ಹೊಗೆಗೂಡಾಗುತ್ತಿರುವ ದೂರದ ದಿಲ್ಲಿ  

ಶುದ್ಧ ಗಾಳಿಯನ್ನು ಉಸಿರಾಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಹಕ್ಕು. ವಾಯುಮಾಲಿನ್ಯದ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಾಗ, ಯಾವುದೇ ಕಾಯ್ದೆಯನ್ನು ರಚಿಸುವಾಗ ಮಾನವ ಆರೋಗ್ಯವು ಆದ್ಯತೆಯಾಗಬೇಕು. ದೆಹಲಿ ಮತ್ತು ದೆಹಲಿ ಸುತ್ತಲಿನ ನೊಯಿಡಾ, ಗಾಜಿಯಾಬಾದ್, ಗುರುಗಾಂವ್ಗಳು  ಹೊಗೆ ತುಂಬಿಸಿದ ಬಲೂನಿನಂತೆ ಹೊಗೆಮಂಜನಲ್ಲಿ ಸುತ್ತಿ ಸುರುಳಿಮಾಡಿ ನರಳಿಸಿತೊಡಗಿದಾಗ ಶಾಸಕಾಂಗ, ನ್ಯಾಯಾಂಗ, ದೇಶವೆಂಬ ದೇಹದ ಎಲ್ಲ ಅಂಗಾಂಗಗಳೂ  ಎಚ್ಚೆತ್ತುಕೊಳ್ಳುತ್ತವೆ. 

ಹೊಗೆಗೂಡಾಗುತ್ತಿರುವ ದೂರದ ದಿಲ್ಲಿ  

“ಊರು ಕೊಳ್ಳೆ ಹೊಡೆದ ಬಳಿಕ ದಿಡ್ಡಿ ಬಾಗಿಲು ಹಾಕಿದರಂತೆ " ಎನ್ನುವಂತೆ ಇವತ್ತು ( ನ.4) ಸುಪ್ರೀಂ ಕೋರ್ಟ್ ದೆಹಲಿ ಮತ್ತು ಕೇಂದ್ರ  ಸರಕಾರಗಳನ್ನು ತಕ್ಷಣವೇ ಹವಾಮಾಲಿನ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತರಾಟೆಗೆ   ತೆಗೆದುಕೊಂಡಿದೆ.   ದಿಲ್ಲಿ ಮತ್ತು ದೆಹಲಿ ಸುತ್ತಲಿನ ಗಾಜಿಯಾಬಾದ್ , ನೊಯಿಡಾ, ಗುರುಗ್ರಾಮ್ ಜನತೆ ವಾಯುಮಾಲಿನ್ಯದಲ್ಲಿ ಸಾಯುತ್ತಿದ್ದಾರೆ ನೀವು  ನಿಮ್ಮ ರಾಜಕಾರಣದಲ್ಲಿಯೇ ಮುಳುಗಿದ್ದೀರಿ ಎಂದು ಹರಿಹಾಯ್ದ   ಉಚ್ಚನ್ಯಾಯಾಲಯ ಒಣಹುಲ್ಲು ಸುಟ್ಟವರ ಹೆಸರುಗಳನ್ನು ಕೊಡಲು ತಿಳಿಸಿದೆ ಮತ್ತು ಕಳೆದ ವರ್ಷದ ಸಮ ಬೆಸ ಸಂಖ್ಯೆಯ ಸಂಚಾರ ವ್ಯವಸ್ಥೆಯ ವರದಿಯನ್ನು ಕೊಡುವಂತೆ ದಿಲ್ಲಿ ಸರಕಾರವನ್ನು ಕೇಳಿದೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು,  ನಿಯಮವನ್ನು ಉಲ್ಲಂಘಿಸಿದಲ್ಲಿ ಒಂದು ಲಕ್ಷ ರುಪಾಯಿ ಜುರ್ಮಾನೆಯನ್ನು ವಿಧಿಸಿದೆ.  

ಕಳೆದ ಮೂರ್ನಾಲ್ಕು ವರ್ಷದಲ್ಲಿ ಕಂಡಿರದ ದಟ್ಟ ಧೂಳಿನ ಮುಂಜಾವು ಮೊನ್ನಿನ ಭಾನುವಾರವನ್ನು ಹೊಗೆಗೂಡಾಗಿಸಿತ್ತು.  ಇಡೀ ವಾತಾವರಣ ಭೂಮಿಯಿಂದ ಬಾನಿನವರೆಗೂ “ನ ಭೂತೋ ನ ಭವಿಷ್ಯತಿ” ಎನ್ನುವಷ್ಟು ದಟ್ಟ ಹೊಗೆಯ ದುಪ್ಪಟಿಯನ್ನು ಹೊದ್ದು ನಿಂತಿತ್ತು. ಎದುರಿನ ಪಾರ್ಕಿನ ಬೆಂಚು ಮರಗಳು ಕಾಣದಷ್ಟು ದಟ್ಟ ಹೊಂಜು ಹಬ್ಬಿ ಅದೆಲ್ಲ ತೆರೆದ ಕಿಟಕಿಗಳಿಂದ ಮನೆಯೊಳಗೂ ನುಗ್ಗಿ ಮನೆಯೊಳಗೂ ಊದಿನಕಡ್ದಿ ಹಚ್ಚಿಟ್ಟಂಥ ತೆಳುವಾದ ಹೊಗೆ.  ಕಿಟಕಿ ಬಾಗಿಲುಗಳನ್ನು ತೆರೆದಿದ್ದಕ್ಕೆ ಮಗನಿಂದ ಬೈಸಿಕೊಂಡು ಎಲ್ಲ ಬಾಗಿಲು ಮುಚ್ಚಿದೆ.  

ಇಷ್ಟು ಕಾಲ ನಮ್ಮ ಆರೋಗ್ಯ ಮತ್ತು ಉಲ್ಬಣಿಸಿದ ಹವಾಮಾಲಿನ್ಯದ ಚಿಂತೆಯನ್ನೇ ಮಾಡದ ನಾವು ಮಾಲಿನ್ಯದಲ್ಲಿಯೇ ಬದುಕಿ ಒಂದಿನ ಸಾಯುತ್ತೇವೆ.  ಉಸಿರುಗಟ್ಟಿಸುವ ಈ ಊರಲ್ಲಿ ಇನ್ನು ಉಳಿಗಾಲವಿಲ್ಲ ಎನಿಸಿಬಿಟ್ಟಿತು. ಇಷ್ಟು ವರ್ಷಗಳ ದೀರ್ಘ ವಾಸದಲ್ಲಿ ಚಳಿಗಾಲವೆಂದರೆ ಹಿತವಾದ ಮೃದು ರೇಶಿಮೆಯ ಬಿಸಿಲಿಗೆ ಮೈಯೊಡ್ಡಿ ಚಳಿಕಾಸಿಕೊಳ್ಳುವ ಸುಖದ ಕಾಲ ಎಂದು ಮೋಹಿಸುತ್ತಿದ್ದವಳು ಈಗ ಚಳಿಗಾಲ ಕಾಲಿಡುತ್ತಲೇ ಆಯುಷ್ಯದ ಕೆಲ ವರ್ಷಗಳನ್ನು ಕಳೆದುಕೊಳ್ಳುತ್ತಿರುವ ಅನುಭವವಾಗತೊಡಗಿದೆ.  ಈ ಹೊಗೆ ಹೊಂಜಿನ ವಿಷವುಂಡು ಪುಪ್ಪುಸದ ಒಳಗೋಡೆಗಳು ಮಸಿಹಿಡಿದಿರಬಹುದೇನೋ !  

ಎಪ್ರಿಲ್‍ನಿಂದ ಶುರುವಾದ ಬೇಸಿಗೆ, ಬಿರುಬಿಸಿಲು ಆಗಸ್ಟ್ ಹೊತ್ತಿಗೆ  ನಾಲ್ಕಾರು  ಅಡ್ದಮಳೆ ಬಂದು  ಅಸಹನೀಯ ಬೆವರ ಹಿಂಸೆಯ ತಿಂಗಳುಗಳು ಆರಂಭವಾಗುತ್ತವೆ.  ಕಾದ ಕಾವಲಿಗೆ ನೀರು ಹೊಯ್ದಂತೆ ಧಗೆ ಹೆಚ್ಚಾಗುತ್ತದೆ.  ಸರಿ ಇವೆರಡು ತಿಂಗಳು ಕಳೆದರೆ ವಾತಾವರಣ ಹಿತವಾಗಬಹುದು ಎಂದುಕೊಳ್ಳುವಷ್ಟರಲ್ಲಿ  ದಸರೆ ದೀಪಾವಳಿಗಳು ಧೂಳಿನ ದಿವಾಳಿಯೆಬ್ಬಿಸಿ ಸಿಡಿದ  ಪಟಾಕಿ ಹೊಗೆಯಲ್ಲಿಯೇ ಹೊಂಜು ಹಬ್ಬಿಕೊಂಡುಬಿಟ್ಟಿರುತ್ತದೆ.  ಆಗಲೇ ಹೊಂಜಿನ ಹಾಹಾಕಾರ ಮುಗಿಲುಮುಟ್ಟತೊಡಗುತ್ತದೆ. ಎಲ್ಲ ಚಾನೆಲ್ಲುಗಳಲ್ಲಿ ಹಾಹಾಕಾರ. ಗ್ಯಾಸ್ ಚೇಂಬರ್ ಆಗುತ್ತಿರುವ ದಿಲ್ಲಿಯ ಕುರಿತು ಚರ್ಚೆಗಳು ಶುರುವಾಗೋದು. ಅವರನ್ನು ಇವರು ಇವರನ್ನು ಅವರು ದೋಷಾರೋಪಣೆ ಮಾಡುವ ರಾಜಕೀಯ ಜೋರಾಗುತ್ತದೆ. 

ಇನ್ನು ದೆಹಲಿಯ ಮಗ್ಗುಲಿನ ಹರಿಯಾಣ ಪಂಜಾಬಿನ ಹೊಲಗಳಲ್ಲಿ ಭತ್ತದ ಫಸಲು ಕಟಾವಾಗಿ ಉಳಿದ ದಂಟು, ಹುಲ್ಲು ಸೆದೆಗಳನ್ನು ರೈತರು ಸುಡತೊಡಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಪ್ರತಿವರ್ಷವೂ ಅಕ್ಟೋಬರ್ ನವಂಬರ್ ಸಮಯಕ್ಕೆ ಒಕ್ಕರಿಸುವ ಸಮಸ್ಯೆ.  ರೈತರು ಪರಾಲಿಯನ್ನು ಸುಡುವ ಕ್ರಿಯೆಯೂ ಹೊಸದಲ್ಲ. ಮೊದಲೂ ಸುಡುತ್ತಿದ್ದರು.  ಆಗ ದೆಹಲಿಯ ಪುಪ್ಪುಸವನ್ನು ಕಾಪಾಡಲು ಅರಾವಳಿ ಬೆಟ್ಟಗಳು, ದಟ್ಟವಾದ ಕಾಡುಪ್ರದೇಶಗಳಿದ್ದವು.  ರಸ್ತೆಗಳ ಇಕ್ಕೆಲಗಳಲ್ಲಿ ದೆಹಲಿಯ ಉಸಿರನ್ನು ಹಸಿರಾಗಿಟ್ಟ  ಸಾಕಷ್ಟು ಎತ್ತರವುಳ್ಳ ದಟ್ಟ ಹಳೆಯ ಮರಗಳಿದ್ದವು.  

ವಲಸೆಗಳಿಂದ ಜನಸಂಖ್ಯೆ ಹೆಚ್ಚಾಗತೊಡಗಿದಂತೆ ಅಭಿವೃದ್ಧಿ, ನಗರೀಕರಣ ಯೋಜನೆಗಳೂ ಹೆಚ್ಚಿದವು. ಇಂದು ತನ್ನ ಸ್ವಾರ್ಥಕ್ಕಾಗಿ ಗಣಿಗಾರಿಕೆ, ರಿಯಲ್ ಎಸ್ಟೇಟ್ ಉದ್ಯಮದಿಂದ ಸಂಪತ್ತನ್ನು ಬಾಚಿಕೊಳ್ಳುವ  ಮನುಷ್ಯನ ಹೊಟ್ಟೆಬಾಕತನಕ್ಕೆ ಅರಾವಳಿ ಬೆಟ್ಟಗಳೂ ನಾಶವಾಗಿವೆ ಮತ್ತು ಇದ್ದ ದಟ್ಟವಾದ ಕಾಡುಪ್ರದೇಶಗಳೂ ಮೇಲ್ ಸೇತುವೆ, ಮೆಟ್ರೋ, ರಸ್ತೆಯ ಅಗಲೀಕರಣ ಇತ್ಯಾದಿ ಅಭಿವೃದ್ಧಿ ಯೋಜನೆಗಳಲ್ಲಿ ನಾಶವಾದವು. ನಮ್ಮ ದೇಶದ ರಾಜಧಾನಿ ದಿಲ್ಲಿಯನ್ನು ವಾಸಿಸಲು ಯೋಗ್ಯವಲ್ಲದ ರಾಜ್ಯವನ್ನಾಗಿಸಿದ್ದು ಯಾರು ?  ಎಲ್ಲದರಲ್ಲೂ ಭ್ರಷ್ಟಾಚಾರ, ಎಲ್ಲದರಲ್ಲೂ  ಕಾನೂನಿನ ಉಲ್ಲಂಘನೆ. ಇವತ್ತು ದಿಲ್ಲಿ ಗ್ಯಾಸ್ ಚೇಂಬರ್ ಆಗಿದ್ದರೆ ಅದಕ್ಕೆ ಹೊಣೆಗಾರರು ಇಲ್ಲಿನ ನಿವಾಸಿಗಳು ಮತ್ತು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಲಾಭಕೋರ ದಲ್ಲಾಳಿಗಳು !

ಶುದ್ಧ ಗಾಳಿಯನ್ನು ಉಸಿರಾಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಹಕ್ಕು. ವಾಯುಮಾಲಿನ್ಯದ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಾಗ, ಯಾವುದೇ ಕಾಯ್ದೆಯನ್ನು ರಚಿಸುವಾಗ ಮಾನವ ಆರೋಗ್ಯವು ಆದ್ಯತೆಯಾಗಬೇಕು. ದೆಹಲಿ ಮತ್ತು ದೆಹಲಿ ಸುತ್ತಲಿನ ನೊಯಿಡಾ, ಗಾಜಿಯಾಬಾದ್, ಗುರುಗಾಂವ್ಗಳು  ಹೊಗೆ ತುಂಬಿಸಿದ ಬಲೂನಿನಂತೆ ಹೊಗೆಮಂಜನಲ್ಲಿ ಸುತ್ತಿ ಸುರುಳಿಮಾಡಿ ನರಳಿಸಿತೊಡಗಿದಾಗ ಶಾಸಕಾಂಗ, ನ್ಯಾಯಾಂಗ, ದೇಶವೆಂಬ ದೇಹದ ಎಲ್ಲ ಅಂಗಾಂಗಗಳೂ  ಎಚ್ಚೆತ್ತುಕೊಳ್ಳುತ್ತವೆ. 

ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ವಿಂಗಡಿಸಲಾಗುತ್ತದೆ. ಈ ಕಣಗಳ ಸಂಖ್ಯೆ ಕಡಿಮೆ ಆದಷ್ಟೂ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ. ಪ್ರತಿ ಘನಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ(ಪಿ.ಎಂ) ಸಂಖ್ಯೆ 50ರ ಒಳಗಿದ್ದರೆ ಗಾಳಿಯ ಗುಣಮಟ್ಟವನ್ನು ಉತ್ತಮ ಎಂದು ಕರೆಯಬಹುದು. ಈ ಕಣಗಳ ಸಂಖ್ಯೆ 401ರಿಂದ 500ರವರೆಗೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ. ದೆಹಲಿಯ ಗಾಳಿಯಲ್ಲಿ ಪಿ.ಎಂ. ಕಣಗಳ ಸಂಖ್ಯೆ ಈಗ 500 ದಾಟಿದೆ. 

ಇಂಥದ್ದೇ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ 1998ರಲ್ಲಿ CNG ಬಳಕೆಯನ್ನು ಸರಕಾರ ಕಡ್ಡಾಯಗೊಳಿಸಿತ್ತು.  ಆಗಲೂ ಸಿಎನ್ಜಿ ಬಳಕೆ, ದುಬಾರಿಯಾಗಿದ್ದ ಕಿಟ್, ಇಂಧನ ಪೂರೈಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. CNG kit ಅಳವಡಿಸಿದ ಆಟೋ, ಸರಕಾರಿ ಬಸ್ಸುಗಳು, ಖಾಸಗೀ ವಾಹನಗಳು ಬೀದಿಯಲ್ಲಿ ಓಡಾಡತೊಡಗಿದ ಮೇಲೆ ವಾಯುಮಾಲಿನ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿತ್ತು. ಸಿಎನ್ಜಿ ಬಳಕೆಯ ಮೊದಲು  ದೆಹಲಿಯ ಕಣಗಳ ಮಟ್ಟವು ಒಂದು ಘನ ಮೀಟರ್ ಗೆ 409 ಮೈಕ್ರೊಗ್ರಾಮ್ ಇದ್ದು 2000 ಇಸ್ವಿಗೆ  ಕಣಗಳ ಮಟ್ತ 370ಕ್ಕೆ ಇಳಿದಿತ್ತು.  

ವಾಯುಮಾಲಿನ್ಯ (ತಡೆಗಟ್ಟುವ ಮತ್ತು ನಿಯಂತ್ರಿಸುವ) ಕಾಯ್ದೆ 1981 ಕೂಡ  ಇಂದಿನ ಭವಿಷ್ಯದ ವಾಯುಮಾಲಿನ್ಯವನ್ನು ನಿಯಂತ್ರಿಸುವ ದೂರೃಷ್ಟಿಯ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿಲ್ಲ. ಸಧ್ಯ ನಿಷ್ಪ್ರಯೋಜಕವಾಗಿರುವ ಈ ಕಾಯ್ದೆಯನ್ನು ಪುನರಾವಲೋಕಿಸುವ, ಬದಲಾಯಿಸುವ, ಇನ್ನಷ್ಟು ಬಲಪಡಿಸುವ ಬಗ್ಗೆ ಅನೇಕರು ಚರ್ಚಿಸುತ್ತಿದ್ದಾರೆ. 

ಭಾರತವು ಮಾಲಿನ್ಯ ಮುಕ್ತ ರಾಷ್ಟ್ರವಾಗಬೇಕಾದ ತುರ್ತು ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮಾಲಿನ್ಯ ಮಂಡಳಿಗೆ ಸಾಕಷ್ಟು ಅಧಿಕಾರ ನೀಡಬೇಕು ಎಂದು ಲೋಕಸಭೆಯ ಸಂಸದ ಗೌರವ್ ಗೊಗೊಯ್ ಇಂಡಿಯನ್ ಎಕ್ಸಪ್ರೆಸ್ ಗೆ ಬರೆದ ಲೇಖನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.  
   
ಈ ಕಾಯ್ದೆಯ ಸೆಕ್ಷನ್ -16 ( CPCB – Central Pollution Control Board)  ಕೇಂದ್ರ ಮಂಡಳಿಯ ಕಾರ್ಯಗಳನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು, ರಾಜ್ಯ ಮಂಡಳಿಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ಸಹಾಯ, ರಾಜ್ಯದ ಚಟುವಟಿಕೆಗಳನ್ನು ಸಂಘಟಿಸುವುದು, ತರಬೇತಿ, ಅರಿವು ಮತ್ತು ಮಾಹಿತಿಯ ಪ್ರಸಾರ ಮತ್ತು ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಯೋಜಿಸುವುದು ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ. ಗಾಳಿಯ ಗುಣಮಟ್ಟಕ್ಕೆ ಮಾನದಂಡಗಳನ್ನು ಕೇಂದ್ರ ಮಂಡಳಿಯು ಸೂಚಿಸಬೇಕು ಇತ್ಯಾದಿ ಪಟ್ಟಿಯೇ ಸದರಿ ಮಂಡಳಿಯ ವ್ಯಾಪ್ತಿಯಲ್ಲಿದೆ. ಅದೆಲ್ಲ ಬರೀ ಕಾಗದ ಮತ್ತು ಕಡತಗಳಲ್ಲಿದೆ.  

ಇಷ್ಟೆಲ್ಲ ಕಾಯ್ದೆಗಳಿದ್ದಲ್ಲಿ, ಪಂಜಾಬು ಹರಿಯಾಣದ ಹೊಲಗಳಲ್ಲಿ ಧಾನ್ಯ ಕಟಾವಾಗಿ ಇನ್ನು ಹುಲ್ಲು ಸುಡುವ ಕಾರ್ಯಕ್ಕೆ ರೈತರು ಸಿದ್ಧವಾಗುವ ಮುನ್ನವೇ ಯಾರು ಯಾಕೆ ಮುಂಜಾಗ್ರತೆ ವಹಿಸುವುದಿಲ್ಲ. ಗಡ್ದಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವಂತೆ ಈಗ ಸುಪ್ರೀಂ ಕೋರ್ಟ ಮಧ್ಯವರ್ತಿಯಾಗಿ ಬಂದು ಎಚ್ಚರಿಸಿದಾಗಲೇ ಎಚ್ಚೆತ್ತುಕೊಳ್ಳಬೇಕೆಂದಿದೆಯೇ ? ಹುಲ್ಲು ಕತ್ತರಿಸುವ ಮಶೀನುಗಳಿದ್ದರೂ ರೈತ ದುಬಾರಿ ಮಶೀನನ್ನು ಬಳಸದೇ ಹುಲ್ಲನ್ನು ಸುಡುತ್ತಾನೆಂದರೆ ಅವನಿಗೂ ವಾಯುಮಾಲಿನ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಜೊತೆಗೆ ಯಂತ್ರ ಖರೀದಿಗೆ ಸಬ್ಸಿಡಿ ನೀಡುವ ಬದಲು   ಪಂಜಾಬ್ , ಹರಿಯಾಣ ಸರಕಾರಗಳೇ ಅಂಥ ಯಂತ್ರಗಳನ್ನು ಖರೀದಿಸಿ ಹುಲ್ಲು ಕತ್ತರಿಸುವ ಕಾಲದಲ್ಲಿ ರೈತನಿಗೆ ಬಾಡಿಗೆಯಾಗಿ ಕೊಟ್ಟರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗುತ್ತದೆ.  ಯಾಕೆಂದರೆ ಸಬ್ಸಿಡಿಯಲ್ಲಿ ಒಂದೂವರೆ ಲಕ್ಷದ ಯಂತ್ರವನ್ನು ಖರೀದಿಸಿ ಸಾಲದಲ್ಲಿ ರೈತನನ್ನು ಮುಳುಗಿಸುವ ಬದಲಿಗೆ ವರ್ಷಕ್ಕೊಮ್ಮೆ ಬಳಕೆಯಾಗುವ ಈ  ಯಂತ್ರಗಳನ್ನು ಸರಕಾರದ ಸಂಬಂಧಿತ ಇಲಾಖೆಗಳೇ ಖರೀದಿಸಿ ರೈತನಿಗೆ ಬಾಡಿಗೆಯಾಗಿ ಒದಗಿಸಬಹುದು. ಈಗ ಸುಪ್ರೀಂ ಕೋರ್ಟ್ ಎಚ್ಚರಿಕೆಯ ನಂತರ ಪರಾಲಿ ( ಹುಲ್ಲು)  ಸುಡುವಿಕೆಗೆ ಹಳ್ಳಿಯ ಪ್ರಧಾನರನ್ನು ಹೊಣೆಗಾರರನ್ನಾಗಿಸಿ, ತಾಲೂಕು, ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಎಂದೆಲ್ಲ ಹೇಳುವುದು ಹಾಸ್ಯಸ್ಪದವಲ್ಲದೇ ಮತ್ತೆನಲ್ಲ.  
   ಪ್ರಸ್ತುತ   ಭಾರತದ ವಾಯು ಕಾಯ್ದೆ ಕೂಡ ಹೆಚ್ಚುತ್ತಿರುವ ಮಾಲಿನ್ಯ ಆರೋಗ್ಯದ ಮೇಲುಂಟು ಮಾಡುವ ಪರಿಣಾಮವನ್ನು ಕಡಿಮೆ ಮಾಡುವ ತುರ್ತನ್ನು ಎಲ್ಲಿಯೂ ಉಲ್ಲೇಖಿಸುತ್ತಿಲ್ಲ  ಅಥವಾ ಆರೋಗ್ಯದ ವಿಷಯಕ್ಕೆ ಆದ್ಯತೆ ನೀಡುವುದಿಲ್ಲ.   ತುರ್ತಾಗಿ ವಾಯುಮಾಲಿನ್ಯದ ಬಗ್ಗೆ ಹೊಸ ಕಾನೂನು ತರಬೇಕಾದ ಅಗತ್ಯವಿದ.

ನನ್ನ ಕೊಲೀಗ್ ಒಬ್ಬ ಹೇಳುವಂತೆ ಪಂಜಾಬಿಗಿಂತ ಉತ್ತರಪ್ರದೇಶದಲ್ಲಿ ಕೃಷಿಭೂಮಿ ಕಡಿಮೆ. ಕಾರ್ಖಾನೆ ಉದ್ಯಮಗಳು ಹೆಚ್ಚು. ನೂರಾರು ಹೆಕ್ಟೇರುಗಳಷ್ಟು ವ್ಯಾಪ್ತಿಯ ಹೊಲಗಳಲ್ಲಿ ಆಳುಗಳಿಂದ ಹುಲ್ಲುಕತ್ತರಿಸುವುದು ರೈತರಿಗೆ ದುಬಾರಿಯೆನಿಸುತ್ತದೆ. ಹುಲ್ಲು ಕತ್ತರಿಸುವ ಯಂತ್ರ ಭೂಮಿಯಿಂದ ಒಂದು ಫೂಟು ಎತ್ತರದಲ್ಲಿ ಹುಲ್ಲನ್ನು ಕತ್ತರಿಸುತ್ತದೆ. ಬುಡದಿಂದ ಕತ್ತರಿಸಿಸುವುದಿಲ್ಲ.  ಹಿಂಗಾರು ಬೆಳೆಯ ಬೀಜ ಬಿತ್ತನೆಗೆ ಸಮಯವಿರದ ಕಾರಣ  ಉಳಿದ ಪರಾಲಿಯನ್ನು ಸುಡುವುದೇ ರೈತನಿಗಿರುವ ಸರಳೋಪಾಯ ಹಾಗೂ ಅನಿವಾರ್ಯ !  ಉತ್ತರಪ್ರದೇಶದಲ್ಲಿ ಕಟಾವಿನ ನಂತರ ಉಳಿದ ದಂಟು-ಹುಲ್ಲನ್ನು ಜಾನುವಾರುಗಳ ಮೇವಿಗಾಗಿ ಬಳಸುತ್ತಾರೆ. ಸುಡುವುದಿಲ್ಲ. ಆದರೆ ಪಂಜಾಬ್ ಹರಿಯಾಣದಲ್ಲಿ ಜಾನುವಾರುಗಳಿಗೆ ಮೇಯಲು ಮೇವು ಸಿಗುವುದರಿಂದ ಮೇವನ್ನು ಸಂಗ್ರಹಿಸುವ ಸಮಸ್ಯೆಯಿಲ್ಲವಂತೆ. ಉತ್ತರಪ್ರದೇಶದ ಜನರು ಪಂಜಾಬಿನಿಂದ ಈ ಭತ್ತದ ಹುಲ್ಲನ್ನು  ತಮ್ಮ ಜಾನುವಾರುಗಳಿಗೆ ತರಿಸಬೇಕೆಂದರೆ ಸಾರಿಗೆ ಖರ್ಚು ಎನ್ನುತ್ತಾರೆ. 

ದಿಲ್ಲಿಯ ಧೂಳು ಹೊಗೆ ಮಂಜಿಗೆ ಇದೊಂದೇ ಕಾರಣವಲ್ಲ.  ಕಸವನ್ನು ಸುಡುವ ಪರಿಪಾಠವನ್ನೂ ನಿಲ್ಲಿಸಬೇಕಿದೆ. ಜನರಲ್ಲಿ ವಾಯುಮಾಲಿನ್ಯದಿಂದಲೇ  ಆರೋಗ್ಯಕ್ಕೆ ಹಾನಿಯಾಗುವುದರ ಬಗ್ಗೆ ಅರಿವುಮೂಡಿಸಬೇಕಿದೆ.  ನಿನ್ನೆ ಎನ್ಡಿನಟಿವಿಯ ಕಾರ್ಯಕ್ರಮವೊಂದರಲ್ಲಿ ತಜ್ಞರೊಬ್ಬರು ಮಾತಾಡುತ್ತಾ ವೈದ್ಯರು ತಮ್ಮ ರೋಗಿಯ ಮದ್ದುಗಳನ್ನು ಅವನ ಆರೋಗ್ಯದ ಕುರಿತು ಬರೆಯುವ ವಿವರದಲ್ಲಿ ಕಡ್ದಾಯವಾಗಿ ಈ ರೋಗಿಯ ಆರೋಗ್ಯ ಸಮಸ್ಯೆ “ವಾಯುಮಾಲಿನ್ಯ”ದಿಂದ ಉಂಟಾದದ್ದು ಎಂಬುದಾಗಿ ಲಿಖಿತರೂಪದಲ್ಲಿ ಬರೆಯತೊಡಗಿದಾಗ ಜನರು ಹೆಚ್ಚು ಜಾಗರೂಕರಾಗುತ್ತಾರೆ. ವಾಯುಮಾಲಿನ್ಯವನ್ನು ತಗ್ಗಿಸುವತ್ತ ಗಮನಹರಿಸುತ್ತಾರೆ ಎಂದ ಮಾತಿನಲ್ಲಿ ಸತ್ಯಾಂಶವಿದೆ ಎನಿಸಿತು.  ಒಂದು ಸಣ್ಣ ನೆಗೆಡಿ ಕೆಮ್ಮೂ ನಿಧಾನಕ್ಕೆ ಅಸ್ತಮಾ ರೋಗ, ಟಿಬಿ, ಪುಫ್ಫುಸದ ಕ್ಯಾನ್ಸರ ಹೀಗೆ ವಾಯುಮಾಲಿನ್ಯದಿಂದಾಗಿ ಬರುವ ರೋಗಗಳ ಸಾಧ್ಯತೆಗಳಿವೆ. 

ಕೃಷಿವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ - ದಿಲ್ಲಿಯ ವಾಯುಮಾಲಿನ್ಯ ಇಂದು ಕೇವಲ ಮಾಲಿನ್ಯದ ಸಮಸ್ಯೆಯಾಗದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕರ ಆರೋಗ್ಯದ ಗಂಭೀರ ಸಮಸ್ಯೆಯಾಗಿದೆ ಎನ್ನುತ್ತಾರೆ. ಇತ್ತೀಚೆಗೆ ಮ್ಯಾಂಮಾರಿನ ಬಾಹ್ಯ ವ್ಯವಹಾರಗಳ ಸಚಿವಾಲಯವು ನೇ.ಪಿ.ತಾವ್ ( Nay Pyi Taw) ಎಂಬಲ್ಲಿ ಭತ್ತದ ಬಯೊಪಾರ್ಕ್ ಅನ್ನು ನಿರ್ಮಿಸಿದೆ. ಆ ಭತ್ತದ ಬಯೋಪಾರ್ಕಿನಲ್ಲಿ  ಹೇಗೆ ಕೃಷಿ ತ್ಯಾಜ್ಯವನ್ನು (ದಂಟು- ಹುಲ್ಲನ್ನು) ಉತ್ಪಾದನೆ ಮತ್ತು ಉದ್ಯೋಗದ ಮಾರ್ಗವನ್ನಾಗಿಸಬಹುದು. ಕೃಷಿ ತ್ಯಾಜ್ಯದಿಂದ ಕಾಗದ, ಕಾರ್ಡ್ ಬೊರ್ಡ್ದಂಥ ಬಳಕೆ ವಸ್ತುಗಳನ್ನು ತಯಾರಿಸಬಹುದು ಎಂದು ತೋರಿಸುತ್ತಾರಂತೆ. ಉತ್ತರಪ್ರದೇಶ, ಹರಿಯಾಣ, ಪಂಜಾಬ್ ಸರಕಾರಗಳು ಇಂಥ ಬಯೋಪಾರ್ಕ್ ಅನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಸ್ವಾಮಿನಾಥನ್ ಅಭಿಪ್ರಾಯಪಡುತ್ತಾರೆ. 

ರಾಮನ ಅಯೋಧ್ಯೆಯಲ್ಲಿ ಕೋಟ್ಯಾಂತರ ರುಪಾಯಿಗಳನ್ನು ಖರ್ಚುಮಾಡಿ ಐದು ಲಕ್ಷ ದೀಪಗಳನ್ನು ಉರಿಸಬಲ್ಲ ಉತ್ತರಪ್ರದೇಶದ ಯೋಗಿ ಸರ್ಕಾರ, ಮೂರುಸಾವಿರ ಕೋಟಿಗಳನ್ನು ಏಕತಾ ಪ್ರತಿಮೆಗೆ ವ್ಯಯಿಸಬಲ್ಲ ಕೇಂದ್ರ ಸರ್ಕಾರ ಮಗ್ಗಲ ರಾಜ್ಯಗಳೊಂದಿಗೆ ಕುಳಿತು ವಿಪರೀತಕ್ಕೆ ಹೋಗಿರುವ ವಾಯುಮಾಲಿನ್ಯ ಸಂಕಟವನ್ನು ನಿವಾರಿಸುವ ಬಗ್ಗೆ ಶೀಘ್ರ ಕ್ರಮಗಳನ್ನು ಕೈಗೊಳ್ಳುವತ್ತ  ಗಮನಹರಿಸಬೇಕಿದೆ.  ಮನೆಯಲ್ಲಿ ನಾಲ್ಕೈದು ವಾಹನಗಳನ್ನಿಟ್ಟುಕೊಂಡವರಿಗೆ ಹವಾಮಾಲಿನ್ಯ, ಅಳಿಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಎಚ್ಚರವಾಗಲಿ ಸಾಮಾಜಿಕ ಕಳಕಳಿಯಾಗಲಿ ಇಲ್ಲ.  ಅಂಥವರನ್ನು ನಿಯಂತ್ರಿಸುವ , ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವೂ ಇದೆ. ಮೊದಲಬಾರಿಗೆ ಕೇಜರಿವಾಲ್ ಸರ್ಕಾರ ಸಮ ಬೆಸ ಸಂಖ್ಯೆಯ ಸಂಚಾರ ಕ್ರಮವನ್ನು  ಜಾರಿಗೊಳಿಸಿದಾಗ  ತಮ್ಮಲ್ಲಿ ಬರೀ ಸಮ ಸಂಖ್ಯೆಯ ವಾಹನವೋ ಇಲ್ಲ ಬೆಸ ಸಂಖ್ಯೆಯ ವಾಹನವುಳ್ಳವರು ಅನಕೂಲಕ್ಕೆ ತಕ್ಕಂತೆ ಬೇರೊಂದು ಬೇಕಾದ  ಸಂಖ್ಯೆಯ ಗಾಡಿಯನ್ನು ಖರೀದಿಸಿದ್ದನ್ನು ನಾನೇ ಕಂಡಿದ್ದೇನೆ.  ಇಂಥ ಬಲಾಡ್ಯರಿದ್ದಾರಿಲ್ಲಿ. ದಿಲ್ಲಿಯ ಕಡು ಚಳಿಯಿರಲಿ, ಬಿರು ಬೇಸಿಗೆಯಿರಲಿ ಸಾಯುವವರು ಬಡವರು ಮಾತ್ರ. ಉಳ್ಳವರಿಗೆ ನೂರಾರು ಮಾರ್ಗಗಳಿವೆ.  ಇನ್ನು ಕಾರ್ ಪೂಲಿಂಗ್ ಅನ್ನುವುದು ಒಂದು ಭ್ರಮೆ. ಮನಷ್ಯನಷ್ಟು ಸ್ವಾರ್ಥಿ, ಕ್ಷುಲ್ಲಕ ಪ್ರಾಣಿ ಮತೊಂದಿಲ್ಲ. ಯಾರನ್ನೂ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗುವಷ್ಟು ಉದಾರಿಗಳಾಗಿರುವುದಿಲ್ಲ. ಈ ಬಗ್ಗೆ ಹೇಳದಿರುವುದೇ ಒಳಿತು. 
ಇದೆಲ್ಲ ಬರೆಯುವಾಗ  ನೆನಪಾಗುವುದು ನೀನಾರಿಗಾದೆಯೋ ಎಲೆ ಮಾನವಾ……