ಬುದ್ಧನ ಭಿಕ್ಷಾಪಾತ್ರೆ: ಒಂದು ಅಸ್ಪಷ್ಟ ಚಿಂತನೆ

ಬುದ್ಧನ ಭಿಕ್ಷಾಪಾತ್ರೆ: ಒಂದು ಅಸ್ಪಷ್ಟ ಚಿಂತನೆ

ಇಂದು ಬುದ್ಧ ಪೂರ್ಣಿಮೆ. ಈ ಹಿನ್ನೆಲೆಯಲ್ಲಿ ಬುದ್ಧನ ಭಿಕ್ಷಾಪಾತ್ರೆ ಕುರಿತು ಚಿಂತಕ ಸಿ.ಎಸ್.ದ್ವಾರಕಾನಾಥ್ ಬರೆದಿದ್ದಾರೆ. ಬುದ್ಧ ಭಿಕ್ಷಾಪಾತ್ರೆಯ ಮೀಮಾಂಸೆ ಇಡೀ ಜಗತ್ತಿಗೆ ಬೆಳಕು ಚೆಲ್ಲಬಲ್ಲದು. ಈ ನಮ್ಮ ದೇಶದ ಘಾಸಿಗೊಂಡ ಆತ್ಮಕ್ಕೆ ಪ್ರೀತಿಯ ಸಾಂತ್ವನ ಸಿಕ್ಕಿ ಈ ದೇಶವೇ ಬುದ್ಧ ಭಾರತವಾಗುವತ್ತ ಮುನ್ನಡೆಯಬಹುದು ಎಂದು ಅವರು ಆಶಿಸಿದ್ದಾರೆ.

 

"ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ" ಎಂಬ ಲಂಕೇಶರ ಲೇಖನ ನನ್ನೊಳಕ್ಕೆ ಬುದ್ದನ ಪ್ರವೇಶವಾಗಲು ಕಾರಣವಾಯಿತು.

"ಈ ಭೂಮಿ ಮೇಲೆ ಹುಟ್ಟಿದ ಮಾನವ ಜನಾಂಗದಲ್ಲಿ  ಮೆದುಳು ಮತ್ತು ಹೃದಯವನ್ನು (thinking and feeling) ಸಮಾನಾಂತರವಾಗಿ ಇಟ್ಟುಕೊಳ್ಳಲು ಸಾಧ್ಯವಾದದ್ದು ಒಬ್ಬ ಬುದ್ದನಿಗೆ ಮಾತ್ರ" ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ನನ್ನಲ್ಲಿ ಬುದ್ದನ ಬಗ್ಗೆ ಇನ್ನಷ್ಟು ಕುತೂಹಲ ಕೆರಳಲು ಕಾರಣವಾಯಿತು.

ಕಡೆಗೆ ಬಾಬಾಸಾಹೇಬರ "ಬುದ್ದ ಅಂಡ್ ಹಿಸ್ ಧಮ್ಮ" ಓದಿದ ನಂತರವಷ್ಟೇ ಬುದ್ದನ ಬಗ್ಗೆ ಸ್ಪಷ್ಟವಾದ ತಿಳುವಳಿಕೆ, ಅರಿವೊಂದು ಮೂಡಲು ಸಾಧ್ಯವಾಯಿತು.

ಬುದ್ದ ಭಗವಾನರ ಬಗ್ಗೆ ಅರಿವು ಮೂಡಿದಂತೆಲ್ಲಾ ಇನ್ನಷ್ಟು ಅರಿಯುವ ಹಸಿವು ಹೆಚ್ಚಾಗುತ್ತದೆ! ಹುಡುಕಾಟ ಆರಂಭವಾಗುತ್ತದೆ, ಆಗಲೇ ಕಂಡಿದ್ದರಲ್ಲೆಲ್ಲಾ ಬುದ್ದ ದರ್ಶನವಾಗುತ್ತೆ! ಇಂತಹ ಹುಡುಕಾಟದಲ್ಲೇ ನನಗೆ "ಬುದ್ದನ ಭಿಕ್ಷಾಪಾತ್ರೆ" ಅಸ್ಪಷ್ಟವಾಗಿ ಸಿಕ್ಕಿದ್ದು!?

ಹತ್ತಾರು ವರ್ಷಗಳ ಹಿಂದೆ ಗೆಳೆಯ ಮತ್ತು ಕಲಾವಿದ ಎಂ.ಎಸ್.ಮೂರ್ತಿ ಸಿಕ್ಕರು. ನಾವಿಬ್ಬರೂ 'ಲಂಕೇಶ್ ಪತ್ರಿಕೆ' ಕಛೇರಿಯಲ್ಲಿ ಆಗಾಗ ಸೇರುತಿದ್ದೆವು‌. ಒಮ್ಮೆ ಅದೂ ಇದೂ ಮಾತನಾಡುತ್ತಾ ಬುದ್ಧನ ಭಿಕ್ಷಾಪಾತ್ರೆಗೆ ಬಂದೆವು. ನನ್ನಲ್ಲಿ ಬುದ್ಧನ ಭಿಕ್ಷಾಪಾತ್ರೆ ಆಗಲೇ ಅಸ್ಪಷ್ಟವಾಗಿ ಹರಳುಗಟ್ಟುತಿದ್ದ ಸಮಯ, ಆಗಲೇ ಎಂ.ಎಸ್.ಮೂರ್ತಿಯಲ್ಲಿ ಇದೊಂದು ಕಲಾಕೃತಿಯಾಗಿ ಮೂರ್ತರೂಪ ಪಡೆಯುತಿತ್ತು. ನಂತರ ಇದು ಮೂರ್ತಿಯವರಲ್ಲಿ ವಿಕಾಸವಾಗಿ 'the bowl' 'bikshapatra' ಮತ್ತು 'Buddha the light' (ಈ ಕಲಾಕೃತಿಗೆ ಇರಾನಿನ biennale international award ದೊರಕಿತು) ನಂತರ ಎಂ.ಎಸ್.ಮೂರ್ತಿ ಯವರಲ್ಲಿನ ಬುದ್ದನ ಬಗ್ಗೆ "ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆ A vessel for silence ಎಂಬ ಹಣೆಬರಹದಲ್ಲೇ ಒಂದು ಲೇಖನ ಬರೆಯಿತು. ಬುದ್ದನ ಭಿಕ್ಷಾಪಾತ್ರೆ ಎಂ.ಎಸ್.ಮೂರ್ತಿಯವರಿಗೆ ಜಾಗತಿಕವಾಗಿ ಸಾಕಷ್ಟು ಹೆಸರು ತಂದುಕೊಟ್ಟಿತು.

ಯಾವುದೇ ಮೀಮಾಂಸೆಗಳನ್ನು ಅರಿಯದ, ಧರ್ಮಸೂಕ್ಷ್ಮಗಳನ್ನು ತಿಳಿಯದ ನನ್ನಂತ ಸಾಮಾನ್ಯರಲ್ಲಿ ಸಾಮಾನ್ಯನಾದವನಿಗೆ ಮಾತ್ರ ಈ 'ಭಿಕ್ಷಾಪಾತ್ರೆ' ಒಂದು metaphor ಆಗಿ ಕಾಡುತ್ತಲೇ ಹೋಯಿತು! ಈಗಲೂ ಕಾಡುತ್ತಿದೆ ಕೂಡ !?

ಬುದ್ದಚರಿತ್ರೆಯಲ್ಲಿ ಈ 'ಭಿಕ್ಷಾಪಾತ್ರೆ' ಬರುವುದು ಬುದ್ದ ಅನಾವಶ್ಯಕವಾದುದನ್ನು ತ್ಯಜಿಸುವ ಅಥವ ನಿರಾಕರಣೆ ಮಾಡುವ ವ್ರತದಲ್ಲಿದ್ದಾಗ. ಬಿಕ್ಕು ಸುಜಾತ ಒಂದು ಚಿನ್ನದ ಭಿಕ್ಷಾಪಾತ್ರೆಯಲ್ಲಿ ಬುದ್ದ ಭಗವಾನರಿಗೆ ಹಾಲನ್ನ ತಂದು ಅರ್ಪಿಸುತ್ತಾಳೆ. ಬುದ್ದ ಇದನ್ನು 49 ಬಾಗ ಮಾಡುತ್ತಾ ಅಗತ್ಯವಾದಷ್ಟು ಮಾತ್ರ ಸೇವಿಸುತ್ತಾರೆ, ಚಿನ್ನದ ಭಿಕ್ಷಾಪಾತ್ರೆಯನ್ನು ನದಿಗೆ ಎಸೆಯುತ್ತಾರೆ. ಈ ಭಿಕ್ಷಾಪಾತ್ರೆ ಇನ್ನೂ ಯಾರಿಗೂ ಸಿಕ್ಕಿಲ್ಲ. ನಂತರ ಜಗತ್ತಿನಾದ್ಯಂತ ಬುದ್ದ ನಡೆದಾಡಿದಲ್ಲೆಲ್ಲಾ ಭಿಕ್ಷಾ ಪಾತ್ರೆಗಳು ಕಾಣಿಸಿಕೊಳ್ಳತೊಡಗಿದವು!  ಅಫ್ಘಾನಿಸ್ತಾನದ ಮ್ಯೂಸಿಯಂನಲ್ಲಿರುವ ಬೃಹತ್ ಭಿಕ್ಷಾಪಾತ್ರೆ ಬುದ್ದನದಲ್ಲವಂತೆ!? ಬಾಮಿಯಾನ್ ವ್ಯಾಲಿಯಲ್ಲಿದ್ದ,  ಈಚೆಗಷ್ಟೇ ಹೊಡೆದುರುಳಿಸಿದ ಬೃಹತ್ ಬುದ್ದ ಪ್ರತಿಮೆಗಳು ಬುದ್ದನದಲ್ಲವಾದರೆ ಈ ಭಿಕ್ಷಾಪಾತ್ರೆಯೂ ಬುದ್ದನದಾಗಿರಲ್ಲ!? ಅದಿರಲಿ, ಇದರ ಬಗ್ಗೆ ಮತ್ತೊಮ್ಮೆ ವಿವರವಾಗಿ ಬರೆಯುತ್ತೇನೆ.

ಜೀಸಸ್ ಮತ್ತು ಪೈಗಂಬರರಿಗಿಂತಲೂ ಸುಮಾರು ಸಾವಿರ ವರ್ಷ ಹಿಂದೆ ಇದ್ದು ಈ ಭೂಮಿಯನ್ನೇ ಪ್ರಭಾವಿಸಿದ್ದ ಬುದ್ದನ ಅರಿವು ಅವರಲ್ಲಿ ಇರಲಿಲ್ಲವೆಂದು ಹೇಳಲು ಸಾದ್ಯವೆ? ಈ ನಾಡಿನ ಬಸವಾದಿ ಶರಣರು, ದಾಸವರೇಣ್ಯರು, ಅನುಭಾವಿಗಳು, ಅರೂಡರು, ಸೂಫಿಸಂತರು ಸೇರಿದಂತೆ ಈ ದೇಶದ ಪ್ರಮುಖ ಬರಹಗಾರರಾದ ರವೀಂದ್ರನಾಥ ಠಾಗೋರ್ ರವರಿಂದ ಹಿಡಿದು ರಾಷ್ಟ್ರಕವಿ ಕುವೆಂಪುರವರನ್ನು ಒಳಗೊಂಡಂತೆ ಬುದ್ದನಿಂದ ಪ್ರಭಾವಿತರಾಗದ ಮಾನವೀಯ ಬರಹಗಾರರನ್ನು ಕಲ್ಪಿಸಿಕೊಳ್ಳುವುದುಂಟೆ? ಕಡೆಗೆ ಬುದ್ದನ ಭಿಕ್ಷಾಪಾತ್ರೆ ಮಾತಿಲ್ಲದೆ ಹೇಳುವುದಾದರೂ ಏನನ್ನು? ತುಂಬಿಕೊಳ್ಳುವುದು ಮತ್ತು ಖಾಲಿಯಾಗುವುದಷ್ಟೇ ಅಲ್ಲವೆ? ಬುದ್ದನ ಭಿಕ್ಷಾಪಾತ್ರೆ ದೇವಾಲಯದ ಕೊಳವೂ ಆಗಿರಬಹುದು ಗಲಬಾನೆಯೂ ಆಗಿರಬಹುದಲ್ಲವೆ? ನನ್ನ ಪಾಲಿಗೆ ಇಷ್ಟೆಲ್ಲಾ ಅಮೂರ್ತ ಅನುಭಾವಿ ಭಿಕ್ಷಾಪಾತ್ರೆ ಅರಿವುಳ್ಳ ಬಾರತೀಯನಾದವನೊಬ್ಬನಿಗೆ ಕಾಡದಿರಲು ಸಾಧ್ಯವೆ?

ನನ್ನ ಪಾಲಿಗೆ ಇವರೆಲ್ಲಾ ಬುದ್ದನ ಭಿಕ್ಷಾಪಾತ್ರೆಯಿಂದ ಹೊರಬಂದವರಾಗಿಯೇ ಕಾಣುತ್ತಾರೆ? ಅದನ್ನೇ ಅನುಭಾವ ಅಥವಾ metaphor ಎನ್ನುವುದು. ನನ್ನೊಳಗಿರುವ ಈ ಅಸ್ಪಷ್ಟ ಆಲೋಚನೆಗಳಿಗೆ ಸ್ಪಷ್ಟರೂಪ ಪಡೆದು ಅವು ಅಕ್ಷರಗಳಾಗಿ  ಸ್ಪಷ್ಟವಾಗಿ ಇಲ್ಲಿ ಮೂಡದಿರಬಹುದು ಆದರೆ ನನ್ನಲ್ಲಿರುವ ಈ ಅಮೂರ್ತ ಕಲ್ಪನೆಗಳಂತೂ ಆಧಾರರಹಿತವಲ್ಲ. ನಮ್ಮೊಳಗಿನ ಪ್ರಖಾಂಡ ಪಂಡಿತರು ಇದನ್ನು ವಿಶ್ಲೇಷಿಸಿ ಇದಕ್ಕೆ ಸ್ಪಷ್ಟ ರೂಪ ಕೊಡಬಲ್ಲರು. ನನ್ನ ಅಪಾರ ಬುದ್ದಶಾಲಿ ಗೆಳೆಯರಾದ ನಟರಾಜ್ ಬೂದಾಳ್, ಲಕ್ಷ್ಮೀಪತಿ ಕೋಲಾರ, ರಹಮತ್ ತರೀಕೆರೆ, ಚಂದ್ರಶೇಖರ ನಂಗಲಿ, ಕೆ.ಗೋವಿಂದಯ್ಯ,  ಕೆ.ಬಿ.ಸಿದ್ದಯ್ಯ, ದೇವನೂರು ಮಹಾದೇವ ಅಂತವರು ಇತ್ತ ಗಮನ ಹರಿಸಬೇಕು. ಇದಕ್ಕೊಂದು ಸ್ಪಷ್ಟ ರೂಪ ನೀಡಬೇಕು. ಇವರು ನೀಡಬಹುದಾದ 'ಬುದ್ದ ಭಿಕ್ಷಾಪಾತ್ರಾ ಮೀಮಾಂಸೆ' ಇಡೀ ಜಗತ್ತಿಗೇ ಬೆಳಕು ಚೆಲ್ಲಬಲ್ಲದು, ಇಡೀ ಜಗತ್ತು ಬುದ್ದನಿಂದ ಪ್ರಭಾವಿತವಾಗಿ ಕ್ರಿಸ್ತ ಮತ್ತು ಪೈಗಂಬರ್ ಬುದ್ದನಲ್ಲಿ ಲೀನವಾಗಬಹುದು. ಈ ನಮ್ಮ ದೇಶದ ಘಾಸಿಗೊಂಡ ಅತ್ಮಕ್ಕೆ ಪ್ರೀತಿಯ ಸಾಂತ್ವನ ಸಿಕ್ಕಿ ಈ ದೇಶವೇ 'ಬುದ್ದಭಾರತ'ವಾಗುವತ್ತ ಮುನ್ನಡೆಯಬಹುದು. ಇಡೀ ಜಗತ್ತಿಗೇ ಶಾಂತಿ, ನೆಮ್ಮದಿ, ಕರುಣೆ, ಪ್ರೀತಿಗಳು ಇನ್ನಿಲ್ಲದಂತೆ ಆವರಿಸಬಹುದು.