ಛಡೀ ಚಂ ಚಂ ವಿದ್ಯಾ ಘಂ ಘಂ!

ಛಡೀ ಚಂ ಚಂ ವಿದ್ಯಾ ಘಂ ಘಂ!

ಮೊನ್ನೆ ಹೊಲದಿಂದ ಮನೆಗೆ ಬರುತಿದ್ದೆ. ಮಾಳಗುಡ್ಡಪ್ಪನವರ ಗುಡ್ಡಪ್ಪ ಮಾವ ಜೊತಿಯಾದ. `ಮನ್ಯಾಗ ಕುಂತು ಕಾಲ ಕಳ್ಯೋದೆ ಕಷ್ಟಾಗೈತಿ ನೋಡ್ರೀ ಗೌಡ್ರ, ಪುರಸೊತ್ತಿಲ್ಲದ ಕೆಲಸಾ ಮಾಡ್ಕೊಂಡಿದ್ದವ್ರು ನಾವು, ಈಗ ಕೈಯಾಗ ಕೆಲ್ಸಾ ಇಲ್ದ ಮನಸಿಗೆ ಸಮಾಧಾನ ಇಲ್ದಂಗಾಗೇತಿ' ಅಂದ. ಮುಂದುವರೆದು ` ವಯಸ್ಸಾದ ಮ್ಯಾಲ ಇರ್ಬಾರ್ದ್ರಿ,ಇನ್ನೂ ಮೈಯಾಗ ಕಸುವಿರ್ತನ ಹೋಗೋದ ಬೇಸಿ` ಅಂತ ಶಿವನ್ನ ನೆನೆಸಿದ.ಅವನ ಮಾತಿಗೆ ಏನು ಉತ್ತರಿಸಬೇಕೆಂಬುದು ತೋಚದೆ ಸುಮ್ಮನೆ ಅವನೊಂದಿಗೆ ಹೆಜ್ಜೆ ಹಾಕಿದ್ದೆ.

ಮಾಳಗುಡ್ಡಪ್ಪನವರ ಗುಡ್ಡಪ್ಪ ಮಾವನಿಗೆ ಈಗ ಎಪ್ಪತ್ತರ ಸಮೀಪ ವಯಸ್ಸು. ಅಪ್ಪನ ಗೆಳೆತನದಿಂದಾಗಿ ಅಪ್ಪ ಇದ್ದಾಗ ಮತ್ತು ಈಗಲೂ ನಮ್ಮ ಕುಟುಂಬದ ಹಿತೈಷಿಯಾಗಿ ಅವನ ಒಡನಾಟ ಮುಂದುವರೆದಿದೆ‌. ಚಿಕ್ಕಂದಿನಿಂದಲೂ ನಮಗೆ ಅವನು ಮಾವನೆ.  ಹಾಗೆ ಕರೆದೆ ರೂಢಿ. ಹಾಗೆ ನೋಡಿದರೆ ನಾವೇನೂ ರಕ್ತ ಸಂಬಂಧಿಗಳಲ್ಲ‌. ಅವರು ಕುರುಬರು, ನಾವು ಗಾಣಿಗರು. ಆದರೂ ನಮ್ಮ ನಡುವೆ ಈ ಜಾತಿ ಭೇದ ಇಣುಕಿದ್ದೇ ಇಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಇತ್ತೀಚಿನವರಗೂ ಇಂಥ ಸಾಮಾಜಿಕ ಸೌಹಾರ್ದ ಹಾಸುಹೊಕ್ಕು. ಜಾತಿ, ಧರ್ಮಗಳನ್ನು ಮೀರಿದ ಈ ಅಳಿಯ ಮಾವ, ಕಾಕಾ ದೊಡ್ಡಪ್ಪರ ಸಂಬಂಧಗಳು ಹಳ್ಳಿಗರ ಮನಸನ್ನು ಒಂದಾಗಿ ಬೆಸೆದಿದ್ದವು. ಅಪ್ಪ ಮತ್ತು ಗುಡ್ಡಪ್ಪನ ಗೆಳೆತನದಿಂದಾಗಿ ಅವನೂ ನಮ್ಮ ಮನೆಯವನೆ ಆಗಿಬಿಟ್ಟಿದ್ದ. ಅವನು ನಮ್ಮ ಮನೆಗೆ ಬಂದರೆ, ಇಲ್ಲವೆ, ಅಪ್ಪ ಅವರ ಮನೆಗೆ ಹೋದರೆ ಚಾ, ಊಟದ ನಂತರವೂ ಅವರ ಮಾತು ಮುಂದುವರೆಯುತಿದ್ದವು. ಹೊಲ, ಮನೆ ಕೆಲಸಗಳು, ಸುತ್ತಮುತ್ತಲಿನ ಆಗುಹೋಗುಗಳು, ರಾಜಕೀಯ ಮೊದಲಾಗಿ  ಸಾಗುತಿದ್ದ ಅವರ ಮಾತುಕತೆಗೆ ಕೊನೆ ಎಂಬುದೇ ಇರಲಿಲ್ಲವೇನೋ.

ಗುಡ್ಡಪ್ಪ ಮಾವ ಈಗಲೂ ಅಷ್ಟೇ, ಅವನೊಂದಿಗೆ ಇದ್ದರೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ತನ್ನೊಂದಿಗೆ ಇದ್ದವರು ಸಣ್ಣವರು, ದೊಡ್ಡವರು ಯಾರೇ ಆಗಿರಲಿ, ಸೊಂಟದಾಗಿಂದ ಅಡಿಕಿ ಎಲೀ ಕಂಚೀ ಬಿಚ್ಚಿ `ಹ್ಞೂ, ಹಿಡಿ ಅಡ್ಕೆಲಿ ಹಾಕ್ಯ' ಅಂತ ತಾಂಬೂಲ ಕೊಟ್ಟು ಸಲಿಗೆಯಿಂದ ಮಾತನಾಡುವುದು ಅವನ ರೂಢಿ.  ಹಾಗೇ ತನ್ನ ಅನುಭವದ ಬುತ್ತಿಯನ್ನು ಎಲ್ಲರಿಗೂ ಹಂಚಿಕೊಳ್ಳುತ್ತಲೇ ಪರಿವರ್ತನೆಗೊಂಡ ಬದುಕಿನ ಓಟದ ಬಗ್ಗೆ ಬೆರಗು ಪಡುತ್ತಾನೆ.

ಮುಂದೆ ಸಾಗುತ್ತಲೇ ಅವನ ಮಾತು ತನ್ನ ಬಾಲ್ಯದ ದಿನಗಳತ್ತ ಜಾರಿತು. ` ಗೌಡ್ರ ಈಗಿನ ಸಾಲಿ ಏನ ಬಿಡ್ರೀ, ನಾವ್ ಕಲೀವಾಗಿನ ಶಿಕ್ಷಣ, ಶಿಸ್ತು ಈಗಿನ ಮಕ್ಕಳಿಗೆ ಸಿಗ್ತಾ ಇಲ್ಲ. ಆಗ ಬಿನ್ನೆತ್ತ ಎರಡು ವರ್ಷ, ಸುಸಂಸ್ಕೃತ, ಬಹಿಷ್ಕೃತ, ಇಂಥವು ಎರಡು ಒತ್ತಕ್ಷರದ ಶಬ್ದಗಳನ್ನ ಅನ್ನಲಿಕ್ಕೆ ಬಂದರ ಒನ್ನೆತ್ತಕ್ಕ ಸೇರಿಸೋರು. ಒನ್ನೆತ್ತಕ್ಕ ಮೂವತ್ತರ ತನಕ ಮಗ್ಗಿ ಬಾಯಿಪಾಠ ಹೇಳಾಕ ಬಂದ್ರ ಎರಡನೆತ್ತಕ್ಕ ಸೇರಿಸೋರು, ಮೂರನೇತ್ತಕ್ಕ ಆಗಲೇ ಗುಣಾಕಾರ, ಭಾಗಾಕಾರ ಎಲ್ಲ ಕಲೀಬೇಕಿತ್ತು. ನಾಲ್ಕನೆ ಇಯುತ್ತೆಗೆ, ತ್ರಿಭುಜ, ಚತುರ್ಭುಜ,  ಶಂಖಗಳ ಕ್ಷೇತ್ರಫಲ, ಸರಳಬಡ್ಡಿ, ಚಕ್ರಬಡ್ಡಿ ಲೆಕ್ಕಗಳೆಲ್ಲ ಬರಬೇಕಿತ್ತು, ಏನಾದ್ರೂ ತಪ್ಪಿದರೆ ಕಿವಿ ಹಿಡಿದು ನಿಲ್ಲೋದ್ರಿಂದ ಹಿಡಿದು ನಾನಾ ನಮೂನೀ ಶಿಕ್ಷೆ ಕೊಡೋರು. ಪಾಲಕರು ಕೂಡ ಆವಾಗ ಇದರೊಳಗ ಮೂಗು ತೂರಿಸ್ತಿದ್ದಿಲ್ಲ, ಯಾಕಂದ್ರ ಎತ್ಲಾಗರ ನಮ್ಮ ಹುಡುಗ ನಾಲ್ಕಕ್ಷರ ಕಲ್ತು ಶ್ಯಾಣ್ಯಾಂವ ಆದ್ರ ಸಾಕು ಅನ್ನೋ ಮನೋಭಾವ ಅವರ್ದಾಗಿತ್ತು. 

ಒಂದ್ಸಲ ಏನಾತು ಅಂದ್ರ  ಗೌಡ್ರ ನಾನಾವಾಗಿನ್ನು ಮೂರನೆತ್ತ ಇದ್ದೆ. ನಮಗ ಆವಾಗ ಗುರುಶಾಂತಯ್ಯ ಆಂತ ಮಾಸ್ತರಿದ್ದರು. ಅವತ್ತೊಂದಿನ ನನಗ ಇಪ್ಪತ್ತೆಂಟರ ಮಗ್ಗಿ ಕೈ ಕೊಟ್ಟುಬಿಟ್ಟವು. ಮಾಸ್ತರ ಕೈ ನನ್ನ ಕಪಾಳಕ್ಕ ಬಿತ್ತು. ಆ ಹೊಡ್ತ ಹ್ಯಾಂಗಿತ್ತು ಅಂದ್ರ ಮಾಸ್ತರ ಮೂರೂ ಬೆರಳು ನನ್ನ ಕಪಾಳದ ಮ್ಯಾಲ ಮೂಡಿದ್ದವು. ಸಾಲಿಯಿಂದ ಮನೀಗೆ ಬಂದೆ. ನಮ್ಮ ವ್ವ ನನ್ನ ಮಕ ನೋಡಿದಾಕೇನ, `ಇದೇನ್ಲಾ ಗುಡ್ಡಾ ಕಪಾಳದ ಮ್ಯಾಲ ಗೆರಿ ಮೂಡ್ಯಾವು. ಏನ್ ಮಾಡ್ಕಂಡಿ" ಅಂತ ಕೇಳೇಬಿಟ್ಟಳು. ನಾನು ಸಾಲಿಯಲ್ಲಿ ನಡೆದ ಸಂಗತಿ ತಿಳಿಸಿದೆ. ಸಂಜೀಕಡೆ ಅಪ್ಪ ಹೊಲದಿಂದ ಮನೀಗೆ ಬರುತ್ತಲೆ, ನಾಳೆ ಸಾಲಿಗೆ ಹೋಗಿ ಆ ಮಾಸ್ತರಗ ಸಲ್ಪ ಹೇಳಿಬರಬಾರದ? ಹುಡುಗನ್ನ ಹೀಂಗ ಹೊಡೆಯೋದು ನೋಡಿಲ್ಲೆ! ಅಂತ ಬಳಿಯಲ್ಲೆ ಇದ್ದ ನನ್ನ ಗೋಣು ತಿರುಗಿಸಿ ಅವನಿಗೆ ತೋರಿಸಿದಳು. ನಮ್ಮಪ್ಪ ನೋಡಿದವನ ` ಅಲೆಲೆ ಚೋಲ ಸಾಲಿ ಕಲಿಸ್ಯಾರಲ್ಲ ಮಾಸ್ತರು" ಎಂದು ನಕ್ಕು, ಊಂ ನಾಳೆ ಹೋಗಿ ಹೇಳಿ ಬರ್ತೀನಿ ಬಿಡು ಅಂದ.

ಮರುದಿನ ಅಪ್ಪ ನಿನ್ನೆ ಹೇಳಿದಂತೆಯೆ ಸಾಲಿಗೆ ಬಂದೆ ಬಿಟ್ಟ. ಮಾಸ್ತರು `ಏನ್ ಮಾರ್ತಾಂಡಪ್ಪ ಭಾಳದಿನಕ್ಕ ಇತ್ಲಾಗ ಹಾದಿ, ಮಗ ಸಾಲ್ಯಾಗದಾನ ಇಲ್ಲೊ ಅಂತ ನೋಡಾಕ ಬಂದೀಯೇನು? ಬಾ ಬಾ.. ಎಂದು ಅವನನ್ನು ಕೂಡಿಸಿದರು.

ನಿನ್ನೆ ನಡೆದ ವಿಷಯ ಮನೆಗೆ ತಲುಪಿದ್ದರ ವಾಸನೆಯೂ ಗುರುಶಾಂತಯ್ಯನವರಿಗೆ ಹತ್ತಿತ್ತು. ಇನ್ನು ಸುಮ್ಮನಿದ್ದರೆ ಮಾಸ್ತರು ಮತ್ತೇನು ಅಂತಾರೋ ಎಂದುಕೊಂಡನೇನೋ ನಮ್ಮಪ್ಪ ಕೂಡಲೇ `ಇವನ್ನ ಹಂಗ ಬಿಡಬ್ಯಾಡ್ರಿ, ನೀವ್ ಹೇಳಿದ್ದ ಅಂವಾ ಸರೀತ್ನೇಗ ಕಲೀಲಿಲ್ಲ ಅಂದ್ರ ಬಾಸುಂಡಿ ಏಳ್ಹಂಗ ಬಡೀರಿ" ಅಂದುಬಿಟ್ಟ.' ಎಂದು ಸುಮ್ಮನಾದ ಗುಡ್ಡಪ್ಪ ಮಾವನ ಮಾತಿಗೆ ನಾನು ನಗತೊಡಗಿದೆ. ನನ್ನೊಂದಿಗೆ ತಾನೂ ನಕ್ಕ ಅವನು `ಅವಾಗೀನ ಸಾಲೀ ಅಂದ್ರ ಹಂಗಿತ್ತು. ಛಡಿ ಚಂ ಚಂ, ವಿದ್ಯಾ ಘಂ ಘಂ ಅನ್ನೋರು. ಈಗ  ಛಡಿ ಚಮ್ ಚಮ್ಮೂ ಇಲ್ಲ; ವಿದ್ಯಾ ಘಂ ಘಮ್ಮೂ ಇಲ್ಲ' ಅನ್ನುತ್ತಿರುವಂತೆ ಇಬ್ಬರೂ ಊರು ತಲುಪಿದ್ದೆವು. ಗುಡ್ಡಪ್ಪ ಮಾವನ ಮಾತುಗಳು ವ್ಯಾಪಾರೀಕರಣಗೊಂಡಿರುವ ಇವತ್ತಿನ ಶಿಕ್ಷಣ ವ್ಯವಸ್ಥೆಯ ಅಡಿಪಾಯವೇ ಅಧ್ವಾನಗೊಂಡಿರುವುದನ್ನೆ ಆಡಿಕೊಳ್ಳುತ್ತಿವೆ ಎಂದೆನಿಸಿ, ಆತಂಕ ಮೂಡಿಸಿದವು.