ಕೊರೋನ ಸಾವು: ವಿಶ್ವದಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ಕೊರೋನ ಸಾವು: ವಿಶ್ವದಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೆಹಲಿ: ನೋವಲ್ ಕೊರೋನ ವೈರಸ್ ಸೋಂಕಿಗೆ ಗರಿಷ್ಠ ಮಂದಿ ಬಲಿಯಾದ ದೇಶಗಳ ಪೈಕಿ ಭಾರತ ಶುಕ್ರವಾರ ಮೆಕ್ಸಿಕೋ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಈ ಮಧ್ಯೆ ದೇಶದಲ್ಲಿ ಸತತ ಮೂರನೇ ದಿನ 76 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಸತತ ನಾಲ್ಕನೇ ದಿನ ಸಾವಿರಕ್ಕೂ ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಶುಕ್ರವಾರ 1,015 ಮಂದಿ ಸೋಂಕಿತರು ಅಸುನೀಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 62,635ಕ್ಕೇರಿದೆ. ಇದುವರೆಗೆ ಮೂರನೇ ಸ್ಥಾನದಲ್ಲಿದ್ದ ಮೆಕ್ಸಿಕೋದಲ್ಲಿ 62,594 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು ಎಂದು ವರ್ಲ್ಡೋಮೀಟರ್.ಇನ್ಫೋ ಅಂಕಿಅಂಶಗಳು ಹೇಳಿವೆ.

ಅಮೆರಿಕ (1,85,2727) ಮತ್ತು ಬ್ರೆಝಿಲ್ (1,18,988) ಮಾತ್ರ ಭಾರತಕ್ಕಿಂತ ಅಧಿಕ ಸಾವನ್ನು ಕಂಡಿವೆ. ಆದರೆ ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಶೇಕಡ 1.8ರಷ್ಟಾಗಿದ್ದು, ಈ ಮೂರು ದೇಶಗಳಲ್ಲಿ ಕನಿಷ್ಠ.

76,464 ಹೊಸ ಪ್ರಕರಣಗಳು ಶುಕ್ರವಾರ ವರದಿಯಾಗಿದ್ದು, ಕಳೆದ ಮೂರು ದಿನಗಳಲ್ಲಿ ದೇಶದಲ್ಲಿ 2.29 ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಇದು ವಿಶ್ವದ ಯಾವುದೇ ದೇಶಗಳಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ. ಅಮೆರಿಕದಲ್ಲಿ ಸೋಂಕು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಅಂದರೆ ಜುಲೈ 16-18ರ ಅವಧಿಯಲ್ಲಿ 2,16,141 ಪ್ರಕರಣಗಳು ದೃಢಪಟ್ಟಿದ್ದವು.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,57,720ಕ್ಕೇರಿದ್ದು, 26,42,180 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 7,52,905 ಸಕ್ರಿಯ ಪ್ರಕರಣಗಳಿವೆ. ಕಳೆದ ಮೂರು ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 45 ಸಾವಿರದಷ್ಟು ಹೆಚ್ಚಿದೆ.

ಶುಕ್ರವಾರ ಆಂಧ್ರ ಪ್ರದೇಶ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಕಂಡ ನಾಲ್ಕನೇ ರಾಜ್ಯವಾಗಿ ಸೇರ್ಪಡೆಯಾಗಿದೆ. ಸತತ ಮೂರನೇ ದಿನ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಒಡಿಶಾ (3,682), ಕೇರಳ (2,543), ಗುಜರಾತ್ (1,272), ಜಾರ್ಖಂಡ್ (1,365), ಪುದುಚೇರಿ (604) ಮತ್ತು ತ್ರಿಪುರಾ (509) ರಾಜ್ಯಗಳು ಶುಕ್ರವಾರ ಇದುವರೆಗಿನ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ. ಮಹಾರಾಷ್ಟ್ರದಲ್ಲಿ ಸತತ ಮೂರನೇ ದಿನ 14 ಸಾವಿರಕ್ಕೂ ಅಧಿಕ ಪ್ರಕರಣಗಳು ಹಾಗೂ 300ಕ್ಕೂ ಅಧೀಕ ಸಾವು ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7.5 ಲಕ್ಷದ ಸನಿಹಕ್ಕೆ ಬಂದಿದೆ.