ಭೂ ಪರಿವರ್ತನೆ; ವಿವಾದದಲ್ಲಿ ಗಿರಿಜನ ಕೇಂದ್ರದ ಡಾ.ಸುದರ್ಶನ್

ಮ್ಯಾಗೆಸ್ಸೆ ಪ್ರಶಸ್ತಿಗೂ ಭಾಜನವಾಗಿರುವ ಡಾ.ಸುದರ್ಶನ್ ಲೋಕಾಯುಕ್ತದಲ್ಲೂ ಸೇವೆಗೈದಿದ್ದಾರೆ. ಬಿ.ಆರ್. ಹಿಲ್ಸ್ ನಲ್ಲಿ ಗಿರಿಜನರಿಗಾಗಿ ಮಾಡುತ್ತಿರುವ ಸೇವೆಯಿಂದ ಹೆಸರೂ ಪಡೆದಿದ್ದಾರೆ. ಅಂತೆಯೇ ಇವರ ಸುತ್ತಲೀಗ ವಿವಾದಗಳೂ ಮೆತ್ತಿಕೊಳ್ಳುತ್ತಿವೆ.

ಭೂ ಪರಿವರ್ತನೆ; ವಿವಾದದಲ್ಲಿ ಗಿರಿಜನ ಕೇಂದ್ರದ ಡಾ.ಸುದರ್ಶನ್

ಬಿಳಿಗಿರೀ ರಂಗಯ್ಯಾ,,,, ಎಂಬ ಹಾಡು ಕೇಳುತ್ತಿದ್ದಂತೆಯೇ ರಮ್ಯ ಮನೋಹರ ಬಿಳಿಗಿರಿ ರಂಗನ ಬೆಟ್ಟ ನೆನಪಾಗದೆ ಇರಲು ಅಸಾಧ್ಯ.

ಚಾಮರಾಜನಗರ ಜಿಲ್ಲೆಗೆ ಸೇರಿರುವ ಈ ಪ್ರಕೃತಿ ಧಾಮ, ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ಸೇರಿದೆ. ಬಿ.ಆರ್.ಹಿಲ್ಸ್ ಎಂದೇ ಚಿರಪರಿಚಿತರಾಗಿರುವ ಇಲ್ಲಿ ಸೋಲಿಗ ಬುಡಕಟ್ಟು ಸಮುದಾಯವಿದೆ. ಇವರ ಕಲ್ಯಾಣಕ್ಕಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಎಂಬ ಸ್ವಯಂ ಸೇವಾ ಸಂಘವಿದೆ.ಇದನ್ನು ಹುಟ್ಟು ಹಾಕಿ ನಡೆಸಿಕೊಂಡು ಬರುತ್ತಿರುವವರು ಡಾ. ಎಚ್. ಸುದರ್ಶನ್.

ಮ್ಯಾಗೆಸ್ಸೆ ಪ್ರಶಸ್ತಿಗೂ ಭಾಜನವಾಗಿರುವ ಡಾ.ಸುದರ್ಶನ್ ಲೋಕಾಯುಕ್ತದಲ್ಲೂ ಸೇವೆಗೈದಿದ್ದಾರೆ. ಬಿ.ಆರ್. ಹಿಲ್ಸ್ ನಲ್ಲಿ ಗಿರಿಜನರಿಗಾಗಿ ಮಾಡುತ್ತಿರುವ ಸೇವೆಯಿಂದ ಹೆಸರೂ ಪಡೆದಿದ್ದಾರೆ. ಅಂತೆಯೇ ಇವರ ಸುತ್ತಲೀಗ ವಿವಾದಗಳೂ ಮೆತ್ತಿಕೊಳ್ಳುತ್ತಿವೆ.

ವಿವೇಕಾನಂದ ಗಿರಿಜನ ಟ್ರಸ್ಟ್, ಕರುಣಾ ಟ್ರಸ್ಟ್, ವಿವೇಕ ಕರುಣ ಫೌಂಡೇಷನ್ ಈ ಮೂರು ಹೆಸರಲ್ಲೂ ಇವರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಬೇರೆ ಬೇರೆ ಹೆಸರಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಪ್ರತ್ಯೇಕ ತನಿಖೆ ಮಾಡುವ ಅಗತ್ಯವಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜತೆಗೆ ಈ ಸಂಸ್ಥೆ ಬೇರೊಂದು ಕಾರಣ ಕೊಟ್ಟು ಭೂ ಪರಿವರ್ತನೆ ಮಾಡಿಕೊಂಡಿದ್ದನ್ನು ಇನ್ನಾವುದಕ್ಕೋ ಬಳಸಿ, ವಾಣಿಜ್ಯ ಉದ್ದೇಶದ ರೆಸಾರ್ಟ್ ನಡೆಸುತ್ತಿದ್ದಕ್ಕೂ ಕೊಕ್ಕೆ ಹಾಕಿದ್ದಾರೆ.

ಏನು ಪ್ರಕರಣ?

2002 ರ ಸೆಪ್ಟೆಂಬರ್ 9 ರಲ್ಲಿ ಸರ್ವೋಚ್ಚ ನ್ಯಾಯಾಲಯ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಭೂಮಿ ಸ್ವರೂಪವನ್ನು ಮುಂದಿನ 50 ವರ್ಷಗಳವರೆಗೆ ಬದಲಿಸುವಂತಿಲ್ಲ ಎಂದು ತೀರ್ಪಿತ್ತಿದೆ. ಆದರೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬಿಳಿಗಿರಿ ಬೆಟ್ಟ ಗ್ರಾಮದ ಸರ್ವೆ ಸಂಖ್ಯೆ 4/68 ರಲ್ಲಿ `ಶಿಕ್ಷಣ ಸಂಸ್ಥೆ’ ತೆರೆಯಲು ಎಂಟು ಎಕರೆ ಭೂಮಿಯನ್ನು ಪರಿವರ್ತನೆ ಮಾಡಿಕೊಡುವಂತೆ ಟ್ರಸ್ಟ್ ಕೋರಿಕೊಂಡಿದ್ದರ ಅನುಸಾರ, ಭೂ ಪರಿವರ್ತನೆ ಆದೇಶವನ್ನು 2009 ರ ಸೆಪ್ಟೆಂಬರ್ 16 ರಂದುಹೊರಡಿಸಲಾಗಿತ್ತು. ಅದೇ ವರ್ಷದ ಡಿಸೆಂಬರ್ 8 ರಂದು, ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರ ತೆರೆಯಲು ಎಂಬುದಾಗಿ ಉದ್ದೇಶವನ್ನು ಬದಲಿಸಿಕೊಂಡು ಅನುಮತಿ ಪಡೆದಿತ್ತು.

ವಿವೇಕ ಕರುಣಾ ಫೌಂಡೇಷನ್ ಪ್ರವಾಸೋದ್ಯಮ ಇಲಾಖೆಯಿಂದ 1.36 ಕೋಟಿ ರೂಪಾಯಿ ಅನುದಾನವನ್ನೂ ಪಡೆದುಕೊಂಡು ಇಲ್ಲಿ `ಗೊರುಕನ’ ಹೆಸರಲ್ಲಿ ವಾಣಿಜ್ಯ ಉದ್ದೇಶದ ರೆಸಾರ್ಟ್ ಕಟ್ಟಿದೆ. ಆಯುರ್ವೇದ ಚಿಕಿತ್ಸೆ ನಡೆಯುತ್ತಿಲ್ಲ ಎಂಬ ಆರೋಪಗಳಿದ್ದವು. ಜತೆಗೆ ಆರು ಎಕರೆಯಷ್ಟು ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರುಗಳೂ ಇದ್ದು, ಜಿಲ್ಲಾಡಳಿತ ಆರಕ್ಷಕರ ನೆರವಿನೊಡನೆ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಂಡಿದ್ದ ಘಟನೆಗಳೂ ನಡೆದಿದ್ದವು. ಡಾ. ಸುದರ್ಶನ್ ಇದನ್ನೆಲ್ಲ ತಳ್ಳಿಹಾಕುತ್ತಲೇ ಬರುತ್ತಿದ್ದರು. ತಮಗಿರುವ ಪ್ರಭಾವದಿಂದಾಗಿ ಎಲ್ಲವನ್ನೂ ಸಕ್ರಮ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿದ್ದವು.

2008 ರಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ಕೊಡಿ ಎಂದು ಸಂಸ್ಥೆ ಮಾಡಿಕೊಂಡಿದ್ದ ಮನವಿಯನ್ನು ಅರಣ್ಯ ಇಲಾಖೆ ತಿರಸ್ಕರಿಸಿತ್ತು. 2015 ರಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಜಿಲ್ಲಾಡಳಿತಕ್ಕೆ ಪತ್ರ ಬರೆದು ಭೂ ಪರಿವರ್ತನೆಯನ್ನು ರದ್ದುಗೊಳಿಸುವಂತೆ ಕೋರಿದ್ದರು. ಇದೆಲ್ಲದರ ನಡುವೆಯೂ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಭೂ ಪರಿವರ್ತನೆ ಮಾಡಿಸಿಕೊಂಡು ವಾಣಿಜ್ಯಾತ್ಮಕ ರೆಸಾರ್ಟ್ ನಡೆಯುತ್ತಿರುವ ಬಗ್ಗೆ 2017 ರ ಜುಲೈ 28 ರಂದು ಜಿಲ್ಲಾಡಳಿತ ರಚಿಸಿದ್ದ ಸಮಿತಿ ಸ್ಥಳ ಪರಿಶೀಲಿಸಿ, ಉದ್ದೇಶಕ್ಕೆ ತದ್ವಿರುದ್ದವಾಗಿ ಭೂ ಬಳಕೆಯಾಗಿದೆ ಎಂಬ ವರದಿ ಕೊಟ್ಟಿತ್ತು. ಅದರ ಮೇರೆಗೆ ಈಗ ಚಾಮರಾಜನಗರ ಜಿಲ್ಲಾಧಿಕಾರಿ ಭೂ ಪರಿವರ್ತನೆ ಅದೇಶ ರದ್ದುಗೊಳಿಸಿದ್ದಾರೆ. ಜತೆಗೆ ಬೇರೆ ಬೇರೆ ಹೆಸರಲ್ಲಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪ್ರತ್ಯೇಕ ತನಿಖೆ ಅಗತ್ಯವಿದೆ ಎಂದೇಳಿದ್ದಾರೆ.

ಗೊರುಕನ ಹೆಸರಿನ ರೆಸಾರ್ಟ್ ಈಗ ಮುಚ್ಚುವಂತಾಗಿದ್ದು, ಇದೆಲ್ಲದರ ಕೇಂದ್ರಿತ ವ್ಯಕ್ತಿ ಡಾ.ಸುದರ್ಶನ್ ನ್ಯಾಯಾಲಯದ ಮೊರೆಹೋಗಲಿದ್ದಾರಾದರೂ, ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ ಎಂಬುದಂತೂ ದಿಟ