ಬಸವರಾಜನ ವೃಷಭಪುರಾಣ!

ಇವರು ಹೋಗುವ ಹೊತ್ತಿಗೆ ಎತ್ತು ಪೂರಾ ಕಾಲು ಚಾಚಿ, ಗೋಣು ನೆಲಕ್ಕೆ ಚೆಲ್ಲಿ ಮಲಗಿದ್ದವು. ಅವು ಬಿದ್ದಿರುವ ದೆಸೆ ನೋಡಿಯೆ ಬಸುರಾಜನ ಎದೆ ಧಸಕ್ಕೆಂದಿತು! ಚವಡಾಳರು ಅವುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು. ಎರಡೂ ಎತ್ತಿನ ಬಾಯಿಯಲ್ಲಿ ಬುರುಗು ಬಂದಿತ್ತು. ಗುದದ್ವಾರಗಳಲ್ಲಿ ರಕ್ತಸ್ರಾವ‌ವಾಗಿತ್ತು! ಅವು ತೀರಾ ಸಂಕಟಪಡುತ್ತಲಿದ್ದವು. ಅವುಗಳಿಗೆ ಏನೋ ವಿಷಪ್ರಾಶನ ಆಗಿರಬೇಕೆಂದು ಅವರು ಅಂದಾಜಿಸಿದರು. ಆದರೆ, ಹಾಗೇ ಆಗಿರುವ ಸಂಭವವಿರಲಿಲ್ಲ. ಅಥವಾ ದಾರಿಯಲ್ಲಿ ಹಾವು ಏನಾದರೂ ಕಚ್ಚಿದ್ದರೆ......

ಬಸವರಾಜನ ವೃಷಭಪುರಾಣ!

ಕುಕ್ಕುರಗುಂದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಒಂದು ಹಳ್ಳಿ. ಕುಕ್ಕುರಗುಂದದ ಸುಬ್ಬಣ್ಣನವರಿಗೆ ಬಿದರಳ್ಳಿಯಲ್ಲಿಯೂ ಒಂದಿಷ್ಟು ಜಮೀನಿತ್ತು. ಊರಲ್ಲಿ ದನ ಕಟ್ಟಲೆಂದೇ ಮನೆ, ಖಣ ಮಾಡಿದ್ದರು. ಪ್ರತಿವರ್ಷ ಬಿತ್ತಿಗೆ ಮುಗಿಯುವವರೆಗೂ ಎರಡು ಜೊತೆ ಎತ್ತು, ಆಳುಮಕ್ಕಳು ಅಲ್ಲೇ ಇರುತಿದ್ದರು. ಬಿತ್ತಿಗೆ ಮುಗಿದ ಮೇಲೆ ಎತ್ತುಗಳೊಂದಿಗೆ ಅವರು ಕುಕ್ಕುರಗುಂದಕ್ಕೆ ವಾಪಾಸಾಗುತಿದ್ದರು. ಮತ್ತೆ ಎಡೆ ಹೊಡೆಯುವ ಅಂದರೆ, ಬೆಳೆ ಸಾಲು ಮಾಡುವ ಕೆಲಸ ಆರಂಭವಾಗುತ್ತಿದ್ದಂತೆ ಒಂದು ಜೊತೆ ಎತ್ತು ಒಬ್ಬ ಮಗ ಬಿದರಳ್ಳಿಗೆ ಬರುತಿದ್ದರು.

ಆ ವರ್ಷದ ಬಿತ್ತಿಗೆ ಮುಗಿದು ಹಾಕಿದ ಬೆಳೆಗಳೆಲ್ಲ ಚೆನ್ನಾಗಿ ಹುಟ್ಟಿದ್ದವು. ಸಾಲು ಮಾಡುವ ಕೆಲಸವನ್ನು ಇನ್ನೇನು ಆರಂಭಿಸಬೇಕಿತ್ತು. ಸುಬ್ಬಣ್ಣನವರು ಕಮ್ತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ತಮ್ಮ ಮಗನನ್ನು ಕರೆದು `ತಮ್ಮಾ, ನೀನು ನಾಳೆ ಬೆಳಿಗ್ಗೆ  ನಾಕಕ್ಕೆ  ಎದ್ದು ನಮ್ಮ ಕರಿಯ, ಕಾಳಿಂಗನ ಮೇಯ್ಸಿಕೊಂಡು ಬಿದ್ರಳ್ಳಿಗೆ ಹೋಗು. ಅಲ್ಲೆ ಒಂದಿಬ್ಬರು ಆಳು ತಗೊಂಡು ನಾಲ್ಕು ದಿನ ಇದ್ದು ಅಲ್ಲಿ ಹೊಲಗೂಳ್ನೆಲ್ಲ ಎಡೆ ಹೊಡ್ಕೊಂಡು ಬಾ' ಎಂದರು. ಮಗ ಬಸವರಾಜ` ಊಂ ಎಂದ.

‌ಸುಬ್ಬಣ್ಣನವರಿಗೆ ಮತ್ತೇನೋ ನೆನಪಾಗಿ,` ತಮ್ಮಾ, ಅಟವಾಳಗ್ಯಾಗ ಎತ್ತಿಗೆ ಒಡೆಸಿದ್ದು ನುಚ್ಚಿನ ಚೀಲ ಐತಿ ಅದನೂ ನೆನಪೆಲ್ಯ ಒಯ್ಯಿ. ಹಗಲೆಲ್ಲ ಹೊಲ ಹೊಡೆಯೋದು ಎತ್ತಿಗೆ ಭಾಳ ದಣೀವಾಕ್ಕತಿ, ಬೆಳಿಗ್ಗೇ ದಿನಾನು ಅವುಕ ನುಚ್ಚ ತಿನಿಸ್ಕೆಂಡ್ ಹೋಗು. ಮತ್ತ ಹಂಗ ಹತ್ತಿಗೆ ಆಗಲೇ ನುಸಿ ಹತ್ಯಾವು. ಅದಕ ಎಣ್ಣೀ ಹೊಡೀಬೇಕು. ಎಡೆ ಹೊಡೆಯೋದು ಮುಗೀದ ಮ್ಯಾಲ ಮತ್ತೊಂದು ದಿನ ಇದ್ದು ಹತ್ತಿಗೆ ಎಣ್ಣಿ (ಔಷಧ) ಹೊಡದ ಬಂದ್ಬಿಡು' ಎಂದರು. ಅವರ ಮಾತಿಗೆ ತಲೆಯಾಡಿಸಿದ ಬಸವ `ಆಯ್ತು ಯಪ್ಪಾ, ಹಂಗ ಮಾಡ್ತೆನಿ' ಎಂದ.

ಮರುದಿನ ಬೆಳಿಗ್ಗೆ ಬಸವರಾಜ, ಬೇಗ ಎದ್ದು ಎತ್ತಿಗೆ ಹೊಟ್ಟು ಹಾಕಿ ಬಿದರಳ್ಳಿಗೆ ಹೋಗಲು ಬೇಕಾದ ಎಲ್ಲ ಸಿದ್ಧತೆಯಲ್ಲಿ ತೊಡಗಿಕೊಂಡ. ಬಿದರಳ್ಳಿ ಮುಂಡರಗಿ ತಾಲೂಕಿನ ಹಳ್ಳಿಯಾದರೂ ಕುಕ್ಕುರಗುಂದಕ್ಕೆ ಹತ್ತು ಹದಿನೈದು ಕಿ.ಮೀ. ದೂರದ ಆಸುಪಾಸಿನ ಹಳ್ಳಿಯಾಗಿತ್ತು. ತಂಪು ಹೊತ್ತಿನಲ್ಲಿಯಾದರೆ ಬೇಗ ದಾರಿ ಸಾಗುತ್ತದೆ. ಎತ್ತಿಗೂ ದಣಿವಾಗುವುದಿಲ್ಲ ಎಂದು ಸುಬ್ಬಣ್ಣನವರು ಬೇಗ ನಸುಕಿನಲ್ಲಿಯೇ ಹೋಗಲು ಹೇಳಿದ್ದರು. ಅದರ ಪ್ರಕಾರ ಇವನೂ ಸಜ್ಜಾಗಿ ಬಿದರಳ್ಳಿಗೆ ಹೊರಟ.

ಬಾನು ಕೆಂಪಾಗಿ ಸೂರ್ಯ ಮೂಡುವ ವೇಳೆಗಾಗಲೇ ಬಸವರಾಜನ ಎತ್ತುಗಳು ಅರ್ಧ ದಾರಿ ಸವೆಸಿದ್ದವು. ಇನ್ನೇನು ಇನ್ನೊಂದು ತಾಸಿಗೆ ಊರು ತಲುಪಬಹುದು ಎಂದುಕೊಂಡ ಮಲ್ಲೇಶಿ `ಏಯ್ ಕಾಳಿ' ಎಂದು ಎತ್ತುಗಳನ್ನು ಮತ್ತೊಮ್ಮೆ  ಜಬರಿಸಿ, ಅವುಗಳ ದುಬ್ಬ ಸವರಿದ. ಆದರೂ ಎತ್ತು ಬಹಳ ದಣಿದಿರುವಂತೆ ತೇಗುಬ್ಬಸ ಪಡುತ್ತ ನಿಧಾನ ಹೊರಟವು. ಬರುಬರುತ್ತ ಎತ್ತು ತೀರಾ ನಿಧಾನವಾಗಿ, ಸ್ವಲ್ಪ ತರುಬಿಕೊಂಡಾದರೂ ಹೋಗೋಣವೆ ಎಂದೆನಿಸಿ, ಅಲ್ಲೇ ಸಮೀಪದ ಮರವೊಂದರ ಕೆಳಗೆ ಅವುಗಳನ್ನು ನಿಲ್ಲಿಸಿದ. ಅಷ್ಟಕ್ಕೆ ತೀರ ಸೋತಂತೆ ಕಂಡ ಎತ್ತುಗಳು ಅಲ್ಲಿ ತರುಬುತ್ತಲೇ ಹಾಗೇ ಮಲಗಿಬಿಟ್ಟವು. ಬಸವರಾಜನಿಗೆ ಆಶ್ಚರ್ಯವಾಗಿ ನೋಡಿದ. ಎರಡೂ ಎತ್ತುಗಳು ತೀರ ಬಸವಳಿದಂತಾಗಿದ್ದವು. ಒಂದೈದು ನಿಮಿಷ ಬಿಟ್ಟು ಮತ್ತೆ ಎತ್ತುಗಳನ್ನು ಎಬ್ಬಿಸಲು ಹೋದ. ಅವು ಏಳಲೇ ಇಲ್ಲ. ಬಸವರಾಜ, ಇದೇನಪ್ಪ ಇವಕ್ಕೆ ಯಾವ ದೆವ್ವ ಬಡಕ್ಕೊಂತು ಅನ್ನಕೋತ ಒಂದು ಕ್ಷಣ ಭಯಪಟ್ಟ. ಏನು ಮಾಡಬೇಕೆಂಬುದು ತೋಚದೇ ಹಾಗೇ ಎತ್ತುಗಳನ್ನು ನೋಡುತ್ತ ನಿಂತ. `ಮೇವು ತಿಂದಾವು, ನೀರು ಕುಡಿದಾವು ಈಗ್ಯಾಕ ಹೀಂಗ್ ಮಾಡಾಕ್ ಹತ್ತೇವಿವು' ಅಂತ ಅವನಿಗೆ ಯೋಚನೆಗಿಟ್ಟುಕೊಂಡಿತು. ಅದೇ ಹೊತ್ತಿಗೆ ಅವನಿಗೆ ಬಿದರಳ್ಳಿಯವರೆ ಆದ ಚವಡಾಳ ಡಾಕ್ಟರ್ ನೆನಪಾದರು. ಎತ್ತುಗಳನ್ನು ಅಲ್ಲೇ ಬಿಟ್ಟ ಬಸವರಾಜ ಎದ್ದೆನೋ ಬಿದ್ದೆನೋ ಎನ್ನುವ ಪರಿವೆ ಇಲ್ಲದವನಂತೆ ಓಡುತ್ತ ಬಿದರಳ್ಳಿಗೆ ಬಂದ. ಪುಣ್ಣಕ್ಕೆ ಡಾಕ್ಟರು ಮನೇಲೆ ಇದ್ದರು. ಅವರಿಗೆ ಎತ್ತಿನ ಸುದ್ದಿ ಹೇಳಿ ಸ್ವಲಪ ಬಂದು ನೋಡಿ ಸರ್ ಎಂದು ಅಂಗಲಾಚಿ ಬೇಡಿಕೊಂಡ. ಸರಿ ಆಯ್ತು ನೋಡೋಣ ನಡೀ ಎಂದವರೆ ಡಾಕ್ಟರು ಎತ್ತು ನೋಡಲು ಹೊರಟರು.

ಇವರು ಹೋಗುವ ಹೊತ್ತಿಗೆ ಎತ್ತು ಪೂರಾ ಕಾಲು ಚಾಚಿ, ಗೋಣು ನೆಲಕ್ಕೆ ಚೆಲ್ಲಿ ಮಲಗಿದ್ದವು. ಅವು ಬಿದ್ದಿರುವ ದೆಸೆ ನೋಡಿಯೆ ಬಸುರಾಜನ ಎದೆ ಧಸಕ್ಕೆಂದಿತು! ಚವಡಾಳರು ಅವುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು. ಎರಡೂ ಎತ್ತಿನ ಬಾಯಿಯಲ್ಲಿ ಬುರುಗು ಬಂದಿತ್ತು. ಗುದದ್ವಾರಗಳಲ್ಲಿ ರಕ್ತಸ್ರಾವ‌ವಾಗಿತ್ತು! ಅವು ತೀರಾ ಸಂಕಟಪಡುತ್ತಲಿದ್ದವು. ಅವುಗಳಿಗೆ ಏನೋ ವಿಷಪ್ರಾಶನ ಆಗಿರಬೇಕೆಂದು ಅವರು ಅಂದಾಜಿಸಿದರು. ಆದರೆ, ಹಾಗೇ ಆಗಿರುವ ಸಂಭವವಿರಲಿಲ್ಲ. ಅಥವಾ ದಾರಿಯಲ್ಲಿ ಹಾವು ಏನಾದರೂ ಕಚ್ಚಿದ್ದರೆ......

ಈ ಕುರಿತು ಬಸವರಾಜನನ್ನು ವಿಚಾರಿಸಿದರು. ಅವನು ದಾರಿಯಲ್ಲಿ ಅಂಥದೇನೂ ಆಗಿಲ್ಲ ಎಂದ. ಎತ್ತುಗಳಿಗೆ ಏನಾಗಿದೆ ಎಂಬುದು ಮೊದಲು ಸ್ಪಷ್ಟ‌ವಾದರೆ ಅದಕ್ಕೆ ಪೂರಕ ಚಿಕಿತ್ಸೆ ನೀಡಬಹುದು. ಆದರೆ, ಇಲ್ಲಿ ಅವುಗಳಿಗೆ ಏನಾಗಿದೆ ಎಂಬುದೆ ತಿಳಿಯದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಚವಡಾಳರು ಎತ್ತಿನ ಮೂಗಿನ ಬಳಿ ತಮ್ಮ ಮುಖ ಒಯ್ದು ಏನಾದರೂ ವಾಸನೆ ಬರುತ್ತಿದೆಯೆ ಎಂದು ಗಮನಿಸಿದರು. ಕೂಡಲೆ ಅವರಿಗೆ ಎಂಡೋಸಲ್ಫಾನ್ ಕೀಟನಾಶಕದ ವಾಸನೆ ಬರಹತ್ತಿತು. ಈ ಸಂಬಂಧ ವಿಚಾರಿಸಲಾಗಿ ಬಸವರಾಜ ಅದು ಎಂಡೋಸಲ್ಫಾನೇ ಎಂಬುದನ್ನು ಖಚಿತಪಡಿಸಿದ. ತಕ್ಷಣ ಕಾರ್ಯೋನ್ಮುಖರಾದ ಚವಡಾಳರು ಎತ್ತುಗಳಿಗೆ ಪ್ರತಿರೋಧಕ ಚುಚ್ಚುಮದ್ದು ನೀಡಿ ಸ್ಥಳದಲ್ಲೆ ಸಲೈನ್ ಹಚ್ಚಿದರು. ಒಂದೆರಡು ತಾಸು ನಿರಂತರ ದೇಖರೇಖಿಯ ನಂತರ ಎತ್ತು ಸ್ವಲ್ಪ ಚೇತರಿಸಿಕೊಂಡಂತೆ ಕಂಡವು. ಆದರೂ ಮೇಲೆ ಎದ್ದು ನಿಲ್ಲುವ ಶಕ್ತಿ ಅವುಗಳಲ್ಲಿರಲಿಲ್ಲ. ` ಮಲ್ಲೇಶಿ, `ಅವುಗಳಿಗೆ ಇಲ್ಲೆ ಎಲ್ಲಾದರೂ ಸ್ವಲ್ಪ ಹುಲ್ಲು ಇಲ್ಲವೇ ಸೊಪ್ಪೆ ಇದ್ದರೆ ತಂದು ಹಾಕು. ನೀರು ಕುಡಿಸು, ಸಂಜೆಗೆ ಮತ್ತಷ್ಟು ಆರಾಮವಾದರೆ ಊರಿಗೆ ಹೊಡಕೊಂಡು ಬಾ, ಅಲ್ಲೆ ನೋಡೋಣ.' ಎಂದು ಹೇಳಿ ಚವಡಾಳರು ಊರಿಗೆ ಮರಳಿದರು.

ಅವತ್ತು ಸಂಜೆಗೆ ಸುಬ್ಬಣ್ಣನವರು ಬಂದರು. ಎತ್ತುಗಳ ಆರೋಗ್ಯ ಸ್ಥಿತಿ  ಎಷ್ಟೋ ಸುಧಾರಿಸಿತ್ತಾದರೂ ಇನ್ನೂ ಪ್ರಾಣಾಪಾಯದ ಅಂಚಿನಲ್ಲೆ ಏದುಸಿರುಬಿಡುತ್ತ ಹೋರಾಟ ನಡೆಸಿದ್ದವು. ಸುಬ್ಬಣ್ಣನವರು ಏನು ಮಾಡುವುದೆಂದು ತೋಚದೆ ಕೈ ಕೈ ಹಿಸುಕಿಕೊಳ್ಳುತ್ತ ಡಾಕ್ಟರ ಕಡೆಗೆ ನೋಡಿದರು. `ನಮ್ಮ ಪ್ರಯತ್ನ ನಾವು ಮಾಡೋಣ ಸುಬ್ಬಣ್ಣ, ನೀವು ಹೆದರಬ್ಯಾಡ್ರಿ. ಮುಂಜಾನೆ ಸ್ವಲ್ಪ ತಡವಾಗಿದ್ರೂ ಎತ್ತು ಈಗ ಬದುಕಿರುತ್ತಿರಲಿಲ್ಲ. ಏನೋ ದೇವರ ದಯೆ, ಅವನೂ ಸರಿಯಾದ ವೇಳೆಗೆ ಬಂದು ನನ್ನನ್ನು ಕರ್ಕೊಂಡು ಹೋದ. ಈಗ ಚಿಕಿತ್ಸೆಗೆ ಅವು ಪ್ರತಿಕ್ರಿಯಿಸುತ್ತಿವೆ ಆದರೂ ಈಗಲೇ ಏನೂ ಹೇಳಲಾಗದು' ಎಂದರು. ಚವಡಾಳರು ಚೀಟಿಯಲ್ಲಿ ಏನೋ ಬರೆದು, `ಹಮ್ಮಿಗಿ ಗೆ ಹೋಗಿ ಈ ಔಷಧಿ ತನ್ನಿ' ಎಂದು ಚೀಟಿಯನ್ನು ಸುಬ್ಬಣ್ಣನವರ ಕೈಯಲ್ಲಿಟ್ಟರು.

ಎರಡು ದಿನಗಳ ನಿರಂತರ ಚಿಕಿತ್ಸೆಯ ನಂತರ ಕರಿಯ ಹಾಗೂ ಕಾಳಿಂಗ ಮತ್ತೆ ಕಣ್ತೆರೆದರು. ಮೆಲ್ಲನೆ ಮೆಲುಕು ಹಾಕತೊಡಗಿದರು. ನಿಧಾನ ನಡೆದಾಡುವ ಸಹಜ ಸ್ಥಿತಿಗೆ ಬಂದರು. `ಇನ್ನು ಅಪಾಯವಿಲ್ಲ; ಆದರೂ ನಾಲ್ಕೈದು ದಿನ ಅವುಗಳಿಗೆ ವಿಶ್ರಾಂತಿ ಕೊಡಿ' ಎಂದರು ಚವಡಾಳರು. ಚವಡಾಳರ ಮುಂದೆ ಕೃತಜ್ಞತೆಯಿಂದ ತಲೆಬಾಗಿದ ಸುಬ್ಬಣ್ಣ, ` ದೇವರು ದೊಡ್ಡವನು' ಎಂದು ಆಕಾಶವನ್ನೊಮ್ಮೆ ನೋಡಿ ಕೈಮುಗಿದು ಮತ್ತೆ ಚವಡಾಳರತ್ತ ಹೊರಳಿ, "`ಡಾಕ್ಟರೆ, ನಮ್ಮ ಎತ್ತಿನ ಪಾಲಿಗೆ ನೀವೆ ದೇವರೂ ಅಂತೂ ನಮ್ಮ ಕರಿಯ ಕಾಳಿಂಗರನ್ನ ಉಳಿಸಿಕೊಟ್ರಿ! ಎಂದು ಕೈ ಮುಗಿದರು.

ಅವತ್ತು ಆಗಿದ್ದಿಷ್ಟೆ, ಬಸವರಾಜನಿಗೆ ಸುಬ್ಬಣ್ಣನವರು ಎತ್ತಿಗೆ ನುಚ್ಚು ಹಾಗೂ ಹತ್ತಿಗೆ ಔಷಧಿ(ಎಂಡೋಸಲ್ಫಾನ್) ಹೊಡೆಯಲು ಹೇಳಿ ಔಷಧ ಬಾಟಲಿ ಒಯ್ಯಲು ಹೇಳಿದ್ದರು. ಇವನು ಮುಂಜಾನೆ ಬರುವಾಗ ಎತ್ತಿಗೆ ನೊಗ ಹೂಡಿ, ಆ ನೊಗದ ಮೇಲೆ ನುಚ್ಚಿನ ಚೀಲ ಹೇರಿ ಕಟ್ಟುತ್ತಲಿದ್ದ. ಆಗ ಒಮ್ಮೆಲೆ ಔಷಧಿ ಬಾಟಲಿ ನೆನಪಾಗಿ ಅದನ್ನು ಮತ್ತೆಲ್ಲಿ ಕೈಯಾಗ ಹಿಡ್ಕೊಳ್ಳೋದು ಅಂತ ಯೋಚಿಸಿ, ಅದನ್ನೂ ನುಚ್ಚಿನ ಚೀಲದ ಮೇಲೆಯೆ ಇಟ್ಟು ಹಗ್ಗ ಬಿಗಿದು ಕಟ್ಟಿದ್ದ.

ಅದೇನಾಯ್ತೋ ಎಂಡೋಸಲ್ಫಾನಿನ ಬಾಟಲಿ ಸೋರಿ ನುಚ್ಚಿನ ಚೀಲದ ಮೇಲಿಂದ ನೊಗದ ಗುಂಟ ಒಸರುತ್ತ ಎತ್ತಿನ ಹೆಗಲುಗಳಿಗೆ ಹರಿದು, ಅದು ಚರ್ಮದ ಮೂಲಕ ದೇಹಪ್ರವೇಶ ಮಾಡಿತ್ತು. ಅದು ನಿಧಾನಕ್ಕೆ ದೇಹವನ್ನೆಲ್ಲ ವ್ಯಾಪಿಸಿಕೊಂಡಂತೆ ಎತ್ತುಗಳು ತೀವ್ರ ಸಂಕಟಪಡುತ್ತ, ನಿತ್ರಾಣಗೊಳ್ಳುತ್ತ ನಡೆದಿದ್ದವು. ಬಸವರಾಜ, ಮರದ ಕೆಳಗೆ ಎತ್ತು ತರುಬಿದಾಗ ಆ ನೊಗವನ್ನೆ ಬಿಚ್ಚಿ ಬೇರೆಡೆ ಇಟ್ಟಿದ್ದನಾದರೂ ವಿಷ ಸೋರಿದ್ದು ಅವನ ಲಕ್ಷ್ಯಕ್ಕೇ ಬಂದಿರಲಿಲ್ಲ. ಹೀಗಾಗಿ ಕರಿಯ ಮತ್ತು ಕಾಳಿಂಗ ಅನಿರೀಕ್ಷಿತವಾಗಿ ಪ್ರಾಣಾಪಾಯದ ಸುಳಿಗೆ ಸಿಲುಕಿ, ಕೊನೆಗೂ ಅದರಿಂದ ಪಾರಾಗಿದ್ದರು. ಸುಬ್ಬಣ್ಣನವರ ಮಗ ಬಸವರಾಜನಿಗಂತೂ ಹೋದ ಜೀವ ಮರಳಿ ಬಂದಂತಾಗಿತ್ತು!