ಶುದ್ಧ ಗಾಳಿ ಬೇಕೆ ?  ಬನ್ನಿ ಗಾಳಿ ಬಾರ್ ಗೆ

“ಶುದ್ಧ ಗಾಳಿ ಬಾರುಗಳು”  ಭವಿಷ್ಯದಲ್ಲಿ  ಉಳ್ಳವರ ಅಂತಸ್ತಿನ ಐಷೋ-ಆರಾಮದ ಸಂಕೇತಗಳಂತೆ ಮಾಲ್ ಗಳಲ್ಲಿ ತಲೆಯೆತ್ತಬಹುದು.  ನಿಧಾನವಾಗಿ ಎಲ್ಲರಿಗೂ ನಿಲುಕುವಂತೆ ಎರಡನೇ ದರ್ಜೆಯ ಆಮ್ಲಜನಕದ ಬಾರ್ ಗಳು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಳ್ಳಬಹುದು.  ಬಹಳ ಹಿಂದೆ ದಿಲ್ಲಿಯಲ್ಲಿ ಸ್ಥಳಿಯರ ಬಾಯಲ್ಲಿ – “ದಿಲ್ಲಿ ಮೇರಿ ಜಾನ್, ಇಲ್ಲಿ ಕಸವನ್ನೂ ಸಂತೆಯಲ್ಲಿಟ್ತು ಮಾರಬಹುದು” ಎನ್ನುವ ಮಾತನ್ನು ಕೇಳಿದ್ದೆ.  ಈಗದು ನಿಜವೆಂದು ತೋರುತ್ತದೆ. 

ಶುದ್ಧ ಗಾಳಿ ಬೇಕೆ ?  ಬನ್ನಿ ಗಾಳಿ ಬಾರ್ ಗೆ

ಕಳೆದ ವಾರವಷ್ಟೇ ಕರಾವಳಿ ಪ್ರವಾಸ ಮುಗಿಸಿ ದಿಲ್ಲಿಯೆಂಬ ಹೊಗೆಗೂಡಿಗೆ ಮರಳಿದೆ. ಕಾಡಿನ ಹಚ್ಚಹಸಿರ ಮಡಿಲು, ರಮ್ಯವಾದ ಮಂಜಿನ ಮುಸುಕೊದ್ದ ಮಲೆಗಳು, ನೂರೆಂಟು ತರದ ಹೂವು ಹಕ್ಕಿಗಳ ಕಲರವ, ಮಂಗಳೂರು, ಬೇಕಲ್ ಕೋಟೆ, ಮಂಜೇಶ್ವರದ ನೀಲ ಕಡಲು ಮತ್ತು ಕಡಲ ಮೊರೆತದ ನಾದ. ಇಂಥ ಆಹ್ಲಾದಕರ ವಾತಾವರಣದಲ್ಲಿದ್ದು ದೆಹಲಿಯ ಏರ್ಪೋರ್ಟಿನಲ್ಲಿ ಕಾಲೂರುತ್ತಲೇ ಧುತ್ತೆಂದು ಆವರಿಸಿದ ಕಣ್ಣೆದುರಿನ ಹೊಂಜನ್ನು ನೋಡಿಯೇ ಮನ ಮುದುಡಿತು.

ಹವಾಮಾಲಿನ್ಯ ಹೆಚ್ಚಾಗಿದ್ದ ಭಾನುವಾರದಂದು ಮನೆಗೆ ಬಂದ ಅತಿಥಿಯೊಬ್ಬರು ಏರ್ ಪ್ಯೂರಿಫೈಯರ್ ಖರೀದಿಸುವ ಬಗ್ಗೆ ಹೇಳುತ್ತಿದ್ದರು.  ಅವತ್ತು ಮಾಲಿನ್ಯ ಮೂರುವರ್ಷಗಳ ದಾಖಲೆಯನ್ನೂ ಮೀರಿಸಿತ್ತು.  ನಾನು ಗಮನಿಸಿರುವಂತೆ ಮಾಲ್ ಗಳಲ್ಲಿ, ಹೊಟೇಲ್,ರೆಸ್ಟೋರೆಂಟ್‍ಗಳಲ್ಲಿ,ಹಾಸ್ಪಿಟಲ್,ಏರಪೋರ್ಟ್‍ಗಳಲ್ಲಿ ಏರ್ಕರ್ಟನ್ ಅಳವಡಿಸಿರುವುದನ್ನು ಕಂಡಿದ್ದೆ.  ಆದರೆ ದೆಹಲಿಯಂಥ ನಗರದಲ್ಲಿ ಇಂದು ಮನೆ ಮನೆಗಳಲ್ಲಿ ಶುದ್ಧ ಗಾಳಿಗಾಗಿ ಏರ್ ಪ್ಯೂರಿಫೈಯರ್ ಹಾಕಿಸಿಕೊಳ್ಳಬೇಕಾದ ಸ್ಥಿತಿ ಬಂತೇ ಎಂದು ಆತಂಕವಾಯ್ತು.  ಎಲ್ಲೆಲ್ಲೂ ಎರ್ ಪ್ಯೂರಿಫೈಯರ್‍ನ ಜಾಹೀರಾತುಗಳು ನಿದ್ದೆಗೆಡಿಸುತ್ತಿರುವಾಗಲೇ ನಿನ್ನೆ ಮತ್ತೊಂದು ಆಘಾತಕಾರಿ ಸುದ್ದಿ.  ದಿಲ್ಲಿಯ ನೀರು ಕುಡಿಯಲು ಯೋಗ್ಯವಿಲ್ಲವಂತೆ.  

ಡಿಜೆಬಿ ( ದಿಲ್ಲಿ ಜಲ ಬೋರ್ಡ್ ) ಪೂರೈಸುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಕೇಂದ್ರ ಸಚಿವರು ಮತ್ತು ಕೇಜ್ರಿವಾಲ್ ಸರಕಾರದ ನಡುವೆ ಜಟಾಪಟಿ ವ್ಯಾಗ್ಯುಗ್ದ, ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ದೋಷಾರೋಪಣೆಯ ಸಮರ ಆರಂಭವಾಗಿದೆ.  ಕುಡಿಯುವ ನೀರಲ್ಲಿ ರಾಸಾಯನಿಕ ಮತ್ತು ವಿಷಕಾರಿ ವಸ್ತುಗಳ ಉಪಸ್ಥಿತಿ, ವೈರೋಲಾಜಿಕಲ್ ಮತ್ತು ಜೈವಿಕ ಅವಶ್ಯಕತೆಗಳು ಸೇರಿದಂತೆ ನಿಯತಾಂಕಗಳ ವಿರುದ್ಧ ಪರೀಕ್ಷೆಗಾಗಿ ಬಿಐಎಸ್ ( ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್- ನವದೆಹಲಿ)   ದೆಹಲಿಯಲ್ಲದೇ  ಮುಂಬೈ, ಹೈದರಾಬಾದ್ ಮತ್ತು ಕೋಲ್ಕತಾ ಸೇರಿದಂತೆ ದೇಶದ ಇತರ 20 ನಗರಗಳಿಂದ ಕೊಳವೆಗಳ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿತ್ತು.  ಬಿಐಎಸ್ ನ 10 ಮಾದರಿಗಳನ್ನಾಧರಿಸಿ ತಯಾರಿಸಿದ ಪರೀಕ್ಷಾ ವರದಿ ಕುಡಿಯುವ ನೀರಿನ ಗುಣಮಟ್ಟದಲ್ಲಿ  ಮುಂಬೈ ಅತ್ಯುತ್ತಮ ನಗರವೆಂದು ಪರಿಗಣಿಸಿದೆ. ವಾಸನೆ, ಒಟ್ಟು ಕರಗಿದ ಘನವಸ್ತುಗಳು ಮತ್ತು ಗಡಸುತನ ಸೇರಿದಂತೆ 19 ನಿಯತಾಂಕಗಳಲ್ಲಿ ಎಲ್ಲಾ 11 ಮಾದರಿಗಳು ವಿಫಲವಾಗಿ ದೆಹಲಿಯ ಕುಡಿಯುವ ನೀರಿನ ಮಟ್ಟ ಅತ್ಯಂತ ಕೆಳಸ್ತರದಲ್ಲಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದಿದೆ. 

ವಿಪರ್ಯಾಸವೆಂದರೆ ಹಿಂದೆ  ಕೇಂದ್ರೀಯ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ದೆಹಲಿಯ ನೀರಿನ ಗುಣಮಟ್ಟ ಯುರೋಪಿಯನ್ ಮಾನದಂಡಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದರು. ಜನರನ್ನು ಕಾಡುತ್ತಿರುವ ವಾಯುಮಾಲಿನ್ಯದ ಹೊಗೆ ದೆವ್ವದೊಂದಿಗೆ  ಈಗ ನೀರಿನ ರಾಜಕಾರಣವೂ ಸೇರಿಕೊಂಡಿತು. ರಾಜ್ಯ ರಾಜಕೀಯದ ನಡುವೆ ಬಡವಾಗುವವರು ದಿಲ್ಲಿಯ ನಿವಾಸಿಗಳು. 

ಇನ್ನು ನೋಯಿಡಾದ ನೀರೇ ಕುಡಿಯಲು ಯೋಗ್ಯವಿಲ್ಲ. ಕುಡಿಯಲಾರದಷ್ಟು ಗಡಸು, ಸವುಳು ನೀರು. ಕೂದಲು ಉದುರುವ ಸಮಸ್ಯೆ ನೂರಾರು ಜಲಜನ್ಯ ರೋಗರುಜಿನಗಳು ಸಾಮಾನ್ಯ. ನೊಯಿಡಾದ ಕೆಲ ಸೆಕ್ಟರುಗಳಲ್ಲಿ ಮತ್ತು  ಗಾಜಿಯಾಬಾದ್ ಪ್ರದೇಶದಲ್ಲಿ ಗಂಗಾ ನೀರಿನ ಸರಬರಾಜು ಬರುತ್ತಿದೆ. ಇದ್ದುದರಲ್ಲಿಯೇ ಅಡ್ದಿಯಿಲ್ಲ ಎನ್ನಬಹುದಾದ ನೀರು.  ನಲ್ಲಿಯಲ್ಲಿ ಬರುವ ನೀರು ಶುದ್ಧವಾಗಿಯೇ ನಲ್ಲಿಯಲ್ಲಿ ಬರುತ್ತಿದೆ ಎಂಬ ಯಾವ ಗ್ಯಾರಂಟಿಯೂ   ಇಲ್ಲ.  ದಶಕಗಳೇ ಗತಿಸಿವೆ  ದಿಲ್ಲಿ ಮತ್ತು ದಿಲ್ಲಿ ಹೊರವಲಯಗಳಲ್ಲಿ ಬಹುತೇಕ ಜನರು ಮನೆಗಳಲ್ಲಿ  ನೀರಿನ ಶುದ್ಧಿಕರಣ ಘಟಕಗಳನ್ನು (ಆರ್ ಓ) ಅಳವಡಿಸಿಕೊಂಡಿದ್ದಾರೆ.  ನಿತ್ಯದ ಅಡುಗೆ ಇತ್ಯಾದಿ  ಬಳಕೆಗೆ ನೀರಿನ ದೊಡ್ದ  ಕ್ಯಾನ್ ತರಿಸಿಕೊಳ್ಳುತ್ತಾರೆ. ಪ್ರತಿದಿನವೂ ನೀರು ಸರಬರಾಜು ಮಾಡುವ ಎಜೆನ್ಸಿಗಳಿವೆ, ಎಜೆಂಟರುಗಳಿದ್ದಾರೆ. ಶ್ರೀಮಂತರು ಮತ್ತು ಮಧ್ಯಮವರ್ಗದವರೇನೋ ಆರ್ ಓ ಮತ್ತಿತರ ಶುದ್ಧಿಕರಣ ಘಟಕವನ್ನೋ ಇಲ್ಲ ಬಾಟಲಿ ನೀರನ್ನೋ ತರಿಸಿಕೊಳ್ಲಬಹುದು ರಸ್ತೆಬದಿಯ ಜುಗ್ಗಿಜೋಪಡಿಗಳ ಬಡ ಜನರಿಗೆ ಶುದ್ಧ ನೀರಿನ ಸೌಲಭ್ಯವೆಲ್ಲಿದೆ ? 

ಮೊನ್ನೆ ನಮ್ಮ ಕಂಪನಿಯ ವೈದ್ಯರು ಹೇಳುತ್ತಿದ್ದರು.  ಆರ್ ಓ ದಿಂದ ಶುದ್ದೀಕರಿಸಲ್ಪಟ್ಟ ನೀರಿನಲ್ಲಿ ದೇಹಕ್ಕೆ ಅಗತ್ಯವಿರುವ ಯಾವ ಖನಿಜಾಂಶಗಳು ಇರದೇ ಆರೋಗ್ಯಕ್ಕೆ ಈ ನೀರು ಒಳ್ಳೆಯದಲ್ಲ. ಅದಕ್ಕಾಗಿ ಪೈಪಿನಲ್ಲಿ ಬರುವ ನೀರನ್ನೇ ಕುದಿಸಿ ಆರಿಸಿ ಬಳಸಿ ಅದರಲ್ಲಿ ಖನಿಜಾಂಶಗಳು ಸಿಗುತ್ತವೆ ಎಂದು ಉಪನ್ಯಾಸ ಕೊಟ್ಟುಹೋದರು.   

ಮೊನ್ನಿನ ಇಂಡಿಯನ್ ಎಕ್ಸಪ್ರೆಸ್ ನಲ್ಲಿ “ ಆಕ್ಸಿ ಪ್ಯೂರ್ “ ಶುದ್ಧ ಗಾಳಿಯ ಬಾರ್ ವರದಿ ಓದಿ ಗಾಬರಿಯಾಯ್ತು. ಇನ್ನು ಮುಂದಿನ ದಿನಗಳಲ್ಲಿ ಇಂಥ ಆಮ್ಲಜನಕದ ಬಾರ್ ಗಳು, ಪೋರ್ಟೇಬಲ್ ಆಮ್ಲಜನಕದ ಮಾಸ್ಕ್, ಆಮ್ಲಜನಕದ ಹೈಟೆಕ್ ಪಾರ್ಕುಗಳು ಹುಟ್ಟಿಕೊಳ್ಳಲೂ ಬಹುದು ಅನಿಸಿತು..

ದೆಹಲಿಯ ಆರ್ಯವೀರ್ ಕುಮಾರ್ ಮತ್ತು ಮಾರ್ಗರಿಟಾ ಕುರಿತ್ಸಯಾನ  ಎಂಬುವರು  ದೆಹಲಿಯ ಮೊಟ್ಟಮೊದಲ ಆಮ್ಲಜನಕ ಬಾರ್ - ‘ಆಕ್ಸಿ ಪ್ಯೂರ್’ ಅನ್ನು ಸ್ಥಾಪಿಸಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿನ ತೀವ್ರ ವಾಯುಮಾಲಿನ್ಯ ಮಟ್ಟವನ್ನು ಎದುರಿಸಲು ಏನೆಲ್ಲ ವಿಧಾನಗಳಿವೆಯೋ ಅವೆಲ್ಲವನ್ನೂ ಮೀರಿಸುವಂಥ ಒಂದು ವಿಧಾನ ಈ ಆಕ್ಸಿ ಪ್ಯೂರ್ ಬಾರ್. ನಿಮಗೆ ಶುದ್ಧಗಾಳಿ ಕುಡಿಯಬೇಕು ಅನಿಸಿದಾಗ ಈ ಬಾರ್ ‍ಗೆ ಹೋಗಿ ಕೂರಬಹುದು.  ಹದಿನೈದು ನಿಮಿಷಗಳಿಗೆ 299 ರೂ.ಗಳ ಬಾಡಿಗೆ ಕೊಟ್ಟರಾಯ್ತು. ನೀವು ಹದಿನೈದು ನಿಮಿಷಗಳ ಕಾಲ ಶೇಕಡಾ 80-90 ರಷ್ಟು ಶುದ್ಧ ಆಮ್ಲಜನಕವನ್ನು ಕುಡಿದು ಬರಬಹುದು. ನೀನು ’ಬಾರ್ ’ ಯಾಕೆ ಹೋದೆ ಎಂದು ಯಾವ ಕಾರಣಕ್ಕೂ ಯಾರೂ ಜಗಳಾಡಲಾರರು. 

ಶುದ್ಧ ನೀರಿನಂತೆಯೇ ಶುದ್ಧ ಪ್ರಾಣವಾಯು ಎಲ್ಲರಿಗೂ ಸಿಗಬೇಕಾದ ಮೂಲಭೂತ ಹಕ್ಕು.  ಈ ಆಕ್ಸಿ ಪ್ಯೂರ್ ಬಾರಿನಲ್ಲಿ ಗ್ರಾಹಕರಿಗೆ ಮೂಗಿನ ಕ್ಯಾನುಲಾವನ್ನು ಕೊಡುತ್ತಾರಂತೆ. ಇದು ಹಗುರವಾದ ಟ್ಯೂಬ್. ಮೂಗಿನ ಹೊಳ್ಳೆಗಳ ಬಳಿ ಟ್ಯೂಬ್ ಇರಿಸಿಕೊಂಡು  ಆಮ್ಲಜನಕವನ್ನು ಉಸಿರಾಡಬಹುದು.  ಆಮ್ಲಜನಕದೊಂದಿಗೆ ಸುವಾಸಿತ ದ್ರವ್ಯಗಳನ್ನು ಬಳಸಲಾಗುತ್ತಿದ್ದು ಗ್ರಾಹಕರು ತಮಗೆ ಬೇಕಾದ ಸುವಾಸಿತ ( ಲೆಮೆನ್ ಗ್ರಾಸ್, ಚೆರ್ರಿ, ನೀಲಗಿರಿ ಇತ್ಯಾದಿ) ಆಮ್ಲಜನಕವನ್ನು ಉಸಿರಾಡಬಹುದಂತೆ. 
  
ಮೇ ತಿಂಗಳಿನಲ್ಲಿಯೇ ಆರಂಭವಾದ ಈ ಬಾರಿನ ಪ್ರಯೋಜನವನ್ನು ದೆಹಲಿ ಮತ್ತು ಎನ್‍ಸಿಆರ್ ನಿವಾಸಿಗಳು ಈಗಾಗಲೇ ಪಡೆದುಕೊಂಡಿದ್ದಾರಂತೆ. ಶುದ್ಧಗಾಳಿಯನ್ನು ಪೈಪೋಟಿಯಲ್ಲಿ ಮಾರಾಟ ಮಾಡುವ ಹಲವು ಉದ್ಯಮಗಳು ಹುಟ್ಟಿಕೊಳ್ಳಬಹುದು.  ಮಧ್ಯದಂಗಡಿಗಳಂತೆ ಶುದ್ಧ ಆಮ್ಲಜನಕದ “ಶುದ್ಧ ಗಾಳಿ ಬಾರುಗಳು”  ಭವಿಷ್ಯದಲ್ಲಿ  ಉಳ್ಳವರ ಅಂತಸ್ತಿನ ಐಷೋ-ಆರಾಮದ ಸಂಕೇತಗಳಂತೆ ಮಾಲ್ ಗಳಲ್ಲಿ ತಲೆಯೆತ್ತಬಹುದು.  ನಿಧಾನವಾಗಿ ಎಲ್ಲರಿಗೂ ನಿಲುಕುವಂತೆ ಎರಡನೇ ದರ್ಜೆಯ ಆಮ್ಲಜನಕದ ಬಾರ್ ಗಳು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಳ್ಳಬಹುದು.  ಬಹಳ ಹಿಂದೆ ದಿಲ್ಲಿಯಲ್ಲಿ ಸ್ಥಳಿಯರ ಬಾಯಲ್ಲಿ – “ದಿಲ್ಲಿ ಮೇರಿ ಜಾನ್, ಇಲ್ಲಿ ಕಸವನ್ನೂ ಸಂತೆಯಲ್ಲಿಟ್ತು ಮಾರಬಹುದು” ಎನ್ನುವ ಮಾತನ್ನು ಕೇಳಿದ್ದೆ.  ಈಗದು ನಿಜವೆಂದು ತೋರುತ್ತದೆ. 

ಇದೆಲ್ಲ ನೆನೆಯುವಾಗ ನೆಟಫ್ಲಿಕ್ಸ್ ನಲ್ಲಿ ನೋಡಿದ ’ಲೈಲಾ’ ವೆಬ್ ಸರಣಿ ನೆನಪಾಗುತ್ತದೆ.  ಪ್ರಯಾಗ್ ಅಕ್ಬರ್ ಅವರ ’ಲೈಲಾ ’ ಕಾದಂಬರಿಯ ರೂಪಾಂತರವನ್ನು ದೀಪಾ ಮೆಹ್ತಾ, ಶಂಕರ್ ರಾಮನ್ ಮತ್ತು ಪವನ್ ಕುಮಾರ್ ನಿರ್ದೇಶಿಸಿದ್ದಾರೆ. 2040ರ ದಶಕದಲ್ಲಿ ಭಾರತ ಹೇಗಿರಬಹುದು ಎಂಬ ಪರಿಕಲ್ಪನೆಯನ್ನು ’ಲೈಲಾ’ ತೆರೆದಿಡುತ್ತದೆ.  ಸಮಕಾಲೀನ ಭಾರತದ ಸಮಸ್ಯೆಗಳಾದ ತೀವ್ರ ವಾಯುಮಾಲಿನ್ಯ ಮತ್ತು ಅತಿರೇಕದ ನೀರಿನ ಕೊರತೆಯಲ್ಲಿ ಇಡೀ ಸಾಮಾಜಿಕ ವ್ಯವಸ್ಥೆಯೇ ಮುರಿದುಬಿದ್ದಿರುತ್ತದೆ. ಶ್ರೇಣಿಕೃತ ಜಾತಿ ಮತ್ತು ಧರ್ಮದ ನೆಲೆಯಲ್ಲಿ  ಮನುಷ್ಯರನ್ನು ಮನುಷ್ಯರಿಂದ  ಬೇರ್ಪಡಿಸುವ ಸಾಮಾಜಿಕ ವ್ಯವಸ್ಥೆ ಅಲ್ಲಿ ಅಕ್ಷರಶಃ ರೂಪ ಪಡೆದಿವೆ.  ಪ್ರತಿಯೊಂದು ಸಮುದಾಯವು ತನ್ನದೇ ಆದ ವಲಯವನ್ನು ಹೊಂದಿದ್ದು ಅದನ್ನು ಇತರ ಸಮುದಾಯದಿಂದ ಎತ್ತರದ ಗೋಡೆಗಳಿಂದ ಬೇರ್ಪಡಿಸಲಾಗುತ್ತದೆ. ಗೋತ್ರ ಜಾತಿಯಾಧಾರಿತ ತಳಿಶುದ್ಧತೆಗೆ ಒತ್ತುನೀಡಿದ್ದು ಮೇಲ್ ಸಮುದಾಯಗಳು ಕೆಳ ಸಮುದಾಯಗಳೊಂದಿಗೆ ಬೆರೆತರೆ ಕಠಿಣ ದಂಡ ವಿಧಿಸಲಾಗುತ್ತದೆ.

ಶುದ್ಧ ನೀರನ್ನು ಕುಡಿಯಲು ಏಟಿಮ್ ಗಳಿವೆ.  ಶುದ್ಧಗಾಳಿ ಶುದ್ಧ ನೀರು ಮೇಲ್ವರ್ಗದವರಿಗೆ ಮಾತ್ರ ಲಭ್ಯವಿರುವ ಸವಲತ್ತು. ಇದನ್ನು ಬಿಂಬಿಸುವಂತೆ ಎತ್ತರದ ಗೋಡೆಗಳಿಂದ ಬೇರ್ಪಡಿಸುವ ಮಹಾನಗರ ಒಂದೆಡೆಯಾದರೆ ಮತ್ತೊಂದೆಡೆ ಅನಾಥವಾಗಿ ಆ ನಗರದ ಭಾಗವೇ ಅಲ್ಲವೆಂಬ ಕೊಳಚೆ ಪ್ರದೇಶ ಅಸ್ಪೃಶ್ಯನಂತೆ ನಿಂತಿದೆ. ಇಂಥ ಭವಿಷ್ಯದ ಭಾರತ ನಾವೆಂದೂ ಕಾಣದಿರಲಿ, ನಮ್ಮ ಮಕ್ಕಳಿಗಾಗಿಯೂ ಲೈಲಾದ ಆರ್ಯಾವರ್ತ ಈ ಭೂಮಿಗೆ ಬಾರದಿರಲಿ. ಮುನ್ನೆಚ್ಚರಿಕೆಯಾಗಿ ಅಳಿದುಳಿದ  ಕಾಡುಗಳನ್ನು, ಬೆಟ್ಟಗಳನ್ನು , ಜಲಮೂಲಗಳನ್ನು  ರಕ್ಷಿಸುವ ಹೊಣೆ ನಮ್ಮೆಲ್ಲರದೂ ಆಗಿದೆ. ( ನೋಡದವರು ದಯವಿಟ್ಟು ’ಲೈಲಾ’ ನೋಡಿ) 

ಜಾಲತಾಣಗಳಲ್ಲಿ ಪರಿಸರ ಸಂರಕ್ಷಣೆಯ ಆನ್ ಲೈನ್ ಆಂದೋಲನಗಳು ನಡೆಯುತ್ತಲಿವೆ. ಮುಂಬೈಯ ಜನ ಆರೆ ಕಾಡನ್ನು ಕಡಿಯದಂತೆ ದೊಡ್ದ ಹೋರಾಟವನ್ನೇ ನಡೆಸಬೇಕಾಯ್ತು.  ಪುಣೆ, ಮುಂಬಾಯಿ ನಡುವೆ ಬುಲೆಟ್ ರೈಲು ಪ್ರೊಜೆಕ್ಟಿಗಾಗಿ ಮ್ಯಾಂಗ್ರೋವ್ ಕಾಡುಗಳನ್ನು ನಾಶಗೊಳಿಸದಂತೆ ಪ್ರತಿಭಟನೆಗಳು ನಡೆದವು. ಅಪಾರ ಪ್ರಮಾಣದ ಇಂಗಾಲವನ್ನು ಸಂಗ್ರಹಿಸುವ ಸಾಮರ್ಥ್ಯದೊಂದಿಗೆ, ಹವಾಮಾನ ಬದಲಾವಣೆಯನ್ನು ತಡೆಗಟ್ಟುವಲ್ಲಿ ಮ್ಯಾಂಗ್ರೋವ್ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಅವು ವಿಶ್ವಾದ್ಯಂತ ಅಪಾಯದಲ್ಲಿದೆ. ಮ್ಯಾಂಗ್ರೋವ್‌ಗಳನ್ನು ರಕ್ಷಿಸುವ ಮೂಲಕ, ನಮ್ಮ ಗ್ರಹದ ಭವಿಷ್ಯವನ್ನು ರಕ್ಷಿಸಲು ನಾವು ಸಹಾಯ ಮಾಡಬಹುದು. 

ಅಲ್ಲಿಯ ತನಕ  “ಆಕ್ಸಿ ಪ್ಯೂರ್ ಬಾರ್ ‍ಗೆ ಹೋಗುವ ಗತಿ ಮಾತ್ರ ನಮಗೆಲ್ಲ ಬರದಿರಲಿ. ಸರಕಾರಗಳು ಸ್ವಾರ್ಥದ ರಾಜಕೀಯ ಬಿಟ್ಟು ಮಾನವಕಲ್ಯಾಣದ ಕಾರ್ಯಗಳತ್ತ ಗಮನಹರಿಸುವುದೆಂತು ?