ಯೇ ಹೈ ಚೌಕೀದಾರ್!

ಯೇ ಹೈ ಚೌಕೀದಾರ್!

 

"ಸಾ ಯಾನ ಸಾ ನೀವು.

ಒಂದ್ಸಲ ಯೇಳುದ್ರ ತಿಳ್ಕನಿ ಸಾ.

ನಮ್ಗೆ ಪರ್ಮಿಸನ್ ಇಲ್ಲ ಸಾ ಬುಡಾಕೆ ಒಂಟೋಯ್ತಿರಿ" ಅಂದ ಆತ.

ನಾನಾಗ ದೊಡ್ಡಾಸ್ಪತ್ರೆಯೊಂದರ ಐಸಿಯು ಮುಂದೆ ನಿಂತಿದ್ದೆ. ಆತ ಅಲ್ಲಿಯ ಸೆಕ್ಯೂರಿಟಿ.

"ಸರಿಯಪ್ಪ, ನೀನೆಳೆದು ಸರಿ. ಆದರೆ ನಾನು ದೂರದ ಊರಿಂದ ಬಂದಿದೀನಿ. ನೀನು ನಾಳೆ ತನಕ ಬಿಡಲ್ಲ ಅಂದರೆ ನನಗೆ ಕಷ್ಟ ಆಗುತ್ತೆ, ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡ್ಕೊ " ಎಂದು ಪುಸಲಾಯಿಸಿದೆ.

"ನೀವು ಯಾನ ತಿಳ್ಕಂಡ್ರೂ ಅಷ್ಟಿಯ" ಅಂದವನ ಮುಖ ನೋಡಿದೆ. ಮೂವತ್ತರ ಆಸುಪಾಸಿನ ಹರೆಯ. ಆ ವಯಸಿನ ಹುಮ್ಮಸ್ಸು, ನಗೆಗಳೆಲ್ಲ ಮರೆತಂತೆ ಕಾಣುತ್ತಿದ್ದ. ಮದುವೆಯಾಗಿಲ್ಲ ಅಥವ ಈ ಹುದ್ದೆಗೆ ಯಾರೂ ಹೆಣ್ಣು ಕೊಟ್ಟಿರಲಾರರು. ಕಠೋರತೆಯೇ ಮೂರ್ತಿವೆತ್ತಂತೆ ಕಾಣುವ ಇವನನ್ನು ಹೇಗೆ ಒಲಿಸಿಕೊಳ್ಳುವುದು? ದಾಸಕವಿಗಳು, ವಚನಕಾರರೆಲ್ಲ ಒಟ್ಟೊಟ್ಟಿಗೆ ನೆನಪಾದರು. ಆಸ್ಪತ್ರೆಯ ಬಾಗಿಲಲ್ಲಿ ನಿಂತು ಭಕ್ತಕವಿಗಳ ಬಗ್ಗೆ ಯೋಚಿಸುತ್ತಿರುವ ನನ್ನ ಬಗ್ಗೆ ಮರುಕಗೊಂಡೆ.

ಹೇಗಾದರೂ ಮಾಡಿ ಅಥವಾ ಗಣ್ಯತೆಯನ್ನು ಪ್ರದರ್ಶಿಸಿಯಾದರೂ, ಆರೋಪಿಸಿಕೊಂಡಾದರೂ  ಸರಿ. ನಾನೀಗ ಐಸಿಯು ಒಳಗೆ ಹೋಗಲೆಬೇಕು. ಯಾಕೆಂದರೆ ಅಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ವ್ಯಕ್ತಿ ಬೇಕಾದವರು. ಈಗ ಜುಬ್ಬಾ ಮೇಲಿನ ವೇಸ್ಟ್‌ ಕೋಟು ಸರಿ ಮಾಡಿಕೊಂಡೆ

ಹೆಸರೇನಪ್ಪ ಇವರೆ 

ಮಯೇಶ ಸಾ 

ಯಾವೂರು

ಕರಿಕೆರ ಹುಂಡಿ

ಓ ಅದೆಲ್ಲಿದೆ

ಇಲ್ಲೆಯ ಸಾ. ಮೈಸೂರಿಂದ ಹನ್ನೆರೆಡು ರೂಪಾಯಿ ಚಾರ್ಜು

ಬಸ್ಸಲ್ಲೋ, ಟ್ರೇನಲ್ಲೋ

ಏ ಲಗೀಜು ಆಟೋ ಸಾ, ಬಸ್, ಟ್ರೇನು ಎಲ್ಲಿದ್ದುದು

ಓ, ಎಜುಕೇಷನ್ನು

ಫೈನಲಿಯರ್ ಪೇಲು ಸಾ

ಟೀ ಕುಡಿದಾ

ಎಲ್ಲಿ ಸಾ, ಇಲ್ಲಿಂದ ಕಮಕ್ ಗಿಮಕ್ ಅನ್ನಂಗಿಲ್ಲ.

ಮತ್ತೆ ಊಟ ತಿಂಡಿ ಹೆಂಗೆ

ಅದಿಯ ಕಷ್ಟ ಸಾ. ಯಾರೋ ಪ್ರಂಡ್ಸು ಬಂದು ಟೇಮಿಗೇನೋ ಕೊಟ್ಟೋಯ್ತನೆ. ತಿನ್ನಕೆ ಟೇಮಿರಲ್ಲ. ನಿಮ್ಮಂತ ಜನ ಕುತ್ಗೆ ಮ್ಯಾಲ ಕುಂತು ಉಣ್ಣಾಕು ಬುಡಲ್ಲ ನೋಡಿ

,.....

ನಿಮ್ಮ ಮ್ಯಾಲ ಅಂದಿಲ್ಲ ಸಾ. ತಪ್ಪಾಗಿ ತಿಳ್ಕಂಬುಟ್ಟೀರ, ಅದು ಬ್ಯಾರೆ ಆಗಲೀಗ ರಾಮಾಯಣವಾದ್ದು ಆಮೇಕ

 

ಇರ್ಲಿ‌ ಬಿಡು. ನಾನೇನು ಅನ್ಕೊಳಲ್ಲ. ನಿನ್ ಡೂಟಿ ಕಷ್ಟ ನೀನೇಳಿದೆ. ಅದಿರಲಿ ಅದೇನೋ ರಾಮಾಯಣ ಅಂದ್ಯಲ್ಲ. ಏನದು?

ಓ ಸುಮ್ಕಿರಿ. ಈಗ್ಯಾಕೆ ಅದೆಲ್ಲ

    ಮಿಕ ಬಲೆಗೆ ಬೀಳುವಂತೆ ಕಂಡಿತು. ಹೇಗಾದರೂ ಮಾಡಿ ಇವನನ್ನು ಒಲಿಸಿಕೊಂಡು ಐಸಿಯು ಒಳಗೆ ಹೋಗಲೇಬೇಕು. ಟೀ ಕುಡಿಯಲು ವಿಪರೀತ ಪುಸಲಾಯಿಸಿದೆ." ಈಗಾಗಲ್ಲ ತಾಳಿ ಸಾ. ಒಂದರ್ಧ ಗಂಟೆ ಟೇಮು" ಅಂದ. ಇದರ ನಡುವೆ ರೋಗಿಗಳ ಕಡೆಯವರು ಬರುವುದು, ಇವನು ನಿರಾಕರಿಸುವುದು ನಡದೇ ಇತ್ತು. 

 

ಅಷ್ಟರಲ್ಲಿ ಅವನು ಬಂದ. ಕಿವಿ, ತಲೆ ಮುಚ್ಚುವ ಪೋನು. ಕತ್ತಿನಲ್ಲಿ ಫಳಫಳ ಹಗ್ಗ. ಚಿನ್ನದ ಹಗ್ಗಗಳು ಅಷ್ಟೇ. ಕೈಯಲ್ಲೂ ಹಗ್ಗ, ಮೂಗುದಾರಗಳೆಲ್ಲ ಇದ್ದವು.  ಕಾಲು, ಸೊಂಟದಲ್ಲೂ ಇರಬಹುದೇನೊ. ಯಾರಿಗೆ ಗೊತ್ತು? ಅವನ ಹಿಂದೆ ಏಳೆಂಟು ಜನ. ನೋಡೋಕೆ ಮನುಷ್ಯರ ಥರವೇ ಇದ್ದರು. ಬಂದವರೇ ನಮ್ಮ ಸೆಕ್ಯುರಿಟಿ ಮಯೇಶನಿಗೆ "ಅಣ್ಣ ಬಂದವ್ರೆ ಬಿಡು". ಸೆಕ್ಯುರಿಟಿ ಮಯೇಶು ಯಥಾಪ್ರಕಾರ ಆಗಲ್ಲ ಅಂದ. ಮಾತಿಗೆ ಮಾತು ಬೆಳೆದು ಗಲಗು ಗದ್ದಲವಾಯಿತು.  ಮಧ್ಯೆ ನನ್ನ ಕಡೆಗೂ ನೋಡಿ ತನ್ನ ಕೆಲಸ ಮಾಡುತ್ತಲೇ ಇದ್ದ. ಕೊನೆಗೆ ಬಂದವರ ಮುಖಂಡನು ಪೋನು ಮಡಚಿಟ್ಟು ಮಯೇಶನ ಕಡೆ ನೋಡಿದ. ನೋಟವೇ ಭೀಕರ. " ಸಾ ಈಗಾಗಲ್ಲ. ನಾಳಕ ಬನ್ನಿ " ಅನ್ನೋದು ಮುಗಿಯುವಷ್ಟರಲ್ಲಿ ಮುಸುಡಿಗೊಂದು ಡಿಚ್ಚಿ ಬಿತ್ತು. ಮಯೇಶ ಕೆಳಗೆ ಬಿದ್ದ. ಗಾಬರಿಯಾಯಿತು. ಸಿಬ್ಬಂದಿ, ಜನರು‌,  ಬಂದವರು ಎಲ್ಲ ಸೇರಿ ಗಲಾಟೆ ಹೆಚ್ಚಾಯಿತು.ಆ ಗಲಾಟೆಯೊಳಗೆ ಮಯೇಶ ಮತ್ತಷ್ಟು ಏಟು ತಿಂದ. ಎಲ್ಲ ತಹಬಂದಿಗೆ ಬರಲು ಸಾಕಷ್ಟು ಸಮಯ ಹಿಡಿಯಿತು. ಕೊನೆಗೆ ಬಂದ ಆ "ಅಣ್ಣ ಮತ್ತವನ ಹಿಂಬಾಮಯೇಶನನು" ಕಳಿಸಲಾಯಿತು.

ಈಗ ಮಯೇಶನ ಮೂಗಿನಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಅವನಿಗೆ ಶುಶ್ರೂಷೆ ಮಾಡಲಾಯಿತು. ಯಾಕೋ ಮಯೇಶನ ಬಗ್ಗೆ ಅಯ್ಯೋ ಅನಿಸಿ ಅವನ ಜೊತೆಗೆ ಇದ್ದೆ. ನಾನು ಬಂದ ಕೆಲಸ ಬೇರೆ ಬಾಕಿಯಿದೆ. ಈಗ ಇವನನ್ನು ಕೇಳುವುದಾದರೂ ಹೇಗೆ? ಮತ್ತೊಬ್ಬ ಸೆಕ್ಯೂರಿಟಿ ಬಂದ. ಮಯೇಶನಿಗೆ ಟೀ ಕುಡಿಯಲು ಕರೆದೆ. ಮಯೇಶ ಹಿಂಬಾಲಿಸಿದ. ಕ್ಯಾಂಟೀನು ಮುಂದೆ ನಿಂತು ಟೀಗಾಗಿ ಕಾದೆವು. ಮಯೇಶ ಕತ್ತು ಬಗ್ಗಿಸಿಕೊಂಡು ಸೊರಸೊರ ಅನ್ನುತ್ತಿದ್ದ. ಏನು ಹೇಳಬೇಕು, ಏನೆಂದು ಸಮಾಧಾನ ಮಾಡಬೇಕೋ ತಿಳಿಯದೇ ಗೊಂದಲವಾಯಿತು. ಅಷ್ಟರಲ್ಲಿ ಟೀ ಬಂತು. ಮಯೇಶನ ಮುಂದೆ ಕಪ್ ತಳ್ಳಿ " ಕುಡಿ " ಎಂದೆ. ಎರಡು ಗುಟುಕು ಕುಡಿದವನೇ ಕೈನಡುಗಿಸಿಕೊಂಡು ಕಪ್ ಕೆಳಗಿಟ್ಟ. ಕಣ್ಣಲ್ಲಿ ಧಾರೆಧಾರೆ. ದಿಕ್ಕೆಟ್ಟವನಂತೆ ಅವನನ್ನೇ ನೋಡುತ್ತ ನಿಂತೆ. ಯಾರನ್ನೋ ನೋಡಲು ಬಂದ ನಾನು, ಈ ಮಯೇಶನ ಕತೆಯೊಳಗೆ ಸಿಕ್ಕಿಕೊಂಡೆ  ಎನಿಸತೊಡಗಿತು. ಯಾವ ಮಾತು ಹುಟ್ಟುತ್ತಿಲ್ಲವೆನಿಸಿ ಮಯೇಶನ ಕೈಹಿಡಿದು ಟೀಕುಡಿ ಅಂದೆ. ಮಯೇಶ ಜೋರಾಗಿ ಅಳಲಾರಂಭಿಸಿದ. ವಾಚು ನೋಡಿಕೊಂಡೆ. ಆಕಾಶ ನೋಡಿದೆ. ನೆಲ ನೋಡುತ್ತಾ ನಿಂತೆ. ಮಯೇಶ " ನೋಡಿದ್ರಲ್ಲ ಸಾ. ನಮ್ಮ ಜೀವನ. ಇಷ್ಟೇ ಸಾ" ಎಂದು ಮತ್ತೂ ಅತ್ತ.

ಏಟು ಜೋರಾಗೇ ಬಿದ್ದಿರಬೇಕು. " ಮಯೇಶ ಹೆದರ್ಕೊಬೇಡ, ಏನಾಗಲ್ಲ. ತುಂಬ ಏಟಾಗಿದ್ಯ" ಕೇಳಿದೆ. "ಇದ್ಯಾವ ಏಟು ಬಿಡಿ ಸಾ. ಆವತ್ತೊಂದು ಜಿನ ಏನಾಯ್ತು ಗೊತ್ರಾ" ಅಂದ.ಏನಾಯಿತು ಮಯೇಶ, ಯಾರು ಏನು ಮಾಡಿದ್ರು" ಕೇಳಿದೆ. ಮತ್ತೆ ಅವನ ಕಣ್ಣಲ್ಲಿ ದಳದಳ ನೀರು. ಬಿಕ್ಕತೊಡಗಿದ. 

 

" ಸಾ ಈತರಕಿತರ ಸಾ.ಒಂಜಿನ ಒಬ್ರು ಬಂದು ಅಡ್ಮಿಟ್ ಆಗಿದ್ರು ಅನ್ನಿ. ಪುಲ್ ಸೀರಿಯಸ್. ಅವ್ರ ಎಣ್ಣೆಂಗ್ಸು ಜಿನ ಬರದು ನೋಡ್ಕನದು ಓಗದು. ಇಂಗೀಯ ನಡೀತಿತ್ತು. ವಾರೊಪ್ಪತ್ತು ಕಳೆದ್ರೂ ಏನೂ ಸುದ್ರಾಯಿಸಲೇ ಇಲ್ಲ.ಕೊನಗ ಡಾಗುಟ್ರುವೇ ನಮ್ಮ ಕೈಲಾದ್ದೆಲ್ಲ ಮಾಡೀವಿ ಕನ. ಇನ್ ಯಾನೂ ಏಳಕಾಗುಲ್ಲ ಅಂದ್ರ. ಆವತ್ತು ಆಯಮ್ಮ ಇಲ್ಲಿಂದ ಅಲ್ಲಾಡದಂಗೆ ಕುಂತಬುಟ್ಲು. ನಾನೂ ಸಂಜೀಗಂಟ ದೂಟಿ ಮುಗಿಸಿ ಮನೆಗೋದ್ನ. 

ಮಾರನೇ ಜಿನ ಬೆಳಿಗೆ ಬಂದಾಗ ಆಯಮ್ಮ ಕಾಣಲಿಲ್ಲ.  ಪೇಸೆಂಟು ಒಂಟೋಗವರೆ ಅನ್ಕಂಡ್ನ. ಹಂಗೂವಿ ತಡೆಯಾಕಾಗ್ದಿಯ ಒಳಗೋಗಿ ನೋಡುದ್ರ ಪೇಸೆಂಟು ಅಲ್ಲೇ ಇದ್ರ. ಈಚೆಗೆ ಬರುವಷ್ಟರಲ್ಲಿ ಆಯಮ್ಮ ಪುನ ಬಂದು ನಿಂತ್ಕಂಡವರೆ. ಕೈಲಿ ತಟ್ಟೆ, ಆರಿರೋ ಕರ್ಪೂರ, ಗಂಜದಕಡ್ಡಿ, ಇಬೂತಿ, ಕುಂಕುಮ ಎಲ್ಲ ಅವೆ. ಒಳಿಕೆ ಬುಡು ಅಂದ್ರ. ಅಂತಾ ಸಾಮಾನೆಲ್ಲ ಐಸಿಗೆ ತಗಂಡು ಓಗಂಗಿಲ್ಲ ಅಂತ ರೂಲ್ಸು ಐತ. ನಾನು ಆಗಾಣಿಲ್ಲ. ನೀವು ಓಗ್ಬನ್ನಿ. ಇವೆಲ್ಲ ಬ್ಯಾಡಿಕನ ಅಂದಿ. ಆಯಮ್ಮ ಮಂದೇವ್ರು ಪ್ರಸಾದ ತಂದಿದಿನಿ ಕನ. ಇಲ್ಲ ಅನ್ನಬ್ಯಾಡಪ್ಪ. ಏನು ಕೇಳುದ್ರ ಕೊಡ್ತೀನಿ ಅಂದ್ರ. ನಾನು ಬ್ಯಾಡ ತಾಯಿ. ನಮಗೆ ಡಾಗುಟ್ರು ಬೈತಾರೆ. ತಗಂಡುಹೊಗಬ್ಯಾಡಿ ಅಂದೆ. ಆಯಮ್ಮ ಸಪ್ಪೆ ಮಖ ಮಾಡ್ಕಂಡು ಕುಂತ್ಕಂಡ್ರ. ನಾನು ನೀವು ಓಗ್ಬನ್ನಿ ಅಂದೆ. ಆಯಮ್ಮ ಓಗಿಬಂದ್ರ. ಅವರು ಬಂದ ಐದೇನಿಮಿಷದಲ್ಲಿ ಆವಯ್ಯ ಒಂಟೋಗ್ಬುಟ್ರ. 

ಆವತ್ತಿಂದ ನನ್ನ ನಿದ್ದೆನೇ ಒಂಟೋಗದೆ. ನಾನೇನು ಮಾಡ್ಲೆಳಿ" ಅಂದು ಮತ್ತೆ ಮತ್ತೆ ಬಿಕ್ಕತೊಡಗಿದನು.

ನಾನು ದಿಗ್ಮೂಢನಾಗಿ ನಿಂತೆ.