ಅಬ್ಬಾ! ಎತ್ತ ಸಾಗುತ್ತಿದೆ  ರಾಜಕೀಯ ಮೇಲಾಟದಲಿ ಜಾತಿ, ಹೆಸರುಗಳೆಂಬ  ಟ್ರಂಪ್ ಕಾರ್ಡ್?

ಅಬ್ಬಾ! ಎತ್ತ ಸಾಗುತ್ತಿದೆ  ರಾಜಕೀಯ ಮೇಲಾಟದಲಿ ಜಾತಿ, ಹೆಸರುಗಳೆಂಬ  ಟ್ರಂಪ್ ಕಾರ್ಡ್?

ಹೀಗೊಂದು ಅನುಮಾನ ಬರುವುದಕ್ಕೆ ಕಾರಣ ಕೇಂದ್ರ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಇತ್ತೀಚಿಗೆ ನೀಡಿದ ಹೇಳಿಕೆ. ನನ್ನ ಹೆಸರಿನ ಮುಂದಿನ ಗೌಡ ಎಂಬ ಪದದಿಂದ ನಾನು ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಆದೆ ಎನ್ನುವ ಸ್ಮೈಲ್ ಗೌಡ್ರು ನಮ್ಮ ರಾಜಕೀಯ ಚದುರಂಗದಲ್ಲಿ ಜಾತಿ ಎಂಬ ದಾಳ ಎಷ್ಟು ಬಲಿಷ್ಠವಾಗಿದೆ ಎಂಬ ಎಲ್ಲರಿಗೂ ಗೊತ್ತಿರುವ ಸತ್ಯವನ್ನು ಅಧಿಕೃತವಾಗಿ ಒಕ್ಕಲಿಗ ಸಮುದಾಯದ ಎದುರು ಒಪ್ಪಿಸಿ ಪುನೀತರಾಗಿದ್ದಾರೆ.

ಒಬ್ಬ ಸಕ್ರಿಯ  ರಾಜಕಾರಣಿ ಇಂಥ ಮಾತು ಹೇಳಿದರೆ, ಜಾತಿಯ ಬೇರು ಯಾವ ಮಟ್ಟಿಗೆ ಅದರಲ್ಲೂ ಹೆಸರಿನ ಮೂಲಕ ಮಹತ್ವದ ಜವಾಬ್ದಾರಿಗಳು, ಖಾತೆಗಳು ಸಿಗುತ್ತವೆ ಎಂದರೆ,ಹಣ ಬಲ,ಜನ ಬಲ,ಈಗ ಹೆಸರಿನ ಬಲವೂ ಬೇಕು ಅನ್ನೋ ಹಾಗಾಗಿದೆ. ಜಾತಿ ಮತ್ತು ರಾಜಕಾರಣ ಒಂದು ನಾಣ್ಯದ ಎರಡು ಮುಖಗಳಂತೆ ಎನ್ನುವ ಕಾಲದಲ್ಲಿ ಗೌಡ ಎಂಬ ಹೆಸರಿನ ಬಲ ಬೇಕು ಎನ್ನುವುದರ ಮೂಲಕ ರಾಜಕೀಯ ಕೆಸರೆರಾಚಾಟಕ್ಕೆ ಜಾತಿ ಹೆಸರಿನ ಕೆಸರನ್ನು ಮೆತ್ತಿದ್ದಾರೆ. ಕಮಲ ನಾಯಕನೊಬ್ಬನ ಬಾಯಲ್ಲಿ  ಈ ರೀತಿ ಕೇಳಿ ಜನಸಾಮಾನ್ಯ ಬಾಯಿ,ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ.

ಹಾಗಾದರೆ ರಾಜಕೀಯದಲ್ಲಿ  ಉನ್ನತ ಸ್ಥಾನಗಳು ಬೇಕಾದರೆ, ತಾವು ಪ್ರಬಲರೆಂದು ಗುರ್ತಿಸಿಕೊಳ್ಳಲು ಪ್ರಬಲ ಜಾತಿಯೊಂದರ ಹೆಸರು ಪ್ರಮುಖ ಪಾತ್ರ ವಹಿಸುತ್ತದೆ  ಎಂದಾದರೆ, ಪ್ರತಿಭೆ  ಇದ್ದು ಪರಿತಪಿಸುತ್ತಿರುವವರಿಗೆ ಮತ್ತೊಂದು ಪಡಿಪಾಟಲು ಎದುರಾದಂತಾಗಿದೆ. ಮಾಧ್ಯಮ ರಂಗದಲ್ಲಿ ಬ್ರಾಹ್ಮಣರ ಬರವಣಿಗೆ , ಭಟ್ಟಂಗಿತನ,  ರಾಜಕೀಯದಲ್ಲಿ ಗೌಡರ ಗತ್ತು, ಗೈರತ್ತು, ಆಕಸ್ಮಿಕವಾಗಿ ತಮ್ಮ ಪಾಲಿಗೆ ಒಲಿದು ಬಂದ  ಜವಾಬ್ದಾರಿಗಳಿಗೆ ಹೆಸರಿನ ಬಲ,ಬೆಂಬಲದ ಹೇಳಿಕೆ ನೀಡಿರುವ ಗೌಡರು  ರಾಜಕೀಯದ ಮತ್ತೊಂದು  ತೆರೆ-ಮರೆಯ ಮಜಲನ್ನು ತೆರೆದಿಟ್ಟು ಪೇಚಿಗೆ ಸಿಲುಕಿದ್ದಾರೆ, ಹಾಗೆಯೇ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನಿಜವೂ ಹೌದು. ಈವರೆಗೆ ಕರ್ನಾಟಕದ ಮುಖ್ಯಮಂತ್ರಿ ಗಾದಿಗೇರಿರುವ ಹಿಂದುಳಿದ ಸಮುದಾಯದ ನಾಯಕ, ಹಾಗೂ ಅವರ ಜಾತಿ ಹೆಸರಿನ ಬಲ ಇಲ್ಲದೆ  ಅವರ ರಾಜಕೀಯ ಬದುಕು ಬರಡಾಗಿದ್ದು, ಮುಚ್ಚಿಟ್ಟ ಸತ್ಯ, 

ಈಗಂತೂ ಲೋಕಸಭಾ ಚುನಾವಣೆ ಮುಗಿದು, ಖಾತೆಗಳು ಹಂಚಿಕೆಯಾಗಿ 2 ನೇ ಬಾರಿಗೆ ಆಡಳಿತದ  ಸಾಗುವಳಿಯನ್ನು ಆರಂಭಿಸಿರುವ ಬಿಜೆಪಿ ತನ್ನ ಸಂಪುಟದಲ್ಲಿ ಎಷ್ಟು ಮಂದಿ ಹಿಂದುಳಿದ  ಜಾತಿಗಳ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ? ಅವರು ತಮ್ಮ ಹೆಸರುಗಳು ಹಾಗೂ ಜಾತಿಯ ವಿಷ ಬೀಜದಿಂದ  ತಮಗೆ ಸಿಗಬೇಕಾದ ಜವಾಬ್ದಾರಿಗಳ ಕೈ ತಪ್ಪುವಿಕೆ ಗೆ ಪ್ರಾಬಲ್ಯ ಸಾರುವ  ಹೆಸರುಗಳ ಬಲ ಅವರಿಗೆ ಇರಲಿಲ್ಲ ಎಂದ ಮಾತ್ರಕ್ಕೆ ಕ್ರಿಯಾಶೀಲರಿಗೆ, ದಕ್ಷರಿಗೆ ಅಧಿಕಾರದಿಂದ ವಂಚನೆ ಮಾಡುವುದು ಸರಿಯೇ? ಅಧಿಕಾರ ಕೈ ತಪ್ಪಿದವರು ಈಗ  ಉತ್ತರ ಸಿಕ್ಕು  ತಮ್ಮನ್ನು ತಾವೇ ಸಂತೈಸಿಕೊಳ್ಳುತ್ತಿದ್ದಾರೆ. ಜಾತಿ ಬಲವೇ ಸರ್ಟಿಫಿಕೆಟ್ ಆಗುವುದಾದರೆ ಜಾತಿ ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳುವುದಕ್ಕೆ ಇಂಥ ರಾಜಕಾರಣಿಗಳೇ ಕಾರಣರಾಗುತ್ತಿದ್ದಾರೆ ಎಂದರೆ ಏನೆನ್ನಬೇಕು? ಸಂವಿಧಾನದ ಚಿಕ್ಕಾಸಿನ ಜ್ಞಾನವೂ ಇಲ್ಲದ ಇಂಥವರಿಂದ ಜಾತ್ಯತೀತ ಭಾರತದ ಕನಸು ನನಸಾಗುವುದಾದರೂ ಹೇಗೆ ಸಾಧ್ಯ?
                                                                                                                         -ಸುಧಾ ಯಾದವ್