ದೈವದ ಪೆಟ್ಟಿಗೆ!!

ನನ್ನೆದೆ ಹೊಡೆದುಕೊಳ್ಳತೊಡಗಿತು. ಅಜ್ಜಿಯಿಂದ ದಶಾವತಾರದ ಕತೆಗಳನ್ನು ಕೇಳಿದ್ದ ನನಗೆ ಇವರ ಜಗುಲಿಯ ಮೇಲೆ ಇನ್ನೆಂತೆಂತಹ ಉಗ್ರಾತಿ ಉಗ್ರ ದೇವರುಗಳಿರಬಹುದಪ್ಪ ಎನಿಸಿ ಹೆದರುತ್ತಲೇ ಒಳಗಡಿಯಿಟ್ಟೆ. ಆದರೆ ಆ ಅರೆಗತ್ತಲ ದೇವರ ಮನೆಯ ಒಳಹೊಕ್ಕು ನೋಡಿದಾಗ ನನ್ನ ಅಂಜಿಕೆಯೆಲ್ಲಾ ‘ಠುಸ್’ ಪಟಾಕಿಯಂತೆ ಇಳಿದುಹೋಯಿತು!

ದೈವದ ಪೆಟ್ಟಿಗೆ!!

ನಮ್ಮ ಓಣಿಯ ಅಂಚಿನಲ್ಲಿ ಒಂದೆರಡು ಬ್ರಾಹ್ಮಣರ ಮನೆಗಳಿದ್ದವು. ಅದರಲ್ಲಿ ಒಂದು ಮನೆಯ ಹುಡುಗಿ ನನ್ನ ಸಹಪಾಠಿ. ನಾವು ಶಾಲೆಗೆ ಹೋಗುವಾಗ, ಶಾಲೆಯಿಂದ ಮರಳುವಾಗ ಅವರ ಮನೆ ಹಾಯ್ದೇ ಬರಬೇಕಿತ್ತು. ಅವಳ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಅದೇ ವರ್ಷ ವಿಜಯಪುರದಿಂದ ವರ್ಗವಾಗಿ ಬಂದಿದ್ದರು. ಊರು-ಶಾಲೆ ಹೊಸದಾದ್ದರಿಂದ ಮತ್ತು ನಾವು ಒಂದೇ ಓಣಿಯವರಾದ್ದರಿಂದ ನನಗೆ ಹೆಚ್ಚು ಆತುಕೊಂಡಳು. ಅವಳು ಆಗಾಗ ತಮ್ಮ ಮನೆಗೆ ಕರೆದೊಯ್ಯುತ್ತಿದ್ದಳು. ಅವರ ಮನೆಯಲ್ಲಿ ಅವಳ ಅಪ್ಪ-ಅಮ್ಮ, ಒಬ್ಬ ಅಣ್ಣ- ಒಬ್ಬಳು ಅಕ್ಕ ಹಾಗೂ ಕೆಂಪು ಸೀರೆಯ ಒಬ್ಬರು ಮಡಿ ಹೆಂಗಸು. ಅವಳಮ್ಮ ಕಚ್ಚೆಹಾಕಿ ಸೀರೆಯುಡುತ್ತಿದ್ದರು.

ಹಣೆಯ ಮೇಲೆ ಒಂದೆಳೆಯ ಉದ್ದನಾಮದ ಕುಂಕುಮ ಹಚ್ಚಿಕೊಂಡಿರುತ್ತಿದ್ದರು. ಕೆನ್ನೆಯ ಮೇಲೆ ಅರಿಷಿಣ,ತುರುಬಿನ ತುಂಬ ಹೂವು ಮುಡಿದುಕೊಂಡು ಲಕ್ಷಣವಾಗಿದ್ದರು. ಯಾಕೋ ಅವರ ಮನೆಯ ವಾತಾವರಣ ಕೊಂಚ ಗಂಭೀರವೆನಿಸುತ್ತಿತ್ತು.ಅವರ ಮನೆಯ ಹಿಂದೆ ಒಂದು ಚಿಕ್ಕ ಹಿತ್ತಲಿತ್ತು. ಅಲ್ಲೊಂದು ಬಾವಿ. ಆ ಮಡಿ ಹೆಂಗಸು ದಿನಾಲೂ ಹನ್ನೊಂದು-ಹನ್ನೊಂದುವರೆ ಗಂಟೆಗೆ-ಅಂದರೆ ನಮ್ಮ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಹಿತ್ತಲಿಗೆ ನಡೆದು “ನಾ ಗೆದ್ದೆ….ನಾ ಗೆದ್ದೆ..” ಎನ್ನುತ್ತ ಬಾವಿಯಿಂದ ನೀರೆಳೆದುಕೊಂಡು ಸ್ನಾನಮಾಡಿ ಬರುತ್ತಿದ್ದಳು. ‘ಹೀಗೇಕೆ?’ ಎಂದು ನನಗೆ ಅಚ್ಚರಿಯಾಗುತ್ತಿತ್ತು! ಅನಂತರ ನನ್ನ ಗೆಳತಿಯಿಂದ ತಿಳಿಯಿತು, ಆ ಅಜ್ಜಿ ಮಡಿ ಹೆಂಗಸಾದ್ದರಿಂದ ಯಾರ ಕೈಯಿಂದಲೂ ಊಟ ಮಾಡುತ್ತಿರಲಿಲ್ಲ. ಅದಕ್ಕೇ ಎಲ್ಲರಿಗೂ ಅವರೇ ಅಡುಗೆ ಮಾಡಿ ಬಡಿಸುತ್ತಿದ್ದರು!

ಮೈದಾ ಹಿಟ್ಟಿನಂತಹ ಎರಡು ಪಾದ, ಎರಡು ಮುಂಗೈಗಳು, ದುಂಡು ಮುಖ ಇವಿಷ್ಟು ಬಿಟ್ಟರೆ ಆ ಅಜ್ಜಿಯ ಇಡೀ ಶರೀರ ಕೆಂಪುಸೀರೆಯಲ್ಲಿ ಮುಚ್ಚಿ ಹೋಗಿರುತ್ತಿತ್ತು! ಬಿಡುವಿನ ವೇಳೆಯಲ್ಲಿ ದೇವರ ನಾಮ ಗುನುಗುತ್ತ, ಬತ್ತಿ ಹೊಸೆಯುತ್ತ ಪಡಸಾಲೆಯಲ್ಲಿ ಕುಳಿತಿರುತ್ತಿದ್ದ ಅಜ್ಜಿಯನ್ನು ಕಂಡರೆ ನನಗೆ ಒಳಗೆ ಹೋಗಲು ಅಳುಕಾಗುತ್ತಿತ್ತು. ಒಂದು ಬಾರಿ ಯಾವುದೋ ಕಾರ್ಯಕ್ರಮದ ದೆಸೆಯಿಂದ ಶಾಲೆಯಿಂದ ಮನೆಗೆ ಬರುವುದು ತಡವಾಯಿತು. ಹೊಟ್ಟೆ ನೋಡಿದರೆ ತಾಳ ಹಾಕುತ್ತಿದೆ. ಇವಳೋ ನನ್ನನ್ನು ತರುಬಿ ನೋಟು ಪುಸ್ತಕವನ್ನು ಮುಂದಿಟ್ಟುಕೊಂಡು ಹೊಂವರ್ಕ್ ಪೂರೈಸಿಕೊಳ್ಳುತ್ತಿದ್ದಾಳೆ! ನಾನು ಮುಖ ಬಾಡಿಸಿಕೊಂಡು ಪಡಸಾಲೆಯ ಕಟ್ಟೆಯ ಮೇಲೆ ಕಾಲಾಡಿಸುತ್ತ ಉದಾಸೀನತೆಯಿಂದ ಕುಳಿತೆ. ಅಜ್ಜಿ ಹೊರಬಂದು “ಯಾಕ ಇವತ್ತ ಬರಲಿಕ್ಕೆ ತಡಾ ಆಯ್ತಲ್ಲ?” ಎಂದು ಕೇಳಿದಳು. ಮೊಮ್ಮಗಳು ತಲೆತಗ್ಗಿಸಿ ಬರೆಯುತ್ತಲೇ ವರದಿ ಒಪ್ಪಿಸಿದಳು. ಅಜ್ಜಿ ನನ್ನನ್ನೊಮ್ಮೆ ದಿಟ್ಟಿಸಿ ಒಳಹೋದಳು. ಒಂದು ಚಿಕ್ಕ ತಟ್ಟೆಯಲ್ಲಿ ಅಂಗೈಯಗಲದ ಎರಡು ನಿಪ್ಪಟ್ಟುಗಳನ್ನಿಟ್ಟುಕೊಂಡು, ಒಂದು ಲೋಟದಲ್ಲಿ ನೀರು ತುಂಬಿಕೊಂಡು“ಹಸಿವಾಗ್ಲಿ ಕತ್ತದಲ್ಲ ತೊಗೋ ತಿನ್ನು” ಎಂದು ನನ್ನ ಮುಂದಿಟ್ಟಳು! ನನಗೆ ಅಚ್ಚರಿಯಾಯಿತು. ನಾನು ನನ್ನ ಗೆಳತಿಯತ್ತ ನೋಡಿದೆ.

ಅವಳು ಒಂದು ಕ್ಷಣ ತಲೆಯೆತ್ತಿ ‘ತಿನ್ನು’ ಎನ್ನುವಂತೆ ಸನ್ನೆ ಮಾಡಿ ಮತ್ತೆ ಬರೆಯತೊಡಗಿದಳು. ನನಗೆ ಮುಜುಗರವಾಗತೊಡಗಿತು.ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಅಜ್ಜಿ ಮತ್ತೆ ಹೊರಬಂದು “ಯಾಕ ಸುಮ್ಮನ ಕೂತಬಿಟ್ಯಲ್ಲ? ತಿನ್ನು” ಎಂದು ಒಳನಡೆದಳು.ಮೊದಲೇ ಈ ಅಜ್ಜಿ ಅಂದಾಕರ ಮಡಿಹುಡಿ! ಹೇಗೆ ತಿನ್ನುವುದಪ್ಪ ಎಂದುಕೊಳ್ಳುತ್ತ ನಿಪ್ಪಟ್ಟನ್ನು ಸಣ್ಣಗೆ ಮುರಿದು ಸೇಂಗಾಕಾಳುಬಾಯಿಗೆ ಹಾಕಿಕೊಳ್ಳುವಂತೆ ಚೂರುಚೂರಾಗಿ ತಿನ್ನತೊಡಗಿದೆ. ನಿಪ್ಪಟ್ಟು ತಿಂದು, ನೀರು ಕುಡಿದು ನನ್ನ ಗೆಳತಿಯನ್ನು ನೋಡಿದೆ. ಅವಳು ಹಿತ್ತಲಿನತ್ತ ಕೈ ತೋರಿಸಿದಳು. ತಟ್ಟೆ-ಲೋಟ ಹಿತ್ತಲಿನಲ್ಲಿಟ್ಟು ಕೈತೊಳೆದುಕೊಂಡು ಬಂದೆ.

ದಿನಗಳೆದಂತೆಲ್ಲಾ ಈ ಪರಿ ಮಡಿಹುಡಿ ಅಜ್ಜಿಯ ಹೃದಯದಲ್ಲಿ ಅಪಾರವಾದ ಪ್ರೀತಿ-ಕರುಣೆ ತುಂಬಿರುವುದು ಗಮನಕ್ಕೆ ಬರತೊಡಗಿತು.ಆದರೆ ಅವುಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಳ ‘ಮಡಿ’ ಅಡ್ಡ ಬರುತ್ತಿತ್ತು!

ಆ ಮನೆಯ ಪಡಸಾಲೆಯ ಗೋಡೆಗಳಿಗೆ ಹಲವಾರು ಫೋಟೋಗಳನ್ನು ನೇತುಹಾಕಿದ್ದರು. ಅವುಗಳಲ್ಲಿ ಬಹಳಷ್ಟು ದೇವರ ಫೋಟೋಗಳು. ಅದರಲ್ಲಿ ಒಂದು ಫೋಟೋ ಉಗ್ರನರಸಿಂಹನದ್ದು. ಕಂಭ ಸೀಳಿ ಎರಡು ಹೋಳಾದ ಹಿನ್ನೆಲೆಯಲ್ಲಿ ಹೊಸ್ತಿಲ ಮೇಲೆ ಕುಳಿತ ಉಗ್ರನರಸಿಂಹ ತನ್ನ ತೊಡೆಯ ಮೇಲೆ ಹಿರಣ್ಯಕಶ್ಯಪನನ್ನು ಅಡ್ಡಲಾಗಿ ಹಾಕಿಕೊಂಡು ತನ್ನ ಚೂಪಾದ ಉಗುರುಗಳಿಂದ ಅವನ ಹೊಟ್ಟೆಯಲ್ಲಿನ ಕರುಳು ಬಗೆಯುವ ಚಿತ್ರವದು. ಬಾಲಕ ಪ್ರಹ್ಲಾದ ಅದನ್ನು ನೋಡುತ್ತಾ ಕೈಮುಗಿದುಕೊಂಡು ಕೆಳಗೆ ನಿಂತಿದ್ದಾನೆ.

ನಾನು ಆ ಚಿತ್ರವನ್ನು ನೋಡಿದ್ದು ಅದೇ ಮೊದಲು. ನನ್ನ ಗೆಳತಿಗೆ ಅದರ ಬಗ್ಗೆ ವಿವರಣೆ ಕೇಳಿದೆ. ಅವಳು ಬಾಲಕ ಪ್ರಹ್ಲಾದನ ಕಥೆಯನ್ನು ಮನಮುಟ್ಟುವಂತೆ ಹೇಳಿದಳು. ಆ ಕಥೆ ಕೇಳಿ ನನಗೆ ಬವಳಿ ಬಂದು ಬೀಳುವಂತಾಯ್ತು! ಹೊಟ್ಟೆಯಲ್ಲಿ ಏನೋ ತಳಮಳ.ಮನದಲ್ಲಿ ಅನೇಕ ಪ್ರಶ್ನೆಗಳು. ಸುತ್ತ ಕಣ್ಣಾಡಿಸಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ಅಜ್ಜಿಯೊಬ್ಬರೇ ಪಡಸಾಲೆಯಲ್ಲಿ ಬತ್ತಿಹೊಸೆಯುತ್ತ ಕುಳಿತಿದ್ದರು. ನಾನು ನನ್ನ ಗೆಳತಿಯನ್ನು ಕೇಳಿದೆ “ಹಿರಣ್ಯಕಶ್ಯಪ ಪ್ರಹ್ಲಾದನ ಅಪ್ಪ. ತನ್ನ ಅಪ್ಪನ್ನ ಸಾಯಿಸೋದು ನೋಡ್ಕೋಂತ ಪ್ರಹ್ಲಾದ ಹ್ಯಾಂಗ ಸುಮ್ನಿದ್ದಾ,?!” ನನ್ನ ಮಾತಿಗೆ ನನ್ನ ಗೆಳತಿ “ಹಿರಣ್ಯಕಶ್ಯಪನ ಕರುಳು ಬಗೆದದ್ದು ಬ್ಯಾರೆ ಯಾರೂ ಅಲ್ಲ, ಸಾಕ್ಷಾತ್ ವಿಷ್ಣು!!”ಎಂದು ಕಣ್ಣಗಲಿಸಿ ಭಯಭಕ್ತಿಯಿಂದ ನುಡಿದಳು. ಗೆಳತಿಯ ಮಾತುಕೇಳಿ ಅಚ್ಚರಿಯಿಂದ ಕೇಳಿದೆ “ದೇವ್ರು ಇಷ್ಟು ಭಯಂಕರ ಹ್ಯಾಂಗಾದಾನು?! ಅಂವ ಹ್ಯಾಂಗಿದ್ರೂ ದೇವ್ರು. ದೇವ್ರ ಕೈಯಿಂದ ಆಗದ ಕೆಲ್ಸ ಯಾವುದೈತಿ? ಅಂವ ಹಿರಣ್ಯಕಶ್ಯಪಗ ಚೊಲೋ ಬುದ್ಧಿಹಾಕಿ ಸರಿ ಮಾಡ್ಬಹುದಿತ್ತಲ್ಲ?!” “ಹ್ಯಾಂಗ ಮಾಡ್ತಾನಾ? ಅಂವ ಉಗ್ರನರಸಿಂಹನ ಕೈಯಿಂದ್ಲೇ ಸಾಯಬೇಕಂತಿರ್ತೈತಿ” ನನ್ನ ಗೆಳತಿ ಖಚಿತವಾಗಿ ನುಡಿದಳು! “ಅದನ್ನ ನೋಡಿ ಪ್ರಹ್ಲಾದಗ ಹೆದ್ರಿಕಿ ಆಗ್ಲಿಲ್ಲ? ಅಳು ಬರ್ಲಿಲ್ಲ?!” ನಾನು ಉದ್ವೇಗದಿಂದ ಕೇಳಿದೆ. “ಏನವಾ, ಅದೆಲ್ಲಾ ನನ್ಗ ಗೊತ್ತಿಲ್ಲ” ನನ್ನ ಗೆಳತಿ ಕೈಯಾಡಿಸಿದಳು.

ನಮ್ಮ ಸಂಭಾಷಣೆಯನ್ನು ಕೇಳುತ್ತಿದ್ದ ಅಜ್ಜಿ ಬತ್ತಿಹೊಸೆಯುವುದನ್ನು ನಿಲ್ಲಿಸಿ ಹೇಳಿದಳು “ಹೆದ್ರಿಕಿ ಆಗ್ದಂಗ, ಅಳು ಬರ್ದಂಗಹ್ಯಾಂಗಿರ್ತದ ಆ ಕೂಸಿಗೆ? ಹೆಂತಾ ಕೆಟ್ಟ ತಂದಿ ಆದ್ರೂ ಮಕ್ಕಳಿಗೆ ತಂದಿ ತಂದೀನ. ಈ ಕತಿ ಬರದೋವ್ರು ತಾಯಿ-ತಂದಿ ಅಂತ ಒಂದು ಕುಟುಂಬದ ವಾತಾವರಣದೊಳಗ ಬೆಳದಿಲ್ಲ. ಬೆಳದಿದ್ರ ಹಿಂತಾ ಕ್ರೂರ ಕತಿ ಬರೀತಿದ್ದಿಲ್ಲಾ.” ಅಜ್ಜಿಯ ಮಾತು ನನಗೆ ಸರಿಯೆನಿಸಿತು.ಆದರೆ ಮೊಮ್ಮಗಳು ಭೀತಿಯಿಂದ ಅಜ್ಜಿಯನ್ನೇ ನೋಡತೊಡಗಿದಳು.

ಬರಬರುತ್ತಾ ನನ್ನ ಗೆಳತಿಯ ಅಜ್ಜಿ ನನಗೆ ಆಪ್ತವಾಗತೊಡಗಿದಳು. ಅಜ್ಜಿಯದು ಬಾಲ್ಯವಿವಾಹವಾಗಿತ್ತು. ಹದಿಮೂರಕ್ಕೆ ಮೈನೆರೆದು ಗಂಡನೊಂದಿಗೆ ಬಾಳಲು ಬಂದಿದ್ದಳು. ಅವಳು ಗಂಡನೊಂದಿಗೆ ಸಂಸಾರ ಮಾಡಿದ್ದು ಎರಡೇ ವರ್ಷ. ಅವಳಿಗೆ ಹದಿನೈದು ವರ್ಷವಿದ್ದಾಗ ಚೊಚ್ಚಲ ಬಸುರಿ. ಇತ್ತ ಅವಳು ತವರಿಗೆ ಹೆರಿಗೆಗೆಂದು ಬಂದಳು. ಅತ್ತ ಅವಳ ಗಂಡ ಪಂಥಕಟ್ಟಿ ಹೊಳೆಯಲ್ಲಿ ಈಜಲು ಹೋಗಿ ಅಕಾಲಮರಣವನ್ನಪ್ಪಿದ್ದ! ಅಂದಿನಿಂದ ಅಜ್ಜಿ ಮಡಿಹೆಂಗಸು!! ಅಚ್ಚರಿಯ ಸಂಗತಿಯೆಂದರೆ ಅಜ್ಜಿಗೆ ಇದರ ಬಗ್ಗೆ ಯಾವುದೇ ದುಗುಡ-ದುಮ್ಮಾನ ಇದ್ದಂತೆ ಕಾಣುತ್ತಿರಲಿಲ್ಲ! ಮಾತಿನಲ್ಲಿ, ನಡೆನುಡಿಯಲ್ಲಿ ಅವಳೆಂದೂ ಸಿನಿಕತೆಯನ್ನು ತೋರುತ್ತಿರಲಿಲ್ಲ. ಬದಲಾಗಿ ಅವಳು ಯಾವುದೇ ವಿಷಯಕ್ಕೆ ಅಂಜದೇ-ಅಳುಕದೆ ಘಟವಾಣಿಯಂತೆಯೇ ಮಾತನಾಡುತ್ತಿದ್ದಳು! ಅವರ ಮನೆಯಲ್ಲಿ ದಶಾವತಾರದ ಒಂದು ದೊಡ್ಡ ಚಿತ್ರಪಟವಿತ್ತು. ನಾನು ಅದನ್ನು ಕೂತೂಹಲದಿಂದ ನೋಡುತ್ತಿದ್ದೆ.

ಒಂದೊಂದು ಅವತಾರದ ಬಗ್ಗೆ ನನ್ನ ಗೆಳತಿಯನ್ನು ವಿವರಣೆ ಕೇಳುತ್ತಿದ್ದೆ. ಅವಳು ಕಣ್ಣುಗಳನ್ನು ಅಗಲಿಸಿ ಭಯಭಕ್ತಿಯಿಂದ ವಿವರಿಸುತ್ತಿದ್ದರೆ ಅಜ್ಜಿ ಮೊಮ್ಮಗಳ ವಿವರಣೆಯ ದಿಕ್ಕನ್ನೇ ಉಲ್ಟಾ ಮಾಡುತ್ತಿದ್ದಳು! ಪ್ರತಿ ವಿವರಣೆಯಲ್ಲೂ ಅಜ್ಜಿ ಸಿದ್ಧ ಜಾಡನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತಿದ್ದಳು! ರಾಮ, ಕೃಷ್ಣ, ವರಾಹ ವತಾರಗಳ ಕತೆಯಲ್ಲಂತೂ “ಇದೆಲ್ಲಾ ನೆಲಕ್ಕಾಗಿ ಹೊಡೆದಾಡದವ್ರ ಕಥಿ ಅದ. ಭೂಮಿತಾಯಿನ ತಮ್ಮ ಸೊತ್ತು ಮಾಡ್ಕೊಳ್ಳಿಕ್ಕೆ
ನೋಡ್ತಾರ. ಆದ್ರ ಅಕಿ ಯಾರಕೈಗೂ ಸಿಗುದಿಲ್ಲ. ಅಕಿ ಒಂದ್ಸಲ ಆಕಳಸಿದ್ರ ಇವ್ರೆಲ್ಲಾ ನೆಲಕ್ಕ ಬೀಳ್ತಾರಾ!”ಎಂದಳು! ದಶಾವತಾರದ ಕೊನೆಗೆ ಕಾಷಾಯ ವಸ್ತ್ರ ಧರಿಸಿ ಧ್ಯಾನಸ್ಥ ಮುದ್ರೆಯಲ್ಲಿ ಕುಳಿತ ವ್ಯಕ್ತಿಯ ಚಿತ್ರವೊಂದಿತ್ತು. ಅದು ದಶಾವತಾರದ ಇನ್ನುಳಿದ ಯಾವ ಚಿತ್ರಗಳಿಗೂ ತಾಳೆಯಾಗುತ್ತಿರಲಿಲ್ಲ. ನನಗೆ ಕುತೂಹಲವಾಗಿ “ಇದು ಯಾವ ಅವತಾರಜ್ಜಿ?” ಎಂದು ಕೇಳಿದೆ. “ಇದು ಬುದ್ಧಾವತಾರ. ಈ ಪುಣ್ಯಾತ್ಮ ಒಬ್ನ ಅಂತ ಕಾಣ್ತದ, ಕೈಯಾಗ ಕತ್ತಿ-ಕೊಡ್ಲಿ ಹಿಡ್ಕೊಂಡು ಯುದ್ಧ ಮಾಡ್ದ ಬರೇ ಉಪದೇಶಾ ಮಾಡಿ ಕೈತೊಳಕೊಂಡಿದ್ದು!” ಅಜ್ಜಿ ನಸುನಕ್ಕು ನುಡಿದಳು!

ಅಜ್ಜಿ ಬಿಡುವಿನ ವೇಳೆಯಲ್ಲಿ ಬತ್ತಿ ಹೊಸೆಯುತ್ತಿದ್ದಳು. ಒಂದು ಚಿಕ್ಕ ಬಿಲ್ಲಿನಿಂದ ಹತ್ತಿಯನ್ನು ಸ್ವಚ್ಛಗೊಳಿಸಿಕೊಂಡು ಅದರಲ್ಲಿನಾನಾ ನಮೂನೆಯ ಕಲಾತ್ಮಕ ಬತ್ತಿಯನ್ನು ಸಿದ್ಧಪಡಿಸುತ್ತಿದ್ದಳು. ಬತ್ತಿ ಹೊಸೆಯುವಾಗ ಯಾವಾಗಲೂ ದೇವಿಗೆ ಸಂಬಂಧಪಟ್ಟ ಹಾಡುಗಳನ್ನು ಮೆಲುದನಿಯಲ್ಲಿ ಹಾಡಿಕೊಳ್ಳುತ್ತಿದ್ದಳು. ಅವಳು ಕೂಡ್ರುವಾಗ, ಏಳುವಾಗ “ಶಾಂಭವಿ.. ಶಂಕರೀ..” ಎನ್ನುತ್ತಿದ್ದಳೇ ವಿನಃ ಒಂದು ದಿನವೂ ಅವಳ ಬಾಯಿಯಲ್ಲಿ “ರಾಮಾ..ಕೃಷ್ಣಾ..ನಾರಾಯಣಾ..” ಎಂಬ ಹೆಸರುಗಳು ಬರುತ್ತಿದ್ದಿಲ್ಲ! ಅವರ ಮನೆಯಲ್ಲಿ ಎಲ್ಲರೂ ಅಚ್ಚರಿ, ದುಃಖ, ನೋವು, ಖುಷಿ.. ಹೀಗೆ ಭಾವ ಯಾವುದೇ ಇರಲಿ, ಥಟ್ಟನೆ ಅವರ ಬಾಯಿಯಿಂದ ಬರುತ್ತಿದ್ದುದು ರಾಮ, ಕೃಷ್ಣ, ನಾರಾಯಣರೇ. ಆದರೆ ಅಜ್ಜಿ ಮಾತ್ರ ಯಾವಾಗಲೂ ಜಪಿಸುತ್ತಿದ್ದುದು ಶಾಂಭವಿ-ಶಂಕರಿಯರನ್ನೇ! ಯಾಕೆ ಹೀಗೆ? ಎಂದು ನನಗೆ ಸೋಜಿಗವಾಗುತ್ತಿತ್ತು. ಒಂದು ದಿನ ಕುತೂಹಲ ತಡೆಯದೇ ಕೇಳಿಯೇ ಬಿಟ್ಟೆ “ಯಾಕಜ್ಜಿ, ನೀವುಯಾವಾಗ್ಲೂ ಬರೇ ಶಾಂಭವಿ.. ಶಂಕರೀ.. ಅಂತ ದೇವೀ ಹೆಸರನ್ನಷ್ಟ ನೆನಸ್ತೀರಿ?” ನನ್ನ ಮಾತಿನಿಂದ ಅಜ್ಜಿ ಒಂದು ಕ್ಷಣ ಚಕಿತಗೊಂಡು ನನ್ನನ್ನೊಮ್ಮೆ ದಿಟ್ಟಿಸಿ ನುಡಿದಳು “ಯಾಕಂದ್ರ ಶಾಂಭವಿಗೆ ಮಾತ್ರ ತನ್ನ ಗಂಡನ ಸಮಸಮಕ್ಕ ನಿಲ್ಲಲಿಕ್ಕೆ ಸಾಧ್ಯವಾದದ್ದು. ‘ಅರ್ಧಾಂಗಿ’ ಅನ್ನೂ ಪದಕ್ಕ ಅರ್ಥ ತರಲಿಕ್ಕೆ ಅಕಿಗೆ ಮಾತ್ರ ಸಾಧ್ಯವಾದದ್ದು. ಆ ದೇವಿ ಮಾತ್ರ ಕೈಯ್ಯಾಗ ಶಸ್ತ್ರಹಿಡದು ತನ್ನನ್ನು ತಾನು ರಕ್ಷಣೆ ಮಾಡ್ಕೊಳ್ಲಿಕ್ಕೆ ಶಕ್ತಳಾದದ್ದು. ಅಕಿನ್ನ ನೆನಸ್ಕೊಳ್ದ ಇನ್ಯಾರ್ನ ನೆನಿಸಿಕೊಳ್ಲಿಕ್ಕಾಕ್ತದ?” ಅಜ್ಜಿಯ ಮಾತು ನನಗೂ ಸರಿಯೆನಿಸಿತು.

ವೈಕುಂಠ ಏಕಾದಶಿ, ರಾಮ ನವಮಿ, ಕೃಷ್ಣ ಜನ್ಮಾಷ್ಟಮಿ, ತುಳಸಿ ಲಗ್ನ….ಹೀಗೆ ಅವರ ಮನೆಯ ಹಬ್ಬಗಳೂ ವೈವಿಧ್ಯಮಯ! ಆ ಹಬ್ಬಗಳಲ್ಲಿ ಮಾಡುವ ಭೋಜನವೂ ಅಷ್ಟೇ ಪುಷ್ಕಳ! ನನಗೆ ಈ ಮನೆಯ ನಡೆ-ನುಡಿ, ಊಟ-ಉಡುಗೆ, ಸಂಪ್ರದಾಯ.. ನಮ್ಮದಕ್ಕಿಂತ ಭಿನ್ನವಾಗಿರುವುದು ಸ್ಪಷ್ಟವಾಗತೊಡಗಿತು. ಎಲ್ಲಕ್ಕಿಂತ ಮಿಗಿಲಾಗಿ ಅವರು ದೇವರ ಬಗ್ಗೆ, ಪೂಜೆಯ ಬಗ್ಗೆ ಅನುಸರಿಸುವ ಕಟ್ಟುನಿಟ್ಟು, ಮಡಿಹುಡಿ ಎಲ್ಲಾ ಅಚ್ಚರಿ ಮೂಡಿಸುತ್ತಿತ್ತು. ನಮ್ಮ ಮನೆಯಲ್ಲಿ ನಮ್ಮಜ್ಜಿಯೂ ತಾಸುಗಟ್ಟಲೇ ಪೂಜೆಮಾಡುತ್ತಿದ್ದಳು. ಹನುಮಣ್ಣನ ಕೇರಿಯವರ ವಿಷಯದಲ್ಲಿ ಮಡಿಯನ್ನೂ ಆಚರಿಸುತ್ತಿದ್ದಳು.

ಆದರೆ ಓಣಿಯ ಎಲ್ಲ ಸಮುದಾಯದವರನ್ನೂ ತನ್ನ ಬಳಗದಂತೆಯೇ ಭಾವಿಸುತ್ತಿದ್ದಳು. ಓಣಿಯ ಜನ ಅಜ್ಜಿಯ ಬಳಿ ತಮ್ಮ ಕಷ್ಟ,ಕೊಟಲೆಗಳನ್ನು
ಹೇಳಿಕೊಳ್ಳಲು ಬರುವಾಗ ತಾಯಿಯ ಬಳಿ ಮಕ್ಕಳು ಬರುವಂತೆ ಬರುತ್ತಿದ್ದರು. ಒಂದು ಬಾರಿಯಂತೂ ಮಳೆಗಾಲದಲ್ಲಿ ಸ್ವಾತಿಮಳೆ ಜೀಂ.…ಅಂತ ಸುರುವಾಗಿ ಒಂದು ವಾರವಾದರೂ ಬಿಟ್ಟಿದ್ದಿಲ್ಲ. ಓಣಿಯ ಮನೆಗಳು ಸೋರತೊಡಗಿದವು. ಒಂದು ನೇಕಾರ ಮನೆಯಂತೂ ಬಿದ್ದೇಬಿಟ್ಟಿತು. ಅವರಿಗೆ ದಿಕ್ಕುತೋಚದಾಯಿತು. ಅವರು ಕಪ್ಪುಕಡಿ ತಿನ್ನುವ ಜನವಾದರೂ ಅಜ್ಜಿ ಅವರ ಬಳಿ ಹೋಗಿ, ಸಮಾಧಾನ ಹೇಳಿ ಮನೆಗೆ ಕರೆತಂದು, ಮನೆಯ ಒಂದು ಮೂಲೆಯಲ್ಲಿ ಅವರಿಗೆ ಇರಲು ಜಾಗಮಾಡಿಕೊಟ್ಟಳು! ಅವರು ಮಳೆಹೊರಪುಕೊಡುವವರೆಗೂ ಅಲ್ಲೇ ಇದ್ದು, ಮಳೆ ಹೊರಪಾದ ನಂತರ ಮನೆ ರಿಪೇರಿ ಮಾಡಿಸಿಕೊಂಡು ಹೋದರು. ನನ್ನ ಗೆಳತಿಯ ಮನೆಯಲ್ಲಿ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ! ಒಂದು ಬಾರಿ ನನ್ನ ಗೆಳತಿಯ ತಾಯಿ ಮುಟ್ಟಾಗಿದ್ದರು. ಅವರ ಮನೆಯಲ್ಲಿ ಯಾವುದೋ ಪೂಜೆಯಿತ್ತು. ನನ್ನ ಗೆಳತಿಯ ತಾಯಿ ಪೂಜೆ ಮುಗಿಯುವವರೆಗೂ ಮನೆಯಿಂದ ಹೊರಗೆ ಹಿತ್ತಲಿನಾಚೆ ಕುಳಿತಿದ್ದರು!ಹೀಗಾಗಿ ಅವರ ಕಟ್ಟುನಿಟ್ಟಿನ ಆಚರಣೆ, ಮಡಿ-ಮೈಲಿಗೆಗೆ ಅವರು ಕೊಡುವ ಅತೀ ಪ್ರಾಮುಖ್ಯತೆ ಇವೆಲ್ಲದರ ದೆಸೆಯಿಂದ ಇವರ ದೇವರ ಮನೆ ಹೇಗಿರಬಹುದು? ಎನಿಸಿ ಅದನ್ನು ನೋಡುವ ಕೆಟ್ಟ ಕುತೂಹಲ ನನ್ನಲ್ಲಿ ಬೆಳೆಯತೊಡಗಿತು! ಒಂದು ದಿನ ಅದಕ್ಕೆ ಕಾಲವೂ
ಕೂಡಿಬಂತು!

ಅಂದು ಅವರ ಮನೆಯಲ್ಲಿ ಹತ್ತಿರ ಸಂಬಂಧಿಯೊಬ್ಬರ ಮದುವೆಗೆ ಎಲ್ಲರೂ ಕಲಘಟಗಿಗೆ ಹೊರಟು ನಿಂತರು. ಮರುದಿನವೇ ನಮ್ಮ ಪರೀಕ್ಷೆಗಳಿದ್ದಿದ್ದರಿಂದ ನನ್ನನ್ನು ಜೊತೆ ಮಾಡಿ, ಸಾಯಂಕಾಲ ಬೇಗನೇ ಬರುವುದಾಗಿ ಹೇಳಿ, ನನ್ನ ಗೆಳತಿಯನ್ನು ಮನೆಯಲ್ಲೇ ಬಿಟ್ಟುಹೋದರು. ಹೋಗುವಾಗ ‘ಮನೆ ಕಡೆ ಹುಶಾರು.ಬಾಗ್ಲಾ ಹಾಕ್ಕೊಂಡು ಒಳಗ ಇರ್ಬೇಕು. ಯಾರನ್ನೂ ಒಳಗ ಬಿಟ್ಕೋಬ್ಯಾಡ್ರಿ…’ಎಂದು ಹತ್ತಾರು ಸಲ ಎಚ್ಚರಿಸಲು ಮರೆಯಲಿಲ್ಲ. ಇದೇ ಸಮಯವೆಂದು ನಾನು ನನ್ನ ಮನದ ಬಯಕೆಯನ್ನು ನನ್ನ ಗೆಳತಿಯ ಮುಂದಿಟ್ಟೆ. ನನ್ನ ಮಾತುಕೇಳಿ ಅವಳು ಹೌಹಾರಿದಳು. “ಹಂಗೆಲ್ಲಾ ಬ್ಯಾರೆದವ್ರು ದೇವ್ರ ಮನ್ಯಾಗ ಹೋಗ್ಲಿಕ್ಕೆ ಬರೂದಿಲ್ಲ. ಹಂಗೇನರ ಹೋದ್ರ ಮನ್ಯಾಗ ಹಾವು, ಚೇಳು ಬರ್ತಾವಂತ ನಮ್ಮಮ್ಮ ಹೇಳ್ತಾರ! ಇದೇನರ ನಮ್ಮನ್ಯಾಗ ಗೊತ್ತಾದ್ರ ನನ್ನ ಜೀವಾನ ತಗೀತಾರ,ಗೊತ್ತದಯೇನ್ ನಿನ್ಗ?” ಎಂದು ಸಾರಾಸಗಟಾಗಿ ನಿರಾಕರಿಸಿಬಿಟ್ಟಳು. ನಮ್ಮ ಮನೆಯಲ್ಲಿ ಹನುಮಂತಣ್ಣನ ಕೇರಿಯವರ ಜೊತೆಹೊಕ್ಕು ಬಳಕೆ ಮಾಡಿದರೆ ಹೀಗಾಗುತ್ತದೆ ಎಂದು ಅವ್ವ ಹೇಳಿದ್ದು ನೆನಪಾಗಿ ನನಗೆ ಅವಮಾನವಾಯ್ತು. ಆದರೆ ನನ್ನಲ್ಲಿರುವ ಅದಮ್ಯ ಕುತೂಹಲ ಆ ಅವಮಾನವನ್ನೂ ಮೆಟ್ಟಿ ವಿಜೃಂಭಿಸಿತು! “ನಮ್ಮನ್ಯಾಗ ನಮ್ಮವ್ವನೂ ಹಿಂಗ ಹೇಳ್ತಿರ್ತಾಳ. ನಾ ಒಂದ್ಸಲ ನಮ್ಮಪ್ಪಾಗ ಇದ್ರ ಬಗ್ಗೆ ಕೇಳ್ದೆ. ಅಪ್ಪಾ, ಇದೆಲ್ಲಾ ಸುಳ್ಳು. ಯಾರನ್ನ ಮನ್ಯಾಗ ಕರ್ಕೊಂಡ್ರೂ ಏನೂ ಆಗೂದಿಲ್ಲ. ಯಾ ಹಾವು,ಚೋಳೂಬರಂಗಿಲ್ಲ. ಇವೆಲ್ಲಾ ಜನ ನಂಬಿರೋ ಮೂಢನಂಬಿಕೆ. ಹಿಂತಾವೆಲ್ಲಾ ನಂಬಬಾರ್ದು ಅಂದ್ರು. ಇಷ್ಟಕ್ಕೂ ಈಗ ಮನ್ಯಾಗ ಯಾರದಾರ ಗೊತ್ತಾಗಾಕ? ಬಂದ ಮ್ಯಾಲೆನೂ ಅವ್ರ ಮುಂದ ಹೇಳ್ದಿದ್ರಾತು” ನಾನವಳನ್ನು ಓಲೈಸಲು ಪ್ರಯತ್ನಿಸಿದೆ. “ಹ್ಯಾಂಗ ಹೇಳ್ಲಿಕ್ಕೆ ಬರ್ತದ? ಒಂದಿಲ್ಲ ಒಂದಿನ ಗೊತ್ತಾದ್ರ?” ನನ್ನ ಗೆಳತಿಯ ಸಂಶಯ. “ಹೇಳಿದ್ರನ ಯಾರ್ ಹೇಳ್ಬೇಕು? ನೀನು ಇಲ್ಲಾ ನಾನು, ಹೌದಿಲ್ಲೊ?ನಾವಿಬ್ರೂ ಹೇಳೋದ ಬ್ಯಾಡಾ” ನಾನು ದುಂಬಾಲು ಬಿದ್ದೆ. ಊರು-ಶಾಲೆ ಹೊಸದಾದ್ದರಿಂದ ನನ್ನ ಗೆಳತಿ ಓಣಿಯಲ್ಲಾಗಲೀ,ಶಾಲೆಯಲ್ಲಾಗಲೀ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡಿರಲಿಲ್ಲ. ಅವಳಿಗಿದ್ದ ಪರಮಾಪ್ತ ಗೆಳತಿಯೆಂದರೆ ನಾನೊಬ್ಬಳೇ! ಹೀಗಾಗಿ ಅವಳು ವಿಧಿಯಿಲ್ಲದೆ ಅರೆಮನಸ್ಸಿನಿಂದ “ಬಾ” ಎಂದು ಹಿತ್ತಲಿಗೆ ಕರೆದೊಯ್ದು ಬಾವಿಯ ಬಳಿ ಕೈಕಾಲು ಮುಖ ತೊಳೆಸಿ, ದೇವರ ಮನೆಗೆ ಕರೆದೊಯ್ದಳು. ನನ್ನೆದೆ ಹೊಡೆದುಕೊಳ್ಳತೊಡಗಿತು. ಅಜ್ಜಿಯಿಂದ ದಶಾವತಾರದ ಕತೆಗಳನ್ನು ಕೇಳಿದ್ದ ನನಗೆ ಇವರ ಜಗುಲಿಯ ಮೇಲೆ ಇನ್ನೆಂತೆಂತಹ ಉಗ್ರಾತಿ ಉಗ್ರ ದೇವರುಗಳಿರಬಹುದಪ್ಪ ಎನಿಸಿ ಹೆದರುತ್ತಲೇ ಒಳಗಡಿಯಿಟ್ಟೆ. ಆದರೆ ಆ ಅರೆಗತ್ತಲ ದೇವರ ಮನೆಯ ಒಳಹೊಕ್ಕು ನೋಡಿದಾಗ ನನ್ನ ಅಂಜಿಕೆಯೆಲ್ಲಾ ‘ಠುಸ್’ ಪಟಾಕಿಯಂತೆ ಇಳಿದುಹೋಯಿತು! ಕಾರಣ ಅವರ ಜಗುಲಿಯ ಮೇಲೆ ಯಾವುದೇ ದೇವರ ಫೋಟೋಗಳಾಗಲೀ, ವಿಗ್ರಹಗಳಾಗಲೀ ಇರಲಿಲ್ಲ, ಬದಲಾಗಿ ಒಂದು ಸಾಧಾರಣ ಗಾತ್ರದ ಕಟ್ಟಿಗೆಯ ಪೆಟ್ಟಿಗೆಯಿತ್ತು!“ದೇವ್ರೆಲ್ಲದಾವು? ಕಾಣವಲ್ವು?” ನಾನು ಅಚ್ಚರಿಯಿಂದ ಕೇಳಿದೆ. “ದೇವ್ರು ಆ ಪೆಟ್ಟಿಗಿಯೊಳಗವ. ಅವುನ್ನ ಪೂಜೆ ಮಾಡೂವಾಗಷ್ಟ ಹೊರಗ ತಗೀತಾರ. ಅದೂ ಗಣಮಕ್ಕಳಷ್ಟ ಅವುನ್ನ ಮುಟ್ಟೂದು.” ಎಂದಳು! ‘ಅರೆ! ಇದೆಂತಹ ದೇವರ ಪೂಜೆ?!’ ಎನಿಸಿ ಅಚ್ಚರಿಯಾಯಿತು. ಸುತ್ತಲೂ ಕಣ್ಣಾಡಿಸಿದೆ. ಗೋಡೆಯ ಮೇಲೆ ಶೇಷಶಯನ ವಿಷ್ಣುವಿನ ಪಟವಿತ್ತು. ಅವನ ಪದತಲದಲ್ಲಿ ಲಕ್ಷ್ಮೀ.ಅದರ ಅಕ್ಕಪಕ್ಕ ತಿರುಪತಿ ತಿಮ್ಮಪ್ಪನ, ರಾಘವೇಂದ್ರ ಸ್ವಾಮಿಗಳ ಪಟಗಳು. ದೇವರ ಮನೆಯ ಗೂಡಿನಲ್ಲಿ ಒಂದಿಷ್ಟು ಹಳೆಯಗಂಟುಗಳು. ಆ ಗಂಟುಗಳ ಸಂದಿನಲ್ಲಿ ಗೋಡೆಗೆ ತಾಗಿಸಿ ತುರುಕಿದ್ದ ಕಟ್ಟಿಗೆಯ ಚಿಕ್ಕಚಿಕ್ಕ ಸೌಟುಗಳು, ಮತ್ತಿನ್ಯಾವ್ಯಾವುದೋ ಸಾಮಾನುಗಳು….., ನನ್ನ ಗೆಳತಿ “ಹೋಗೋಣ ನಡಿ..” ಎಂದು ಅವಸರಿಸ ತೊಡಗಿದಳು.ನಾನು ನಿರಾಶೆಯಿಂದ ಅವಳ ಜೊತೆ ಹೊರಬಂದೆ.

ನನ್ನ ಗೆಳತಿಯ ಮನೆ ಸಮೀಪ ಇನ್ನೊಂದು ಬ್ರಾಹ್ಮಣರ ಮನೆಯಿತ್ತು. ಆದರೆ ಕುಲಸ್ತರಾದರೂ ಅವರ ಬಗ್ಗೆ ನನ್ನ ಗೆಳತಿಯ ಮನೆಯವರಿಗೆ ಅಂತಹ ಆಪ್ತತೆಯೇನೂ ಇರಲಿಲ್ಲ, ಬದಲಿಗೆ ಉದಾಸೀನತೆಯೇ ಇತ್ತು. ಕಾಟಾಚಾರಕ್ಕೆ ಒಂದೆರಡು ಮಾತಾಡುತ್ತಿದ್ದರು ಅಷ್ಟೇ! ಒಂದೇ ಕುಲಸ್ತರಾಗಿ ಇವರೇಕೆ ಹೀಗೆ? ಎನಿಸುತ್ತಿತ್ತು. ನನ್ನ ಗೆಳತಿಯನ್ನು ಈ ಬಗ್ಗೆ ಕೇಳಿದಾಗ ಅವಳು ಒಂಚೂರು ಉದಾಸೀನತೆಯಿಂದಲೇ “ಅವ್ರು ಸ್ಮಾರ್ತರು, ನಮಗ ಅವ್ರಿಗೆ ಆಗಿ ಬರಂಗಿಲ್ಲ” ಎಂದಳು. “ಸ್ಮಾರ್ತರು ಅಂದ್ರ?” ನಾನು ಕೇಳಿದೆ.“ಸ್ಮಾರ್ತರು ಅಂದ್ರ ಶಿವನ ಪೂಜಕರಂತ” ನನ್ನ ಗೆಳತಿಯ ಉತ್ತರ. “ಆದ್ರೇನಾತು?” ನನ್ನ ಮರುಪ್ರಶ್ನೆ. “ಆದ್ರೇನಾತಂತೀಯಲ್ಲ?! ಶಿವನಮ್ಮ ದೇವ್ರಲ್ಲ. ನಾವು ಆ ದೇವ್ರನ್ನ ಪೂಜೆ ಮಾಡಂಗಿಲ್ಲ” ನನ್ನ ಗೆಳತಿಯ ಖಡಕ್ಕಾದ ಉತ್ತರ! “ಶಿವ ಯಾಕ ನಿಮ್ಮ ದೇವ್ರಲ್ಲ?!”ನನ್ನ ಅಚ್ಚರಿಯ ಪ್ರಶ್ನೆ! “ಏ… ಏನ್ ತಲಿ ತಿನ್ಲಿಕ್ಕತ್ತಿ ನೀನು…ಸುಮ್ನಿರು. ನಾಳೆ ಪರೀಕ್ಷಾ ಅವ, ಓದೋದು ಬ್ಯಾಡಾ?” ನನ್ನ ಗೆಳತಿ
ಅಸಹನೆಯಿಂದ ನುಡಿದಳು. ನಾನು ಮೌನವಾದೆ.

ವಾರ್ಷಿಕ ಪರೀಕ್ಷೆಗಳು ಮುಗಿದು ಐದನೆಯ ತರಗತಿಯಿಂದ ಆರನೆಯ ತರಗತಿಗೆ ಬಡ್ತಿ ಪಡೆದಿದ್ದೆವು. ಎರಡು ತಿಂಗಳು ಸವಣೂರಿನಲ್ಲಿಹಾಯಾಗಿ ಸೂಟಿ ಕಳೆದು ಶಾಲೆಗೆ ಹಾಜರಾದಾಗ ನೋವಿನ ಸುದ್ದಿಯೊಂದು ಎದುರಾಗಿತ್ತು. ನನ್ನ ಗೆಳತಿಯ ಅಪ್ಪ ದೊಡ್ಡ ಮಗಳ ಮದುವೆಯ ಕಾರಣದಿಂದ ಮತ್ತೆ ವಿಜಯಪುರಕ್ಕೆ ವರ್ಗಮಾಡಿಸಿಕೊಂಡು ಹೊರಟಿದ್ದರು. ಟಿ.ಸಿ ತೆಗೆದುಕೊಳ್ಳಲು ತಂದೆಯೊಂದಿಗೆ ಶಾಲೆಗೆ ಬಂದ ಅವಳನ್ನು ಕಂಡು ದುಃಖ ಉಮ್ಮಳಿಸಿತು. ಅವಳ ಕಣ್ಣಂಚಿನಲ್ಲೂ ನೀರು! “ಸ್ಕೂಲ್ ಬಿಟ್ಟಿಂದ ಮನಿ ಕಡೆ ಬಾ” ಎಂದು ಮೆಲ್ಲನುಸುರಿ ಹೊರಟು ಹೋದಳು. ಸಂಜೆ ಸೋತ ಕಾಲುಗಳನ್ನೆಳೆಯುತ್ತ ಅವರ ಮನೆಗೆ ಹೋದೆ. ಎಲ್ಲರೂ ಹೊರಡುವತಯಾರಿಯಲ್ಲಿದ್ದರು. ನನ್ನ ಕಂಗಳು ಅಜ್ಜಿಯನ್ನು ಹುಡುಕಿದವು. ಅಜ್ಜಿ ಹಿತ್ತಲಿನಲ್ಲಿ ಹೂವಿನ ಗಿಡಗಳಿಗೆ ನೀರು ಹಾಕುತ್ತಿದ್ದಳು. ನನ್ನ ಗೆಳತಿ ಅಜ್ಜಿಯ ಬಳಿ ಕರೆದೊಯ್ದಳು. “ಇನ್ನೇನು ಹೋಗ್ಲಿ ಕತ್ತೀವಲ್ಲ. ಕಡೇಸರ್ತಿ ಇವುಕ್ಕೊಂದಿಷ್ಟು ನೀರು ಹಾಕಿ ಹೋಗೂಣಂತ ಬಂದೆ” ಎನ್ನುತ್ತ ನೀರು ಹಾಕುವುದನ್ನು ಮುಗಿಸಿ, ಮೆಲ್ಲನೆ ಗಿಡಗಳ ಮೈಸವರಿ ನನ್ನ ಬಳಿ ಬಂದಳು. ನನಗೆ ದುಃಖ ಒತ್ತರಿಸಿ ಬಂದು ಅಳತೊಡಗಿದೆ. ಆಗ ಅಜ್ಜಿ ನನ್ನನ್ನು ಬಾಚಿ ತಬ್ಬಿಕೊಂಡಳು!! ನನಗೆ ಅಚ್ಚರಿಯೊಂದಿಗೆ ಗಾಭರಿಯೂ ಆಗಿ ತಲೆಯೆತ್ತಿ ಅಜ್ಜಿಯ ಮುಖ ನೋಡಿದೆ! ಅಜ್ಜಿ ನನ್ನ ಕಂಬನಿ ತೊಡೆಯುತ್ತ “ಹುಚ್ಚಿ ಯಾಕ ಅಳ್ಲಿಕತ್ತಿ? ಸುಮ್ನಿರು. ನೀ ಚೆಂದಂಗ ಓದಿ ಶ್ಯಾಣೇಕ್ಯಾಗ್ಬೇಕು! ಯೋಗ ಇದ್ರ ಮತ್ತ ಕೂಡೂನಂತ…” ಎನ್ನುತ್ತ ಪ್ರೀತಿಯಿಂದ ನನ್ನ ತಲೆ ಸವರಿದಳು. ಅಜ್ಜಿಯ ಮೃದು ಶರೀರದ ಅಪ್ಪುಗೆ ಹಿತವೆನಿಸುತ್ತಿತ್ತು.ಅವಳ ಮೈಯಿಂದ ಬರುವ ಸೀಗೆಪುಡಿ, ಲೋಬಾನ ಗಡ್ಡೆಯ ಘಾಟು ವಾಸನೆ ಮೂಗಿಗೆ ಕಂಪೆನಿಸುತ್ತಿತ್ತು…..,