ಚುರುಕಾಗದ ಮುಂಗಾರು, ಬತ್ತಿದ ಕೆರೆ, ಅಂತರ್ಜಲ ಮಟ್ಟ ಕುಸಿತ : ಭಾರತದ ಅರ್ಧ ಭಾಗ ಬರದ ಛಾಯೆ

ಚುರುಕಾಗದ ಮುಂಗಾರು, ಬತ್ತಿದ ಕೆರೆ, ಅಂತರ್ಜಲ ಮಟ್ಟ ಕುಸಿತ : ಭಾರತದ ಅರ್ಧ ಭಾಗ ಬರದ ಛಾಯೆ

ಭಾರತದ ಅರ್ಧ ಭಾಗ ಬರದಂಥ ಪರಿಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಹವಾಮಾನ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳು ತೋರಿಸುತ್ತಿವೆ. ಚುರುಕಿಲ್ಲದ ಮುಂಗಾರಿನ ನಡುವೆ ಒಣಗಿದ ಕೆರೆಗಳು ಮತ್ತು ಅಂತರ್ಜಲ ಮಟ್ಟ ಕುಸಿತದಿಂದಾಗಿ ಕುಡಿಯುವ ನೀರಿಗಾಗಿ ಲಕ್ಷಾಂತರ ಮಂದಿ ಪರದಾಡುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ಪ್ರಮುಖ ಬೇಸಿಗೆ ಬೆಳೆ ಬಿತ್ತನೆ ಕಾರ್ಯದ ಮೇಲೆ ಪರಿಣಾಮ ಉಂಟಾಗಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.

ಕಳೆದ ವಾರದಿಂದ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ ಜೂನ್ 22 ರವರೆಗಿನ ಮಳೆಯ ಪ್ರಮಾಣ ಎಂದಿಗಿಂತ ಶೇ.39 ರಷ್ಟು ಕೊರತೆ ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ನಿನ್ನೆ ಹೊರಡಿಸಿದ ಪ್ರಕಟಣೆ ಪ್ರಕಾರ ಮುಂಗಾರು ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭ, ಕರ್ನಾಟಕದಲ್ಲಿ ಈವರೆಗೆ ಮಳೆಯಾಗದಿದ್ದ ಪ್ರದೇಶಗಳು, ತೆಲಂಗಾಣ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ,ಬಿಹಾರ್, ಛತ್ತೀಸ್ ಘಢದ ಬಹುಭಾಗ, ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿದೆ.ಆದರೆ ಹವಾಮಾನ ವ್ಯವಸ್ಥೆಯ ದುರ್ಬಲ ತೀವ್ರತೆ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಂಥ ಅನೇಕ ರಾಜ್ಯಗಳು ಬರದಂಥ ಪರಿಸ್ಥಿತಿ ಎದುರಿಸುತ್ತಿವೆ. 

ಪೂರ್ವ, ಮಧ್ಯ ಮತ್ತು ಪರ್ಯಾಯ ದ್ವೀಪ ಭಾರತದಲ್ಲಿ ಅತಿಯಾದ ಒಣ ಹವೆ ಇದೆ. ಮುಂಗಾರು ಪೂರ್ವ ಮಳೆಯ ಕೊರತೆ, ಮುಂಗಾರಿನ ವಿಳಂಬ ಇವೇ ಮೊದಲಾದ ಕಾರಣಗಳಿಂದ ಬರದಂಥ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ದೇಶದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇ.51 ರಷ್ಟು ಪ್ರದೇಶ ಮಳೆಯ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜನರು ಕೃಷಿಗಿಂತ ಮುಖ್ಯವಾಗಿ ಕುಡಿಯುವ ನೀರಿಗಾಗಿ ಜಲಮೂಲ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರಿಗಾಗಿ ಅತಿಮುಖ್ಯ ಎಂದು ಪರಿಗಣಿಸಿ, ರಾಷ್ಟ್ರೀಯ ನಿರ್ವಹಣೆಯಲ್ಲಿರುವ 91 ನದಿತಟ್ಟೆ ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಡಿಮೆ ಇದೆ. ಅಷ್ಟೇ ಅಲ್ಲ. ಕಳೆದ 10 ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಸಾಕಷ್ಟು ಕಡಿಮೆ ಇದೆ ಎನ್ನುವುದನ್ನು ಕೇಂದ್ರೀಯ ಜಲ ಆಯೋಗದ ಜೂನ್ 20 ರವರೆಗಿನ ಅಂಕಿಅಂಶಗಳು ತೋರಿಸುತ್ತವೆ.

ಜಲಾಶಯಗಳ ಸಂಗ್ರಹ ನೋಡುವುದಾದರೆ ತೆಲಂಗಾಣದಲ್ಲಿ ಸಾಮಾನ್ಯಕ್ಕಿಂತ ಶೇ.36 ರಷ್ಟು ಕಡಿಮೆಯಾಗಿದ್ದರೆ, ಆಂಧ್ರಪ್ರದೇಶದಲ್ಲಿ ಶೇ.83, ಕರ್ನಾಟಕದಲ್ಲಿ ಶೇ.23, ತಮಿಳುನಾಡಿನಲ್ಲಿ ಶೇ.43 ಮತ್ತು ಕೇರಳದಲ್ಲಿ ಶೇ.38ರಷ್ಟು ಕಡಿಮೆಯಾಗಿದೆ. ಸಾಮಾನ್ಯ ಸಂಗ್ರಹ ಎಂದರೆ ಕಳೆದ 10 ವರ್ಷಗಳ ಸಂಗ್ರಹದ ಸರಾಸರಿ ಪ್ರಮಾಣ. 

ದೇಶಾದ್ಯಂತ ನೀರಿನ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿರುವ ನಗರಗಳಲ್ಲಿ ಚೆನ್ನೈ ಕೂಡ ಒಂದು. ಚೆನ್ನೈಗೆ ನೀರು ಪೂರೈಸುತ್ತಿದ್ದ 3 ಜಲಾಶಯಗಳಲ್ಲಿ ನೀರಿನ ಪ್ರಮಾಣ ನಾಟಕೀಯವಾಗಿ ಕುಸಿದಿದೆ.  

ಕೆಲವು ನದಿ ಪಾತ್ರಗಳು ಬಹುತೇಕ ಬತ್ತಿಹೋಗಿವೆ. ತಪಿ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಶೇ.81 ರಷ್ಟು ಇಳಿಕೆಯಾಗಿದ್ದರೆ, ಸಬರಮತಿ ಶೇ.42, ಕೃಷ್ಣಾ ಶೇ.55, ಕಾವೇರಿ ಶೇ.45 ಮತ್ತು ಗಂಗಾ ನದಿಪಾತ್ರದಲ್ಲಿ ಶೇ.9.25 ರಷ್ಟು ನೀರಿನ ಮಟ್ಟ ಕಡಿಮೆಯಾಗಿದೆ. 

"ಈ ತಿಂಗಳ 27 ರ ಹೊತ್ತಿಗೆ ಮುಂಗಾರು ಪರಿಸ್ಥಿತಿ ಸುಧಾರಿಸಬಹುದು. ಬಂಗಾಳಕೊಲ್ಲಿಯಲ್ಲಿ ಜುಲೈ ಒಂದರ ಹೊತ್ತಿಗೆ ವಾಯುಭಾರ ಕುಸಿತ ನಿರೀಕ್ಷಿಸಲಾಗಿದ್ದು ಮುಂಗಾರು ಪ್ರಗತಿಗೆ ನೆರವಾಗಲಿದೆ. ಆತಂಕಪಡುವ ಅಗತ್ಯ ಇಲ್ಲ” ಎಂದು ಭೂವಿಜ್ಞಾನಗಳ ಸಚಿವಾಲಯ ಕಾರ್ಯದರ್ಶಿ ಎಂ.ರಾಜೀವನ್ ಹೇಳಿದ್ದಾರೆ. 

ಭಾರತದ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಉದ್ಯೋಗಾವಕಾಶ ಒದಗಿಸುವ ಕೃಷಿಗೆ ಅಗತ್ಯವಾಗಿರುವ ಮುಂಗಾರು ಚುರುಕುಗೊಳ್ಳದಿದ್ದರೆ ಗಂಭೀರ ಪರಿಣಾಮವಂತೂ ಎದುರಾಗುತ್ತದೆ. ಯಾಕೆಂದರೆ ದೇಶದ ಶೇ.60 ರಷ್ಟು ಬಿತ್ತನೆ ಪ್ರದೇಶದಲ್ಲಿ ನೀರಾವರಿ ಇಲ್ಲ. 

ಕಳೆದ ವರ್ಷ ಇದೇ ಅವಧಿಗೆ ದೇಶದಲ್ಲಿ 10.3 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ ಈ ವರ್ಷ 9.06 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಈ ಪ್ರಮಾಣ ಶೇ.12 ರಷ್ಟು ಇಳಿಕೆಯಾಗಿದೆ. 

ಅಕ್ಕಿ, ಬೇಳೆಕಾಳು, ಸಿರಿಧಾನ್ಯ, ಹತ್ತಿ, ಎಣ್ಣೆಬೀಜಗಳಂಥ ಬೇಸಿಗೆ ಬೆಳೆ ದೇಶದ ವಾರ್ಷಿಕ ಆಹಾರ ಉತ್ಪನ್ನದ ಅರ್ಧದಷ್ಟಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಲಿದೆ.  ಮಳೆಯ ಪರಿಸ್ಥಿತಿ ಸುಧಾರಿಸದೇ ಬಿತ್ತನೆಗೆ ಮುಂದಾಗುವ ಧೈರ್ಯ ರೈತರಲ್ಲಿ ಕಂಡು ಬರದಿರುವುದೇ ಇದಕ್ಕೆ ಕಾರಣ.ಕರ್ನಾಟಕ ಸೇರಿದಂತೆ ದೇಶದ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕಬ್ಬು ಬೆಳೆಯುವ ಪ್ರದೇಶ ಶೇ.2 ರಷ್ಟು ಕಡಿಮೆಯಾಗಿದೆ. ಮಳೆಯ ಕೊರತೆ ಈ ಎಲ್ಲ ಸಮಸ್ಯೆಗಳ ಮುಖ್ಯ ಮೂಲವಾಗಿದೆ.