ಕೃಷಿ ರಫ್ತಿನ ಲೆಕ್ಕಾಚಾರವೂ ಉಲ್ಟಾ ಹೊಡೆದೀತೇ?

ಕೃಷಿ ರಫ್ತಿನ ಲೆಕ್ಕಾಚಾರವೂ ಉಲ್ಟಾ ಹೊಡೆದೀತೇ?

ಮಳೆ ಇಲ್ಲ, ಹೆಚ್ಚು ಮಳೆಯಿದ ಪ್ರವಾಹ ಉಂಟಾಗಿದೆ ಕೃಷಿ ಉತ್ಪನ್ನದಲ್ಲಿ ಏರುಪೇರಾಗಿದೆ. ಆಹಾರ ಸಂಸ್ಕರಣಾ ಪದ್ದತಿಯಲ್ಲಿ ಪ್ರಗತಿಯಾಗಿಲ್ಲ, ಕೃಷಿಗೆ ಬಳಸುವ ರಾಸಾಯನಿಕ ಕೀಟನಾಶಕಗಳ ಪ್ರಮಾಣ ವರ್ಷವರ್ಷಕ್ಕೂ ಏರುತ್ತಲೇ ಇದೆ, ಅದರಿಂದಾಗಿ ವಿದೇಶೀ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಮೂರು ವರ್ಷಗಳಲ್ಲಿ ಕೃಷಿ ಉತ್ಪನ್ನ ರಫ್ತಿನ ವಹಿವಾಟು ಈಗಿರುವುದಕ್ಕಿಂತ 30 ಬಿಲಿಯನ್ ಡಾಲರ್ ಹೆಚ್ಚಿಸಿಕೊಳ್ಳುವ ಮಾರ್ಗ ಹೇಗೆ, ಇದೂ ಕೂಡ ಕೇಂದ್ರದ ನಿರೀಕ್ಷೆ ವಾಸ್ತವಕ್ಕಿಂತ ದೂರವಿರುವಂಥದ್ದಲ್ಲವೇ ಎಂಬ ಸಂದೇಹಗಳನ್ನ ಹುಟ್ಟುಹಾಕುತ್ತಿವೆ ಎನ್ನುತ್ತಾರೆ ಜಿ.ಆರ್ ಸತ್ಯಲಿಂಗರಾಜು

ಇಡೀ ಜಗತ್ತಿನಲ್ಲಿ ಕೃಷಿ ಹಾಗು ಸಂಬಂಧಿತ ವಲಯದಿಂದ ರಫ್ತು ಮಾಡುತ್ತಿರುವುದರಲ್ಲಿ ಅಮೆರಿಕ ಶೇ.9.8, ನೆದರ್‍ಲ್ಯಾಂಡ್ ಶೇ.6.7 ರಷ್ಟಿದ್ದರೆ, ಭಾರತದ್ದು ಶೇ. 2.4 ರಷ್ಟು ಮಾತ್ರ

ನಮ್ಮಲ್ಲಿನ ಸಂಸ್ಕರಿತ ಆಹಾರಕ್ಕೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆಯಿದ್ದರೂ, ಸಂಸ್ಕರಣ ಜಾಲ ಉತ್ತಮವಾಗಿಲ್ಲವಾದ್ದರಿಂದ ಗುಣಮಟ್ಟದ ಆಧಾರದಲ್ಲಿ ಆ ರಾಷ್ಟ್ರಗಳು ಹೆಚ್ಚು ಖರೀದಿ ಮಾಡಿಕೊಳ್ಳುತ್ತಿಲ್ಲ. ನಮ್ಮಲ್ಲಿನ ಬಾಸ್ಮತಿ ಅಕ್ಕಿಗೆ ಸೌದಿ ಅರೆಬಿಯಾದಲ್ಲಿ ಭಾರೀ ಬೇಡಿಕೆ ಇದೆ. ಇರಾನ್ ಆಮದು ಮಾಡಿಕೊಳ್ಲುವುದರಲ್ಲಿ  ಶೇ 42 ರಷ್ಟು ಅಕ್ಕಿ ನಮ್ಮದೇ. ಕಳೆದ ಸಾಲಿನಲ್ಲಿ 1.56 ಬಿಲಿಯನ್ ಡಾಲರ್ ಮೌಲ್ಯದ 148 ಲಕ್ಷ ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿ ರಫ್ತಾಗಿತ್ತು,  ಈ ಅಕ್ಕಿ ಬೆಳೆಯುವ ಏಳು ರಾಜ್ಯಗಳು ಸಂತಸದಿಂದಿದ್ದವು. ಆದರೆ ಅಮೆರಿಕಾ ಸೌದಿ ಮೇಲೆ ದಿಗ್ಬಂಧನ ಏರಿರುವುದರ ಪರಿಣಾಮವಾಗಿ ಭಾರತ ವ್ಯವಹಾರ ಸಂಬಂಧಗಳನ್ನ ನಿಲ್ಲಿಸಿದೆ, ಬಾಸ್ಮತಿ ಅಕ್ಕಿ ಬೇಡಿಕೆ ಕಳೆದುಕೊಂಡಿದೆ.

ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎಮ್ಮೆ ದನದ ಮಾಂಸಕ್ಕೆ ಭಾರೀ ಬೇಡಿಕೆಯಿದೆ, ರಷ್ಯಾದಿಂದಲು ಇದೆ. ಆದರೆ ಕಾಲುಬಾಯಿ ಸೋಂಕು ಇರುತ್ತೆ ಎಂಬ ಕಾರಣಕ್ಕೆ ಚೀನಾ ನಮ್ಮಲಿದನ್ನ ಕೊಳ್ಳುತ್ತಿಲ್ಲ. ಚೀನಾದಂಥ ದೊಡ್ಡ ಮಟ್ಟದ ವ್ಯಾಪಾರೀ ದೇಶದ ಮಾರುಕಟ್ಟೆ ಭಾರತಕ್ಕೆ ಇಲ್ಲದಿರುವುದು ತೊಡಕು.  ಅಕ್ಕಿ ಮಾವಿನ ಹಣ್ಣಿಗೆ ಬೇಡಿಕೆ ಇದ್ದರೂ, ವಿದೇಶಗಳಲ್ಲಿ ರಾಸಾಯನಿಕ ಮತ್ತು ಕೀಟನಾಶಕ ಬಳಸಿರುವುದರ ಬಗ್ಗೆ ಕಟ್ಟುನಿಟ್ಟಿನ ಪ್ರಯೋಗಗಳನ್ನ ಮಾಡಿಯೇ ತರಿಸಿಕೊಳ್ಳುತ್ತಿರುವುದರಿಂದ,  ರಷ್ಯಾದಲ್ಲಿ ಭಾರತದ ಕೃಷಿ ಉತ್ಪನ್ನಗಳಲ್ಲಿ ಬಹುಪಾಲನ್ನ ಪ್ರಯೋಗಕ್ಕೆ ಒಳಪಡಿಸಲು ಸೂಕ್ತ ವ್ಯವಸ್ಥೆಗಳಿಲ್ಲವಾದ್ದರಿಂದ ಮತ್ತೊಂದು ಬಹುದೊಡ್ಡ ಮಾರುಕಟ್ಟೆಯೂ ಭಾರತದ ಕೃಷಿ ಉತ್ಪನ್ನಗಳಿಗೆ ಇಲ್ಲದಂತಾಗಿದೆ

ಜಪಾನ್, ವಿಯೆಟ್ನಾಂನಲ್ಲಿ ದ್ರಾಕ್ಷಿಗೆ ಬೇಡಿಕೆ ಇದ್ದರೂ, ಮತ್ತದೇ ರಾಸಾಯನಿಕ ಬಳಕೆ ವಿಚಾರ ಮಾರುಕಟ್ಟೆ ವ್ಯಾಪ್ತಿ ಕುಗ್ಗಿಸಿದೆ. ಇವೆಲ್ಲದರಿಂದಾಗಿ ಕೃಷಿ ಉತ್ಪನ್ನದಲ್ಲಿ ಸೇರುವ ಸಾಂಬಾರ ಪದಾರ್ಥಗಳು, ಬಾಸ್ಮತಿ ಅಕ್ಕಿ, ಎಮ್ಮೆ ಮಾಂಸ, ಕಡಲು ಮೂಲದ ಆಹಾರಗಳ ರಫ್ತು 2018 ರಲ್ಲಿ 38.21 ಬಿಲಿಯನ್ ಡಾಲರ್ ಇದ್ದುದು, 2019 ರಲ್ಲಿನ ಇಲ್ಲಿವರೆಗೆ 38.5 ಬಿಲಿಯನ್ ಡಾಲರ್ ಮಟ್ಟಕ್ಕೆ ಮಾತ್ರವೇ ತಲುಪಿದೆ. ಆದರೆ ಕೇಂದ್ರ ಸರ್ಕಾರ 2022 ರ ವೇಳೆಗೆ ಈ ವರ್ಗದಲ್ಲಿ 60 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಗುರಿಯನ್ನೊಂದಿದೆ.

ಮಳೆ ಇಲ್ಲ, ಹೆಚ್ಚು ಮಳೆಯಿಂದ ಪ್ರವಾಹ ಬಂದು ಕೃಷಿ ಉತ್ಪನ್ನದಲ್ಲೇ ಏರುಪೇರಾಗುತ್ತಿದೆ, ಇದರಲ್ಲಿ ತೋಟಗಾರಿಕಾ ಉತ್ಪನ್ನವೂ ಸೇರಿದೆ.  ಆಹಾರ ಸಂಸ್ಕರಣಾ ಪದ್ದತಿಯಲ್ಲಿ ಪ್ರಗತಿಯಾಗಿಲ್ಲ, ಕೃಷಿಗೆ ಬಳಸುವ ರಾಸಾಯನಿಕ ಕೀಟನಾಶಕಗಳ ಪ್ರಮಾಣ ವರ್ಷವರ್ಷಕ್ಕೂ ಏರುತ್ತಲೇ ಇದೆ, ಅದರಿಂದಾಗಿ ವಿದೇಶೀ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಕೃಷಿಕರು ಪಡುತ್ತಿರುವ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ. ಇಂಥವೆಲ್ಲ ತದ್ವಿರುದ್ದತೆಯನ್ನ ಕಣ್ಣ ಮುಂದೆ ಇಟ್ಟುಕೊಂಡೇ, ಮುೂರೇ ಮೂರು ವರ್ಷಗಳಲ್ಲಿ ಕೃಷಿ ಉತ್ಪನ್ನ ರಫ್ತಿನ ವಹಿವಾಟು ಈಗಿರುವುದಕ್ಕಿಂತ 30 ಬಿಲಿಯನ್ ಡಾಲರ್ ಹೆಚ್ಚಿಸಿಕೊಳ್ಳುವ ಮಾರ್ಗ ಹೇಗೆ, ಇದೂ ಕೂಡ ಕೇಂದ್ರದ ನಿರೀಕ್ಷೆ ವಾಸ್ತವಕ್ಕಿಂತ ದೂರವಿರುವಂಥದ್ದಲ್ಲವೇ ಎಂಬ ಸಂದೇಹಗಳನ್ನ ಹುಟ್ಟುಹಾಕಿದೆ.