ಈ ಎಲ್ಲದರ ಹಿಂದಿದೆ ಮುಸ್ಲಿಂ ವಿರೋಧಿ ಮನಸ್ಸು

ಭಾರತವನ್ನು ನೆಚ್ಚಿಕೊಂಡು ಆಶ್ರಯಕ್ಕಾಗಿ ಬಂದ ಮುಸ್ಲಿಮರು ಮಾಡಿರುವ ತಪ್ಪಾದರೂ ಏನು? ಅವರು ಮುಸ್ಲಿಮರಾಗಿರುವುದೇ ತಪ್ಪು! ನೆರೆ ರಾಷ್ಟ್ರಗಳಿಂದ ಬಂದ ಯಾವುದೇ ಧರ್ಮಕ್ಕೆ ಸೇರಿದ ನಿರಾಶ್ರಿತ ಕೂಡ ನಮಗೆ ವಿದೇಶೀಯನೇ ಆಗಬೇಕು. ಆದರೆ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮೀಯರಿಗೆ ಮಾತ್ರ ಪೌರತ್ವ ಕೊಡುವುದೆಂದರೆ ಅದರ ಹಿಂದಿನ ದುರುದ್ದೇಶವೇನು? ಬೌದ್ಧ ಮತ್ತು ಸಿಖ್ ಧರ್ಮೀಯರು ಹಿಂದೂ ಧರ್ಮದ ಚೌಕಟ್ಟಿಗೇ ಒಳಪಟ್ಟವರೆಂಬ ನಂಬಿಕೆ ಈ ಸಂಘ ಪರಿವಾರದ್ದು.

ಈ ಎಲ್ಲದರ ಹಿಂದಿದೆ ಮುಸ್ಲಿಂ ವಿರೋಧಿ ಮನಸ್ಸು

ಭಾರತ ಹಿಂದೆಂದೂ ಇಂಥ ಅಶಾಂತಿ, ಅಭದ್ರತೆ, ಅಸಹಾಯಕತೆ, ಅತಂತ್ರ ಪರಿಸ್ಥಿತಿಯನ್ನು ಕಂಡಿರಲಿಲ್ಲ. ಪ್ರತಿ ದಿನ ಒಂದಲ್ಲ ಒಂದು ಗೋಳು. ಯಾರಿಗೂ ನೆಮ್ಮದಿ ಇಲ್ಲ. ಎಲ್ಲರೂ ಒಂದಲ್ಲ ಒಂದು ಸಂಕಷ್ಟದಲ್ಲಿ ಸಿಕ್ಕಿಕೊಂಡ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅದರಲ್ಲೂ ಮುಸ್ಲಿಮರ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಅವರು ಗಡ್ಡ ಬಿಟ್ಟ ಮುಸ್ಲಿಮರಾದರೆ ನಿಮ್ಮಲ್ಲಿ ಕೆಲವರಿಗಾದರೂ ಭಯೋತ್ಪಾದಕರಂತೆಯೇ ಕಂಡಿರುತ್ತಾರೆ. ಹೌದು ಅನುಮಾನವೇ ಇಲ್ಲ. ಆತ ಭಯೋತ್ಪಾದಕನೇ ಇರಬೇಕು ಅಂದುಕೊಳ್ಳುತ್ತೀರಿ. ಅಂಥ ಸಮೂಹಸನ್ನಿಗೆ ನೀವು ಒಳಗಾಗಿದ್ದೀರಿ. ಸಂಘ ಪರಿವಾರ ಪ್ರಭಾವದ ಮಾಧ್ಯಮಗಳು, ಬಿಜೆಪಿ ಪೋಷಿತ ಭಯಂಕರ ಭಾಷಣಕಾರರು ಇಂಥದ್ದನ್ನೇ ಒದರುತ್ತಾ ಆ ವಿಷವೇ ನಿಮ್ಮ ರಕ್ತವನ್ನೂ ಸೇರಿ ನೀವು ಕಠೋರ ಮುಸ್ಲಿಂ ವಿರೋಧಿಯಾಗಿ ರೂಪುಗೊಂಡಿದ್ದರೆ ಅಚ್ಚರಿಯೇನಿಲ್ಲ. ಅಂಥ ವಿಷಗಾಳಿ ಭಾರದಾದ್ಯಂತ ಬೀಸುತ್ತಿದೆ. ಈ ವಿಷಗಾಳಿಯ ಪರಿಣಾಮ ದೇಶದ ಸಮನ್ವಯತೆ, ಸಾಮರಸ್ಯ, ಸಹಬಾಳ್ವೆಯ ತತ್ವಾಧರಿತ ಭಾರತದ ಮುನ್ನಡೆ ವಿಚಲಿತಗೊಂಡಿದೆ.

ಒಂದಕ್ಕೊಂದು  ಅಂತಃಸಂಬಂಧ ಇದೆ. ಈಗಿನ ಕೂಗನ್ನೇ ಕೇಳಿ. ಪೌರತ್ವ ತಿದ್ದುಪಡಿ ಕಾಯಿದೆ ಎಂಬ ಅಸ್ತ್ರ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಮೇಲ್ನೋಟಕ್ಕೆ ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಬಂದ ಹಿಂದೂ, ಸಿಖ್, ಬೌದ್ಧ ವಲಸೆಗಾರರಿಗೆ ಪೌರತ್ವ ಕೊಡುವುದಕ್ಕಷ್ಟೇ ಸಂಬಂಧಿಸಿದಂತೆ ಕಾಣುತ್ತದೆ. ಹಾಗಾದರೆ ಈ ದೇಶಗಳಿಂದಲೇ ಭಾರತವನ್ನು ನೆಚ್ಚಿಕೊಂಡು ಆಶ್ರಯಕ್ಕಾಗಿ ಬಂದ ಮುಸ್ಲಿಮರು ಮಾಡಿರುವ ತಪ್ಪಾದರೂ ಏನು? ಅವರು ಮುಸ್ಲಿಮರಾಗಿರುವುದೇ ತಪ್ಪು! ನೆರೆ ರಾಷ್ಟ್ರಗಳಿಂದ ಬಂದ ಯಾವುದೇ ಧರ್ಮಕ್ಕೆ ಸೇರಿದ ನಿರಾಶ್ರಿತ ಕೂಡ ನಮಗೆ ವಿದೇಶೀಯನೇ ಆಗಬೇಕು. ಆದರೆ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮೀಯರಿಗೆ ಮಾತ್ರ ಪೌರತ್ವ ಕೊಡುವುದೆಂದರೆ ಅದರ ಹಿಂದಿನ ದುರುದ್ದೇಶವೇನು? ಬೌದ್ಧ ಮತ್ತು ಸಿಖ್ ಧರ್ಮೀಯರು ಹಿಂದೂ ಧರ್ಮದ ಚೌಕಟ್ಟಿಗೇ ಒಳಪಟ್ಟವರೆಂಬ ನಂಬಿಕೆ ಈ ಸಂಘ ಪರಿವಾರದ್ದು. ಈ ಧರ್ಮಗಳು ಕೂಡ ಹಿಂದೂ ಧರ್ಮದ ಶೋಷಣೆ, ವಂಚನೆಯ ಮರ್ಮಗಳ ವಿರುದ್ಧ ಬಂಡೆದ್ದು ಸ್ಥಾಪನೆಯಾಗಿದ್ದೆಂಬ ಸತ್ಯವೂ ಅರಿವಿಲ್ಲದಂತೆ ವರ್ತಿಸುತ್ತಿರುವುದು ಅಜ್ಞಾನ ಎನ್ನಲಾಗದು.ಇದು ಇನ್ನೊಂದು ಮಹಾನ್ ಐತಿಹಾಸಿಕ ಅಪರಾಧ ನಡೆಸಲಿರುವುದರ  ಮುನ್ಸೂಚನೆ. 

ಇದು ಒಮ್ಮಿಂದೊಮ್ಮೆಗೇ ಹುಟ್ಟಿಕೊಂಡ ನಿರ್ಧಾರವಲ್ಲ. ಇದರ ಹಿಂದೆ ಬ್ರಾಹ್ಮಣ್ಯದ ಸಂಚಿದೆ, ವರ್ಷಗಳ ಶ್ರಮವಿದೆ. ಅಯೋಧ್ಯೆಯ ಬಾಬ್ರಿ ಮಸೀದಿ, ಹುಬ್ಬಳ್ಳಿಯ ಈದ್ಗಾ, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಹೆಸರುಗಳಲ್ಲಿ ಹುಟ್ಟಿಸಿದ ವಿವಾದಗಳಿವೆ. ಗೋಹತ್ಯೆ ನಿಷೇಧ ಎಂಬ ಕಾನೂನಿದೆ, ಗೋಮಾಂಸ ಸಂಗ್ರಹಿಸಿಟ್ಟ ಸಂಶಯದ ಮೇಲೆ ನಡೆದ ಕಗ್ಗೊಲೆಗಳ ಪೈಶಾಚಿಕ ಕೃತ್ಯಗಳಿವೆ, ಜಮ್ಮು-ಕಾಶ್ಮೀರದ ವಿಭಜನೆ ಇದೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ದ್ವೇಷಿಸುವ ಉನ್ಮಾದವಿದೆ, ಮುಸ್ಲಿಮರ ಮತಗಳೇ ಬೇಕಿಲ್ಲ ಎನ್ನುವ ಸಂಸದರಿದ್ದಾರೆ, ಇಸ್ಲಾಂ ಧರ್ಮ ಇರುವವರೆಗೆ ಭಯೋತ್ಪಾದನೆ ಮೂಲೋತ್ಪಾಟನೆ ಸಾಧ್ಯವಿಲ್ಲ ಎನ್ನುವ ಅಸಹನೆ ಇದೆ, ಹಿಂದೂ ಹೆಣ್ಣು ಮಕ್ಕಳ ಪ್ರೀತಿಸುವ ಮುಸ್ಲಿಮರ ಕೈ ಕಡಿಯಿರಿ ಎನ್ನುವ ಕ್ರೌರ್ಯವಿದೆ,  ಬಿಜೆಪಿಗೆ ಮತ ಹಾಕದಿದ್ದರೆ ಪರಿಣಾಮ ಎದುರಿಸಿ ಎಂದು ಮುಸ್ಲಿಮರಿಗೆ ಬೆದರಿಸುವ ನಾಯಕರಿದ್ದಾರೆ. ಎಲ್ಲವೂ ಮುಸ್ಲಿಂ ವಿರೋಧಿ ನಿಲುವುಗಳೇ. ಹಿಂದೂ ರಾಷ್ಟ್ರೀಯವಾದದ ಪ್ರತಿಫಲನ! ಗೊಳವಲ್ಕರ್, ಸಾವರ್ಕರ್ ಗಳು ಕಂಡ ಕನಸಿನ ಅನಿಷ್ಠ ಪರಿಣಾಮ! ಹಿಂದೂ ರಾಷ್ಟ್ರ!

ಈಗ ಆಗುತ್ತಿರುವುದೂ ಅಷ್ಟೇ. ಧರ್ಮದ ಎಳ್ಳಷ್ಟೂ ಅರಿವಿಲ್ಲದ ಅಧರ್ಮೀಯರು ಧರ್ಮಕ್ಕೊಂದು ಹೊಸ ವ್ಯಾಖ್ಯಾನ ನೀಡುತ್ತಿದ್ದಾರೆ. ಹಿಂದೂ ಧರ್ಮ ಎಂದರೆ ಮುಸ್ಲಿಮರನ್ನು ದ್ವೇಷಿಸುವುದು, ಮುಸ್ಲಿಮರನ್ನು ಸದಾ ಸಂಶಯದಿಂದ ನೋಡುವುದು, ಹಿಂದೂ ಧರ್ಮ ಎಂದರೆ ಗೋಮಾಂಸ ಭಕ್ಷಕರನ್ನು ಕೊಲ್ಲುವುದು, ಹಿಂದೂ ಧರ್ಮ ಎಂದರೆ ಅಸಹನೆ ಮೆರೆಯುವುದು. ಆದರೆ ಅವರು ಹೇಳುತ್ತಾರೆ ಹಿಂದೂ ಧರ್ಮ ಎಂದರೆ ಸನಾತನ ಧರ್ಮ. ವಾಸ್ತವದಲ್ಲಿ ಸನಾತನ ಧರ್ಮ ಎಂದರೆ ಸಣ್ಣ ಗುಂಪೊಂದು ತಮ್ಮ ಅನುಕೂಲ ಮತ್ತು ಸಂದರ್ಭಕ್ಕೆ ತಕ್ಕಂತೆ ತಿರುಚಲು ಸುಲಭವಾಗಿ ಬಳಸಿಕೊಳ್ಳುತ್ತಿರುವ ಒಂದು ನಿಯಂತ್ರಣ ವ್ಯವಸ್ಥೆ. ನಿಜವಾದ ಧರ್ಮವನ್ನು ಯಾರೂ ಸಂರಕ್ಷಿಸುವ ಅಗತ್ಯವಿಲ್ಲ. ಅದಕ್ಕೆ ತನ್ನಷ್ಟಕ್ಕೆ ತಾನೇ ರಕ್ಷಿಸಿಕೊಳ್ಳುವ, ವಿಸ್ತರಣೆಗೊಳ್ಳುವ ಶಕ್ತಿ ಇರುತ್ತದೆ. ಅಧರ್ಮಕ್ಕೆ ಮಾತ್ರ ಸಂರಕ್ಷಣೆಯ ಹುಯಿಲು, ಗದ್ದಲ ಬೇಕಾಗುತ್ತದೆ.  ಈ ಹುಯಿಲಿಗೆ ಕಾವಿ ತೊಟ್ಟವರ ಪಡೆಯೇ ದನಿಗೂಡಿಸುತ್ತಿದೆ. ಕಾವಿ ತೊಟ್ಟವರೆಲ್ಲ ಸಂತರಲ್ಲ. ಸಂತ ಅಥವಾ ಚಿಟಿಣ ಎಂದರೆ ಧ್ವನಿಸುವುದು ಸಹಿಷ್ಣುತೆ, ಪ್ರೀತಿ, ಕರುಣೆ,  ದಯೆ, ಲೋಕೋಪಕಾರ. ಈ ನಮ್ಮ ಇಂಡಿಯಾದಲ್ಲಿ ಸ್ವಘೋಷಿತ ಸಂತರೆಲ್ಲ ಅಸಹಿಷ್ಣುತೆಯ ಮಾತನಾಡುತ್ತಾರೆ, ಜೀವಪರವಲ್ಲದ ಠೇಂಕಾರ ಮಾಡುತ್ತಾರೆ, ದಯೆಯೇ ಧರ್ಮದ ಮೂಲವಯ್ಯಾ ಎಂಬ ಮಾತನ್ನೇ ಮರೆಯುತ್ತಾರೆ.

ನೀವು ಗಮನಿಸಿರುತ್ತೀರಿ. ಮೀಸಲಾತಿ, ಏಕರೂಪ ಕಾಯಿದೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ, ರಾಮಮಂದಿರ, ಜಮ್ಮು-ಕಾಶ್ಮೀರ ಈ ಯಾವುದೇ ವಿಷಯ ಬಂದರೂ ಒಂದು ಸಮುದಾಯಕ್ಕೆ ಸೇರಿದವರು ಮಾತ್ರ ಮೊದಲೇ ಮಾತಾಡಿಕೊಂಡು ನಿರ್ಧರಿಸಿದಂತೆ ಒಂದೇ ದನಿಯಲ್ಲಿ ಮಾತಾಡುತ್ತಾರೆ. ಇಂಥವರ ಜತೆ ತಲೆತಿಕ್ಕಿಸಿಕೊಂಡವರೂ ಸೇರಿಕೊಳ್ಳುತ್ತಾರೆ. ವಾಸ್ತವಕ್ಕಿಂತ ಸುಳ್ಳು, ಭ್ರಮೆಗಳೇ ವಿಜೃಂಭಿಸುವ ವಾತಾವರಣ ನಿರ್ಮಿಸುತ್ತಾರೆ.

ಪೌರತ್ವ ತಿದ್ದುಪಡಿ ಕಾಯಿದೆ ಕೂಡ ಮುಸ್ಲಿಂ ದ್ವೇಷದ ಪರಿಣಾಮವಾಗಿಯೇ ಹುಟ್ಟಿಕೊಂಡಿದ್ದು.ಮುಸ್ಲಿಮರೆಂದರೆ ಮೂರ್ನಾಲ್ಕು ಹೆಂಡತಿಯರಿರುತ್ತಾರೆ, ಕಡಿಮೆ ಎಂದರೂ ಡಜನ್ ಮಕ್ಕಳಿರುತ್ತಾರೆ, ಎಲ್ಲ ಅಪರಾಧಗಳಲ್ಲೂ ಇವರು ಇದ್ದೇ ಇರುತ್ತಾರೆ, ಅವರ ರಕ್ತದಲ್ಲೇ ಇಂಥದ್ದೆಲ್ಲ ಬಂದಿದೆ, ಕಾಂಗ್ರೆಸ್ ಪಕ್ಷ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸಿ ಮತಗಳಿಕೆಗಾಗಿ ಮುಸ್ಲಿಮರನ್ನು ಓಲೈಸುತ್ತಲೇ ಬಂದಿದೆ ಎಂಬ ಪಿಸುಗುಟ್ಟುವ ಪ್ರಚಾರದ ಫಲವಾಗಿಯೇ ಮುಸ್ಲಿಂ ದ್ವೇಷ ಹುಟ್ಟಿಕೊಂಡಿದೆ. ಯಾವುದೇ ದೇಶ ಅಥವಾ ಸಮಾಜದಲ್ಲಿ ಬಹುಸಂಖ್ಯಾತರು ಅತಂತ್ರರಾಗಿರುವುದಿಲ್ಲ.ಬಹುಸಂಖ್ಯಾತರಿಗೆ ಸಹಜವಾಗಿಯೇ ಸಂಖ್ಯಾಬಲವೇ ರಕ್ಷಣೆ ಒದಗಿಸುತ್ತದೆ. ಹಿಂದೂಗಳು ಈ ದೇಶದ ಬಹುಸಂಖ್ಯಾತರಾಗಿರುವುದರಿಂದ ಅಂಥ ಸಹಜ ಬಲ ಹಿಂದೂಗಳಿಗಿದೆ. ಆದರೆ ಮುಸ್ಲಿಮರು ಭಾರತ-ಪಾಕಿಸ್ತಾನ ವಿಭಜನೆಯಾದ ನಂತರ ಸದಾ ಸಂಶಯಕ್ಕೆ ತುತ್ತಾಗುತ್ತಿರುವವರು. ಭಾರತ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ  ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ ಎಂಬ ನಿರಂತರ ಆರೋಪ ಎದುರಿಸುವವರು. ಎಷ್ಟೆಂದರೂ ಭಾರತೀಯ ಮುಸ್ಲಿಮರು ಈವರೆಗೂ ಎರಡನೇ ದರ್ಜೆ ಪ್ರಜೆಗಳು! ದಲಿತರಷ್ಟೇ ಅಥವಾ ದಲಿತರಿಗಿಂತ ಹೆಚ್ಚು ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಒಳಗಾದವರು. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ, ಭಾರತ-ಪಾಕಿಸ್ತಾನ ನಡುವಿನ ಯುದ್ಧ ಹೀಗೆ ವಿವಿಧ ಸಂದರ್ಭಗಳಲ್ಲಿ ದೇಶಭಕ್ತಿ ಸಾಬೀತುಪಡಿಸಲೇಬೇಕಾದ ನತದೃಷ್ಟರು ಮುಸ್ಲಿಮರು. ಹೀಗೆ ಮುಸ್ಲಿಮರನ್ನು ಸದಾ ಅನುಮಾನದಿಂದಲೇ ನೋಡುವ ವಾತಾವರಣ ಸೃಷ್ಟಿ ಮಾಡಿರುವ ಪಿಸುಗುಟ್ಟುವಿಕೆ ಪ್ರಚಾರದ ಸಮುದಾಯವೇ ಈಗ ಗಟ್ಟಿದನಿಯಲ್ಲಿ, ನಿರ್ಭೀತವಾಗಿ ಮುಸ್ಲಿಂ ತಿರಸ್ಕಾರದ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿದೆ. ಯಾಕೆಂದರೆ ಈ ಸಮುದಾಯಕ್ಕೆ ಬೇಕಾದ ಸರ್ಕಾರ ಎಂಬ ಅಸ್ತ್ರ ಈಗ ದೊರೆತಿರುವುದೇ ಅದಕ್ಕೆ ಮುಖ್ಯ ಕಾರಣವಾಗಿದೆ.

ಭಾರತ ಉಪಖಂಡದ ನೆರೆ ರಾಷ್ಟ್ರಗಳಿಂದ ಬಂದು ಭಾರತದಲ್ಲಿ ನೆಲೆಸಿದ ಮುಸ್ಲಿಮರಿಗೆ ಪೌರತ್ವ ನೀಡುವುದಿಲ್ಲ ಎಂದರೆ ಅವರನ್ನೆಲ್ಲ ಏನು ಮಾಡುತ್ತಾರೆ? ಅವರ ಮೂಲದೇಶಗಳಿಗೆ ಹೊರದಬ್ಬಲಾಗುತ್ತದೆಯೇ? ಇದರರ್ಥ ಇಷ್ಟೇ. ಈಗ ಮುಸ್ಲಿಮರನ್ನು ಹೊರತುಪಡಿಸಿ ಭಾರತ ಉಪಖಂಡದ ಕೆಲವು ದೇಶಗಳಿಂದ ವಲಸೆ ಬಂದ ಹಿಂದೂ,ಬೌದ್ಧ ಮತ್ತು ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುತ್ತಾರೆಂದರೆ ಇಲ್ಲಿರುವ ಮುಸ್ಲಿಮರು ಹಿಂದೂ ಧರ್ಮವನ್ನು ಅನಿವಾರ್ಯವಾಗಿ ಸ್ವೀಕರಿಸಲೇಬೇಕೆಂಬುದನ್ನು ಪರೋಕ್ಷವಾಗಿ ಹೇಳಲಾಗುತ್ತಿದೆ.  ಈ ದೇಶದ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ವಾಸ್ತುಶಿಲ್ಪ, ಚಲನಚಿತ್ರ ಎಲ್ಲವೂ ವೈವಿಧ್ಯಮಯವಾಗಿ, ಸಮೃದ್ಧವಾಗಿ ರೂಪುಗೊಂಡಿರುವುದಕ್ಕೆ, ಜಾಗತಿಕ ಪ್ರಭಾವ ಮೂಡಿಸಿರುವುದಕ್ಕೆ ಬಹುತ್ವದ ಅಡಿಪಾಯವಿರುವುದೇ ಕಾರಣ.  ಈಗ ಬ್ರಾಹ್ಮಣ್ಯದ ಆತ್ಮಕ್ಕೆ ಹಿಂದೂ ಧರ್ಮದ ಮುಖವಾಡ ಇದೆಯೇ ಹೊರತು ನಾವು ಇತಿಹಾಸದಲ್ಲಿ ಓದಿರುವ ಸಿಂಧೂ ಕಣಿವೆಯ ಕಾರಣದಿಂದ ಹುಟ್ಟಿಕೊಂಡ ಹಿಂದೂ ಧರ್ಮದಲ್ಲಿ ನಾವಿಲ್ಲ. ಅರ್ಥಾತ್ ಹಿಂದೂ ಧರ್ಮದ ಆತ್ಮವೇ ಇಲ್ಲ. ಗಹಗಹಿಸುತ್ತಿರುವ ಬ್ರಾಹ್ಮಣ್ಯಕ್ಕೆ ಹಿಂದೂಗಳಾಗಿ ಹುಟ್ಟಿದ ಕಾರಣಕ್ಕೆ ನಾವು ಬಾಯಿಯಾಗಿದ್ದೇವಷ್ಟೇ. ಪಕ್ಷಿ ಪ್ರೇಮಿ ಸಲೀಂ ಅಲಿ, ಮಹಾನ್ ಚಿತ್ರಕಲಾವಿದ ಎಂ.ಎಫ್. ಹುಸೇನ್, ಷಹನಾಯ್ ವಾದಕ ಬಿಸ್ಮಿಲ್ಲಾ ಖಾನ್, ಹಿಂದೂಸ್ಥಾನಿ ಸರೋದ್ ವಾದಕ ಅಮ್ಜದ್ ಅಲಿ ಖಾನ್, ತಬಲಾ ವಾದಕ ಝಾಕಿರ್ ಹುಸೇನ್, ಒಂದು ಕಾಲದ ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕ ಮೊಹ್ಮದ್ ರಫಿ, ಬಾಲಿವುಡ್ ತಾರೆಯರಾದ ಷಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಅವರಂಥವರೂ ಇರುವ ಕಾರಣದಿಂದಲೇ ಭಾರತೀಯ ಕಲಾರಂಗ ಭಾವತರಂಗಗಳನ್ನೆಬ್ಬಿಸಿದೆ. ಏಕರೂಪದ ಭಾರತ ರೂಪುಗೊಂಡರೆ ಇದು ಸಾಧ್ಯವಾಗುವುದಿಲ್ಲ. ವೈವಿಧ್ಯಮಯ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಧಿರಿಸು ಎಲ್ಲವೂ ಭಾರತೀಯತೆಯನ್ನು ರೂಪಿಸಿದೆ. ನಮ್ಮ ದೇವಾಲಯಗಳು, ವಾಸ್ತುಶಿಲ್ಪಗಳು ಇದೆಲ್ಲದರ ಪ್ರಭಾವದಿಂದಲೇ ಸಮ್ಮೋಹಕ ಶಕ್ತಿಯನ್ನು ಪಡೆದಿವೆ. ಸೂಫಿ ಸಂಗೀತ ನಮ್ಮ ಆಧ್ಯಾತ್ಮಿಕ ಭಾವಸೆಲೆಯನ್ನು ಪ್ರೇರೇಪಿಸುವುದಕ್ಕೆ ಕಾರಣವಾಗಿದೆ. ಕೇವಲ ಹಿಂದೂಗಳಿರುವ ಏಕರೂಪದ ಭಾರತದಲ್ಲಿ ಇದ್ಯಾವುದೂ ಸಾಧ್ಯವಾಗುವುದಿಲ್ಲ. ನೀರಸ ಏಕತಾನತೆ ಚಿತ್ರಕಲೆ, ವಾಸ್ತುಶಿಲ್ಪ, ಸಂಗೀತವನ್ನು ಆಕ್ರಮಿಸಿಕೊಳ್ಳುವುದರಿಂದ ಅವೆಲ್ಲ ನಿರ್ಜೀವ ಸದ್ದು ಅಥವಾ ನೋಟವಾಗಿಯಷ್ಟೇ ಉಳಿಯುತ್ತದೆ.

ಈಗ ಮುಸ್ಲಿಂ ವಿರೋಧಿ ಕ್ರಮಗಳನ್ನಷ್ಟೇ ಕೈಗೊಳ್ಳುವ ಬ್ರಾಹ್ಮಣ್ಯ ತನ್ನ ಮೊದಲ ಗುರಿ ಈಡೇರಿದಂತೆ ಇತರ ಭಾರತೀಯವಲ್ಲದ ಅಲ್ಪಸಂಖ್ಯಾತ ಸಮುದಾಯದ ಮೇಲೂ ಇದೇ ರೀತಿಯ ಕೆಂಗಣ್ಣನ್ನು ಇನ್ನಷ್ಟು ಅಗಲವಾಗಿ ಬೀರುತ್ತದೆ. ಕ್ರಮೇಣ ಹಿಂದೂಗಳಲ್ಲೂ ಪ್ರಬಲ ಜಾತಿಗಳನ್ನು ಓಲೈಸಿ ಇತರ ಸಣ್ಣಪುಟ್ಟ ಜಾತಿಗಳನ್ನೆಲ್ಲ ತುಳಿದು ಏಕರೂಪದ ಭಾರತಕ್ಕೆ ಇನ್ನೊಂದು ಅಧ್ಯಾಯ ಬರೆಯುತ್ತದೆ. ಅಂಥ ದಿನಗಳಲ್ಲಿ ಭಾರತೀಯ ಜನಪದ ಸಂಸ್ಕೃತಿಯ ಬಹುಮುಖ್ಯ ಭಾಗವಾದ ದಲಿತ ಸಂಸ್ಕೃತಿಗೂ ಬರೆ ಎಳೆಯಲಾಗುತ್ತದೆ. ಏಕರೂಪದ ಭಾರತದಲ್ಲಿ ರೋದನವೇ ಸಂಗೀತವಾಗುತ್ತದೆ, ಸ್ಮಶಾನವೇ ಚಿತ್ರಕಲೆಯಾಗುತ್ತದೆ, ಸಂಘಪರಿವಾರ ಪೋಷಿತ ಸಾಕ್ಷ್ಯಚಿತ್ರಗಳೇ ಚಲನಚಿತ್ರವಾಗುತ್ತದೆ. ಸಂಸ್ಕೃತ ಅಥವಾ ಹಿಂದಿಯೇ ಅಬ್ಬರಿಸುತ್ತದೆ. ನಮ್ಮ ತಾಯ್ನುಡಿಗಳೂ ಗೋಳಿಡುತ್ತವೆ. ಪ್ರತಿಗಾಮಿ ಶಕ್ತಿಗಳ ಊಳಿಡುವಿಕೆ ನಾಲ್ದೆಸೆಗಳಲ್ಲೂ  ಮಾರ್ದನಿಸುತ್ತದೆ.  ಮೊದಲು ಮುಸ್ಲಿಮರು, ನಂತರ ಉಳಿದವರು ಎಂಬುದನ್ನು ಭಾರತೀಯ ಮೂಲದ ನಿಜಭಾರತೀಯರು ಅರ್ಥ ಮಾಡಿಕೊಳ್ಳಬೇಕಾಗಿದೆ.