ಖಾಕಿ ಇಲಾಖೆಯ ಭಾಗ್ಯವಿಧಾತರು

ಖಾಕಿ ಇಲಾಖೆಯ ಭಾಗ್ಯವಿಧಾತರು

ದೇಶದಲ್ಲೀಗ ಬೆಳಗಾದರೆ  ಕೌಸಲ್ಯಾ ಸುಪ್ರಜಾ ರಾಮ ಮರೆಯಾಗಿ ನಾಥೂರಾಮನ ಜೈಕಾರ  ಭಯಹುಟ್ಟಿಸುತ್ತದೆ. ಜೈಶ್ರೀರಾಮ್,  ಕಾಶ್ಮೀರ, ದಲಿತ ಮತ್ತು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕೋಮುವಾದ, ಧ್ರುವೀಕರಣದಂತಹ ಸಾಮಾಜಿಕ ವಿಕೃತಿಗಳ ನಡುವೆ  ನಾವು ಬದುಕುತ್ತಿದ್ದೇವೆ.. ನಿಜ ಅರ್ಥದಲ್ಲಿ ಬದುಕೆಂದರೆ  ಬದುಕಲ್ಲ,  ಬರಿ ಉಸಿರಾಡುತ್ತಿದ್ದೇವೆ .

ಅಚಾತುರ್ಯದಿಂದ  ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಗೆ ಹೋಗಿ ಇಪ್ಪತ್ತ್ಮೂರು ವರ್ಷ ಪಾಕಿಸ್ತಾನದ ಜೈಲುವಾಸ ಅನುಭವಿಸಿ ಮೃತನಾದ ಸರಬ್ಜಿತ್ ಸಿಂಗ್ನಂಥ ನತದೃಷ್ಟರು ಹಲವರಿದ್ದಾರೆ.  ಒಬ್ಬ ನಿರಪರಾಧಿ ಭಯೋತ್ಪಾದಕ, ಹಂತಕ, ಬೇಹುಗಾರನಾಗಿ ಪಾಕಿಸ್ತಾನ ಸರಬ್ಜಿತ್ ಸಿಂಗನಿಗೆ ಗಲ್ಲು ಶಿಕ್ಷೆ. ನೀಡಿತ್ತು. ನಿರಪರಾಧಿಗಳನ್ನು ಬಲಿಪಶುವಾಗಿಸುವುದರಲ್ಲಿ. ನಮ್ಮ ದೇಶವೇನು ಕಡಿಮೆಯಿಲ್ಲ. ಹನುಮನನ್ನು  ಹುಸೇನನ್ನಾಗಿಸಿ , ಹುಸೇನನನ್ನು ಹನುಮನ್ನಾಗಿ ರೂಪಿಸಿ  ಅವರ ಭಾಗ್ಯವನ್ನು ಬದಲಿಸಿಬಿಡಬಲ್ಲ ಏಕೈಕ ಶಕ್ತಿ ಇರುವುದು ನಮ್ಮ ದೇಶದ ಭಾಗ್ಯವಿಧಾತರಾದ ಪೋಲಿಸ್ ಇಲಾಖೆಗೆ ಮಾತ್ರ.  ಯಾಕೆಂದರೆ ಮೊದಲ ಅಪರಾಧವನ್ನು ದಾಖಲಿಸುವವರು ಅವರೇ. 

ಖಾಕಿ ಇಲಾಖೆ ಮತ್ತು ಖಾಕಿ ಚಡ್ಡಿಗಳ ಸಂಘಟನೆಗಳಿಗೆ ಪೂರ್ವ ಜನ್ಮದ ನಂಟಿರಬೇಕು. ಒಬ್ಬರು  ತೋರು ಬೆರಳಲ್ಲೇ  ಸರಕಾರವನ್ನು ಆಡಿಸಬಲ್ಲರು. ಇನ್ನೊಬ್ಬರು ಸರ್ಕಾರದ ಬಹು ಪ್ರತಿಷ್ಠರು ಆಡಿಸಿದಂತೆ ಆಡಬೇಕಾದ, ನುಡಿಸಿದಂತೆ ನುಡಿಯಬೇಕಾದ  ಒತ್ತಡವನ್ನು  ಹೊರಬೇಕಾದವರು. ಸರಕಾರಿ ಇಲಾಖೆಗಳಲ್ಲಿ ಅತ್ಯಂತ ಭ್ರಷ್ಟವಾದದ್ದು  ಪೋಲಿಸ್ ಇಲಾಖೆ ಎಂಬ ಕಳಂಕಕ್ಕೂ ಬಾಧ್ಯರಾದವರು !   .

ಕೆಲವು ಘಟನೆಗಳು ಬೇಡವೆಂದರೂ ನಮ್ಮನ್ನು ಕಾಡುತ್ತಿರುತ್ತವೆ. ದಿನನಿತ್ಯವೂ ಪತ್ರಿಕೆಯಲ್ಲಿ ರಾರಾಜಿಸುವ ಗುಂಪುದಾಳಿ, ಬಲಾತ್ಕಾರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ರಾಜಕೀಯ ಆಗುಹೋಗುಗಳು ವಿಚಲಿತಗೊಳಿಸುತ್ತವೆ. 

ಮೊನ್ನೆ  ಇಂಡಿಯನ್ ಎಕ್ಸಪ್ರೆಸ್ ದೆಹಲಿಯಲ್ಲಿ 2011ರಲ್ಲಿ ನೀತೂ ಸೋಲಂಕಿ ಎಂಬ ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದು ತಪ್ಪಿಸಿಕೊಂಡಿದ್ದ ರಾಜು ಗೆಹಲೋತ್ ಉರ್ಫ್ ರೋಹನ್ ದಹಿಯಾನ ಸಾವಿನ ಪ್ರಕರಣವನ್ನು ಪ್ರಕಟಿಸಿತ್ತು.  ಇಬ್ಬರ ಜಗಳ ವಿಕೋಪಕ್ಕೆ ಹೋಗಿ ರಾಜು, ನೀತೂ ಸೋಲಂಕಿಯನ್ನು ಕೊಂದು  ಸೂಟ್ಕೇಸಿನಲ್ಲಿ ತುಂಬಿಸಿ ದೆಹಲಿಯ ರೇಲ್ವೆ ಸ್ಟೇಷನ್ನಿನ ದ್ವಾರದಲ್ಲಿ ಎಸೆದು ಪರಾರಿಯಾಗಿದ್ದ. ಎಂಟು ವರ್ಷಗಳಿಂದಲೂ ತನ್ನ ಹೆಸರು ವಿಳಾಸ ಮರೆಸಿಕೊಂಡು ದೆಹಲಿಯಲ್ಲೆ ವಾಸಿಸುತ್ತಿದ್ದರೂ ಪೋಲೀಸರಿಗೆ ಸಿಕ್ಕಿರಲೇ ಇಲ್ಲ ಕೊಲೆಗಾರ. ಹೇಗಿದೆ ನೋಡಿ ಪೋಲಿಸ್ ವ್ಯವಸ್ಥೆ!  ವ್ಯಕ್ತಿ ಹೆಸರು ಮರೆಸಿಕೊಳ್ಳಬಹುದು ಚೆಹರೆಯನ್ನು ಬದಲಿಸಿಕೊಳ್ಳಲಾರ. ರಾಜು ಗೆಹಲೋತ್ ಪೋಲಿಸರ ಕೈಗೆ ಸಿಗಲಿಲ್ಲ.  ಎಂಟು ವರ್ಷಗಳಿಂದ ಆತ ಆರಾಮವಾಗೇ ಬದುಕುತ್ತಿದ್ದ.  ಈಗ ಸತ್ತ ಮೇಲೆ ಪೋಲಿಸರಿಗೆ ಅವನೇ ಎಂಬುದು ಗೊತ್ತಾಗಿಹೋಯ್ತು. !  ರಾಜು ಗೆಹಲೋತ್ ಚಿಕ್ಕಪ್ಪ ಎಸಿಪಿಯಾಗಿದ್ದವರು. ಇಷ್ಟು ಸುಳಿವು ಸಾಕು ಅವನನ್ನು ಎಷ್ಟು  ಮುತುವರ್ಜಿಯಿಂದ ಖಾಕಿ ಇಲಾಖೆ ಕಾಪಾಡಿರಬೇಕು ಎಂಬುದಕ್ಕೆ. ಇದು  ಒಂದು ಉದಾಹರಣೆ ಅಷ್ಟೆ. 

ನಿಜಕ್ಕೂ ದುಃಖವಾಗ್ತಿರೋದು  ಪೆಹಲೂ ಖಾನ್ ಮತ್ತವನ ಕುಟುಂಬದ ಮರುಕದ ಸ್ಥಿತಿಗೆ. ರಾಜಸ್ತಾನದ ಪೊಲೀಸ್ ಇಲಾಖೆ  ಮೃತ ಪೆಹಲೂ ಖಾನ್ ಮತ್ತವನ ಇಬ್ಬರು ಮಕ್ಕಳ ಮೇಲೆ ಹೊಸ ಆರೋಪಪಟ್ಟಿಯನ್ನು ದಾಖಲಿಸಿದೆ. 

ಎರಡು ವರ್ಷದ ಹಿಂದೆ ಮೇವಾತಿನ ಜ್ಜೈಸಿಂಗಪುರದ ನಿವಾಸಿಯಾಗಿದ್ದ ಡೇರಿ ಕೃಷಿಕ ಪೆಹಲೂ ಖಾನ್ ರಮಜಾನ್ ತಿಂಗಳಾದ್ದರಿಂದ ಇನ್ನೆರಡು ಹಸುಗಳನ್ನು ಕೊಂಡು ತಂದರೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು, ವ್ಯಾಪಾರವೂ ಚೆನ್ನಾಗಬಹುದು ಎಂದು ಕನಸಿದ್ದ.  ಅದಕ್ಕಾಗಿ ರಾಜಸ್ಥಾನದಲ್ಲಿ ನಡೆಯುವ ಜಾನುವಾರು ಸಂತೆಯಿಂದ ತನ್ನ ಡೈರಿ ಉದ್ಯಮಕ್ಕೆಂದು ಮಿಲ್ಚ್ ತಳಿಯ ಎರಡು ಹಸು ಮತ್ತು ಎರಡು ಕರುವನ್ನು ಟ್ರಕ್ಕಿನಲ್ಲಿ ಸಾಗಿಸುತ್ತಿದ್ದಾಗ ಹಸುಗಳನ್ನು ಕಸಾಯಿಖಾನೆಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಂಬ ಅನುಮಾನದಲ್ಲಿ ಹದ್ದುಗಳಂತೆ ಎರಗಿದ ಗೋರಕ್ಷಕರು ಪೆಹಲೂನನ್ನು ಗಾಡಿಯಿಂದ ಹೊರಗೆಳೆದು ಜೀವ ಹೋಗುವಂತೆ ಥಳಿಸಿದರು. ನಾಲ್ಕು ದಿನಗಳ ನಂತರ ಪೆಹಲೂ ಖಾನ್ ಅಸುನೀಗಿದ. 

ಪೆಹ್ಲೂ ಖಾನ್ ಪುತ್ರ ಇರ್ಷಾದ್ ಪ್ರಕಾರ, " ಹಸುವನ್ನು ಡೇರಿ ಕೃಷಿಗಾಗಿ ಸಾಗಿಸುತ್ತಿರುವುದನ್ನು ಪ್ರಮಾಣಿಸುವ ಎಲ್ಲಾ ಕಾಗದಗಳೂ ಇವೆ’ ಎಂದು ಹೇಳುತ್ತಿದ್ದರೂ ಮತಾಂಧ ಗುಂಪು ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ, ದಾಖಲೆಗಳನ್ನು ನೋಡದೇ, ಇರ್ಷಾದ್ ಕಣ್ಣೆದುರಿನಲ್ಲಿಯೇ ಹಲ್ಲೆ ನಡೆಸಿದ್ದರು.  ದುಷ್ಕರ್ಮಿಗಳು ಇಷ್ಟಕ್ಕೂ ಬಿಡದೇ ಅವರ ಮೊಬೈಲು ಮತ್ತು ಹಣದ ಚೀಲವನ್ನೂ  ದೋಚಿಕೊಂಡು ಒಯ್ದದ್ದು ಅತ್ಯಂತ ಹೇಯವಾದದ್ದು.  

ಇಷ್ಟೆಲ್ಲಾ ನಡೆದರೂ ರಾಜ್ಯ ಗ್ರಹ ಮಂತ್ರಿ  ಗುಲಾಬ್ ಚಂದ್ ಕಟಾರಿಯಾ ಗೋರಕ್ಷಕರು ಮಾಡಿದ್ದೇ ಸರಿ, ಅಪಾದಿತರು ಗೋವುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದೇ ನಿಜ ಎನ್ನುವಾಗಲೂ ಅವರ ಆತ್ಮ್ಮಸಾಕ್ಷಿ ಅಳುಕಲಿಲ್ಲ.  ಸಂಸದೀಯ ಸಚಿವ ಮುಖ್ತಾರ್ ಅಬ್ಬಾಸ್ ಗೋರಕ್ಷರು ಹಲ್ಲೆ ನಡೆಸಿಯೇ ಇಲ್ಲವೆಂದು ಹೇಳಿ ನಂತರ ತಮ್ಮ ಮಾತನ್ನು ತಿದ್ದಿಕೊಳ್ಳಲು ಯತ್ನಿಸಿದರು.  ಹೀಗಿದ್ದಾರೆ ನಮ್ಮ ಜನಪ್ರತಿನಿಧಿಗಳು.  

ಈಗಲೂ ಪೆಹಲೂ ಖಾನ್ ಮತ್ತವನ ಮಕ್ಕಳು  ಆಪಾದಿತರೇ.! ಪೆಹಲೂ ಖಾನ್  ನಿರಪರಾಧಿ ಎಂದು ಯಾವ ಪತ್ರಿಕೆಗಳೂ ಧೈರ್ಯವಾಗಿ ಬರೆಯಲಿಲ್ಲ. ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಒಬ್ಬರೇ ಪೆಹಲೂ ಖಾನ್ ನಿರಪರಾಧಿ. ಗೋವುಗಳನ್ನು ತನ್ನ ಡೇರಿ ಉತ್ಪಾದನೆಗಾಗಿ ಖರೀದಿಗಾಗಿ ತರುತ್ತಿದ್ದ. ಅವನ ಬಳಿ  ಖರೀದಿಯ ಎಲ್ಲ ದಾಖಲೆಗಳೂ ಇದ್ದವು.  ಕಸಾಯಿಖಾನೆಗಾಗಿ ಅಲ್ಲ ಎಂದು ಧೈರ್ಯವಾಗಿ  ಎರಡು ವರ್ಷದ ಹಿಂದೆಯೂ ಸತ್ಯವನ್ನೇ ಬರೆದಿದ್ದರು. ಈಗಲೂ . Newsclick ಗೆ ಕೊಟ್ಟ ಹೇಳಿಕೆಯಲ್ಲಿ ಹರ್ಷ ಮಂದರ್ ಗೋರಕ್ಷಕರ ಮೇಲೆ ಯಾವ ಕಾರ್ಯಾಚರಣೆಯನ್ನೂ ಮಾಡದ ಕಾಂಗ್ರೆಸ್ ಬಗ್ಗೆ ಅಸಮಾಧಾನ ಮತ್ತು ಅಪರಾಧಿ ನ್ಯಾಯ ವ್ಯವಸ್ಥೆಯೆ ಬುಡಮೇಲಾಗಿದ್ದುದರ ಬಗ್ಗೆ ಖೇದವನ್ನು ವ್ಯಕ್ತಪಡಿಸಿದ್ದಾರೆ.   

ಗುಂಪುದಾಳಿ ನಡೆಸಿ ಕೊಂದವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸದೇ ರಾಜಸ್ಥಾನ ಖಾಕಿ ಇಲಾಖೆ ಪೆಹಲೂ ಖಾನ್, ಅವನ ಮಕ್ಕಳಾದ ಇರ್ಷಾದ್ ಮತ್ತು ಆರಿಫ್ ಮತ್ತು ಆ ಟ್ರಕ್ಕಿನಲ್ಲಿ ಜೊತೆಗಿದ್ದ ಯುವಕರ ವಿರುದ್ಧ ರಾಜಸ್ಥಾನ್ ಬೋವಿನ್ ಅನಿಮಲ್ ( RBA ACT) ಹತ್ಯೆ ನಿಷೇಧ ಮತ್ತು ತಾತ್ಕಾಲಿಕ ವಲಸೆ ಅಥವ ರಫ್ತು ನಿಯಂತ್ರ ಕಾಯ್ದೆಯಡಿ ಮೊದಲ ಮಾಹಿತಿ ವರದಿಯನ್ನು ದಾಖಲಿಸಿದ್ದು ಇಡೀ ಕೊಳೆತ ವ್ಯವಸ್ಥೆಯ ಅರಾಜಕತೆಗೆ ಹಿಡಿದ ಕನ್ನಡಿ.    

ಗೋಮಾಂಸ ಸೇವಿಸಿದ್ದಾನೆಂದು ದಾದ್ರಿಯ ಮೊಹಮ್ಮದ್ ಅಖ್ಲಕ್ನ ಮೇಲೆ ಭಗವಾ ಗುಂಪು ದಾಳಿ ನಡೆಸಿ ಹತ್ಯೆ ನಡೆಸಿದಾಗಿನಿಂದರೂ ಕೇಸರಿಯ ಮತಾಂಧರ ಗುಂಪುಗಳ ದೌರ್ಜನ್ಯಕ್ಕೆ ಅಂಕೆಯಿಲ್ಲದಂತಾಗಿದೆ.  ಸಾಮಾಜಿಕ ತಾಣಗಳು ಮಾಧ್ಯಮಗಳು ಪ್ರಧಾನಿಯ ಮೌನವನ್ನು ಪಶ್ನಿಸತೊಡಗಿದಾಗ ಬಾಯಿಬಿಡುವ ಪ್ರಧಾನಿಗಳು ತಮ್ಮ ಪಕ್ಷದ ’ಝಿರೋ ಟಾಲರೆನ್ಸ್’ ನೀತಿಯನ್ನು ಎತ್ತಿಹಿಡಿಯುತ್ತ  ಕಾಟಾಚಾರದ ಮಾತುಗಳನ್ನಾಡುತ್ತಾರೆಯೇ ಹೊರತು ಮೃತರ ಗುಡಿಸಲುಗಳಿಗೆ ಯಾವನೊಬ್ಬ ಕಾರ್ಯಕರ್ತನೂ ಹೋಗಿ ಸಾಂತ್ವನದ ಮಾತುಗಳನ್ನು ಹೇಳುವುದಿಲ್ಲ.  ಬದಲಿಗೆ ಎಬಿವಿಪಿಯನ್ನು ಛೂ ಬಿಟ್ತು ಅವರು ಹಗರಣಕ್ಕೆ ಹೊಸ ಹೂರಣವನ್ನು ಬೆರೆಸಿ ಕುಲಾಂತರ, ಮತಾಂತರದ , ಲವ್ ಜಿಹಾದಿನ ಪಕೋಡಗಳನ್ನು ಕರಿದು  ಧ್ರುವೀಕರಣದ ಬೆಂಕಿ ಆರದಂತೆ ತುಪ್ಪವನ್ನು ಸುರಿಯುತ್ಟಾರೆ. 

ಬುಲಂದಶಹರಿನ ಚಿಂಗರವಾಟಿ ಹಳ್ಳಿಯಲ್ಲಿ ಇಪ್ಪತ್ತೈದು ಗೋವುಗಳ ಮೂಳೆಗಳು ಸಿಕ್ಕಿವೆಯೆಂದು ನಡೆದ ಗಲಭೆಯಲ್ಲಿ  ಸಿಯಾನಾ ಪೋಲಿಸ ಥಾಣೆಯ ಥಾಣಾಧಿಕಾರಿ (SHO) ಸುಬೋಧ ಕುಮಾರ್ ಗೋಲಿ ಸಿಡಿದು ಮೃತಪಟ್ತಿದ್ದರು.  ಮುಖ್ಯ ಆರೋಪಿ ಯೋಗೇಶ್ ರಾಜ್ ಸಹಿತ ಇಪ್ಪತ್ತೇಳು ಜನರ ಮೇಲೆ ಬುಲಂದಶಹರಿನ ಪೋಲಿಸರು ಮೊದಲ ಮಾಹಿತಿಯನ್ನು ದಾಖಲಿಸಿದ್ದರು.  ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಮತ್ತು ಭಜರಂಗ್ ದಳದ ಕನ್ವಿನರ್ ಆಗಿದ್ದ ಯೋಗೇಶ್ ರಾಜ್ ನ್ನು ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದು ವಿಹೆಚ್ಪಿ ಅವನ ಪರ ವಾದಿಸಿ ಅಪರಾಧಿಯ ರಕ್ಷಣೆಗಾಗಿ ನಿಂತಿತು. ಅಪರಾಧಿಗಳಲ್ಲದವರ ಮೇಲೆ  ಸುಳ್ಳು ಕೇಸನ್ನು ದಾಖಲಿಸಿಕೊಂಡಿದ್ದರು.   

ಹೀಗೆ ನಮ್ಮ ಭವ್ಯ ಭಾರತದಲ್ಲಿ ನಿಜವಾದ ಅಪರಾಧಿಗಳು ತಲೆ ಮರೆಸಿಕೊಂಡು ಕಾಲರ್ ಏರಿಸುತ್ತ ಮರ್ಸಿಡಿಸ್ ಕಾರಲ್ಲಿ ಓಡಾಡುತ್ತಾರೆ. ಅಪರಾಧ ಮಾಡದ ಅಮಾಯಕರು, ನಿರ್ದೋಷಿಗಳು ಖಾಕಿ ಇಲಾಖೆಯ  ಬೆತ್ತದ ಹೊಡೆತಗಳನ್ನು ತಿನ್ನುತ್ತ ಜೈಲಿನ ನರಕವನ್ನು ಅನುಭವಿಸುವಂತಾಗುತ್ತದೆ. ಅಪರಾಧಿ  ಕೃತ್ಯಗಳಿಗೆ ಮತು ಫೇಕ್ ಎನಕೌಂಟರುಗಳಿಗೆ ಕುಖ್ಯಾತರಾದ ಉ.ಪ್ರ ಪೋಲಿಸರು ನೂರಾರು ನಿರ್ಧೋಷಿಗಳನ್ನು ಬಂಧಿಸಿ ಶಿಕ್ಷಿಸಿದ್ದಾರೆ. ಉತ್ತರಪ್ರದೇಶದಲ್ಲಿ   ಲೆಕ್ಕವಿಲ್ಲದಷ್ಟು ಇಂಥ ಉದಾಹರಣೆಗಳಿವೆ.    

ಭಾರತದಾದ್ಯಂತ ಎಲ್ಲಾ ರಾಜ್ಯಗಳೊಂದಿಗೆ (ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ , ಕರ್ನಾಟಕ) ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುವ ಇಂಥ ಗುಂಪುಗಳನ್ನು ನಿಷೇಧಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದರೂ ಹಿಂಸೆಗಳು ತಡೆಯಿಲ್ಲದೆ ನಡೆಯುತ್ತಿವೆಯೇ ಹೊರತು ತಗ್ಗಿಲ್ಲ.  ಗುಂಪುದಾಳಿಯ ಹಿಂಸಾಚಾರದಲ್ಲಿ ಭಾಗಿಯಾಗುವವರಿಗೆ ಕಾನೂನಿನದಾಗಲಿ, ಶಿಕ್ಷೆಯದಾಗಲಿ ಯಾವ ಭಯವೂ ಇಲ್ಲ.  ತಮ್ಮನ್ನು ರಕ್ಷಿಸುವವರು ಇದ್ದೇ ಇದ್ದಾರೆಂದು ಅವರಿಗೆ  ಗೊತ್ತಿದೆ. 

ಕಳೆದ ಕೆಲ ವರ್ಷಗಳಿಂದ ಇದೇ ನಡೆಯುತ್ತಿದೆ. ಬುಲಂದಶಹರಿನ ಸಿಯಾನದ ಥಾಣಾ ಅಧಿಕಾರಿ ಸುಬೋಧ ಕುಮಾರ ಹತ್ಯೆಯಿರಬಹುದು, ಫರೀದಾಬಾದಿನ ಜುನೈದ್ ಇರಬಹುದು ಅಥವಾ ಜಾರಖಂಡದ ತಬ್ರೇಜ್ ಅನ್ಸಾರಿ ಇರಬಹುದು ಒಂದಿಲ್ಲಾ ಒಂದು ಗೋ ಸಂಬಂಧಿ ಅನುಮಾನದ ಕಾರಣಕ್ಕೆ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ  ಸಂಖ್ಯೆ ಏರುತ್ತಿದೆ.  ಪ್ರಭುತ್ವದ ಠೇಕೇದಾರರು  ಒಳಗೊಳಗೇ ನಗುತ್ತಾರೆ.  

ದೇಶದಲ್ಲೀಗ ಬೆಳಗಾದರೆ  ಕೌಸಲ್ಯಾ ಸುಪ್ರಜಾ ರಾಮ ಮರೆಯಾಗಿ ನಾಥೂರಾಮನ ಜೈಕಾರ  ಭಯಹುಟ್ಟಿಸುತ್ತದೆ. ಜೈಶ್ರೀರಾಮ್,  ಕಾಶ್ಮಿರ, ದಲಿತ ಮತ್ತು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕೋಮುವಾದ, ಧ್ರುವೀಕರಣದಂತಹ ಸಾಮಾಜಿಕ ವಿಕೃತಿಗಳ ನಡುವೆ  ನಾವು ಬದುಕುತ್ತಿದ್ದೇವೆ.. ನಿಜ ಅರ್ಥದಲ್ಲಿ ಬದುಕೆಂದರೆ  ಬದುಕಲ್ಲ,  ಬರಿ ಉಸಿರಾಡುತ್ತಿದ್ದೇವೆ ಎನ್ನಲೇ.