ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಕುತ್ತು ಮುಖ್ಯಮಂತ್ರಿ ತಂತ್ರಕ್ಕೂ ಆಪತ್ತು

ನಮ್ಮ ರಾಜ್ಯದಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಗೆ ಅಂತ್ಯವೇ ಇರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 20 ಸಂಸದೀಯ ಕಾರ್ಯದರ್ಶಿಗಳಿದ್ದರು.  ಕುಮಾರಸ್ವಾಮಿ ಅಧಿಕಾರಕ್ಕೇರಿದಾಗ ಕಾಂಗ್ರೆಸ್ ಶಿಫಾರಸು ಮೇರೆಗೆ 9 ಮಂದಿಯನ್ನು ಈ ಸ್ಥಾನಕ್ಕೆ ನೇಮಿಸಿಕೊಂಡಿದ್ದರು.  ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರ ಫಲವಾಗೀಗ ಈ ರೀತಿ ನೇಮಕ ಸರಿಯಲ್ಲ ಎಂಬ ತೀರ್ಪು ಹೊರಬಿದ್ದಿದೆ.

ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಕುತ್ತು ಮುಖ್ಯಮಂತ್ರಿ ತಂತ್ರಕ್ಕೂ ಆಪತ್ತು

ಸಚಿವ ಸ್ಥಾನ ಸಿಗದೆ ಮನದಲ್ಲೇ ಮೋಡ ಮುಸುಕಿದ ವಾತಾವರಣ ಇರಿಸಿಕೊಂಡವರನ್ನು ಸಂತೈಸಲು ನಿಗಮ ಮಂಡಳಿಗಳ ಜತೆಗೆ ಸಂಸದೀಯ ಮತ್ತು ರಾಜಕೀಯ ಕಾರ್ಯದರ್ಶಿಗಳ ಸ್ಥಾನ ಕೊಟ್ಟು ಸಮಾಧಾನಿಸುವ ಮಾರ್ಗವಿದ್ದೇ ಇತ್ತು. ಆದರೀಗ ರಾಜ್ಯ ನ್ಯಾಯಾಲಯ ಆ ರೀತಿ ಸಂಸದೀಯ ಕಾರ್ಯದರ್ಶಿ ನೇಮಕಾತಿ ಅಧಿಕಾರವೇ ಮುಖ್ಯಮಂತ್ರಿಗಿಲ್ಲ ಎಂದು ತೀರ್ಪು ಕೊಟ್ಟಿರುವುದರಿಂದ, ಆಡಳಿತ ಪಕ್ಷದಲ್ಲಿ ಖಿನ್ನತೆ ಮೂಡಿದೆ.

ಸಂಸದೀಯ ಕಾರ್ಯದರ್ಶಿ ನೇಮಿಸಿಕೊಳ್ಳುವುದು ಹೊಸತೇನಲ್ಲ. ಮೊದಲ ವಿಶ್ವಯುದ್ಧದಲ್ಲೇ ಕೆನಡ ಇಂಥ ಮೂರು ಹುದ್ದೆಗಳನ್ನು ಸಚಿವರಿಗೆ ಸಹಾಯಕವಾಗಲೆಂದು ನೇಮಿಸಿಕೊಂಡಿತ್ತು. ತದ ನಂತರದಲ್ಲಿ ಅದು ಯು.ಕೆ. ಆಸ್ಟ್ರೇಲಿಯಾ, ಮಲೇಷ್ಯಾ, ಭಾರತ  ಇಲ್ಲೆಲ್ಲ ಆಚರಣೆಗೆ ಬಂತು.

ಈ ರೀತಿಯ ನೇಮಕಾತಿ ಮತ್ತು ವೇತನ ಪಾವತಿಗಾಗಿ ನಮ್ಮ ರಾಷ್ಟ್ರದ ರಾಜ್ಯಗಳಲ್ಲಿ ಕಾನೂನುಗಳಿವೆ. ಇಂಥ ಹುದ್ದೆಯನ್ನೇರಿದವರು ಸಂಬಂಧಿಸಿದ ಸಚಿವರಿಗೆ ಸಹಾಯ ಮಾಡುವುದಾಗಿದೆ. ಸಂವಿಧಾನದ ಅನುಚ್ಚೇದ 164(1ಎ) ಪ್ರಕಾರ ಶಾಸನ ಸಭೆಯ ಒಟ್ಟು ಬಲದಲ್ಲಿ ಶೇ.15 ರಷ್ಟು ಮಾತ್ರವೇ ಸಂಪುಟ ಇರಬೇಕು ಎಂದು ಹೇಳಿದಾಗಿನಿಂದ, ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿ ಎಂಬ ಹುದ್ದೆಗಳನ್ನು ನೇಮಿಸಿಕೊಂಡು, ಸಚಿವರ ಸ್ಥಾನಮಾನ ಕೊಡುವ ಮೂಲಕ ಅಸಂತೃಪ್ತರನ್ನು ಸಮಾಧಾನಿಸಿಕೊಳ್ಳುವಂಥ ರಂಗೋಲಿ ಕೆಳಗೆ ನುಸುಳುವ ಜಾಣತನ ಮೆರೆಯಲು ಮುಖ್ಯಮಂತ್ರಿಗಳು ಮುಂದಾಗಿಬಿಟ್ಟರು.

ಸಂಸದೀಯ ಕಾರ್ಯದರ್ಶಿ ಸ್ಥಾನ ಲಾಭದಾಯಕ ಹುದ್ದೆಯಲ್ಲ ಎಂದು ದೆಹಲಿಯ ಆಪ್ ಸರ್ಕಾರ ಕಾನೂನು ತರಲು ಹೊರಟಾಗ ರಾಷ್ಟ್ರಪತಿ ಅದಕ್ಕೆ ಸಹಿಹಾಕಲು ನಿರಾಕರಿಸಿದ್ದುದು  ವಿವಾದವಾಗಿತ್ತು. ಹಾಗೆಯೇ ಗೋವಾದಲ್ಲಿನ  ಮುಂಬೈ ನ್ಯಾಯಾಲಯ ಪೀಠ, ಕೊಲ್ಕತ್ತಾ ನ್ಯಾಯಾಲಯ ಇಂಥ ಹುದ್ದೆಗೆ ನೇಮಕಾತಿ ಸರಿಯಲ್ಲ ಎಂಬ ತೀರ್ಪು ಕೊಟ್ಟಿದ್ದವು.

ಆದರೂ ನಮ್ಮ ರಾಜ್ಯದಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಗೆ ಅಂತ್ಯವೇ ಇರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 20 ಸಂಸದೀಯ ಕಾರ್ಯದರ್ಶಿಗಳಿದ್ದರು.  ಕುಮಾರಸ್ವಾಮಿ ಅಧಿಕಾರಕ್ಕೇರಿದಾಗ ಕಾಂಗ್ರೆಸ್ ಶಿಫಾರಸು ಮೇರೆಗೆ 9 ಮಂದಿಯನ್ನು ಈ ಸ್ಥಾನಕ್ಕೆ ನೇಮಿಸಿಕೊಂಡಿದ್ದರು.  ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರ ಫಲವಾಗೀಗ ಈ ರೀತಿ ನೇಮಕ ಸರಿಯಲ್ಲ ಎಂಬ ತೀರ್ಪು ಹೊರಬಿದ್ದಿದೆ.

ಇದರ ಪರಿಣಾಮ ಯಡಿಯೂರಪ್ಪ ಸರ್ಕಾರದ ಮೇಲೂ ಆಗುತ್ತಲಿದೆ. ಏಕೆಂದರೆ ಈಗಾಗಲೇ ಇಂಥ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಮುಖ್ಯಮಂತ್ರಿ, ಮುಂದೆ ಸಂಪುಟ ವಿಸ್ತರಣೆಯಿಂದ ಅತೃಪ್ತಗೊಳ್ಳಬಹುದಾದ ಕೆಲವರಿಗೆ ಈ ಸ್ಥಾನ ಕೊಟ್ಟು, ಸಂಪುಟ ದರ್ಜೆ ಸಚಿವರ ಸೌಲಭ್ಯ ಒದಗಿಸಿ ಅವರ ಕೋಪ ತಣಿಸಬಹುದು ಎಂಬ ಲೆಕ್ಕವಿಟ್ಟುಕೊಂಡಿದ್ದರು. ಮುಖ್ಯಮಂತ್ರಿಗಲ್ಲದೆ ಬೇರೆ ಬೇರೆ ಮಂತ್ರಿಗಳ ಕೈಕೆಳಗೆ ಕೆಲಸ ಅಥವಾ ಸಹಾಯ ಮಾಡಲು ಈ ಹುದ್ದೆಗಳಿಗೆ ನೇಮಿಸಿಕೊಳ್ಳುವಂಥ ಒಳ ಮಾರ್ಗವನ್ನು ಅನುಸರಿಸುವ ಮೂಲಕ, ಮಂತ್ರಿಯಲ್ಲದ ಮಂತ್ರಿಗಳನ್ನು ಸೃಷ್ಟಿಸಿಕೊಂಡು ಲಕ್ಷಗಟ್ಟಲೇ ಹಣ ಇವರಿಗಾಗಿ ವ್ಯಯ ಮಾಡುತ್ತಿದ್ದಕ್ಕೆ ಈಗ ಮೊಳೆ ಹೊಡೆದಂತಾಗಿದೆ.

ಪ್ರಸ್ತುತ ಸಂಸದೀಯ, ರಾಜಕೀಯ ಕಾರ್ಯದರ್ಶಿಗಳಾಗಿರುವವರೂ ಈ ತೀರ್ಪಿನಿಂದಾಗಿ ಹುದ್ದೆಯಿಂದ ಇಳಿಯಬೇಕಾದ ಆತಂಕದಲ್ಲಿದ್ದು, ಮುಂದೆಂದೂ  ಇಂಥ ಹುದ್ದೆಗಳಿರುವಂತಿಲ್ಲ ಎಂಬುದರಿಂದಾಗಿ ಆಳುವ ಸರ್ಕಾರಗಳು ಬದಲೀ ಮಾರ್ಗ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.