ಕಮಲ ಪಾಳಯದಲ್ಲಿ ತಲ್ಲಣ :ಕೇಂದ್ರ ಸಚಿವರತ್ತ ಬಿತ್ತು ಬಾಣ

ಇರೋರು ಮೂವರು,   ಕದ್ದವರು ಯಾರು...ಎಂಬ ನಾಣ್ಣುಡಿಯಂತೆ ರಾಜ್ಯ ಬಿಜೆಪಿಯಲ್ಲೀಗ ಇಬ್ಬರು ಚಾಡಿಕೋರ ಕೇಂದ್ರ ಸಚಿವರು ಯಾರೆಂದು ಕಂದೀಲು ಹಿಡಿದುಕೊಂಡು ಹುಡುಕುವ ಕಾರ್ಯ ಶುರುವಾಗಿದೆ. 

ಕಮಲ ಪಾಳಯದಲ್ಲಿ ತಲ್ಲಣ :ಕೇಂದ್ರ ಸಚಿವರತ್ತ ಬಿತ್ತು ಬಾಣ

ಸ್ವಪಕ್ಷದಲ್ಲಿದ್ದುಕೊಂಡೇ ಟೀಕಾಸ್ತ್ರ ಪ್ರಯೋಗಿಸುವ ನಾಯಕರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ.  ಸಂಸದ ಶ್ರೀನಿವಾಸ ಪ್ರಸಾದ್ ಈ ಪಟ್ಟಿಯಲ್ಲಿದ್ದರೂ ಹರಕುಬಾಯಿ ಬಿಡುವವರಲ್ಲ. ಗೊತ್ತೋ ಗೊತ್ತಿಲ್ಲದೆಯೋ ಮಾತಾಡುವ ಕೆ.ಎಸ್.ಈಶ್ವರಪ್ಪ,   ಸಿ.ಟಿ.  ರವಿ,  ಮಂತ್ರಿಗಿರಿ ಸಿಗಲಿಲ್ಲ ಎಂದು ರಮೇಶ್ ಕುಮಾರ್,  ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ,  ನನ್ನದೂ ಇರಲಿ ಎಂದು ಪತ್ರ ಬರೆವ ಚಾಳಿಯ ಎಚ್.ಕೆ. ಪಾಟೀಲ್ ಇತ್ಯಾದಿಗಳು ಇಂಥ ಗುಂಪಿನ ಸದಸ್ಯರು.

ಇದಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೂ ಮುಖ್ಯಮಂತ್ರಿಯಾಗುವ ಅರ್ಹತೆಯುಳ್ಳವನು ಎಂಬುದರಿಂದ ಹಿಡಿದು, ಬಿಜಾಪುರ ಸಂಸತ್ ಕ್ಷೇತ್ರಕ್ಕೆ ರಮೇಶ್ ಜಿಗಜಿಣಗಿಗೆ ಟಿಕೆಟ್ ಕೊಡಲೇ ಬಾರದು ಎಂದು ರಚ್ಚೆಯಿಡಿದು,  ಇತ್ತೀಚೆಗೆ ನೆರೆಪರಿಹಾರ ಬಂದೇ ಇಲ್ಲ ಇಪ್ಪತ್ತೈದು ಸಂಸದರು ಏಕಿದ್ದೀರಿ,

ಪಕ್ಷ ಕಟ್ಟಿದವರು ನಾವು ಮೇಲಿಂದ ಉದುರಿಬಂದವರಾ ನೀವು ಎಂಬಿತ್ಯಾದಿಯಾಗಿ ಸ್ವಪಕ್ಷದವರ ವಿರುದ್ದವೇ ಚಾಟಿ ಬೀಸಿದ್ದರು. ಪರಿಣಾಮವಾಗಿ ವರಿಷ್ಟರು ಕಾರಣ ಕೇಳಿ ನೋಟೀಸು ಕೊಟ್ಟಾಗಿದೆ.

ನೋಟೀಸಿಗೆ ಉತ್ತರಾನೂ ಕೊಡಲ್ಲ, ನಾನೇನಾದರು ಹಾಗೆ ಮಾತಾಡಿರದಿದ್ದರೆ ಪರಿಹಾರ ಹಣ ಇವತ್ತಿಗೂ ಬರುತ್ತಿರಲಿಲ್ಲ.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದೂ ಕಷ್ಟವಿತ್ತು ಎಂದೇಳುವುದರ ಜತೆಯಲ್ಲೇ,   ರಾಜ್ಯದ ಇಬ್ಬರು ಕೇಂದ್ರ ಸಚಿವರು   77  ವರ್ಷವಾಗಿರುವ ಯಡಿಯೂರಪ್ಪರನ್ನ ಕುರ್ಚಿಯಿಂದ ಇಳಿಸಿ ಎಂದು ವರಿಷ್ಟರೆದುರು ಭಿನ್ನಹ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನೂ ಪ್ರಸ್ತಾಪಿಸಿ ಬಿಟ್ಟಿದ್ದಾರೆ.

ಪ್ರಧಾನಿಮೋದಿ ಅಥವಾ ಗೃಹಸಚಿವ ಅಮಿತ್ ಶಾ ರನ್ನ ಭೇಟಿಯಾಗುವ ಧೈರ್ಯ ಯಡಿಯೂರಪ್ಪ ಸೇರಿದಂತೆ,  ಕೇಂದ್ರ ಸಚಿವರಾಗಿರುವಡಿ. ವಿ.ಸದಾನಂದಗೌಡ,  ಪ್ರಹ್ಲಾದ್ ಜೋಷಿ ಮತ್ತು ಸುರೇಶ್ಅಂಗಡಿಗೆ ಇಲ್ಲ(ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ನಮ್ಮಲ್ಲಿಂದಲೇ ರಾಜ್ಯಸಭೆಗೆ ಹೋಗಿರುವವರಾದರೂ, ರಾಜ್ಯ ಮತ್ತು ಇಲ್ಲಿನ ರಾಜಕಾರಣದ ತಲೆಕೆಡಿಸಿ ಕೊಂಡವರಲ್ಲ) ಇದು ನೆರೆಪರಿಹಾರ ವಿಚಾರದಲ್ಲೇ ಸಾಬೀತಾಗಿರುವಂಥದ್ದು,  ಅಂಥದ್ದರಲ್ಲಿ ಬಿಎಸ್ ವೈ ವಿರುದ್ದ ಫಿಟ್ಟಿಂಗ್ ಇಡಲು ಹೋಗಿದ್ದಾರೆ ಎಂಬುದು ನಂಬಲ ಸಾಧ್ಯ. ಹಾಗಂತ ಇಂಥ ಪ್ರಯತ್ನ ನಡೆಯುತ್ತಲೇ ಇಲ್ಲ ಎಂದು ತಳ್ಳಿ ಹಾಕಲಾಗಲ್ಲ.

ಸ್ಥಾನ ಖಾಲಿಯಿದ್ದರೂ ಮುಖ್ಯಮಂತ್ರಿಯಾಗುವ ದಿನ ಲೆಕ್ಕ ಮಾಡುತ್ತಾ ಕೂರುವಂತಾಗಿದ್ದ ಯಡಿಯೂರಪ್ಪ,  ಸಂಪುಟ ವಿಸ್ತರಣೆಗೆ ಅವಕಾಶ ಕೊಡಿ ಎಂದು ಬಸವರಾಜ ಬೊಮ್ಮಾಯಿ,  ಮಾಧುಸ್ವಾಮಿಯವರಿದ್ದ ನಿಯೋಗ ಕಳುಹಿಸಿದ್ದರು.  ಇವತ್ತು ಬನ್ನಿ,  ನಾಳೆ ಬನ್ನಿ,  ಊರಿಗೊರಟೋಗಿ ನಾನೇ ಹೇಳುತ್ತೇನೆ ಎಂದೆಲ್ಲ ಶಾ ಸತಾಯಿಸಿದ್ದರೆ,   ಯಡಿಯೂರಪ್ಪಗೆ ಪ್ರಧಾನಿ ದರ್ಶನ ಭಾಗ್ಯವನ್ನೇ ಕೊಟ್ಟಿಲ್ಲ.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮೋದಿಗೆ ಎಕ್ಕಾ ಮಕ್ಕಾ ಟೀಕಿಸುತ್ತಿದ್ದರು.  ಇದರಿಂದಾಗಿ ಇವರಿಗೂ ಪ್ರಧಾನಿ ಸಮಯ ಕೊಡುತ್ತಲೇ ಇರಲಿಲ್ಲ. ಈಗ ಅದೇ ಸ್ಥಿತಿ ಬಿಎಸ್ ವೈಗೂ ಬಂದಿದೆ.  ದೆಹಲಿಯಲ್ಲಿ ಇವತ್ತಿಗೂ ಸಮಯಾವಕಾಶ ಕೊಟ್ಟೇ ಇಲ್ಲದಿರುವುದು ಅತ್ತಗಿರಲಿ,   ಚಂದ್ರನ ದಕ್ಷಿಣಭಾಗದ ಮೇಲೆ ವಿಕ್ರಮ ಇಳಿಯುವುದನ್ನ ನೋಡಲು ಬೆಂಗಳೂರಿಗೆ ಬಂದು ತಂಗಿದ್ದ ಮೋದಿ,  ನೆರೆ ಸಂತ್ರಸ್ತರ ಸ್ಥಿತಿ ಹೇಳಿಕೊಳ್ಳಲು ಯಡಿಯೂರಪ್ಪರತ್ತ ತಿರುಗಿಯೂ ನೋಡಲಿಲ್ಲ.  

ದುರ್ಘಟನೆಗಳು ಜರುಗಿ ಅಮೋಘ ಅರ್ಧ ಶತದಿನಗಳು ಪೂರೈಸಿದರೂ, ಚಿಕ್ಕಾಸನ್ನೂ ಕೊಡಲಿಲ್ಲ. ಇದರ ಹಿಂದೆಯೂ ಇದ್ದುದು ರಾಜಕೀಯ ಲೆಕ್ಕಾಚಾರಗಳಲ್ಲದೇ ಮತ್ತೇನಲ್ಲ.  ರಾಜ್ಯದ ಉತ್ತರ ಭಾಗದಲ್ಲೇ ಲಿಂಗಾಯತ ಬಲ ಅಧಿಕ.  ಆಸಮುದಾಯದ ಮತಗಳಿಸುವ ಏಕೈಕ ವ್ಯಕ್ತಿಯಾಗಿ ಬಿಎಸ್ ವೈ ಇದ್ದು, ಇವರನ್ನೇನಾದರೂ ಎದುರಾಕಿಕೊಂಡರೆ ಎಡವಟ್ಟು ಆಗಬಹುದು ಎಂಬ ಅಂಜಿಕೆ ವರಿಷ್ಟರಿಗಿದೆ. ಹಾಗಂತ ಇವರನ್ನೇ ಮೆರೆಸಿಕೊಂಡು ಇರಲೂ ಆಗಲ್ಲ.  ಇದಕ್ಕಾಗಿಯೇ ಉತ್ತರಭಾಗದಲ್ಲಿನ ಜನ ಸಮುದಾಯವೇ ಯಡಿಯೂರಪ್ಪ ನಿಷ್ಪ್ರಯೋಜಕ ಎಂದು ಕೊಳ್ಳಬೇಕು. ಹಾಗೆ ಮಾಡುವುದರಿಂದ ಬಿಎಸ್ ವೈ ಹಠಾವೋ ಸುಲಭ.  ಇಂಥ ಲೆಕ್ಕದಿಂದಲೇ ನೆರೆ ಪರಿಹಾರ ಕೊಡದೆ,  ರಾಜ್ಯಕೊಟ್ಟಿರುವ ಲೆಕ್ಕ ಸರೀಗಿಲ್ಲ ಎಂಬ ವರಾತ ತೆಗೆದು,  ಮುಖಕ್ಕೆ ಮಸಿ ಬಳಿಯುವುದರತ್ತ ಉಪಕ್ರಮಿಸಿತ್ತು.

ಇದೇ ಡೋಲಾಯಮಾನ ಸ್ಥಿತಿ ಇದ್ದರೆ ಇವಾಗಾಗಲೇ ವರಿಷ್ಟರೆದುರು ಮಂಡಿಯೂರಿದ್ದಾರೆ ಎನಿಸಿಕೊಂಡಿರುವ ಬಿಎಸ್ ವೈ ನೆರೆಸಂತ್ರಸ್ತರ ಕಟು ವಿರೋಧಕ್ಕೂ ಒಳಗಾಗಿ ಬಿಟ್ಟಿರುತ್ತಿದ್ದರು. ಇದೇ ಹಾಹಾಕಾರ ಮುಂದಿಟ್ಟು ಕೊಂಡು ಇವರಿಗೆ ಟಿಕೇಟ್ ಕೊಡಿಸುವ ಸಿದ್ದತೆಯನ್ನೂ ಮಾಡಿಕೊಳ್ಳ ಬಹುದಿತ್ತು. ಇಂಥದ್ದಕ್ಕೆಲ್ಲ ಎಂದಿನಂತೆ ಸಂತೋಷ್ ಪರ ಜನನಾಯಕರ ಸಮ್ಮತಿಯೂ ಇತ್ತು.  

ಇದನ್ನೆ ಬಸನಗೌಡ ಯತ್ನಾಳ್ ಪ್ರಶ್ನಿಸಿ, ನೋಟೀಸ್ ಪಡೆದುಕೊಳ್ಳುವಂತಾಗಿರುವುದು. ಅಸಲಿಗೆ ಯತ್ನಾಳ್ ಗೆ ಮಂತ್ರಿಯಾಗುವ ಆಸೆ ಇದೆ. ಆದರೆ ಸಂತೋಷ್ ಗುಂಪಿನಿಂದ ದೂರವಿದ್ದಾರೆ. ಜತೆಗೆ ಮುಖ್ಯಮಂತ್ರಿಯಾಗುವ ತಾಕತ್ತೂ ಇದೆ ಎಂದೇಳುತ್ತಾರೆ. ಈ ಎರಡೂ ಅಂಶಗಳು ಇವರನ್ನ ಸಂಪುಟದಿಂದ ಅನತಿ ದೂರವಿರುವಂತೆ ಮಾಡುತ್ತಿವೆ.

ಅಂದ ಹಾಗೆ ಆಲಮಟ್ಟಿ ವಿಚಾರದಲ್ಲಿ ರಾಜೀನಾಮೆ ನೀಡಲೂ ಸಿದ್ದ ಎಂದು ಪ್ರಧಾನಿ ವಾಜಪೇಯಿಗೂ ಪತ್ರ ಬರೆದಿದ್ದರು. ಇದು ಅಶಿಸ್ತು ಎನಿಸಿ ಕೊಳ್ಳಲಿಲ್ಲ.  ಬದಲಿಗೆ ಕೇಂದ್ರದಲ್ಲಿ ಮಂತ್ರಿ ಪದವಿ ದಕ್ಕಿತ್ತು.  ಇದೇ ತಂತ್ರ ಇಲ್ಲಿಯೂ ಫಲಿಸಬಹುದು ಎಂದು ಯತ್ನಾಳ್ ಕೇಂದ್ರಕ್ಕೇ ಮುಖ ತಿರುಗಿಸಿ ಬಾಣ ಬಿಟ್ಟರು.  ಆದರಿದು ಅವರಿಗೆ ನೋಟೀಸ್ ರೂಪದಲ್ಲಿ ವಾಪಸ್ ಬಂದಿದೆ.

ಮೋ ಶಾ ಭೇಟಿಗೂ ಬಿಡಲ್ಲ,  ವಯಸ್ಸಿನ ಕಾರಣದಿಂದ ಬಿಎಸ್ ವೈನ ಮನೆಗೆ ಕಳುಹಿಸಿ ಎಂದು  ಇಬ್ಬರು ಕೇಂದ್ರ ಸಚಿವರು ಓಡಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿರುವುದನ್ನ ನೋಡಿದರೆ ಅದು ರಾಜ್ಯದ ಮೂವರೂ ಸಚಿವರ ಮೇಲೂ ಸಂಶಯ ಮೂಡಿಸುತ್ತೆ.

ಬೆಂಗಳೂರು ದಕ್ಷಿಣದಿಂದ ಗೆದ್ದಿರುವ ಸಂಸದ ಸದಾನಂದಗೌಡ ರಾಜ್ಯ ಘಟಕದ ಪಕ್ಷಾಧ್ಯಕ್ಷರಾಗಿದ್ದಾಗ, ಕೆಎಂಎಫ್ ನಿರ್ದೇಶಕರನ್ನಾಗಿಯೂ ಮಾಡದೆ, ಅನಿವಾರ್ಯವಾಗಿ ಮುಖ್ಯಮಂತ್ರಿಯಾಗಿಸಿದರೂ ಬಿಎಸ್ ವೈ ಮಾತಿಗೆ ಮನ್ನಣೆ ಕೊಡದ್ದರ ತತ್ಪಲವಾಗಿ ಹುದ್ದೆ ತ್ಯಜಿಸಿದ್ದರು.

ಅದರ ಪ್ರತೀಕಾರ ತೀರಿಸಿಕೊಳ್ಳಲು ಇವರೀಗ ಹೊರಟಿರಬಹುದೇ ಎಂಬ ಅನುಮಾನಗಳಿವೆ. ಹುಬ್ಬಳ್ಳಿಯ ಸಂಸದ ಪ್ರಹ್ಲಾದ್ ಜೋಷಿಯೂ ರಾಜ್ಯಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೂ, ಇವರದ್ದೇನಿದ್ದರೂ ಸಂತೋಷ್, ಅನಂತ ಕುಮಾರ್ ಬಣ.  ಆರೆಸ್ಸೆಸ್ ಕಟ್ಟಾಳು.  ಹೀಗಾಗಿ ಈಗಲೂ ಇವರು ಸಂತೋಷ್ ಪರವಾಗಿಯೇ ಇರುವುದರಿಂದ ಬಿಎಸ್ ವೈಗೆ ಬೆಣೆ ಹೊಡೆಯುತ್ತಿದ್ದಾರೆಯೇ ಎಂಬ ಶಂಕೆಗಳಿವೆ.

ಬೆಳಗಾವಿಯ ಸಂಸದ ಸುರೇಶ್ ಅಂಗಡಿಗೂ ಬಿಎಸ್ ವೈ ಗೂ ಮೊದಲಿಂದಲೂ ತಾಳಮೇಳವಿಲ್ಲ. ಇವರಿರುವುದೂ ಸಂತೋಷ್ ಬಣದಲ್ಲೇ. ಹೀಗಾಗಿಯೇ ಇವರೂ ಕೂಡ ಅನುಮಾನಿತರ ಪಟ್ಟಿಯಲ್ಲೇ ಇದ್ದಾರೆ.

ನಿರ್ಮಲಾ ಸೀತಾರಾಂ ರಾಜ್ಯಕ್ಕೂ ನನಗೂ ಸಂಬಂಧವಿಲ್ಲ ಎಂಬಂತಿದ್ದರೂ,   ಮೋಶಾ ಹೇಳಿದ್ದಕ್ಕೆ ಎರಡನೇ ಮಾತಾಡಲ್ಲ.  ಸಂತೋಷ್ ಹೇಳಿದ್ದು ಶಾ ಬಳಿ ನಡೆಯುತ್ತೆ.   ಈ ಸಂಬಂಧಗಳಿಂದಾಗಿ ಈಕೆಯೂ ಬಿಎಸ್ ವೈ ವಿರೋಧಿ ಬಣದಲ್ಲೇ ಇರುವಂಥವರು.

ಪರಿಣಾಮವಾಗಿಯೇ, ಇಬ್ಬರು ಕೇಂದ್ರ ಸಚಿವರು ಬಿಎಸ್ ವೈ ವಿರುದ್ದ ಸಂಚು ರೂಪಿಸಿದ್ದಾರೆ ಎಂದು ಯತ್ನಾಳ್ ಹಾಕಿರುವ ಮಾತಿನ ಮಾತು, ಕಮಲ ಪಕ್ಷದಲ್ಲಿ ಸದ್ಯಕ್ಕೆ ಕಳೇ ಬರದ ಲಕ್ಷಣ ತಂದಿಟ್ಟು, ಎಲ್ಲರ ಮೇಲೂ ಶಂಕಿಸುವಂತಾಗಿದೆ. ಅಂತೂ ಇಂತೂ ಬಿಜೆಪಿಯೊಳಗಣ ರಣತಂತ್ರಗಳ ಒಂದೊಂದೇ ಭಾಗ ಕಳಚಿ ಬೀಳುತ್ತಿದೆ.  ಇದು ಡಿಸೆಂಬರ್ ಚುನಾವಣೆ ಬಳಿಕ ಬಿಎಸ್ ವೈಯನ್ನ ಬೋಗಿಯಿಂದ ಇಳಿಸುವಂತೆ ಮಾಡಿದರೂ ಅಚ್ಚರಿ ಏನಿಲ್ಲ.