ಬೆಂಗಳೂರಿನ ದಾಹ ತಣಿಸುವ ಪ್ರಯತ್ನ: ಬಕಾಸುರನ ಹೊಟ್ಟೆಗೆ ‘ಶರಾವತಿ’ ತಗಾದೆ

ಬೆಂಗಳೂರಿನ ದಾಹ ತಣಿಸುವ ಪ್ರಯತ್ನ: ಬಕಾಸುರನ ಹೊಟ್ಟೆಗೆ ‘ಶರಾವತಿ’ ತಗಾದೆ

2012 ರಲ್ಲಿ 31 ಟಿಎಂಸಿ ಅಡಿ ಮತ್ತು 2051 ವೇಳೆಗೆ 60 ಟಿಎಂಸಿ ಅಡಿ ನೀರನ್ನ ರಾಜಧಾನಿಯತ್ತ ತರುವುದರ ಶಿಫಾರಸನ್ನ ತ್ಯಾಗರಾಜ್ ನೇತೃತ್ವದ ಸಮಿತಿ ಕೊಟ್ಟಿದೆ. ಮುಖ್ಯಮಂತ್ರಿ ಇದರ ಮುಂದಿನ ಕ್ರಮಕ್ಕೆ ಸೂಚಿಸಿರುವುದರಿಂದಲೇ `ಶರಾವತಿ ಉಳಿಸಿ ಹೋರಾಟ' ಬಿರುಸು ಪಡೆದಿದೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು.

ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇರುವ ಬೆಂಗಳೂರಿಗೆ `ಹಾವು ಬಡಿದು ಹದ್ದಿಗೆ ಹಾಕಿದಂತೆ' ಬೇರೆ ಬೇರೆ ನದಿಕೊಳ್ಳಗಳ ಮೂಲದಿಂದ ನೀರು ತಂದು ಹರಿಸಿದರೂ `ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ'ಯಂತಾಗುತ್ತಲೇ ಇದೆ.

ಪ್ರಸ್ತುತ 1.2 ಕೋಟಿ ಜನರಿದ್ದು ಕಾವೇರಿಯಿಂದ 1375 ಎಂಎಲ್‍ಡಿ ನೀರನ್ನ ಪಡೆದು 575 ಚದರ ಕಿಮೀ ವ್ಯಾಪ್ತಿಗೆ ದಿನನಿತ್ಯ ಪ್ರತಿಯೊಬ್ಬನಿಗೆ 120 ಎಲ್‍ಪಿಸಿಡಿಯಷ್ಟು ಹಂಚಿಕೆ ಮಾಡಲಾಗುತ್ತಿದೆ, ಆದರೂ ನೀರಿನ ಕೊರತೆ ಇದೆ. ವರ್ಷಗಳುರುಳಿದಂತೆಲ್ಲ ನೀರು ಇನ್ನೂ ಬೇಕಾಗುತ್ತಲೇ ಇರುತ್ತೆ. ಮಳೆ ನೀರು ಕುಯಿಲು ಅಳವಡಿಸಿಕೊಂಡು, ಅದನ್ನ ಮರುಚಕ್ರೀಯತೆಗೊಳಪಡಿಸಿದರೆ ವರ್ಷಕ್ಕೆ 16 ಟಿಎಂಸಿ ನೀರು ಇದರಿಂದಲೇ ಲಭ್ಯವಾಗುತ್ತೆ ಎಂಬ ಲೆಕ್ಕಾಚಾರಗಳಿವೆ, ಆದರೆ ಮಳೆಕುಯಿಲು ಬಗ್ಗೆ ಆದ್ಯತೆ ಕೊಡುತ್ತಿಲ್ಲ, ಅಂತರ್ಜಲ ಕುಸಿಯುತ್ತಿದೆ. ಪರಿಣಾಮವಾಗಿ ಜಲ ದಾಹ ತೀಕ್ಷ್ಣಗೊಳ್ಳುವ ಅಪಾಯ ಇದ್ದೇ ಇದೆ

ಬೆಂಗಳೂರು ಮತ್ತು ಬಯಲು ಪ್ರದೇಶಗಳ ನೀರಿನ ದಾಹ ತಣಿಸುವುದಕ್ಕಾಗಿಯೇ ಎತ್ತಿನಹೊಳೆಯಂಥ ಯೋಜನೆಗಳಿವೆ, ಅದರ ಜತೆಯಲ್ಲೇ ವಿವಾದಗಳೂ ಇವೆ. ಇಂಥದ್ದಕ್ಕೀಗ ಹೊಸದಾಗಿ ಸೇರ್ಪಡೆಯಾಗಿರುವುದು ಲಿಂಗಮನಕ್ಕಿಯಿಂದ 430 ಕಿಮೀ ದೂರದಲ್ಲಿರುವ ರಾಜಧಾನಿಗೆ ಕೊಳವೆಗಳ ಮೂಲಕ ನೀರು ತರುವುದು.

2012 ರಲ್ಲಿ 31 ಟಿಎಂಸಿ ಅಡಿ ಮತ್ತು 2051 ವೇಳೆಗೆ 60 ಟಿಎಂಸಿ ಅಡಿ ನೀರನ್ನ ರಾಜಧಾನಿಯತ್ತ ತರುವುದರ ಶಿಫಾರಸನ್ನ ತ್ಯಾಗರಾಜ್ ನೇತೃತ್ವದ ಸಮಿತಿ ಕೊಟ್ಟಿದ್ದು, ಮುಖ್ಯಮಂತ್ರಿ ಇದರ ಮುಂದಿನ ಕ್ರಮಕ್ಕೆ ಸೂಚಿಸಿರುವುದರಿಂದಲೇ `ಶರಾವತಿ ಉಳಿಸಿ ಹೋರಾಟ' ಬಿರುಸುಪಡೆದಿದೆ.  ಈ ಯೋಜನೆಯಿಂದ 10 ಟಿಎಂಸಿ ನೀರು ತರಲು 1250 ಕೋಟಿ ವೆಚ್ಚ ತಗುಲುತ್ತೆ, ಪಶ್ಚಿಮಘಟ್ಟದ ಜೀವಪರಿಸರ ಹಾಳಾಗುತ್ತೆ ಎಂಬ ಮುಖವೂ ಇದಕ್ಕಿದೆ.

ಸ್ವಲ್ಪ ಇತಿಹಾಸ

ಮೈಸೂರು ರಾಜರ ಆಳ್ವಿಕೆಯ ಸಂಸ್ಥಾನದಲ್ಲಿದ್ದ ಪ್ರಮುಖ ನದಿಗಳೆಂದರೆ ಕಾವೇರಿ ಮತ್ತು ಶರಾವತಿ. ಕಾವೇರಿ ಕೃಷಿಗೆ ಹೆಚ್ಚು ಬಳಕೆಯಾಗುವ, ಜತೆಗೆ ವಿದ್ಯುತ್ ತಯಾರಿಕೆಗೂ ಬೇಕಾಗಿರುವ ನದಿ, ಇದರ ಯಾವುದೇ ಅಭಿವೃದ್ದಿಗೂ  ಕೆಳಭಾಗದ ರಾಜ್ಯ ಬಂಗಾಳಕೊಲ್ಲಿ ತಟದ ತಮಿಳುನಾಡಿನ ಅನುಮತಿ ಬೇಕು. ಕೆಆರ್‍ಎಸ್ ಅಣೆಕಟ್ಟೆ ಕಟ್ಟಲು  ಟೀಪು, ಇಂಗ್ಲಿಷರ ಕಾಲದಲ್ಲೇ ಯೋಜನೆಗಳಾಗಿ ಕೊನೆಗೆ ಈ ಯೋಜನೆಯಲ್ಲಿ ಮಾರ್ಪಾಟುಗಳನ್ನ ಮಾಡಿದ ಸರ್. ಎಂ.ವಿಶ್ವೇಶ್ವರಯ್ಯ ಇಂಗ್ಲಿಷ್ ಆಡಳಿತದ ಅನುಮತಿ ಗಿಟ್ಟಿಸುತ್ತಾರೆ, ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟೆ ಕಟ್ಟಿಸುತ್ತಾರೆ, ಇದಾಗಿದ್ದು 1932 ರಲ್ಲಿ. ಕೃಷಿಗೇ ಅಧಿಕವಾಗಿ ಬಳಕೆಯಾಗುವ ಕಾವೇರಿ ನೀರಿನ ತಗಾದೆಗಳು ಇವತ್ತಿಗೂ ಇದ್ದೇಇವೆ. 

ಶರಾವತಿ ಕೃಷಿಗೆ ನೀರೊದಗಿಸಲ್ಲ, ವಿದ್ಯುತ್ ಉತ್ಪಾದನೆಗೆ ಲಭ್ಯವಾಗಿ 4400 ಟಿಎಂಸಿ ನೀರು ಹೊನ್ನಾವರ ಬಳಿ ಅರಬ್ಬೀ ಸಮುದ್ರ  ಸೇರುತ್ತೆ. ಇದರ ಯೋಜನೆಗೆ ಮೇಲುಭಾಗದ ಬೊಂಬಾಯಿ ರಾಜ್ಯದ ಅನುಮತಿ ಬೇಕಾಗಿತ್ತು. ಗೇರುಸೊಪ್ಪದಲ್ಲಿ 830 ಅಡಿ ಎತ್ತರದಿಂದ ಧುಮ್ಮಿಕ್ಕುವ ಇಲ್ಲಿ ವಿದ್ಯುತ್ ತಯಾರಿಸಬಹುದಲ್ಲವಾ ಎಂಬುದು ಮೈಸೂರು ರಾಜರಿಗೆ ಅನಿವಾರ್ಯತೆಯ ಒತ್ತಡದಿಂದಲೇ ಉಂಟಾಗಿದ್ದು.  ಏಕೆಂದರೆ ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕವನ್ನ ಶಿವನಸಮುದ್ರದಲ್ಲಿ 1903 ರಲ್ಲಿ ಆರಂಭಿಸಿ ಅಲ್ಲಿ ತಯಾರಾದ ವಿದ್ಯುತ್ತನ್ನ ಕೋಲಾರದ ಚಿನ್ನದ ಗಣಿಗೆ ಕೊಡುವ, ನಿಗಧಿತ ಪ್ರಮಾಣದ ವಿದ್ಯುತ್ ಪೂರೈಕೆಯಾಗದಿದ್ದರೆ ದಂಡ ರೂಪದಲ್ಲಿ ಹಣ ಕಟ್ಟಿಕೊಡುವ ಅಂಶಗಳನ್ನು ಹೊಂದಿದ ಒಪ್ಪಂದವನ್ನ ಇಂಗ್ಲಿಷರೊಡನೆ ಮಾಡಿಕೊಳ್ಳಲಾಗಿತ್ತು.  ರಾಜ್ಯಾದಾಯಕ್ಕಿಂತಲೂ ಹೆಚ್ಚಿನ ದಂಡ ಕಟ್ಟುವಂತೆಯೂ ಆಗಿದ್ದರಿಂದ, ಶಿವನಸಮುದ್ರದಲ್ಲಿ ಹೆಚ್ಚಿನ ವಿದ್ಯುತ್ ತಯಾರಿಕೆ ಅಸಾಧ್ಯವಾಗಿದ್ದರಿಂದ ಪರ್ಯಾಯವಾಗಿ ಗೋಚರಿಸಿದ್ದೇ ಗೇರುಸೊಪ್ಪ.

1904 ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಪಿ.ಎನ್. ಕೃಷ್ಣಮೂರ್ತಿ ಭಾರತದ ವೈಸರಾಯ್ ಲಾರ್ಡ್ ಕರ್ಜನ್‍ರಿಗೆ ಗೇರುಸೊಪ್ಪ ಜೋಗ್‍ನಲ್ಲಿ ವಿದ್ಯುತ್ ಉತ್ಪಾದಿಸಲು ಅನುಮತಿ ಕೋರಿದ್ದನ್ನ ತಿರಸ್ಕರಿಸಲಾಗುತ್ತೆ. 1918 ರಲ್ಲಿ ವಿಶ್ವೇಶ್ವರಯ್ಯ ಮತ್ತೆ ಮಾಡಿದ ಪ್ರಸ್ತಾಪವನ್ನೂ ತಿರಸ್ಕರಿಸಲಾಗುತ್ತೆ. 1934 ರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಒತ್ತಡಕ್ಕೆ ಫಲ ಸಿಕ್ಕಿ, 1939 ರ ಫೆಬ್ರವರಿ 5 ರಂದು ಗೇರುಸೊಪ್ಪದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಲಾನ್ಯಾಸ ಮಾಡುತ್ತಾರೆ. ಇದು 1948 ರ ಫೆಬ್ರವರಿ 21 ರಂದು ಉದ್ಬಾಟನೆಯಾಗಿ ಮಹಾತ್ಮ ಗಾಂಧಿ ವಿದ್ಯುತ್ ಕೇಂದ್ರ ಎಂದು ಹೆಸರಿಟ್ಟುಕೊಳ್ಳುತ್ತೆ.

ಸದರಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಅನುಕೂಲವಾಗಲು ಲಿಂಗಮನಕ್ಕಿ ಜಲಾಶಯವನ್ನ ನಿರ್ಮಿಸಿದ್ದು 1964 ರಲ್ಲಿ. 151 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ದೊಡ್ಡ ಜಲಾಶಯವೂ ಇದಾಗಿದ್ದರೂ ಕಟ್ಟಿದಾಗಿನಿಂದ ಇದುವರೆಗೆ ಪೂರ್ಣವಾಗಿ ತುಂಬಿರುವುದು ಕೇವಲ 14 ಸಲ ಮಾತ್ರ. 1030 ಮೆಗಾವ್ಯಾಟ್ ವಿದ್ಯುತ್  ತಯಾರಿಸಬಹುದಾದರೂ, 130 ಮೆಗಾವ್ಯಾಟ್ ಮಾತ್ರ ತಯಾರಾಗುತ್ತಿದೆ. ಇದಕ್ಕೆ ಕಾರಣ ಹಲವು ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದು, ಮಳೆ ಇಲ್ಲದಿರುವುದಾಗಿದೆ..

ಲಿಂಗಮನಕ್ಕಿಯಿಂದ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವುದರ ಬದಲು ಬೆಂಗಳೂರು ಭಾಗಕ್ಕೆ ಕುಡಿವ ನೀರಿಗಾಗಿ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರಕ್ಕೆ ಇಂಬು ದೊರೆತಿದ್ದು ಹಾಸನದ ಯಗಚಿ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 10 ಟಿಎಂಸಿ ನೀರು ಹರಿಸಿಕೊಳ್ಳುವುದರ ಕಾರ್ಯಯೋಜನಗೆ ಒಂದೆಜ್ಜೆ ಮುಂದಿಡಲಾಗಿದೆ.

ಯಾವುದಕ್ಕೂ ಪ್ರಯೋಜನವಾಗದಿರುವ ನೀರನ್ನ ಬಳಸಿಕೊಂಡರೆ ವಿದ್ಯುತ್ ತಯಾರಿಕೆಗೆ ಸ್ವಲ್ಪ ಪ್ರಮಾಣದಲ್ಲಿ ಏಟು ಬಿದ್ದರೂ, ಪರ್ಯಾಯ ಶಕ್ತಿಮೂಲಗಳಿಂದ ಅದನ್ನ ತುಂಬಿಕೊಳ್ಳಬಹುದೆಂಬ ಸಮಜಾಯಿಷಿಗಳಿವೆ. ಆದರೆÉ ಇದರಿಂದ ಸಾಕಷ್ಟು ಅರಣ್ಯ ಪ್ರದೇಶ ಪರಿಸರಕ್ಕೆ ದಕ್ಕೆಯಾಗುತ್ತೆ, ಈಗಲೇ ಮಳೆ ಇಲ್ಲದೆ ಒಣಭೂಮಿಯಂತಾಗುತ್ತಿರುವ ನಮ್ಮ ಜಿಲ್ಲೆಯನ್ನ ಬಲಿಕೊಟ್ಟು ಬೆಂಗಳೂರಿಗರನ್ನ ಉಳಿಸುವುದು ಎಂಥ ನ್ಯಾಯ ಎಂಬುದು ಶಿವಮೊಗ್ಗದ ಜನರ ಪ್ರಶ್ನೆಯಾಗಿದೆ. ರಾಜಧಾನಿಯಲ್ಲಿ ಅಂತರ್ಜಲ ಹೆಚ್ಚಿಸಿಕೊಳ್ಳುವುದು, ಮಳೆನೀರು ಕುಯ್ಲುನಂಥ ವಿಧಾನಗಳಿಂದಲೇ ಸಾಕಷ್ಟು ನೀರು ಪಡೆಯಬಹುದು. ಅಂಥದ್ದರ ಬಗ್ಗೆ ಗಾಢವಾಗಿ ಚಿಂತಿಸದೆಯೇ ಬೇರೆ ಬೇರೆ ಜಿಲ್ಲೆಗಳ ಹಿತವನ್ನೂ ಬಲಿಕೊಟ್ಟು ನೀರು ಪೂರೈಸಿಕೊಳ್ಳುವುದು ತರವಲ್ಲ ಎಂಬ ವಾದಗಳನ್ನಿಟ್ಟುಕೊಂಡೇ ಹೋರಾಟವನ್ನ ತೀವ್ರಗೊಳಿಸುತ್ತಿದ್ದಾರೆ. ಸರ್ಕಾರದ ನಿಲುವು ಅಂತಿಮವಾಗಿ ಏನಾಗಲಿದೆ ಎಂಬುದು ಕಾಯ್ದುನೋಡಬೇಕಿದೆ.