ಅಚ್ಚರಿಯ ತಿರುವುಗಳ ಮೂಲಕ ಕುತೂಹಲ ಕಾಯ್ದುಕೊಳ್ಳುವ ‘ದಶರಥ’

ಅಚ್ಚರಿಯ ತಿರುವುಗಳ ಮೂಲಕ ಕುತೂಹಲ ಕಾಯ್ದುಕೊಳ್ಳುವ  ‘ದಶರಥ’

ಕೌಟುಂಬಿಕ ಕಥಾಹಂದರವುಳ್ಳ ದಶರಥ ಸಿನಿಮಾ ಇಂದು ರಿಲೀಸ್ ಆಗಿದೆ. ಸಮಾಜದಲ್ಲಿ ಹೆಣ್ಣು ತನಗೆ ಬರೋ ಕಷ್ಟಗಳನ್ನು ಹೇಗೆ ಎದುರಿಸಬೇಕು..? ಒಬ್ಬ ಜವಾಬ್ದಾರಿಯುತ ಅಪ್ಪ ಕುಟುಂಬಕ್ಕೋಸ್ಕರ ಹೇಗೆಲ್ಲಾ ಕಷ್ಟ ಪಡ್ತಾನೆ..? ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಒಬ್ಬ ಪ್ರಾಮಾಣಿಕ ಲಾಯರ್ ಪಾತ್ರ ಏನು..? ಕುಟುಂಬ ಅಂತ ಬಂದಾಗ ಸಂಬಂಧಗಳು ಹೇಗಿರಬೇಕು ಅನ್ನೋದೆ ದಶರಥ ಸಿನಿಮಾದ ಕಥಾವಸ್ತು.

ದಶರಥ ಒಬ್ಬ ನಿಷ್ಠಾವಂತ ವಕೀಲ. ಮಡದಿ ಕೌಸಲ್ಯಾ, ಇಬ್ಬರು ಮುದ್ದಿನ ಮಕ್ಕಳೇ ಅವನ ಪ್ರಪಂಚ. ಯಾವುದೇ ಹೆಣ್ಣಿಗೆ ಅನ್ಯಾಯವಾದ್ರೆ ಸಹಿಸೋ ವ್ಯಕ್ತಿ ದಶರಥ ಪ್ರಸಾದ್ ಅಲ್ಲವೇ ಅಲ್ಲ. ತನ್ನ ವಕೀಲಿ ವೃತ್ತಿಯಲ್ಲಿ ದಶರಥ ಎಂದೂ ಸೋತವನಲ್ಲ. ದಶರಥನ ಪ್ರಕಾರ ಲಾ ಅನ್ನೋ ಪದಕ್ಕೆ ಎರಡು ವ್ಯಾಖ್ಯಾನ. ಒಂದನೆಯದು ಅಂದ್ರೆ ಲವ್ ಅಂಡ್ ವಿನ್, ಎರಡನೆಯದು, ಪ್ರೀತಿಗೆ ಬಗ್ಗದೇ  ಹೋದಾಗ ಲೀಗಲಿ ಅನೌನ್ಸ್ ವಾರ್ ಅಂತ. ಹೀಗಿರುವಾಗ ಒಂದು ದಿನ ದಶರಥನ ಹೆಂಡತಿ ಕಾರ್ ನಲ್ಲಿ ಹೋಗುತ್ತಿರುವಾಗ ದಾರಿಬದಿ ಅತ್ಯಾಚಾರಕ್ಕೊಳಗಾದ ಒಬ್ಬ ಸಂತ್ರಸ್ತೆ ಬಿದ್ದಿರ್ತಾಳೆ. ಅವಳನ್ನು ಆಸ್ಪತ್ರೆಗೆ ಸೇರಿಸಿ ಗಂಡನಿಗೆ ಫೋನ್ ಮಾಡಿ ಕರೆಸ್ತಾಳೆ. ಸಂತಸ್ರೆಗೆ ತನಗಾದ ಅನ್ಯಾಯದಿಂದ ಅಳ್ತಿದ್ರೆ, ಆಕೆಯ ಪೋಷಕರು ಸಮಾಜವನ್ನು ಎದುರಿಸೋ ಬಗ್ಗೆ ಚಿಂತಿಸ್ತಿರ್ತಾರೆ . ತನ್ನ ಮಾತಿನ ಬಾಣದಿಂದಲೇ ದಶರಥ ಅವರನ್ನು ನ್ಯಾಯಕ್ಕಾಗಿ ಹೋರಾಡಲು ಪ್ರೇರಿಪಿಸ್ತಾನೆ. ಮಾತಿನಲ್ಲಿ ಬುದ್ಧಿವಾದ ಹೇಳಿದ್ರೆ ಕೇಳದ ಅತ್ಯಾಚಾರಿಗಳು ಹಣ-ಅಧಿಕಾರದ ಬಲದಿಂದ ಮತ್ತೆ ಬಾಲ ಬಿಚ್ತಾರೆ. ಕೇಸ್ ಕೊಟ್ಟವಳನ್ನು ಉಳಿಸಬಾರದು ಅಂತ ಸಾಯಿಸೋಕೆ ಮುಂದಾಗ್ತಾರೆ. ಆ ಸಂದರ್ಭದಲ್ಲೂ ದಶರಥಾನೇ ಯುವತಿ ಪಾಲಿಗೆ ನಿಂತು, ಅವಳಿಂದಲೇ ದುಷ್ಟರನ್ನು ಕೊಲ್ಲುವ ಹಾಗೆ ಮಾಡಿಸ್ತಾನೆ. ನ್ಯಾಯದ ಪರ ಹೋರಾಟ, ಸುಖಿ ಕುಟುಂಬದ ನಡುವೆ ದಶರಥನ ಮಗಳು ಶಾಂತಿ, ಕಿರಣ್ ಎಂಬ ಹುಡುಗನೊಂದಿಗೆ ಪ್ರೀತಿಯಲ್ಲಿ ಬೀಳ್ತಾಳೆ. ಅಪ್ಪ-ಅಮ್ಮ ಪದೇ ಪದೆ ಮಗಳನ್ನು ಎಚ್ಚರಿಸಿದ್ರು ಸಹ ಪ್ರೀತಿಸಿದ ಹುಡುಗನಿಂದ ಶಾಂತಿ ಮೋಸ ಹೋಗ್ತಾಳೆ. ಆಗ ಶಾಂತಿ ಆತ್ಮಹತ್ಯೆಗೆ ಮುಂದಾಗ್ತಾಳೆ. ಅದೃಷ್ಟವಶಾತ್ ಶಾಂತಿ ಬದುಕುಳಿತಾಳೆ. ಮದುವೆಯಾಗ್ತೀನಿ ಅಂತ ನನ್ನನ್ನು ಅವನು ನಂಬಿಸಿ ಮೋಸ ಮಾಡಿದ ಅನ್ನೋ ವಿಚಾರವನ್ನು ಶಾಂತಿ ಅಪ್ಪನ ಬಳಿ ಹೇಳ್ತಾಳೆ. ದಶರಥ ಹಾಗೂ ಅವನ ಹೆಂಡತಿ  ಕಿರಣ್ ಬಳಿ ಹೋಗಿ ತನ್ನ ಮಗಳನ್ನು ಮದುವೆಯಾಗು ಅಂತ ಕೇಳಿಕೊಂಡ್ರು ಆತ ಗಂಡು ಅನ್ನೋ ದರ್ಪ ತೋರಿಸಿ ಅವಮಾನಿಸ್ತಾನೆ. ದಶರಥ ತನ್ನ ಮಗಳಿಗೆ ನ್ಯಾಯ ಕೊಡಿಸೋ ಸಲುವಾಗಿ ಕೋರ್ಟ್ ಮೆಟ್ಟಿಲೇರ್ತಾನೆ. ಇಲ್ಲಿಂದ ಕಥೆ ಬೇರೆ ತಿರುವು ಪಡೆದುಕೊಳ್ಳತ್ತೆ.

ಮಗಳಿಗಾದ ಅನ್ಯಾಯದ ವಿರುದ್ಧ ಹೋರಾಡೋಕೆ ಹೊರಟ ದಶರಥನಿಗೆ ಸಾಕಷ್ಟು ಸವಾಲುಗಳು, ಅವಮಾನಗಳು ಎದುರಾಗತ್ತೆ. ಕಿರಣ್ ಪರ ವಾದ ಮಂಡಿಸೋಕೆ ಪಾಟೀಲ್ ಎಂಬುವವರು ಮುಂದಾಗ್ತಾರೆ. ಕಿರಣ್ ಗೆ ಅಕ್ಕ ಕೃತಿಕಾ, ಅಣ್ಣ ಭರತ್, ಶ್ರೀರಕ್ಷೆಯಾಗಿರ್ತಾರೆ. ಕೋರ್ಟ್ ಹೊರಾಂಗಣದಲ್ಲಿ ದಶರಥನಿಗೆ ಕಿರಣ್ ಅಕ್ಕ ಕೃತಿಕಾ ಎದುರಾಗ್ತಾರೆ. ಇದ್ರಿಂದ ದಶರಥನಿಗೆ ಸಣ್ಣ ಶಾಕ್ ಕೂಡ ಆಗತ್ತೆ. ಹಾಗಾದ್ರೆ ಈ ಕೃತಿಕಾ ಯಾರು..? ದಶರಥನಿಗೂ ಆಕೆಗೂ ಏನು ಸಂಬಂಧ..? ಮಗಳು ಶಾಂತಿ ಕಿರಣ್ ವಿರುದ್ದ ಮಾಡಿರೋ ಆರೋಪ ಸಾಬೀತಾಗತ್ತಾ..? ದಶರಥನ ಕುಟುಂಬಕ್ಕೆ ತಕ್ಕ ನ್ಯಾಯ ಸಿಗತ್ತಾ..?  ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ನೋಡಿದ್ರೆ ಉತ್ತರ ಸಿಗತ್ತೆ.

ಸಿನಿಮಾದಲ್ಲಿ ದಶರಥನಾಗಿ ರವಿಚಂದ್ರನ್, ಕೌಸಲ್ಯಾ ಆಗಿ ಸೋನಿಯಾ ಅಗರ್ ವಾಲ್, ಕೃತಿಕಾ ಆಗಿ ಅಭಿರಾಮಿ, ಶಾಂತಿಯಾಗಿ ಮೇಘಶ್ರೀ, ಪಾಟೀಲ್ ಆಗಿ ರಂಗಾಯಣ ರಘು, ಪೊಲೀಸ್ ಆಫಿಸರ್ ಆಗಿ ಶೋಭರಾಜ್, ಜಡ್ಜ್ ಆಗಿ ಹೇಮಾ ಚೌಧರಿ ಹಾಗೂ ಅವಿನಾಶ್, ಇನ್ನುಳಿದಂತೆ ಜ್ಯೋತಿ ರೈ, ತಬಲಾ ನಾಣಿ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ. ಲಾಯರ್ ಆಗಿ ರವಿಚಂದ್ರನ್ ಇಷ್ಟವಾಗ್ತಾರೆ. ಪ್ರತಿ ಪಂಚಿಂಗ್ ಡೈಲಾಗ್ ಗೂ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ವಯಸ್ಸಿಗೆ ತಕ್ಕ ಪಾತ್ರ ನಿಭಾಯಿಸ್ತಿರೋ ಕ್ರೇಜಿ ಸ್ಟಾರ್ ನಿರ್ಧಾರ ಖುಷಿ ನೀಡತ್ತೆ. ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರನ್ನು ಮನತುಂಬಿ ನಗಿಸತ್ತೆ. ದಶರಥನ ಹೆಂಡತಿಯಾಗಿ ಸೋನಿಯಾ ಜವಾಬ್ದಾರಿಯುತವಾಗಿ ಇಷ್ಟವಾಗ್ತಾರೆ. ಪ್ರೀತಿ-ಪ್ರತೀಕಾರದ ಗೊಂದಲದಲ್ಲಿ  ಕೃತಿಕಾ ಪ್ರಬುದ್ಧವಾಗಿ ಕಾಣಿಸ್ತಾರೆ. ಜಡ್ಜ್ ಆಗಿ ಹೇಮಾ ಚೌಧರಿ ಕರ್ತವ್ಯ ನಿರ್ವಹಣೆ ಚೆನ್ನಾಗಿದೆ. ಲಾಯರ್ ಆಗಿ ಜ್ಯೋತಿ ರೈ ಅವರ ಗಾಂಭೀರ್ಯತೆ ನಟನೆ ಎರಡು ಇಷ್ಟವಾಗತ್ತೆ. ಮಗಳ ಪಾತ್ರದಲ್ಲಿ ನಟಿಸಿರೋ ಮೇಘಶ್ರಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಅವರ ಕಾಮಿಡಿ ಮಿಶ್ರಿತ ವಾದ ಮನರಂಜನೆ ನೀಡತ್ತೆ. ಶೋಭರಾಜ್ ಎಂದಿನಂತೆ ಚೆನ್ನಾಗಿ ಅಭಿನಯಿಸಿದ್ದಾರೆ.

ದರ್ಶನ್ ಅವರ ದ್ವನಿಯಲ್ಲಿ ಮೂಡಿಬಂದಿರೋ ದಶರಥ..ದಶರಥ.. ಹಾಡು ಪ್ರೇಕ್ಷನಿಗೆ ಥ್ರಿಲ್ ನೀಡತ್ತೆ. ಅನ್ಯನ್ಯಾ ಭಟ್ ಗಾಯನದ ಭೂಮಿಗೆ ಒಂದೇ ಬಾನು ಡ್ಯುಯೆಟ್ ಸಾಂಗ್ ಇಷ್ಟವಾಗತ್ತೆ. ಈಗಿನ ಸಿನಿಮಾಗಳ ಮ್ಯುಸಿಕ್ ಗಿಂತ ದಶರಥ ಸಿನಿಮಾಕ್ಕಾಗಿ ಗುರುಕಿರಣ್ ಅವ್ರು ಕಂಪೋಸ್ ಮಾಡಿರೋ ಮ್ಯೂಸಿಕ್  ಕೊಂಚ ವಿಭಿನ್ನವಾಗಿದೆ. ದಶರಥ ಸಿನಿಮಾದ ಸಂಭಾಷಣೆ ಚೆನ್ನಾಗಿದೆ. ಸಿನಿಮಾವನ್ನು ಅಷ್ಟೊಂದು ರಿಚ್ ಆಗಿ ಶೂಟ್ ಮಾಡದೇ ಹೋದ್ರೂ, ಆ ಕೊರತೆ ಏನೂ ಕಾಣಿಸೋದಿಲ್ಲ. ಪ್ರೀತಿ-ಪ್ರೇಮ ರೊಮ್ಯಾನ್ಸ್, ಲವ್, ಆಕ್ಷನ್, ಕ್ಲಾಸ್-ಮಾಸ್ ಇದೆಲ್ಲವನ್ನೂ ಮೀರಿ ಎಂ.ಎಸ್ ರಮೇಶ್ ಅವರು ಒಂದು ಕೌಟುಂಬಿಕ ಕಥೆಯನ್ನು ಹೆಣೆದಿದ್ದಾರೆ. ಬಹು ಮುಖ್ಯವಾಗಿ ಹೆಣ್ಣು ತನಗೆ ಅನ್ಯಾಯವಾದಾಗ ಅದರ ವಿರುದ್ಧ ಹೇಗೆ ಹೋರಾಡಬೇಕು ಅಥವಾ ಅಪರಾಧಿಗಳನ್ನು ಹೇಗೆ ಶಿಕ್ಷಿಸಬೇಕು ಅನ್ನೋ ಅಂಶವನ್ನು ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ.