ಟಿಕ್ ಟಾಕ್ ನಲ್ಲೆ ಲಾಕ್ ಆದ ಯುವಜನ

ಟಿಕ್ ಟಾಕ್ ನಲ್ಲೆ ಲಾಕ್ ಆದ ಯುವಜನ

ಇಂದಿನ ಆಧುನಿಕ ಕಾಲದಲ್ಲಿ ಯುವಜನರನ್ನ ಸಾಮಾಜಿಕ ಜಾಲತಾಣಗಳು ಅತಿಹೆಚ್ಚಾಗಿ ಆಕರ್ಷಿಸಿಸುತ್ತಿವೆ. ಸಾಮಾನ್ಯವಾಗಿ ಫೇಸ್ಬುಕ್, ವಾಟ್ಸ್ ಆಪ್ ನಲ್ಲಿ ಕಾಲ ಕಳೆಯುತ್ತಿರುವ ಯುವಜನರು ಈಗ ಟಿಕ್ ಟಾಕ್ ಎಂಬ ಬ್ಲೂ ವೆಲ್ ಗೇಮ್ ನಷ್ಟೇ ಭಯಾನಕವಾದ ಜೀವ ಕಳೆದುಕೊಳ್ಳುವ ಆ್ಯಪ್ ಒಂದರಲ್ಲಿ ಕಳೆದು ಹೋಗಿದ್ದಾರೆ. ಈ ಆ್ಯಪ್ ಇತ್ತೀಚಿಗೆ ಅತಿ ಹೆಚ್ಚು ಸದ್ದು ಮಾಡುತ್ತಿದ್ದೆ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಟಿಕ್ ಟಾಕ್ ಆಪ್ ಬಳಸುತ್ತಿದ್ದಾರೆ. ತಮಗೆ ಇಷ್ಟ ಬಂದ ಹಾಡನ್ನೋ, ಸಿನಿಮಾ ಡೈಲಾಗನ್ನೋ ಹಾಕಿಕೊಂಡು ಡಬ್ ಸ್ಮ್ಯಾಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವಂತೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುವ ಹುಚ್ಚು ಸಾಹಸದಲ್ಲಿ  ತಲ್ಲೀನರಾಗಿ ತಾವು ಅಪ್ ಲೋಡ್ ಮಾಡಿದ ವಿಡಿಯೋವನ್ನು ಎಷ್ಟು ಜನ ನೋಡಿದ್ದಾರೆ, ಎಷ್ಟು ಲೈಕ್ ಬಂದಿವೆ ಎಂಬ ಗುಂಗಿನಲ್ಲಿಯೇ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.

ಮೊನ್ನೆ  ಜೂನ್ 15 ಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೊಡೆಕೆರೆಯ ಕುಮಾರ ಎನ್ನುವ ಯುವಕ ಟಿಕ್ ಟಾಕ್ ಮಾಡಲು ಹೋಗಿ ಬೆನ್ನುಹುರಿ ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಕುಮಾರ ಕೊನೆಯುಸಿರೆಳೆದ. ವಯಸ್ಸಾದ ತಂದೆ ತಾಯಿಗೆ ಆಸರೆಯಾಗಿ ನಿಲ್ಲಬೇಕಾದ ಮಗ ಇಂದು ಮಣ್ಣಲ್ಲಿ ಮಣ್ಣಾಗಿದ್ದಾನೆ. ಇದು ಕುಮಾರನ ಹುಚ್ಚು ಸಾಹಸವೋ ಅಥವಾ ಬಡತನದ ಶಾಪವೋ ಅರಳಬೇಕಾದ ಹೂವೊಂದು ಮೊಗ್ಗಲ್ಲೇ ಮುದುಡಿ ಹೋಯಿತು.  ಇಂತಹ ಅನೇಕ ಸುದ್ದಿಗಳು ನಮ್ಮ ಕಣ್ಮುಂದೆ ಇದ್ದರೂ ಕೂಡ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ.

ಸ್ಮಾರ್ಟ್ ಫೋನ್ ಗಳ ಬಳಕೆ ಈ ವೇಗದ ಜಗತ್ತಿನಲ್ಲಿ ಬೇಕೆ ಬೇಕು ಆದರೆ ಅದನ್ನು ಯುವಕರು ತುಂಬ ತಪ್ಪಾಗಿ ಅರ್ಥೈಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.  ಪ್ರತಿಯೊಬ್ಬರು ಕೂಡ ಟಿಕ್ ಟಾಕ್ ನ ಮೊರೆ ಹೋಗಿದ್ದು ವಿಪರ್ಯಾಸವೇ ಸರಿ. ಅದರಲ್ಲಿ ಯುವತಿಯರು, ಯುವಕರು, ಮಕ್ಕಳು ಎಲ್ಲರೂ ಇದ್ದಾರೆ. ಟಿಕ್ ಟಾಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದರ ಪರಿಣಾಮ ಏನಾಗುತ್ತೆ ಎಂಬುವುದರ ಬಗ್ಗೆ ಯೋಚನೆ ಮಾಡುವ ಕನಿಷ್ಠ ವಿವೇಚನೆ ಇಲ್ಲದೆ ಟಿಕ್ ಟಾಕ್ ಆ್ಯಪ್  ನಲ್ಲಿಯೇ ಲಾಕ್ ಆಗಿದ್ದಾರೆ. ತಾವಾಯ್ತು, ತಮ್ಮ ಫೋನಾಯ್ತು. ಬೇರೆ ಪ್ರಪಂಚವೇ ಬೇಡ ಅನ್ನುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಕಳೆದು ಹೋಗಿದ್ದಾರೆ.

ಟಿಕ್ ಟಾಕ್ ಎಂಬ ಮಾಯಾಜಾಲಕ್ಕೆ ಅತಿ ಹೆಚ್ಚಾಗಿ  ಬಲಿಯಾಗುತ್ತಿರುವುದು ಹುಡುಗಿಯರೇ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ನಿವಾಸಿ ರಮ್ಯಾಳಿಗೆ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುವುದೆಂದರೆ ಅಚ್ಚುಮೆಚ್ಚು ಅಂತೆ ಆ ಅಚ್ಚುಮೆಚ್ಚೇ ಇಂದು ರಮ್ಯಾಳ ಬಾಳಿಗೆ ಮುಳುವಾಗಿದೆ. ಇವಳು ಅಪ್ ಲೋಡ್ ಮಾಡಿದ ವಿಡಿಯೋಗಳನ್ನು ಕೆಲ ಪೋಲಿ ಹುಡುಗರು ಆ ವಿಡಿಯೋ ಬಳಸಿಕೊಂಡು ಅಶ್ಲೀಲ ವಿಡಿಯೋ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸಾಲದಕ್ಕೆ ಅವಳ ಕಾಲೇಜಿಗೆ ಹೋಗಿ ಹೆದರಿಸಿದ್ದಾರೆ. ಇವೆಲ್ಲ ವಿದ್ಯಮಾನ ನೋಡಿದರೆ ಟಿಕ್ ಟಾಕ್ ಎಂಬ ಜೀವಹಾನಿ ಆ್ಯಪ್ ನಮಗೆ ಯಾಕೆ ಬೇಕು ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಇದನ್ನು ನಿಷೇಧಿಸಲು ತಮಿಳುನಾಡು ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮನಿಕಂಡನ್ ಅಲ್ಲಿನ ವಿಧಾನ ಸಭಾ ಅಧಿವೇಶನಲ್ಲಿ ಪ್ರಸ್ತಾಪಿಸಿದ್ದಾರೆ. ಏಕೆಂದಕೆ ಟಿಕ್ ಟಾಕ್ ನಲ್ಲಿ ತಮಿಳುನಾಡಿನ ಸಂಸ್ಕ್ರತಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆಯಂತೆ. ಈ ಆ್ಯಪ್ ಬ್ಯಾನ್ ಮಾಡಿದರೆ ನಿಜಕ್ಕೂ ಸಾವಿರಾರು ಜೀವಗಳನ್ನು ಉಳಿಸಿಕೊಳ್ಳಬಹುದು.

ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದವರೇ  ಬೇಜವಾಬ್ದಾರಿಯಿಂದ  ನಡೆದುಕೊಳ್ಳುತ್ತಿದ್ದಾರೆ. ಕಾರಣ  ಟಿಕ್ ಟಾಕ್ ಆ್ಯಪ್  ಓಡಿಶಾದ ಮಲ್ಕನ್ ಗಿರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಯೂನಿಟ್ ಕೇರ್ ನಲ್ಲಿರುವ ನವಜಾತ ಮಗುವಿನ ಜೊತೆಗೆ ಮೂವರು ನರ್ಸ್ ಗಳು ಜೊತೆಗೂಡಿ ಟಿಕ್ ಟಾಕ್ ವಿಡಿಯೊ ಮಾಡಿದ್ದಾರೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೊಡ್ಡ ಸದ್ದು ಮಾಡಿತಲ್ಲದೆ ಸಾರ್ವಜನಿಕರ ಆಕ್ರೋಶಕ್ಕೂ   ಕಾರಣವಾಗಿದೆ. 

ಜೀವಕ್ಕೆ ಮಾರಕವಾದ ಇಂತಹ  ಆ್ಯಪ್ ಗಳು ಮಾರುಕಟ್ಟೆಗೆ ಬರುವ ಮೊದಲೇ ಸರ್ಕಾರ ಎಚ್ಚರಿಕೆ ವಹಿಸಬೇಕು. ಬ್ಲೂ ವೆಲ್ ಗೇಮ್ ನ ಚಾಲೆಂಜ್ ಗಾಗಿ ಅದೆಷ್ಟೋ ಮುಗ್ಧ ಮಕ್ಕಳು ದೇಶದಲ್ಲಿ  ಬಲಿಯಾಗಿವೆ. ಪ್ರಾಣಕ್ಕೆ ಕುತ್ತು ತರುವಂತಹ ಆ್ಯಪ್ ಗಳನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. 

                          

                                                                                                                                                        -ಪ್ರಿಯಾಂಕ ಮಾವಿನಕರ್