದ ಮುಖ್ಯ ಅರ್ಹತೆ. ಆದರೆ ಇವತ್ತು ಹೇಗಾಗಿದೆ ಎಂದರೆ, ಕಥೆಯ ಬಗ್ಗೆ ಕಿಂಚಿತ್ ಜ್ಞಾನ ಇಲ್ಲದವನೂ ಕೂಡ ಫೈಟ್‌, ಹಾಡು ಮತ್ತಿತರ ಮಸಾಲಾ ಕಾರಣದಿಂದ ನಿರ್ದೇಶಕನಾಗಬಲ್ಲ. ಇದರಲ್ಲಿ ಯಾರ ಹೆಚ್ಚುಗಾರಿಕೆ ಏನೂ ಇಲ್ಲ; ಫೈಟ್ ಮಾಸ್ಟರ್ ಫೈಟ್ಸ್ ಕಂಪೋಸ್ ಮಾಡುತ್ತಾನೆ. ಕೊರಿಯೋಗ್ರಾಫರ್ ನೃತ್ಯ ಸಂಯೋಜಿಸುತ್ತಾನೆ. ನಟ, ನಟಿ, ಉಳಿದ ತಂತ್ರಜ್ಞರು ಅವರವರ ಕೆಲಸ ಅವರವರು ಮಾಡುತ್ತಾರೆ. ಅಲ್ಲಿಗೆ ಚಿತ್ರ ನಿರ್ಮಾಣದ ಎಲ್ಲ ಕೆಲಸಗಳೂ ನಿರ್ದೇಶಕನ ಅನುಪಸ್ಥಿತಿಯಲ್ಲಿಯೂ ನಡೆಯಬಲ್ಲವು ಎಂದಾಯಿತು. ಆದರೆ, ಒಬ್ಬ ನಿಜವಾದ ನಿರ್ದೇಶಕ ಸಿನಿಮಾ ನಿರ್ಮಾಣದ ಎಲ್ಲ ವಿಭಾಗಗಳಿಗೂ ತನ್ನ ಸ್ಪರ್ಶದಿಂದ ಹೊಸ ಅರ್ಥ, ಜೀವಂತಿಕೆ ತರಬಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಚಿತ್ರಕ್ಕೆ ಜೀವ ತುಂಬುವ ಕೆಲಸವಿದೆಯಲ್ಲ.. ಅದನ್ನು ಒಬ್ಬ ಕಸುಬುದಾರ ನಿರ್ದೇಶಕ ಮಾತ್ರ ಮಾಡಬಲ್ಲ. ಅದಕ್ಕೆ ಆತನಿಗೆ ಆ ವಿದ್ಯೆ ಗೊತ್ತಿರಬೇಕು. ಅದರ ಹತಾರಗಳು ಕೈವಶವಾಗಿರಬೇಕು.

ಸ್ಟಾರ್‌ವೊಬ್ಬರ ಜೊತೆ ಆತ್ಮೀಯತೆ ಇದೆ ಎನ್ನುವ ಕಾರಣಕ್ಕೆ ನಿರ್ದೇಶನದ ಅವಕಾಶ ಗಿಟ್ಟಿಸಿದವರು, ತಮ್ಮ ಚಾಕಚಾಕ್ಯತೆಯಿಂದ, ಗಿಲೀಟಿನಿಂದ ಅಥವಾ ಅದೃಷ್ಟದ ಬಲದಿಂದ ನಿರ್ದೇಶನದ ಚಾನ್ಸ್ ಗಿಟ್ಟಿಸಿದವರಿಂದ ಸಿನಿಮಾ ಕಲೆಗಾಗಲಿ, ಚಿತ್ರೋದ್ಯಮಕ್ಕಾಗಲಿ, ಪ್ರೇಕ್ಷಕರಿಗಾಗಲಿ ಯಾವ ಪ್ರಯೋಜನವೂ ಇಲ್ಲ. ವಿಪರ್ಯಾಸ ಎಂದರೆ, ಇಂದು ಎಲ್ಲ ಚಿತ್ರರಂಗಗಳಲ್ಲಿಯೂ ಇಂಥ ನಿರ್ದೇಶಕರ ಸಂಖ್ಯೆಯೇ ಹೆಚ್ಚಾಗಿದೆ.