ಎಲ್ಲ ಪಕ್ಷಗಳ ಮನೆ ದೋಸೆಯೂ ತೂತು !

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ಒಂದು ನಯಾಪೈಸೆ ತರಲು ಆಗದ ಯಡಿಯೂರಪ್ಪ ಈಗ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಮೋದಿ ಮೋದಿ ಎಂದು ನಶೆ ಬಂದವರಂತೆ ಕುಣಿದಾಡಿದ ಮತದಾರರೂ ಸಹಾ ಈಗ ಮೋದಿ ಮತ್ತು ಷಾ ಅವರನ್ನು ಬಹಿರಂಗವಾಗಿಯೇ ಟೀಕೆ ಮಾಡಲು ಶುರು ಮಾಡಿದ್ದಾರೆ. ಇಂತಹ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ

ಎಲ್ಲ ಪಕ್ಷಗಳ ಮನೆ ದೋಸೆಯೂ ತೂತು !

"ಎಲ್ಲರ ಮನೆಯ ದೋಸೆಯೂ ತೂತು” ಎನ್ನುವುದು ಜನಜನಿತವಾದ ಗಾದೆ. ಇದೀಗ ಇದು ರಾಜ್ಯದ ಮೂರು ರಾಜಕೀಯ ಪಕ್ಷಗಳ ವಾಸ್ತವ ಸ್ಥಿತಿ. ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳ (ಎಸ್)ವು ಈಗ ಒಡೆದ ಮನೆ. ಗುಂಪುಗಾರಿಕೆ. ಒಬ್ಬರ ಮೇಲೊಬ್ಬರು ಆರೋಪ  ಪ್ರತ್ಯಾರೋಪ ಸಾಮಾನ್ಯ. ಯಾರು ಯಾರನ್ನೂ ನಂಬದ ಸ್ಥಿತಿ. ಎಲ್ಲಿಯೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಅಧಿಕಾರ ಹಿಡಿದು ಎರಡು ತಿಂಗಳಾಗಿರುವ ಭಾರತೀಯ ಜನತಾ ಪಕ್ಷದಲ್ಲಿ ಆಗಲಿ, ಮೈತ್ರಿಸರ್ಕಾರದಲ್ಲೇ ಅಪಸ್ವರ ಮತ್ತು ರಾಜಕೀಯ ಷಡ್ಯಂತರದಿಂದ ಅಧಿಕಾರ ಕಳೆದುಕೊಂಡು ವಿರೋಧ ಸ್ಥಾನಕ್ಕೆ ಹೋದ ಕಾಂಗ್ರೆಸ್ ಮತ್ತು ಜನತಾದಳದ ಪರಿಸ್ಥಿತಿಯೇನೂ ಬಿಜೆಪಿಗಿಂತ ಭಿನ್ನವಾಗಿಲ್ಲ. ಅಲ್ಲಿಯೂ ಅದೇ ಸ್ಥಿತಿ.

ಅತ್ಯುತ್ಸಾಹದಿಂದ ಅಧಿಕಾರ ಹಿಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮಾತಿಗೆ ಪಕ್ಷದಲ್ಲಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಮತ್ತು ಇನ್ನೂ ಪಕ್ಷದ ಚುಕ್ಕಾಣಿ ಹಿಡಿದಿರುವ ಅಮಿತ್ ಷಾ ಯಾರೂ ಕೇರೇ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕಟ್ಟಾ ಹಿಂದುತ್ವವಾದಿಯಾಗಿರುವ ನಳೀನ್ ಕುಮಾರ್ ಕಟೀಲ್ ಬಂದ ಮೇಲೆ ಯಡಿಯೂರಪ್ಪ ಅವರ ಅಡ್ಡಾದಿಡ್ಡಿ ವೇಗಕ್ಕೆ ಕಡಿವಾಣ ಹಾಕಲಾಗಿದೆ. ಯಡಿಯೂರಪ್ಪ ಅವರ ಮಾತಿಗೆ ದೆಹಲಿಯಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಮೂರು ಕಾಸಿನ ಬೆಲೆ ಇಲ್ಲದಂತೆ ಪಕ್ಷದೊಳಗೇ  “ಆರೆಸೆಸ್ ಹಿನ್ನೆಲೆಯ ನಾಯಕರು” ಮಾಡುತ್ತಿರುವ ತಂತ್ರಗಾರಿಕೆ ಈಗ ಗುಟ್ಟಾಗಿ ಉಳಿದಿಲ್ಲ.

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ಒಂದು ನಯಾಪೈಸೆ ತರಲು ಆಗದ ಯಡಿಯೂರಪ್ಪ ಈಗ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಮೋದಿ ಮೋದಿ ಎಂದು ನಶೆ ಬಂದವರಂತೆ ಕುಣಿದಾಡಿದ ಮತದಾರರೂ ಸಹಾ ಈಗ ಮೋದಿ ಮತ್ತು ಷಾ ಅವರನ್ನು ಬಹಿರಂಗವಾಗಿಯೇ ಟೀಕೆ ಮಾಡಲು ಶುರು ಮಾಡಿದ್ದಾರೆ. ಇಂತಹ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.

ಆಳುವ ಬಿಜೆಪಿಯ ಸ್ಥಿತಿ ಇದಾದರೆ ಪ್ರತಿ ಪಕ್ಷ ಸ್ಥಾನದಲ್ಲಿ ಇನ್ನೂ ಸರಿಯಾಗಿ ಕೂರಲಾಗದಿರುವ ಕಾಂಗ್ರೆಸ್ನದು ಮತ್ತೊಂದು ರೀತಿಯ ಸಮಸ್ಯೆ. ಕಳೆದ ಲೋಕಸಭೆ ಚುನಾವಣೆಯಲ್ಲಿ (2019) ಕರ್ನಾಟಕದಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಚುನಾವಣೆಯ ಈ ಸೋಲಿಗೆ ನಿಜವಾದ ಕಾರಣ ಏನೆಂದು ತಿಳಿಯಲು ಪಕ್ಷದ ಉಪಾಧ್ಯಕ್ಷರಲ್ಲೊಬ್ಬರಾದ ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ರಚಿಸಿದ್ದ ಸತ್ಯ ಶೋಧನಾ ಸಮಿತಿ ವರದಿ ನೀಡಿದ್ದು, ಈ ದಯನೀಯ ಸೋಲಿಗೆ ಹಲವಾರು ಕಾರಣಗಳನ್ನು ನೀಡಿದೆ.

ಬ್ಲಾಕ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ವರೆಗೂ ಮೈತ್ರಿ ಸರ್ಕಾರದ ನೇತೃತ್ವ ಹೊಂದಿದ್ದ ಜನತಾದಳದ ಜೊತೆ ಪರಸ್ಪರ ವಿಶ್ವಾಸ ಇಲ್ಲದೇ ಹೋದುದು, ಚುನಾವಣೆ ಮೈತ್ರಿಯ ಬಗೆಗೆ ಸ್ಪಷ್ಟ ಮಾಹಿತಿ ಇಲ್ಲದೆ ಉಂಟಾದ ಗೊಂದಲ ಹೀಗೆ ಹಲವು ಕಾರಣಗಳನ್ನು ಸಮಿತಿ ನೀಡಿದೆ. ಹಾಗಾಗಿ ಜನತಾ ದಳದೊಡನೆ ಮೈತ್ರಿ ಮಾಡಿಕೊಂಡದ್ದೇ ನಿಜವಾದ ಸೋಲಿಗೆ ಕಾರಣ ಎಂದೂ ಹೇಳಲಾಗಿದೆ.

ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 22ರಲ್ಲಿ ಎರಡೂ ಪಕ್ಷಗಳ ಸ್ಥಳೀಯ ನಾಯಕರು ಕಾರ್ಯಕರ್ತರ ನಡುವೆ ಸುತಾರಾಂ ಹೊಂದಾಣಿಕೆ ಇರಲಿಲ್ಲ. ಪರಸ್ಪರ ಕೆಸರೆರಚಾಟ, ಪರೋಕ್ಷವಾಗಿ ಒಬ್ಬರೊಬ್ಬರನ್ನು ಕಾಲೆಳೆಯುವುದೇ ಆಗಿತ್ತು. ಕೇವಲ ಶಿವಮೊಗ್ಗ,  ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಇದ್ದುದರಲ್ಲಿ ಪರವಾಗಿ ಇರಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿ ಅಭ್ಯರ್ಥಿಗಳು ನಿರೀಕ್ಷೆಯಂತೆ ಗೆಲ್ಲಲು ಆಗಲಿಲ್ಲ ಎಂದು ಸಮಿತಿ ಹೇಳಿದೆ.

ಮೈತ್ರಿ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಪಕ್ಷದ ಹಿರಿಯ ನಾಯಕ ಮತ್ತು ಸೋಲನ್ನೇ ಕಂಡರಿಯದಿದ್ದ ಎಂ. ಮಲ್ಲಿಕಾರ್ಜುನ ಖರ್ಗೆ ಅವರಂತಹವರು ಮೊದಲ ಬಾರಿಗೆ ಸೋಲಬೇಕಾಯಿತು. ಹಾಗೆಯೇ ಜನತಾ ದಳದ ಅಗ್ರಗಣ್ಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಹಾ ತುಮಕೂರು ಕ್ಷೇತ್ರದಲ್ಲಿ ಸೋಲಬೇಕಾಯಿತು.

ಸಮಿತಿಯ ಸದಸ್ಯರು ಸೋತ ಅಭ್ಯರ್ಥಿಗಳು, ಆ ಕ್ಷೇತ್ರಗಳ ನಾಯಕರು ಮತ್ತು ಕಾರ್ಯಕರ್ತರು ಹಾಗೆ ಹಲವು ಕಡೆಗಳಲ್ಲಿ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಹಿಂದೆಂದೂ ಕಾಣದ ಈ ಸೋಲಿಗೆ ಜನತಾ ದಳದ ಜೊತೆಗಿನ ಮೈತ್ರಿ ಕಾರಣ. ಜನತಾದಳದ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮನಸಾರೆ ಕೆಲಸ ಮಾಡಲಿಲ್ಲ. ಒಳಗೊಳಗೇ ಬಿಜೆಪಿಗೆ ಮತ್ತು ಕೆಲವು ಕಡೆಗಳಲ್ಲಿ ದಳದ ನಾಯಕರು ಪ್ರಚಾರದಲ್ಲಿ ಭಾಗವಹಿಸಲೇ ಇಲ್ಲ. ಹಳೇ ಮೈಸೂರು ಭಾಗದಲ್ಲಿ  ಜನತಾದಳ ಮತ್ತು ಕಾಂಗ್ರೆಸ್ ನಡುವೆಯೇ ಹತ್ತಾರು ವರ್ಷಗಳಿಂದ ನೇರಸ್ಪರ್ಧೆ ಮಾಡಿಕೊಂಡು ಬರಲಾಗಿದೆ. ಹೀಗಿರುವಾಗ ಎರಡೂ ಪಕ್ಷಗಳ ಕಾರ್ಯಕರ್ತರು ಕೈ ಕೈ ಹಿಡಿದು ಓಡಾಡಲಿಲ್ಲ. ಹಳೆಯ ವೈಷಮ್ಯವೇ ಚುನಾವಣೆಯಲ್ಲಿ ಕಾಣಿಸಿಕೊಂಡಿತ್ತು ಎಂದೂ ಸಮಿತಿ ಹೇಳಿದೆ.

ಈ ವಸ್ತುಸ್ಥಿತಿಯ ಹಿನ್ನೆಲೆಯಲ್ಲಿ ಜನತಾದಳದ ಜೊತೆ ಮುಂದಿನ ದಿನಗಳಲ್ಲಿ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದೂ ಸಮಿತಿ ಶಿಫಾರಸ್ಸು ಮಾಡಿದೆ. ಪರಿಸ್ಥಿತಿಯನ್ನು ಗಮನಿಸಿ ಕೆಲವು ಸಂದರ್ಭಗಳಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದಿದೆ. ಇದರ ಜೊತೆಗೆ ಪಕ್ಷವನ್ನು ಚುರುಕುಗೊಳಿಸಲು ಅದು ಕೆಲವು ಸಲಹೆಗಳನ್ನೂ ಮುಂದಿಟ್ಟಿದೆ.

ಬ್ಲಾಕ್, ಜಿಲ್ಲಾ ಮಟ್ಟ ಹಾಗು ಕೆಪಿಸಿಸಿ ಮಟ್ಟದಲ್ಲಿ ಪಕ್ಷದ ಹಣಕಾಸು ಸ್ತಿತಿಯನ್ನು ಉತ್ತಮ ಪಡಿಸಲು ಶಾಸಕರು ಮತ್ತು ಸಂಸದರು ಪ್ರತಿ ತಿಂಗಳೂ ಕಾಣಿಕೆ ನೀಡಬೇಕು. ಒಂದು ಕುಟುಂಬದಲ್ಲಿ ಒಬ್ಬರನ್ನು ಹೊರತು ಪಡಿಸಿ ಮತ್ತೊಬ್ಬರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು., ಸದಸ್ಯತ್ವ ನೋಂದಣಿಯನ್ನು ಚುರುಕುಗೊಳಿಸಬೇಕು. ಬ್ಲಾಕ್ ಮತ್ತು ಜಿಲ್ಲಾಮಟ್ಟದ ಸಮಿತಿಗಳನ್ನು ಪುನರ್ ರಚಿಸಬೇಕು. ಪಕ್ಷದ ಪುನಶ್ಚೇತನಕ್ಕೆ ಅವಶ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಈ ಸಮಿತಿ ಕೆಪಿಸಿಸಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದೆ.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ತನ್ನ ಜನಬೆಂಬಲವನ್ನು ಕಳೆದುಕೊಂಡಿಲ್ಲ. ಮೈತ್ರಿಕೂಟದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಕಳೆದ ಲೋಕಸಭೆಗೆ ನಡೆದ ಚುನಾವಣೆ ಹೀನಾಯ ಸೋಲು ಕಂಡಿತು. ಆದರೆ ವಿಧಾನಸಭೆಗೆ 2013 ಮತ್ತು 2019ರ ಫಲಿತಾಂಶ ಆಶಾದಾಯಕವಾಗಿಯೇ ಇದೆ. 2013ರರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾವಾರು 36.6 ಮತಗಳನ್ನು ಪಡೆದು 222 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. 

ಆದರೆ 2018ರ ಚುನಾವಣೆಯಲ್ಲಿ ಶೇಕಡಾವಾರು ಮತದಾನದಲ್ಲಿ ಹಿಂದಿಗಿಂತ ಹೆಚ್ಚಾಗಿ ಅಂದರೆ ಶೇ.38ರಷ್ಟು ಮತಗಳಿಸಿತಾದರೂ ಸ್ಥಾನಗಳಿಕೆಯಲ್ಲಿ ಹಿಂದೆ ಬಿದ್ದಿತು. ಅಂದರೆ 78 ಸ್ಥಾನಗಳು ಮಾತ್ರ ಲಭ್ಯವಾಯಿತು. ಆದರೆ ಬಿಜೆಪಿ ಶೇಕಡಾವಾರು 36ರಷ್ಟು ಮತಗಳನ್ನು ಪಡೆದು 104 ಸ್ಥಾನಗಳನ್ನು ಗಳಿಸಿತು. ಮತಗಳಿಕೆಯಲ್ಲಿ ಕಳೆದ ಚುನಾವಣೆಗಿಂತ ಮತ್ತು ಬಿಜೆಪಿ ಈ ಬಾರಿ ಪಡೆದ ಮತಗಳಿಗಿಂತ ಶೇ 2ರಷ್ಟು ಹೆಚ್ಚು ಮತಗಳನ್ನು ಪಡೆಯಿತಾದರೂ ಅಧಿಕಾರಕ್ಕೆ ಬರಲಾಗಲಿಲ್ಲ. ಆದರೂ ಜನರ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜನತಾದಳಕ್ಕಿಂತ (ಶೇ. 21) ಮುಂದೆ ಇತ್ತು. 

ವಿಚಿತ್ರ ಎಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ಬಿಜೆಪಿಯ ಮುಂದೆ ಕಾಂಗ್ರೆಸ್ ಮಂಕಾಗಿ ಹೋಯಿತು. ಇದು ಚುನಾವಣಾ ಅಖಾಡದಲ್ಲಾದ ಸೋಲಾಗಿದ್ದರೂ, ತನ್ನ ಸಾಂಪ್ರದಾಯಿಕ ಮತದಾರರು ಬೇರೆ ಪಕ್ಷಕ್ಕೆ ಹೆಚ್ಚಾಗಿ ಬಿಜೆಪಿ ಕಡೆಗೆ ವಾಲದಂತೆ ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಮತ್ತು ಅವರ ವಿಶ್ವಾಸವನ್ನು ಮತ್ತೆ ಗಳಿಸುವ ನಾಯಕತ್ವ ಈಗ ರಾಜ್ಯ ಕಾಂಗ್ರೆಸ್ಸಿಗೆ ಅನಿವಾರ್ಯವಾಗಿದೆ.

ಆದರೆ ಆಸೆಬುರುಕ ಮತ್ತು ಪಕ್ಷದ ಸಿದ್ಧಾಂತದ ಬಗೆಗೆ ಬದ್ಧತೆ ಇಲ್ಲದ ಕೇವಲ ಅಧಿಕಾರದ ಹಿಂದೆ ಬಿದ್ದ ಶಾಸಕರಿಂದ ಮೈತ್ರಿ ಸರ್ಕಾರವನ್ನು ಕಳೆದುಕೊಂಡುದನ್ನು ಪಕ್ಷವು ತಾನು ಎಡವಿದ್ದೆಲ್ಲಿ. ಶಾಸಕರನ್ನು ತನ್ನ ನಿಯಂತ್ರಣದಲ್ಲಿ ಹಿಡಿದಿಟ್ಟುಕೊಳ್ಳಲು ಏಕೆ ಆಗಲಿಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜೊತೆಗೆ ಈಗ ಉಳಿದಿರುವ ಶಾಸಕರು ಮತ್ತೆ ಆಳುವ ಬಿಜೆಪಿಗೆ ಹಾರದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಂತಹ ವಿಶ್ವಾಸ ಮೂಡಿಸುವ ದೆಹಲಿ ಮಟ್ಟದ ಹಾಗು ರಾಜ್ಯ ಮಟ್ಟದ ನಾಯಕತ್ವವೂ ಸಹಕಾರಿಯಾಗಬೇಕಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಪಕ್ಷದ ವರಿಷ್ಠರು ಕೈಗೊಳ್ಳಬೇಕಿದೆ. 

ಈಗ ಸಿಗುವ ವಿರೋಧಿ ನಾಯಕತ್ವಕ್ಕಾಗಿ ಗುಂಪುಗಾರಿಕೆ ಮತ್ತು ಕಚ್ಚಾಡುವುದಾದರೆ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸುವುದು ಕಷ್ಟವಾಗಬಹುದು. ಈ ಎಚ್ಚರ ಪಕ್ಷದ ನಾಯಕರಲ್ಲಿ ಬರಬೇಕಿದೆ. ಏಕೆಂದರೆ ಈಗಿನ ಶಾಸಕರಿಗೆ ಕೋಮುವಾದ ಮತ್ತು ಜಾತ್ಯತೀತವಾದ, ಕಾಂಗ್ರೆಸ್ಸಿನ ಬಹುತ್ವ ಜನತಂತ್ರ ಮತ್ತು ಬಿಜೆಪಿಯ ರಾಷ್ಟ್ರೀಯತೆಯ ಹೆಸರಿನಲ್ಲಿ ಮಾಡುವ ಏಕ ಸಂಸ್ಕೃತಿ, ಒಂದೇ ಭಾಷೆ ಮತ್ತು ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ ವ್ಯತ್ಯಾಸವನ್ನು ಗುರುತಿಸುವ ಅವಶ್ಯಕತೆ ಕಾಣುತ್ತಿಲ್ಲ. 

ಮೈತ್ರಿ ಸರ್ಕಾರ ಬೀಳಲು ಕಾರಣರಾದ ಹದಿನೈದು ಮಂದಿ ಶಾಸಕರ ಮನೋಭಾವನ್ನು ಗಮನಿಸಿದಾಗ ಕೇವಲ ಅಧಿಕಾರವೇ ಮುಖ್ಯ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಇನ್ನು ಜನತಾದಳ (ಎಸ್) ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ. ಪಕ್ಷದ ನಾಯಕತ್ವದಿಂದ ಹಿಡಿದು ಅದರ ಕೆಳಹಂತದ ಕಾರ್ಯಕರ್ತರಲ್ಲಿಯೂ ಒಂದೇ ಜಾತಿಯ ಪ್ರಭಾವ ಇದ್ದರೂ, ಅಲ್ಲಿಯೂ ಅಧಿಕಾರಕ್ಕಾಗಿ ಗುಂಪುಗಾರಿಕೆ ಸ್ಫೋಟಗೊಳ್ಳುತ್ತಿದೆ. ಜೊತೆಗೆ ಪಕ್ಷದ ನಾಯಕರಾದ ಎಚ್.ಡಿ ದೇವೇಗೌಡರು ಪಕ್ಷವನ್ನು ಕುಟುಂಬವನ್ನೇ ಕೇಂದ್ರೀಕರಿಸಿಕೊಂಡು ನಡೆಸುವ ರಾಜಕಾರಣವನ್ನು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಬಿಡಬೇಕಿದೆ. ಆ ಬದಲಾವಣೆಯನ್ನು ಕಂಡುಕೊಳ್ಳದಿದ್ದರೆ ಜನತಾದಳದ ಭವಿಷ್ಯವೂ ಮಂಕಾಗುವುದನ್ನು ತಳ್ಳಿಹಾಕಲಾಗದು.

ಯಾರೂ ದೇಶಕ್ಕಾಗಲಿ, ರಾಜ್ಯಕ್ಕಾಗಲಿ ಅಥವಾ ಒಂದು ಪಕ್ಷಕ್ಕಾಗಲಿ ಅನಿವಾರ್ಯ ಎನಿಸಬಾರದು. ಅಂತಹ ಮುತ್ಸದ್ಧಿತನ ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಬರಬೇಕಿದೆ.