ನಿನ್ನ ಭಕ್ತರ ಹಾವಳಿಯ ನೋಡಯ್ಯಾ 

ನಿನ್ನ ಭಕ್ತರ ಹಾವಳಿಯ ನೋಡಯ್ಯಾ 

ಉತ್ತರಭಾರತದಲ್ಲಿ ಶ್ರಾವಣ ಆರಂಭವಾಗುತ್ತಲೂ ಶಿವಭಕ್ತರ ಗುಂಪುಗಳು ಹರಿದ್ವಾರದತ್ತ ಯಾತ್ರೆ ಹೊರಡುತ್ತವೆ. ಹರಿದ್ವಾರ್, ಉತ್ತರಾಖಂಡ್, ಗಂಗೋತ್ರೀ, ಗೋಮುಖ ಮತ್ತು ಬಿಹಾರದ ಸುಲ್ತಾನ್‍ಗಂಜ್‍ನಿಂದ ಸಾವಿರಾರು ಶಿವಭಕ್ತರು ಗಂಗೆಯ ತಟದವರೆಗೆ ಮೆರವಣಿಗೆ ನಡೆಸುತ್ತಾರೆ. ಅಲ್ಲಿಂದ ಗಂಗಾಜಲವನ್ನು ಬಿಂದಿಗೆ ಅಥವಾ ಪ್ಲಾಸ್ಟಿಕ್ ಕ್ಯಾನುಗಳಲ್ಲಿ ತುಂಬಿಕೊಂಡು ಅದು ನೆಲ ತಾಕದಂತೆ ಕಾವಡ ಹೊತ್ತು  (ಬಿದಿರಿನ ಗಳದ ಎರಡೂ ತುದಿಗೆ ಗಂಗಾಜಲದ ಮಡಿಕೆ/ಕ್ಯಾನು/ ತಿರುಪಿಣಿ ತಂಬಿಗೆಯನ್ನು ತೂಗುಹಾಕಿ ಭುಜದ ಮೇಲೆ ಬ್ಯಾಲನ್ಸ್ ಮಾಡಿ ಹೊತ್ತುಕೊಳ್ಳುವ ಸಾಧನಕ್ಕೆ ಕಾವಡಾ, –ಕಾಂವಡಾ, ಹೊತ್ತುಕೊಳ್ಳುವವರಿಗೆ ಕಾಂವಡಿಯಾ, ಕಾಂವರಿಯಾ ಎನ್ನುತ್ತಾರೆ ). 

ಶ್ರಾವಣದ ತ್ರಯೋದಶಿಯಂದು ಗಂಗಾಜಲದಿಂದ ಶಿವಾರಾಧಕರು ತಮ್ಮ ಇಷ್ಟದೇವ ಶಿವನನ್ನು ಜಲಾಭಿಷೇಕ, ಕ್ಷೀರಾಭಿಷೇಕ  ಮಾಡಿ ಪೂಜಿಸುತ್ತಾರೆ. ಶಿವಭಕ್ತರು ನಿನ್ನೆ ಇಲ್ಲಿ (30ಜು) “ಶ್ರಾವಣ ಶಿವರಾತ್ರಿ’ ಜಲಾಭಿಷೇಕ ನೆರವೇರಿಸಿದರು. ಭಾರತೀಯರಿಗೆ ಪವಿತ್ರವಾದ ಶ್ರಾವಣದಲ್ಲಿ ಮಾಡುವ ಪೂಜೆ ಪುನಸ್ಕಾರಗಳಿಗೆ ಹೆಚ್ಚಿನ ಮಹತ್ವವಿದೆ. ಉತ್ತರಭಾರತೀಯರಿಗೆ ಶ್ರಾವಣ ಶಿವರಾತ್ರಿಗೆ ಕಾವಡ ಹೊರುವುದು ಶಿವಭಕ್ತರ ಮಹತ್ವದ ಆಚರಣೆ! ಈ ಬಾರಿ ನಾಲ್ಕು ಕೋಟಿ ಶಿವಭಕ್ತರು ಹರಿದ್ವಾರದ  ಗಂಗಾತಟದಲ್ಲಿ ಸೇರಿದ್ದರಂತೆ.    

ತ್ರೇತಾಯುಗದ ಅಂತ್ಯದಲ್ಲಿ ಜೀವಿಸಿದ್ದ, ವಿಷ್ಣುವಿನ ಆರನೇ ಅವತಾರ ಎನ್ನಲಾಗುವ ಭಗವಾನ್ ಪರಶುರಾಮ್ ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪುರಾಮಹದೇವನ ಗುಡಿಯನ್ನು ಸ್ಥಾಪಿಸಿದ್ದನಂತೆ. ಶ್ರಾವಣ ಮಾಸದ ಪ್ರತಿ ಸೋಮವಾರ ಕಾವಡದಲ್ಲಿ ಗಂಗಾಜಲವನ್ನು ತಂದು ಶಿವನನ್ನು ಪೂಜಿಸುತ್ತಿದ್ದನೆಂಬ ಕಥೆಯುಂಟು.  ಮೊದಲ ಕಾವಡಧಾರಿ ಮಹಾಶಿವಭಕ್ತ ರಾವಣನೆಂಬ ಪ್ರತೀತಿಯೂ ಇದೆ. ಬಹುಶಃ  ರಾವಣ ಶಿವನಿಂದ ಜ್ಯೋತಿರ್ಲಿಂಗವನ್ನು ಹೊತ್ತು ತಂದ ಕತೆಗೆ ಇದರ ಹಿನ್ನೆಲೆಯಿರಬಹುದು. 

ಸಮುದ್ರಮಂಥನದಲ್ಲಿ ಉತ್ಪತ್ತಿಯಾದ ವಿಷವನ್ನು ಕುಡಿದು ನೀಲಕಂಠನಾದ ಶಿವನಿಗೆ ವಿಷದ ಪರಿಣಾಮ ಶಮನವಾಗುವಂತೆ ಭಕ್ತರು ಭೋಲೆನಾಥನ’ ಸಂಪ್ರೀತಿಗಾಗಿ ಶ್ರಾವಣದಲ್ಲಿ ಜಲಾಭಿಷೇಕದಿಂದ ಭಜಿಸುತ್ತಾರೆ. ಇದೇ ರೀತಿ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾಮೇಶ್ವರಕ್ಕೆ ಕಾವಡ ಹೊತ್ತು ಹೋಗಿ ಶಿವನನ್ನು ಪೂಜಿಸಿದ್ದನೆಂಬ ಕತೆಯಿದೆ. ಇದಿಷ್ಟು ಕಾವಡದ ಹಿಂದಿರುವ ಪುರಾಣದ ಕಥೆಗಳು ಮತ್ತು ಜನರ ನಂಬಿಕೆಗಳು.  

ದಶಕದ ಹಿಂದೆಯಷ್ಟೇ ಸದ್ದುಗದ್ದಲವಿಲ್ಲದೇ ಹರಕೆ ಹೊತ್ತ ಭಕ್ತರಿಗಷ್ಟೇ ಸೀಮಿತಗೊಂಡಿದ್ದ ಕಾವಡ , ಕಾಂವಡಿಯಾಗಳನ್ನು ಇಂದು ಸಂಘ ಪರಿವಾರ ಮತ್ತು ವಿಶ್ವ ಹಿಂದೂ ಪರಿಷತ್ತು  ಹೈಜಾಕ್ ಮಾಡಿದೆ.  ಅಲ್ಲಲ್ಲಿ ಕಾಂವಡಿಯಾ ಯಾತ್ರಾ ಸಂಘಗಳನ್ನು ಕಟ್ಟಿಕೊಂಡಿದ್ದ ಯುವಕರು ತಮ್ಮ ತಮ್ಮ ಊರುಕೇರಿಗಳಿಂದ ಗುಂಪಾಗಿ ಹರಿದ್ವಾರದತ್ತ ಯಾತ್ರೆಗೆ ಹೋಗುತ್ತಿದ್ದರು.. ಗಂಗಾಜಲವನ್ನು ಹೊತ್ತು ಮರಳುವಾಗ ಬರಿಗಾಲಲ್ಲಿ ನೂರಾರು ಕಿಲೋ ಮೀಟರುಗಳು ನಡೆದು ಬರುತ್ತಿದ್ದ ಕಾವಡಿಗಳ ದೃಶ್ಯವನ್ನು ದೆಹಲಿಯ ರೋಡುಗಳಲ್ಲಿ ಕಾಣಬಹುದಿತ್ತು. ಕಾವಿಬಣ್ಣದ ಟಿಶರ್ಟು, ಬರ್ಮುಡಾಗಳನ್ನು ತೊಟ್ಟು, ಗಾಯಗೊಂಡ ಪಾದಗಳಿಗೆ ಬಟ್ಟೆ ಸುತ್ತಿಕೊಂಡ,  ಸುಸ್ತಾಗಿ ಬೆವರಿಳಿಸಿಕೊಂಡು ಅಲ್ಲಲ್ಲಿ ಹೆದ್ದಾರಿಯ ಪಕ್ಕದಲ್ಲಿ ಕೂರುತ್ತ ನಡೆಯುತ್ತಿದ್ದ ಕಾಂವಡಿಗಳ ದೃಶ್ಯ ಕಣ್ಣಲ್ಲಿಯೇ ಇದೆ. ಗಲಾಟೆ ಗಲಭೆಗಿಳಿಯದೇ ತಮ್ಮ ಪಾಡಿಗೆ ತಾವು ಬರುವ ಸಾತ್ವಿಕ ಕಾಂವಡಿಗಳು ಈಗಲೂ ಇದ್ದಾರೆ. 

ಶನಿವಾರ ಜೆಎನ್ ಯು ನಲ್ಲಿ ಕನ್ನಡ ಪೀಠ ಆಯೋಜಿಸಿದ್ದ ಕಾರಂತರ ’ಅಳಿದ ಮೇಲೆ’ ಇಂಗ್ಲಿಷ್ ಅನುವಾದ ’ಬಿಯಾಂಡ್ ಲೈಫ್’ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿಸಿ ಬರುವಾಗ ಕಾವಡಿಗಳ ಗುಂಪು ಅರ್ಧ ರೋಡನ್ನು ಆಕ್ರಮಿಸಿಕೊಂಡು ಟ್ರ್ಯಾಫಿಕ್ ಜಾಮ್ ಸಷ್ಟಿಸಿತ್ತು. ಇಪ್ಪತ್ತು ಇಪ್ಪತ್ತೈದರ ವಯಸ್ಸಿನ ಪುಂಡು ಹುಡುಗರು ಕೆಲವರು ಕಾರಿನ ಸೂರಿನ ಮೇಲೆ ಕೂತು ಕೇಕೆ ಹಾಕುತ್ತಿದ್ದರೆ ಇನ್ನು ಕೆಲವರು ರೋಡಿನಲ್ಲಿಯೇ ಫ್ಯಾಶನ್ ಶೋ ರೀತಿ ಪೋಸ್ ಕೊಡುತ್ತಿದ್ದರು. ಒಂದು ವಾಹನದಲ್ಲಿ ದೊಡ್ಡ ಸ್ಪೀಕರ್ ಮ್ಯೂಸಿಕ್ ಸಿಸ್ಟಂ ಇದ್ದರೆ ಇನ್ನೆರಡು ವಾಹನಗಳು ಅವರನ್ನು ಹಿಂಬಾಲಿಸುತ್ತಿದ್ದವು. ಇಡೀ ಅರ್ಧ ರಸ್ತೆಯಲ್ಲಿ ಅವರೇ ತುಂಬಿಕೊಂಡು ಎದುರಿನಿಂದ ಬರುವ ವಾಹನ ಸಂಚಾರವೆಲ್ಲ ಅಸ್ತವ್ಯಸ್ತಗೊಂಡು ನಾವು ಇಲ್ಲಿಂದ ದಾಟಿಕೊಂಡರೆ ಸಾಕಪ್ಪಾ ಎನಿಸಿತ್ತು.  

ಇತ್ತೀಚಿನ ದಿನಗಳಲ್ಲಿ ಶ್ರಾವಣದ ಇಡೀ ಹದಿನೈದು ದಿನಗಳ ಕಾಲ ದಿಲ್ಲಿಯ ರಸ್ತೆಗಳನ್ನು ’ಕಾಂವಡಿಗಳ” ದರ್ಪ – ದುರಹಂಕಾರಗಳು ಆಳುತ್ತವೆ. ಯಾರೂ ಅವರನ್ನು ಪ್ರಶ್ನಿಸುವುದಿಲ್ಲ. ಪೋಲಿಸರೂ ಕುರುಡರೂ ಕಿವುಡರೂ ಆಗಿರುತ್ತಾರೆ. ದೆಹಲಿಯ ರಿಂಗ್ ರೋಡು, ಒಳದಾರಿಗಳಲ್ಲಿ ಅಲ್ಲದೇ ದೆಹಲಿಯ ರಾಷ್ಟ್ರೀಯ ಹೊರವಲಯದ ಗಾಜಿಯಾಬಾದ್, ನೋಯಿಡಾ, ಗುರುಗ್ರಾಮ್‍, ದೂರದ ರಾಜಸ್ಥಾನ್,  ಉತ್ತರಪ್ರದೇಶದ ಹಲವು ಜಿಲ್ಲೆಗಳಿಗೆ ಸಾಗುವ ಕಾಂವಡಿಗಳ ಗುಂಪು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎದೆ ಒಡೆಯುವಂಥ ದೊಡ್ಡ ದೊಡ್ಡ ಸ್ಪೀಕರ್ ಗಳನ್ನು ಒದರಿಸುತ್ತ, ನಾಕಾರು ವಾಹನಗಳ ಹಿಂದೆ ಹಿಂಡು ಜನ ನರ್ತಿಸುತ್ತ, ಕೇಕೆ ಹಾಕುತ್ತ, ಕಾಲು ಕೆದರಿ ಜಗಳ ತೆಗೆಯುವ ಕಾಂವಡಿಗಳು ಇಂದು ಭಯ ಹುಟ್ಟಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆ ಪವಿತ್ರವಾಗಿದ್ದ ಕಾಂವಡಿಗಳ ಯಾತ್ರೆಯನ್ನು ಕೆಲವು ಅವಕಾಶವಾದಿ ಕೈವಾಡಗಳು ದೊಂಬಿ ಹಿಂಸಾಚಾರದ ಅಸ್ತ್ರವನ್ನಾಗಿಸಿದ್ದಾರೆ. ಹಿಂದೆ ಬೆನ್ನು ಚಪ್ಪರಿಸಿ ಪ್ರಚೋದಿಸುವ ಆರೆಸ್ಸೆಸ್ಸ್ , ವಿಹೆಚ್ಪಿಗಳ ಮತಾಂಧರು ಸೇರಿಕೊಂಡಿದ್ದಾರೆ.   

ವೈರಾಗ್ಯದ ಪ್ರತೀಕವಾದ ಕಾವಿವಸ್ತ್ರಧಾರಣೆ, ಪಾದಯಾತ್ರೆ ಮತ್ತು ಸಾತ್ವಿಕ ಆಚರಣೆ ಇವು ಕಾಂವಡಿಗಳಿಗಿರಬೇಕಿದ್ದ ನಡೆಗಳು. ಯಾತ್ರೆಯ ಉದ್ದಕ್ಕೂ ’ಭಂ ಭೋಲೆ’ ಮಂತ್ರವನ್ನು ಉಚ್ಚರಿಸುತ್ತ ನಡೆಯಬೇಕಾದ ಕಾಂವಡಿಗಳು ಗಾಂಜಾ, ಚರಸ್, ಅಫೀಮು, ಸೇವಿಸಿವುದು, ಶಾಂತವಾಗಿ, ಸಂಯಮದಿಂದ ನಡೆಯಬೇಕಾದಲ್ಲಿ ಗದ್ದಲವನ್ನು ಅಶಾಂತಿಯನ್ನು ಹೆಚ್ಚಿಸುವ ಪುಂಡುಪೋಕರಿಗಳ ಯಾತ್ರೆಯಾಗುತ್ತಿದೆ. 

ಈ ಪಾದಯಾತ್ರಿಕ ಕಾಂವಡಿಯಾಗಳನ್ನು  ತಡೆದು ಕಾಂವಡಿಗಳ ಸೇವೆ ಈಶ ಸೇವೆಯೆಂದು ಆಯಾ ಪ್ರದೇಶದವರು, ಊರುಕೇರಿಗಳ ಸರಪಂಚರು, ಪ್ರಧಾನರು ಮುಂದೆ ನಿಂತು  ನೀರು ವಸತಿ, ಊಟ ತಿಂಡಿಗಳನ್ನು ಕೊಟ್ಟು ಆದರಿಸುತ್ತಿದ್ದರು. ಈಗಲೂ ಕಾಂವಡಿಯಾಗಳಿಗೆ ಆಶ್ರಯ ನೀಡುವ ಸೇವಾ ಶಿಬಿರಗಳನ್ನು ಸ್ಥಾಪಿಸುವ ಜನರಿದ್ದಾರೆ.  ಆದರೆ ಕಾಂವಡಿಯಾಗಳ  ಭಕ್ತಿಯ ಈ ಆಚರಣೆ ಇಂದು ತೋರಿಕೆಯ ಯಾತ್ರೆ, ಗೂಂಡಾಗಿರಿಯ ಜಾತ್ರೆಯಾಗಿ ಪರಿಣಮಿಸಿದ್ದು ಈ ಕಾಲದ ಸತ್ಯ. ಭಕ್ತಿ ಆದ್ಯಾತ್ಮ, ಸಾತ್ವಿಕತೆ ಮಾಯವಾಗಿ ಕಾಂವಡಿಗಳ ಶಿಬಿರಗಳು ಮೋಜು, ಮಸ್ತಿಯ ಅಡ್ದಾಗಳಾಗುತ್ತಿರುವುದು ಕಟುವಾಸ್ತವ.  

ಮೊನ್ನೆ ಆಟೋದಲ್ಲಿ ಒಬ್ಬ ಈ ಕಾಂವಡಿಗಳ ಎದೆ ನಡುಗಿಸುವ ( ಕಿವಿಗಡಚಿಕ್ಕುವ ಸದ್ದಿಗಿಂತಲೂ ಭಯಂಕರ) ಬೃಹದಾಕಾರದ ಸ್ಪೀಕರ್ ಸದ್ದಿಗೆ ಹೃದಯರೋಗಿಯಾಗಿದ್ದ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟನೆಂದು ಹೇಳುತ್ತಿದ್ದ. ಕಳೆದ ವರ್ಷ ಕಾಂವಡಿಗಳು ದೆಹಲಿಯ ಮೋತಿನಗರದಲ್ಲಿ ನಡೆದ ಕಲಹದಲ್ಲಿ ವಾಹನವನ್ನು ಸುಟ್ಟುಹಾಕಿದ್ದರು, ಉತ್ತರಪ್ರದೇಶದ ಬುಲಂದ್ ಶಹರಿನಲ್ಲಿ ಪೋಲಿಸ್ ವ್ಯಾನ್ ಸುಟ್ಟಿದ್ದರು.  

ಮುಸ್ಲಿಂ ಬಾಹುಳ್ಯವಿರುವ ಪಶ್ಚಿಮ ಉತ್ತರಪ್ರದೇಶದ ಊರುಗಳಲ್ಲಿ ಬೇಕೆಂದೇ ಕ್ಯಾತೆ ತೆಗೆದು ಅಶಾಂತಿ ಹರಡುವ ಇವರಿಗೆ ಸಾರ್ವಜನಿಕರ ಹಿತರಕ್ಷಣೆಯ ಬಗ್ಗೆ ಕಳಕಳಿಯಾಗಲಿ, ಸಾಮಾಜಿಕ ಜವಾಬ್ದಾರಿಯಾಗಲಿ, ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯದಂಥ ವಿಷಯಗಳ  ಬಗ್ಗೆ ತಿಳುವಳಿಕೆಯಾಗಲಿ ಇಲ್ಲದ ಮತಿಗೇಡಿಗಳು. 

ಕಾಂವಡಿಗಳ ಇಂಥ ವಿಧ್ವಂಸಕ ಕತ್ಯಗಳು ಮತ್ತು ಗಲಭೆ ಪ್ರಕರಣದಲ್ಲಿ ಆಯಾ ಪ್ರದೇಶದ ಪೋಲಿಸ್ ಅಧೀಕ್ಷಕರಂತಹ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸುವಂತೆ ಉನ್ನತ ನ್ಯಾಯಾಲಯದ ಹಸ್ತಕ್ಷೇಪವನ್ನು ಕೋರಿ ಭಾರತದ ಉನ್ನತ ಕಾನೂನು ಅಧಿಕಾರಿ, ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿದ ನ್ಯಾಯಾಲಯ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ತಾಕೀತು ಮಾಡಿತ್ತು. ವಾರಣಾಸಿಯಿಂದ ಅಲಹಾಬಾದಿನ ರಾಷ್ಟ್ರಿಯ ಹೆದ್ದಾರಿಯ ಅರ್ಧಭಾಗವನ್ನು ಆಕ್ರಮಿಸಿಕೊಳ್ಳುವ ಕಾಂವಡಿಗಳ ಬಗ್ಗೆಯೂ ನ್ಯಾಯಾಲಯದಲ್ಲಿ ಚರ್ಚೆಯಾಗಿತ್ತು. ಆದರೆ ಯಾವ ಕ್ರಮಗಳು ಜರುಗಿದವೋ ಶಿವನೇ ಬಲ್ಲ ! 

ಮೊನ್ನೆ ವಿಶ್ವ ಹಿಂದೂ ಪರಿಷತ್ತಿನ ನಾಯಕಿ  ಸಾಧ್ವಿ ಪ್ರಾಚಿ ಆರ್ಯಾ ಕಾಂವಡಿಗಳ ಶಿಬಿರಕ್ಕೆ ಭೆಟ್ಟಿಕೊಟ್ಟು  ಹಿಂದೂಗಳ ಮಹಾದೇವ ಶಿವನಿಗೆ ಗಂಗಾಜಲ ಅರ್ಪಿಸಲು ಮುಸ್ಲಿಮರು ತಯಾರಿಸಿದ ಮಣ್ಣಿನ ಮಡಿಕೆಗಳನ್ನಾಗಲಿ, ಕಾಂವಡಿಗಳನ್ನಾಗಲಿ ಉಪಯೋಗಿಸಕೂಡದೆಂದು ಹಿಂದೂ ಭಕ್ತರಿಗೆ ಬೋಧಿಸಿದ್ದಾರೆ. 

ಹಿಂದೂರಾಷ್ಟ್ರದವರಾದ ಹಿಂದೂಗಳ ಉದ್ಯೋಗವನ್ನು ಕಿತ್ತುಕೊಂಡ ಇವರನ್ನು ಈ ದೇಶದಿಂದ ಓಡಿಸಬೇಕಂತೆ. ಅವರನ್ನು ಬಹಿಷ್ಕರಿಸಿ, ಓಡಿಸಿ ಎಂದು  ದ್ವೇಷವನ್ನು ಪ್ರಚೋದಿಸುವ ಇಂಥ ಕಾವಿಧಾರಿಗಳನ್ನು ಮೊದಲು ಜೈಲಿಗಟ್ಟಬೇಕಿದೆ. ಯೋಗ ಮತ್ತು ವೇದದಲ್ಲಿ ಸಾಧ್ವಿ ಪ್ರಾಚಿ ಆರ್ಯಾ ಡಬಲ್ ಎಂಎ ಮಾಡಿದ್ದಾಳಂತೆ. ಸಾದ್ವಿ ರಿತಾಂಬರಿಯಂತೂ ವೇದಾಧ್ಯಯನದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ. ಜಗತ್ತನ್ನು ತಾಯಿ ಕರುಳಿನ ಅಂತಃಕರಣದಿಂದ ಕಾಣಬೇಕಾದವರೆಲ್ಲ ಇಂದು ಅರೆಸ್ಸೆಸ್ಸ್ ವಿಚಾರಧಾರೆಯಲ್ಲಿ ಸಮಾಜಕಂಟಕ, ಜೀವವಿರೋಧಿ ಮಾತುಗಳನ್ನಾಡುವುದಕ್ಕಿಂತ ದೊಡ್ದ ದುರಂತ  ಬೇರೊಂದಿಲ್ಲ. ಸಂತ ಕಬೀರರ, ಸಂತ ತುಲಸೀದಾಸರ ಭೂಮಿಯಲ್ಲಿ  ಧರ್ಮಾಂಧರು ಇಂದು ದ್ವೇಷವನ್ನು ಬಿತ್ತುತ್ತಿದ್ದಾರೆ, 

ಮೀರತ್ತಿನ ಭಾಘಪತ್ ಜಿಲ್ಲೆಯಲ್ಲಿ ಶೇಕಡಾ ತೊಂಭತ್ತೊಂಭತ್ತು ಜನ ಮುಸ್ಲಿಮರೇ ಬಿದಿರಿನ ಕಾಂವಡವನ್ನು ತಯಾರಿಸುತ್ತಾರೆ. ಕಾಶಿ ವಿಶ್ವನಾಥ ನೆಲೆಸಿದ ವಾರಣಾಸಿಯಲ್ಲಿ, ನಾವು ಪೂಜೆ ಪುನಸ್ಕಾರ, ಮದುವೆ, ಮುಂಜಿಗಳಲ್ಲಿ ಉಡುವ ರೇಶ್ಮೆ ಸೀರೆಯನ್ನು ನೇಯುವ ಬಹುಪಾಲು ನೇಕಾರರು ಮುಸ್ಲಿಮರಿದ್ದಾರೆ. ಮೊನ್ನೆ ಮುಸ್ಲಿಂ ಬಾಂಧವರೆಲ್ಲ ದಾರಿಯುದ್ದಕ್ಕೂ ನಿಂತು ಕಾಂವಡಿಗಳಿಗೆ ಫ್ರೂಟಿ ಹಂಚಿದರು, ವೈದ್ಯರ ಶಿಬಿರ ಸ್ಥಾಪಿಸಿ ಗಾಯಗೊಂಡವರಿಗೆ ಶುಶ್ರೂಷೆ ಮಾಡಿದರು. ಇದು ಬಹುತ್ವದ ಸಹಬಾಳ್ವೆಯ ಅಸಲಿ ಭಾರತ. 

ಗಲಭೆಗಳನ್ನು ಹತ್ತಿಕ್ಕಬೇಕಿದ್ದ  ಉತ್ತರಪ್ರದೇಶದ ಪೋಲಿಸರು ಹೆಚ್ಚು ಧರ್ಮಾಂಧರಾಗುತ್ತಿದ್ದಾರೆ. ಮೊನ್ನೆ ಪೋಲಿಸ್ ಸಿಬ್ಬಂದಿಯೊಬ್ಬ ಪಾದಯಾತ್ರೆ ಮಾಡಲಾಗದ ದಣಿದ ಕಾಂವಡಿಯೊಬ್ಬನ ಪಾದಗಳನ್ನು ಒತ್ತುತ್ತಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸುದ್ದಿ ಮಾಧ್ಯಮದಲ್ಲಿ ವೈರಲ್ ಆಗಿ ಬಿತ್ತರಗೊಳ್ಳುತ್ತಿತ್ತು. ಉತ್ತರ ಪ್ರದೇಶದ  ಜಿಲ್ಲಾ ಮ್ಯಾಜಿಸ್ಟ್ರೇಟ್ , ಹಿರಿಯ ಪೋಲಿಸ್ ಅಧಿಕಾರಿಗಳು ಹೆಲಿಕಾಪ್ಟರಿನಿಂದ ಕಾಂವಡಿಗಳ ಗುಂಪಿನ ಮೇಲೆ ಹೂಮಳೆಗರೆದದ್ದೂ ಆಯಿತು.      

ಗುಂಪು ಹಿಂಸಾಚಾರವನ್ನು  ತಡೆಯುವಲ್ಲಿ ಪೋಲಿಸ ವ್ಯವಸ್ಥೆ ಏಕೆ ವಿಫಲವಾಗಿದೆ ಎಂಬುದಕ್ಕೆ ಸ್ಪಟಿಕದಷ್ಟು ನಿಚ್ಚಳ ಉತ್ತರಗಳು ನಮ್ಮ ಮುಂದೆಯೇ ಇವೆ. ಪ್ರತಿ ವಾರ, ಪ್ರತಿ ದಿನ  ದೇಶದಲ್ಲಿ ಗಲಭೆಗಳು  ನಡೆಯುತ್ತಿವೆ, ಒಮ್ಮೆ ಆಂದೋಲನಗಳ ಹೆಸರಿನಲ್ಲಿ, ರಾಮ ಹನುಮಂತರ ಹೆಸರಿನಲ್ಲಿ, ದಲಿತರು, ಅಲ್ಪಸಂಖ್ಯಾತರ ಮೇಲೆ ಗೋವಿನ ಹೆಸರಿನಲ್ಲಿ, ರಾಮ ಹನುಮರ ಹೆಸರಿನಲ್ಲಿ ಪೊಲೀಸರ ಕಣ್ಣ ಮುಂದೆ ಘಟನೆಗಳು ನಡೆದರೂ ಯಾವುದೇ ಎಫ್‌ಐಆರ್ (ಮೊದಲ ಮಾಹಿತಿ ವರದಿ) ದಾಖಲಾಗುವುದಿಲ್ಲ.  ಅಪರಾಧಿಗಳು ಕೈಬೀಸಿಕೊಂಡು ನಡೆಯುತ್ತಾರೆ. 

ಏನನ್ನೂ ಮಾಡದ ಹತಾಶೆಯಲ್ಲಿ “ಶಿವಪ್ಪಾ ಕಾಯೋ ತಂದೆ, ನಿನ್ನ ಭಕ್ತರ ಹಾವಳಿಯ ನೋಡಯ್ಯಾ ಎಂದು ಪರಿತಪಿಸದೇ ಸದ್ಯ ಏನೂ ತೋಚುತ್ತಿಲ್ಲ.