ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ.ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ':ಚೀನಾ

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ.ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ':ಚೀನಾ

ದೆಹಲಿ: ಕೊರೊನಾ ವೈರಸ್​ ವಿಚಾರದಲ್ಲಿ ಅಮೆರಿಕ ಸೇರಿ ಕೆಲವು ದೇಶಗಳು ಚೀನಾ ವಿರುದ್ಧ ಕಿಡಿಕಾರುತ್ತಿವೆ. ಅದರಲ್ಲೂ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಂತೂ ಕೊರೊನಾ ವೈರಸ್​ಗೆ ಚೀನಿ ವೈರಸ್, ವುಹಾನ್​ ವೈರಸ್​ ಎಂದೇ ಹೆಸರು ಇಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ಯ ತೀವ್ರ ಮುಜುಗರಕ್ಕೀಡಾಗಿರುವ ಚೀನಾ, ದಯವಿಟ್ಟು ಚೀನಿ ವೈರಸ್​ ಅಂತ ಕರೆಯಬೇಡಿ. ಇದು ನಮ್ಮ ರಾಷ್ಟ್ರಕ್ಕೆ ಕಳಂಕ ಎಂದು ಭಾರತದ ಬಳಿ ಮನವಿ ಮಾಡಿದೆ. ಹಾಗೇ, ಕೊರೊನಾ ವೈರಸ್​ ವಿರುದ್ಧ ಹೋರಾಡಲು ಭಾರತಕ್ಕೆ ಅಗತ್ಯವಿರುವ ಸಹಕಾರ ನೀಡುವುದಾಗಿ ತಿಳಿಸಿದೆ.

ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ, ಕೌನ್ಸಲರ್​ ಜಿ ರಾಂಗ್​ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಭಾರತದಲ್ಲಿ ಕೊರೊನಾ ವೈರಸ್​ ನಿರ್ವಹಣೆಗೆ ಚೀನಾ ಸಹಕಾರ ನೀಡಲಿದೆ. ಚೀನಾದ ಉದ್ಯಮಗಳು ಈಗಾಗಲೇ ಭಾರತಕ್ಕೆ ಧನಸಹಾಯ ಮಾಡಲು ಪ್ರಾರಂಭಿಸಿವೆ. ಭಾರತಕ್ಕೆ ನಮ್ಮಿಂದ ಏನೇ ಸಹಕಾರ, ನೆರವು ಅಗತ್ಯವಿದ್ದರೂ ನಾವದನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ಎದುರಾರ ಈ ಕಠಿಣ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಚೀನಾ ಮತ್ತು ಭಾರತ ಪರಸ್ಪರ ಸಹಕಾರ, ಬೆಂಬಲವನ್ನು ನೀಡಿಕೊಳ್ಳುತ್ತಿವೆ ಎಂದು ತಿಳಿಸಿದರು.

ಚೀನಾದಲ್ಲೇ ಜನ್ಮತಾಳಿದ ಈ ವೈರಸ್​ಗೆ ಬಲಿಯಾಗುವವರ ಸಂಖ್ಯೆ ಚೀನಾಕ್ಕಿಂತ ಇಟಲಿ, ಸ್ಪೇನ್​ನಲ್ಲೇ ಜಾಸ್ತಿಯಾಗಿದೆ. ಚೀನಾದಲ್ಲಿ ವೈರಸ್​ನಿಂದ ತೀರ ಸಂಕಷ್ಟಕ್ಕೆ ಒಳಗಾಗಿದ್ದ ವುಹಾನ್​ಗೆ ಭಾರತ ಸುಮಾರು 15 ಟನ್​ಗಳಷ್ಟು ಮಾಸ್ಕ್​, ಕೈಗವಸುಗಳು ಸೇರಿ ಇನ್ನೂ ಅನೇಕ ರೀತಿಯ ವೈದ್ಯಕೀಯ ನೆರವು ನೀಡಿತ್ತು. ಅದನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಜಿ ರಾಂಗ್​, ಚೀನಾದಲ್ಲಿ ಕರೊನಾ ವಿರುದ್ಧ ಹೋರಾಡಲು ಭಾರತ ವೈದ್ಯಕೀಯ ವಸ್ತುಗಳನ್ನು ಪೂರೈಕೆ ಮಾಡಿತ್ತು. ನಮಗೆ ಆ ಬಗ್ಗೆ ತುಂಬ ಸಂತೋಷವಿದೆ ಹಾಗೇ ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ನಮಗೆ ಖಂಡಿತ ನಂಬಿಕೆಯಿದೆ. ಭಾರತ ಇನ್ನು ಕೆಲವೇ ದಿನಗಳಲ್ಲಿ ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುತ್ತದೆ. ವೈರಸ್​ನ್ನು ಒದ್ದೋಡಿಸುತ್ತದೆ. ಚೀನಾದಲ್ಲಿ ಕರೊನಾ ವೈರಸ್​ ಹೆಚ್ಚಿನ ಕಾಲ ಉಳಿಯಲಿದ್ದು, ನಮಗೆ ಭಾರತ ಸೇರಿ ಇನ್ನೂ ಹಲವು ರಾಷ್ಟ್ರಗಳ ಸಹಕಾರ ಬೇಕು.