ವಿಶ್ವ ಕಪ್ ಕ್ರಿಕೆಟ್ ಟೂರ್ನಿಗೆ ಒಂದು ಮುನ್ನುಡಿ

ವಿಶ್ವ ಕಪ್ ಕ್ರಿಕೆಟ್ ಟೂರ್ನಿಗೆ ಒಂದು ಮುನ್ನುಡಿ

ವಿಶ್ವ ಕಪ್ ಕ್ರಿಕೆಟ್ ನ ಸಿದ್ಧತಾ (ವಾರ್ಮ್ ಅಪ್) ಪಂದ್ಯಗಳು ಚಾಲ್ತಿಯಲ್ಲಿವೆ. ಐದನೇ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಪಂದ್ಯಾವಳಿಯ ನಿರ್ವಹಣೆ ಹೊತ್ತಿವೆ. ಆತಿಥೇಯರಾಗಿ  ಇಂಗ್ಲೆಂಡ್ ಅತ್ಯಂತ ಹೆಚ್ಚು ಅನುಭವ ಗಳಿಸಿದೆಯಾದರೂ, ಆ ರಾಷ್ಟ್ರಕ್ಕೆ ಕಪ್ಪನ್ನು ಗೆಲ್ಲುವುದಕ್ಕಾಗಿಲ್ಲ. ಆಫ್ ಕೋರ್ಸ್, ಮೂರು ಬಾರಿ ಫೈನಲ್ ಪ್ರವೇಶಿಸಿತಾದರೂ ಕೊನೆಯ ಹಂತದಲ್ಲಿ ಯಶ ಗಳಿಸಿಲ್ಲ. ಇತ್ತೀಚೆಗಷ್ಟೇ ಪ್ರಬಲ ಪಾಕಿಸ್ತಾನ ವಿರುದ್ಧ ಏಕದಿವಸೀಯ ಪಂದ್ಯದ ಸರಣಿಯನ್ನು ಲೀಲಾಜಾಲವಾಗಿ ಗೆದ್ದಿತಾದರೂ ಮೊನ್ನೆ ತಯಾರಿ ಪಂದ್ಯದಲ್ಲಿ ವಿಶ್ವ ಚಾಂಪಿಯನ್  ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿದೆ.

ಕ್ರಿಕೆಟ್ ನ ತವರೆಂಬ ಕಾರಣಕ್ಕೆ ಇಂಗ್ಲೆಂಡ್ ಈ ಬಾರಿಯ ಕಪ್ ಗೆಲ್ಲಬೇಕೆಂಬ ಹಂಬಲ ಇಂಗ್ಲೆಂಡ್ ಜನಕ್ಕೆ ಸಹಜವಾಗಿಯೇ ಇದೆ. ಅವರದೇ ಹಿತ್ತಲಿನಲ್ಲಿ ಟೂರ್ನಮೆಂಟ್ ನಡೆಯುತ್ತಿರುವುದು ಆ ಹಂಬಲಕ್ಕೆ ಮತ್ತಷ್ಟು ನೀರೆದಿದೆ. ಎಲ್ಲಕ್ಕಿಂತ ಮಿಗಿಲಾಗಿ, ಪಂದ್ಯಾವಳಿಗೆ ಅಭೂತಪೂರ್ವವಾದ ಸಿದ್ಧತೆಯನ್ನು ಮಾಡಲಾಗಿದೆ. ಒಂದೂವರೆ ತಿಂಗಳುಗಳ ಕಾಲ ನಡೆಯುವ ಈ ವೈಭವೋಪೇತ ಸರಣಿಗೆ ಲಭ್ಯವಿರುವ ಟಿಕೆಟ್ ಗಳು ಒಟ್ಟು ಎಂಟು ಲಕ್ಷವಾದರೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ 32 ಲಕ್ಷ. 

ಇಂಗ್ಲೆಂಡ್ನಲ್ಲೇ 2017 ರಲ್ಲಿ ನಡೆದ ಮಹಿಳಾ ವಿಶ್ವ ಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳೆರಡಕ್ಕೂ ಉತ್ತಮವಾಗಿ ನಿರ್ವಹಿಸಿದ ಪಂದ್ಯಾವಳಿಗಳೆಂದು ವ್ಯಾಪಕ ಪ್ರಶಂಸೆ ದೊರಕಿತು. ಸದರಿ ವಿಶ್ವ ಕಪ್ಪನ್ನು ನಿರ್ವಹಿಸಲು ಬೇಕಾದ ಅನುಭವವನ್ನು  ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನ ನಿರ್ವಹಣಾ ನಿರ್ದೇಶಕ ಸ್ಟೀವ್ ಎಲ್ವರ್ದಿ ಅವೆರಡರ ನಿರ್ವಹಣೆಯನ್ನು ಅಧ್ಯಯನ  ಮಾಡಿ ಪಡೆದುಕೊಂಡಿದ್ದಾರೆ. ವಾಸ್ತವವಾಗಿ, ವಿಶ್ವ ಕಪ್-2019 ಕ್ಕೆ ಸಿದ್ಧತೆ ಶುರುವಾಗಿದ್ದು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಜಂಟಿಯಾಗಿ ಹೊಣೆ ಹೊತ್ತ  2015 ರ ವಿಶ್ವ ಕಪ್ ಗೆ ಒಂದು ವರ್ಷ ಮುನ್ನವೇ. ಸ್ಟೀವ್ ಆ ದೇಶಗಳಿಗೂ ಭೇಟಿ ನೀಡಿ ಅನುಭವ ಪಡೆದುಕೊಂಡರು. ಮೇಲಾಗಿ, 2010ರ  ಒಲಿಂಪಿಕ್ಸ್ ಕ್ರೀಡಾಕೂಟ ನಡೆದದ್ದು ಲಂಡನ್ನಲ್ಲೇ ಎಂಬುದನ್ನು ನೆನಪಿಡೋಣ.

ಇಂಗ್ಲಿಷ್ ಜನ ಹೇಳಿ ಕೇಳಿ ವ್ಯಾಪಾರಿ ಮನೋಭಾವದವರು. ವಾಣಿಜ್ಯ ವಹಿವಾಟು ಅವರ ರಕ್ತದಲ್ಲೇ ಬೆರೆತಿದೆ. ವಿಶ್ವ ಕಪ್ ನಂತಹ ಬೃಹತ್ ಕ್ರೀಡಾ ಮೇಳ ಒದಗಿಸುವ ವಾಣಿಜ್ಯ ಸಾಧ್ಯತೆಗಳ ಪೂರ್ಣ ಫಾಯಿದೆಯನ್ನು ಪಡೆದುಕೊಳ್ಳುವುದನ್ನು ಅವರಿಗೆ ಹೇಳಿಕೊಡಬೇಕೇ? ಪಂದ್ಯಾವಳಿಯ ಪ್ರಸರಣಾ ಹಕ್ಕಿನಿಂದಲೇ ಹರಿದುಬರುವ ಹಣದ ಮೌಲ್ಯ 40 ಕೋಟಿ ಪೌಂಡ್ (ಮೂರುವರೆ ಸಹಸ್ರ ಕೋಟಿ ರೂಪಾಯಿಗೂ ಹೆಚ್ಚು).

ವಿಶ್ವ ಕಪ್ ಪಂದ್ಯಾವಳಿಯ ಹನ್ನೆರಡನೇ ಆವೃತ್ತಿ ಇದು. ಮೊದಲ ಮೂರು ಆವೃತ್ತಿಗಳೂ ನಡೆದದ್ದು ಇಂಗ್ಲೆಂಡಿನಲ್ಲೇ. ಮೊದಲ ಬಾರಿ ವಿಶ್ವ ಕಪ್ ಗೆದ್ದ (1975) ವೆಸ್ಟ್ ಇಂಡೀಸ್ ತಂಡಕ್ಕೆ ದೊರಕಿದ ಪ್ರಶಸ್ತಿ ಹಣ 4000 ಪೌಂಡ್. ಈ ಬಾರಿ ಮುಡುಪಾಗಿರುವ ಪ್ರಶಸ್ತಿ ಹಣ 3.2 ದಶಲಕ್ಷ ಪೌಂಡ್ (ಸುಮಾರು 28 ಕೋಟಿ).

ಕ್ರಿಕೆಟ್ ಜಗತ್ತಿನಲ್ಲಿ ಹಣದ ಹೊಳೆ ಹರಿಯುವುದು ಆರಂಭವಾಗಿದ್ದು 1996 ರ ವಿಶ್ವ ಕಪ್ ನಂತರ. ಅತಿಥೇಯರಾಗಿ ಭಾರತ, ಪಾಕಿಸ್ತಾನ, ಮತ್ತು ಶ್ರೀಲಂಕಾ ದೇಶಗಳು ಪಾತ್ರ ವಹಿಸಿದವು. ಪ್ರಸರಣಾ ಹಕ್ಕಿನ ಮೌಲ್ಯ ಅಂದಿನಿಂದ ಇಂದಿನವರೆವಿಗೂ ಮೂವತ್ತು ಪಟ್ಟು ಹೆಚ್ಚಾಗಿದೆ. ಸರಿ ಸುಮಾರು ಇದೆ ಅವಧಿಯಲ್ಲಿ (1998 ರಿಂದ ಇಂದಿನವರೆವಿಗೂ) ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯ ಪ್ರಸರಣಾ ಹಕ್ಕಿನ ಮೌಲ್ಯ ಕಂಡಿರುವ ಏರಿಕೆ ಕೇವಲ 18 ಪಟ್ಟಷ್ಟೇ. (ಆದರೆ, ಫುಟ್ಬಾಲ್ ನಿರ್ವಹಣಾ ಸಂಸ್ಥೆಯಾದ ಫಿಫಾ ಗಳಿಸುವ ಹಣ ಐಸಿಸಿ ಗಳಿಸುವುದಕ್ಕಿಂತ ಆರು ಪಟ್ಟು ಅಧಿಕ!)

ಐಸಿಸಿ ಹಣಕಾಸಿನ ವಿಷಯದಲ್ಲಿ ಗಟ್ಟಿಮುಟ್ಟಾಗುವುದಕ್ಕೆ ಭಾರತ ಇದೇ ಅವಧಿಯಲ್ಲಿ ಸಾಧಿಸಿದ ಆರ್ಥಿಕ ಮುನ್ನಡೆಯೂ ಕಾರಣ. ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವ ಬೃಹತ್ ಬೆಂಬಲ ಮತ್ತೊಂದು ಕಾರಣ. ಅದಕ್ಕಿಂತಲೂ ಮುಖ್ಯವಾಗಿ ಐಸಿಸಿ ಕೆಲವು ರಚನಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡು ಸಂಪನ್ಮೂಲದ ಕ್ರೋಢೀಕರಣದತ್ತ ಗಮನ ಕೊಟ್ಟಿದ್ದು. ಉದಾಹರಣೆಗೆ, ಹಿಂದೆ ಪ್ರಸರಣಾ ಹಕ್ಕನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಪೀಸ್ಮೀಲ್ (ಪ್ರತ್ಯೇಕವಾಗಿ) ನೀಡುತ್ತಿತ್ತು. ಆ ಪದ್ಧತಿಯನ್ನು ರದ್ದುಪಡಿಸಿ, ಸಗಟಾಗಿ ನೀಡುವ  ಕ್ರಮವನ್ನು ಜಾರಿಗೆ ತಂದ ತರುವಾಯ ಐಸಿಸಿ ಗಮನಾರ್ಹ ಆರ್ಥಿಕ ಪ್ರಗತಿ ಸಾಧಿಸಿತು. ಕ್ರಿಕೆಟ್ ಜಗತ್ತಿನಲ್ಲಿ ಆರ್ಥಿಕ ಪ್ರಾಬಲ್ಯ ಸಾಧಿಸಿರುವ ಭಾರತ, ಆಸ್ಟ್ರೇಲಿಯಾ, ಮತ್ತು ಇಂಗ್ಲೆಂಡ್ ದೇಶಗಳ ಮಾತು ಐಸಿಸಿ ಮೇಲೆ ಪ್ರಭಾವ ಬೀರುತ್ತದೆ. ಪ್ರಸಕ್ತ ವಿಶ್ವ ಕಪ್ ಬಾಬಿನಂತೆ ಭಾರತಕ್ಕೆ ಸಂದಾಯವಾಗುವ ಹಣ 32 ಕೋಟಿ ಪೌಂಡಾದರೆ, ಇಂಗ್ಲೆಂಡಿಗೆ ಲಭ್ಯವಾಗುವುದು ಸುಮಾರು 11 ಕೋಟಿ ಪೌಂಡ್.  ಉಳಿದ 93 ಸಹಸದಸ್ಯರಿಗೆ ಸಿಗುವ ಒಟ್ಟು ಹಣದ ಮೊತ್ತ 17.5 ಕೋಟಿ ಎಂದರೆ ಕ್ರಿಕೆಟ್ ಜಗತ್ತಿನಲ್ಲಿ ನಮ್ಮ ದೇಶದ ಪ್ರಾಬಲ್ಯದ ಪರಿಚಯವಾಗುತ್ತದೆ. ಧನಿಕರತ್ತಲೇ ಹಣದ ಕೋಡಿ ಹರಿಯುತ್ತದೆಂಬುದಕ್ಕೆ ಇದಕ್ಕಿಂತ ಬೇರೊಂದು ಉದಾಹರಣೆ ಅನಗತ್ಯ.

ಪ್ರಭಾವಿ ಸದಸ್ಯರ ಆಗ್ರಹದಂತೆ 2011-23 ರ ಅವಧಿಯಲ್ಲಿ ನಡೆಯುವ ನಾಲ್ಕೂ  ಪಂದ್ಯಾವಳಿಗಳ ಫೈನಲ್ ಅನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ಮತ್ತು ಭಾರತದಲ್ಲಿ ಆಡಲಾಗುವುದು. ಮತ್ತೊಂದು ನಿರ್ಧಾರದ ಮೇರೆಗೆ, ಕಳೆದ ವಿಶ್ವ ಕಪ್ನಲ್ಲಿ ಸ್ಪರ್ಧಿಸಿದ ರಾಷ್ಟ್ರಗಳ ಸಂಖ್ಯೆ 14 ಇತ್ತು. ಈ ಬಾರಿ ಅದನ್ನು ಹತ್ತಕ್ಕೆ ಇಳಿಸಲಾಗಿದೆ. ಕಳೆದ ವರ್ಷ, ಏಕದಿವಸೀಯ ಪಂದ್ಯಗಳಲ್ಲಿ 13 ರಾಂಕ್ ಪಡೆದಿರುವ ಸ್ಕಾಟ್ಲೆಂಡ್ ಇಂಗ್ಲೆಂಡ್ ಮೇಲೆ ವಿಜಯ ಸಾಧಿಸಿತ್ತು. ಹಾಗೆಯೇ, ಪ್ರಬಲ ಭಾರತ ತಂಡವನ್ನು ಹಾಂಗ್ಕಾಂಗ್ ಸೋಲಿಸಿಯೇ ಬಿಟ್ಟಿತ್ತು. ಅವೆರಡೂ ತಂಡಗಳು ಈ ಬಾರಿ ಆಡುತ್ತಿಲ್ಲ.

(ಅಧಿಕ ಜನಪ್ರಿಯ ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನಲ್ಲಿ 32 ತಂಡಗಳೂ, ರಗ್ಬಿ ಯೂನಿಯನ್ ನಲ್ಲಿ 20 ತಂಡಗಳೂ, ಅಷ್ಟೇ ಏಕೆ,  ವಿಶ್ವ ಕಬಡ್ಡಿ ಪಂದ್ಯಾವಳಿಯಲ್ಲೂ 12 ತಂಡಗಳು  ಭಾಗವಹಿಸುತ್ತವೆ).

ಭಾರತದಲ್ಲಿ ಕ್ರಿಕೆಟಿಗಿರುವ ಅಗಾಧ ಜನಪ್ರಿಯತೆಯನ್ನು ಮನಗಂಡು ಲೀಗ್ ಹಂತದಲ್ಲಿ ಭಾರತಕ್ಕೆ ಕನಿಷ್ಠ ಒಂಭತ್ತು ಪಂದ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇನ್ನಷ್ಟು ಹಣಗಳಿಸುವ ಉದ್ದೇಶವೂ ಐಸಿಸಿಯ ಈ ಪ್ರಯತ್ನದ ಹಿಂದಿದೆ. ಬಂದ ಲಾಭವನ್ನು ಕ್ರಿಕೆಟ್ ಆಟವನ್ನು ಮತ್ತಷ್ಟು ರಾಷ್ಟ್ರಗಳಿಗೆ ವಿಸ್ತರಿಸುವುದಕ್ಕೆ ವಿನಿಯೋಗಿಸಲಾಗುತ್ತದೆ. 

  1999ರ ವಿಶ್ವ ಕಪ್ ಪಂದ್ಯಗಳನ್ನು ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್, ಐರ್ಲೆಂಡ್, ಮತ್ತು ನೆದರ್ಲ್ಯಾಂಡ್ಸ್ ಗಳಲ್ಲಿ ಆಡಲಾಗಿತ್ತು. ಈ ಬಾರಿ ಇಂಗ್ಲೆಂಡ್ ಮತ್ತು ವೇಲ್ಸ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.   

ಕ್ರಿಕೆಟ್, ಜಗತ್ತಿನ ಅತ್ಯಂತ ಜನಪ್ರಿಯ ಆಟಗಳಲ್ಲಿ ಪ್ರಥಮ ಸ್ಥಾನವನ್ನೇನು ಪಡೆದಿಲ್ಲ. ಆದರೆ, 46 ದಿನಗಳ ಕಾಲ ನಡೆಯುವ ಪ್ರಸಕ್ತ ವಿಶ್ವ ಕಪ್ ಪಂದ್ಯಾವಳಿಯಷ್ಟು ದೀರ್ಘಾವಧಿಯಲ್ಲಿ ಅದಕ್ಕಿಂತ ಹೆಚ್ಚಿನ ಜನಪ್ರಿಯತೆ ಪಡೆದಿರುವ ರಗ್ಬಿಯೇ (44 ದಿನ) ನಡೆದಿಲ್ಲ.