ಎನ್‍ಕೌಂಟರ್ ಹೆಸರಿನ ಹಿಂದಿದೆ ಸಾಲುಗಟ್ಟಿದ ಘಟನಾವಳಿಗಳು

ಮಾಫಿಯಾ, ಅಂಡರ್ ವರ್ಲ್ಡ್ ಬಲಿ ಹಾಕಲು ಶುರುವಾದ ಎನ್‍ಕೌಂಟರ್ ಬದಲಾದ ಕಾಲಘಟ್ಟದಲ್ಲೀಗ, ಅತ್ಯಾಚಾರಿ ಹಂತಕರವರೆಗೂ ತಲುಪಿದೆ. ಪರ ವಿರೋಧದ ಕಾವು ಕೂಡ ನಡುಗುವ ಚಳಿಯ ಋತುಮಾನದಲ್ಲೂ ಚುರುಗುಟ್ಟುತ್ತಿದೆ.

ಎನ್‍ಕೌಂಟರ್ ಹೆಸರಿನ ಹಿಂದಿದೆ ಸಾಲುಗಟ್ಟಿದ ಘಟನಾವಳಿಗಳು

ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ, ಅಮಾನುಷವಾಗಿ ಸುಟ್ಟುಹಾಕಿದ ದುರುಳರಿಗೆ ನ್ಯಾಯಬದ್ದವಾಗಿ ಗಲ್ಲು ಶಿಕ್ಷೆಯಾಗಬೇಕಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆರಕ್ಷಕರು ಎನ್‍ಕೌಂಟರ್ ಹೆಸರಲ್ಲಿ ನಾಲ್ವರನ್ನು ಗುಂಡಿಟ್ಟು ಕೊಂದಿರುವುದು ನಾನಾ ಸಂದೇಹಗಳಿಗೆ, ಸರಿಯೋ ತಪ್ಪೋ ಎಂಬ ಚರ್ಚೆಗೆ ಎಡೆ ಮಾಡಿಕೊಟ್ಟಿರುವಂತೆ ಆರಕ್ಷಕರನ್ನು ದುರುಳರ ಸಂಹಾರಕ್ಕೆ ಭೂಮಿಗಿಳಿದು ಬಂದ ಭಗವಂತ ಎಂಬಂತೆ ವರ್ಣಿಸಿ ವಿಜೃಂಭಿಸುತ್ತಿರುವುದೂ ಇದೆ.

ಅಷ್ಟಕ್ಕೂ ಎನ್‍ಕೌಂಟರ್ ಎಂಬ ಪದವೇ ಆರಕ್ಷಕ ಇಲಾಖೆ ಕಾನೂನು ನಿಯಮಗಳಲ್ಲಿ ಇಲ್ಲ. ದಕ್ಷಿಣ ಏಷ್ಯಾದ ಭಾರತ ಮತ್ತು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಕೆಗೆ ಬಂದಿರುವ ಈ ಪದದ ಜನಪ್ರಿಯತೆಗೆ ಬಹುತೇಕವಾಗಿ ಸಿನಿಮಾಗಳೇ ಕಾರಣ.

ಭೂಗತ ಜಗತ್ತು ಮುಂಬೈನಲ್ಲಿ ಜೀವನಾವಶ್ಯಕ ಸರಕಾಗಿದ್ದ ಸೀಮೆ ಎಣ್ಣೆ, ಪೆಟ್ರೋಲ್‍ನಂಥ ಮಾಫಿಯಾ ಮೂಲಕ ಜೀವಂತವಾಗಿತ್ತು. ಜಗ್ಗುದಾದ - ಪಾಕುದಾದ, ಅರುಣ್ ಗಾರ್ವಿ, ದಾವೂದ್ ಇಬ್ರಾಹಿಂ ಹೀಗೇ ಹಲವಾರು ಗುಂಪುಗಳಿದ್ದವು. 1981 ರಲ್ಲಿ ಮುಂಬೈನಲ್ಲಿ ಮೊಟ್ಟ ಮೊದಲಿಗೆ ಮಾನ್ಯ ಅಲಿಯಾಸ್ ಮನೋಹರ ಅರ್ಜುನ್ ಸುರ್ವೆ ಎಂಬಾತನನ್ನು ಆರಕ್ಷಕ ಉಪನಿರೀಕ್ಷಕ ಇನಾಕ್ ಭಗವಾನ್ ಎಂಬಾತ ಗುಂಡಿಟ್ಟು ಕೊಂದಿದ್ದೇ, ಪ್ರಪ್ರಥಮ ಎನ್‍ಕೌಂಟರ್. ಸೀಮೆಎಣ್ಣೆಯಂಥ ಆಯಿಲ್ ಮಾಫಿಯಾ ಕ್ರಮೇಣ ರಿಯಲ್ ಎಸ್ಟೇಟ್, ಸಿನಿಮಾ ಕ್ಷೇತ್ರದತ್ತ ಹೊರಳಿಕೊಂಡಿತು. ದಾವೂದ್ ಇಬ್ರಾಹಿಂ ಎದುರಿಗೆ ಛೋಟಾ ರಾಜನ್ ತಂಡ 1999 ರ ವೇಳೆಗೆ ಬೆಳೆಯುವ ಮೂಲಕ ಹಿಂದೂ ಮತ್ತು ಮುಸ್ಲಿಂ ಅಂಡರ್ ವರ್ಲ್ಡ್ ಬಂತು. ಇವರಿಬ್ಬರೂ ದೇಶ ಬಿಟ್ಟರು, ಬಹುತೇಕವಾಗಿ 2001 ರಿಂದ ಮುಂಬೈನಲ್ಲಿ ಅಂಡರ್ ವರ್ಲ್ಡ್ ಮಾಫಿಯಾ ದೊಡ್ಡ ಮಟ್ಟದಲ್ಲಿಇಲ್ಲ.

ಮುಂಬೈನಲ್ಲಿ ಅಂಡರ್ ವರ್ಲ್ಡ್ ಬಲಿ ಹಾಕಿ, ಎನ್‍ಕೌಂಟರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವವರು ಏಳು ಮಂದಿ. ಅವರೆಂದರೆ 104 ಎನ್‍ಕೌಂಟರ್ ಮಾಡಿರುವ ಪ್ರದೀಪ್‍ ಶರ್ಮ, ಕನ್ನಡಿಗ ದಯಾನಾಯಕ್(83), ಪ್ರಫುಲ್ ಬೋಂಸ್ಲೆ(83), ವಿಜಯ್ ಸಲಪುರ್(83), ಸಚಿನ್ ಹಿಂದೂರಾವ್ ವಾಝೆ(63) ರವೀಂದ್ರ ಆಂಗ್ರೆ (51) ಮತ್ತು ರಾಜ ಬೀರ್‍ಸಿಂಗ್(51). ತನ್ನ ಪ್ರಾಣ ರಕ್ಷಣೆಗಾಗಿ ಎದುರಾಳಿಯನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಎನ್‍ಕೌಂಟರ್ ಎಂಬ ಪದವನ್ನು ಬಳಸಿ ಬಳಸಿ ಇದನ್ನೆ ಜನಪ್ರಿಯಗೊಳಿಸಿದ್ದು ಸಿನಿಮಾಗಳು.

2002-08 ವರೆಗೆ 440, 2009-10 ರವರೆಗೆ 555 ಎನ್‍ಕೌಂಟರ್ ಗಳಾಗಿರುವ ಲೆಕ್ಕವಿದ್ದು, ಇದರಲ್ಲಿ ಎಷ್ಟೋ ನಕಲಿಗಳಾಗಿರುವುದೂ ಪತ್ತೆಯಾಗಿದೆ. ಬಿಡಿಬಿಡಿಯಾಗಲ್ಲದೆ ಸಾಮೂಹಿಕವಾಗಿ ಎನ್‍ಕೌಂಟರ್ ಮಾಡಿದ ಘಟನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, 1919 ರ ಏಪ್ರಿಲ್ 13 ರಂದು ಜಲಿಯನ್‍ ವಾಲಾಬಾಗ್‍ನಲ್ಲಿ ಆರಕ್ಷಕರು ಗುಂಡು ಹಾರಿಸಿ, ಅಮಾಯಕ ಭಾರತೀಯರನ್ನು ಹತ್ಯೆಮಾಡಿದ್ದನ್ನೂ ಸೇರಿಸಿಕೊಳ್ಳಬಹುದು 1930 ರ ಡಿ.12 ರಂದು ಬಾಂಬೆ ಹತ್ತಿ ಮಿಲ್ ಹೋರಾಟಗಾರರ ಮೇಲೆ, 1966 ಮಾರ್ಚ್ 25 ರಂದು ಬಸ್ತರ್ (ಈಗ ಒರಿಸ್ಸಾ) ನಜಬಲ್‍ಪುರದಲ್ಲಿ ರಾಜ ಪ್ರವೀರ್ ಚಂದ ಭಂಜ್ ಎಂಬಾತನನ್ನು ಕುಟುಂಬ ಸಮೇತ ಗುಂಡು ಹಾರಿಸಿ ಹತ್ಯೆ ಮಾಡಲಾಗುತ್ತದೆ. 1979 ರಲ್ಲಿ ಬಂಗಾಳದ ಹನಾನಿಬಾದ್‍ನಲ್ಲಿ ಎನ್‍ಕೌಂಟರ್ ಮಾಡಿದ ಆರಕ್ಷಕರು ಶವಗಳನ್ನು ನದಿಗೆ ಎಸೆದಿರುತ್ತಾರೆ. 1979-80ರಲ್ಲಿ ಬಿಹಾರದ ಭಗಲ್‍ಪುರದಲ್ಲಿ 31 ಮಂದಿಯ ಕಣ್ಣುಗಳನ್ನು ಕೀಳುವ ಕೃತ್ಯ ಮೆರೆಯಲಾಗಿದೆ. 1982ರ ಜನವರಿ 11 ರಂದು ಮುಂಬೈನ ಮೊಟ್ಟ ಮೊದಲ ಎನ್ ಕೌಂಟರ್ ನಲ್ಲಿ ಮಾನ್ಯ ಸುರ್ವೆಯನ್ನು ಶೂಟೌಟ್, ನಂತರ 1987 ರ ಮೇ 22 ರಂದು ಮೀರತ್‍ನ ಹಸಿಮ್‍ಪುರ ಹತ್ಯಾಕಾಂಡದಲ್ಲಿ ಆರಕ್ಷಕರು 42 ಮುಸ್ಲಿಂರನ್ನು ವಾಹನದಲ್ಲಿ ಕರೆದುಕೊಂಡು ಹೋಗಿ ಫಜಿಯಾಬಾದ್‍ನಲ್ಲಿ ಗುಂಡಿಟ್ಟು ಕೊಂದು ಶವಗಳನ್ನು ಕಾಲುವೆಗೆ ಎಸೆದಿರುತ್ತಾರೆ. 1994 ಅಕ್ಟೋಬರ್ 1- 2 ರಂದು ಉತ್ತರಾಖಾಂಡ ಪ್ರತ್ಯೇಕತೆಗಾಗಿ ಹೋರಾಡುತ್ತಿದ್ದವರ ಮೇಲೆ ಗುಂಡಿಟ್ಟು ಆರು ಮಂದಿಯನ್ನು ಕೊನೆಗಾಣಿಸಲಾಗುತ್ತದೆ.

1994 ರ ನವೆಂಬರ್ 25 ರಂದು ಕೇರಳದ ಕೂತುಪರಂಬದಲ್ಲಿ ಮಂತ್ರಿ ವಿರುದ್ದ ಹೋರಾಡುತ್ತಿದ್ದ ಡಿವೈಎಫ್‍ಐನ ಹದಿನೇಳಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆಯಲಾಗಿದೆ.1999 ರಲ್ಲಿ ತಿರುನಲ್ವೇಲಿಯಲ್ಲಿ ಕಾರ್ಮಿಕ ಹೋರಾಟದ ವಿಚಾರದಲ್ಲಿ 17 ಮಂದಿ, 2003 ರಲ್ಲಿ ಮುತುಂಗದಲ್ಲಿ ಭೂಮಿ ಹಕ್ಕಿಗಾಗಿ ಹೋರಾಡುತ್ತಿದ್ದ ಐವರು ಆದಿವಾಸಿಗಳು, 2006ರಲ್ಲಿ ವಿಶೇಷ ಆರ್ಥಿಕ ವಲಯ ವಿರೋಧದ ಹೋರಾಟದಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದು, 2007 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಂದಿಗ್ರಾಮದಲ್ಲಿ ಕೈಗಾರಿಕೆಗೆ ಭೂಮಿ ಕೊಡಲು ವಿರೋಧಿಸಿದ ಹೋರಾಟಗಾರರ ಮೇಲೆ ಗುಂಡೇಟು, 2009 ರಲ್ಲಿ ತ್ರಿವೇಡ್ರಂ, ಅದೇ ವರ್ಷ ಮಣಿಪುರದಲ್ಲಿ ಗುಂಡೇಟು, 2011 ರಲ್ಲಿ ಜೈತಾಪುರ ಪರಮಾಣು ಸ್ಥಾವರ ವಿರೋಧದ ಹೋರಾಟಗಾರರ ಮೇಲೆ ಗುಂಡೇಟು, ಅದೇ ವರ್ಷ ಬಿಹಾರದಲ್ಲಿ ರಾಜಕಾರಣಿಯೋರ್ವನ ಕೈಗಾರಿಕೆಗೆ ವಿರೋಧಿಸಿದವರ ಮೇಲೆ ಗುಂಡೇಟು, 2015 ರಲ್ಲಿ ಮರಗಳ್ಳರ ಮೇಲೆ ಗುಂಡು, 2018 ರಲ್ಲಿ ತೂತುಕುಡಿಯಲ್ಲಿ ಗುಂಡು ಹಾರಿಸಿದ್ದಾರೆ.ಹೀಗೆ ಪ್ರಮುಖ ಘಟನಾವಳಿಗಳ ಪಟ್ಟಿಯೇ ಆರಕ್ಷಕರು ಗುಂಡು ಹಾರಿಸಿದ್ದ ವಿಚಾರಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದಂಥವು. 2005 ರಲ್ಲಿ ಗುಜರಾತ್‍ನ ಸೊಹ್ರಾಬುದೀನ್ ನಕಲಿ ಎನ್‍ಕೌಂಟರ್ ವಿಚಾರದಲ್ಲಿ ಆರಕ್ಷಕ ಅಧಿಕಾರಿಗಳೇ ಪರಿಪಾಟಲಿಗೆ ಸಿಕ್ಕಿ ಒದ್ದಾಡಿದ್ದರು.

ಆಗೊಮ್ಮೆ ಈಗೊಮ್ಮೆ ರೌಡಿಗಳ ಮೇಲೆ ಆರಕ್ಷರು ಗುಂಡು ಹಾರಿಸಿ, ಎನ್‍ಕೌಂಟರ್ ಮಾಡುವಂಥದ್ದು ಬೆಂಗಳೂರು, ಕೋಲಾರದಲ್ಲೂ ಘಟಿಸಿವೆ. ಕಾಡುಗಳ್ಳ ವೀರಪ್ಪನ್ ವಿಚಾರದಲ್ಲೂ ಆಗಿದೆ. ಆದರೆ ಅವು ಹೆಚ್ಚಿನ ಮಟ್ಟದ ವಿವಾದ ಹುಟ್ಟು ಹಾಕಿಕೊಂಡಿಲ್ಲವಾದರೂ, ನ್ಯಾಯಾಲಯ ವ್ಯವಸ್ಥೆ, ಶಿಕ್ಷೆ ಕಾನೂನುಗಳು ಇರುವಾಗ, ಮಾನವ ಹಕ್ಕುಗಳ ಪ್ರತಿಪಾದನೆ ದೊಡ್ಡ ಮಟ್ಟದಲ್ಲಿರುವಾಗ, ಗುಂಡು ಹಾರಿಸಿ ಅದರಲ್ಲು ಎನ್‍ಕೌಂಟರ್ ಹೆಸರಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟು ಸರಿ ಎಂಬ ಚರ್ಚೆಗೆ ತೆಲಂಗಾಣದಲ್ಲಿ ನಾಲ್ವರು ಅತ್ಯಾಚಾರಿ ಹಂತಕರ ಹತ್ಯೆ ವಿಚಾರ ಎಡೆ ಮಾಡಿಕೊಟ್ಟಿದೆ.