ಖರ್ಗೆ `ಕೈ' ಹಿಡಿದೆತ್ತಲು ಮುಂದಾಗಿದೆಯೇ ಹೈಕಮಾಂಡ್?

ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆ

ಖರ್ಗೆ `ಕೈ' ಹಿಡಿದೆತ್ತಲು ಮುಂದಾಗಿದೆಯೇ ಹೈಕಮಾಂಡ್?

ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯ ನಾಯಕ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರೂ ಅವರ ವರ್ಚಸ್ಸಿಗೇನೂ ಕುಂದುಂಟಾಗಿಲ್ಲ. ಅವರ ಘನತೆ, ಗಾಂಭೀರ್ಯ, ದಿಟ್ಟತನಕ್ಕೆ ತಕ್ಕಂತೆ ಸೂಕ್ತ ಸ್ಥಾನವೊಂದನ್ನು ಕಲ್ಪಿಸಿಕೊಡುವ ಚಿಂತನೆ ಪಕ್ಷದ ಉನ್ನತ ಮಟ್ಟದಲ್ಲಿ ನಡೆದಿದೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು.

 ಮಲ್ಲಿಕಾರ್ಜುನ ಖರ್ಗೆಯಂಥ ನಾಯಕ ಸೋತ ಕೂಡಲೇ ನೇಪಥ್ಯಕ್ಕೆ ಸರಿಸಿಬಿಡಬಾರದು, ಇವರನ್ನ ಸಕ್ರಿಯವಾಗಿ ಇಟ್ಟುಕೊಳ್ಳಲೇ ಬೇಕು ಎಂಬ ದೃಢ ನಿರ್ಧಾರಕ್ಕೆ ಕಾಂಗ್ರೆಸ್ ವರಿಷ್ಢರು ಬಂದುಬಿಟ್ಟಿದ್ದಾರೆ, ಆದರೆ ಅದು ರಾಷ್ಟ್ರ ಮಟ್ಟದಲ್ಲಿರಬೇಕಾ, ರಾಜ್ಯ ಮಟ್ಟದಲ್ಲಿರಬೇಕಾ ಎಂಬ ಗೊಂದಲ ಮಾತ್ರ ಇದೆ.
 ಕೇಂದ್ರ ಸಚಿವರಾಗಿ, ಕಾಂಗ್ರೆಸ್ ಸಂಸದರ ನಾಯಕನಾಗಿ ಖರ್ಗೆಯವರು ನಿರ್ವಹಿಸಿರುವ ರೀತಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಮೆಚ್ಚುಗೆಗೆ ಅರ್ಹವಾದುದು. ಒಂದು ಸೋಲಿನಿಂದ ಇವರನ್ನ ಮೂಲೆಗುಂಪಾಗಿಸುವುದು ಪಕ್ಷಕ್ಕೇ ನಷ್ಟ ಎಂಬ ಲೆಕ್ಕಾಚಾರದಿಂದ ಇವರನ್ನ ಎಐಸಿಸಿ ಅಧ್ಯಕ್ಷರನ್ನಾಗಿಸಿದರೆ ಹೇಗೆಂಬ ಮಂಥನಗಳು ದೊಡ್ಡ ಮಟ್ಟದಲ್ಲೇ ನಡೆದಿದ್ದು, ಇವರು ಎಲ್ಲಾ ಜನಾಂಗದಲ್ಲೂ ಗುರುತಿಸಿಕೊಂಡಿದ್ದರೂ, ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ದಲಿತ ವರ್ಗದವರಿಗೆ ಬಹುದೊಡ್ಡ ಪರಿಣಾಮ ಬೀರಬಹುದು ಎಂಬ ಉಮೇದು ಇದ್ದು, ಉತ್ತರ ಪ್ರದೇಶದಲ್ಲಿ ಬಿಎಸ್‍ಪಿಯಂಥದ್ದನ್ನ ಮಣಿಸಿಬಿಡಲು ಖರ್ಗೆ ಎಂಬ ದಲಿತ ನಾಯಕನನ್ನ ಬಳಸಿಕೊಳ್ಳಬಹುದಾ, ಇದೇ ಜಾತಿ ಲೆಕ್ಕವೇನಾದರೂ ಮುಳುವಾಗುವ ಸಂಭವ ಎಷ್ಟಿದೆ ಎಂಬುದನ್ನ ಲೆಕ್ಕಿಸಲಾಗುತ್ತಿದೆ.
 ರಾಷ್ಟ್ರದಲ್ಲಿ ಮೊಟ್ಟಮೊದಲಿಗೆ ಆರನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬಂದು ನಾಲ್ಕನೇ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ 1977 ರಿಂದ 79 ರವರೆಗೆ,  ಐದನೇ ಪ್ರಧಾನಿಯಾಗಿ ಚೌಧುರಿ ಚರಣ್‍ಸಿಂಗ್ 1979 ರಿಂದ 80 ವರೆಗಿದ್ದರು. ಏಳನೆ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಮುಂದಿನ ಪ್ರಧಾನಿಯನ್ನಾಗಿ ಜಗಜೀವನರಾಮ್ ಅವರನ್ನು ಬಿಂಬಿಸಿತು. ಆದರೆ ಇಂದಿರಾಗಾಂಧಿ ಮತ್ತೆ ಪುಟಿದೆದ್ದರು. ಆಗ ಜನತಾ ಸೋಲಿಗೆ ದಲಿತರೊಬ್ಬರನ್ನ ಪ್ರಧಾನಿ ಮಾಡುತ್ತಾರೆಂಬ ಕಾರಣದಿಂದ ಮತದಾರ ದೂರ ಸರಿದಿದ್ದ ಎಂಬುದೂ ಕಾರಣವಾಗಿತ್ತು. ಅಂದರೆ ಇನ್ನೂ ದಲಿತ ಪ್ರಜ್ಞೆ, ಅಸ್ಪøಶ್ಯತತೆ ಇನ್ನೊಂದು ರೂಪದಲ್ಲಿ ಇದ್ದೇ ಇದೆ ಎಂಬುದಕ್ಕೆ ಅದು ಪುರಾವೆಯೂ ಆಗಿತ್ತು. ಆನಂತರದಲ್ಲಿ ಜನತಾಸೇರಿದಂತೆ ಇನ್ನಾವ ಪಕ್ಷಗಳೂ ದಲಿತ ಪ್ರಧಾನಿ ಎಂದು ಬಿಂಬಿಸಲೇ ಇಲ್ಲ. 
 ಮೇಲ್ವರ್ಗದವರದ್ದೇ ಪಕ್ಷ ಎನಿಸಿಕೊಂಡಿದ್ದನ್ನ ಕಳಚಿಕೊಳ್ಳಲು ಬಿಜೆಪಿ ಬಂಗಾರು ಲಕ್ಷ್ಮಣ್ ಅವರನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿತ್ತು. ಆದರೆ ಆ ಹುದ್ದೆಯಲ್ಲಿದ್ದಾಗಲೇ  ಹಗರಣವೊಂದರಲ್ಲಿ ಸಿಬಿಐನಿಂದ 2001 ರಲ್ಲಿ ಬಂಧಿಸಲ್ಪಟ್ಟು, ನ್ಯಾಯಾಲಯದಿಂದ 4 ವರ್ಷ ಸೆರೆವಾಸಕ್ಕೂ ಒಳಗಾದರು. ಇಲ್ಲೂ ಕೂಡ ದಲಿತರೊಬ್ಬರು ಪಕ್ಷದ ಪ್ರಮುಖ ಹುದ್ದೆಯಲ್ಲಿ ಕೂತಿದ್ದರೂ, ಅವರನ್ನ ಕೆಳಗಿಳಿಸುವ ಸಂಚುಗಳು ಒಳಗೊಳಗೆಯೇ ನಡೆದಿದ್ದವು ಎಂಬ ಅನುಮಾನಗಳು ಎದ್ದಿದ್ದವು. ಅದರ ಸತ್ಯಾಸತ್ಯತೆಗಳೇನೇ ಇರಲಿ, ದಲಿತ ಪ್ರಧಾನಿಯಾಗುವುದಕ್ಕೆ ಜಗಜೀವನರಾಮ್ ಪ್ರಕರಣದಲ್ಲಿ ಮತದಾರರೇ ಬೆಂಬಲಿಸಲಿಲ್ಲ, ಬಂಗಾರು ಲಕ್ಷಣ್‍ರಂಥವರು ಪಕ್ಷದ ಅಧ್ಯಕ್ಷರಾಗಿರುವುದಕ್ಕೆ ಸ್ವಪಕ್ಷೀಯರೇ ಒಪ್ಪಿರಲಿಲ್ಲ ಎಂಬುದಕ್ಕೆ ಇವರೆಡು ದೃಷ್ಟಾಂತಗಳಾಗಿವೆ.
 ಈ ರೀತಿಯ ಮನೋಭಾವನೆಯನ್ನ ಖರ್ಗೆ ವಿಚಾರದಲ್ಲೂ ತುಲನೆ ಮಾಡುತ್ತಿರುವ ಕಾಂಗ್ರೆಸ್‍ನ ಪ್ರಮುಖ ಗುಂಪು, ಜಾತಿ ಕಾರಣದಿಂದ ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ವರವಾಗುವುದಾ ಅಥವ ಶಾಪವಾಗುವುದೇ ಎಂದು ಅಳೆದುತೂಗುತ್ತಿದ್ದು, ಹಳೆಯದಕ್ಕೇ ಈಗಲೂ ಪ್ರಾಶಸ್ತ್ಯ ಬೇಡ, ಜನರಲ್ಲೀಗ ಜಾಗೃತಿಯುಂಟಾಗಿರುವುದರಿಂದ ಪ್ಲಸ್ ಆಗಬಹುದೆಂಬ ಅಂದಾಜೂ ಇದ್ದು, ರಾಷ್ಟ್ರಾದ್ಯಂತ ದಲಿತ ವರ್ಗ ಕಾಂಗ್ರೆಸ್‍ನಿಂದ ದೂರ ಸರಿದು ನಿಂತಿರುವುದರಿಂದ, ಅವರನ್ನ ಮತ್ತೆ ಸೆಳೆಯಲು ಉತ್ತಮ ಅಸ್ತ್ರ ಎಂಬ ಕೋನದಿಂದಲೂ ತೂಗಿ ನೋಡಲಾಗುತ್ತಿದ್ದು, ರಾಹುಲ್ ರಾಜೀನಾಮೆ ನಿರ್ಧಾರವನ್ನ ಅಚಲವಾಗಿಸಿಕೊಂಡರೆ ಖರ್ಗೆಗೆ ಅದೃಷ್ಟ ಖುಲಾಯಿಸಲೂಬಹುದು ಎಂಬ ವಾತಾವರಣವಿದೆ.