ಯಕ್ಷ ಧ್ರುವ ಪಟ್ಲ ಮುಂಚೆಯೇ ಎಚ್ಚೆತ್ತುಕೊಳ್ಳಬೇಕಿತ್ತು: ಆಗುತ್ತಿರಲಿಲ್ಲ ಅವಮಾನ ಒಂದಿನಿತೂ

ವಿಶೇಷ ಎಂದರೆ ಈ ಪಟ್ಲ ಸತೀಶ ಶೆಟ್ಟಿ ತಮಗೆ ಸಿಕ್ಕ ಅದ್ಬುತ ಜನಪ್ರಿಯತೆಯ ಕಾರಣದಿಂದ ಮೈಮರೆತು ಕೂರಲಿಲ್ಲ. ಜನ ಪರವಾದ ಕೆಲಸದಲ್ಲೂ ಕೈ ಜೋಡಿಸಿಕೊಂಡು ಬಂದರು. ಇದಕ್ಕೆಂದೇ ‘ಯಕ್ಷ ಧ್ರುವ  ಪಟ್ಲ ಫೌಂಡೇಶನ್’ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅದರ ಮೂಲಕ ಜಾತಿಯ ಬಂಧನಗಳನ್ನು ಮೀರಿ ಕಲಾವಿದರ ನೋವುಗಳಿಗೆ ಸ್ಪಂದಿಸಲು ಶುರುಮಾಡಿದ್ದರು.

ಯಕ್ಷ ಧ್ರುವ ಪಟ್ಲ ಮುಂಚೆಯೇ ಎಚ್ಚೆತ್ತುಕೊಳ್ಳಬೇಕಿತ್ತು: ಆಗುತ್ತಿರಲಿಲ್ಲ ಅವಮಾನ ಒಂದಿನಿತೂ

ನನಗೆ ಸರಿಯಾಗಿ ನೆನಪಿದೆ ಯಕ್ಷಗಾನ ಆಟ ವೆಂದರೆ ಮನೆಯ ಹಿರಿಯರೆಲ್ಲರೂ ತಮ್ಮ ಕಂಬಳಿಗಳನ್ನೋ, ಚಾಪೆಯನ್ನೋ ಎತ್ತಿಕೊಂಡು ಹೋಗಿ ಬೆಳಕು ಹರಿಯುವ ವರೆಗೂ, ಯಕ್ಷಗಾನ ಮುಗಿದು ಭಾಗವತರು ಮಂಗಳಂ ಹೇಳುವವರೆಗೆ ಅಲ್ಲೇ ಕೂತಿರುತ್ತಿದ್ದ ಕಾಲ ಇನ್ನೂ ಹಾಗೇಯೇ ಇತ್ತು. ಆದರೆ ಆಗ ಯಕ್ಷಗಾನ ಎಂದರೆ ನನಗೆ ಅಷ್ಟಕಷ್ಟೆ. ಯಕ್ಷಗಾನ ಎಂದರೇನೆ ಅದೇನೋ ಉದಾಸೀನ, ಒಂದು ತರಹದ ನಿದ್ದೆ. ಬಾಲ್ಯದಲ್ಲಿ ಒಂದೆರಡು ಬಾರಿ ಯಕ್ಷಗಾನಕ್ಕೆ ಹೋದಾಗ ಆ ಭಾಗವತರ ಹಾಡಿನ ಒಂದು ಪದವೂ ಅರ್ಥವಾಗದೆ ತೇಟ್ ಕಿರುಚಾಟದಂತಲೇ ಕೇಳುತ್ತಿತ್ತು. ಅದೇ ಕಾರಣಕ್ಕೆ ಹೆಚ್ಚಾಗಿ ನನಗೆ ಈ ಯಕ್ಷಗಾನದ ಮೇಲೆ ನಿರುತ್ಸಾಹ ಮೂಡಿರಬೇಕು.  ಇದು ನನ್ನ ಬಾಲ್ಯದ ಅಂದರೆ ಸುಮಾರು 10 ವರ್ಷದ ಕೆಳಗಿನ ಕತೆ.

ಆದರೆ ನಾನು ಹೈಸ್ಕೂಲ್ ಗೆ ಕಾಲಿಡುತ್ತಲೇ ಯಕ್ಷಗಾನದ ಬಗ್ಗೆ ಒಂದು ತರಹದ ಸೆಳೆತ ನನ್ನೊಳಗೆ ಶುರುವಾಗಿತ್ತು. ಹೈಸ್ಕೂಲ್ ಸೇರಿದ ಶಾಲೆಯಲ್ಲಿ ಯಕ್ಷಗಾನ ಕ್ಲಾಸ್ ಗಳಿದ್ದವು ಮುಖ್ಯವಾಗಿ ತರಗತಿಯಲ್ಲಿ ನನ್ನ ಅಕ್ಕ ಪಕ್ಕ ಕೂರುತ್ತಿದ್ದ ಸಹಪಾಠಿಗಳಲ್ಲಿ ಹೆಚ್ಚಿನವರು ಯಕ್ಷಗಾನ ಕಲಾವಿದರೇ ಆಗಿದ್ದರು. ಅದರಲ್ಲೂ ಹೈಸ್ಕೂಲ್ ನಲ್ಲಿ ನನಗೆ ತುಂಬಾ ಹತ್ತಿರವಾಗಿದ್ದ ಫೃಥ್ವಿರಾಜ್ ಎಂಬ ಗೆಳೆಯನಂತೂ ತನ್ನ ಯಕ್ಷಗಾನದ ಪ್ರತಿಭೆಯ ಮೂಲಕ ನನ್ನನ್ನು ಕ್ಷಣಕ್ಷಣಕ್ಕೂ ಮೂಕವಿಸ್ಮಿತನನ್ನಾಗಿ ಮಾಡುತ್ತಿದ್ದ. ಈ ಎಲ್ಲಾ ಕಾರಣಗಳಿಗಾಗಿ ನನಗೆ ಯಕ್ಷಗಾನದ ಮೇಲೆ ಒಂದು ತರಹದ ಆಕರ್ಷಣೆ ಬೆಳೆಯತೊಡಗಿತ್ತು. ಎಷ್ಟರ ಮಟ್ಟಿಗೆ ಎಂದರೆ ಒಂದೆರಡು ವಾರ ನಾನು ಯಕ್ಷಗಾನ ತರಗತಿಗೂ ಹೋಗಿದ್ದೆ. ಧೋ ಕಿಟ ತಕಿಟ ಎಂದು ಹೆಜ್ಜೆ ಹಾಕಿದ್ದೆ. ಆದರೆ ಯಾಕೋ ಬೇರೆ ಕೆಲಸದ ಕಾರಣಕ್ಕೆ ಯಕ್ಷಗಾನದ ತರಗತಿಯನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ಇಷ್ಟೆಲ್ಲಾ ಆದರೂ ನನಗೆ ಈ ಭಾಗವತರ ಹಾಡಿನ ಬಗ್ಗೆ ಇದ್ದ ನಿರುತ್ಸಾಹ ಇನ್ನೂ ಹಾಗೆಯೇ ಇತ್ತು. ಅವರು ಸುಮ್ಮ ಸುಮ್ಮನೆ ಅವರಿಗೆ ಬೇಕಾದ ಹಾಗೆಯೇ ಕಿರುಚುತ್ತಾರೆ ಅಂದು ಕೊಂಡಿದ್ದೆ. ಆದರೆ ಕೆಲವೇ ದಿನಗಳ ತರವಾಯು ಈ ಅನಿಸಿಕೆಯನ್ನು ಪೂರ್ತಿಯಾಗಿ ಸುಳ್ಳಾಗಿಸಿದ್ದು ಪಟ್ಲ ಎಂಬ ಯಕ್ಷಗಾನದ ಮಾಂತ್ರಿಕ ದನಿ.

ನನ್ನೊಬ್ಬನನ್ನೇ ಅಲ್ಲ, ದಕ್ಷಿಣ ಕನ್ನಡದ ಮೂಲೆ ಮೂಲೆಯಲ್ಲಿನ ಯಕ್ಷಗಾನವನ್ನು ಕಂಡರೆ ಮೂಗು ಮುರಿಯುತ್ತಿದ್ದ ಯುವಕರನ್ನೆಲ್ಲ ಪಟ್ಲರ ಈ ದನಿ ಯಕ್ಷಗಾನದ ರಂಗ ಮಂಟಪದ ಮುಂದಿನ ಕುರ್ಚಿಗಳಲ್ಲೋ, ಜಮಕಾನಗಳಲ್ಲೋ ಬಂದು ಕೂರುವಂತೆ ಮಾಡಿತ್ತು. ನೋಡು ನೋಡುತ್ತಲೇ ಯಕ್ಷಗಾನ ಕ್ರಾಂತಿಯೇ ನಡೆದು ಹೋಗಿತ್ತು. ಯಕ್ಷಗಾನದ ಸೀಜನ್ ನಲ್ಲಿ ಯಕ್ಷಗಾನ ಅಂದ ತಕ್ಷಣ ದೂರ ಓಡುತ್ತಿದ್ದ ಯುವಕರ ಬಾಯಲ್ಲಿ ಪಟ್ಲನ ಮೇಳದ ಆಟ ಇನಿ ಕೈತಲ್ ಓಲಾಂಡಲ ಉಂಡ? (ಪಟ್ಲ ಇರುವ ಮೇಳದ ಯಕ್ಷಗಾನ ಬಯಲಾಟ ಇವತ್ತು ಹತ್ತರದಲ್ಲೆಲ್ಲಾದರು ಇದೆಯ?) ಅನ್ನೋದು ಸಾಮಾನ್ಯ ಮಾತಾಗಿತ್ತು. ಮಾತ್ರವಲ್ಲ ಹತ್ತಿರದಲ್ಲಿ ಇಲ್ಲ ಅಂದರೂ ಬೇರೆ ಊರಿಗೆ ಹೋಗುವವರು, ಹೋದವರ ಉದಾಹರಣೆ ಅನೇಕ ಸಿಗುತ್ತವೆ.

ಪಟ್ಲ ಸತೀಶ್ ಶೆಟ್ಟಿ ಇದ್ದದ್ದು ಕಟೀಲು ದೇವಾಲಯಕ್ಕೆ ಸಂಬಂಧ ಪಟ್ಟ ಕಟೀಲು ಮೇಳದ 5ನೇ ತಂಡದಲ್ಲಿ. ಈ ಮೇಳಗಳಲ್ಲಿ ಹೆಚ್ಚಾಗಿ ಆಡಿಸುತ್ತಿದ್ದದ್ದು ‘ದೇವಿ ಮಾಹಾತ್ಮೆ’ ಎಂಬ ಪ್ರಸಂಗವನ್ನು. ಕರಾವಳಿ ಆದ್ಯಂತ ಅಪಾರ ಜನರು ಪೂಜಿಸುವ ಕಟೀಲು ದೇವಿಯ ಬಗೆಗಿರುವ ಈ ಪ್ರಸಂಗದಲ್ಲಿ ಕಟೀಲು ಕ್ಷೇತ್ರದ ದೇವಿಯ ಕಾರ್ಣಿಕವನ್ನು ವಿವರಿಸುವ ಪ್ರಸಂಗ. ಈ ಪ್ರಸಂಗವನ್ನು ಭಕ್ತಿ ಪೂರ್ವಕವಾಗಿಯೇ ನೋಡುವವರ ಸಂಖ್ಯೆ ಹೆಚ್ಚು. ಈ ಪ್ರಸಂಗವನ್ನು ಆಡಿಸಿದರೆ, ನೋಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಇರುವುದರಿಂದ ಈ ಪ್ರಸಂಗಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇರುತ್ತವೆ. ಆದರೆ ನನಗೆ ಗೊತ್ತಿರುವ ಮಟ್ಟಿಗೆ  ಬಹುತೇಕ ಯುವಕರನ್ನು ಈ ಪ್ರಸಂಗಗಳತ್ತ ಸೆಳೆದದ್ದು  ಇದೇ ಪಟ್ಲರ ಭಾಗವತಿಕೆ.

ಯಕ್ಷಗಾನ ಎಂದರೆ ಅದೊಂದು ಸಮಾನತೆ ಇಲ್ಲದಿರುವ ಕ್ಷೇತ್ರ. ಯಾಕೆಂದರೆ ಅಸಂಖ್ಯ ಮಹಿಳಾ ಯಕ್ಷಗಾನ ಪಾತ್ರಧಾರಿಗಳು, ಭಾಗವತರು ಇರುವ ಈ ಕಾಲದಲ್ಲಿಯೂ ಅದು ‘ಗಂಡು ಕಲೆ’ಯಾಗಿಯೇ ಉಳಿದು ಕೊಂಡಿರುವುದು ವಿಪರ್ಯಾಸ. ಮತ್ತೆ ಯಕ್ಷಗಾನದಲ್ಲಿನ ಮೇಳಗಳ ಮೇಲ್ಚಿಚಾರಕರಾಗಿ, ಪ್ರಮುಖ ಭಾಗವತರಾಗಿ, ಪ್ರಮುಖ ಪಾತ್ರಧಾರಿಗಳಾಗಿ, ಮೇಳದ ಮ್ಯಾನೇಜರ್ ಗಳಾಗಿ ಭಟ್ಟರು ಮತ್ತು ಬಂಟರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿದ್ದಾರೆ.

ಇದೆಲ್ಲದರ ನಡುವೆಯೇ ಪಟ್ಲರ ದನಿಯಂತೂ ನನ್ನನ್ನು ಮರುಳು ಮಾಡಿತ್ತು. ಮತ್ತೊಂದು ವಿಶೇಷ ಎಂದರೆ ಈ ಪಟ್ಲ ಸತೀಶ ಶೆಟ್ಟಿ ತಮಗೆ ಸಿಕ್ಕ ಅದ್ಬುತ ಜನಪ್ರಿಯತೆಯ ಕಾರಣದಿಂದ ಮೈಮರೆತು ಕೂರಲಿಲ್ಲ. ಜನ ಪರವಾದ ಕೆಲಸದಲ್ಲೂ ಕೈ ಜೋಡಿಸಿಕೊಂಡು ಬಂದರು. ಇದಕ್ಕೆಂದೇ ‘ಯಕ್ಷ ಧ್ರುವ  ಪಟ್ಲ ಫೌಂಡೇಶನ್’ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅದರ ಮೂಲಕ ಜಾತಿಯ ಬಂಧನಗಳನ್ನು ಮೀರಿ ಕಲಾವಿದರ ನೋವುಗಳಿಗೆ ಸ್ಪಂದಿಸಲು ಶುರುಮಾಡಿದ್ದರು. ಮನೆ ಇಲ್ಲದ ಬಡ ಯಕ್ಷಗಾನ ಕಲಾವಿದರಿಗೆ ಮನೆ, ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸು ನೆರವು, ಹಿರಿಯ ಕಲಾವಿಧರ ಸಾಧನೆಯನ್ನು ಗುರುತಿಸಿ ಗೌರವಿಸುವುದು ಮುಂತಾದ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದರು.

ಈ ಟ್ರಸ್ಟ್ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೇಚ್ಚಾಗ ತೊಡಗಿದ್ದರಿಂದ ಪಟ್ಲ ಸತೀಶ್ ಶೆಟ್ಟಿಯ ಮೇಲೆ ಆವಾಗಲೇ ಕೆಲವರ ಕಣ್ಣು ಕೆಂಪಾಗಾಗಲು ಶುರುವಾಗಿತ್ತು. ಇದರ ಪರಿಣಾಮವಾಗಿ, ಪಟ್ಲ ಮೆಳಕ್ಕೆ ಬರಬೇಕಾಗಿದ್ದರೆ ಅಷ್ಟು ಹಣವನ್ನು ಡಿಮ್ಯಾಂಡ್ ಮಾಡುತ್ತಾರೆ. ಅವರು ಕಲೆಯನ್ನು ಬರೀ ಹಣಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಅವರು ತಮ್ಮ ಯಕ್ಷಧ್ರುವ ಫೌಂಡೇಷನ್ ಮೂಲಕ ಮಾಡುತ್ತಿರುವ ಸೇವೆಗಳಿಗಾಗಿ ವರ್ಷಕ್ಕೆ ಸುಮಾರು 2 ಕೋಟಿಗಳನ್ನು ವ್ಯಯಿಸುತ್ತಿರುವ ಕಾರಣ, ಹಣ ಡಿಮ್ಯಾಂಡ್ ಮಾಡಿದರೆ ಮಾಡಲಿ ಆ ಹಣ ಒಳ್ಳೆಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ ಎಂದು ಕಲಾವಿದರು, ಕಲಾಭಿಮಾನಿಗಳೆಲ್ಲರೂ ಪಟ್ಲರ ಪರ ಗಟ್ಟಿಯಾಗಿ ನಿಂತುಬಿಟ್ಟಿದ್ದರು.

ಇಷ್ಟೇ ಆಗಿದ್ದರೇ ಪರವಾಗಿರಲಿಲ್ಲ. ಆದರೆ ಪಟ್ಲ ಒಂದು ಹೆಜ್ಜೆ ಮುಂದೆ ಹೋಗಿ ಕಟೀಲು ಮೇಳದಿಂದ ಕಲಾವಿದರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ದ ನೇರವಾಗಿಯೇ ಮಾತನಾಡಲು ಶುರುಮಾಡಿದ್ದರು. ಕಲಾವಿದರು ಕೂಡ ಇದರ ಪರವಾಗಿ ಕೋರ್ಟ್ ಮೆಟ್ಟಿಲೇರಿದ್ದರು ಮತ್ತು ಕರ್ನಾಟಕ ಹೈಕೋರ್ಟ್ ಕಟೀಲಿನ ಯಕ್ಷಗಾನ ಮೇಳಗಳನ್ನು ಮುಜಾರಾಯಿ ಇಲಾಖೆಗೆ ಸೇರಿಸಬೇಕು. ಕಲಾವಿದರಿಗೆ ಸರಿಯಾದ ವೇತನಗಳು, ಮತ್ತು ಇತರ ಸೌಲಭ್ಯಗಳು ದೊರೆಯುವಂತಾಗ ಬೇಕೆಂದು ತೀರ್ಪನ್ನು ನೀಡಿತ್ತು. ಈ ತೀರ್ಪಿನಿಂದ ಕಂಗೆಟ್ಟ ಕಟೀಲಿನ ವಂಶ ಪಾರಂಪರ್ಯ ಭಟ್ರು ಅಸ್ರಣ್ಣ ಮತ್ತವರ ಬಳಗ ಮತ್ತೆ ಈ ತೀರ್ಪನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಮತ್ತು ಕಲಾವಿದರ ಪರವಾಗಿ ಮಾತನಾಡುತ್ತಿದ್ದ ಪಟ್ಲರು ಕಟೀಲು ಮೆಳದ ಮೇಲ್ವಿಚಾರಕ ದೇವಿಪ್ರಸಾದ್ ಶೆಟ್ಟಿ ಮತ್ತು ಅಸ್ರಣ್ಣರ ಕೋಪಕ್ಕೆ ಗುರಿಯಾಗಿಬಿಟ್ಟರು.

ಇದರ ಕಾರಣಕ್ಕಾಗಿಯೇ 2017 ರ ಕಟೀಲು ಮೇಳದ ತಿರುಗಾಟದ ಅವಧಿಯಲ್ಲೇ ಸತೀಶ್ ಪಟ್ಲ ಅವರನ್ನು 5 ನೇ ಮೇಳದಿಂದ ಎರಡನೇ ಮೇಳಕ್ಕೆ ವರ್ಗಾಯಿಸಲಾಗಿತ್ತು. ಪಟ್ಲ 5 ನೇ ಮೇಳದಲ್ಲಿರುವಾಗ ,5 ನೇ ಮೇಳದ ಪ್ರಸಿದ್ದಿ ಎಷ್ಟಿತ್ತಿತೆಂದರೆ ಈ ಮೇಳದ ಆಟವನ್ನು ನೋಡಲು ಮುಂಬೈ, ಚೆನೈ ಮುಂತಾದ ಕಡೆಗಳಿಂದೆಲ್ಲ ಬರುತ್ತಿದ್ದರು. ಆದರೆ ಈಗ ಅಂತಿಮವಾಗಿ ಹಾಡಲು ಕುಳಿತು ಕೊಳ್ಳುತ್ತಿದ್ದ ಪಟ್ಲರನ್ನು ರಂಗಸ್ಥಳದಿಂದ ಏಕಾಏಕಿಯಾಗಿ ಕೆಳಗಿಳಿಸಲಾಗಿದೆ.

ಈ ನಡೆಗೆ ಕರಾವಳಿಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಯುವಕರು ತಮ್ಮ ಫೇಸ್ ಬುಕ್ ಗಳಲ್ಲಿ #iamstandwithpatla  ಎಂಬ ಬರಹವನ್ನು ಹಾಕಿಕೊಳ್ಳುತ್ತಿದ್ದಾರೆ, ಪ್ರತಿಭಟನೆಗಳು ನಡೆದಿವೆ, ನಡೆಯುತ್ತಿವೆ. ಇದರ ನಡುವೆ ಪಟ್ಲರು ತಮ್ಮ ಮಾತಿಗೆ ಈಗಲೂ ಬದ್ದವಾಗಿದ್ದಾರೆ. ತಪ್ಪು ಮಾಡಿದವರನ್ನು ಕಟೀಲಿನ ತಾಯಿಯೇ ನೋಡಿಕೊಳ್ಳಲಿ ಎಂದು ಹೆಳಿದ್ದಾರೆ. ನನ್ನಂತಹ ಅದೆಷ್ಟೋ ಮನಸ್ಸುಗಳಲ್ಲಿ ಯಕ್ಷಗಾನದ ಹುಚ್ಚು ಹಿಡಿಸಿದ ಪಟ್ಲರಿಗೆ ಅವಮಾನಿಸಿದ್ದನ್ನು ಖಂಡಿಸದೇ ಇರುವುದಾದರೂ ಹೇಗೆ?

ಆದರೆ ಕಟೀಲು ಮೇಳದ ಮೇಲ್ವಿಚಾರಕರ ಅನ್ಯಾಯಗಳ ವಿರುದ್ದ ಹೋರಾಡಿ ಕಟೀಲು ಮೇಳದಿಂದ ಕಲಾವಿದರು ಹೊರ ಬಿದ್ದದ್ದು ಇದೇ ಮೊದಲೇನಲ್ಲ. ನೋಡುತ್ತಾ ಹೋದರೆ ಈ ಪಟ್ಟಿ ಉದ್ದವಾಗಿಯೇ ಬೆಳೆಯುತ್ತದೆ. ಮೇಲ್ವಿಚಾರಕ ಮಂಡಳಿಯಿಂದ ಕಲಾವಿದರು ಅನುಭವಿಸುತ್ತಿರುವ ಅನ್ಯಾಯಗಳ ಪಟ್ಟಿಯೂ ಹೀಗೆಯೇ ಉದ್ದವಾಗುತ್ತದೆ. ಆಗೆಲ್ಲ ಪಟ್ಲ ಸೇರಿದಂತೆ ಅನೇಕ ಕಲಾವಿದರು ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಈ ಹಿಂದೆಯೇ ಪಟ್ಲ ಸತೀಶ್ ಶೆಟ್ಟಿ ಸಹಿತ ಎಲ್ಲಾ ಕಲಾವಿದರು ಒಗ್ಗಟ್ಟಾಗಿ ಹೋರಾಡಿದ್ದರೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಅಂದೇ ಒತ್ತಾಯಿಸಿದ್ದರೆ ಕಟೀಲು ಮೇಳ ಯಾವಗಲೋ ಮುಜರಾಯಿ ಇಲಾಖೆಗೆ ಸೇರಿ ಬಿಡುತ್ತಿತ್ತು. ಇನ್ನೆಷ್ಟೋ ಕಲಾವಿದರೂ ಇನ್ನೂ ಕೂಡ ಈ ಮೇಳದಲ್ಲಿಯೇ ಉಳಿದು ಬಿಡುತ್ತಿದ್ದರು. ಮಾತ್ರವಲ್ಲ  ತನಗಾದ ಅವಮಾನದ ನಂತರವಷ್ಟೇ ದೇವಸ್ಥಾನದ ಮತ್ತು ಮೆಳದ ಮೇಲ್ವಿಚಾರಕರ ಬಗ್ಗೆ ಸತೀಶ್ ಶೆಟ್ಟಿ ಪಟ್ಲ ಮತ್ತವರ ಅಭಿಮಾನಿಗಳು ಈಗ ಬೀದಿಗಿಳಿಯ ಬೇಕೆಂದೇ ಇರಲಿಲ್ಲ.