ಎತ್ತಿನ ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ನಡೆದ ಚವಡಾಳರು!

ಒಮ್ಮೆ ಚವಡಾಳರು ಬಾಲೇಹೊಸೂರಿನಲ್ಲಿದ್ದ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದ್ದಕ್ಕಿದ್ದಂತೆ ಇಬ್ಬರು ಇವರನ್ನು ಹುಡುಕಿಕೊಂಡು ಬಂದು, `ಡಾಕುಟ್ರೇ, ನೀವೀವತ್ತೆ ನಮ್ಮೂರಿಗೆ ಬರಬೇಕು. ನೀವ್ ಬಂದ್ರೆ ಮಾತ್ರ ನಮ್ಮ ಭೀಮ ಉಳೀತಾನೆ... ಇಲ್ಲಾಂದ್ರೆ ಅವ್ನು ನಮ್ಮನ್ನ ಬಿಟ್ಟೋಗ್ತಾನೆ' ಎಂದು ಗದ್ಗದಿತ ಕಂಠರಾಗಿ ಬೇಡಿಕೊಂಡರು

ಎತ್ತಿನ ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ನಡೆದ ಚವಡಾಳರು!

ತಮ್ಮ ಮುದ್ದಿನ ನಾಯಿ ಮ್ಯಾಕ್‌ನ ದೆಸೆಯಿಂದ ಸಿಕ್ಕಿದ ಕೋಳಿ ಫಾರಂವೊಂದರ ಉಸ್ತುವಾರಿ ಕೆಲಸದಲ್ಲಿ ಚವಡಾಳರಿಗೆ ದೀರ್ಘ ಕಾಲ ಮುಂದುವರಿಯಲಾಗಲಿಲ್ಲ. ಗೋವೆಯ ವಾತಾವರಣ ತಮ್ಮ ಪ್ರಕೃತಿಗೆ ಹೊಂದಿಕೊಳ್ಳುವುದಿಲ್ಲ ಎಂಬುದು ಖಚಿತಗೊಳ್ಳುತ್ತಿದ್ದಂತೆ ಆ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು, ಕೃಷಿಯಲ್ಲಿಯೇ ಏನಾದರೂ ಬದಲಾವಣೆ ತರೋಣ ಎಂದು ನಿಶ್ಚಯಿಸಿ ತಮ್ಮ ಊರು ನಾಗರಮಡುವಿಗೆ ಹಿಂದಿರುಗಿದರು.

ಪಶುವೈದ್ಯಕೀಯ ಪದವೀಧರ ಚವಡಾಳರು ಊರಿಗೆ ಬಂದು ಸುಮ್ಮನೆ ಕೂಡಲಿಲ್ಲ. ಅವರದು ಅವಿಭಕ್ತ ಕುಟುಂಬ. ಮೇಲಾಗಿ ದೊಡ್ಡ ಕಮ್ತದ ಮನೆ, ಆಳುಕಾಳು, ದನಕರ, ಖಣಮನಿ ಹೀಗೆ ಎಲ್ಲ ಕೆಲಸವೂ ಒಬ್ಬೊಬ್ಬರ ಉಸ್ತುವಾರಿಗೆ ವಹಿಸಲ್ಪಟ್ಟಿತ್ತು. ಕಮ್ತದಲ್ಲಿ ಪಾಲ್ಗೊಳ್ಳಬೇಕೆಂದರೆ ಇವರಿಗಿಂಥ ಅನುಭವಿಗಳಾದ ಹಿರಿಯರು ಅದನ್ನು ನಿಭಾಯಿಸುತಿದ್ದರು. ಇವರ ಆಧುನಿಕ ವಿಚಾರಗಳು, ಆಲೋಚನೆಗಳು ಸೂಕ್ತವಾಗಿದ್ದರೂ ಯಾವುದೇ ಹೊಸಪ್ರಯೋಗಕ್ಕೆ ಮುಂದಾಗಿ ನಷ್ಟವನ್ನು ಸೋಸುವ ಧೈರ್ಯ ಅವರಲ್ಲಿರಲಿಲ್ಲ. ಈ ಕಾರಣಕ್ಕಾಗಿ ಇವರ ಉಸಾಬರಿಯೆ ಬೇಡ ಎಂದು ನಿರ್ಧರಿಸಿದ ಚವಡಾಳರು ಕಮ್ತಕ್ಕೆ ಪೂರಕವಾಗಿಯೇ ಬೇರೆ ಏನನ್ನಾದರೂ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂದು ಯೋಚಿಸಿದರು. ಆಗ ಅವರಿಗೆ ಪಶು ಸಂಗೋಪನೆಯೆ ಸೂಕ್ತ ದಾರಿ ಎನ್ನಿಸಿತು. ಆದರೆ, ಆಗಲೇ ಮನೆಯಲ್ಲಿ ಎತ್ತು, ಆಕಳು, ಎಮ್ಮೆ ಸೇರಿ ಸುಮಾರು ನೂರೈವತ್ತು ದನಕರಗಳಿದ್ದವು.

ಇವಿಷ್ಟನ್ನು ಸಾಕುವುದೇ ಏಳು ಹನ್ನೊಂದಾಗಿರುವಾಗ ಮತ್ತೇಕೆ ದನಕರ ಬೇಕು ಎಂಬ ಪ್ರಶ್ನೆಯೊಂದಿಗೆ ಮನೆಯಲ್ಲಿ ಇವರ ಯೋಜನೆಗೆ ವಿರೋಧ ಕೇಳಿಬಂತು. ಮನೆಯಲ್ಲಿರುವುದು ಎಲ್ಲವೂ ದೇಸಿ ದನಕರುಗಳೇ ಆದ್ದರಿಂದ ಅವುಗಳ ಹಾಲು ಮನೆಗೇ ಹವನಾಗುತಿತ್ತು. ಇವುಗಳ ಜೊತೆಗೆ ಒಂದೆರಡು ಜೆರ್ಸಿ(ಎಚ್‌ಎಫ್) ಆಕಳುಗಳನ್ನು ಸಾಕಿದರೆ ಹೆಚ್ಚು ಹಾಲು ಸಿಗುತ್ತದೆ. ಮನೆಗೆ ಬಳಸಿ ಉಳಿವ ಹಾಲನ್ನು ಮಾರಿದರೆ ಲಾಭವೂ ಸಿಗುತ್ತದೆ ಎಂದು ಚವಡಾಳರು ಯೋಚಿಸಿದ್ದರು. ಮನೆಯ ಹಿರಿಯರು ಇವರ ವಿಚಾರವನ್ನು ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಆಗ ಗ್ರಾಮೀಣ ಪ್ರದೇಶದ ಜನರಿಗೆ ಜೆರ್ಸಿ ಆಕಳು ಎಂದರೆ ಏನೋ ಪೂರ್ವಗ್ರಹ. ಅವುಗಳಿಗೆ ಹೆಚ್ಚು ಮೇವು ಬೇಕು. ಅವು ನಮ್ಮ ವಾತಾವರಣಕ್ಕೆ ಒಗ್ಗಿಕೊಳ್ಳುವುದಿಲ್ಲ. ಹೆಚ್ಚು ಹಾಲು ಕರೆಯುತ್ತವೆ ಎಂಬುದೇನೋ ನಿಜ ಆದರೆ, ಆ ಹಾಲಿನಲ್ಲಿ ಯಾವ ಸತ್ವವೂ ಇರುವುದಿಲ್ಲ. ಇಂಥ ಅನೇಕ ಸಂಗತಿಗಳಿಂದ ಅವರು ಪೂರ್ವಾಗ್ರಹಪೀಡಿತರಾಗಿದ್ದರು. ಇದರ ಮಧ್ಯೆ‌ಯೂ ಚವಡಾಳರು ಜೆರ್ಸಿ ಆಕಳು ತರುವ ನಿರ್ಧಾರಕ್ಕೆ ಬಂದಿದ್ದರು.

1990ರ ದಶಕ ಅದು. ಆಗ ದನಗಳು ಈಗಿನಷ್ಟು ದುಬಾರಿ ಇರಲಿಲ್ಲ. ಒಳ್ಳೆಯ ಜೋಡಿ ಎತ್ತುಗಳೆ 20/25 ಸಾವಿರ ರೂ. ಗೆ ಸಿಗುತಿದ್ದವು. ಹಿಂಡುವ ದನಗಳು, ಏಳೆಂಟು ಸಾವಿರಕ್ಕೆ, ಗಬ್ಬಿದ್ದ ದನಗಳು ಹತ್ತು ಹದಿನೈದು ಸಾವಿರ ರೂಪಾಯಿಗೆ ಸಿಗುತಿದ್ದವು. ಅಂಥದರಲ್ಲಿ ಚವಡಾಳರು ಇಪ್ಪತ್ತು ಸಾವಿರ ರೂ. ಕೊಟ್ಟು ಜೆರ್ಸಿ ಆಕಳೊಂದನ್ನು ತಂದರು. ಆಗ ಊರಿನ ಮನೆಮನೆಯಲ್ಲೂ, ಎಲ್ಲರ ಬಾಯಲ್ಲೂ ಚವಡಾಳರು ತಂದ ಜೆರ್ಸಿ ಆಕಳದ್ದೇ ಸುದ್ದಿ. ಅದೂ ಇಪ್ಪತ್ತು ಸಾವಿರವೆಂದರೆ ಕಡಿಮೆಯೆ? ಎಂದು ಎಲ್ಲರೂ ಸೋಜಿಗಪಡುತಿದ್ದರು. ಸಹಜವಾಗಿ ಇವರ ಮನೆಯಲ್ಲೂ ಅಷ್ಟೊಂದು ಹಣ ತೆತ್ತು ಈ ಆಕಳನ್ನು ತರುವ ಹರ್ಕತ್ತು ಏನಿತ್ತು ಎಂಬ ಅಸಹನೆಯ ಮಾತುಗಳೂ ಕೇಳಿಬಂದವು.

ನರೇಂದ್ರ ಚವಡಾಳರು ಇಂಥ ಯಾವ ಮಾತುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ಸಮೀಪದ ಬಿದರಳ್ಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಾಯಿಸಿದರು. ಅದು ತುಂಗಭದ್ರಾ ನದಿತೀರದ ಊರು. ಅಲ್ಲಿನ ಹೊಳೆದಂಡೆಯಲ್ಲಿ ಇವರ ತೋಟವೂ ಒಂದಿತ್ತು. ಆ ತೋಟದ ನಿರ್ವಹಣೆಯನ್ನು ತಾವೇ ಕೈಗೆತ್ತಿಕೊಂಡ ಚವಡಾಳರು ತೋಟದ ಸುತ್ತ ನೂರಾರು ಸಾಗವಾನಿ, ಅಕೇಶಿಯಾ, ಬೀಟೆ, ಹೊನ್ನೆ ಮೊದಲಾದ ಸಸಿಗಳನ್ನು ಹಚ್ಚಿಸಿದರು. ಜೊತೆಗೆ ಹೈನುಗಾರಿಕೆಗೆ ಅಗತ್ಯವಾದ ವಿವಿಧ ಜಾತಿಯ ಹುಲ್ಲು ಬೆಳೆಸಿದರು. ಹೀಗೆ ಆಕಳಿನ ಸಾಕಾಣಿಕೆ ಬೇಕಾದ ಸಿದ್ಧತೆ ಮಾಡಿಕೊಂಡ ಅವರು, ತಮ್ಮ ಮೊದಲ ಆಕಳನ್ನು ಜೋಪಾನ ಮಾಡತೊಡಗಿದರು. ಅದು ದಿನಕ್ಕೆ ಏನಿಲ್ಲವೆಂದರೂ 25ರಿಂದ30 ಲೀಟರು ಹಾಲು ಕೊಡುತಿತ್ತು.

ಹೀಗೆ ಆರೇಳು ತಿಂಗಳಲ್ಲೆ ಹಾಲಿನ ಆದಾಯ ಹತ್ತು ಹನ್ನೆರಡು ಸಾವಿರದ ಹತ್ತಿರಕ್ಕೆ ಬಂದಿತ್ತು. ಆ ವರ್ಷ ಅದೇ ಆಗ ಚಳಿಗಾಲ ಆರಂಭವಾಗಿತ್ತು. ಒಕ್ಕಲಾಟದ ಕೆಲಸಗಳು ಸುರುವಾಗಿದ್ದವು. ಆಗಿನ ಒಕ್ಕಲಾಟವೆಂದರೆ ತಿಂಗಳಾನುಗಟ್ಟಲೆ ಮಾಡುವ ಕೆಲಸವಾಗಿತ್ತು. ಖಣ ಸಿದ್ಧಗೊಳಿಸುವುದು, ಕಲ್ಲಿನ ದುಂಡಿ ಹೊಡೆಯುವುದು, ರಾಶಿ ಮಾಡುವುದು ಇವೆಲ್ಲ ಮುಗಿದ ಮೇಲೆ ಹಗಲುರಾತ್ರಿ ಎನ್ನದೇ, ಹೂಲಿಗೋ ಹೂಲಿಗೋ ಎನ್ನುತ್ತಾ ಗಾಳಿಯನ್ನೇ ಹುರಿದುಂಬಿಸುತ್ತ , ಅದು ಬಿಟ್ಟಾಗ ತೂರಬೇಕಿತ್ತು! ಇದನ್ನೆಲ್ಲ ಗಮನಿಸಿದ ಚವಡಾಳರು ಅದೇ ಆಗ ಮಾರುಕಟ್ಟೆಯಲ್ಲಿ ಲಭ್ಯ‌ವಿದ್ದ ಒಕ್ಕುವ ಯಂತ್ರವನ್ನು ತಂದರೆ ಎಷ್ಟೊಂದು ಅನುಕೂಲ ಎಂದು ಯೋಚಿಸಿದರು. ಹೀಗೆ ಯೋಚಿಸಿದ್ದೇ ಜೆರ್ಸಿ ಆಕಳಿನ ಹಾಲಿನಿಂದ ಬಂದಿದ್ದ ಹಣಕ್ಕೆ ಮತ್ತೊಂದಿಷ್ಟು ಸೇರಿಸಿ ಒಂದು ಒಕ್ಕುವ ಯಂತ್ರವನ್ನು ತಂದೇ ಬಿಟ್ಟರು. ಅದರಿಂದ ತಿಂಗಳಾನುಗಟ್ಟಲೇ ಒಕ್ಕುವ ತಾಪತ್ರಯ ತಪ್ಪಿದ್ದರಿಂದ ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಅಲ್ಲದೇ, ಜೆರ್ಸಿ ಆಕಳಿನಿಂದ ಇಷ್ಟೊಂದು ಲಾಭವಿದೆಯೆ ಎಂದು ಅನೇಕರು ಆಶ್ಚರ್ಯಪಟ್ಟರು. ನಂತರ ಚವಡಾಳರ ಹಾದಿ ಸುಗಮವಾಯಿತು. ಇವರ ಕೆಲಸಕ್ಕೆ ಮನೆಯ ಹಿರೀಕರು ಬೆಂಬಲವಾಗಿ ನಿಂತರು. ಆಕಳುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯಿತು. ಹಾಲು ಉತ್ಪಾದನೆಯೂ ಹೆಚ್ಚಿತು. ಈ ಕಾರಣಕ್ಕೆ ತಾವೆ ಅಲೆದಾಡಿ ಬಿದರಳ್ಳಿಯಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘವನ್ನೂ ಸ್ಥಾಪಿಸಿದರು. ಇದು ಗ್ರಾಮದ ಅನೇಕ ಯುವಕರಿಗೆ ತಾವೂ ಹೈನುಗಾರಿಕೆಯಲ್ಲಿ ತೊಡಗಲು ಉತ್ತೇಜನ ನೀಡಿತು.

ಒಮ್ಮೆ ಚವಡಾಳರು ಬಾಲೇಹೊಸೂರಿನಲ್ಲಿದ್ದ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದ್ದಕ್ಕಿದ್ದಂತೆ ಇಬ್ಬರು ಇವರನ್ನು ಹುಡುಕಿಕೊಂಡು ಬಂದು, `ಡಾಕುಟ್ರೇ, ನೀವೀವತ್ತೆ ನಮ್ಮೂರಿಗೆ ಬರಬೇಕು. ನೀವ್ ಬಂದ್ರೆ ಮಾತ್ರ ನಮ್ಮ ಭೀಮ ಉಳೀತಾನೆ... ಇಲ್ಲಾಂದ್ರೆ ಅವ್ನು ನಮ್ಮನ್ನ ಬಿಟ್ಟೋಗ್ತಾನೆ' ಎಂದು ಗದ್ಗದಿತ ಕಂಠರಾಗಿ ಬೇಡಿಕೊಂಡರು. ಇವರಿಗೆ ದಿಗಿಲಾಗಿ, ಯಾವ ಭೀಮ, ಏನ್ ಕಥೆ ಅಂತೆಲ್ಲ ವಿಚಾರಿಸಿದರು. ಆಗ ಹಿರಿಯರಂತಿದ್ದ ಯಜಮಾನರು, ` ನನ್ನ ಹೆಸರು ಹಾಲಪ್ಪರೀ, ನಾವು ಕೋಸಲಾಪುರದಿಂದ ಬಂದೀವಿ. ಭೀಮಾ ನಮ್ಮನೀ ಎತ್ತು ರೀ, ಅಂವಾ ನಿನ್ನೆಯಿಂದ ಉಚ್ಛೀನ ಹೊಯ್ದಿಲ್ಲ. ಇವತ್ ಅಂತೂ ಅಂವಗ ಭಾಳ ತ್ರಾಸಾಗೇತಿ. ನೀವು ಬರಾಕ ಬೇಕರೀ ಸರ...'ಎಂದು ನಿಟ್ಟುಸಿರಿಟ್ಟರು.

ಕೋಸಲಾಪುರ ಶಿರಹಟ್ಟಿ ತಾಲೂಕಿನ ಊರು. ಬೆಳ್ಳಟ್ಟಿಯಿಂದ ನಾಲ್ಕೈದು ಕಿ.ಮೀ. ಅಂತರದಲ್ಲಿದೆ. ಚವಡಾಳರು ಎತ್ತಿಗೆ ಆರಾಮವಿಲ್ಲದುದನ್ನು ಕೇಳಿದವರೆ, ಅವರ ಊರಿಗೆ ಹೋಗಲು ಸಿದ್ಧರಾದರು. ಆದರೆ, ಅಲ್ಲಿಗೆ ಹೋಗುವುದು ಹೇಗೆಂಬುದೇ ದೊಡ್ಡ ಪ್ರಶ್ನೆಯಾಯಿತು. ಆಗ, ಈಗಿನಂತೆ ರಸ್ತೆ, ಸಾರಿಗೆ ಸಂಪರ್ಕಗಳೂ ಇರಲಿಲ್ಲ. ಹಳ್ಳಿಗಳಿಗೆ ಮುಂಜಾನೆ, ಸಂಜೆ ಹೆಚ್ಚೆಂದರೆ ಕೆಲ ಹಳ್ಳಿಗಳಿಗೆ ಮಾತ್ರ ವಸ್ತಿ ಬಸ್ಸು ಬರುತಿದ್ದವು.  ಇವೆಲ್ಲವೂ ಮೂಲಿಕಟ್ಟಿನ ಊರುಗಳೇ. ಕೋಸಲಾಪುರಕ್ಕೆ ಹೋಗಬೇಕೆಂದರೆ ಶಿರಹಟ್ಟಿಗೋ, ಬೆಳ್ಳಟ್ಟಿಗೋ ಇಲ್ಲವೇ ಲಕ್ಶ್ಮೇಶ್ವರಕ್ಕೆ ಹೋಗಿಯೆ ಬಸ್ಸು ಹಿಡಿಯಬೇಕು. ಆದರೆ, ತಕ್ಷಣಕ್ಕೆ ಬಾಲೇ ಹೊಸೂರಿನಿಂದ ಆ ಊರುಗಳಿಗೂ ಬಸ್ಸಿರಲಿಲ್ಲ. ಇದಕ್ಕೆ ಪರಿಹಾರವೆ ಇಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿತ್ತು. ಚವಡಾಳರು ಬರುತ್ತಾರೋ ಏನಿಲ್ಲವೋ ಎಂಬ ಆತಂಕ ಆ ರೈತರ ಮುಖವನ್ನು ಕಪ್ಪಾಗಿಸಿತ್ತು.

`ನಡ್ರೀ, ನಡಕೊಂತನ ಹೋಗೋಣ' ಎಂದರು ಡಾಕ್ಟ್ರು. ಹಾಲಪ್ಪಜ್ಜನ ಮುಕದಲ್ಲೊಮ್ಮೆ ನಿರಾಳ ನಗು ಮಿಂಚಿ, `ನಡ್ರೀ ಸರ, ನಿಮಗ ಪುಣ್ಯೇವು ಬಂತು.' ಎಂದ. ಮೂವರು ಮುಂದಡಿ ಇಟ್ಟೇ ಬಿಟ್ಟರು.

ಮೂವರೂ ನಾಗರಮಡುಗೆ ಬಂದರು. ಅಲ್ಲಿಯೆ ಮನೆಯಲ್ಲಿ ಚಾ,ತಿಂಡಿ ಮುಗಿಸಿ ಬೆಳ್ಳಟ್ಟಿಯತ್ತ ಹೆಜ್ಜೆ ಹಾಕಿದರು. ಅಲ್ಲಿಗೆ ಹೊತ್ತುತ್ತು ಮುನುಗಿತಾದರೂ ಇವರ ನಡಿಗೆ ನಿಲ್ಲಲಿಲ್ಲ. ಅಂತೂ ರಾತ್ರಿ ಒಂದರ ಸುಮಾರಿಗೆ ಕೋಸಲಾಪುರ ತಲುಪಿದರು. ಹಾಲಪ್ಪಜ್ಜನ ಎತ್ತು ಭೀಮ, ವಿಚಿತ್ರವೇದನೆ ಪಡುತ್ತ ಅರೆಪ್ರಜ್ಞಾವಸ್ಥೆ ತಲುಪಿದ್ದ. ಎತ್ತನ್ನು ಪರೀಕ್ಷಿಸಿದ ಚವಡಾಳರು ಅದಕ್ಕೆ ತಕ್ಷಣದ ಚಿಕಿತ್ಸೆ, ಅಗತ್ಯ ಮಸಾಜು ಮಾಡಿದರು.

ಮೂರು ದಿನ ಕೋಸಲಾಪುರದ ಹಾಲಪ್ಪಜ್ಜನ ಮನೆಯಲ್ಲೆ ಉಳಿದು ಚಿಕಿತ್ಸೆಯನ್ನು ಮುಂದುವರೆಸಿದರು. ನಾಲ್ಕನೇ ದಿನಕ್ಕೆ ಭೀಮ ಉಚ್ಛೆ ಹೊಯ್ದ. ಅದರ ದೇಖರೇಕಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ ನರೇಂದ್ರನಾಥ ಚವಡಾಳರು ಅವಶ್ಯವಿರುವ ಔಷಧಿಗಳನ್ನು ಬರೆದುಕೊಟ್ಟು ತಾವಿನ್ನು ನಾಗರಮಡುವಿಗೆ ತೆರಳುವುದಾಗಿ ತಿಳಿಸಿದರು. ಅವರು ಊರಿಗೆ ಹೋಗಲು ಬೇಕಾದ ವಾಹನವ್ಯವಸ್ಥೆ  ಮಾಡಲು ಹೊರಟ , ಚವಡಾಳರ ಅಂತಃಕರಣಕ್ಕೆ ಮನದಲ್ಲೇ ಶರಣೆಂದಿದ್ದ.