ಬಹುತೇಕ ಮುಗಿದ ಯಡಿಯೂರಪ್ಪ ಪರ್ವ: ಬಿಜೆಪಿಗೆ ಸುನೀಲ್ ಕುಮಾರ್ ಎಂಬ ಹೊಸ ನಾಯಕನ ಆಗಮನ?

ಬಹುತೇಕ ಮುಗಿದ ಯಡಿಯೂರಪ್ಪ ಪರ್ವ: ಬಿಜೆಪಿಗೆ ಸುನೀಲ್ ಕುಮಾರ್ ಎಂಬ ಹೊಸ ನಾಯಕನ ಆಗಮನ?

ಪ್ರಿಯ ಓದುಗರೇ,

    ಜನಪರ ಚಿಂತನೆಯೇ ಇಲ್ಲದ ಬಿಜೆಪಿ ಎಂಬ ಪಕ್ಷದ ಬಗ್ಗೆ ನನಗೆ ಅಸಹ್ಯ ಹುಟ್ಟಿಸುವ ಭಾವನೆಯಿದ್ದರೂ ಅದನ್ನು ಕಟ್ಟಿ ಬೆಳೆಸಿದ ಬೂ.ಸಿ.ಯಡಿಯೂರಪ್ಪ ಬಗ್ಗೆ ಸ್ವಲ್ಪ ಅನುಕಂಪ. ಅವರ ಹೋರಾಟದ ಬಗೆ, ವೀರಾವೇಶದ ಭಾಷಣ, ಸಂಘಟನಾ ಸಾಮರ್ಥ್ಯ ಸೇರಿದಂತೆ ಅವರ ಬೆಳವಣಿಗೆಯ ಎಲ್ಲ ಹಂತಗಳನ್ನು ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯದಿಂದ ನೋಡಿರುವ ನನಗೆ ಬಿಜೆಪಿಯ ನಿಜ ನಾಯಕ ಎಂದರೆ ಅದು ಯಡಿಯೂರಪ್ಪ ಅಂತ ಅನೇಕ ಸಲ ಅನ್ನಿಸಿತ್ತು. ಅದಕ್ಕೆ ಸಕಾರಣಗಳೂ ಇವೆ. ಆದರೆ ಅಧಿಕಾರಕ್ಕೆ ಬಂದ ನಂತರ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲೇ ಜಾಂಡಾ ಹೊಡೆಯುವ ಸಲುವಾಗಿ ನಡೆಸಿದ ಆಪರೇಷನ್ ಕಮಲ, ರೆಡ್ಡಿ ಸಹೋದರರ ಅತಿಯಾದ ಸಾಮೀಪ್ಯ, ಕುಟುಂಬದ ಸದಸ್ಯರನ್ನು ಅಧಿಕಾರದ ಪ್ರಭಾವಲಯದಲ್ಲಿ ಬಿಟ್ಟುಕೊಂಡಿದ್ದು, ಕೆಲವು ಪೆದ್ದು ನಿರ್ಧಾರಗಳು ಇನ್ನಷ್ಟು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಬಹುದಿದ್ದ ಅವಕಾಶವನ್ನು ಹಾಳು ಮಾಡಿಬಿಟ್ಟಿತು. 
ರಾಜ್ಯ ಬಿಜೆಪಿ ಯಡಿಯೂರಪ್ಪ ಅವರಂಥ ನಾಯಕನನ್ನು ಹಿಂದೆಂದೂ ಕಂಡಿರಲಿಲ್ಲ. ಯಡಿಯೂರಪ್ಪ ಅಂದರೆ ಅವರದೇ ಒಂದು ವರ್ಗ. ಯಾರೊಂದಿಗೂ ಹೋಲಿಸಲಾಗದ ವ್ಯಕ್ತಿತ್ವ. ಆದರೆ ದೇವೇಗೌಡರ ಜತೆ ಒಂದು ವಿಷಯದಲ್ಲಿ ಮಾತ್ರ ಹೋಲಿಕೆ ಮಾಡಬಹುದಾದಂಥ ಅವರ ಗುಣ ಎಂದರೆ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ರಾಜಕೀಯವನ್ನೇ ಉಸಿರಾಡುವ ಮನುಷ್ಯ. ಯಡಿಯೂರಪ್ಪ ವಿರುದ್ಧ ಎಷ್ಟೇ ನ್ಯಾಯಾಲಯದಲ್ಲಿ ಎಷ್ಟೇ ಪ್ರಕರಣಗಳಿದ್ದರೂ ಒಂದೊಂದೇ ಆರೋಪದಿಂದ ಮುಕ್ತರಾಗುತ್ತಿದ್ದಾರೆ. 
ಬಿಜೆಪಿಯಲ್ಲೇ ಇದ್ದ ಸಮೂಹ ನಾಯಕತ್ವ ಇಲ್ಲದ ವ್ಯಕ್ತಿಗಳು ನಡೆಸಿದ ಸಂಚಿನಿಂದ ಯಡಿಯೂರಪ್ಪ ಜಾಣತನದಿಂದ ಹೆಜ್ಜೆ ಇಡುವ ಬದಲು ಮೂರ್ಖರಂತೆ ಮುಗ್ಗರಿಸುತ್ತಾ ಹೋದರು. ಅವರ ಕಾಲೆಳೆಯುವ ಸಂದರ್ಭ ಬಂದಾಗಲೆಲ್ಲ ಈ ವ್ಯಕ್ತಿಗಳು ಶೋಭಾ ಕರಂದ್ಲಾಜೆ ಹೆಸರನ್ನು ಮುನ್ನೆಲೆಗೆ ತಂದು ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದುದಷ್ಟೇ ಅಲ್ಲದೇ ತಮ್ಮ ನಿರ್ಧಾರಗಳನ್ನು ಹೇರುವ ಕೆಲಸ ಮಾಡುತ್ತಾ ಹೋದರು. ಇದರ ಫಲವಾಗಿ ಯಡಿಯೂರಪ್ಪ ಬೃಹತ್ ಗಾತ್ರದಲ್ಲಿ ಸೃಷ್ಟಿಸಿಕೊಳ್ಳಬಹುದಾಗಿದ್ದ ತಮ್ಮ ವರ್ಚಸ್ಸನ್ನು ದುರ್ಬಲಗೊಳಿಸುತ್ತಾ ಹೋದರು.  
ಸಂಚು ಯಾರೇ ಮಾಡಿದ್ದರೂ ಯಡಿಯೂರಪ್ಪ ತಪ್ಪು ಮಾಡಿದ್ದಂತೂ ಹೌದು. ಆ ಜಾಣತನ ಅವರಲ್ಲಿರಲಿಲ್ಲ. ಶಿವಮೊಗ್ಗ ಜಿಲ್ಲೆಯಿಂದ ಈವರೆಗೆ ಬಂದ ಮುಖ್ಯಮಂತ್ರಿಗಳೆಲ್ಲ ತಮ್ಮ ತವರು ಜಿಲ್ಲೆಯನ್ನು ಕಡೆಗಣಿಸಿದ್ದರೂ ಯಡಿಯೂರಪ್ಪ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದು ಆ ಜಿಲ್ಲೆಯಲ್ಲಿ ಓಡಾಡಿದರೇ ತಿಳಿಯುತ್ತದೆ. ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಬಲಿಷ್ಠ ನಾಯಕನಾಗಿ ಸ್ಥಾಪನೆಯಾದ ನಂತರ ಪಕ್ಷದ ನಿಯಮಾನುಸಾರ ನಿಗದಿತ ಅವಧಿಯ ನಂತರ ಅಧ್ಯಕ್ಷ ಸ್ಥಾನ ಬಿಡಬೇಕಾಗಿ ಬಂದಾಗ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾದಾಗ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮದಂತೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದವರೆಲ್ಲ ಯಡಿಯೂರಪ್ಪ ಅವರೆದುರು ಕುಬ್ಜರಂತಿದ್ದವರು. ಈಶ್ವರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಇವರೆಲ್ಲ ಯಡಿಯೂರಪ್ಪನವರ ಔದಾರ್ಯದಿಂದ ಪಕ್ಷದ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಸ್ಥಾನ ಪಡೆದರೇ ಹೊರತು ಯಡಿಯೂರಪ್ಪ ಎದುರು ಇವರ್ಯಾವ ನಾಯಕರು? 
ಒಂದು ಸಂದರ್ಭದಲ್ಲಿ ರಾಜಕೀಯ ನಾಯಕತ್ವವೇ ಇಲ್ಲದೇ ಅನಾಥವಾಗಿದ್ದ ಲಿಂಗಾಯತ ಸಮುದಾಯ ರಾಮಕೃಷ್ಣ ಹೆಗಡೆಯಲ್ಲಿ ತಮ್ಮ ನಾಯಕನನ್ನು ಅನಿವಾರ್ಯವಾಗಿ ಕಂಡುಕೊಂಡಿತ್ತು. ಈ ಕುರಿತ ವಿವರ ಬರೆಯುವುದು ನನ್ನ ಉದ್ದೇಶವಲ್ಲ. ಎರಡನೇ ಸಲ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರ ಅಮಾನವೀಯ ಪದಚ್ಯುತಿ ಸೇರಿದಂತೆ ಕಾಂಗ್ರೆಸ್ ಪಕ್ಷ ವಿವಿಧ ಸಂದರ್ಭಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಕೋಪಗೊಂಡಿದ್ದ ಲಿಂಗಾಯತ ಸಮುದಾಯ ಸಹಜವಾಗಿಯೇ ಕಾಂಗ್ರೆಸ್ ವಿರೋಧಿ ನಿಲುವು ತೆಗೆದುಕೊಂಡು ಯಡಿಯೂರಪ್ಪ ಕಾರಣಕ್ಕಾಗಿ ಬಿಜೆಪಿ ಜತೆ ಗುರುತಿಸಿಕೊಳ್ಳಲಾರಂಭಿಸಿತ್ತು. ಈ ಮುಖ್ಯ ಕಾರಣದಿಂದಲೇ ಅಧಿಕಾರಕ್ಕೇರಿದ ಯಡಿಯೂರಪ್ಪ ಕೆಲವು ತಪ್ಪು ನಡೆಗಳಿಂದ ಅಧಿಕಾರಾವಧಿಗೂ ಮುನ್ನ ಮುಖ್ಯಮಂತ್ರಿ ಸ್ಥಾನ ತ್ಯಜಿಸುವಂತಾಗಿತ್ತು.

ಆನಂತರ ಕೆಜೆಪಿ ಸ್ಥಾಪಿಸಿದ ಯಡಿಯೂರಪ್ಪ ಇನ್ನೊಂದು ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಿ ಬಿಜೆಪಿಯನ್ನೇ ನಿರ್ಮೂಲನ ಮಾಡುವ ಹಠ ತೊಡಬಹುದಿತ್ತು. ಅವರಿಲ್ಲದೇ ದುರ್ಬಲವಾದ ಬಿಜೆಪಿ ಮತ್ತೆ ಯಡಿಯೂರಪ್ಪ ಅವರನ್ನು ಕರೆತಂದಿತಾದರೂ ಅವರನ್ನು ‘ಮಾಜಿ ನಾಯಕ’ ಎಂಬಂತೆ ನಡೆಸಿಕೊಳ್ಳತೊಡಗಿತ್ತು. ಹೌದು. ಯಡಿಯೂರಪ್ಪ ಈಗ ಮಾಜಿ ನಾಯಕ! ಅವರ ಮಾತಿಗೆ ಬಿಜೆಪಿಯಲ್ಲೇ ಬೆಲೆ ಇಲ್ಲ. ಅವರು ಮತ್ತೆ ಮುಖ್ಯಮಂತ್ರಿಯಾಗುವುದೂ ಅಷ್ಟು ಸುಲಭವಲ್ಲ. ಅಂಥ ಒಂದು ಅಪೂರ್ವ ಸನ್ನಿವೇಶ ಸೃಷ್ಟಿಯಾಗಬೇಕು, ಇಲ್ಲವೇ ಪವಾಡ ನಡೆಯಬೇಕು. 
ಕಳೆದ ಲೋಕಸಭಾ ಚುನಾವಣೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಒಂದೇ ಕಾರಣದಿಂದ ಲಿಂಗಾಯತರ ಮತಗಳಿಂದ ವಂಚನೆಯಾಗದಂತೆ ಯಡಿಯೂರಪ್ಪ ಅವರನ್ನು ಕರೆತಂದಿದ್ದ ಬಿಜೆಪಿ ಮುಖಂಡರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದರೂ ಅವರ ಮಾತಿಗೆ ಕಿಮ್ಮತ್ತಿಲ್ಲದಂತೆ ವ್ಯವಸ್ಥಿತವಾಗಿ ನೋಡಿಕೊಂಡರು. ಮೈಸೂರಿನಿಂದ ಅವರ ಓರ್ವ ಮಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ತಡೆ ಒಡ್ಡಿದರು.ಒಬ್ಬ ಮಗನಿಗೆ ಈಗಾಗಲೇ ಲೋಕಸಭೆಯ ಪ್ರವೇಶ ಒದಗಿಸಿದ ಕಾರಣ ಇನ್ನೊಬ್ಬರಿಗೆ ಅವಕಾಶ ಇಲ್ಲ ಎಂಬ ತರ್ಕ ಮೇಲ್ನೋಟಕ್ಕೆ ಚೆನ್ನಾಗಿದ್ದರೂ ಈ ಎಲ್ಲ ನಿರ್ಧಾರಗಳ ಹಿಂದೆ ವಿಘ್ನ ‘ಸಂತೋಷ’ದ ನೆರಳಿತ್ತು. 
ಈಗಂತೂ ಅವರು ಮಾಜಿ ನಾಯಕ. ನನ್ನ ಪಾಲಿಗೆ ಶಾಪಗ್ರಸ್ಥ ನಾಯಕ. ಅಡ್ವಾಣಿಯಂತೆ ನೇಪಥ್ಯಕ್ಕೆ ಸರಿಯುವ ದಿನಗಳು ಹತ್ತಿರಾಗಿವೆ.  ಈ ಕಾರಣದಿಂದಲೇ ರಾಜ್ಯ ಬಿಜೆಪಿ ಹೊಸ ಮುಖಗಳ ಹುಡುಕಾಟದಲ್ಲಿದೆ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಥರದವರು ಹಳಸಲು ಮುಖಗಳು. ಅಶೋಕ ಎಂಬ ಮಾಜಿ ಉಪಮುಖ್ಯಮಂತ್ರಿ ಹಾಗೆ ನೋಡಿದರೆ ನಾಯಕನೇ ಅಲ್ಲ. ಅನಂತ ಕುಮಾರ ಹೆಗಡೆ ಬಿಜೆಪಿಯ ಅತುಲಕುತುಲ ನಾಯಕ. ಬಾಯಿಬಡುಕ.  ಆತ ಕೂಡ ಕಾರುವ ಯಂತ್ರ. ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಹೆಸರುಗಳು ಕೇಳಿ ಬಂದಿತ್ತಾದರೂ ಸದ್ಯ ಹಿನ್ನೆಲೆಗೆ ಸರಿದಂತೆ ಕಾಣುತ್ತಿದೆ. ರಾಜ್ಯ ಬಿಜೆಪಿಯಲ್ಲಿರುವ ಎಲ್ಲ ಪುರುಷ ನಾಯಕರಿಗಿಂತ ಹೆಚ್ಚು ಸಮರ್ಥರಾಗಿರುವ ಶೋಭಾ ಕರಂದ್ಲಾಜೆಯವರನ್ನೂ ಯಡಿಯೂರಪ್ಪ ಅವರೊಂದಿಗೇ ಮೂಲೆಗುಂಪು ಮಾಡಲಾಗಿದೆ. 
ಯಡಿಯೂರಪ್ಪ ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಕರಾವಳಿಯಲ್ಲಿ ಶಕ್ತಿಶಾಲಿಯಾಗಿರುವ ಸಂಘ ಪರಿವಾರ, ಮುಸ್ಲಿಂ ವಿರೋಧಿ ಮನಃಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವನ್ನೇ ಸೃಷ್ಟಿಸಿತ್ತು. ಯಡಿಯೂರಪ್ಪ ಅವರ ಬೀಳ್ಕೊಡುಗೆಗೆ ಸಿದ್ಧವಾಗಿರುವ ಬಿಜೆಪಿ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಹೊಸ ಲೆಕ್ಕಾಚಾರಗಳನ್ನು ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಹೆಸರು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್. 
ಸುನೀಲ್ ಕುಮಾರ್  ಓರ್ವ ಮಾತುಗಾರ, ಕ್ರಿಯಾಶೀಲ. ಜತೆಗೆ ಬಿಲ್ಲವ ಸಮುದಾಯಕ್ಕೆ ಸೇರಿದವರು. ಕಾರ್ಕಳ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಾಗಿ ಅವರು ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಕೋಟಿ ಚೆನ್ನಯ್ಯ ಥೀಮ್ ಪಾರ್ಕ್, ಪಾಲಿಟೆಕ್ನಿಕ್, ಮೊರಾರ್ಜಿ ವಸತಿ ಶಾಲೆ ಇವೇ ಮೊದಲಾದ ಸ್ಥಾಪನೆಗೆ ಶ್ರಮಿಸಿರುವುದಾಗಿ ಹೇಳುತ್ತಾರೆ. ಅಷ್ಟಕ್ಕೇ ಅವರ ಪ್ರಾಮುಖ್ಯ ನಿಮಗೆ ಅರಿವಾಗುವುದಿಲ್ಲ. ಅವರು ಜನಿಸಿದ್ದು 1975 ರ ಆಗಸ್ಟ್ 15 ರಂದು. ಭಾರತ ಸ್ವಾತಂತ್ರ್ಯ ಪಡೆದ ದಿನ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ವರ್ಷ.  ಅಂದರೆ ಅವರಿಗೀಗ 44 ವರ್ಷ. 
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದ ಚುನಾವಣೆ ಅಲ್ಲಾ ಮತ್ತು ಶ್ರೀರಾಮಚಂದ್ರನ ನಡುವೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಬಿಲ್ಲವ ಸಮುದಾಯ ಸದ್ಯ ಬಿಜೆಪಿ ಜತೆಗೂ ಸಾಕಷ್ಟು ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದು, ಮತ್ತೆ ಕಾಂಗ್ರೆಸ್ ಕಡೆ ವಾಲಬಾರದೆಂಬುದು ಸುನೀಲ್ ಕುಮಾರ್ ಹೆಸರು ಚಲಾವಣೆಗೆ ಬರಲು ಮುಖ್ಯ ಕಾರಣ. ಹಾಗೇ ರಾಜ್ಯ ಸಂಘಪರಿವಾರದ ಚಟುವಟಿಕೆಗಳ ತವರುಮನೆಯಂತಿರುವ  ಕರಾವಳಿಯಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ  ಯಡಿಯೂರಪ್ಪ ಸ್ಥಾನಕ್ಕೆ ಸುನೀಲ್ ಕುಮಾರ್ ಅವರನ್ನು ತರುವ ಎಲ್ಲ ಪ್ರಯತ್ನಗಳು ಬಿಜೆಪಿಯಲ್ಲಿ ಈಗಾಗಲೇ ಆರಂಭವಾಗಿದೆ.  ಹೇಗೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದರೋ ಅಂಥ ದೂರದೃಷ್ಟಿ ಇರಿಸಿಕೊಂಡು ಸುನೀಲ್ ಕುಮಾರ್ ಅವರನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಂಘ ಪರಿವಾರದ ಈ ಪ್ರಯತ್ನ ಬಿಜೆಪಿ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುವುದು ಸಾಧ್ಯವಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 
ಸುನೀಲ್ ಕುಮಾರ್ ಹೆಸರೇ ಅಂತಿಮಗೊಂಡರೆ ಅದೊಂದು ಅಚ್ಚರಿಯ ಬೆಳವಣಿಗೆಯೇ. ಯಡಿಯೂರಪ್ಪ ಬದಲಾವಣೆಯಂತೂ ಖಂಡಿತ. ಯಾರೇ ಅಧ್ಯಕ್ಷರಾದರೂ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿ ವಿದಾಯ ಹೇಳಲೇಬೇಕು. ಆ ಮೂಲಕ ಬಿಜೆಪಿಯಲ್ಲಿ ಯಡಿಯೂರಪ್ಪ ಪರ್ವ ಬಹುತೇಕ ಕೊನೆಗೊಂಡಂತೆಯೇ.

ಬಿಜೆಪಿಯಲ್ಲಿದ್ದೂ ಅಂಥ ನೀಚತನವಿಲ್ಲದ ವ್ಯಕ್ತಿ ಯಡಿಯೂರಪ್ಪ. ಹಿರಿಯರನ್ನು ಅಮಾನವೀಯವಾಗಿ ಮೂಲೆಗುಂಪು ಮಾಡುವ ಸಂಸ್ಕೃತಿ ಇರುವ ಬಿಜೆಪಿ ಕಡೆಗಣಿಸಿದರೂ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ. ಸಾಹಿತ್ಯ, ಸಂಗೀತ ಇಂಥ ಅಭಿರುಚಿಗಳ ಮೂಲಕ ಅವರು ಇನ್ನಷ್ಟು ಒಳ್ಳೆಯ ಮನುಷ್ಯರಾಗಲಿ ಎಂದಷ್ಟೇ ಹಾರೈಸಬಹುದು.

-ಪ್ರಧಾನ ಸಂಪಾದಕ