ನಡೆ ತಪ್ಪಿದ ಲಿಂಗಾಯತ ಜೀವನಕ್ಕೆ ಮೃಡಶರಣರ ನುಡಿಗಡಣಗೀಲು! 

ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ! ಆದರೆ, ಇಂದಿನ ಇದರ ಕಡುರ್ಪದ ಬದುಕಿನ ಬಂಡಿಯು ಮೃಡಶರಣರ “ನುಡಿಗಡಣಗೀಲು”ಗಳನ್ನು ಕಳಚಿಕೊಂಡಿದೆ. ಈಗಿನ ಹೋರಾಟ, ಈ  ಕೀಲುಗಳನ್ನು ಮತ್ತೆ ಹಾಕಿ, ತತ್ತ್ವಕ್ಕೆ ತಕ್ಕ ಜೀವನ, ನುಡಿದಂತೆ ನಡೆ, ಇದೇ ಜನ್ಮ ಕಡೆ ಎಂಬುದು ವಾಸ್ತವ ಜೀವನದಲ್ಲಿ ಸಾಕಾರಗೊಳ್ಳುವಂತೆ ಮಾಡಿದಾಗ ಮಾತ್ರ ಈ ಧರ್ಮಕ್ಕೆ ಹೊಸ ಶಕ್ತಿ-ಮೆರಗು ಬರುತ್ತದೆ

ನಡೆ ತಪ್ಪಿದ ಲಿಂಗಾಯತ ಜೀವನಕ್ಕೆ ಮೃಡಶರಣರ ನುಡಿಗಡಣಗೀಲು! 

‘ಸ್ವತಂತ್ರ ಲಿಂಗಾಯತಧರ್ಮ’ಬಾಹುಳ್ಯದಲ್ಲಿರುವ ಅನೇಕಾನೇಕ ಜನಸಮುದಾಯಗಳ ಬದುಕು ಈ ಧರ್ಮದ ಪ್ರಗತಿಶೀಲ ವಚನ-ತತ್ತ್ವನಿರ್ದೇಶನ : ವಚನ-ನೀತಿ ನಿರ್ದೇಶನಗಳಿಗನುಗುಣವಾಗಿದೆಯೇ ಇಲ್ಲವೇ ಎಂದು ಸ್ಥೂಲವಾಗಿ ಪರಿಶೀಲಿಸುವುದು ಈ ಲೇಖನದ ಉದ್ದೇಶ. 

ಮೊದಲಿಗೆ, ದೇವೋಪಾಸನೆಯ ಪ್ರಶ್ನೆ: ಲಿಂಗಾಯತರನ್ನು ವಚನಕಾರರು ಹೆಚ್ಚಾಗಿ ‘ಲಿಂಗವಂತರು’ ಎಂದೇ ಕರೆದಿದ್ದಾರೆ. ಈ ಲಿಂಗವಂತರು, ಮೂಲತಃ ವಿಭಿನ್ನ ಬುಡಕಟ್ಟು ಸಂಸ್ಕೃತಿಗಳಿಂದ ಬಂದವರಾಗಿರುವ ಕಾರಣಕ್ಕೇ ಇವರು ಬಹುಹಿಂದಿನಿಂದ ಇಂದಿನವರೆಗೂ ಬಹುದೈವೋಪಾಸಕರಾಗಿರುವುದು ಸಹಜವೇ ಆಗಿದೆ. ಆದರೆ, ಹನ್ನೆರಡನೇ ಶತಮಾನದ ಶರಣರು, ಬಹುಶಃ ಧಾರ್ಮಿಕ ಏಕತೆ-ಸಮಾನತೆಯನ್ನು ತರುವ ಉದ್ದೇಶದಿಂದ, ಇವರೆಲ್ಲರನ್ನೂ ಕಡ್ಡಾಯವಾಗಿ ಏಕದೇವೋಪಾಸಕರನ್ನಾಗಿಸಲು ಬಯಸಿ, ಬಹುದೈವಾರಾಧನೆಯನ್ನು ಲಿಂಗವಂತರಿಗೆ ನಿಷೇಧಿಸಿದರು. ಆದರೆ ಲಿಂಗಾಯತರು ಮಾತ್ರ ತಮ್ಮ ಮೂಲ ಧಾರ್ಮಿಕ ಆಚರಣೆಗಳಿಗೇ ಕಟ್ಟುಬಿದ್ದರು. ಶರಣರೆನ್ನುವಂತೆ ಅವರು ಮಣ್ಣು-ಮಸಣಿ-ಗಿಣ್ಣಿಲು ದೈವಾದಿಗಳನ್ನು ಪೂಜಿಸುತ್ತಲೇ ಬಂದರು. ಬನ್ನಿ, ಬೇವು, ಅರಳಿ ಆಲದ ಮರಗಳು, ಬೇಟೆಯ ಗಿಡಗಳಲ್ಲೆಲ್ಲಾ ದೈವಗಳನ್ನು ಹರಸಿದರು. ಅವರು ತಮ್ಮ ಕಲ್ಲೇಶ ಮಲ್ಲೇಶ ಸೋಮೇಶಾದಿ ಸ್ಥಾವರಲಿಂಗಗಳ ಪೂಜೆಯನ್ನೂ, ವೀರಭದ್ರ ಭೈರವಾದಿ ಪುರಾಣ ಪುರುಷರ ಪೂಜೆಯನ್ನೂ ಕೈಬಿಡಲಿಲ್ಲ. ಈ ಶೈವಸಂಬಂಧೀ ದೈವತಗಳಲ್ಲದೇ, ವೆಂಕಟೇಶ ರಂಗನಾಥಾದಿ ವೈಷ್ಣವ ದೈವತಗಳ, ಶೈವ-ವೈಷ್ಣವ ಸಮನ್ವಯದ ದೈವತ ಹರಿ-ಹರ ಹಾಗೂ ಶಾಕ್ತ ಪರಂಪರೆಯ ದೈವತಗಳಾದ ಕಾಳಿ, ದುರ್ಗೆ, ಮಾರವ್ವ, ಊರವ್ವ, ಯಲ್ಲವ್ವ, ಉಚ್ಚಂಗೆಮ್ಮ, ಬಂದಮ್ಮ ಇತ್ಯಾದಿಗಳ ಪೂಜೆಯನ್ನೂ ನಿರಾತಂಕವಾಗಿ ಆನುಚಾನವಾಗಿ ರೂಢಿಸಿಕೊಂಡೇ ಬಂದರು ಮಾತ್ರವೇಕೆ, ನಾಡಿನ ಹಲವಾರು ಕಡೆ, ಕೆಲ ಗುರುಗಳು ಬೇಡವೆಂದರೂ ಬಿಡದೇ, ಲಿಂಗಾಯತರೇ ನಾಯಕತ್ವ ವಹಿಸಿ ಮಾರೀ ಜಾತ್ರೆಗಳ ಕೋಣನ ಬಲಿ ಮಾಡಿಸುತ್ತಿರುವುದು ವಿಪರ್ಯಾಸವೇ! 

ಆದರೆ ಇಂತಹ  ‘ಶರಣಪ್ರಣೀತ-ಲಿಂಗವಂತಧರ್ಮಬಾಹಿರ’ ನಡಾವಳಿಕೆಗಳ ಬಗ್ಗೆ ಅತೀವ ಬೇಸತ್ತ ಶರಣರು, ಅಂತಹ ನಡತೆಗಳನ್ನು ‘ಧರ್ಮಹಾದರ’ ಎಂದೇ ಪರಿಗಣಿಸಿ, ಹೀಗೆ ಖಂಡಿಸಿದರು: ‘ಹಾದರದ ಮಿಂಡನ ಹತ್ತಿರ ಮಡಗಿಕೊಂಡು ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ? ತಾ ಶಿವಭಕ್ತನಾಗಿ, ತನ್ನಂಗದಮೇಲೆ ಲಿಂಗವಿದ್ದು ಮತ್ತೆ ಭಿನ್ನಶೈವಕ್ಕೆರಗುವುದೇ ಹಾದರ, ಕೂಡಲ ಸಂಗಯ್ಯನು ಅವರ ಮೂಗಕೊಯ್ಯದೇ ಮಾಣ್ಬನೆ?’. ‘ಹರನನ್ನು ಮನಮುಟ್ಟಿ ಭಜಿಸಿಯಾದಡೆ ತನ್ನ ಕಾರ್ಯ ಘಟ್ಟಿ, ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವದು’ ಎಂದು ಹೇಳಿದ ಬಸವಣ್ಣ ‘ಹರ-ಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ ಮಹಾಹರನ ಮಕ್ಕಳೆಂಬ ಪಾತಕ ನೀ ಕೇಳೋ. ಹರಿಹರನು ಒಂದೆಂಬ ಶಿವದ್ರೋಹಿ ನೀ ಕೇಳೋ. ಹರಿಸಹಿತಾರರಿಂದತ್ತ ಅಜಾತನಚರಿತ್ರ ಅಪ್ರತಿಮಮಹಿಮ ಕೂಡಲಸಂಗಮದೇವನೊಬ್ಬನೇ ಕಾಣಿಭೋ!’ ಎಂದು ಸಾರಿದ್ದನ್ನು ಲಿಂಗಾಯತರೇಕೆ ನಿರ್ಲಕ್ಷಿಸಿದರು? ಬಹಳಷ್ಟು ಲಿಂಗಾಯತರಿಗೆ ಮಲ್ಲಿಕಾರ್ಜುನ, ಮೈಲಾರಲಿಂಗ, ಬಸವಣ್ಣ(ನಂದಿ), ವೀರಭದ್ರ, ಕಲ್ಲೇಶ್ವರ, ಆಂಜನೇಯ ಇತ್ಯಾದಿ ಮನೆದೇವರುಗಳು. ಈ ದೈವಗಳಿಗೆ ಸಂಬಂಧಿಸಿದ ಹಬ್ಬ ಜಾತ್ರೆ ಕಾರ್ತೀಕ ರಥೋತ್ಸವಾದಿಗಳಲ್ಲಿ ಲಕ್ಷ ಲಕ್ಷ ಭಕ್ತರು ಸಮಾವೇಶಗೊಳ್ಳುತ್ತಾರೆ, ಮಾತ್ರವೇಕೆ ಇಂತಹ ದೈವತಗಳ ದೇವಮಂದಿರದ ಉದ್ಘಾಟನೆ, ಲಿಂಗ ಅಥವಾ ಮೂರ್ತಿ ಪ್ರತಿಷ್ಠಾಪನೆಗಳನ್ನು ಅನೇಕ ಪ್ರಖ್ಯಾತ ಲಿಂಗಾಯತ ಮಠಾಧೀಶರು ಸ್ವತಃ ಸಾನಿಧ್ಯವಹಿಸಿಯೇ ನೆರವೇರಿಸುತ್ತಾರೆ; ಜಾತ್ರೆ ಸಮಾವೇಶಗಳಲ್ಲಿಯೂ ಮುಖಂಡತ್ವ ವಹಿಸುತ್ತಾರೆ; ಜತೆಗೆ, ಪ್ರಬುದ್ಧ ವಚನ ಪಂಡಿತರೆನ್ನಿಸಿಕೊಂಡವರೂ ಇಂತಹ ಸಮಾವೇಶಗಳಲ್ಲಿ ಭಾಗವಹಿಸಿ, ತಾಸುಗಟ್ಟಲೆ ವಚನವೇದಾಂತ ಬೋಧಿಸುತ್ತಾರೆ.  ಜನಮರುಳೋ ಜಾತ್ರೆ ಮರುಳೋ! ಆದರೆ ಇದು ಶರಣ ಸಮ್ಮತವೇ? ಖಂಡಿತ ಅಲ್ಲ. ಈ ಬಗ್ಗೆ ಚನ್ನಬಸವಣ್ಣನ ಒಂದು ವಚನ ಹೀಗಿದೆ: ‘ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ ದೈವಂಗಳಿಗೆ, ನಮ್ಮ ಕುಲದೈವಂಗಳೆಂದು ಹೇಳುವವರಿಗೆ ಗುರುವಿಲ್ಲ ಲಿಂಗವಿಲ್ಲ ಪಾದೋದಕ ಪ್ರಸಾದವಿಲ್ಲ ಕೂಡಲಚನ್ನಸಂಗಮದೇವ’ (ಪು.499/ವ.ಮ.ಸಂ-1)

ಶಿವಭಕ್ತರೆಲ್ಲಾ ಲಿಂಗಾಯತರಲ್ಲ, ಅವರು ಶೈವಧರ್ಮೀಯರು ಮಾತ್ರ. ಆದರೆ ಯಾರು ಶಿವನ ಕುರುಹಾದ ಇಷ್ಟಲಿಂಗವನ್ನು ಗುರುವಿನಿಂದ ಶಾಸ್ತ್ರೋಕ್ತ ದೀಕ್ಷಾಚಾರದಲ್ಲಿ  ಹಸ್ತ-ಮಸ್ತಕ ಸಂಯೋಗದಿಂದ ಪಡೆದು ಶಿರ-ಕರ-ಉರ ಮುಂತಾದ ಭಾಗಗಳಲ್ಲಿ ಧರಿಸಿ, ಲಿಂಗಪೂಜಕನಾಗಿ, ಲಿಂಗಧಾರಣೆಗೆ ಸಂಬಂಧಿಸಿದ ಎಲ್ಲಾ ವಿಧಿನಿಯಮಗಳನ್ನೂ ಚಾಚೂ ತಪ್ಪದೇ ಪರಿಪಾಲಿಸುತ್ತಾರೋ ಅವರು ಮಾತ್ರ ಲಿಂಗಾಯತರು. ಇವರು ಶಿವನನ್ನು ಈ ಇಷ್ಠಲಿಂಗ ರೂಪದಲ್ಲಿ ಅಲ್ಲದೇ ಬೇರೆ ರೂಪದಲ್ಲಿ ಪೂಜಿಸಕೂಡದು. ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬಿದ್ದು ಪೂಜಿಸುವ ಲೊಟ್ಟೆಮೂಳರನ್ನ ಎಡಪಾದರಕ್ಷೆಯಿಂದ ಹೊಡೆ’ ಎಂದು ಖಂಡಿಸಿದ ನಮ್ಮ ಅಂಬಿಗರ ಚೌಡಯ್ಯ! ಆದರೆ ಬಹುತೇಕರು, ಶರಣರ ಮಾತುಗಳನ್ನು ಪ್ರಜ್ಞಾಪೂರ್ವಕ ನಡೆದು ಧಿಕ್ಕರಿಸಿ, ಇಂದಿಗೂ ಲೊಟ್ಟೆಮೂಳರಾಗಿಯೇ ಉಳಿದರು!  ಶಿವಲಿಂಗ ಮೋಹಿತನಾದಡೆ ಅನ್ಯಮೋಹವ ಮರೆಯಬೇಕು; ಶಿವಲಿಂಗ ಭಕ್ತನಾದಡೆ ಅನ್ಯದೈವದ ಭಜನೆ ಮಾಡಲಾಗದು; ಶಿವಲಿಂಗ ವೀರನಾದಡೆ ಪುಣ್ಯಕ್ಷೇತ್ರಂಗಳ ಕುರಿತು ಹೋಗಲಾಗದು ಎಂಬ ಚನ್ನಬಸವಣ್ಣನ ಮಾತುಗಳನ್ನ ಎಷ್ಟು ಲಿಂಗಾಯತರು ಮಾನ್ಯ ಮಾಡಿದರು? ಸದ್ಯೋಜಾತ ವಾಮದೇವ ಆಘೋರ ತತ್ಪುರುಷ ಈಶಾನವೆಂಬೀ ಪಂಚವಕ್ತ್ರಗಳನ್ನು ಶಿವನಿಗೆ ಆರೋಪಿಸುವವರನ್ನು ಅನಾಚಾರಿಗಳೂ ಲಿಂಗದ್ರೋಹಿಯೂ ಎಂದ ಚನ್ನಬಸವಣ್ಣ (ಪು.513/ ವ.ಮ.ಸಂ-1).ಆದರೆ ಹಾಗೆ ಆರೋಪಿಸುವುದನ್ನು ಲಿಂಗಾಯತರೆನ್ನಿಸಿಕೊಂಡವರು ಬಿಟ್ಟರೇ?

ಎರಡನೆಯದಾಗಿ, ಶರಣರು ಶಿವಭಕ್ತರಲ್ಲಿ  ಕುಲ-ಜಾತಿಗಳ ಭೇದವನ್ನೆಣಿಸಲಿಲ್ಲ. ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲಾ ಒಂದೇ ಎಂದು ಹೇಳಿ ಕೆಳಜಾತಿಯೊಂದಿಗೆ ತನ್ನನ್ನು ಗುರುತಿಸಿಕೊಂಡವರಲ್ಲಿ ಬಸವಣ್ಣ ಅಗ್ರಗಣ್ಯ. ‘ ಚನ್ನಯ್ಯನ ಮಗನ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ!’ ಎಂದು ಯಾವ ಹಿಂಜರಿಕೆ, ಅಳುಕು ಇಲ್ಲದೇ ನಿರ್ಭಿಡೆಯಿಂದ ಘನಗಾಂಭೀರ್ಯದಿಂದ ತನ್ನನ್ನು ಹೀನಜಾತಿಯ-ಅದರಲ್ಲೂ ಅತಿಹೀನ ಹಾದರದ ಜನ್ಮಪಡೆದವನೆಂದು ಘೋಷಿಸಿದ ಜಗತ್ತಿನ ಏಕೈಕ ಮಹಾನುಭಾವ  ಬಸವಣ್ಣ! ಇಂತಹ ಮಹಾನುಭಾವನ ಸುತ್ತವಿದ್ದ ಇಡೀ ಶರಣಕುಲವೇ ಒಂದೇ ಧ್ವನಿಯಲ್ಲಿ ಜಾತಿಭೇದ ಧಿಕ್ಕರಿಸಿತು. ಜಾತಿವಾದಿಗಳನ್ನು ಚನ್ನಬಸವಣ್ಣ ಬಹುಹಿಂದೆಯೇ ‘ಅರೆಮರುಳ’ರೆಂದು ಹೀಗೆ ಟೀಕಿಸಿದ: ‘ಶಿವಭಕ್ತಸಮಾವೇಶ ನ ಜಾತಿಪರಿಕಲ್ಪನಾ ಇಂಧನೇಷ್ವಗ್ನಿದಗ್ದೇಷು ಕೋ ವಾ ಭೇದಃ ಪ್ರಕೀತ್ರ್ಯತೇ’ ಎಂದುದಾಗಿ, ಶಿವಜ್ಞಾನ ಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ ಕೂಡಲಚನ್ನಸಂಗಮದೇವ?’ ‘ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ ತಲೆವಾಗುವೆ ನಾನು ಕುಲಜರೆಂದು’ ಎಂದು ಹೇಳಿದ ಜೇಡರ ದಾಸಿಮಯ್ಯ, ‘ಕೀಳು ಡೋಹರ ಕಕ್ಕ, ಕೀಳು ಮಾದರ ಚನ್ನ, ಕೀಳು ಓಹಿಲದೇವ, ಕೀಳು ಉದ್ಭಟಯ್ಯ. ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ’ ಎಂದು ‘ಹೊಲೆಯಲ್ಲಿಯೇ’ ಶಿವಾಮೃತವಾದ ಕ್ಷೀರದುತ್ಪ್ಪತ್ತಿ ಎಂದು ಜಾತಿಹೊಲೆತನವನ್ನೇ ನಿರಾಕರಿಸಿಬಿಟ್ಟ. ಶ್ವಪಚೋಪಿ ಮುನಿ ಶ್ರೇಷ್ಠೋ ಎಂಬುದು ಶರಣವಾಣಿ. ಲಿಂಗ ಪ್ರಸಾದ ಜಂಗಮಗಳಿದ್ದಡೆ ಹೊಲೆ ಕುಲ ಎಂಜಲುಗಳೇ ಇಲ್ಲ! ಹೀಗೆ ಶರಣರು ಕರ್ಮ ಸಿದ್ಧಾಂತ ಪ್ರತಿಪಾದಿಸುವ ಹೊಲೆತನವನ್ನೆಂದೂ ಒಪ್ಪಲೇ ಇಲ್ಲ. ‘ಹೊಲೆ ಹೊಲೆ ಎಂದನಯ್ಯಾ ಬಸವಣ್ಣ! ಹೊಲೆ ಹುಟ್ಟಿದ ಮೂರುದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು. ನರರಿಗೆ ಹೊಲೆ, ಸುರರಿಗೆ ಹೊಲೆ, ಹರಿಬ್ರಹ್ಮಾದಿಗಳಿಗೆ ಹೊಲೆ! ಇಂತೀ ಹೊಲೆಯಲ್ಲಿ ಹುಟ್ಟಿ ಹೊಲೆಯನತಿಗಳೆದೆನೆಂಬ ಉಭಯಭ್ರಷ್ಟರ ಮುಖವ ನೋಡಲಾಗದು ಎನ್ನುತ್ತಾನೆ ಚನ್ನಬಸವಣ್ಣ! 

ಇಷ್ಟೆಲ್ಲಾ ಶರಣರ ಸ್ಪಷ್ಟೋಕ್ತಿಗಳಲ್ಲಿದ್ದರೂ ಸಹ, ಅದೆಷ್ಟು ಲಿಂಗಾಯತರು ಜಾತಿಭೇದ ಭಾವಗಳನ್ನು ಸಂಪೂರ್ಣ ತೊರೆದರು? ಹಾಗೆ ಮಾಡಿದ್ದರೆ, ಶತಶತಮಾನಗಳ ಹಿಂದೆಯೇ  ಲಿಂಗಾಯತ ಉಪಜಾತಿಗಳೆಲ್ಲಾ ಒಂದೇ ಜಾತಿಯಲ್ಲಿ ವಿಲೀನವಾಗಿ, ‘ಇವ ನಮ್ಮವ’ ‘ಮನುಷ್ಯಕುಲ ಒಂದೇ’ ಎಂದು ಇತರ ಅನ್ಯಜಾತಿಗಳನ್ನು ಆಲಿಂಗಿಸಿ, ಕುವೆಂಪು ಅವರ ವಿಶ್ವಮಾನವ ತತ್ತ್ವವನ್ನು ಎತ್ತಿಹಿಡಿದು, ಸಾಮಾಜಿಕ ಸಾಮರಸ್ಯದ ನೇತಾರರೆನ್ನಿಸಿಕೊಳ್ಳುತ್ತಿದ್ದರು. ಆದರೆ, ವಾಸ್ತವದಲ್ಲಿ ಆಗಿದ್ದು ಬೇರೆ! 

ಮೂರನೆಯದಾಗಿ, ಲಿಂಗಾಯತರು ಮೂಢನಂಬಿಕೆ-ಕಂದಾಚಾರಗಳಿಂದ ಸಂಪೂರ್ಣ ತಮ್ಮನ್ನು ಬಿಡುಗಡೆಗೊಳಿಸಿಕೊಳ್ಳಲಿಲ್ಲ. ಲಿಂಗಾಯತ ಧರ್ಮ ವೇದಪ್ರಮಾಣಗಳ ಟೀಕಿಸಿದ ಧರ್ಮ! ಆದರೆ, ವೈದಿಕರ ಕರ್ಮಾಚಾರಗಳನೇಕವನ್ನು ಲಿಂಗಾಯತರು ರೂಢಿಸಿಕೊಂಡಿದ್ದಾರೆ. ಅದರಲ್ಲೂ ನಗರ-ಪಟ್ಟಣವಾಸೀ ಸುಶಿಕ್ಷಿತ ನೌಕರ ವ್ಯಾಪಾರೀ ವರ್ಗಗಳು ಗೃಹಪ್ರವೇಶ, ವಿವಾಹ, ಮುಂತಾದ ಸಂದರ್ಭಗಳಲ್ಲಿ ವೈದಿಕಾಚಾರಗಳನ್ನು ಅನಾಮತ್ತಾಗಿ ಸ್ವೀಕರಿಸಿವೆ. ಹೋಮ ಹವನ ಎಗ್ಗಿಲ್ಲದೇ ನಡೆಯುತ್ತದೆ. ಶೈವ ದೈವತ ವೀರಭದ್ರ ದಕ್ಷಯಜ್ಞ ನಾಶಕ. ಆದರೆ ಅವನ ಭಕ್ತರೇ ಯಜ್ಞ ಹೋಮ ಮಾಡುವುದು ವಿಪರ್ಯಾಸವಲ್ಲವೇ! ಕೆಲವರು ವಾಮಾಚಾರಿಗಳು! ಅಲ್ಲದೇ,  ವೈದಿಕ ಜೋತಿಷಿಗಳು ಮಾತ್ರವೇಕೆ, ಲಿಂಗಾಯತ ಗುರು ಜಂಗಮರೂ ಜೋತಿಷ್ಯ ಪಂಚಾಂಗ ವಾಸ್ತು ಶಾಸ್ತ್ರ ಪಾಂಡಿತ್ಯದಲ್ಲಿ ಹಿಂದೆ ಬಿದ್ದಿಲ್ಲ! ಇವರ ಸಲಹೆ ಪಡೆದು ಕಟ್ಟಿ ಕೆಡಹಿದ ಬಂಗಲೆಗಳದೆಷ್ಟು!? ಆದರೆ ಇದೆಲ್ಲಾ ಶರಣಸಮ್ಮತವೇ ಅಲ್ಲ.  ಕಟಿಬದ್ಧ ನುಡಿದರೆ, ತಮ್ಮ ಬದುಕಿನ ಕಾಟ ಕರ್ಮಾದಿಗಳಿಗೆ ಜಯಾಪಜಯಗಳಿಗೆ ತಾರಾಬಲ ಚಂದ್ರ ಬಲ ನೋಡುವುದು, ಜೋತಿಷ್ಯ ಪಂಚಾಂಗಾದಿಗಳನ್ನು ಅನುಸರಿಸುವುದು, ರಾಶಿಗುಣಗಳ ಲೆಕ್ಕ ಹಾಕುವುದು, ಲಿಂಗಾಯತ ಧಮಕ್ಕೆ ಹೊರಗು. ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟಸಂಪನ್ನರುಂಟೆಂದು ಹೇಳಿರಯ್ಯಾ ಎಂದು ಬಸವಣ್ಣ ನುಡಿದರೆ, ಇದಕ್ಕೂ ಹೆಚ್ಚು ಖಚಿತವಾಗಿ ನಿರ್ದಾಕ್ಷಿಣ್ಯವಾಗಿ ಚನ್ನಬಸವಣ್ಣ ನುಡಿದ : ‘ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೇ, ನರಗುರಿಗಳಿಗೆ, ರೋಗ ಧಾರಿದ್ರ್ಯ ಅಪಜಯಂಗಳು ಬರುತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ?’ (ಪು.503/ವ.ಮ.ಸಂ-1). ಇದೇ ಶರಣ, ವಿವಾಹ ಕಾರ್ಯಾದಿಗಳಿಗೆ ಮುಹೂರ್ತ ಘಳಿಗೆ ಹುಡುಕುವುದನ್ನು ಹೀಗೆ ಖಂಡಿಸಿದ: ‘ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ ವಿಭೂತಿ ವೀಳೆಯ ಕೊಟ್ಟು ಆರೋಗಣೆಯ ಮಾಡಿಸಿ ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನ್ನಿಕ್ಕುವುದೇ ಸದಾಚಾರವಲ್ಲದೇ, ವಾರ ತಿಥಿ ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ ನಿಮ್ಮ ಸದ್ಭಕ್ತರಿಗೆ ದೂರವಯ್ಯಾ, ಕೂಡಲಚನ್ನಸಂಗಮದೇವ!’ (ಪು.496/ವ.ಮ.ಸಂ-1)

ಇನ್ನು ನಾಲ್ಕನೆಯದಾಗಿ, ನೈತಿಕ ನಡಾವಳಿಕೆಗಳಿಗೆ ಸಂಬಂಧಿಸಿ, ಲಿಂಗಾಯತ ಗುರು-ಭಕ್ತಾದಿಗಳನ್ನು ಶರಣ ವಚನಗಳಿಂದ ಒರೆಗೆ ಹಚ್ಚಬಹುದು. ನುಡಿ ನಡೆಯೊಳೊಂದಾದ ಭಕ್ತಿಯನ್ನು, ಅಂತರಂಗ ಬಹಿರಂಗ ಶುದ್ಧತ್ವವನ್ನೂ ಶರಣರು ಸಾರಿದರು. ‘ಮಾತಿನಲ್ಲಿ ದಿಟ, ಮನದಲ್ಲಿ ಸಟೆ ಬೇಡವಯ್ಯಾ. ಮನ ವಚನ ಕಾಯ ಒಂದಾಗದಿದ್ದರೆ ಕೂಡಲಸಂಗಯ್ಯನೆಂತೊಲಿವನಯ್ಯಾ?’ ಎಂದ ಬಸವಣ್ಣ. ಚಿಕ್ಕ ಮಾತುಗಳಾದರೂ ಅತಿತೂಕದ ಅರ್ಥದ ಈ ಸೂಳ್ನುಡಿಗಳು ಅರಿವು ಉಳ್ಳಡೆ ಕಠಾರೆಯಷ್ಟು ಮೊನಚಾದವು. ಇವುಗಳನ್ನು ಅರಿದು ಶರಣರಾದವರಿಗಿಂತ ಮರೆತು ಮಾನವರಾದವರೇ ಹೆಚ್ಚು. ‘ದಾಸಿ, ವೇಶಿ, ಮದ್ದು ಮಾಂಸ ಸುರೆಭಂಗಿ ಹೊಗೆ ಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ’ ಎಂದ ಜೇಡರದಾಸಿಮಯ್ಯನೇ ಮುಂದೆ ‘ ಪರವಧುವ ನೆರೆಯದೆ, ಪರಧನವ ತುಡುಕದೆ, ಪರದೈವದಿಚ್ಛೆವಡೆಯದೆ, ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ’ ಎಂದ. ‘ಭಕ್ತ ಜಂಗಮಕ್ಕೆ, ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ ಪರಸತಿ ಪರಧನ ಪರದೈವ ಭವಿಸಂಗ- ಇಷ್ಟುಳ್ಳನ್ನಕ್ಕ, ಅವನು ನಾಯಡಗು ನರಮಾಂಸ ಕ್ರಿಮಿಮಲ ಭಂಜಕನು. ಸುರಪಾನಸೇವಕನಪ್ಪನಲ್ಲದೇ, ಭಕ್ತನಲ್ಲ, ಜಂಗಮನಲ್ಲ’ ಎಂದು ಕಡೆಝಾಡಿಸುತ್ತಾನೆ ಚನ್ನಬಸವಣ್ಣ! ಆದರೆ, ನಮಗೆ ಆದ್ಯರಾದ ಶರಣರ ವಚನ-ನಿರ್ದೇಶನಗಳಿಗೆ ಕೆಲವರು ಗುರು-ಜಂಗಮ ಸ್ಥಾನದಲ್ಲಿದ್ದವರೇ ಅಪಚಾರವ್ಯಸಗುತ್ತಿದ್ದಾರೆಂಬುದನ್ನು ಹಲ-ಕೆಲವು ಲಿಂಗಾಯತ ಮಠಗಳಲ್ಲಿ ನಡೆದಿರುವ-ನಡೆಯುತ್ತಿರುವ ಅನೇಕ ಅನಾಚಾರಗಳು ಸಾಕ್ಷಿಸುತ್ತವೆ. ‘ಹುಸಿಯುಳ್ಳಾತ ಭಕ್ತನಲ್ಲ, ಬಾಧೆಯುಳ್ಳಾತ ಜಂಗಮವಲ್ಲ, ಆಸೆಯುಳ್ಳಾತ ಶರಣನಲ್ಲ. ಇಂತಪ್ಪ ಆಸೆ, ಹುಸಿ, ಬಾಧೆಯ ನಿರಾಕರಿಸಿ ಇರಬಲ್ಲಡೆ ಗುಹೇಶ್ವರಾ ನಿಮ್ಮ ಶರಣ.’ ಎನ್ನುತ್ತಾನೆ ಅಲ್ಲಮ ಪ್ರಭು. ಆದರೆ ಈ ಮೂರನ್ನೂ ತೊರೆದ  ಭಕ್ತ ಗುರು ಜಂಗಮ ವರ್ಗವದೆಷ್ಟೋ?. ಎಲ್ಲರಲ್ಲದಿದ್ದರೂ ಹಲ-ಕೆಲವು ಧನಧಾಹಿ ವ್ಯಾಪಾರಿಗಳು ಸುಲಿಗೆಕೋರರೂ ಶೋಷಕರೂ ಆಗಿದ್ದರೆ, ಕೆಲವು ರಾಜಕಾರಣಿಗಳೂ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ, ಕೆಲ ಲೋಭಿ ವೈದ್ಯರು ಬಡವರ ರಕ್ತಹೀರುತ್ತಿದ್ದಾರೆ, ಕೆಲವು ಮಠಗಳ ಸದ್ಭಕ್ತರೆನ್ನಿಸಿಕೊಂಡ ಕೆಲವು ಇಂಜಿನಿಯರುಗಳು ರಾಜರೋಷ ಸರಕಾರದ ಖಜಾನೆಗೆ ಕನ್ನವಿಟ್ಟು ಬಂಗಲೆಗಳ ಮೇಲೆ ಬಂಗಲೆ ಕಟ್ಟಿಸುತ್ತಿದ್ದಾರೆ! ಕೆಲವು ಧನಧಾಹಿ ಮಠಾಧೀಶರು ಶಿಕ್ಷಣವ್ಯಾಪಾರದ ಮಾರವಾಡಿಗಳಾಗಿದ್ದಾರೆ! ಕಾನೂನು ನೀತಿ ಧರ್ಮ ಮೂರನ್ನೂ ಉಲ್ಲಂಘಿಸಿ ವಾಮಮಾರ್ಗದಲ್ಲಿ ಗಳಿಸಿದ ಸಂಪದದಿಂದ ಹೈ ಫೈ ಜೀವನ ನಡಸುವ ಭಕ್ತರೂ ಮತ್ತು ಇಂಥವರ ಮನೆಗೆ ಹೋಗಿ ಪಾದೋದಕ ಪ್ರಸಾದ ನೀಡಿ ಆಶೀರ್ವಧಿಸುವ  ಗುರು-ಜಂಗಮರೂ, ಶರಣ ಧರ್ಮಕ್ಕೆ ಅಪಾಚಾರವ್ಯಸಗುತ್ತಿಲ್ಲವೇ?

ಕೊನೆಯದಾಗಿ, ವಚನಪೂರ್ವ ಯುಗದಲ್ಲಿ ಲಿಂಗಾಯತವು ತಾಂತ್ರಿಕ ಪರಂಪರೆಯ ಭಾಗವಾಗಿತ್ತು. ಆದರೆ, ಹನ್ನೆರಡನೇ ಶತಮಾನದ ನಂತರ ಈ ಧರ್ಮಕ್ಕೆ ವಚನಗಳು ತಾತ್ವಿಕ ಅಡಿಗಲ್ಲು ಒದಗಿಸಿದವು. ಯಾವ ಆಚಾರಗಳು-ವಿಚಾರಗಳು ವಚನಪೂರ್ವದಲ್ಲಿ ತಾಂತ್ರಿಕ ಧರ್ಮಸಮ್ಮತವಾಗಿದ್ದವೋ ಅವೆಲ್ಲಾ ವಚನಯುಗದಲ್ಲಿ ‘ಭವಿ’ಸಂಸ್ಕøತಿಯನ್ನಿಸಿ ತಿರಸ್ಕರಿಸಲ್ಪಟ್ಟವು. ಭವಿಗಳಾಗಿದ್ದ ಜನಸಮುದಾಯವನ್ನು ‘ಇರಿದು, ಕೊರೆದು, ಜರಿದು ಝಂಕಿಸಿ’ ಭಕ್ತಗೊಳಿಸುವಲ್ಲಿ ಶರಣರು ಅಪಾರ ಶ್ರಮವಹಿಸಿದರಾದರೂ ಈ ಜನಸಮುದಾಯ ಮಾತ್ರ, ಇವರ ಇಂದಿನ ನಡಾವಳಿಕೆ ನೋಡಿದರೆ, ‘ಭವಿ’ ಲೋಕದ ಹೊಸ್ತಿಲು ಬಿಟ್ಟು ಹೊರಗೆ ಬಂದೇಯಿಲ್ಲ ಎನ್ನಿಸುತ್ತದೆ. ಭವಿಗಳೇ ತಾವು ಭಕ್ತರೆಂದು ತಿಳಿದಿದ್ದಾರೆ; ಅಂತೆಯೇ ಇವರನ್ನು ಗುರುಲೋಕ ಭಕ್ತರೆಂದೇ ಮಾನ್ಯಮಾಡಿದೆ. ಕಠೋರ ತಾತ್ವಿಕ ಸತ್ಯಗಳನ್ನು ಧರ್ಮಾಚಾರಗಳನ್ನು ನುಡಿವ ವಚನಗಳನ್ನು ಹಿಂಬದಿಗೆ ತಳ್ಳಿ ಕಿವಿಗೆ ಇಂಪಾಗಿ ಕೇಳಿ ಮನಕ್ಕೆ ಮುದನೀಡುವ ಕೆಲವೇ ವಚನಗಳನ್ನು ವೇದಿಕೆಯ ಭಾಷಣಗಳಲ್ಲಿ ಪುಂಖಾನುಪುಂಖವಾಗಿ ಬಿಟ್ಟು ಖುಷಿಪಡುವ ಬದಲು ಉಪನಿಷತ್ ಎನ್ನಿಸಿಕೊಂಡ ವಚನಗಳ ನಿಜಸಾರವನ್ನು ಹೆಕ್ಕಿ ತೆಗೆದು, ಪರಾಮರ್ಶಿಸಿ, ಇಂದಿನ ವೈಜ್ಞಾನಿಕ ಯುಗದ  ಲಿಂಗಾಯತ ಜೀವನಕ್ಕೆ ಅವುಗಳನ್ನು ಹೇಗೆ ಎಷ್ಟು ಅಳವಡಿಸಿಕೊಳ್ಳಬಹುದೆಂಬ ಹೊಸ ಚಿಂತನೆಯನ್ನು ನಡೆಸಿ, ಭವಿಗಳನ್ನು ನಿಜವಾದ ಭಕ್ತರನ್ನಾಗಿಸುವ ಜವಾಬ್ಧಾರಿ ಗುರು-ಜಂಗಮರ ಮೇಲಿದೆ ಮಾತ್ರವಲ್ಲ ಭಕ್ತರಾಗಬೇಕಾದ ಜವಾಬ್ಧಾರಿಯೂ ಈ ಲಿಂಗಾಯತರೆನ್ನಿಸಿಕೊಂಡ ಜನಸಮುದಾಯದ ಮೇಲಿದೆ. ಇಲ್ಲದಿದ್ದರೆ, ಲಿಂಗಾಯತ ಧರ್ಮವು, ನುಡಿಯೊಂದು ನಡೆ ಇನ್ನೊಂದು ಎಂಬ ವೈರುಧ್ಯದ ಮಧ್ಯೆ ಸಿಲುಕಿ, ತನ್ನ ಶಕ್ತಿ-ಘನತೆಯನ್ನು ಕಳೆದುಕೊಂಡು ಭವಿಲೋಕದಲ್ಲಿ ಕರಗಿಹೋಗುತ್ತದೆ.

ನಿಸ್ಸಂದೇಹವಾಗಿಯೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ! ಆದರೆ, ಇಂದಿನ ಇದರ ಕಡುರ್ಪದ ಬದುಕಿನ ಬಂಡಿಯು ಮೃಡಶರಣರ “ನುಡಿಗಡಣಗೀಲು”ಗಳನ್ನು ಕಳಚಿಕೊಂಡಿದೆ. ಈಗಿನ ಹೋರಾಟ, ಈ  ಕೀಲುಗಳನ್ನು ಮತ್ತೆ ಹಾಕಿ, ತತ್ತ್ವಕ್ಕೆ ತಕ್ಕ ಜೀವನ, ನುಡಿದಂತೆ ನಡೆ, ಇದೇ ಜನ್ಮ ಕಡೆ ಎಂಬುದು ವಾಸ್ತವ ಜೀವನದಲ್ಲಿ ಸಾಕಾರಗೊಳ್ಳುವಂತೆ ಮಾಡಿದಾಗ ಮಾತ್ರ ಈ ಧರ್ಮಕ್ಕೆ ಹೊಸ ಶಕ್ತಿ-ಮೆರಗು ಬರುತ್ತದೆ; ಶರಣರು, “ಆದ್ಯರ ವಚನ ಪುರುಷ ಕಂಡಯ್ಯ” ಎಂದು ತಮಗಿಂತ ಹಿಂದಿನವರ ನುಡಿಗಳನ್ನು  ಗೌರವಿಸಿದಂತೆ, ಇಂದಿನ ಲಿಂಗಾಯತರೂ ತಮಗೆ ಆದ್ಯರಾದ ಶರಣರ ಪುರುಷ ವಚನಗಳನ್ನು ಗೌರವಿಸಲೇಬೇಕು; ಈ ಬಗ್ಗೆ ಗಂಭೀರ ತಾತ್ವಿಕ ಜಿಜ್ಞಾಸೆ ನಡೆಯಲಿ ಎಂಬುದು ನನ್ನ ಅಪೇಕ್ಷೆ.