"ದೇವನಾಗ ಬಹುದು ಆದರೆ ಬಸವಣ್ಣ ನಾಗಲು ಸಾಧ್ಯವೇ..?”

ಯಾಕೋ ಬಸಣ್ಣ ಬಾಳ ಚಿಂತಿಮಾಡಕಾ ಹತ್ತೀಯಲ್ಲ....ವಾಕಿಂಗ್ ಬರೋದು ಬಿಟ್ಟು...  ಬೇವಿನಕಟ್ಟಿ ಹಿಡಿದಬಿಟ್ಟಿಯಲ್ಲ.....? ಅಂತಾದ್ದೇನಾಗಿತೋ...? ಚಾಹಾದ ಅಂಗಡಿ ಕಡೆಗೂ ಬರಲಿಲ್ಲ...? ವಾಕಿಂಗೂ ಬರಲಿಲ್ಲ...! ಎಲ್ಲಿ ಹೋದ್ನಪಾ ಇವಾ ಅಂತ್ ಚಿಂತಿಗೆ ಬಿದ್ದಿದ್ದೆ. "ನಿನ್ನ ಮೊಬೈಲ್ಗೆ ಪೋನ್ ಮಾಡಿದ್ರ ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಬಿಟ್ಟು ಹೋಗಿದ್ದಾರೆ ಅಂತ ಯಾವ್ದೋ ಹೆಣ್ಣಮಗಳು ಹೇಳಿದ್ಲು....! ಏನು ನಿನ್ನ ಕತಿ...."

ಅಂತಾದ್ದೇನಿಲ್ರೀ.... ಇವತ್ತ... "ಬಸವಜಯಂತಿ ಅಂತ ಬೆಳಿಗ್ಗೆ ನೀರು ಹೊಯ್ಯಕಂಡು ಬಸವೇಶ್ವರ ಸರ್ಕಲ್‍ಕಡಿಗೆ ಹೋದ್ರಾತು ಅಂತ ತಯಾರಾಗಿದ್ದೇ.... ಅಷ್ಟರಾಗ ಬಸವಭಕ್ತರು, ಮಕ್ಕಳು ಬಸವಣ್ಣನವರ ಪೋಟೋ ಹಿಡ್ಕೊಂಡು "ಪಾಹಿಮಾಮ ಪಾಹಿ ಬಸವ ಬಸವ ಪಾಹಿಮಾಮ ", "ಇವನಾರವ ಇವನಾರವ ಎಂದಿನೆಸದಿರಯ್ಯ ಇವ ನಮ್ಮವ... ಇವ ನಮ್ಮವ ...ಎಂದಿನಿಸಯ್ಯ ", "ಕಳಬೇಡ... ಕೊಲಬೇಡ... ಹುಸಿಯನುಡಿಯಲು ಬೇಡ ...ಅಂತ ವಚನಗಳನ್ನ ಹೇಳ್ತಾ ಬರ್ತಿದ್ದರು..... ಇತ್ಲಾಗ "ಅಗ್ರಹಾರದ ಮುಂದ ಇಟ್ಟಿದ್ದ ಕಸದ ಬಾನಿ ಹತ್ರಾ  ಚಿಂದಿ ಆಯೋ ನಾಲ್ಕಾರು ಮಕ್ಕಳು  ಅಲ್ಲಿದ್ದ   ನಾಯಿ-ಹಂದಿನ ಕಲ್ಲತಗೊಂಡು ಹೊಡ್ದು ಓಡ್ಸಿ  ಕಸದಬಾನಿಗೆ ಇಳ್ದು   ಹಳೇ ಪೇಪರು, ಖಾಲಿ ಬಾಟಲಿ ಆರಿಸಿಕೊಳ್ತಾ ಇದ್ರು..."  " ಅದ್ರಾಗ ಬಿದ್ದಿದ್ದ ಮುಸ್ರಿ ಒಳಗ ಸಿಕ್ಕ ಮೋತಿ ಚೂರಿನ ಉಂಡಿ, ಅಗಳನ್ನ ಆರಸಿಕೊಂಡು ತಿನ್ತಾ ಇದ್ರು.  ಪಕ್ಕದಲ್ಲೆ  ಬರ್ತಾ ಇದ್ದ ಬೋರವಲ್ ನೀರು ಕುಡಿತಾ ಇದ್ರು..... ಇದನ್ನ ನೋಡಿ ನನಗ ನಮ್ಮ ದೇಶದ ವ್ಯವಸ್ಥೆ ಸುದಾರಸ್ಸೋದು  ಯಾವಾಗ...? ನಮ್ಮ ಸಮಾಜ ಸುದಾರಿಸೋದು...ಯಾವಾಗ  ಅಂತ..?ಅಂತ ಬೇವಿನಕಟ್ಟಿ ಹಿಡ್ದು ಚಿಂತಿಮಾಡಾಕ ಹತ್ತಿದ್ದೇ ನೋಡ್ರೀ"....!

ಅಲ್ಲೋ ಎಂತಾ "ಮಹಾತ್ಮನ ಜನ್ಮದಿನಾಚರಣೆ ದಿವ್ಸ್ ಎಂತಾ ಮಾತ ಹೇಳ್ದಿ...."  "ಈಮೇಲು-ಕೀಳು, ಹಸಿವು, ಕಾಯಕಾ-ದಾಸೋಹ ಅನ್ನೋಪದಗಳು ಪುಸ್ತಕದ ಬದ್ನಿಕಾಯಿ ಆಗ್ಯಾವು....".? "ವರ್ಷಕ್ಕೋಮ್ಮೆ ಬಸವಣ್ಣನ ಪೋಟೋಕ, ಅವನ್ ಪುತ್ಥಳಿಗೆ ಮಾಲಿಹಾಕಿ ಕೈಮುಗ್ದು ಬಾಯಾಗ ನಾಲ್ಕಾರ ಬಸವಣ್ಣನ ವಚನ ಹೇಳಿ ಅವನ್ನ ಮರ್ತ ಬಿಡ್ತವಿ....." ! " ಇನ್ನ  ಬಸವಣ್ಣ ಹೆಸರಲ್ಲಿ ಮಠ ನಡೆಸೋ ಕೆಲವು ಮಠಾಧೀಶರು ದೊಡ್ಡ ದೊಡ್ಡ ಮಠ ಕಟಿಗೊಂಡು, ಶಿಕ್ಷಣ ಸಂಸ್ಥೆಗಳನ್ನು ತೆರಕಂಡು, ಮೆಡಿಕಲ್ ಕಾಲೇಜು, ಇಂಜನಿಯರಿಂಗ್ ಕಾಲೇಜು ತೆರಕಂಡು , ಶಿಕ್ಷಣ ಅನ್ನೋ ವ್ಯಾಪಾರ ನಡಸ್ತಾ  ಓಡಾಡಾಕ ಐಶಾರಾಮಿ ಕಾರು ಇಟಗೊಂಡು ವೇದಿಕಿಮ್ಯಾಲ ಬಸವಣ್ಣನವರ ಸಮಾನತೆಯ ಬಗ್ಗೆ, ಕಾಯಕ-ದಾಸೋಹದ ಬಗ್ಗೆ ಭಾಷಣಾ ಮಾಡ್ತಾರ...".  "ಇನ್ನು  ನಮ್ಮ ರಾಜಕಾರಣಿಗಳೂ ಅವರ ಬಗ್ಗೆ ಮಾತಾಡೋದ ಬ್ಯಾಡ..".!  "ಬಸವಜಯಂತಿ ದಿವ್ಸ್ ಬಸವಣ್ಣನ ಬಗ್ಗೆ ಭಯಂಕರ ಭಕ್ತಿ ತೋರಿಸಿ ಮಠಾಧೀಶರ ಮುಂದ ಅಡ್ಡ-ಉದ್ದ ಬಿದ್ದು ದಿಂಡರಕಿ ಉರಳತಾರ...? ಇನ್ನೆಲ್ಲೇ ಸಮಾನತೆ...? ಇನ್ನೇಲ್ಲೇ ಸಮಸಮಾಜ...? ಇನ್ನೇಲ್ಲೇ ಕಾಯಕ, ದಾಸೋಹ, ಇನ್ನೇಲ್ಲೇ ಬಡವರಿಗೆ ಶಿಕ್ಷಣ...? ಸಮಾನತೆ ಏನಿದ್ರೂ ಭಾಷಣದಾಗ ಉಳಿದೈತೋ ತಮ್ಮ......"

ಅಲ್ರೀ ಕಾಕಾ ಹಿಂಗಾದ್ರ ಹೆಂಗ್ಯ...?, ಬಸವಣ್ಣನವರೂ ಯಾರಸಲವಾಗಿ ಅನುಭವಮಂಟಪಾ ಸ್ಥಾಪನೆಮಾಡಬೇಕಿತ್ತು...? "ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣ-ಶರಣೆಯರನ್ನ ಕಟಿಗೊಂಡು ವಚನಗಳನ್ನ ಬರ್ದು, ನಮ್ಮ ಬದುಕು ಹೆಂಗಿರಬೇಕು,.."? " ನಮ್ಮ ಕಾಯಕ ಹೆಂಗಿರಬೇಕು...? ದಾಸೋಹ ಹೆಂಗ ಇರಬೇಕು... ಅನ್ನೋದನ್ನ ವಚನಗಳ ಮೂಲಕಾ ಹೇಳಿದ್ರು."   " ಏಕಕಾಲಕ್ಕ 770 ಅಮರ ಗಣಾಧೀಶ್ವರರು, 36 ಶರಣೆಯರು ಒಂದ್ ಕಡಿಗೆ ಸೇರಿ ಹೊಸಧರ್ಮ  ರಚಿಸಿ ಧರ್ಮದ ಉಳಿವೆಗಾಗಿ ಶಸ್ತ್ರಧಾರಿ ಗಳಾಗಿ ಹೋರಾಡಿ ರಕ್ತಾ ಹರಿಸಿ ವಚನ ಸಾಹಿತ್ಯ ರಕ್ಷಣೆ ಮಾಡಿದ್ದರು". ಬಸವಣ್ಣನವರ ಪತ್ನಿ ಗಂಗಾಂಭಿಕೆ ಮತ್ತ ಅನೇಕ ಶರಣ್ರು ಖಡ್ಗದಿಂದ ಹೋರಾಟ ಮಾಡಿ ವೀರಮರಣ ಅಪ್ಪಿದ್ರು".   "ವಚನ ಸಾಹಿತ್ಯದ ಉಳಿವಿಗಾಗಿ ಗಣಾಚಾರ ಶರಣ ರಾದ ಅಂಬಿಗರ ಚೌಡಯ್ಯನವರು, ಮಡಿವಾಳ ಮಾಚಯ್ಯನವರು, ಡೋಹರ ಕಕ್ಕಯ್ಯನವರು ಸೇರಿದಂಗ ಅನೇಕ ಶರಣರು ಪ್ರಾಣ ಬಲಿದಾನ ಮಾಡಾರ".   "ಬಸವಣ್ಣನವರ ಹೋರಾಟ ಸಮಗ್ರವಾದ ಹೋರಾಟ, ಹಿಂಗಾÁಗಿ ಬಸವಣ್ಣನವರ ಸ್ಮರಣೆ ಅಂತ್ಯಜನಿಂದ ಅಗ್ರಜನವರೆಗೆ ಎಲ್ಲ ವರ್ಗದವ್ರಿಗೆ ಅತ್ಯಅವಶ್ಯ.ಐತಿ ". ಆದ್ರ  "ಬಸವಣ್ಣನವರ ಹೆಸರಿನ್ಯಾಗ  ಕಂಟಮಠ ಹುಗ್ಗಿ ಹೊಡಿಯೋ ಕೆಲವು ಮಠಾಧೀಶರಿಗೆ ಏನಾಗೈತಿ ? ಸುಖದ ಸುಪ್ಪತ್ತಿಗಿಒಳಗ ಮೆರ್ಯಾಕ ಹತ್ಯಾರ.....    ಧರ್ಮದ ಉಳಿವಿಗಾಗಿ ರಕ್ತ  ಹರಿಸಿದ ಶರಣರ ಒಂದು ಭಾವ ಚಿತ್ರ ಹಾಕಾಕ ಇವ್ರಿಗೆ  ಪುರಸೊತ್ತಿಲ್ಲ ನೋಡು ಬಸಣ್ಣಾ....?

 ಕಾಕಾರ "ಬಸವಣ್ಣ ಈಮಂದಿಗೆ ಒಂತರಾ ವ್ಯಾಪಾರದ ವಸ್ತು ಆಗಿಬಿಟ್ಟನಾ ಅಂತಿರೇನು? ಮತ್ತ...." !

ಹೌದೋ ಹೌದು.... "ಬಸವಣ್ಣ ಆನಿ ಮ್ಯಾಗ ಹೋಗಬ್ಯಾಡ್ರೀ.... ಕುದರಿಮ್ಯಾಲ ಹೋಗಬ್ಯಾಡ್ರೀ...ಕುಂಕುಮ ಕಸ್ತೂರಿ ಹಾಕ್ಯೋಂಡು ಹೋಗಬ್ಯಾಡ್ರೀ ಅಂತ ವಚನದಾಗ ಹೇಳ್ಯಾನ".  "ಆದ್ರ ನಮ್ಮ ಕೆಲವು ಮಠಾಧೀಶರು ಮಾಡಿದ್ದೇನೂ? ಹಿಂದಿನ ರಾಜ-ಮಹಾರಾಜುರ್ರು ಮೈಮ್ಯಾಗ ಹಾಕ್ಕೋಂತಿದ್ದ ಮಣಗಟ್ಟಲೇ ಬಂಗಾರದ ಆಭರಣಗಳನ್ನ ಇವ್ರು ತಾವು ರಾಜರ ವಾರಸದಾರರು ಅನ್ನೊಂಹಂಗ್ ತಮ್ಮ ಮೈಮ್ಯಾಲ ಹಾಕ್ಕೋಂಡು ಪಲ್ಲಕ್ಕಿ ಮ್ಯಾಲ ಕುತಗೊಂಡು ಮೆರಿತಾರ."...! "ತಾವು ಮ್ಯಾಲಿಂದ ಉದರಿದವ್ರು.... ತಮ್ಮ ಸರಿಸಮ ಯಾರೂ ಇಲ್ಲ...! ಅಂತ ವೇದಿಕೆಮ್ಯಾಲ ಎತ್ತರದ ಕುರ್ಚೆ ಹಾಕಿಸಿಕೊಂಡು ಕುತಗೊಳ್ಳೋ ಇವ್ರ ಬಾಯಾಗ ಸಮಾನತೆ ಮಾತು ಬರ್ತಾವು...." "ಬೂತದಬಾಯಿ ಒಳಗ ಭಗವದ್ಗೀತೆ ಅನ್ನೋಮಾತಿನ ಹಂಗ್ ಇವ್ರ ಬಸವಣ್ಣನ ಮೂಲತತ್ವಕ್ಕ ಎಳ್ಳು ನೀರು ಬಿಟ್ಟು  ಜನರನ್ನ ದಾರಿತಪ್ಪಸಾಕ ಹತ್ಯಾರ". "ಅದಕ್ ಅಲ್ಲಮಪ್ರಭುಗಳು  ದೇವರನ್ನ  ತಮ್ಮ ವಚನದಾಗ "ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ?" ಎಂದು ಕೇಳ್ಯಾರ.... "ದೇವನಾಗ ಬಹುದು ಆದರೆ ಬಸವಣ್ಣನವರಾಗಲಿಕ್ಕೆ ಸಾಧ್ಯವಿಲ್ಲ" ಅ<ತ ಬಸವಣ್ಣನ ಹಾಡಿಹೊಗಳ್ಯಾರ." ಇನ್ನ ಬಸವಣ್ಣನ ಬಿಟ್ರ ಕೆಲವು ಮಠಾಧೀಶರ್ಗೆ ಬೇರೆಯಾರೂ ಇಲ್ಲೋ....!  "ಅದಕ್ ಅಲ್ಲಮ ಪ್ರಭು "ಬ" ಎಂಬಲ್ಲಿ ಎನ್ನ ಭವ ಹರಿಯಿತ್ತು, "ಸ" ಎಂಬಲ್ಲಿ ಸರ್ವಜ್ಞಾನಿ ಆದೇನಯ್ಯ "ವ"ವೆಂದು ವಚಿಸುವಡೆ ಚೈತನ್ಯಾತ್ಮಕನಾದನಯ್ಯ ಇಂತಿ ಬಸವಾಕ್ಷತ್ರಯಗಳೆನ್ನ ಸರ್ವಾಂಗವನ್ನು ತೊಳೆದು ಬೆಳಗುದ ಕಂಡು ಆನು ನೀನು ಬಸವ ಬಸವ ಎನುರ್ತಿದ್ದೆವಯ್ಯ ಗುಹೇಶ್ವರ  ಅಂತ ಬಸವಣ್ಣನ್ನ ಹಾಡಿಹೊಗಳ್ಯಾರ." 

ಆದ್ರ ಭಕ್ತ ವರ್ಗ ನಿದ್ರಿಸತೈತಿ.....! ದಲಿತ ವರ್ಗದವರಾದ್ರು ಎಚ್ಚೆತ್ತುಕೊಂಡು  ಬಸವಕ್ರಾಂತಿಯನ್ನು ತಮ್ಮ ಕೈಗೆ ತಗೊಬೇಕು. ಯಾಕಂದ್ರ  "ಸಾವಿರ ವರ್ಷಗಳ ಹಿಂದ್ ಬ್ರಾಹ್ಮಣ ಮಧುವರಸನ ಮಗಳಿಗೂ ಸಮಗಾರ ಹರಳಯ್ಯನ ಮಗನಿಗೂ ಕಲ್ಯಾಣ ಕಾರ್ಯ ನೆರವೇರಿಸಿದವ್ರು ಬಸವಣ್ಣನವರು". "ಶರಣ ಧರ್ಮದ ಗೋತ್ರ ಪುರುಷರು ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ. ನಮ್ಮ ಉಸಿರಾಗಿ, ಅವರ ಸಂದೇಶ ಗಳನ್ನು ನಮ್ಮ ಜೀವನದ ಹಾಸು ಹೊಕ್ಕಾಗಿ ಮಾಡಿಕೊಳ್ಳಬೇಕೋ."  " ಆದ್ರ ಗುಡಿ, ಗುಂಡಾರ , ದೇವ್ರು- ದೆವ್ವಗಳನ್ನು ವಿರೋಧಮಾಡಿದ್ದ ಬಸವಣ್ಣಗ ನಮ್ಮಜನ ಗುಡಿ ಕಟ್ಟಿಸಿ ಅವಗ ಜಾತಿ ಸಂಕೋಲೆ ತೊಡ್ಸಿ ಗುಡಿ ಬಿಟ್ಟ ಬಸವಣ್ಣ ಹೊರಗ ಬರದಂಗ ಕುಂಡ್ರಿಸಿ ಬಿಟ್ಟಾರ..ಗುಡುಒಳಗ " " ಆದ್ರ ಬಸವಣ್ಣನ  ತತ್ವಗಳನ್ನು ಎಲ್ಲಿವರಗೋ ಇವ್ರು ಮುಚ್ಚಿಡತಾರ,...? ಬಸವಣ್ಣನವರ ವಚನ ಅಂದ್ರ ಬೆಂಕಿ ಇದ್ದಂಗ ಇವತ್ತಿಲ್ಲ ನಾಳೆ ಅವು ಬೆಳಕಿಗೆ ಬಂದ ಬರ್ತಾವು", " ಸಮಸಮಾಜ ನಿರ್ಮಾಣ ಆಗೇ ಆಕೈತಿ  ಬಾ...ಬಾ ಬಸಣ್ಣ ನಡಿ ಬಸವಜಯಂತಿ ಆಚರಸಾಕ ಹೋಗೋಣ ಬಾ ಎನ್ನುತ್ತಾ ಕಾಕಾ ಪಾಟೀಲರು ಬಸವೇಶ್ವರರ ವೃತ್ತದಕಡೆಗೆ ವಿಷಾದದಿಂದ ಹೆಜ್ಜೆಹಾಕಿದರು.