ಮತ್ತೊಂದು ಗ್ರಹಣ ಮತ್ತಷ್ಟು ಗ್ರಹಚಾರ ಒಂದಿಷ್ಟು ಪರಿಹಾರ

ಮತ್ತೊಂದು ಗ್ರಹಣ ಮತ್ತಷ್ಟು ಗ್ರಹಚಾರ ಒಂದಿಷ್ಟು ಪರಿಹಾರ

ನಭೋ ಮಂಡಲದಲ್ಲಿ ಮತ್ತೊಂದು ಗ್ರಹಣ ಸಂಭವಿಸುತ್ತಿದೆ. ಈ ಬಾರಿಯ ಚಂದ್ರಗ್ರಹಣ ದೇಶದ ಕೆಲವೇ ಭಾಗಗಳಲ್ಲಿ ಕಾಣುವ ಸಾಧ್ಯತೆಗಳಿವೆ. ವಿಶ್ವದೆಲ್ಲೆಡೆ ವಿಜ್ಞಾನಿಗಳು ಗ್ರಹಣವನ್ನು ವೀಕ್ಷಿಸಲು ಸಜ್ಜಾಗುತ್ತಿದ್ದಾರೆ. ಕಡಲ ತೀರಗಳಲ್ಲಿ ಬೀಡುಬಿಟ್ಟು ರಾತ್ರಿಯಿಡೀ ನಿದ್ದೆಗೆಟ್ಟು ಗ್ರಹಣದ ಪ್ರತಿ ಕ್ಷಣವನ್ನೂ ವೀಕ್ಷಿಸಿ ಕಣ್ತುಂಬಿಸಿಕೊಳ್ಳಲು ಮಿಲಿಯಾಂತರ ಜನರು ಉತ್ಸುಕರಾಗಿದ್ದಾರೆ. ಗ್ರಹಣ ಸಂಭವಿಸುವ ಸಮಯದಲ್ಲಿ ಕನಿಷ್ಟ ಅರ್ಧ ಜಗತ್ತು ನಿದ್ರಿಸಿರುತ್ತದೆ. ಇದು ಸಹಜವೂ ಹೌದು. ದಿನವಿಡೀ ಬೆವರು ಸುರಿಸಿ ದುಡಿಯುವ ಶ್ರಮಜೀವಿಗಳ ಪಾಲಿಗೆ ಗ್ರಹಣ ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಜ್ಞಾನಾರ್ಜನೆಯ ದಾಹ ಇರುವವರಿಗೆ, ವೈಜ್ಞಾನಿಕ ಜ್ಞಾನದ ಶೋಧದಲ್ಲಿ ತೊಡಗಿರುವವರಿಗೆ ಇದು ಒಂದು ಅಪೂರ್ವ ಅವಕಾಶವಾಗುತ್ತದೆ. ಗ್ರಹಣ ವೀಕ್ಷಿಸುವುದು ಒಂದು ಅದ್ಭುತ ಅನುಭವ. ಖಗ್ರಾಸ ಗ್ರಹಣ ಅಥವಾ ಸಂಪೂರ್ಣ ಗ್ರಹಣದ ಸಂದರ್ಭದಲ್ಲಿ ಒಂದೆರಡು ಕ್ಷಣಗಳಷ್ಟೇ ಕಾಣಿಸಿಕೊಳ್ಳುವ ಗ್ರಹಣ ಹಿಡಿದ ಹುಣ್ಣಿಮೆಯ ಚಂದ್ರನನ್ನು ನೋಡಲು ಜನರು ಆಸೆ ಪಡುವುದೂ ಸಹಜ. ಏಕೆಂದರೆ ಇದು ನಾವು ಬೇಕೆಂದಾಗ ಬರುವ ವಿದ್ಯಮಾನವಲ್ಲ. ನೈಸರ್ಗಿಕ ಕ್ರಿಯೆಯೇ ಹಾಗೆ. ಭೂಕುಸಿತವಾಗಲೀ, ಪ್ರವಾಹವಾಗಲಿ, ಚಂಡಮಾರುತವಾಗಲಿ, ಭೂಕಂಪನವಾಗಲಿ ಮನುಕುಲದ ಅನುಭವಕ್ಕೆ ಬರುವುದೇ ನಿಸರ್ಗದ ನಿಯಮಾನುಸಾರ. ಗ್ರಹಣವೂ ಹಾಗೆಯೇ.

ಆದರೆ ಭಾರತದಲ್ಲಿ ಗ್ರಹಣ ಎಂದರೆ ಗ್ರಾಮೀಣ ಪ್ರದೇಶಗಳ ಜಾತ್ರೆಯಂತೆ, ಪಟ್ಟಣಗಳಲ್ಲಿನ ಸಂತೆಯಂತೆ, ನಗರಗಳಲ್ಲಿನ ಬೃಹತ್ ಶಾಪಿಂಗ್ ಮಾಲುಗಳಂತೆ. ಗ್ರಹಣಕ್ಕೂ ಗ್ರಹಚಾರಕ್ಕೂ ಸಂಬಂಧ ಕಲ್ಪಿಸಿ ಜನಸಾಮಾನ್ಯರನ್ನು ಗ್ರಹಚಾರಗಳ ಸರಪಣಿಯಲ್ಲಿ ಬಂಧಿಸಿ ಜ್ಯೋತಿಷಿಗಳ ಮೂಲಕ ಪರಿಹಾರದ ಮಾರ್ಗಗಳನ್ನು ಸೂಚಿಸುವ ಮೂಲಕ ಮಾರುಕಟ್ಟೆಯನ್ನು ವೃದ್ಧಿಸುವ ಅದ್ಭುತ ತಂತ್ರಗಾರಿಕೆಯನ್ನು ಭಾರತದ ವಿದ್ಯುನ್ಮಾನ ಮಾಧ್ಯಮಗಳು ರೂಢಿಸಿಕೊಂಡಿವೆ. ಕನ್ನಡದ ವಿಚಾರಕ್ಕೆ ಬಂದರೆ ಪಬ್ಲಿಕ್ ಟಿವಿಯ ನಿರೂಪಕರಿಗೆ ಯಾವುದೇ ಗ್ರಹಣ ಸಂಭವಿಸಿದರೂ ಅದು ವಿನಾಶದ ಸೂಚಕವೇ. ಕಳೆದ ತಿಂಗಳು ಸಂಭವಿಸಿದ ಗ್ರಹಣದ ಸಂದರ್ಭದಲ್ಲಿ ಇನ್ನೇನು ಇಡೀ ವಿಶ್ವವೇ ನಾಶವಾಗಿ ಎಲ್ಲೆಡೆ ಶೂನ್ಯ ಆವರಿಸುತ್ತದೆ ಎಂದು ಬೊಬ್ಬಿರಿದ ಪಬ್ಲಿಕ್ ಟಿವಿ ಈಗ ಮತ್ತೊಮ್ಮೆ ವಿನಾಶದ ಸಂದೇಶ ಸಾರುತ್ತಿದೆ. ಹಾಲಿವುಡ್ ಚಲನಚಿತ್ರಗಳ ದೃಶ್ಯಾವಳಿಗಳನ್ನು ಹಿನ್ನೆಲೆಯಲ್ಲಿ ಬಿತ್ತರಿಸುತ್ತಾ ವಿನಾಶದ ಪ್ರತಿಕ್ಷಣವನ್ನೂ ಅತ್ಯಂತ ಆನಂದದಿಂದ, ವೈಭವೀಕರಿಸಿ ರಂಜನೀಯವಾಗಿ ಬಿತ್ತರಿಸುವ ನಿರೂಪಕರು ಸಂಭಾವ್ಯ ವಿನಾಶದ ಸುದ್ದಿಯನ್ನು ಹರ್ಷಚಿತ್ತರಾಗಿ ವರದಿ ಮಾಡುವುದನ್ನು ನೋಡಿದರೆ ಗ್ರಹಣ ಮನುಷ್ಯನಲ್ಲಿರುವ ಸೂಕ್ಷ್ಮತೆಯನ್ನೇ ಹಾಳುಮಾಡುವುದೇನೋ ಎನಿಸುತ್ತದೆ. 

ಇರಲಿ, ಟಿವಿ ವಾಹಿನಿಗಳು ವಸ್ತುಶಃ ಉದ್ಯಮಗಳು. ಲಾಭಗಳಿಕೆಗಾಗಿಯೇ ಇರುವ ಔದ್ಯಮಿಕ ನೆಲೆಗಳು. ಯಾವುದರಿಂದ ಹೆಚ್ಚು ಹಣ ಒದಗಿಬರುತ್ತದೋ ಅಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಮಾರುಕಟ್ಟೆಯ ಸಹಜ ಧರ್ಮ. ಆದರೆ ತಾವು ಬಿತ್ತರಿಸುವ ಸುದ್ದಿ ಲಕ್ಷಾಂತರ ಜನರನ್ನು ತಲುಪುತ್ತದೆ ಎನ್ನುವ ಪರಿಜ್ಞಾನ ಟಿವಿ ನಿರ್ವಾಹಕರಿಗೆ ಇರಬೇಕಲ್ಲವೇ ? ದಿಕ್ಕು ತಪ್ಪುವ ಸಮಾಜದ ಓರೆಕೋರೆಗಳನ್ನು ತಿದ್ದಿ ಸರಿದಾರಿಗೆ ತರುವ ಮಾಧ್ಯಮ ಲೋಕ ಈಗ ಇತಿಹಾಸದಲ್ಲಿ ಹುದುಗಿ ಹೋಗಿದೆ ಎನ್ನುವುದು ವಾಸ್ತವ. ಆದರೂ ದಿಕ್ಕುತಪ್ಪಿಸುವ ಸುದ್ದಿ ಪ್ರಕಟಿಸುವುದು ಸರಿಯೇ ಎಂಬ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತ. ಪ್ರತಿಯೊಂದು ಗ್ರಹಣದ ಸಂದರ್ಭದಲ್ಲೂ ಟಿವಿ ಪರದೆಯ ಮೇಲೆ ರಾರಾಜಿಸುವ ಜ್ಯೋತಿಷಿಗಳು ಜನಸಾಮಾನ್ಯರಲ್ಲಿ ಉಂಟುಮಾಡುವ ಭೀತಿ ಯಾರ ಬದುಕನ್ನೂ ಬದಲಿಸುವುದಿಲ್ಲ ಆದರೆ ಕೆಲವು ಮೂಢನಂಬಿಕೆಗಳನ್ನು ಶಾಶ್ವತವಾಗಿ ಬಿತ್ತುತ್ತವೆ. ಮೌಢ್ಯವನ್ನು ಮಾರುಕಟ್ಟೆಯಲ್ಲಿ ಹೇಗೆ ನಗದೀಕರಿಸಿಕೊಳ್ಳಬೇಕು ಎಂದು ಈ ಜ್ಯೋತಿಷಿ ಪಡೆಗಳಿಗೆ ಚೆನ್ನಾಗಿ ತಿಳಿದಿದೆ. ಪ್ರತಿಯೊಂದು ರಾಶಿಯಲ್ಲಿ ಜನಿಸಿದವರಿಗೂ ಒಂದು ದೋಷ, ಆ ದೋಷ ಪರಿಹಾರಕ್ಕೊಂದು ಮಾರ್ಗ, ಆ ಮಾರ್ಗ ಅನುಸರಿಸಲು ಇಂತಿಷ್ಟು ಹಣ ಈ ವಿಷಚಕ್ರದಲ್ಲಿ ಅಮಾಯಕ ಜನರನ್ನು ಸಿಲುಕಿಸುವ ಜ್ಯೋತಿಷಿಗಳಿಗೆ ಅದೊಂದು ಧಂದೆ. ಆದರೆ ಈ ಧಂದೆಗೆ ಮಾಧ್ಯಮಗಳೇಕೆ ವೇದಿಕೆಯಾಗಬೇಕು ? 

ಚಂದ್ರನಿಗೆ ಗ್ರಹಣ ಸಂಭವಿಸುವುದಕ್ಕೂ ಮನುಷ್ಯನ ದೈನಂದಿನ ಬದುಕಿಗೂ ಎತ್ತಣದಿಂದೆತ್ತ ಸಂಬಂಧ. ಮೈಸೂರಿನ ವೈಚಾರಿಕ ಪ್ರಜ್ಞೆ ಎನಿಸಿದ್ದ ದಿವಂಗತ ಜಿ ಟಿ ನಾರಾಯಣರಾವ್ “ ಜ್ಯೋತಿಷ್ಯ ಒಂದು ಬೊಗಳೆ ವಾಸ್ತು ಅದರ ಸೋದರ ” ಎಂದು ಹೇಳುತ್ತಿದ್ದುದು ಇಲ್ಲಿ ನೆನಪಾಗುತ್ತದೆ. ಆಕಾಶಕಾಯದಲ್ಲಿ ಸಂಭವಿಸುವ ಒಂದು ನೈಸರ್ಗಿಕ ಪ್ರಕ್ರಿಯೆ ಮನುಷ್ಯನ ಚಲನವಲನಗಳನ್ನು ಹೇಗೆ ನಿಗ್ರಹಿಸುತ್ತದೆ, ನಿಯಂತ್ರಿಸುತ್ತದೆ, ಹೇಗೆ ಪ್ರಭಾವಿಸುತ್ತದೆ ಎಂಬ ಪ್ರಶ್ನೆಗೆ ಬಹುಶಃ ಜ್ಯೋತಿಷಿಗಳು ಉತ್ತರ ನೀಡಲಾರರು. ಇದು ಪ್ರಭಾವ ಬೀರುವುದು ಸತ್ಯ ಎಂದಷ್ಟೇ ಹೇಳುತ್ತಾರೆ. ಕಾರ್ಯ ಕಾರಣ ಸಂಬಂಧಗಳಿಂದ ಹೊರತಾದ ಯಾವುದೇ ವಿದ್ಯಮಾನವನ್ನೂ ಒಪ್ಪದ ವೈಚಾರಿಕ ಮನಸುಗಳು ಈಗಾಗಲೇ ಗ್ರಹಣದಿಂದ ಯಾವುದೇ ಪ್ರಭಾವ ಉಂಟಾಗುವುದಿಲ್ಲ ಎಂದು ನಿರೂಪಿಸಿದ್ದಾಗಿದೆ. ಆದರೂ ಜ್ಯೋತಿಷಿಗಳು ತಮ್ಮ ಪರಿಹಾರ ಮಾರ್ಗಗಳಿಂದ ಜನರ ದಿಕ್ಕು ತಪ್ಪಿಸುವುದನ್ನು ಬಿಟ್ಟಿಲ್ಲ. ಇದಕ್ಕೆ ಮೂಲ ಕಾರಣ ಪಬ್ಲಿಕ್ ಟಿವಿ, ಟಿವಿ 9 ಮುಂತಾದ ಪ್ರತಿಷ್ಟಿತ ವಾಹಿನಿಗಳು. ಎಲ್ಲ ದೋಷಗಳಿಗೂ ಪರಿಹಾರವಿದೆ ಎಂದು ಹೇಳುವ ಮೂಲಕ ಜನರಲ್ಲಿ ತಾವೇ ಸೃಷ್ಟಿಸಿದ ಭೀತಿಯನ್ನು ಹೋಗಲಾಡಿಸುವ ಜ್ಯೋತಿಷಿಗಳ ಸಾಹಸದ ಹಿಂದೆ ತಮ್ಮ ಧಂದೆಯನ್ನು ವೃದ್ಧಿಸಿಕೊಳ್ಳುವ ಹುನ್ನಾರ ಇರುವುದನ್ನು ನಮ್ಮ ಸುಶಿಕ್ಷಿತ ಸಮಾಜ ಏಕೆ ಗ್ರಹಿಸುವುದಿಲ್ಲ.

ಭಾರತ ಈಗಾಗಲೇ ಸಾಂಸ್ಕೃತಿಕವಾಗಿ ಹಿಂದಕ್ಕೆ ಚಲಿಸುತ್ತಿದೆ. ಸಮಾಜೋ ಸಾಂಸ್ಕೃತಿಕ ಬೆಳವಣಿಗೆಗಳು ಈ ದೇಶದ ಸ್ವಸ್ಥ ಮನಸುಗಳನ್ನು ಅಸ್ವಸ್ಥಗೊಳಿಸುತ್ತಿವೆ. ಒಂದೆಡೆ ಉದಾರವಾದಿ ಆರ್ಥಿಕ ನೀತಿಗಳ ಭ್ರಮೆ, ಮತ್ತೊಂದೆಡೆ ಮತಧರ್ಮಗಳ ಭ್ರಮೆ ಮತ್ತು ಮೌಢ್ಯಲೋಕ ಸೃಷ್ಟಿಸುವ ಭ್ರಮೆ ಹೀಗೆ ಭ್ರಮಾಲೋಕದಲ್ಲೇ ವಿಹರಿಸುತ್ತಿರುವ ಭಾರತೀಯ ಸಮಾಜ ಬೊಗಳೆ ಜ್ಯೋತಿಷ್ಯ, ಜಾತಕ ಫಲ, ವಾಸ್ತು ಮುಂತಾದ ಅವೈಜ್ಞಾನಿಕ ಅವಿಷ್ಕಾರಗಳಿಂದ ಮತ್ತಷ್ಟು ಹಿಂದಕ್ಕೆ ಚಲಿಸುತ್ತಿವೆ. ಈ ಹಿಂಚಲನೆಗೆ ಗ್ರಹಣದ ಸಂದರ್ಭ ಒಂದು ಸದವಕಾಶವಾಗಿ ಪರಿಣಮಿಸುತ್ತಿದೆ. ಟಿವಿ ವಾಹಿನಿಗಳು ತಮ್ಮ ಔದ್ಯಮಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸಮಾಜವನ್ನು ಮತ್ತಷ್ಟು ಮೌಢ್ಯತೆಯತ್ತ ನೂಕುತ್ತಿವೆ. ಬೊಗಳೆ ಜ್ಯೋತಿಷಿಗಳು ಸಿನಿಮಾ ನಟರಂತೆ ಅಲಂಕರಿಸಿಕೊಂಡು ಟಿವಿ ಪರದೆಯ ಮೇಲೆ ವಿರಾಜಮಾನರಾಗಿ ತಾವು ಹೇಳುವ ಸುಳ್ಳುಗಳನ್ನೇ ಅಂತಿಮ ಸತ್ಯ ಎಂದು ನಂಬಿಸಲು ಯತ್ನಿಸುತ್ತಿದ್ದಾರೆ. ಟಿವಿ ನೋಡಬೇಡಿ, ಆಫ್ ಮಾಡಿಬಿಡಿ, ಅವರನ್ನು ನಿರ್ಲಕ್ಷಿಸಿ, ಆ ಸಮಯದಲ್ಲಿ ಬೇರೆ ಕಾರ್ಯಕ್ರಮ ನೋಡಿ ಇವೆಲ್ಲವೂ ನಮ್ಮ ನಡುವೆ ಇರುವ ಪರಿಹಾರಗಳು. ಆದರೆ ಇದರಿಂದ ಈ ಮೌಢ್ಯದ ಕೂಪಗಳನ್ನು ಮುಚ್ಚಲಾಗುವುದಿಲ್ಲ. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕೆಯನ್ನು ರೂಢಿಸಿಕೊಳ್ಳದ ಸಮಾಜ ಗತ ಇತಿಹಾಸದ ಪಳೆಯುಳಿಕೆಗಳಾಗಿ ಬಿಡುತ್ತದೆ ಎನ್ನುವ ಸತ್ಯವನ್ನು ಈ ಸಂದರ್ಭದಲ್ಲಿ ಗ್ರಹಿಸಿ ಪ್ರಜ್ಞಾವಂತ ಸಮಾಜ ಟಿವಿ ವಾಹಿನಿಗಳ ಮೌಢ್ಯ ಬಿತ್ತನೆ ಕಾರ್ಯಾಚರಣೆಯ ವಿರುದ್ಧ ಪ್ರತಿಭಟಿಸಬೇಕಿದೆ.