ಶಾಸಕರನ್ನು ಖರೀದಿಸುವ ಪರಂಪರೆಯನ್ನು ಯಡಿಯೂರಪ್ಪ ಹುಟ್ಟುಹಾಕಿದ್ದರು : ಡಾ.ಜಿ ಪರಮೇಶ್ವರ್

ಶಾಸಕರನ್ನು ಖರೀದಿಸುವ ಪರಂಪರೆಯನ್ನು ಯಡಿಯೂರಪ್ಪ ಹುಟ್ಟುಹಾಕಿದ್ದರು : ಡಾ.ಜಿ ಪರಮೇಶ್ವರ್

ಚಿಂಚೋಳಿ: ರಾಜ್ಯದಲ್ಲಿ ಶಾಸಕರನ್ನೇ ಖರೀದಿಸುವ ಪರಂಪರೆಯನ್ನು ಹುಟ್ಟುಹಾಕಿರುವುದು ಯಡಿಯೂರಪ್ಪನವರು ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‍ ಅವರು ವೀರಶೈವ ಲಿಂಗಾಯತ ಸಭೆಯಲ್ಲಿ ಹೇಳಿದ್ದಾರೆ.

ಚಿಂಚೋಳಿಯಲ್ಲಿ ಉಪಚುನಾವಣೆಯಾಗಲು ಜಾಧವ್‍ ಕಾರಣರಾಗಿದ್ದು ಮತ್ತು 50 ಕೋಟಿಗೆ ಜಾಧವ್ ಖರೀದಿಯಾಗಿದ್ದರು ಎಂದು ಆರೋಪಿಸಿರುವ ಡಾ.ಜಿ ಪರಮೇಶ್ವರ್‍ ಶಾಸಕರನ್ನು ಖರೀದಿಸುವ ಪರಂಪರೆ ಆರಂಭಿಸಿದ್ದು ಯಡಿಯೂರಪ್ಪನವರು ಎಂದಿದ್ದಾರೆ.

ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗಲಾರರು ಎಂದಿರುವ ಪರಮೇಶ್ವರ್‍ ‘ ಯಡಿಯೂರಪ್ಪನವರು ಮೇ 24 ರ ನಂತರ ಸಿ.ಎಮ್‍ ಆಗುವ ಆತುರದಲ್ಲಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ರಾಜ್ಯದಲ್ಲಿ ಮೈತ್ರಿ ಸರಕಾರ ಐದು ವರ್ಷ ಇರಲಿದೆ’ ಎಂದಿದ್ದಾರೆ.

 ‘ಉಮೇಶ್ ಜಾಧವ್‍ಗೆ ಎರಡು ಬಾರಿ ನಾನೇ ಬಿ ಫಾರಂ ನೀಡಿದ್ದರೂ ದ್ರೋಹ ಬಗೆದಿದ್ದಾರೆ. ಮಾಜಿ ಸಿಎಂ ದಿ ವಿರೇಂದ್ರ ಪಾಟೀಲ್ ಕ್ಷೇತ್ರಕ್ಕೆ ಇಂದು ಜಾಧವ್ ಕಳಂಕ ತಂದಿದ್ದಾರೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಬಸವಣ್ಣನ ಕುರಿತು ಮಾತನಾಡಿರುವ ಪರಮೇಶ್ವರ್‍ ‘ವಿಶ್ವದಲ್ಲಿಯೇ ಸಮಾನತೆಯ ಮಾತುಗಳನ್ನು ಕಾರ್ಯಗತ ಮಾಡಿರುವುದು ಬಸವಣ್ಣ ಮಾತ್ರ. ಅವರ ನಂತರ ಪ್ರಯತ್ನಪಟ್ಟವರು ಮಹಾತ್ಮ ಗಾಂಧಿಯವರು. ಲಂಡನ್ ಥೇಮ್ಸ್ ನದಿ ತೀರದಲ್ಲಿರುವ ಶ್ರೇಷ್ಠ ಕಾನೂನುಗಳನ್ನು ರೂಪಿಸುವ ಸಂಸತ್ ಮುಂದೆ ಬಸವಣ್ಣನ ಪ್ರತಿಮೆ ಸ್ಥಾಪಿಸಿದ್ದು ಸೂಕ್ತ ನಿರ್ಧಾರ ಎಂದು ನಾನು ಲಂಡನ್ ಗೆ ಹೋಗಿದ್ದಾಗ ಅಲ್ಲಿರುವ ಸ್ನೇಹಿತರಿಗೆ ಹೇಳಿದ್ದೆ. ಬಿಜೆಪಿಯವರಿಗೆ ಬಸವಣ್ಣನ ತತ್ವಗಳು ಬೇಕಿಲ್ಲ. ಬಸವಣ್ಣನ ಸಿದ್ದಾಂತ ಪಾಲನೆ ಮಾಡದ ಪಕ್ಷದಲ್ಲಿ‌ ಯಡಿಯೂರಪ್ಪ ಮತ್ತು ಜಗದೀಶ್‍ ಶೆಟ್ಟರ್ ಹೇಗೆ ಇರುತ್ತಾರೋ? ಇವತ್ತು ಅಥವಾ ನಾಳೆ ಅವರಿಬ್ಬರು ರಾಜೀನಾಮೆ ನೀಡಿ ಹೊರ ಬರಬೇಕು’ ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.