ಬಿಟ್ಟೆನೆಂದರೂ ಬಿಡದ ಮಾಯೆ ಕಾಂಗ್ರೆಸ್‍ನೊಳಗೆ ಯುವಕರು-ಹಿರೀಕರ ಗದಾಯುದ್ಧ

ಬಿಟ್ಟೆನೆಂದರೂ ಬಿಡದ ಮಾಯೆ  ಕಾಂಗ್ರೆಸ್‍ನೊಳಗೆ ಯುವಕರು-ಹಿರೀಕರ ಗದಾಯುದ್ಧ

ಬೇಡ ಬೇಡ ಎನ್ನುತ್ತಲೇ ಮತ್ತೆ ಅಧ್ಯಕ್ಷತೆಯ ಸ್ಥಾನ ನೆಹರು ಕುಟುಂಬಕ್ಕೆ ಸೇರುತ್ತಿದೆ. ಇದು ಮೇಲ್ನೋಟಕ್ಕೆ ಸರಿ ಏನಿಸಿದರೋ ಆಂತರಿಕವಾಗಿ ವೃದ್ಧರು  ಮತ್ತು ಯುವಕರ ನಡುವಿನ ಗುದ್ದಾಟ ತಾರಕಕ್ಕೇರಿದೆ ಎಂಬುದನ್ನು ತೋರಿದೆ ಎನ್ನುತ್ತಾರೆ ಜಿ.ಆರ್ ಸತ್ಯಲಿಂಗರಾಜು

ಬೇಡ ಬೇಡವೆಂದರೂ ಪಕ್ಷದ ಅಧ್ಯಕ್ಷತೆ ಮತ್ತೆ ಮತ್ತೆ ನೆಹರು ಕುಟುಂಬಕ್ಕೇ ಬಂದು ಸೇರುತ್ತಿದೆ ಎಂಬುದು ಮೇಲ್ನೋಟಕ್ಕೆ ಎಷ್ಟು ಸರಿಯೋ, ಆಂತರಿಕವಾಗಿ ವೃದ್ದರು -ಯುವಕರ ನಡುವಣ ಮುಸುಕಿನ ಗುದ್ದಾಟ ತಾರಕಕ್ಕೇರಿದೆ ಎಂಬುದೂ ಕೂಟ ಅಷ್ಟೇ  ಸರಿ.

ರಾಹುಲ್ ಗಾಂಧಿ ಮತ್ತು ಆಪ್ತ ಪಡೆಯವರ ಆಲೋಚನೆಗೂ, ಸಿಡಬ್ಲ್ಯುಸಿಯಲ್ಲಿರುವ ವಯೋವೃದ್ದರ ಚಿಂತನೆಗೂ ತಾಳಮೇಳವೇ ಇಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ ಇರಲಿ, ನೆಹರು ಕಾಲದ ವ್ಯಕ್ತಿ ನಿಷ್ಠೆಯನ್ನೇ ಕಿಂಚಿತ್ತೂ ಬದಲಿಸಿಕೊಳ್ಳದ ಹಲವರು, ಶತಮಾನಗಳ ಇತಿಹಾಸವಿರುವ ಪಕ್ಷವನ್ನ` ಆಡುವ ಮಕ್ಕಳ' ಕೈಗೆ ಕೊಡಬಾರದು, ನಮ್ಮೆಲ್ಲರ ಅನುಭವದ ಆಧಾರದಲ್ಲೇ ಪಕ್ಷ ಮುಂದುವರಿಯಬೇಕು, ಹಿರಿಯರಿಗೆ ಆದ್ಯತೆ ಇರಬೇಕು ಎಂಬ ಪಟ್ಟನ್ನ ಸಡಿಲಿಸುತ್ತಲೇ ಇಲ್ಲ.

ನಮ್ಮ ಕುಟುಂಬಕ್ಕೆ ಬೇಡವೇ ಬೇಡ, ಬೇರೆಯವರನ್ನ ಆರಿಸಿ ಎಂದು ರಾಹುಲ್ ಗಾಂಧಿ ಸಿಡಬ್ಯುಸಿಯಲ್ಲೇ ಐದು ತಂಡಗಳನ್ನ ಮಾಡಿ, ಅವರವರೇ ಎಐಸಿಸಿ ಅಧ್ಯಕ್ಷರ ಹೆಸರನ್ನ ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರುವಂತೆ ಹೇಳಿದ್ದರು. ಅದರನುಸಾರ ಐದೂ ತಂಡಗಳು ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್ ಮತ್ತು ಸುಶೀಲ್ ಕುಮಾರ್ ಶಿಂಧೆ ಹೆಸರನ್ನ ಚರ್ಚಿಸಿದವಾದರೂ, ಕೊನೆಗೆ ರಾಹುಲ್ ಗಾಂಧಿಯೇ ಸರಿ, ಅವರು ಒಪ್ಪದಿದ್ದರೆ ಖರ್ಗೆ ಓಕೆ ಎಂಬ ನಿಲುವಿಗೆ ಬಂದವು.

ಅಷ್ಟರೊಳಗೆ ಜ್ಯೋತಿರಾದಿತ್ಯ ಸಿಂಧಿಯಾ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ರಾಜಸ್ತಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಇತ್ಯಾದಿ ನಾಯಕರು, ಯುವಕರ ಅಭಿಪ್ರಾಯವನ್ನ ಪಡೆಯದೆಯೇ ನೀವು ನೀವೇ ನಿರ್ಧರಿಸಿದರೆ ಹೇಗೆ, ಯುವಕರ ಅಗತ್ಯವಿಲ್ಲವೇ ಎಂದು ಪ್ರಶ್ನೆಯನ್ನಿಟ್ಟರು. ಇದರಿಂದ ಅವಾಕ್ಕಾದ ಹಿರೀತಲೆಗಳು, ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನೇ ಮುಂಚೂಣಿಗೆ ತಂದರೆ, ಮುಕುಲ್ ವಾಸ್ನಿಕ್ ಪರವಿದ್ದವರ ಗುಂಪು ಅವರಿಗೆ ವಯಸ್ಸಾಗಿದೆ, ರಾಷ್ಟ್ರ ಸುತ್ತಲು ಆಗಲ್ಲ ಎಂಬ ಕೊಂಕು ತೆಗೆದರು.

ಇಂಥವೆಲ್ಲ ರಗಳೆಗಳಿಂದಾಗಿ ಧೃತಿಗೆಟ್ಟ ಸಿಡಬ್ಲ್ಯುಸಿ ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾಗಾಂಧಿಯೇ ಇರಲಿ ಎಂಬ ನಿರ್ಣಯ ಅಂಗೀಕರಿಸಿಬಿಟ್ಟರು. ಇಲ್ಲಿ ಹಿರೀಕರುಗಳೆಲ್ಲ ಮತ್ತೆ ತಮ್ಮ ಹಠವನ್ನೇ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇವರಿಬ್ಬರಿಲ್ಲದಿದ್ದರೆ ಮಲ್ಲಿಕಾರ್ಜುನ ಖರ್ಗೆ ಈ ಮೂವರಲ್ಲೆ ಒಬ್ಬರಾಗಬೇಕು. ಹೊಸಾ ಮುಖ ಅದರಲ್ಲೂ ಯುವ ಮುಖವಂತೂ ಬೇಡವೇ ಬೇಡ. ಈಗಲೇ ನಮ್ಮ ನಿಲುವನ್ನ ಪ್ರಶ್ನಿಸುವ ಯುವ ನಾಯಕರ ತಂಡ, ಯುವಕರೇ ಅಧ್ಯಕ್ಷರಾದರೆ ನಮಗೆ ಕಿಂಚಿತ್ತೂ ಬೆಲೆ ಕೊಡಲ್ಲ, ತಮಗಿಷ್ಟ ಬಂದಂತೆ ಕಾರ್ಯಕಾರಿ ಸಮಿತಿ ರಚಿಸಿಕೊಂಡು, ನಮಗೆಲ್ಲ ಗೇಟ್‍ಪಾಸ್ ಕೊಡುತ್ತಾರೆ ಎಂಬ ಅಂಜಿಕೆಯಿಂದಲೇ, ಯುವಕರನ್ನ ದೂರವೇ ಇಡುತ್ತಿದ್ದಾರೆ.

ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಬೆಂಬಲದ ಗುಂಪು ಎಂದೇ ಕೊನೆಕೊನೆಗೆ ಪ್ರತ್ಯೇಕವಾಗುವಂಥ ಆತಂಕಕಾರಿ ಬೆಳವಣಿಗೆಗಳು ಕಾಂಗ್ರೆಸ್‍ನಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಲಾಮು ಹಚ್ಚುವಷ್ಟರಲ್ಲಿ ಮಹಾರಾಷ್ಟ್ರ ಸೇರಿದಂತೆ ಮತ್ತಿತರೆ ರಾಜ್ಯಗಳ ಚುನಾವಣೆ ಅಟಕಾಯಿಸಿಕೊಳ್ಳುತ್ತಿದೆ. ಈ ಚುನಾವಣೆಯಲ್ಲಿ ಪಕ್ಷದ ಸ್ಥಿತಿ ಉತ್ತಮಗೊಂಡರೆ ಅದು ಸೋನಿಯಾಗಾಂಧಿಗೆ ಕ್ರೆಡಿಟ್ ಆಗಿ ಅವರನ್ನೇ ಅಧ್ಯಕ್ಷರನ್ನಾಗಿಸುವುದು ಖಚಿತ. ಒಂದು ವೇಳೆ ವಿಫಲತೆ ಮುಂದುವರಿದರೆ ಆಂತರಿಕವಾಗಿ ಹದ ತಪ್ಪಿರುವ ಕಾಂಗ್ರೆಸ್ ರಕ್ಷಣೆಗೆ ಧಾವಿಸಿ ಬರುವವರೇ ಇಲ್ಲದಂತಾಗುತ್ತಿದೆ.