ಬಿಸಿ ಮುಟ್ಟಿಸಿದೆ ಗೌಡರ ದೂರು : ಕಾಂಗ್ರೆಸ್‍ನಲ್ಲಿ ಕ್ಷಿಪ್ರ ಬದಲಾವಣೆ ಪರ್ವ?

ಬಿಸಿ ಮುಟ್ಟಿಸಿದೆ ಗೌಡರ ದೂರು : ಕಾಂಗ್ರೆಸ್‍ನಲ್ಲಿ ಕ್ಷಿಪ್ರ ಬದಲಾವಣೆ ಪರ್ವ?

ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಕಾರಣದಿಂದ ಮೈತ್ರಿ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಿರಿಕಿರಿ ಉಂಟುಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಹದ್ದುಬಸ್ತಿನಲ್ಲಿಡುವಂತೆ ದೇವೇಗೌಡರು ರಾಹುಲ್ ಗಾಂಧಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಒಂದಷ್ಟು ಅಚ್ಚರಿಯ ಬೆಳವಣಿಗೆಗಳು ನಡೆಯಲಿವೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು.

“ಮೈತ್ರಿ ಸರ್ಕಾರದ ವಿರುದ್ದ ಮಾತಾಡುವ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಿ.. ಅಪಸ್ವರದ ಮೂಲವಾಗಿರುವ ಸಿದ್ದರಾಮಯ್ಯಗೆ ಕಡಿವಾಣ ಹಾಕಿ, ಇಷ್ಟು ಮಾಡದಿದ್ದರೆ ಸರ್ಕಾರ ಉಳಿಯುವುದು ಕಷ್ಟ ಕಷ್ಟ” ಎಂಬ ಖಡಕ್ ಮಾತುಗಳನ್ನ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ವರಿಷ್ಟ ರಾಹುಲ್ ಗಾಂಧಿ ಮುಂದೆ ಒಗೆದು ಬಂದಿರುವುದು ರಾಜಕೀಯ ವಲಯದಲ್ಲಿ ಕೋಲಾಹಲವನ್ನೆಬ್ಬಿಸಿದೆ.
 ಕಾಂಗ್ರೆಸ್ ಪಕ್ಷದಲ್ಲಿ ದಿನಕ್ಕೊಂದು ಘಳಿಗೆಗೊಂದು ಬಣ್ಣ ಬದಲಾಗುತ್ತಿರುವುದು ಸ್ವಯಂಪ್ರೇರಿತವಾಗಲ್ಲ, ಅದರ ಹಿಂದೆ ಆಡಿಸುವಾತ ಒಬ್ಬರಿದ್ದಾರೆ ಅದು ಸಿದ್ದರಾಮಯ್ಯ ಎಂಬ ಗುಸುಗುಸುಗಳಿಗೆಲ್ಲ ಬೆಲೆ ಇಲ್ಲ ಎಂದು ಅದೆಷ್ಟೇ ಸ್ಪಷ್ಟನೆ ಕೊಟ್ಟರೂ, ಗುಮಾನಿಗಳು ಮಾತ್ರ ಹೋಗುತ್ತಿಲ್ಲ. ಎಲ್ಲಕ್ಕೂ ಅವರೇ ಹೊಣೆ, ಇವರನ್ನ ಹದ್ದುಬಸ್ತಿನಲ್ಲಿಟ್ಟರೆ ಎಲ್ಲಾ ನೆಟ್ಟಗಾಗುತ್ತೆ ಎಂಬ ವಾದ ಮಂಡನೆಯಾಗುತ್ತಿರುವುದು ಬೆಳೆಯುತ್ತಲೇ ಇದೆ.
 ಅದರಲ್ಲೂ ಕಾಮರಾಜ್ ಸೂತ್ರ ಅನುಸರಿಸಿ, ಎಲ್ಲಾ ಮಂತ್ರಿಗಳಿಂದಲೂ ರಾಜೀನಾಮೆ ಪಡೆದು, ಹೊಸದಾಗಿ ಪುನರ್ರಚನೆ ಮಾಡೋಣ ಎಂಬ ಸಲಹೆಯನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಪಡಿಸಿದರೂ, ಅದೀಗಲೇಬೇಡ ಸದ್ಯಕ್ಕೆ ಖಾಲಿ ಇರುವ ಸ್ಥಾನಗಳನ್ನ ತುಂಬಿಕೊಳ್ಳೋಣ, ನಿಮ್ಮ ಕೋಟಾದ್ದೇ ಒಂದು ಮಂತ್ರಿಗಿರಿ ನಮಗೆ ಕೊಟ್ಟುಬಿಡಿ ಎಂದು ಉಪಾಯವಾಗಿ, ಆ ಸ್ಥಾನವನ್ನ ಸಿದ್ದು ಕಬಳಿಸಿಬಿಟ್ಟಿದ್ದಾರೆ. ಇದು ದೇವೇಗೌಡರಿಗೆ ಹೆಚ್ಚಿಸಿರುವ ಉರಿಯಾಗಿದೆ.
 ಸುಮ್ಮನೇಕೆ ಇರುವೆ ಬಿಟ್ಟುಕೊಳ್ಳುವುದು ಎಂದು ಮೈಸೂರು ಲೋಕಸಭಾ ಕ್ಷೇತ್ರದ ಆಸೆ ಬಿಟ್ಟು, ಬೆಂಗಳೂರು ಉತ್ತರ ಕ್ಷೇತ್ರವನ್ನ ತಾನಾಗಿಯೇ ಬಿಟ್ಟುಕೊಟ್ಟರೂ ಆದ ಲಾಭ ಶೂನ್ಯ ಮಾತ್ರ. ಎಲ್ಲವನ್ನೂ ಒಂದೊಂದು ಕಾರಣಕ್ಕೆ ಬಿಟ್ಟುಕೊಡುತ್ತಾ ಹೋದರೆ ದಳಕ್ಕಾಗುವ ಪ್ರಯೋಜನವೇನು ಎಂಬ ಆಲೋಚನೆ ಮಾಡುತ್ತಿರುವ ದೊಡ್ಡ ಗೌಡರಿಗೆ, ಒಂದು ಕಡೆ ಬಂಡಾಯದ ಧ್ವನಿಯನ್ನ ಏಳಿಸುವುದು, ಮತ್ತೊಂದೆಡೆ ದಳದ ಕೋಟಾವನ್ನೂ ಕಿತ್ತುಕೊಳ್ಳುತ್ತಾ ಹೋಗುತ್ತಿರುವುದು ವ್ಯವಸ್ಥಿತವಾಗಿ ಹೆಣೆಯುತ್ತಿರುವ ಷಡ್ಯಂತ್ರ ಎಂದೆನಿಸಿಬಿಟ್ಟಿದೆ. ಇಂಥದ್ದನ್ನ ಇನ್ನೂ ಸಹಿಸಿಕೊಂಡಿದ್ದರೆ ನೆಟ್ಟಗಾಗಲ್ಲ ಎನಿಸಿದ್ದೇ ತಡ, ರಾಹುಲ್‍ರನ್ನ ಭೇಟಿಯಾಗಿ ಸಿದ್ದು ಮಾಡುತ್ತಿರುವ ತಂತ್ರಗಾರಿಕೆಯ ವಿವರಗಳನ್ನೆಲ್ಲ ಬಿಚ್ಚಿಟ್ಟು, ಕೈಗಾರಿಕಾ ಖಾತೆ ನಿಮ್ಮ ಪಕ್ಷದವರಲ್ಲೇ ಇದೆ, ಆ ಸಚಿವರ ಪ್ರಸ್ತಾಪದಂತೆ ಜಿಂದಾಲ್‍ಗೆ ಭೂಮಿ ಕ್ರಯ ಮಾಡಿಕೊಡಲು ಸಂಪುಟ ನಿರ್ಧರಿಸಿದೆ, ಹೀಗಿದ್ದರೂ ನಿಮ್ಮದೇ ಪಕ್ಷದ ಎಚ್.ಕೆ.ಪಾಟೀಲ್‍ರಂಥವರು ಬಹಿರಂಗವಾಗಿ ಸರ್ಕಾರದ ನಿಲುವನ್ನ ಟೀಕಿಸುತ್ತಾರೆ ಎಂದರೇನರ್ಥ ಎಂಬ ಉದಾಹರಣೆಯನ್ನೂ ಮುಂದಿಟ್ಟು, ದಳದಿಂದ ಯಾವ ಸಮಸ್ಯೆಯೂ ಇಲ್ಲ, ನಿಮ್ಮ ಪಕ್ಷದಲ್ಲಿಯೇ ವ್ಯವಸ್ಥಿತವಾಗಿ ಕುಟಿಲ ತಂತ್ರೋಪಾಯಗಳನ್ನ ಎಬ್ಬಿಡಲಾಗುತ್ತಿದೆ. ಇದು ಸರ್ಕಾರಕ್ಕೆ ಅಪಾಯ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.  
 ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಆಗುತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಹೆಸರಲ್ಲಿ ಅಡ್ಡಬರುತ್ತಾರೆ, ತಮ್ಮ ಬೆಂಬಲಿಗ ಪಡೆಯ ಚಲುವರಾಯಸ್ವಾಮಿಯಂಥವರ ಬಾಯಿಂದ ಗ್ರಾಮವಾಸ್ತವ್ಯದ ಬಗ್ಗೆ ಟೀಕೆ ಮಾಡಿಸುತ್ತಾರೆ. ಇದನ್ನೆಲ್ಲ ಇನ್ನೆಷ್ಟು ಸಹಿಸುವುದು. ವರಿಷ್ಠ ಮಂಡಳಿ ಗಟ್ಟಿಯಾಗಿದೆ ಎಂಬುದನ್ನ ತೋರಿಸಿಕೊಡುವುದಕ್ಕಾದರೂ, ಸಿದ್ದರಾಮಯ್ಯರನ್ನ ನಿಯಂತ್ರಿಸಲೇಬೇಕು ಎಂಬ ಸಲಹೆ ರೂಪದ ಮನವಿಯನ್ನ ಮಾಡಿದ್ದಾರೆ.
 ಇದೆಲ್ಲದರ ಪ್ರತಿಯಾಗಿ ಸಿದ್ದರಾಮಯ್ಯರಿಂದ ಸಮನ್ವಯ ಸಮಿತಿ ಅಧ್ಯಕ್ಷತೆಯನ್ನ ಕಿತ್ತುಕೊಂಡು, ಮಲ್ಲಿಕಾರ್ಜುನ ಖರ್ಗೆಗೆ ಕೊಡುವುದರಿಂದಾಗುವ ಲಾಭ ನಷ್ಟವನ್ನ ರಾಹುಲ್ ಮಾಡುವಂತಾಗಿದೆ. ವಾಸ್ತವವಾಗಿ ಎಐಸಿಸಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯರನ್ನೇ ಮಾಡಿದರೆ ಹೇಗೆ ಎಂಬು ಆಲೋಚನೆ ಬಂದರೂ, ಒಂದು ರಾಜ್ಯದಲ್ಲೇ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ಆಗದಿರುವ ಇವರು ರಾಷ್ಟ್ರಮಟ್ಟದಲ್ಲಿ ನಿಭಾಯಿಸಲಾರರು, ಗುಂಪುಗಾರಿಕೆ ಹೆಚ್ಚಿಬಿಡಬಹುದು, ಜತೆಗೆ ಇವರಿಗೆ ದೆಹಲಿ ಅಥವಾ ರಾಷ್ಟ್ರ ಮಟ್ಟದ ಸಂಪರ್ಕ ಇಲ್ಲ ಎಂಬ ಕಾರಣಗಳನ್ನ ಪರಾಮರ್ಶೆಗೊಳಪಡಿಸಿ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕಿದ್ದ ಪರಿಗಣನೆಯನ್ನ ಕೈಬಿಡಲಾಗಿದೆ. ಇದಕ್ಕೆ ದೇವೇಗೌಡರು ಕೊಟ್ಟಿರುವ ದೂರುಗಳೂ ಪುಷ್ಟಿಕೊಟ್ಟಿವೆ.  ಇನ್ನು  ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆಗೆದರೆ ಉಂಟಾಗಬಹುದಾದ ದಂಗೆಯನ್ನ ಮಲ್ಲಿಕಾರ್ಜುನ ಖರ್ಗೆ ಹೆಸರಲ್ಲಿ ಅಡಗಿಸುವುದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎಂಬ ಅಂದಾಜನ್ನು ರಾಹುಲ್ ಮಾಡಲಿದ್ದಾರೆ.
 ಈಗಾಗಲೇ ವೇಣುಗೋಪಾಲ್ ಉಸ್ತುವಾರಿಯಾಗಿರುವುದು ಬೇಡ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಮತ್ತೆ ಅಹ್ಮದ್ ಪಟೇಲ್, ಗುಲಾಂ ನಬಿ ಅಜಾದ್ ಇವರಲ್ಲಿ ಯಾರಾದರೊಬ್ಬಬರನ್ನ ಮತ್ತೆ ಉಸ್ತುವಾರಿಯಾಗಿಸುವ ಸಾಧ್ಯತೆಗಳಿದ್ದು, ಇವರಿಬ್ಬರೂ ಕಾಲಾನುಕಾಲದಿಂದಲೂ ದೊಡ್ಡ ಗೌಡರ ಜತೆ ಸೌಹಾರ್ದಯುತ ಸಂಬಂಧ ಹೊಂದಿರುವುದರಿಂದ ಸರ್ಕಾರಕ್ಕೆ ಕೇಡು ಬರಲ್ಲ ಎಂಬ ನಂಬುಗೆಯಿಂದಲೇ ಇಂಥದ್ದೊಂದು ಪರಾಮರ್ಶನ ಆಗುತ್ತಿದೆ. ಖರ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬಲ್ಲವರು. ದೇವೇಗೌಡರ ಒಲವೂ ಇವರ ಬಗ್ಗೆ ಇರುವುದರಿಂದ ಇವರನ್ನೇ ಸಮನ್ವಯ ಸಮಿತಿಗೆ ಅಧ್ಯಕ್ಷರನ್ನಾಗಿಸಿ, ಸಿದ್ದುವನ್ನ ಕೇಂದ್ರ ಮಟ್ಟದಲ್ಲಿ ನಿಯೋಜಿಸಿಕೊಂಡು ಸಮಾಧಾನಿಸುವ ಕುರಿತಂತೆಯೂ ಚಿಂತನೆಗಳು ನಡೆದಿದ್ದು, ದೇವೇಗೌಡರ ಮಾತುಗಳನ್ನ ಗಂಭೀರವಾಗಿಯೇ ಪರಿಗಣಿಸಿರುವುದರಿಂದ ಕಾಂಗ್ರೆಸ್‍ನಲ್ಲಿ ಕ್ಷಿಪ್ರ ಬೆಳವಣಿಗೆಗಳಾಗುವ ಸಂಭವವೇ ಹೆಚ್ಚಿದೆ.